ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಸಮಯ ಕಳೆಯುವ ಬಗೆ

Last Updated 14 ಜನವರಿ 2021, 19:30 IST
ಅಕ್ಷರ ಗಾತ್ರ

ಹಿಂದೆ ವಿದೇಹ ರಾಷ್ಟ್ರದ ಮಿಥಿಲೆಯಲ್ಲಿ ಅಂಗನೆಂಬ ರಾಜನಿದ್ದ. ಆತ ಧರ್ಮಾನುಸಾರ ರಾಜ್ಯಭಾರ ಮಾಡುತ್ತಿದ್ದ. ಅವನಿಗೆ ಒಬ್ಬಳು ಪಟ್ಟಮಹಿಷಿ. ಆಕೆ ಅತ್ಯಂತ ರೂಪವತಿ, ಮಹಾಪುಣ್ಯವತಿ, ಸಹಸ್ರಕಲ್ಪಗಳಿಂದ ಭಗವಂತನ ಧ್ಯಾನ ಮಾಡುತ್ತ ಬಂದ ಧನ್ಯಸ್ತ್ರೀ ಆಕೆಯ ಗರ್ಭದಿಂದ ರುಜಾ ಎಂಬ ಮಗಳು ಹುಟ್ಟಿದ್ದಳು. ರಾಜನಿಗೆ ಇನ್ನೂ ಹದಿನಾರು ಸಾವಿರ ಹೆಂಡತಿಯರಿದ್ದರೂ ಒಬ್ಬರಿಗೂ ಮಕ್ಕಳಾಗಿರಲಿಲ್ಲ. ರಾಜನಿಗೆ ತನ್ನ ಮಗಳ ಮೇಲೆ ಅತಿಯಾದ ಪ್ರೀತಿ. ಆಕೆಗೆ ಯಾವುದೂ ಕಡಿಮೆಯಾಗದಂತೆ ನೋಡಿಕೊಳ್ಳುತ್ತಿದ್ದ. ಆಕೆಗಾಗಿ ಒಂದು ವಿಶೇಷವಾದ ವನವನ್ನು ನಿರ್ಮಿಸಿ ನಿತ್ಯವೂ ಅಲ್ಲಿಂದ ಇಪ್ಪತ್ತೈದು ಬುಟ್ಟಿಗಳಷ್ಟು ಅತ್ಯಂತ ಸುವಾಸಿತವಾದ, ಸುಂದರವಾದ ಹೂವುಗಳನ್ನು ಮತ್ತು ಬಹು ಸೂಕ್ಷ್ಮವಾದ, ಮೆದುವಾದ ಬಟ್ಟೆಗಳನ್ನು ಕಳುಹಿಸುವ ವ್ಯವಸ್ಥೆ ಮಾಡಿದ್ದ.

ಒಂದು ದಿನ ರಾಜ ಕೌಮುದೀ ಉತ್ಸವ ಮುಗಿದ ಮೇಲೆ ಎತ್ತರದ ಮಹಡಿಯ ಮೇಲೆ ಕುಳಿತುಕೊಂಡು ಅಲಂಕೃತವಾದ ನಗರವನ್ನು ನೋಡುತ್ತ ಕುಳಿತಿದ್ದ. ಅವನೊಂದಿಗೆ ಅವನ ಮೂರು ಜನ ಅಮಾತ್ಯರೂ ಕುಳಿತಿದ್ದರು. ಅವರು ವಿಜಯ, ಸುನಾಮ ಮತ್ತು ಅಲಾತರೆಂಬ ಮೂವರೂ ಹಿರಿಯರು. ನಿಧಾನಕ್ಕೆ ಕತ್ತಲೆಯಾಗುತ್ತಿತ್ತು. ಚಂದ್ರ ಆಕಾಶದಲ್ಲಿ ತೇಲಿಬಂದ. ಈ ಸುಂದರ ವಾತಾವರಣವನ್ನು ಕಂಡು ಅಮಾತ್ಯರನ್ನು ರಾಜ ಕೇಳಿದ, “ಇಂದಿನ ದಿನ ತುಂಬ ಸುಂದರವಾಗಿದೆ. ಇಂದು ಯಾರ ಸಂಗ ಮಾಡಲಿ?”. ಅಲಾತ ಹೇಳಿದ, “ಪ್ರಭೂ, ಇಂದು ಇಡೀ ಸೇನೆ ಸಂತುಷ್ಟವಾಗಿದೆ. ತಮ್ಮ ಬಲ ಅನಂತವಾಗಿದೆ. ಆದ್ದರಿಂದ ಇಂದೇ ತೀರ್ಮಾನ ಮಾಡಿ ನಮ್ಮ ವೈರಿಗಳ ವಿರುದ್ಧ ಮಹಾಯುದ್ಧವನ್ನು ಘೋಷಿಸಬಹುದು”.

ಅಮಾತ್ಯ ಸುನಾಮ ಹೇಳಿದ, “ಮಹಾರಾಜಾ, ಈಗ ನಿನ್ನ ವೈರಿಗಳೆಲ್ಲ ಶಾಂತರಾಗಿದ್ದಾರೆ, ಶಕ್ತಿಹೀನರಾಗಿದ್ದಾರೆ. ಇಂದು ಉತ್ಸವದ ದಿನ. ಈ ದಿನ ಯುದ್ಧದ ಬಗ್ಗೆ ಮಾತನಾಡುವುದು ಸರಿಯಲ್ಲ. ಇಂದು ತಾವು ಸಂತೋಷದಿಂದ ಅನ್ನಪಾನಾದಿಗಳನ್ನು ಮಾಡಿ, ನೃತ್ಯ-ಗೀತಗಳಲ್ಲಿ ಆನಂದಿಸುವುದು ಸರಿ ಎಂಬುದು ನನ್ನ ಸಲಹೆ”.

ಅಮಾತ್ಯ ವಿಜಯ ಹೇಳಿದ, “ಮಹಾರಾಜಾ, ತಮ್ಮ ಬಳಿ ಕಾಮ-ಭೋಗಗಳ ಸಾಮಗ್ರಿ ಎಂದಿನಿಂದಲೂ ಇದ್ದೇ ಇದೆ. ಅದು ತಮಗೆ ದುರ್ಲಭವಲ್ಲ. ಅವು ತಮ್ಮ ಕಾಲಡಿಯಲ್ಲೇ ಇವೆ. ಇಂದು ತಾವು ತುಂಬ ಸಂತೋಷದಲ್ಲಿದ್ದೀರಿ. ನನ್ನ ಅಭಿಪ್ರಾಯದಂತೆ, ಅರ್ಥ, ಧರ್ಮಗಳನ್ನು ಬಲ್ಲ, ನಮ್ಮ ಎಲ್ಲ ಸಂದೇಹಗಳನ್ನು, ಧರ್ಮಸೂಕ್ಷ್ಮಗಳನ್ನು ಪರಿಹರಿಸಬಲ್ಲ, ಬಹುಶ್ರುತರಾದ ಶ್ರಮಣರನ್ನು ಭೆಟ್ಟಿಯಾಗಿ ಸಮಯ ಕಳೆಯುವುದು ಒಳ್ಳೆಯದು. ಅದರಿಂದ ಮುಂದಿನ ಬದುಕು ಹೆಚ್ಚು ಸಮೃದ್ಧವಾದೀತು. ಭೋಗಗಳಿಂದ ಆಯಸ್ಸು ಬೇಗ ಕರಗುತ್ತದೆ. ಯುದ್ಧದಿಂದ ಅದು ಕೊನೆಯಾಗಿಯೇ ಬಿಡುತ್ತದೆ. ಆದರೆ ಧರ್ಮದಿಂದ ಅದು ವೃದ್ಧಿಯಾಗುತ್ತದೆ”.

ಆ ಸಮಯಕ್ಕೆ ಮಹಾರಾಜನ ಪುತ್ರಿ ರುಜಾ ಅಲಂಕಾರಮಾಡಿಕೊಂಡು ತಾಯಿಯೊಂದಿಗೆ ಅಲ್ಲಿಗೆ ಬಂದಳು. ಆಕೆ ತಾನು ಬರುವಾಗ ಬೋಧಿಸತ್ವನನ್ನು ಕರೆತಂದಿದ್ದಳು. ಬೋಧಿಸತ್ವ ರಾಜನಿಗೆ ಹೇಳಿದ, “ರಾಜಾ, ಅತಿಭಾರವುಳ್ಳ ವ್ಯಾಪಾರಿಗಳ ನೌಕೆ ಸಮುದ್ರದಲ್ಲಿ ಮುಳುಗಿ ಹೋಗುವಂತೆ, ಮನುಷ್ಯ ಕೊಂಚ ಕೊಂಚ ಪಾಪಕರ್ಮ ಮಾಡುತ್ತಿದ್ದರೂ ಭಾರವಾಗಿ ನರಕದಲ್ಲಿ ಬೀಳುತ್ತಾನೆ. ಮನುಷ್ಯ ಎಂಥವರ ಸಂಗ ಮಾಡುತ್ತಾನೋ ತನಗೆ ಗೊತ್ತಿಲ್ಲದಂತೆ ಅವರಂತೆಯೇ ಅಗಿಬಿಡುತ್ತಾನೆ. ಆದ್ದರಿಂದ ಪಾಪಕರ್ಮಗಳ ಬಗ್ಗೆ, ದುರ್ಜನರ ಸಂಗದ ಬಗ್ಗೆ ಅತೀವ ಜಾಗ್ರತೆ ಇರಬೇಕು”. ರಾಜ ಆ ದಿನವನ್ನು ಸಾರ್ಥಕವಾಗಿ ಕಳೆದಂತೆ ತೃಪ್ತನಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT