ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ತಮ್ಮ ಭಾಗ್ಯಕ್ಕೆ ಬಾಧ್ಯರು

Last Updated 23 ಮೇ 2021, 19:30 IST
ಅಕ್ಷರ ಗಾತ್ರ

ಮಕ್ಕಳ ಭವಿಷ್ಯಕ್ಕೆ ಕಕ್ಕುಲತೆಗೊಳಬೇಡ |
ಪಕ್ಕಾಗುವುದು ಭಾಗ್ಯವೆಂತೆಂತೊ ಜಗದಿ ||
ದಕ್ಕಿತೇಂ ಕುರುಪಾಂಡುತನಯರ್ಗೆ ರಾಜ್ಯಸುಖ? |
ದಿಕ್ಕವರಿಗವರವರೆ –ಮಂಕುತಿಮ್ಮ || 420 ||

ಪದ-ಅರ್ಥ: ಕಕ್ಕುಲತೆ=ಕನಿಕರ, ಮರುಕ, ಅತಿಯಾದ ಕಾಳಜಿ, ಪಕ್ಕಾಗುವುದು=ಪಕ್ವವಾಗುವುದು, ಭಾಗ್ಯವೆಂತೆಂತೊ=ಭಾಗ್ಯ+ಎಂತೆಂತೊ, ದಕ್ಕಿತೇಂ=ದೊರಕಿತೆ, ದಿಕ್ಕವರಿಗವರವರೆ=ದಿಕ್ಕು+ಅವರಿಗೆ+ಅವರವರೆ.

ವಾಚ್ಯಾರ್ಥ: ಮಕ್ಕಳ ಭವಿಷ್ಯಕ್ಕಾಗಿ ಅತಿಯಾದ ಕಳವಳಪಡುವುದು ಬೇಡ. ಅವರ ಭಾಗ್ಯ ಎಂತೆಂತೊ ಜಗತ್ತಿನಲ್ಲಿ ಪಕ್ವವಾಗುತ್ತದೆ. ಕುರುವಂಶಜರಾದ ಕೌರವರು ಮತ್ತು ಪಾಂಡವರಿಗೆ ರಾಜ್ಯಸುಖ ದೊರಕಿತೇ? ಅವರವರ ದಿಕ್ಕಿಗೆ, ಭಾಗ್ಯಕ್ಕೆ ಅವರವರೇ ಕಾರಣರು.

ಮಕ್ಕಳೆಂದರೆ ನಮ್ಮ ಜೀವನದ ಮುಂದುವರಿಕೆ. ಅವರು ನಮ್ಮ ಅಪೂರ್ಣ ಕನಸುಗಳನ್ನು ಪೂರ್ತಿಮಾಡಿಯಾರು ಎಂಬ ನಂಬಿಕೆ ಪಾಲಕರದು. ಅವರ ಭವಿಷ್ಯದ ಭದ್ರತೆಗೆ ಏನೆಲ್ಲ ತ್ಯಾಗಗಳು, ಯೋಜನೆಗಳು, ಕನಸುಗಳು! ಅವು ನಮ್ಮ ಪ್ರಯತ್ನ ಮಾತ್ರ. ಅವರಿಗೆ ನಿಜವಾಗಿಯೂ ಭವಿಷ್ಯದಲ್ಲಿ ಏನು ದಕ್ಕಬೇಕೋ ಅದು ದೊರಕಿಯೇ ತೀರುತ್ತದೆ. ಅವರ ಭಾಗ್ಯವನ್ನು ಅವರೇ ಕಂಡುಕೊಳ್ಳುತ್ತಾರೆ.

ಮಗು ಹುಟ್ಟಿದಾಗ ಜ್ಯೋತಿಷಿಗಳು ಹೇಳಿದರಂತೆ, ಈ ಮಗುವಿನ ಜಾತಕ ತುಂಬ ಅಪರೂಪದ್ದು. ಈತ ಚಕ್ರವರ್ತಿಯೂ ಆಗಬಹುದು, ಸನ್ಯಾಸಿಯೂ ಆಗಬಹುದು. ತಂದೆ ರಾಜ. ಮಗ ಸನ್ಯಸಿಯಾಗಬಾರದು, ತನ್ನಂತೆ ರಾಜನಾಗಬೇಕು ಎಂದು ಚಿಂತಿಸಿದ. ಮಗನನ್ನು ದುಃಖದ, ವೃದ್ಧಾಪ್ಯದ, ಅನಾರೋಗ್ಯದ ಎಳೆಯೂ ಕಾಣದಂತೆ ಇಪ್ಪತ್ತೊಂಭತ್ತು ವರ್ಷ ಬೆಳೆಸಿದ. ಸುಂದರವಾದ ಹೆಣ್ಣಿನೊಡನೆ ಮದುವೆ ಮಾಡಿಸಿ ಬಂಧನಕ್ಕೆ ಕಟ್ಟಿ ಹಾಕಲು ನೋಡಿದ. ಒಂದು ದಿನ ಬದುಕಿನ ಮತ್ತೊಂದು ಮುಖವನ್ನು ಕಂಡ ತರುಣ ಎಲ್ಲ ಬಂಧನಗಳನ್ನು ಕಿತ್ತೊಗೆದು ಸನ್ಯಾಸಿಯಾಗಿ, ಬುದ್ಧನಾಗಿ ಸನ್ಯಾಸ ಧರ್ಮದ ಚಕ್ರವರ್ತಿಯಾದ. ತಂದೆ ಬಯಸಿದ್ದು ರಾಜಪದವಿ, ಮಗ ಪಡೆದದ್ದು ಸನ್ಯಾಸಪದವಿ. ತಂದೆ–ತಾಯಿ ಅನನ್ಯವಾದ ಕನಸು ಕಟ್ಟಿ ತಮ್ಮ ಮಗ ಅತ್ಯಂತ ಶ್ರೇಷ್ಠ ರಾಜನಾಗಲಿ ಎಂದು ಅತ್ಯುತ್ತಮವಾದ ಶಿಕ್ಷಣ ಕೊಡಿಸಿ, ದೇಶ–ವಿದೇಶಗಳಲ್ಲಿ ತರಬೇತಿ ಕೊಡಿಸಿ ತಮ್ಮ ತರುವಾಯ ಆತ ರಾಜ ಸಿಂಹಾಸನವನ್ನೇರಲಿ ಎಂದು ಹೆಣಗಿದರು. ಆದರೆ ಒಂದು ಕ್ಷಣದಲ್ಲಿ ಮನಸ್ಥಿಮಿತತೆಯನ್ನು ಕಳೆದುಕೊಂಡು, ತಂದೆ-ತಾಯಿ, ಸೋದರಮಾವ ಮುಂತಾದ ಒಂಭತ್ತು ಜನರನ್ನು ಗುಂಡಿನಲ್ಲಿ ಹೊಡೆದು ಕೊಂದು ತಾನೂ ತಲೆಗೆ ಗುಂಡುಹೊಡೆದುಕೊಂಡು ಸತ್ತದ್ದು ನೇಪಾಳದ ರಾಜಮನೆತನದಲ್ಲಿ ಇಪ್ಪತ್ತು ವರ್ಷಗಳ ಹಿಂದೆ ನಡೆದ ಮರೆಯಬಾರದ ಘಟನೆ. ತಂದೆ-ತಾಯಿ ಅಪೇಕ್ಷಿಸಿದ್ದು ಏನು, ಆದದ್ದೇನು?

ಕಗ್ಗ ಈ ಮಾತನ್ನೇ ಹೇಳುತ್ತದೆ. ಮಕ್ಕಳ ಭವಿಷ್ಯಕ್ಕೆ ಅತಿಶಯವಾದ ತಳಮಳ ಬೇಡ. ಜಗತ್ತಿನಲ್ಲಿ ಅವರ ಭಾಗ್ಯ ಹೇಗೆ ತೆರೆದುಕೊಳ್ಳುತ್ತದೆಂಬುದನ್ನು ಹೇಳುವುದು ಅಸಾಧ್ಯ. ಕುರುವಂಶ ಲಲಾಮರಾದ ಕೌರವ-ಪಾಂಡವರಿಗೆ ಯಾವುದರಲ್ಲಿ ಕಡಿಮೆ ಇತ್ತು? ಅತ್ಯಂತ ಸಮೃದ್ಧಿಯಿಂದ, ಸಂತೋಷವಾಗಿ ಬದುಕಲು ಎಲ್ಲ ಅವಕಾಶಗಳನ್ನು ಪಡೆದಿದ್ದ ದಾಯಾದಿಗಳು, ಮತ್ಸರದಿಂದ ಹೊಡೆದಾಡಿ, ಮನುಕುಲವನ್ನೇ ಹಿಂಸೆಯ ಕುಂಡವನ್ನಾಗಿಸಿದರಲ್ಲ! ತಾವಾದರೂ ಸುಖಪಟ್ಟರೆ? ಯುದ್ಧಭೂಮಿಯಲ್ಲಿ ಅನಾಥರಂತೆ ಕೌರವರು ಸತ್ತರೆ, ಪಶ್ಚಾತ್ತಾಪದಲ್ಲಿ ಪಾಂಡವರು ನರಳಿದರು. ಆದ್ದರಿಂದ ಮಕ್ಕಳಿಗೆ ಅವಕಾಶಗಳನ್ನು ಕಲ್ಪಿಸೋಣ, ಅತಿಯಾದ ಕಾಳಜಿ, ತಳಮಳ ಬೇಡ. ಅವರವರ ದಿಕ್ಕಿಗೆ, ಭಾಗ್ಯಕ್ಕೆ ಅವರೇ ಬಾಧ್ಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT