ಶನಿವಾರ, ಏಪ್ರಿಲ್ 17, 2021
23 °C

ಬೆರಗಿನ ಬೆಳಕು: ಪ್ರಿಯವಾದ ದೃಶ್ಯ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ರಾಜ ವಿದೇಹನ ಆಜ್ಞೆಗೆ ಹೆದರಿ ನಾಲ್ಕು ಜನ ಅಮಾತ್ಯರು ತಮ್ಮ ರಥಗಳನ್ನು ತೆಗೆದುಕೊಂಡು ನಾಲ್ಕು ದಿಕ್ಕಿಗೆ ಮಹೋಷಧಕುಮಾರನನ್ನು ಹುಡುಕಿಕೊಂಡು ಬರಲು ಹೊರಟರು.

ರಾಜ ಸ್ಪಷ್ಟ ಆಜ್ಞೆ ಮಾಡಿದ್ದ. ‘ನನ್ನ ಮಗ ಮಹೋಷಧನನ್ನು ಯಾರು, ಎಲ್ಲಿ ಕಂಡರೂ, ಅಲ್ಲಿಂದಲೇ ಸತ್ಕಾರ ಮಾಡಿ ಕರೆದುಕೊಂಡು ಬನ್ನಿ’. ಇವರಲ್ಲಿ ಮೂವರು ಪಂಡಿತರಿಗೆ ಕುಮಾರ ಕಾಣಲಿಲ್ಲ. ಆದರೆ ದಕ್ಷಿಣದ ದ್ವಾರದಿಂದ ಹೋದ ಪಂಡಿತನಿಗೆ ದೂರದ ಒಂದು ಗ್ರಾಮದಲ್ಲಿ ಒಬ್ಬ ಮನುಷ್ಯ ಹದವಾದ ಮಣ್ಣು ತಂದು ಚಕ್ರದ ಮೇಲೆ ತಿರುಗಿಸಿ ಮಡಕೆ ಮಾಡುವುದನ್ನು ಕಂಡ. ಮೈಯೆಲ್ಲ ಮಣ್ಣು ಮೆತ್ತಿದ್ದ ತರುಣನನ್ನು ನೋಡಿದಾಗ ಅವನೇ ಮಹೋಷಧಕುಮಾರನಿರಬೇಕೆಂದು ತಿಳಿದ. ದೂರದಿಂದಲೇ ಗಮನವಿಟ್ಟು ನೋಡಿದ. ಮೈತುಂಬ ಮಣ್ಣು ಮೆತ್ತಿದ್ದರೂ, ಅವನ ಕಣ್ಣುಗಳಲ್ಲಿಯ ಕಾಂತಿ, ಅವನ ಕಾರ್ಯದಲ್ಲಿರುವ ಚಾಕಚಕ್ಯತೆಯನ್ನು ಗುರುತಿಸಿದ. ಮಧ್ಯಾಹ್ನ ಮಹೋಷಧಕುಮಾರ ಹುಲ್ಲಿನ ಮೇಲೆ ಕುಳಿತು ಊಟ ಮಾಡುತ್ತಿದ್ದಾಗ ಈ ಪಂಡಿತ ಅವನ ಬಳಿ ಹೋಗಿ ಹೇಳಿದ, ‘ನಮ್ಮ ಪಂಡಿತ ಸೆನೆಕ ಸರಿಯಾಗಿಯೇ ಹೇಳಿದ್ದ. ನಿನ್ನಂಥ ಐಶ್ವರ್ಯ, ಸಂಪತ್ತು, ರೂಪವಿದ್ದವನಿಗೂ ಅಭಾವ ಸಮಯದಲ್ಲಿ ಬುದ್ಧಿವಂತಿಕೆ ಪ್ರಯೋಜನವಾಗುವುದಿಲ್ಲ. ನೋಡು, ಹೇಗೆ ಐಶ್ವರ್ಯ ಹೋದ ಮೇಲೆ ನೀನು ದೀನವಾಗಿ ಮೈಗೆ ಮಣ್ಣು ಬಳಿದುಕೊಂಡು ಹುಲ್ಲಿನ ಹಾಸಿಗೆಯ ಮೇಲೆ ಕುಳಿತು ಈ ದರಿದ್ರನ ಊಟ ಮಾಡುತ್ತಿದ್ದೀ’. ಕುಮಾರ ಹೇಳಿದ ‘ಮೂರ್ಖ, ನಾನು ಇದನ್ನು ಬುದ್ಧಿವಂತಿಕೆಯಿಂದಲೇ ಮಾಡುತ್ತಿದ್ದೇನೆ. ನೋಡು, ಅದರಿಂದಲೇ ಎಲ್ಲ ಐಶ್ವರ್ಯವನ್ನು ಪುನಃ ಪಡೆಯುತ್ತೇನೆ. ಅದು ಸರಿ, ನನ್ನನ್ನು ಹುಡುಕಿಕೊಂಡು ಬಂದದ್ದೇಕೆ?’.

‘ಛತ್ರದ ದೇವತೆ ರಾಜನಿಗೆ ಪ್ರಶ್ನೆ ಕೇಳಿದಳು. ಆತ ಪಂಡಿತರಿಗೆ ಕೇಳಿದ. ನಮಗಾರಿಗೂ ಅದರ ಉತ್ತರ ಹೊಳೆಯಲಿಲ್ಲವಾದ್ದರಿಂದ ನಿನ್ನನ್ನು ಕರೆತರಲು ಕಳುಹಿಸಿದ್ದಾನೆ. ಇಗೋ, ಈ ಸಾವಿರ ನಾಣ್ಯಗಳು ಮತ್ತು ಜೋಡಿಶಾಲು. ರಾಜ ನಿನ್ನನ್ನು ಸತ್ಕಾರ ಮಾಡಿ ಕರೆತರಲು ಆಜ್ಞೆ ಮಾಡಿದ್ದಾನೆ’ ಎಂದ ಪಂಡಿತ. ಆಗ ಮಹೋಷಧಕುಮಾರ ಸ್ನಾನವನ್ನು ಮಾಡದೆ ಹಾಗೆಯೇ ಮೈಗೆ ಮಣ್ಣು ಅಂಟಿದಂತೆಯೇ, ರಥದಲ್ಲಿ ಕುಳಿತು ರಾಜನ ಬಳಿಗೆ ಹೋದ. ರಾಜ ಅವನನ್ನು ಗಮನಿಸಿದ. ಅವನು ತನ್ನ ಶತ್ರುವೇ ಆಗಿದ್ದರೆ ಶ್ರೀಮಂತಿಕೆಯಿಂದ ಬದುಕುತ್ತಿದ್ದ. ಹೀಗೆ ಮಣ್ಣು ಬಳಿದುಕೊಂಡು ಕರ್ಮ ಮಾಡುತ್ತಿದ್ದರೆ, ನನಗೆ ದ್ರೋಹ ಮಾಡುವವನಂತೆ ಕಾಣುವುದಿಲ್ಲ. ಹೀಗೆ ಚಿಂತಿಸಿ, ‘ಈಗ ಮನೆಗೆ ಹೋಗಿ ಸ್ನಾನ ಮಾಡಿ ಅಲಂಕೃತನಾಗಿ ಬಾ’ ಎಂದು ಅಪ್ಪಣೆ ಮಾಡಿದ.

ಅದರಂತೆ ಅಲಂಕೃತನಾಗಿ ಬಂದ ಮಹೋಷಧಕುಮಾರ ರಾಜನಿಗೆ ತಿಳಿ ಹೇಳಿದ. ‘ರಾಜಾ, ನಾನು ನಿಮ್ಮ ಮಗನಿದ್ದಂತೆ. ನಿಮಗೆ ದ್ರೋಹ ಮಾಡಲಾರೆ. ನೀವೇ ನನ್ನನ್ನು ಈ ಮಹದೈಶ್ವರ್ಯದಲ್ಲಿ ಪ್ರತಿಷ್ಠಾಪಿಸಿದ್ದೀರಿ ಮತ್ತು ಕೃಪಾವರ್ಷವನ್ನು ಕರೆದಿದ್ದೀರಿ. ನಾನು ಕುಳಿತ ಮರದ ಕೊಂಬೆಯನ್ನು ಮುರಿಯುವವನಲ್ಲ. ದಯವಿಟ್ಟು ತಮ್ಮ ಪ್ರಶ್ನೆಯನ್ನು ಹೇಳಿ’ ಎಂದ. ರಾಜ ಹೇಳಿದ, ‘ಕೈಕಾಲುಗಳಿಂದ ಹೊಡೆಯುತ್ತದೆ, ಮುಖಕ್ಕೂ ಹೊಡೆಯುತ್ತದೆ, ಆದರೂ ಅದು ಪ್ರಿಯವಾಗಿರುತ್ತದೆ. ಅಂಥ ದೃಶ್ಯ ಯಾವುದು?’ ಒಂದು ಕ್ಷಣ ಯೋಚಿಸಿದ ಕುಮಾರ ಮಂದಸ್ಮಿತನಾಗಿ ಹೇಳಿದ, ‘ಪ್ರಭೂ, ತಾಯಿಯ ತೊಡೆಯಲ್ಲಿ ಮಲಗಿದ್ದ ಮಗು ಆಡುತ್ತ ಕೈಕಾಲುಗಳಿಂದ ಆಕೆಗೆ ಹೊಡೆಯುತ್ತದೆ, ಕೂದಲು ಎಳೆಯುತ್ತದೆ, ಮುಖಕ್ಕೂ ಹೊಡೆಯುತ್ತದೆ. ಅದು ತಾಯಿಗೆ ಅತ್ಯಂತ ಪ್ರಿಯವಾಗಿರುತ್ತದೆ. ಅದೇ ಆ ಸುಂದರ ದೃಶ್ಯ’.

ತಕ್ಷಣ ದೇವಿ ತನ್ನ ನಿಪಾತದಿಂದ ಹೊರಬಂದು ಮಧುರಸ್ವರದಲ್ಲಿ ‘ಉತ್ತರ ಸರಿಯಾಗಿದೆ’ ಎಂದು ಹೇಳಿ ಮರೆಯಾದಳು. ರಾಜ ಮತ್ತು ಸಭಿಕರು ಕುಮಾರನ ಪ್ರಜ್ಞೆಗೆ ಬೆರಗಾದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು