ಶುಕ್ರವಾರ, ಜೂನ್ 5, 2020
27 °C

ಬೆರಗಿನ ಬೆಳಕು| ಮರುಕಳಿಸಿದ ಕಥೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಒಂದು ಅತ್ಯಂತ ಪ್ರಭಾವಶಾಲಿಯಾದ ಕಥೆ ಹೇಗೆ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಶತಮಾನಗಳಾಚೆಯೂ ಪ್ರಕಟವಾಗುತ್ತದೆ ಎನ್ನುವುದಕ್ಕೆ ಈ ಜಾತಕ ಕಥೆಯೇ ಸಾಕ್ಷಿ.

ಉತ್ತರಾಪಥದ ಕಂಸಭೋಗದಲ್ಲಿ ಅಸಿತಂಜನ ಎಂಬ ನಗರವನ್ನು ಮಕಾಕಂಸ ಎಂಬ ರಾಜ ಆಳುತ್ತಿದ್ದ. ಅವನಿಗೆ ಇಬ್ಬರು ಗಂಡುಮಕ್ಕಳು–ಕಂಸ ಮತ್ತು ಉಪಕಂಸ, ಮತ್ತೊಬ್ಬ ಮಗಳು ದೇವಗರ್ಭ. ಮಗಳು ಹುಟ್ಟಿದ ದಿನವೇ ಜ್ಯೋತಿಷಿಗಳು, ಈಕೆಯ ಗರ್ಭದಿಂದ ಹುಟ್ಟುವ ಮಗ ಇಡೀ ಕಂಸ ಪರಿವಾರವನ್ನು ನಾಶ ಮಾಡಿಬಿಡುತ್ತಾನೆ ಎಂದು ಹೇಳಿದರು. ಆದರೆ ರಾಜ ಮಗಳನ್ನು ಕೊಲ್ಲಿಸಲಿಲ್ಲ. ತಂದೆಯ ಮರಣದ ನಂತರ ಕಂಸ ರಾಜನಾದ, ಉಪಕಂಸ ಯುವರಾಜನಾದ. ಅವರೊಂದು ಯೋಜನೆ ಮಾಡಿದರು. ತಂಗಿಯನ್ನು ಕೊಲ್ಲಿಸುವುದರ ಬದಲು ಆಕೆಯನ್ನು ಮದುವೆಯಾಗದಂತೆ ಮಾಡಿದರೆ ಸಾಕು. ಅವರು ಒಂದು ಏಕಸ್ಥಂಭದ ಕಟ್ಟಡ ಕಟ್ಟಿಸಿ ಅಲ್ಲಿ ತಂಗಿಯನ್ನಿಟ್ಟರು. ಯಾರೂ ಅದನ್ನು ಹತ್ತಿ ಮೇಲೆ ಹೋಗುವಂತಿಲ್ಲ. ತಂಗಿಗೆ ಸಹಾಯಕವಾಗಿ ನಂದಗೋಪಿ ಎಂಬ ಸೇವಕಿಯನ್ನಿಟ್ಟರು. ಆಕೆಯ ಗಂಡ ಅಂಧಕವೇಣು ಕಾವಲು ಕಾಯುತ್ತಿದ್ದ.

ಆಗ ಮಥುರಾ ನಗರವನ್ನು ಮಹಾಸಾಗರ ಎಂಬ ರಾಜ ಆಳುತ್ತಿದ್ದ. ಅವನಿಗೆ ಇಬ್ಬರು ಮಕ್ಕಳು ಸಾಗರ ಮತ್ತು ಉಪಸಾಗರ. ತಂದೆಯ ಕಾಲಾನಂತರ ಸಾಗರ ರಾಜನಾದ, ಉಪಸಾಗರ ಯುವರಾಜನಾದ. ಈ ಉಪಸಾಗರ ಉಪಕಂಸನ ಪರಮ ಸ್ನೇಹಿತ. ಇಬ್ಬರೂ ಒಂದೇ ಕಡೆಗೆ ಶಿಕ್ಷಣ ಪಡೆದಿದ್ದರು. ಆತ ಒಂದು ಬಾರಿ ಉಪಕಂಸನ ಕಡೆಗೆ ಬಂದ. ಹೊರಗೆ ತಿರುಗಾಡುವಾಗ ಒಂಟಿಕಂಭದ ಮೇಲೆ ಕಟ್ಟಿದ ಕಟ್ಟಡವನ್ನು ಕಂಡು ಅದರ ಬಗ್ಗೆ ವಿಚಾರಿಸಿದ. ಉಪಕಂಸ ಅಲ್ಲಿ ತನ್ನ ತಂಗಿ ಇರುವುದನ್ನು ಹೇಳಿದ. ಆಗ ಕಿಟಕಿಯಲ್ಲಿ ನಿಂತಿದ್ದ ದೇವಗರ್ಭಳನ್ನು ನೋಡಿ ಉಪಸಾಗರ ಅವಳಲ್ಲಿ ಆಸಕ್ತನಾದ. ಆಕೆಯೂ ಅವನಲ್ಲಿ ಅನುರಕ್ತಳಾದಳು. ಉಪಸಾಗರ ನಿಧಾನವಾಗಿ ಸೇವಕಿ ನಂದಗೋಪಿಯನ್ನು ಪರಿಚಯ ಮಾಡಿಕೊಂಡ. ಆಕೆಗೆ ಹಣದ ಆಸೆ ತೋರಿಸಿ ಆಕೆಯ ಸಹಾಯದಿಂದ ದೇವಗರ್ಭಳ ಮಹಡಿಯ ಮನೆಯನ್ನು ಸೇರಿದ. ಹೀಗೆ ಮೇಲಿಂದ ಮೇಲೆ ಹೋಗುತ್ತ ಅವಳ ಸಂಗ ಮಾಡಿದ. ಆ ವಿಷಯ ತಿಳಿದು ಆಕೆಯ ಸಹೋದರರು ಕೋಪಗೊಂಡರು, ಆದರೆ ಆಕೆಯ ಹೆರಿಗೆಯಾಗಲಿ, ಗಂಡು ಹುಟ್ಟಿದರೆ ಅದನ್ನು ಕೊಂದುಬಿಡೋಣ, ಹೆಣ್ಣು ಹುಟ್ಟಿದರೆ ಬಿಡೋಣ ಎಂದು ತೀರ್ಮಾನಿಸಿ ತಂಗಿಯನ್ನು ಉಪಸಾಗರನಿಗೆ ಕೊಟ್ಟು ಮದುವೆ ಮಾಡಿದರು. ದೇವಗರ್ಭಳಿಗೆ ಮಗ ಹುಟ್ಟಿದ ದಿನವೇ ನಂದಗೋಪಿಗೆ ಹೆಣ್ಣು ಹುಟ್ಟಿತು. ಇಬ್ಬರೂ ಮಾತನಾಡಿಕೊಂಡು ಮಕ್ಕಳನ್ನು ಬದಲಾಯಿಸಿಕೊಂಡರು. ಕಂಸ ಮತ್ತು ಉಪಕಂಸರಿಗೆ, ತಂಗಿ ಹೆಣ್ಣು ಹೆತ್ತಿದ್ದು ನಿರಾಂತಕವಾಯಿತು. ಮುಂದೆ ದೇವಗರ್ಭ ತನ್ನ ಗಂಡ ಹಾಗೂ ದಾಸಿ ನಂದಗೋಪಿಯ ಜೊತೆಗೆ ತನ್ನ ನಗರದಲ್ಲಿಯೇ ವಾಸಿಸಿದಳು.

ಮರುವರ್ಷ ದೇವಗರ್ಭ ಮತ್ತೆ ಗರ್ಭದರಿಸಿದಳು. ಮತ್ತೆ ಒಂದೇ ದಿನ ಆಕೆ ಮತ್ತು ನಂದಗೋಪಿ ಮಕ್ಕಳನ್ನು ಹಡೆದರು. ದೇವಗರ್ಭ ತನಗೆ ಹುಟ್ಟಿದ ಗಂಡುಮಗುವನ್ನು ನಂದಗೋಪಿಗೆ ಕೊಟ್ಟು ಅವಳ ಮಗಳನ್ನು ತಾನು ಪಡೆದಳು. ಇದೇ ರೀತಿ ದೇವಗರ್ಭಳ ಹತ್ತು ಜನ ಗಂಡುಮಕ್ಕಳು ನಂದಗೋಪಿಯ ಕಡೆಗೆ ಬೆಳೆದರು. ಜೇಷ್ಠ ಪುತ್ರನ ಹೆಸರು ವಾಸುದೇವ, ಎರಡನೆಯವನು ಬಲದೇವ. ಈ ಪುತ್ರರು ಬಲಿಷ್ಠರಾದರು. ಒಂದು ಬಾರಿ ಅವರನ್ನು ಹೊಡೆದು ಹಾಕಲು ಕಂಸ ಮಲ್ಲಯುದ್ಧವನ್ನು ಏರ್ಪಡಿಸಿದ. ಅಲ್ಲಿಗೆ ಬಂದ ವಸುದೇವ, ಬಲದೇವರು ನಗರದಲ್ಲಿ ಸುತ್ತಾಡಿ ಎದುರಿಗೆ ಬಂದ ಆನೆಯನ್ನು ಕೊಂದು, ಪ್ರಸಿದ್ಧ ಮಲ್ಲರಾದ ಚಾಣೂರ, ಮುಷ್ಠಿಕರನ್ನು ಕೊಂದು, ಸಿಂಹಾಸನದ ಮೇಲೆ ಹಾರಿ ಕಂಸನನ್ನು ಹೊಡೆದರು. ವಸುದೇವನ ಚಕ್ರ ಕಂಸ-ಉಪಕಂಸರನ್ನು ಕತ್ತರಿಸಿ ಹಾಕಿತು. ನಂತರ ತಮ್ಮ ತಂದೆಯನ್ನು ವಸುದೇವ, ಬಲದೇವರು ರಾಜನನ್ನಾಗಿ ಮಾಡಿದರು. ಇದು ನಮ್ಮ ಕೃಷ್ಣನ ಕಥೆಯೇ ಎನ್ನಿಸುವುದಿಲ್ಲವೇ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.