ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಧೀಶನ ಲಾಭ

Last Updated 20 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಹಿಂದೊಮ್ಮೆ ಬೋಧಿಸತ್ವ ನದೀತೀರದಲ್ಲಿ ವೃಕ್ಷದೇವತೆಯಾಗಿದ್ದ. ಆ ಮರದ ಕೆಳಗೆ ಒಂದು ನರಿ ತನ್ನ ಹೆಂಡತಿಯೊಂದಿಗೆ ವಾಸವಾಗಿತ್ತು. ಒಂದು ದಿನ ಹೆಂಡತಿ ನರಿ ತನ್ನ ಬಯಕೆಯನ್ನು ಗಂಡನೊಂದಿಗೆ ಹಂಚಿಕೊಂಡಿತು. “ಪ್ರಿಯಾ, ನನಗೆ ಒಂದು ತಾಜಾ ಕೆಂಪು ಮೀನನ್ನು ತಿನ್ನುವ ಆಸೆಯಾಗಿದೆ, ದಯವಿಟ್ಟು ತಂದು ಕೊಡುತ್ತೀಯಾ?” ಎಂದು ಕೇಳಿತು. “ಆಯ್ತು, ನಾನು ಹೇಗಾದರೂ ಮಾಡಿ ನಿನ್ನ ಅಪೇಕ್ಷೆಯನ್ನು ಈಡೇರಿಸುತ್ತೇನೆ” ಎಂದು ಮಾತುಕೊಟ್ಟು ಹೊರಟಿತು.

ನರಿಗೆ ಮೀನು ತರುವುದು ಸುಲಭವೇ? ತಾನು ನೀರಿಗಿಳಿದಾಗ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಬಾರದೆಂದು ಬಳ್ಳಿಯೊಂದನ್ನು ತನ್ನ ಕಾಲಿಗೆ ಕಟ್ಟಿಕೊಂಡು ನದೀತೀರದಲ್ಲೇ ನಡೆಯಿತು. ಅದೇ ಸಮಯದಲ್ಲಿ ಎರಡು ನೀರು ಬೆಕ್ಕುಗಳು ಅಲ್ಲಿಗೆ ಬಂದವು. ಅವು ತುಂಬ ಚುರುಕಾದ ಪ್ರಾಣಿಗಳು, ಮೀನುಗಳನ್ನು ಹಿಡಿಯುವುದರಲ್ಲಿ ಪರಿಣಿತಿ ಹೊಂದಿದವು.

ಒಂದು ಬೆಕ್ಕಿನ ಹೆಸರು ಗಂಭೀರಚಾರಿ, ಮತ್ತೊಂದು ಅನುತೀರಚಾರಿ. ಗಂಭೀರಚಾರಿ ನೀರನ್ನೇ ದಿಟ್ಟಿಸಿನೋಡುತ್ತ ಕೆಂಪು ಮೀನು ಕಂಡೊಡನೆ ಛಕ್ಕನೆ ನೀರಿಗೆ ಹಾರಿ ಅದನ್ನು ಕಚ್ಚಿ ಹಿಡಿಯಿತು. ಆದರೆ ಆ ಮೀನು ದೊಡ್ಡದಾದದ್ದು, ಬಲಶಾಲಿಯಾದದ್ದು. ಅದನ್ನು ದಂಡೆಗೆ ಎಳೆದು ತರುವುದು ಗಂಭೀರಚಾರಿಗೆ ಕಷ್ಟವೆನ್ನಿಸಿತು. ಅದು ತನ್ನ ಕಾಲಿನ ಉಗುರುಗಳಿಂದ ಮೀನನ್ನು ಬಿಗಿಯಾಗಿ ಹಿಡಿದುಕೊಂಡು ಜೋರಾಗಿ ಸ್ನೇಹಿತನನ್ನು ಕೂಗಿ ಸಹಾಯಕ್ಕೆ ಕರೆಯಿತು.

ಸ್ನೇಹಿತ ಅನುತೀರಚಾರಿ ನೀರಿಗೆ ಧುಮುಕಿ ತಾನೂ ಮೀನನ್ನು ಹಲ್ಲಿನಿಂದ ಕಚ್ಚಿತು. ಎರಡೂ ಸೇರಿ ಆ ದೊಡ್ಡ ಮೀನನ್ನು ದಂಡೆಗೆ ಎಳೆದುತಂದು ಹಾಕಿದವು. ಸ್ವಲ್ಪ ಹೊತ್ತು ಆಯಾಸವನ್ನು ಪರಿಹರಿಸಿಕೊಂಡ ನಂತರ ಮೀನನ್ನು ತಿನ್ನಲು ಹೊರಟಾಗ ಜಗಳ ಪ್ರಾರಂಭವಾಯಿತು. “ಮೀನನ್ನು ಕಂಡದ್ದೇ ನಾನು, ಮೊದಲಿಗೆ ಅದನ್ನು ಕಚ್ಚಿ ಹಿಡಿದದ್ದೇ ನಾನು. ಆದ್ದರಿಂದ ಮೀನಿನ ಬಹುಭಾಗ ತನಗೆ ದೊರಕಬೇಕು” ಎಂದ ಗಂಭೀರಚಾರಿ ವಾದ ಮಾಡಿದರೆ, “ನೀನೆಲ್ಲಿ ಅದನ್ನು ಹಿಡಿದುಕೊಂಡಿದ್ದೆ? ಮೀನಿನೊಂದಿಗೆ ನೀನೂ ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದೆ. ನಾನು ಬಂದು ಹಿಡಿದು ಎಳೆಯದಿದ್ದರೆ ನೀನು ಮತ್ತು ಈ ಮೀನು ನೀರು ಪಾಲಾಗುತ್ತಿದ್ದಿರಿ. ಆದ್ದರಿಂದ ಮೀನಿನ ಬಹುಭಾಗ ನನಗೇ ಸಲ್ಲಬೇಕು” ಎಂದು ಅನುತೀರಚಾರಿ ವಾದಕ್ಕಿಳಿಯಿತು.

ಜಗಳ ಜೋರಾಯಿತು. ಆಗ ಅಲ್ಲಿಗೆ ನರಿ ಬಂದಿತು. ಈ ಜಗಳವನ್ನು ಕಂಡು, “ಯಾಕೆ ಜಗಳವಾಡುತ್ತೀರಿ? ನಾನು ಇಬ್ಬರ ವಾದವನ್ನು ಕೇಳಿ ತೀರ್ಮಾನಕೊಡುತ್ತೇನೆ. ನಾನು ಮೊದಲು ಕಾಡಿನಲ್ಲಿ ನ್ಯಾಯಾಧೀಶನಾಗಿದ್ದವನು, ನನಗೆ ಇಂಥ ಅನೇಕ ತಕರಾರುಗಳನ್ನು ಪರಿಹರಿಸಿ ಅಭ್ಯಾಸವಿದೆ. ಇಬ್ಬರಿಗೂ ನಾನು ನ್ಯಾಯಕೊಡುತ್ತೇನೆ” ಎಂದು ಬೆಕ್ಕುಗಳನ್ನು ಒಪ್ಪಿಸಿ ಇಬ್ಬರ ವಾದಗಳನ್ನು ಕೇಳಿಸಿಕೊಂಡಿತು. ನಂತರ ಗಂಭೀರವಾಗಿ ಹೇಳಿತು, “ಗಂಭೀರಚಾರಿ ನೀನು ಕಚ್ಚಿ ಹಿಡಿದದ್ದು ಮೀನಿನ ತಲೆಯಭಾಗ. ಅದು ನಿನಗೇ ಸೇರಬೇಕು” ಹೀಗೆ ಹೇಳಿ ತಲೆಯಭಾಗವನ್ನು ಕತ್ತರಿಸಿ ಅದಕ್ಕೆ ಕೊಟ್ಟಿತು.

ಆಮೇಲೆ, “ಅನುತೀರಚಾರಿ, ನೀನು ಹಿಡಿದು ಎಳೆದದ್ದು ಬಾಲದ ಭಾಗ. ಅದು ನಿನ್ನದೇ” ಎಂದು ಬಾಲದ ಭಾಗವನ್ನು ಕತ್ತರಿಸಿ ಅದಕ್ಕೆ ಕೊಟ್ಟು ಮಧ್ಯದ ತುಂಬ ಮಾಂಸದ ತುಂಡನ್ನು ತಾನು ಕಚ್ಚಿಕೊಂಡು ಓಡಿಹೋಗಿ ಹೆಂಡತಿಗೆ ಕೊಟ್ಟಿತು. ಹೆಂಡತಿ ಕೇಳಿತು”, “ನೀನು ನೀರಿನಲ್ಲಿ ಈಜಲಾರೆ ಆದರೆ ಇಂಥ ಪುಷ್ಟವಾದ ಕೆಂಪು ಮೀನನ್ನು ಹೇಗೆ ಹಿಡಿದೆ?” ಗಂಡ ನರಿ ಹೇಳಿತು, “ಎಲ್ಲಿಯವರೆಗೆ ದಡ್ಡರು ಜಗಳಾಡುತ್ತಾರೋ ಅಲ್ಲಿಯವರೆಗೆ ನನ್ನಂತಹವರಿಗೆ ಲಾಭ. ವಿವಾದ ಮಾಡುತ್ತ ಜನ ದುರ್ಬಲರಾಗುತ್ತಾರೆ, ಧನಕ್ಷಯ, ಶ್ರಮಕ್ಷಯವಾಗುತ್ತದೆ. ಲಾಭ ವಕೀಲರಿಗೆ ಆಗುತ್ತದೆ ಮತ್ತು ಸರ್ಕಾರಕ್ಕೆ ಹಣ ವೃದ್ಧಿಯಾಗುತ್ತದೆ”

ಎರಡೂವರೆ ಸಾವಿರ ವರ್ಷಗಳ ನಂತರವೂ ಅದೇ ಪರಿಸ್ಥಿತಿ ಇದೆಯಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT