ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಜವಾದ ಸಂಗ್ರಾಮ ವಿಜೇತ

Last Updated 9 ಅಕ್ಟೋಬರ್ 2018, 20:13 IST
ಅಕ್ಷರ ಗಾತ್ರ

ಹಿಂದೆ ವಾರಾಣಸಿಯಲ್ಲಿ ಬ್ರಹ್ಮದತ್ತ ಆಳುತ್ತಿದ್ದಾಗ ಬೋಧಿಸತ್ವ ಒಬ್ಬ ರೈತನ ಮನೆಯಲ್ಲಿ ಹುಟ್ಟಿದ. ರೈತ ತರಕಾರಿ ಬೆಳೆದು ಬದುಕು ಸಾಗಿಸುತ್ತಿದ್ದ. ಬೋಧಿಸತ್ವನೂ ಬೆಳೆದಂತೆಲ್ಲ ತಂದೆಯ ವೃತ್ತಿಯನ್ನು ಶೃದ್ಧೆಯಿಂದ ಕಲಿಯುತ್ತ ಬಂದ. ಅವನ ಕುಶಲತೆಯನ್ನು ಕಂಡು ಜನ ಅವನನ್ನು ಕುದಾಲಿ ಪಂಡಿತ ಎಂದು ಕರೆದರು. ಆದರೆ ಆತ ಕೃಷಿಯನ್ನು ಲಾಭದಾಸೆಗೆ ಮಾಡುತ್ತಿರಲಿಲ್ಲ. ಬೆಳೆದ ತರಕಾರಿಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಉಳಿದವರಂತೆ ದೊಡ್ಡ ಲಾಭಕ್ಕೆ ಮಾರದೆ ಅತ್ಯಂತ ಕಡಿಮೆ ದರದಲ್ಲಿ ಮಾರಿಬರುತ್ತಿದ್ದ. ಹೀಗಾಗಿ ಅವನು ಎಷ್ಟೇ ಬೆಳೆದರೂ ಹೆಚ್ಚು ಹಣ ಮಾಡದೆ ದರಿದ್ರನಾಗಿಯೇ ಉಳಿದಿದ್ದ. ಅವನದಾದ ಗುದ್ದಲಿಯನ್ನು ಬಿಟ್ಟರೆ ಮತ್ತೇನೂ ಅವನ ಬಳಿ ಉಳಿದಿರಲಿಲ್ಲ.

ಒಂದು ದಿನ ಆತ ಯೋಚಿಸಿದ, ‘ಈ ಕೃಷಿ ಕಾರ್ಯದಿಂದ, ಗೃಹಸ್ಥ ಜೀವನದಿಂದ ನನಗೆ ಯಾವ ಸಂತೋಷವೂ ದೊರೆಯಲಿಲ್ಲ, ಮನಸ್ಸಿನಲ್ಲಿ ಶಾಂತಿ ಇಳಿಯಲಿಲ್ಲ. ಆದ್ದರಿಂದ ಇದನ್ನೆಲ್ಲ ತ್ಯಜಿಸಿ ಪಬ್ಬಜಿತನಾಗಬೇಕು’. ಹೀಗೆ ಯೋಚಿಸಿ ತನ್ನದಾದ ಗುದ್ದಲಿಯನ್ನು ಒಂದು ಗುರುತಿದ್ದ ಸ್ಥಳದಲ್ಲಿ ನೆಲದಲ್ಲಿ ಹುಗಿದಿಟ್ಟು ಗುರುಗಳನ್ನು ಅವಲಂಬಿಸಿ ಪಬ್ಬಜಿತನಾದ. ಒಂದು ನಾಲ್ಕಾರು ದಿನ ಶಾಂತಿ ದೊರಕಿದಂತೆನಿಸಿತು. ಅವನಿಗೆ ಹಗಲು-ರಾತ್ರಿ ತನ್ನ ಗುದ್ದಲಿಯದೇ ನೆನಪು ಕಾಡತೊಡಗಿತು.

ಒಂದು ದಿನ ಅದರ ಆಕರ್ಷಣೆಯನ್ನು ತಡೆಯಲಾರದೇ ಸನ್ಯಾಸತ್ವ ತೊರೆದು ಆ ಮೊಂಡ ಗುದ್ದಲಿಯನ್ನು ತೆಗೆದುಕೊಂಡು ಮತ್ತೆ ಗೃಹಸ್ಥನಾದ. ಕೆಲದಿನಗಳ ನಂತರ ಮತ್ತೆ ಮನಸ್ಸು ಬದಲಾಯಿಸಿ ಸನ್ಯಾಸಿಯಾದ. ಇದೇ ರೀತಿ ಆರು ಬಾರಿ ಆಯಿತು. ಒಂದು ದಿನ ಅವನಿಗೆ ತನ್ನ ಬಗ್ಗೆಯೇ ಅಸಹ್ಯವಾಯಿತು. ಈ ಮೊಂಡ ಗುದ್ದಲಿಗಾಗಿ ನಾನು ಇಷ್ಟು ಸಲ ಸನ್ಯಾಸವನ್ನು ಬಿಟ್ಟು ಮರಳಿ ಬಂದೆನಲ್ಲ.

ಇದು ಅತಿಯಾದ ಲೋಭವಾಯಿತು. ಇದರಿಂದ ಹೇಗಾದರೂ ಪಾರಾಗಿ ಸನ್ಯಾಸಿಯಾಗಿಯೇ ಹೋಗಬೇಕು ಎಂದು ತೀರ್ಮಾನಿಸಿ ಗುದ್ದಲಿಯನ್ನೆತ್ತಿಕೊಂಡು ಮಹಾನದಿಯ ದಂಡೆಗೆ ಬಂದ. ಅದನ್ನು ಕೈಯಲ್ಲಿ ಹಿಡಿದುಕೊಂಡು ಗಟ್ಟಿಯಾಗಿ ಕಣ್ಣುಮುಚ್ಚಿ ಗರಗರನೇ ತಿರುಗುತ್ತ ಬೀಸಿ ನದಿಯಲ್ಲಿ ಎಸೆದುಬಿಟ್ಟ. ಅದು ಯಾವ ಜಾಗೆಯಲ್ಲಿ ಬಿತ್ತು ಎಂದು ಗೊತ್ತಾದರೆ ಮತ್ತೆ ಮೋಹ ಹುಟ್ಟೀತು ಎಂಬ ಹೆದರಿಕೆಯಿಂದ ಮಾಡಿದ ವ್ಯವಸ್ಥೆ ಅದು. ಅವನಿಗೆ ಈಗ ಅತ್ಯಂತ ನಿರಾಳವಾಗಿ ಆಕಾಶದ ಕಡೆಗೆ ಕೈ ಎತ್ತಿ, ಜೋರಾಗಿ, ‘ನಾನು ಗೆದ್ದು ಬಿಟ್ಟೆ, ನಾನು ಗೆದ್ದು ಬಿಟ್ಟೆ, ನಾನು ಗೆದ್ದು ಬಿಟ್ಟೆ’ ಎಂದು ಮೂರು ಬಾರಿ ಕೂಗು ಹಾಕಿದ.

ಅದೇ ಸಮಯದಲ್ಲಿ ವಾರಣಾಸಿಯ ರಾಜ ಬ್ರಹ್ಮದತ್ತ ಒಂದು ಯುದ್ಧವನ್ನು ಗೆದ್ದು ಸಂಭ್ರಮದಿಂದ ಮರಳುತ್ತಿದ್ದ. ಬೋಧಿಸತ್ವನ ಕೂಗು ಅವನನ್ನು ತಲುಪಿ ಆತ ಕುತೂಹಲದಿಂದ ಇವನಿದ್ದೆಡೆಗೆ ಬಂದು, ‘ನೀನು ಯಾರಪ್ಪಾ? ಯುದ್ಧವನ್ನು ಗೆದ್ದು ಬಂದವನು ನಾನು. ನಿನ್ನ ಮುಂದೆ ಒಂದು ಪಿಳ್ಳೆಯೂ ಇಲ್ಲ. ಯಾರನ್ನು ಗೆದ್ದೆ ನೀನು?’ ಎಂದು ಕೇಳಿದ ಆಗ ಬೋಧಿಸತ್ವ ಹೇಳಿದ, ‘ಮಹಾರಾಜಾ ಸಾವಿರ, ಲಕ್ಷ ಯುದ್ಧಗಳನ್ನು ಗೆದ್ದರೂ ಅದು ಗೆಲುವಲ್ಲ. ಚಿತ್ತವಿಕಾರಗಳನ್ನು ಗೆಲ್ಲುವುದು ನಿಜವಾದ ಗೆಲುವು. ನಾನು ನನ್ನನ್ನು ಅಶಕ್ತಗೊಳಿಸಿದ ಗುದ್ದಲಿಯ ಮೋಹವನ್ನು ಗೆದ್ದು ಮುಕ್ತನಾಗಿದ್ದೇನೆ’. ರಾಜನಿಗೆ ಅದು ಸರಿ ಎನ್ನಿಸಿತು.

ಬುದ್ಧ ಹೇಳಿದ, ‘ಒಬ್ಬ ಮನುಷ್ಯ ಲಕ್ಷಾಂತರ ಜನರನ್ನು ಸೇರಿಸಿಕೊಂಡು ಯುದ್ಧದಲ್ಲಿ ಸಹಸ್ರಾರು ಜನರನ್ನು ಸೋಲಿಸಿ ಗೆಲ್ಲುತ್ತಾನೆ. ಇನ್ನೊಬ್ಬ ತನ್ನನ್ನು ತಾನೇ ಗೆಲ್ಲುತ್ತಾನೆ. ತನ್ನನ್ನು ಗೆಲ್ಲುವವನೇ ಶ್ರೇಷ್ಠ ಸಂಗ್ರಾಮ ವಿಜೇತನೆನ್ನಿಸಿಕೊಳ್ಳುತ್ತಾನೆ’. ಈ ಪ್ರಯತ್ನನೇ ಬಹುದೊಡ್ಡ ಸಾಧನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT