ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಮನುಷ್ಯರೂಪದ ದೈವ

Last Updated 4 ಜೂನ್ 2021, 18:50 IST
ಅಕ್ಷರ ಗಾತ್ರ

ಕಾರಿರುಳೊಳಗಸದಿ ತಾರೆ ನೂರಿದ್ದೇನು ? |
ದಾರಿಗನ ಕಣ್ಗೆ ಬೇಕೊಂದು ಮನೆಬೆಳಕು||
ದೂರದಾ ದೈವವಂತಿರಲಿ, ಮಾನುಷಸಖನ |
ಕೋರುವುದು ಬಡಜೀವ – ಮಂಕುತಿಮ್ಮ || 424 ||

ಪದ-ಅರ್ಥ: ಕಾರಿರುಳೊಳ್= ಕಗ್ಗತ್ತಲೆಯ ರಾತ್ರಿಯಲ್ಲಿ, ಮಾನುಷಸಖನ= ಮನುಷ್ಯ ಸ್ನೇಹಿತನ ಕೋರುವುದು= ಬೇಡುವುದು.

ವಾಚ್ಯಾರ್ಥ: ಕಗ್ಗತ್ತಲೆಯ ರಾತ್ರಿಯ ಆಕಾಶದಲ್ಲಿ ನೂರು ತಾರೆಗಳಿದ್ದೇನು ಪ್ರಯೋಜನ? ದಾರಿಹೋಕನಿಗೆ ದಾರಿತೋರಲು ಮನೆಬೆಳಕು ಬೇಕು. ದೂರದಲ್ಲಿದ್ದ ದೈವವಿರಲಿ. ಆದರೆ ಮನುಷ್ಯನ ಬಡಜೀವ ಬೇಡುವುದು ಮತ್ತೊಬ್ಬ ಮನುಷ್ಯನ ಸ್ನೇಹ ಹಸ್ತ.

ವಿವರಣೆ: ಅದೊಂದು ಕಾಡಿನಲ್ಲಿ ಅಲ್ಲಿಯ ಕಾಡು ಜನಾಂಗಕ್ಕೆ ಪ್ರಯೋಜನವಾಗಲೆಂದು ಕೆಲವು ಉತ್ಸಾಹೀ ತರುಣ ವೈದ್ಯರು ಬಂದು ಆಸ್ಪತ್ರೆಯನ್ನು ತೆಗೆದರು. ಮೊದಮೊದಲು ಅಲ್ಲಿಗೆ ಬರಲು ಹಿಂಜರಿದ ಜನರು ನಂತರ ಚಿಕಿತ್ಸೆಗಾಗಿ ಬರತೊಡಗಿದರು. ಅಲ್ಲಿ ಅನೇಕ ಹೆರಿಗೆಗಳಾಗಿ, ಹುಟ್ಟಿದ ಮಕ್ಕಳು ಬದುಕುತ್ತಿರಲಿಲ್ಲ. ಅದಕ್ಕೆ ಕಾರಣ, ಆ ತಾಯಂದಿರು ಮಗುವನ್ನು ಬೆಟ್ಟದ ಮೇಲಿನ ಮಾರಮ್ಮನ ದೇವಸ್ಥಾನಕ್ಕೆ ಕರೆದೊಯ್ಯುವವರೆಗೆ ಎದೆಹಾಲು ಕುಡಿಸುತ್ತಿರಲಿಲ್ಲ, ನೀರನ್ನು ಮುಟ್ಟಿಸುತ್ತಿರಲಿಲ್ಲ. ಹೀಗಾಗಿ ಮಕ್ಕಳು ನಿರ್ಜಲೀಕರಣದಿಂದ ಸತ್ತು ಹೋಗುತ್ತಿದ್ದವು. ವೈದ್ಯರು ಪರಿಪರಿಯಾಗಿ ಬೇಡಿಕೊಂಡರೂ ಅವರು ದೈವಭಯದಿಂದ ಒಪ್ಪುತ್ತಿರಲಿಲ್ಲ. ಆಗೊಬ್ಬ ಹಿರಿಯರು ಬಂದು, ‘ತಮಗೆ ಕನಸಿನಲ್ಲಿ ದೇವಿ ಬಂದು ಆಜ್ಞೆ ಮಾಡಿದ್ದಾಳೆ. ಅದೆಂದರೆ ತಾಯಂದಿರು ಮಕ್ಕಳನ್ನು ಖಂಡಿತವಾಗಿಯೂ ಮಾರಮ್ಮನ ದೇವಸ್ಥಾನಕ್ಕೆ ಕರೆದೊಯ್ಯಲೇಬೇಕು. ಆದರೆ ಮಾರಮ್ಮ, ಮಕ್ಕಳಿಗೆ ಎದೆಹಾಲು, ನೀರು ಕುಡಿಸದ ತಾಯಂದಿರನ್ನು ನೋಡುವುದಿಲ್ಲ’ ಎಂದು ಅವರಿಗೆ ತಿಳಿಯುವಂತೆ ಹೇಳಿದರು.

ನಂತರ ಮಕ್ಕಳ ಸಾವಿನ ಸಂಖ್ಯೆ ತುಂಬ ಕಡಿಮೆಯಾಯಿತು. ಅಂದರೆ ದೈವಪ್ರೀತಿ ಇರಲಿ, ಆದರೆ ಹತ್ತಿರದ ವೈದ್ಯರ ಮಾತಿನಲ್ಲಿ ಶ್ರದ್ಧೆ ಇರಲಿ. ಅದಕ್ಕೇ ಪೂರ್ವಿಕರು ಒಂದು ಮಾತನ್ನು ಹೇಳುತ್ತಿದ್ದರು. ‘ಔಷಧಂ ಜಾನ್ಹವೀತೋಯಂ, ವೈದ್ಯೋ ನಾರಾಯಣೋ ಹರಿ’. ಗಂಗೆಯ ನೀರೇ ನಮಗೆ ಔಷಧ ಮತ್ತು ವೈದ್ಯರೇ ದೇವರ ಸ್ವರೂಪ. ಗಂಗೆಯ ನೀರಿನಲ್ಲಿ, ದೂರದಲ್ಲಿರುವ ದೇವರಲ್ಲಿ, ಆಳವಾದ ನಂಬಿಕೆ ಇರುವುದಕ್ಕೆ ಯಾರೂ ಬೇಡವೆನ್ನುವುದಿಲ್ಲ. ಆದರೆ ಸಮರ್ಥನಾದ, ಸರಿಯಾದ ವೈದ್ಯನನ್ನು ಕರೆತಂದು ಚಿಕಿತ್ಸೆ ಮಾಡಿಸುವುದು ಪುರುಷ ವಿವೇಕ. ಹತ್ತಿರದ ವೈದ್ಯ, ದೂರದ ದೇವರಿಗೆ ಒಂದು ಸೇತು. ನಮ್ಮ ಹಿರಿಯರು ದೇವರು ಎಂಬುದು ಒಂದು ಅತೀಂದ್ರಿಯ ವಸ್ತು, ಅದು ಪರೀಕ್ಷೆಗೆ, ಪ್ರಮಾಣಕ್ಕೆ ನಿಲುಕದ್ದಾದ ಕಾರಣ, ಶಾಸ್ತ್ರಗಳು, ಹಿರಿಯರ ಅನುಭವ ವಾಕ್ಯಗಳಿಂದಲೇ ಅದು ಅಂತ:ರ್ದೃಷ್ಟಿಗೆ ದೊರಕುವಂಥದ್ದು ಎಂದು ಹೇಳಿದ್ದಾರೆ. ಎಲ್ಲವೂ ಆ ಶಕ್ತಿಯಿಂದಲೇ ನಡೆಯುವುದು ಸತ್ಯವೆಂದುಕೊಂಡರೂ, ನಮ್ಮ ಹೃದಯದ ಬೆಳಕನ್ನು ನಾವು ಲೋಕಜೀವನದಿಂದ, ಮನುಷ್ಯ ಸಂಪರ್ಕದಿಂದಲೇ ಪಡೆಯಬೇಕಾಗುತ್ತದೆ. ನಮಗೆ ದೇವರು ಕೂಡ ಮನುಷ್ಯರೂಪದಲ್ಲೇ ಬರಬೇಕಲ್ಲವೆ? ತಾಯಿಯಾಗಿ, ತಂದೆಯಾಗಿ, ಬಂಧುವಾಗಿ, ಗುರುವಾಗಿ, ವೈದ್ಯನಾಗಿ, ಕವಿಯಾಗಿ, ವಕೀಲನಾಗಿ, ರಾಜಕಾರಣಿಯಾಗಿ ನಮ್ಮ ಹೃದಯವನ್ನು ತಟ್ಟುವುದು ಈ ಮನುಷ್ಯ ಪರ್ಕ. ಅದಕ್ಕೆ ಈ ಕಗ್ಗ ಸುಂದರವಾಗಿ ಹೇಳುತ್ತದೆ, ಆಕಾಶದಲ್ಲಿ ಕೋಟಿ ತಾರೆಗಳಿದ್ದರೂ, ನಮಗೆ ದಾರಿ ತೋರಲು ಹತ್ತಿರದಬೆಳಕುಬೇಕು. ದೂರದ ದೇವರು ಕೂಡ ನಮಗೆ ಮನುಷ್ಯರೂಪದಲ್ಲೇ ಬರಬೇಕು. ಅದಕ್ಕಾಗಿ, ಆ ಸಂಪರ್ಕಕ್ಕಾಗಿ, ಆ ಸಂಪರ್ಕ ನೀಡುವ ಆತ್ಮೀಯತೆಗಾಗಿ ಪ್ರತಿಯೊಂದು ಜೀವ ಹಂಬಲಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT