ಶನಿವಾರ, ಡಿಸೆಂಬರ್ 5, 2020
24 °C

ಬೆರಗಿನ ಬೆಳಕು: ದ್ರೋಹಿಗಳನ್ನು ಗುರುತಿಸದ ನಾಯಕತ್ವ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

Gururaja karajigi

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಅಳುತ್ತಿದ್ದಾಗ ಬೋಧಿಸತ್ವ ನಗರದಲ್ಲಿ ಎಂಭತ್ತು ಕೋಟಿ ಸಂಪತ್ತಿಗೆ ಒಡೆಯನಾದ, ಮಹಾನಿಷ್ಠ, ಉದೀಚ್ಛ ಬ್ರಾಹ್ಮಣನ ಮಗನಾಗಿ ಹುಟ್ಟಿದ. ತಕ್ಕಶಿಲೆಗೆ ಹೋಗಿ ಸಕಲವಿದ್ಯೆಗಳನ್ನು ಕಲಿತು, ಪ್ರವ್ರಜಿತನಾಗಿ ಹಿಮಾಲಯದಲ್ಲಿ ವಾಸವಾಗಿದ್ದ. ಒಂದು ವರ್ಷ ಋತುವಿನಲ್ಲಿ ಹಿಮಾಲಯದಿಂದ ಕೆಳಗಿಳಿದು, ವಾರಾಣಾಸಿಗೆ ಬಂದು ಉದ್ಯಾನವನದಲ್ಲಿ ಉಳಿದ. ರಾಜ, ಬೋಧಿಸತ್ವನ ಮುಖದ ಕಳೆಯನ್ನು ಕಂಡು ಪ್ರಭಾವಿತನಾಗಿ ಅವನನ್ನು ಅರಮನೆಗೆ ಕರೆದುಕೊಂಡು ಹೋದ. ತನ್ನ ಸಿಂಹಾಸನದ ಮೇಲೆ ಅವನನ್ನು ಕೂರಿಸಿ ಮರ್ಯಾದೆ ಮಾಡಿದ. ಅವನ ಧರ್ಮೋಪದೇಶವನ್ನು ಕೇಳಿದ. ಸಿಂಹಾಸನದ ಮೇಲೆ ಕೂರಿಸಿಯೇ ಅತ್ಯಂತ ಶ್ರೇಷ್ಠ ಭೋಜನಕ್ಕೆ ವ್ಯವಸ್ಥೆ ಮಾಡಿದ. ಊಟ ಮಾಡುವ ಮೊದಲು ಬೋಧಿಸತ್ವ ಸ್ವಲ್ಪ ದೂರದಲ್ಲಿ ನಿಂತಿದ್ದ ಕೆಂಪುಬಣ್ಣದ ನಾಯಿಯನ್ನು ಗಮನಿಸಿದ. ತನ್ನ ತಟ್ಟೆಯಲ್ಲಿದ್ದ ಅನ್ನದ ದೊಡ್ಡ ಉಂಡೆಯನ್ನು ಮಾಡಿ ಮೊದಲು ನಾಯಿಗೆ ಕೊಟ್ಟು ನಂತರ ತಾನು ಊಟ ಮಾಡಿದ.

ಹೀಗೆಯೇ ಹನ್ನೆರಡು ವರ್ಷಗಳು ಕಳೆದವು. ರಾಜನಿಗೆ ಐದು ಜನ ಮಂತ್ರಿಗಳಿದ್ದರು. ಒಬ್ಬ ಅಹೇತುಕವಾದಿ. ಅವನ ಪ್ರಕಾರ ಜಗತ್ತಿನಲ್ಲಿ ಪ್ರಾಣಿಗಳು ಯಾವ ಕಾರಣವೂ ಇಲ್ಲದೆ ಸೃಷ್ಟಿಯಾಗುತ್ತವೆ. ಎರಡನೆಯವನು ಈಶ್ವರ ಕಾರಣವಾದಿ. ಅವನು, ಲೋಕದಲ್ಲಿ ಪ್ರಾಣಿಗಳಿಗೆ ಉಂಟಾಗುವ ಸುಖ-ದುಃಖಗಳು ಈಶ್ವರನ ಇಚ್ಛೆಯಿಂದಲೇ ಆಗುತ್ತವೆ ಎಂದು ನಂಬಿದವನು. ಮೂರನೆಯವನು ಪೂರ್ವಕೃತವಾದಿ. ಅವನ ಪ್ರಕಾರ ಪ್ರಪಂಚದಲ್ಲಿ ನಡೆಯುವುದೆಲ್ಲ ಪೂರ್ವಕರ್ಮಗಳ ಫಲ. ನಾಲ್ಕನೆಯವನು ಉಚ್ಛೇದವಾದಿ. ಅವನು, ಈ ಪ್ರಪಂಚವನ್ನು ಬಿಟ್ಟು ಹೊರಗೆ ಏನೂ ಇಲ್ಲ. ಎಲ್ಲವೂ ಇಲ್ಲಿಯೇ ನಿರ್ಧಾರವಾಗಬೇಕು ಎಂದು ನಂಬಿದವನು. ಕೊನೆಯವನು ಕ್ಷತ-ವಿಧವಾದಿ. ಅವನ ಸಿದ್ಧಾಂತವೆಂದರೆ ಸ್ವಾರ್ಥ ಮುಖ್ಯ. ನನ್ನ ಸ್ವಾರ್ಥ ಸಾಧನೆಗೆ ತಂದೆ-ತಾಯಿಗಳನ್ನು ಕೊಂದರೂ ತಪ್ಪಿಲ್ಲ ಎನ್ನುವವನು. ಈ ಐದೂ ಜನ ನ್ಯಾಯಾಧೀಶರಾಗಿದ್ದರು. ಆದರೆ ಪ್ರಾಮಾಣಿಕರಾಗಿರದೆ ಲಂಚ ತಿಂದು ಅನ್ಯಾಯಿಗಳ ಪರವಾಗಿ ನ್ಯಾಯ ಕೊಡುತ್ತಿದ್ದರು. ಸಜ್ಜನರಿಗೆ ಬದುಕು ಕಷ್ಟವಾಯಿತು.

ಒಂದು ದಿನ ಬೋಧಿಸತ್ವ ಊಟಕ್ಕೆ ಹೊರಟಾಗ ವ್ಯಕ್ತಿಯೊಬ್ಬ ಬಂದು ಅಳತೊಡಗಿದ. ಭ್ರಷ್ಟ ನ್ಯಾಯಾಧೀಶರು ತನಗೆ ಮಾಡಿದ ಅನ್ಯಾಯವನ್ನು ವಿವರಿಸಿದ. ಆಗ ಬೋಧಿಸತ್ವ ತಾನೇ ನ್ಯಾಯಾಲಯಕ್ಕೆ ಹೋಗಿ ಸರಿಯಾದ ನ್ಯಾಯವನ್ನು ಕೊಟ್ಟ. ಜನರೆಲ್ಲ, ಸಾಧು, ಸಾಧು ಎಂದು ಜಯಕಾರ ಹಾಕಿದರು. ಇದನ್ನು ಕಂಡ ರಾಜ ಬೋಧಿಸತ್ವನಿಗೇ ನ್ಯಾಯ ನೀಡಲು ಹೇಳಿದ. ಅಂದಿನಿಂದ ಸರಿಯಾದ ನ್ಯಾಯ ದೊರೆಯತೊಡಗಿತು. ಇದರಿಂದ ಕುಪಿತರಾದ ಪಂಚ ನ್ಯಾಯಾಧೀಶರು, ಕಳ್ಳರು, ಅನ್ಯಾಯಿಗಳನ್ನೆಲ್ಲ ಒಂದು ಮಾಡಿ ರಾಜನ ಬಳಿಗೆ ನಿತ್ಯವೂ ದೂರು ಕೊಡಿಸತೊಡಗಿದರು. ಕೆಲದಿನಗಳ ನಂತರ ರಾಜ ಅವರನ್ನು ನಂಬತೊಡಗಿದ, ಬೋಧಿಸತ್ವನ ಮೇಲಿನ ಆದರ ಕಡಿಮೆಯಾಯಿತು. ಅದನ್ನು ಗಮನಿಸಿದ ಬೋಧಿಸತ್ವ ನೇರವಾಗಿ ರಾಜನ ಬಳಿಗೆ ಬಂದು, ‘ರಾಜಾ, ನಾನು ಇಲ್ಲಿಂದ ಹೊರಡುತ್ತೇನೆ. ನಿನಗೆ ನನ್ನಲ್ಲಿ ಶ್ರದ್ಧೆ ಕಡಿಮೆಯಾಗಿದೆ. ಶ್ರದ್ಧೆ ಇಲ್ಲದವರ ಆಶ್ರಯದಲ್ಲಿ ಇರಬಾರದು. ನಿನಗಿಂತ ಹೆಚ್ಚು ನಿನ್ನ ನಾಯಿಗೆ ಯಾರು ಪ್ರಾಮಾಣಿಕರು ಎಂದು ತಿಳಿದಿದೆ. ಎಚ್ಚರದಿಂದ ರಾಜ್ಯ ನಡೆಸು’ ಎಂದು ಹೊರಟು ಹೋದ.

ಅವನು ಹೋದ ಮೇಲೆ ನ್ಯಾಯಾಧೀಶರು ದೇಶವನ್ನು ಕೊಳ್ಳೆ ಹೊಡೆದರು. ಸುಳ್ಳು ಹೇಳಿ ರಾಣಿಯನ್ನು ಕೊಲ್ಲಿಸಿದರು. ರಾಷ್ಟ್ರ ಅನಾಯಕವಾಗಿ ಹೋಯಿತು.

ನಾಯಕರಿಗೆ, ಪ್ರಾಮಾಣಿಕರು ಮತ್ತು ಅಪ್ರಾಮಾಣಿಕರು ಇವರುಗಳ ನಡುವೆ ವ್ಯತ್ಯಾಸ ತಿಳಿಯದೆ ಹೋದರೆ, ತಾವು ನಾಯಕತ್ವವನ್ನು ಕಳೆದುಕೊಳ್ಳುವುದರ ಜೊತೆಗೆ ದೇಶವನ್ನು ಅಮಾಯಕವನ್ನಾಗಿ ಮಾಡುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.