ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕರ್ಷಣೆಗಳ ಮಿತಿ | ಮಂಕುತಿಮ್ಮನ ಕಗ್ಗ

Last Updated 14 ಮೇ 2020, 1:33 IST
ಅಕ್ಷರ ಗಾತ್ರ

ಸಕ್ಕರೆಯ ಭಕ್ಷ್ಯವನುಮಕ್ಕಳೆದುರಿಗೆ ಕೈಗೆ |
ಸಿಕ್ಕುವಂತಿರಿಸಿ ಕದ್ದರೆ ಗದ್ದರಿಪುದೇಂ ? ||
ತಕ್ಕುದಲ್ಲದಪೇಕ್ಷೆಗೇಕೆ ಮದ್ಯವ ಕುಡಿಸು - |
ತುಕ್ಕಿಸುವನದನು ವಿಧಿ?- ಮಂಕುತಿಮ್ಮ || 290 ||

ಪದ-ಅರ್ಥ: ಭಕ್ಷ್ಯ=ತಿಂಡಿ, ಸಿಕ್ಕುವಂತಿರಿಸಿ=ಸಿಕ್ಕುವಂತೆ+ಇರಿಸಿ, ಗದ್ದರಿಪುದೇಂ=ಗದ್ದರಿಪುದು
(ಗದರಿಸುವುದು)+ಏಂ(ಏಕೆ), ತಕ್ಕುದಲ್ಲದಪೇಕ್ಷೆಗೇಕೆ. ತಕ್ಕುದಲ್ಲದ(ಸರಿಯಾದದ್ದಲ್ಲದ)+ಅಪೇಕ್ಷೆಗೆ+ಏಕೆ, ಕುಡಿಸುತುಕ್ಕಿಸುವನದನು =
ಕುಡಿಸುತ+ಉಕ್ಕಿಸುವನು+ಅದನು.

ವಾಚ್ಯಾರ್ಥ: ಸಕ್ಕರೆಯ ತಿಂಡಿಯನ್ನು ಮಾಡಿ ಮಕ್ಕಳಿಗೆ ಕಾಣುವಂತೆ ಅವರ ಮುಂದಿರಿಸಿ, ಅವರು ಅದನ್ನು ಕದ್ದರೆ ಗದರಿಸುವುದೇಕೆ? ನಮಗೆ ಸರಿಯಾದದ್ದಲ್ಲದ ಅಪೇಕ್ಷೆಗಳಿಗೆ ಮತ್ತು ಬರುವಂತೆ ಮದ್ಯವನ್ನು ಕುಡಿಸಿ, ನಮ್ಮ ಮುಂದಿರಿಸಿ, ಉಕ್ಕಿಸುವುದೇಕೆ ವಿಧಿ?

ವಿವರಣೆ: ಪ್ರಪಂಚದ ವ್ಯವಸ್ಥೆಯೇ ವಿಚಿತ್ರ. ಅದರ ಬಣ್ಣ ಬಣ್ಣದ ಸೌಂದರ್ಯ ಮನಸ್ಸನ್ನು ಸೆಳೆಯುತ್ತದೆ. ಅದು ಎಷ್ಟು ಆಪ್ತವಾಗಿ ನಮ್ಮನ್ನು ಸೆಳೆಯುತ್ತದೆಂದರೆ ಅದಿಲ್ಲದೆ ನನಗೆ ಬದುಕೇ ಇಲ್ಲ ಎನ್ನುವಂತಾಗುತ್ತದೆ. ಒಮ್ಮೆ ಅದರ ಸೆಳೆತಕ್ಕೆ ಸಿಕ್ಕೆವೋ, ಅದು ನಮ್ಮನ್ನು ಬಿಡುವುದಿಲ್ಲ. ಅದು ಪಾಶವೇ ಆಗಿ ನಮ್ಮನ್ನು ಎಳೆದು ಹಣ್ಣು ಮಾಡುತ್ತದೆ. ಅದು ಬೇಡವೆಂದು ಮತ್ತೊಂದು ದಿಕ್ಕಿಗೆ ನೋಡಿದರೆ ಅಲ್ಲಿ ಮತ್ತೊಂದು ಆಕರ್ಷಣೆ ಕಾದು ಕುಳಿತಿದೆ. ಎಲ್ಲಿ ನೋಡಿದೊಡಲ್ಲಿ ಆಕರ್ಷಣೆಯ ಬಲೆಗಳು. ಬಲೆಗಳು ನಮ್ಮನ್ನು ಹಿಡಿದುಕೊಳ್ಳುವುದಿಲ್ಲ, ನಾವೇ ಬಲೆಗಳಲ್ಲಿ ಸಿಕ್ಕು ಬೀಳುತ್ತೇವೆ.

ಅದಲ್ಲದೆ, ಪ್ರಕೃತಿಯ ವಿನೂತನವಾದ ಸೃಷ್ಟಿ ಶಕ್ತಿಗೆ ಮಿತಿಯೇ ಇಲ್ಲ ಎನ್ನಿಸುತ್ತದೆ. ಪ್ರಕೃತಿ ನಮಗೆ ಪ್ರತಿದಿನ, ಪ್ರತಿಕ್ಷಣ ಹೊಸ ಹೊಸದಾದ ಊಟಗಳನ್ನು, ಆಟಗಳನ್ನು ತೋರಿಸಿ ಮೈಮರೆಸುತ್ತದೆ. ದುರ್ದೈವವೆಂದರೆ ಮನುಷ್ಯನ ಹಸಿವೂ ದಿನದಿನಕ್ಕೆ ವೃದ್ಧಿಯಾಗುತ್ತದೆ. ಒಂದೆಡೆಗೆ ಹೊಸ ಸೃಷ್ಟಿ, ಮತ್ತೊಂದೆಡೆಗೆ ಎಂದಿಗೂ ತಣಿಯದ ಆಸೆ. ಇದರಿಂದ ಪಾರಾಗುವುದು ಹೇಗೆ? ಈ ಪರಿಸ್ಥಿತಿ ಹೇಗಿದೆಯೆಂದರೆ ಒಂದು ಪುಟ್ಟ ಮಗುವನ್ನು ಅತ್ಯಂತ ದೊಡ್ಡದಾದ ಆಟಿಕೆಯ ಸಾಮಾನುಗಳುಳ್ಳ ಅಂಗಡಿಯಲ್ಲಿ ಬಿಟ್ಟಂತಿದೆ. ಆ ಮಗುವಿಗೆ ಪ್ರತಿಯೊಂದು ಆಟಿಕೆಯೂ ಹೊಸತೇ, ಪ್ರತಿಯೊಂದು ಆಕರ್ಷಕವೇ. ಯಾವುದನ್ನು ತೆಗೆದುಕೊಳ್ಳು
ವುದು? ಓಡಿ ಹೋಗಿ ಒಂದನ್ನು ಎಳೆದುಕೊಳ್ಳುತ್ತದೆ. ಅದೊಂದು ಕ್ಷಣ ಮಾತ್ರ. ಪಕ್ಕದಲ್ಲೇ ಮತ್ತೊಂದು ಆಟಿಕೆ ಇದೆ, ಅದು ಇದಕ್ಕಿಂತ ಸುಂದರವಾದದ್ದು. ಮಗು ಮೊದಲನೆಯದ್ದನ್ನು ಬಿಟ್ಟು ಎರಡನೆಯದನ್ನು ಹಿಡಿಯುತ್ತದೆ. ಇಡೀ ದಿನ ಅಲ್ಲಿಯೇ ಇದ್ದರೂ ಅದರ ಆಕರ್ಷಣೆಯ ಹುಚ್ಚು ಕಡಿಮೆಯಾಗುವುದಿಲ್ಲ.

ಕಗ್ಗ ಕೇಳುವುದು ಈ ಮಾತನ್ನೇ. ಮಕ್ಕಳೆದುರಿಗೆ ಅವರಿಗಿಷ್ಟವಾದ ಸಿಹಿತಿಂಡಿಗಳನ್ನು ಮಾಡಿಟ್ಟು ಅವರು ತೆಗೆದುಕೊಂಡರೆ ಗದರಿಸುವುದೇಕೆ? ಇದು ಇಟ್ಟವರ ತಪ್ಪಲ್ಲವೇ? ಅಂತೆಯೇ ವಿಧಿ ನಮಗೆ ತಕ್ಕದಲ್ಲದ ಆಕರ್ಷಣೆಗಳನ್ನು ಕಣ್ಣ ಮುಂದಿಟ್ಟು, ಅಪೇಕ್ಷೆಗಳ ನಿಶೆ ಏರಿಸಿ, ನಮ್ಮನ್ನು ಏಕೆ ಪರೀಕ್ಷಿಸುತ್ತಾನೆ? ಆಕರ್ಷಣೆಗಳನ್ನು ಹೊಂದಬಾರದೆನ್ನುವುದು ಕಗ್ಗದ ಆಶಯವಲ್ಲ. ಆಸೆ, ಆಕರ್ಷಣೆಗಳಿರಲಿ ಆದರೆ ಅವೆಲ್ಲ ಒಂದು ಮಿತಿಯಲ್ಲಿರಲಿ. ಅಂಗಡಿಗೆ ಸಾಮಾನು ತರಲು ಹೋದವನು ತನಗೆ ಬೇಕಾದ, ಬೇಕಾದಷ್ಟು ಸಾಮಾನುಗಳನ್ನು ತುಂಬಿಸಿಕೊಳ್ಳಲಿ, ಆದರೆ ತುಂಬಿಸುವಾಗ ತನ್ನ ಜೇಬಿನಲ್ಲಿಯ ಹಣದ ಬಗ್ಗೆಯೂ ಗಮನವಿರಬೇಕು, ಮನೆಯ ಅವಶ್ಯಕತೆಯ ತಿಳಿವಿರಬೇಕು. ಅಂತೆಯೇ ಪ್ರಪಂಚದ ಆಕರ್ಷಣೆಗಳನ್ನು ವಿಧಿ ತುಂಬಿಟ್ಟದ್ದು ನಮ್ಮ ವಿವೇಕವನ್ನು, ಸುಖಾನ್ವೇಷಣೆಯ ಮಿತಿಯನ್ನು ಪರೀಕ್ಷಿಸಲು. ಮಿತಿಗಳ ಅರಿವಿದ್ದವನು ಹಿತವಾಗಿ ಬದುಕುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT