ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಸಮಾಜ ಧರ್ಮ

Last Updated 4 ಮೇ 2022, 19:30 IST
ಅಕ್ಷರ ಗಾತ್ರ

ಧರಿಸಿರ್ಪುದಲ ಧರ್ಮ? ಧರಿಸು ಜೀವನಧುರವ|

ಚರಿಸು ಲೋಕದ ಮಾರ್ಗಗಳಲಿ ಹಿತವರಿತು ||
ಸರಿಪಡಿಸಿ ದಾರಿಗಳ ಕೆರೆ ತೋಪು ಸತ್ರಗಳ |
ನೆರವಾಗು ಪಯಣಕ್ಕೆ – ಮಂಕುತಿಮ್ಮ || 621 ||

ಪದ-ಅರ್ಥ: ಧರಿಸಿರ್ಪುದಲ=ಧರಿಸಿರುವುದಲ್ಲ, ಜೀವನಧುರವ=ಜೀವನ+ಧುರವ(ನೊಗ), ಚರಿಸು=ನಡೆ, ಹಿತವರಿತು=ಹಿತವ+ಅರಿತು, ಸತ್ರ=ಛತ್ರ.
ವಾಚ್ಯಾರ್ಥ: ಧರ್ಮವೇ ಎಲ್ಲವನ್ನೂ ಧರಿಸಿರುವುದಲ್ಲವೆ? ಜೀವನದ ನೊಗವನ್ನು ಹೊರು, ಲೋಕದ ದಾರಿಗಳಲ್ಲಿ, ಹಿತವನ್ನು ಅರಿತು ನಡೆ, ಪಯಣಕ್ಕೆ ನೆರವಾಗುವುದಕ್ಕೆ ದಾರಿಗಳ, ಕೆರೆ, ತೋಪು, ಛತ್ರಗಳನ್ನು ಸರಿಪಡಿಸು.

ವಿವರಣೆ: ಧರ್ಮ ಪದದ ಧಾತು ಧೃ. ಹಾಗೆಂದರೆ ಧರಿಸುವುದು, ಆಧಾರ ನೀಡುವುದು. ಮಹಾಭಾರತದ ಕರ್ಣಪರ್ವದಲ್ಲಿ ಬರುವ ಮಾತು ಇನ್ನೂ ಸ್ಪಷ್ಟವಾಗಿ ಹೇಳುತ್ತದೆ.
ಧಾರಣಧರ್ಮ ಮಿತ್ಯಾ: ಧರ್ಮೋ ಧಾರಯತೀ ಪ್ರಜಾ: ||

“ಯಾವುದು ಪ್ರಜೆಗಳನ್ನು ಮತ್ತು ಆ ಮೂಲಕವಾಗಿ ಸಮಾಜವನ್ನು ಧರಿಸುತ್ತದೆಯೋ, ಅದೇ ಧರ್ಮ”
ಆದಿ ಶಂಕರಾಚಾರ್ಯರು, ಶ್ರೀಮದ್ ಭಗವದ್ಗೀತಾ ಭಾಷ್ಯದ ಉಪೋದ್ಛಾತದಲ್ಲಿ ಹೇಳಿದ ಮಾತು ಮನನೀಯವಾದದ್ದು.
ಜಗತ: ಸ್ಥಿತಿ ಕಾರಣಂ ಪ್ರಾಣಿನಾಂ ಸಾಕ್ಷಾತ್
ಅಭ್ಯುದಯನಿ:ಶ್ರೇಯಸಹೇತುಯ: ಸ ಧರ್ಮ: ||

“ಯಾವುದು ಜಗತ್ತಿನ ಸ್ಥಿತಿ, ವ್ಯವಸ್ಥೆ, ಸಕಲ ಪ್ರಾಣಿಗಳ ಅಭ್ಯುದಯ ಮತ್ತು ಅಧ್ಯಾತ್ಮಿಕ ಉನ್ನತಿ ಎನ್ನುವ ಮೂರು ಧ್ಯೇಯಗಳನ್ನು ಸಾಧಿಸುತ್ತದೆಯೋ, ಅದೇ ಧರ್ಮ”.

ಹಾಗಾದರೆ ಧರ್ಮ ಇರುವುದು ವ್ಯಕ್ತಿ, ಸಮಾಜ ಮತ್ತು ಬದುಕಿನ ಉದ್ದೇಶ ಈ ಮೂರು ವಿಷಯಗಳಿಗೆ ಸಂಬಂಧಪಟ್ಟದ್ದು ಮತ್ತು
ಮೂರನ್ನು ರಕ್ಷಿಸುವುದು. ಧರ್ಮ ಎನ್ನುವುದು ಮುಖ್ಯವಾಗಿ ಸಾಮಾಜಿಕ ಬದುಕಿಗೆ ಸಂಬಂಧಿಸಿದ್ದು ಎಂದಾಯಿತು. ವ್ಯಕ್ತಿ ತನ್ನ ಸುತ್ತಮುತ್ತಲಿನ ಜನರೊಡನೆ, ಪರಿಸರದೊಡನೆ ಹೇಗೆ
ಸಮರಸವಾಗಿ ಬದುಕುತ್ತಾನೆ ಎನ್ನುವುದು ಅವನ ಧರ್ಮದ ಪರಿಧಿಯಲ್ಲಿ ಬರುತ್ತದೆ. ಅದನ್ನು ಬಸವಣ್ಣನವರು ಅತ್ಯಂತ ಸರಳವಾಗಿ
“ದಯೆಯಿಲ್ಲದ ಧರ್ಮ ಯಾವುದಯ್ಯ? ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ” ಎಂದು ತಿಳಿಸುತ್ತಾರೆ. ಮತ್ತೆ, “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯಪಡಬೇಡ, ಮುನಿಯಬೇಡ, ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ” ಎಂದು ಧರ್ಮದ ಸಪ್ತಸೂತ್ರಗಳನ್ನು ನೀಡುತ್ತಾರೆ.

ಈ ಎಲ್ಲ ಹಿನ್ನಲೆಯಲ್ಲಿ ಕಗ್ಗ ಧರ್ಮಕ್ಕೆ ಮತ್ತೊಂದು ಅತ್ಯಂತ ಸುಲಭವಾದ, ಪ್ರಾಯೋಗಿಕವಾದ ವ್ಯಾಖ್ಯೆಯನ್ನು ನೀಡುತ್ತದೆ. ಧರ್ಮ ನಿನ್ನನ್ನು ರಕ್ಷಿಸಬೇಕಾದರೆ, ಜೀವನದ ಗಾಡಿಯ ನೊಗಕ್ಕೆ ಹೆಗಲುಕೊಡು, ಬದುಕಿನ ಮಾರ್ಗಗಳಲ್ಲಿ ಯಾವುದು ನಿನಗೆ ಹಿತವೋ, ಮತ್ತಾರಿಗೂ ಅದರಿಂದ ತೊಂದರೆ ಇಲ್ಲವೋ ಎಂಬುದನ್ನು ಗಮನಿಸಿ ನಡೆ. ನಿನ್ನ ಕೈಲಾದ
ಚಿಕ್ಕಪುಟ್ಟ ಅಥವಾ ದೊಡ್ಡದಾದ ಕೆಲಸಗಳನ್ನು ಮಾಡು. ರಸ್ತೆಗಳನ್ನು ಸರಿ ಮಾಡು, ಕೆರೆ, ತೋಪುಗಳನ್ನು ಕಟ್ಟಿಸು, ಛತ್ರಗಳನ್ನು ಸರಿಮಾಡು. ಏನಾದರೂ ಮಾಡು, ಲೋಕಕ್ಕೆ ಪ್ರಯೋಜನ
ಕಾರಿಯಾದದ್ದನ್ನು ಮಾಡು. ಅದು ಜನರ
ಪಯಣಕ್ಕೆ ನೆರವಾಗುವುದರೊಂದಿಗೆ, ನಿನ್ನ ಅಧ್ಯಾತ್ಮಿಕ ಪ್ರಯಾಣಕ್ಕೂ ನೆಲೆಯಾಗುತ್ತದೆ. ಅದೇ ಧರ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT