ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ದಾಸ್ಯದಿಂದ ಬಿಡುಗಡೆ

Last Updated 7 ಸೆಪ್ಟೆಂಬರ್ 2021, 21:53 IST
ಅಕ್ಷರ ಗಾತ್ರ

ಮೊಮ್ಮಕ್ಕಳ ಮಾತಿನಿಂದ ದುಃಖತಪ್ತನಾದ ರಾಜ, ‘ಮಕ್ಕಳೇ, ನೀವಿಬ್ಬರೂ ಹೀಗೆ ಮಾತನಾಡಬೇಡಿ. ನನ್ನ ಹೃದಯ ಹೊತ್ತಿಕೊಂಡು ಉರಿಯುತ್ತಿದೆ. ನಾನು ಸಿಂಹಾಸನದ ಮೇಲೆ ಕುಳಿತಿದ್ದರೂ, ಚಿತೆಯ ಮೇಲೆ ಕುಳಿತಂತೆ ಭಾಸವಾಗುತ್ತಿದೆ. ನಿಮ್ಮ ಮಾತುಗಳಿಂದ ನನ್ನ ಸಂತಾಪ ಇನ್ನೂ ಹೆಚ್ಚಾಗುತ್ತಿದೆ. ಅದೇನೇ ಆಗಲಿ, ಈ ಮುದುಕ ಬ್ರಾಹ್ಮಣನಿಂದ ನಿಮ್ಮನ್ನು ಬಿಡಿಸಿಕೊಳ್ಳುತ್ತೇನೆ. ಇನ್ನು ಮೇಲೆ ನೀವು ದಾಸರಾಗಿರುವುದಿಲ್ಲ. ಹೇಳಿ, ನಿಮ್ಮ ತಂದೆ ದಾಸತ್ವದ ಬಿಡುಗಡೆಗೆ ಅದೆಷ್ಟು ಬೆಲೆ ನಿಗದಿ ಮಾಡಿದ್ದ? ನೀವು ಅದನ್ನು ಹೇಳಿದ ತಕ್ಷಣ ಅದನ್ನು ಬ್ರಾಹ್ಮಣನಿಗೆ ಕೊಟ್ಟು ನಿಮ್ಮನ್ನು ದಾಸ್ಯದಿಂದ ಬಿಡುಗಡೆ ಮಾಡುತ್ತೇನೆ’ ಎಂದ. ಮಗು ಜಾಲಿಕುಮಾರ ಹೇಳಿದ, ‘ಮಹಾರಾಜಾ, ನನ್ನ ಬಿಡುಗಡೆಗೆ ಸಾವಿರ ನಿಕಷಗಳನ್ನು ಕೊಡಬೇಕು’. ತಕ್ಷಣವೇ ರಾಜ ಬ್ರಾಹ್ಮಣನಿಗೆ ಸಾವಿರ ನಿಕಷಗಳನ್ನು ಕೊಡಿಸಿಬಿಟ್ಟು, ಮೊಮ್ಮಗನನ್ನು ತನ್ನ ಕಡೆಗೆ ಕರೆದುಕೊಂಡ. ನಂತರ ಮಗು ಕೃಷ್ಣಾಜಿನಳು, ‘ತಾತಾ, ನನ್ನ ಬಿಡುಗಡೆಗೆ ತಂದೆ ಮಾಡಿದ ಬೆಲೆ ತುಂಬ ದೊಡ್ಡದು. ಈ ಬ್ರಾಹ್ಮಣನಿಗೆ ನೂರು ದಾಸರು, ನೂರು ದಾಸಿಯರು, ನೂರು ಆನೆಗಳು, ನೂರು ಕುದುರೆಗಳು ಹಾಗೂ ನೂರು ನಿಕಷಗಳನ್ನು ಕೊಡಬೇಕಾಗುತ್ತದೆ’ ಎಂದಳು. ತಕ್ಷಣ ರಾಜ ತನ್ನ ಕೋಶಾಧಿಕಾರಿಗೆ ಮತ್ತು ಕರ್ಮಚಾರಿಗೆ ಆಜ್ಞೆ ಮಾಡಿದ, ‘ನೀವು ಈಗಿಂದಲೇ ಈ ಬ್ರಾಹ್ಮಣನಿಗೆ ನೂರು ದಾಸ, ದಾಸಿಯರು, ನೂರು ಆನೆಗಳು, ನೂರು ಕುದುರೆಗಳು ಹಾಗೂ ನೂರು ನಿಕಷಗಳನ್ನು ಒಪ್ಪಿಸಿಬಿಡಿ’. ಅವರು ಅರ್ಧಗಂಟೆಯಲ್ಲಿ ಅವೆಲ್ಲವನ್ನು ತಂದು ಬ್ರಾಹ್ಮಣನಿಗೆ ಕೊಟ್ಟು ಅವನನ್ನು ಕಳುಹಿಸಿಬಿಟ್ಟರು.

ನಂತರ ಮಕ್ಕಳನ್ನು ಅರಮನೆಗೆ ಕರೆತಂದು ಅವರಿಗೆ ಸುವಾಸಿತವಾದ ಎಣ್ಣೆಯಿಂದ ಮೈ ತಿಕ್ಕಿಸಿ, ತಲೆಗೆ ಸ್ನಾನ ಮಾಡಿಸಿ, ಹೊಸ ಬಟ್ಟೆಗಳನ್ನು ಉಡಿಸಿ, ಸಮಸ್ತ ಅಲಂಕಾರಗಳನ್ನು ತೊಡಿಸಿ, ಅವರಿಬ್ಬರನ್ನೂ ತನ್ನ ತೊಡೆಯ ಮೇಲೆ ಕೂಡಿಸಿಕೊಂಡು ಸಿಂಹಾಸನದ ಮೇಲೆ ರಾಜ ವಿರಾಜಮಾನನಾದ. ಆಗ ಮಕ್ಕಳಿಗೆ ವೃದ್ಧರಾಜ ಕೇಳಿದ, ‘ಮಕ್ಕಳೇ ಆ ದಟ್ಟವಾದ ಕಾಡಿನಲ್ಲಿ ನಿಮ್ಮ ತಂದೆ-ತಾಯಿಯರು ಹೇಗಿದ್ದಾರೆ? ಅವರು ನಿರೋಗಿಗಳಾಗಿದ್ದಾರೆಯೇ? ಅಲ್ಲಿ ಫಲಮೂಲಗಳು ಸಾಕಷ್ಟು ದೊರಕುತ್ತವೆಯೇ? ಸೊಳ್ಳೆ ಮತ್ತು ರಕ್ತಹೀರುವ ಹುಳಗಳು ಹೆಚ್ಚಿವೆಯೇ? ಕಾಡುಪ್ರಾಣಿಗಳಿಂದ ತುಂಬ ಹಿಂಸೆಯಾಗುತ್ತದೆಯೇ?’ ಜಾಲಿಕುಮಾರ ಹೇಳಿದ, ‘ಹೇ ತಾತಾ, ನನ್ನ ತಂದೆ-ತಾಯಿಗಳಿಬ್ಬರೂ ನಿರೋಗಿಗಳಾಗಿದ್ದಾರೆ. ಅವರು ಕೇವಲ ಫಲಮೂಲಗಳನ್ನು ತಿಂದು ಬದುಕುತ್ತಿದ್ದಾರೆ. ಆಶ್ರಮದ ಸುತ್ತಮುತ್ತ ಫಲಮೂಲಗಳು ಹೇರಳವಾಗಿವೆ. ರಕ್ತಹೀರುವ ಹುಳುಗಳು ಹೆಚ್ಚಾಗಿಲ್ಲ. ಕಾಡುಪ್ರಾಣಿಗಳು ಆಶ್ರಮದ ಒಳಗೆ ಬರುವುದಿಲ್ಲ. ಅವುಗಳಿಂದ ಯಾವ ತೊಂದರೆಯೂ ಆಗಿಲ್ಲ. ನನ್ನ ಅಮ್ಮ ಬೆಳಗಿನಿಂದ ಸಾಯಂಕಾಲದ ವರೆಗೆ ಕಾಡು ಮೇಡುಗಳನ್ನು ಸುತ್ತಿ ಹಣ್ಣು ಹಂಪಲಗಳನ್ನು, ಗೆಡ್ಡೆ-ಗೆಣಸುಗಳನ್ನು ಆರಿಸಿಕೊಂಡು ತರುತ್ತಾಳೆ. ಬಿಸಿಲಿನಲ್ಲಿ ತಿರುಗಾಡಿ ಅಮ್ಮ ಕಪ್ಪಾಗಿ ಬಿಟ್ಟಿದ್ದಾಳೆ. ಅವಳು ಬಿಸಿಲಿಗೆ ಮುರುಟಿಹೋದ ಕಮಲದಂತೆ ಕಾಣುತ್ತಾಳೆ. ಆಕೆ ಏನನ್ನೇ ತಂದರೂ ನಾವೆಲ್ಲ ರಾತ್ರಿ ಒಟ್ಟಿಗೆ ಕುಳಿತು ತಿನ್ನುತ್ತೇವೆ. ಆದ್ದರಿಂದ ಒಟ್ಟಿನಲ್ಲಿ ಅವರು ಸಂತೋಷವಾಗಿದ್ದಾರೆಂದೇ ಹೇಳಬೇಕು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT