ಗುರುವಾರ , ಡಿಸೆಂಬರ್ 5, 2019
19 °C

ಮಂಕುತಿಮ್ಮನ ಕಗ್ಗ | ಸಹಜತೆಯಿಂದ ಕೃತಕತೆ

ಗುರುರಾಜ ಕರಜಗಿ
Published:
Updated:

ಸಹಜ ನಗ್ನತೆ ನಮಗೆ, ಸಹಜ ನಖದಾಡಿಗಳು |
ಬಹುಯಗದ ಸಂಸ್ಕಾರ ವಸ್ತ್ರ ಸಿಂಗಾರ ||
ಸಹಜ ನಿರಕ್ಷರತೆ, ವಿದ್ಯೆ ತಾಂ ಕೃತಕವಲ |
ಸಹಜಿದಿನೆ ಕೃತಕಮುಂ – ಮಂಕುತಿಮ್ಮ || 214 ||

ಪದ-ಅರ್ಥ: ನಖ=ಉಗುರುಗಳು, ದಾಡಿ=ಗಡ್ಡ, ಮೀಸೆಗಳು, ಸಹಜದಿನೆ=ಸಹಜದಿಂದ.

ವಾಚ್ಯಾರ್ಥ: ನಮಗೆ ನಗ್ನತೆ ಸಹಜವಾದದ್ದು, ಅಂತೆಯೇ ಉಗುರುಗಳು, ಕೂದಲುಗಳು. ನಮ್ಮ ಇಂದಿನ ಬಟ್ಟೆ, ಶೃಂಗಾರಗಳು ಬಹುಕಾಲದ ಸಂಸ್ಕಾರದಿಂದ ಬಂದವುಗಳು. ಹಾಗೆಯೇ ನಿರಕ್ಷರತೆ ಸಹಜ, ವಿದ್ಯೆ ಪ್ರಯತ್ನದಿಂದ ಸೃಷ್ಟಿಸಿದ್ದು. ಸಹಜದಿಂದಲೇ ಕೃತಕವಾದದ್ದು ಬಂದದ್ದು.

ವಿವರಣೆ: ಆದಿ ಮಾನವ ಗುಹೆಯಲ್ಲಿ, ಕಾಡಿನಲ್ಲಿದ್ದಾಗ ನಗ್ನನಾಗಿಯೇ ಇದ್ದ. ಅದು ಅಭಾಸವೆಂದು ಯಾರಿಗೂ ಎನ್ನಿಸಲೇ ಇಲ್ಲ ಯಾಕೆಂದರೆ ಅದೇ ಸಹಜವಾದ ಬದುಕಾಗಿತ್ತು. ಬಟ್ಟೆ ಧರಿಸಬೇಕೆಂಬ ಯೋಚನೆಯಾಗಲಿ, ಅವಶ್ಯಕತೆಯಾಗಲಿ ಕಂಡಿರಲಿಲ್ಲ. ಯಾವಾಗ ಬಟ್ಟೆ ಧರಿಸುವ ನಾಗರಿಕತೆ ಬಂದಿತೋ ತಿಳಿಯದು. ಬಹುಶಃ ಮೊದಲು ಬಟ್ಟೆ ಧರಿಸಿದ ವ್ಯಕ್ತಿ ಉಳಿದವರ ತಮಾಷೆಗೆ ಗುರಿಯಾಗಿದ್ದಿರಬಹುದು. ಯಾಕೆಂದರೆ ಅವರಿಗೆ ಇದು ಕೃತಕವೆನ್ನಿಸಿತ್ತು.

ಕೃತಕವೆಂಬ ಪದಕ್ಕೆ ಅನೇಕ ಅರ್ಥಗಳಿವೆ. ಕೃತಕವೆಂದರೆ ಮೋಸದ್ದು, ಅಸಹಜವಾದದ್ದು, ನಕಲಿ, ತೋರಿಕೆಯ ಎಂಬ ಅರ್ಥಗಳೊಡನೆ ಯಾರೊಬ್ಬರಿಂದ ಸೃಷ್ಟಿಯಾದದ್ದು ಎಂಬ ಅರ್ಥವೂ ಇದೆ. ಸಹಜವಾದದ್ದೆಂದರೆ ತನ್ನಷ್ಟಕ್ಕೆ ತಾನೇ ಇದ್ದದ್ದು, ಯಾವ ಮನುಷ್ಯನೂ ಸೃಷ್ಟಿಮಾಡದಿರುವುದು. ಮೊದಲು ಮಾನವ ಸಹಜವಾಗಿದ್ದ. ತಾನು ಹೇಗೆ ಹುಟ್ಟಿದ್ದನೋ ಹಾಗೆಯೇ ಬೆಳೆದು ಉಳಿದುಬಿಟ್ಟ. ಅದೇ ರೀತಿ ಅವನ ದೇಹದಲ್ಲಿ ಉಗುರುಗಳು, ರೋಮಗಳು ಬೆಳೆಯುವುದು ಸಹಜ. ಯಾವಾಗ ಉಗುರುಗಳು ಅವನ ಕಾರ್ಯಕ್ಕೆ ತೊಂದರೆಯಾಗತೊಡಗಿದವೋ ಆತ ಅವುಗಳನ್ನು ಕತ್ತರಿಸತೊಡಗಿದ. ಮೊದಮೊದಲು ಹೇಗೆ ಹೇಗೆಯೋ ಕತ್ತರಿಸಿ ಬಿಸಾಕಿದ ಮನುಷ್ಯ ನಿಧಾನಕ್ಕೆ ಅವುಗಳನ್ನು ಅಲಂಕಾರಿಕವಾಗಿ ಕತ್ತರಿಸಿಕೊಂಡು ಸಂತೋಷಪಟ್ಟ.

ಅಂತೆಯೇ ತಲೆಗೂದಲು ಅತಿಯಾದಾಗ ಅವುಗಳನ್ನು ನಿಗ್ರಹಿಸಲು ಗಂಟು ಹಾಕಿಕೊಂಡ, ನಂತರ ಗಂಟನ್ನು ಹೆಣಿಕೆಯನ್ನಾಗಿ ಮಾಡಿದ. ಕೆಲವರು ಅದನ್ನು ಕತ್ತರಿಸಿ ಅಲಂಕಾರಮಾಡಿಕೊಂಡರು. ಇದೇ ರೀತಿ ಮೊದಲು ಸೊಪ್ಪನ್ನು ಮಾನಮುಚ್ಚಿಕೊಳ್ಳಲು ಬಳಸಿದ ಮನುಷ್ಯ ಬಟ್ಟೆಯನ್ನು ತಯಾರಿಸಲು ಕಲಿತ, ಅದನ್ನು ತರತರಹದ ವಿನ್ಯಾಸದಲ್ಲಿ ತನ್ನ ಮನಸ್ಸಿಗೆ, ದೇಹಕ್ಕೆ ಹೊಂದುವಂತೆ ರಚಿಸಿಕೊಂಡು ಆನಂದಿಸಿದ.
ವಸ್ತುಗಳ ವಿನ್ಯಾಸ, ಅಲಂಕಾರ, ಶೃಂಗಾರ ಇವುಗಳೆಲ್ಲ ಮನುಷ್ಯನೇ ಮಾಡಿಕೊಂಡದ್ದು. ಅದಕ್ಕೇ ಅದು ಕೃತಕ. ಇದೆಲ್ಲ ಕೆಲವೇ ದಿನಗಳಲ್ಲಿ ಆದದ್ದಲ್ಲ. ಅದು ಶತಮಾನಗಳನ್ನೇ ತೆಗೆದುಕೊಂಡಿರಬೇಕು. ಸಹಜವಾಗಿದ್ದ ನಗ್ನತೆ ಕೃತಕ ಶೃಂಗಾರವಾಗಲು ಬಹುಕಾಲದ ಸಂಸ್ಕಾರವನ್ನು ಪಡೆದಿದೆ.

ನಾವು ಹುಟ್ಟಿದಾಗ ಒಂದಕ್ಷರವೂ ಗೊತ್ತಿರಲಿಲ್ಲ. ಹಾಗೆಯೇ ಉಳಿದುಬಿಟ್ಟರೆ ನಾವೆಲ್ಲ ಅನಕ್ಷರಸ್ಥರಾಗಿಯೇ ಉಳಿಯುತ್ತಿದ್ದೆವು. ಆದರೆ ಜ್ಞಾನವನ್ನು ಪಡೆಯಲು ಪ್ರಯತ್ನಪಟ್ಟು ಅಕ್ಷರಗಳನ್ನು ಕಲಿತೆವು. ಆದ್ದರಿಂದ ಅನಕ್ಷರತೆ ನಮಗೆ ಅತ್ಯಂತ ಸಹಜವಾದದ್ದು- ಹುಟ್ಟಿನಿಂದಲೇ ಬಂದದ್ದು. ಆದರೆ ವಿದ್ಯೆ ಪುರುಷ ಪ್ರಯತ್ನದಿಂದ ಪಡೆದುಕೊಂಡದ್ದು, ಆದ್ದರಿಂದ ಅದು ಕೃತಕವಾದದ್ದು.

ಈ ಬದಲಾವಣೆಯನ್ನು ಕಗ್ಗ ತುಂಬ ಸುಂದರವಾಗಿ ಅರ್ಧ ಸಾಲಿನಲ್ಲಿ ಹೇಳಿಬಿಡುತ್ತದೆ – ‘ಸಹಜಿದಿನೆ ಕೃತಕಮುಂ’ ಎಂದು. ಎಲ್ಲವೂ ಪ್ರಾರಂಭವಾಗುವುದು ಸಹಜದಿಂದಲೇ. ಮುಂದೆ ನಿಧಾನವಾಗಿ ಅದು ಪರಿಷ್ಕಾರ ಹೊಂದುತ್ತ ಬಂದಂತೆ ಕೃತಕವಾಗುತ್ತದೆ.

ಪ್ರತಿಕ್ರಿಯಿಸಿ (+)