ಸೋಮವಾರ, ಮಾರ್ಚ್ 1, 2021
19 °C

ಮುಚ್ಚಿಡಲಾಗದ ಅಪೇಕ್ಷೆಗಳು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ತೃಪ್ತಿಯರಿಯದ ವಾಂಛೆ, ಜೀರ್ಣಿಸದ ಭುಕ್ತ್ತಿವೊಲು |
ಗುಪ್ತದಲಿ ಕೊಳೆಯುತ್ತೆ ವಿಷಬೀಜವಾಗಿ ||
ಪ್ರಾಪ್ತಿಗೊಳಿಪುದು ಜೀವಕುನ್ಮಾದತಾಪಗಳ |
ಸುಪ್ತವಹುದೆಂತಿಚ್ಛೆ? – ಮಂಕುತಿಮ್ಮ || 379 ||

ಪದ-ಅರ್ಥ: ತೃಪ್ತಿಯರಿಯದ=ತೃಪ್ತಿ+ಅರಿಯದ, ವಾಂಛೆ=ಆಸೆ, ಅಪೇಕ್ಷೆ, ಭುಕ್ತಿ=ಆಹಾರ, ಜೀವಕುನ್ಮಾದತಾಪಗಳ=ಜೀವಕೆ+ಉನ್ಮಾದ+ತಾಪಗಳ, ಸುಪ್ತವಹುದೆಂತಿಚ್ಛೆ=ಸುಪ್ತವಹುದು(ಪ್ರಕಟವಾಗದೆ ಇರುವುದು)+ಎಂತು+ಇಚ್ಛೆ.

ವಾಚ್ಯಾರ್ಥ: ಇದ್ದುದರಲ್ಲಿ ತೃಪ್ತಿಯನ್ನು ಪಡೆಯದ ಆಸೆ, ಜೀರ್ಣವಾಗದ ಆಹಾರದಂತೆ ಒಳಗೇ, ನಿಧಾನವಾಗಿ ಕೊಳೆತು ವಿಷಬೀಜವಾಗುತ್ತದೆ. ಅದು ಬದುಕಿಗೆ ಉನ್ಮಾದಗಳನ್ನು, ತಾಪಗಳನ್ನು ಕೊಡುತ್ತದೆ. ಈ ಬಗೆಯ ಇಚ್ಛೆ ಪ್ರಕಟವಾಗದೆ ಉಳಿದೀತೇ?

ವಿವರಣೆ: ಆಸೆ ಇರಬೇಕು. ಆಸೆಯೇ ಇಲ್ಲದೆ ಸಾಮಾನ್ಯ ಬದುಕಿಗೆ ಗುರಿಯೇ ಇಲ್ಲ. ಆಸೆಯೇ ಇರಬಾರದೆನ್ನುವುದು ಕಷ್ಟಸಾಧ್ಯವಾದ ಚಿಂತನೆ. ಆದರೆ ಆಸೆ ನಮ್ಮ ಮಿತಿಯಲ್ಲಿ ಇರುವುದು ಕ್ಷೇಮ. ಈಜಲು ಹೋದಾಗ ರಟ್ಟೆಯ ಶಕ್ತಿಯನ್ನು ಗಮನಿಸಬೇಕು. ಶಕ್ತಿಮೀರಿ, ನಿಲುಕಲಾರದ ಗುರಿಗಳನ್ನು ಬೆಂಬತ್ತಿದಾಗ ನಿರಾಸೆ, ದು:ಖ ಆಗುವುದು ಸಹಜ. ತಮ್ಮ ಮೋಹ ಮುದ್ಗರದಲ್ಲಿ ಶ್ರೀ ಶಂಕರಾಚಾರ್ಯರು ಹೇಳಿದರು.

“ಅಂಗ ಗಲಿತಂ ಪಲಿತಂ ಮುಂಡ
ದಶನವಿಹೀನಂ ಜಾತಂ ತುಂಡಮ್ |
ವೃದ್ಧೋಯಾತಿ ಗೃಹೀತ್ಪಾ ದಂಡ
ತದಪಿ ನ ಮುಂಚತಿ ಆಶಾಪಿಂಡಮ್ ||

‘ಜೀರ್ಣವಾದ ದೇಹ, ನೆರೆತ ಕೂದಲು, ಬೊಚ್ಚು ಬಾಯಿ, ಕೈಯಲ್ಲಿ ಊರುಗೋಲು ಇಷ್ಟೆಲ್ಲ ಸ್ಥಿತಿ ಇದ್ದರೂ ಮನುಷ್ಯನನ್ನು ಆಸೆ ಬಿಡುವುದಿಲ್ಲ’.

ದಿನಕ್ಕೊಂದು ಚಿನ್ನದ ಮೊಟ್ಟೆಯನ್ನಿಡುವ ಕೋಳಿಯಿಂದ ತೃಪ್ತನಾಗದೆ, ಒಮ್ಮೆಲೇ ಎಲ್ಲ ಮೊಟ್ಟೆಗಳನ್ನು ಪಡೆಯುವ ಅತಿಯಾಸೆಯಲ್ಲಿ ಕೋಳಿಯನ್ನು ಕೊಂದ ಮೂರ್ಖನ ಕಥೆಯನ್ನು ಕೇಳಿದ್ದೇವೆ. ಆದರೆ ಪರಿಸ್ಥಿತಿ ಬಂದಾಗ ನಾವೂ ಅಂಥವೇ ದುರಾಸೆಯನ್ನು ತೋರಬಹುದೇನೋ? ರುಚಿ, ಶುಚಿಯಾದ ಆಹಾರ ಆರೋಗ್ಯಕ್ಕೆ ಒಳ್ಳೆಯದು. ಆದರೆ ನಾಲಿಗೆಯ ಚಪಲಕ್ಕೆ ಮನಸೋತು ಆ ಒಳ್ಳೆಯ ಆಹಾರವನ್ನು ಅತಿಯಾಗಿ ತಿಂದರೆ, ಅದೇ ಹೊಟ್ಟೆಯಲ್ಲಿ ಅಜೀರ್ಣವಾಗಿ ವಿಷವಾಗುತ್ತದೆ, ದೇಹಕ್ಕೆ ಅನಾರೋಗ್ಯ ತರುತ್ತದೆ. ದೇಹಕ್ಕೆ ಆರೋಗ್ಯವನ್ನು ತರಬಹುದಾದ ಒಳ್ಳೆಯ ಆಹಾರ ಅತಿಯಾದರೆ, ಅದೇ ಅನಾರೋಗ್ಯಕ್ಕೆ ಕಾರಣವಾಗುವಂತೆ, ನಮ್ಮ ಬೆಳವಣಿಗೆಗೆ ಕಾರಣವಾಗಬಹುದಾದ ಆಸೆ, ಅತಿಯಾದರೆ ಅನಾಹುತಕ್ಕೆ ಕಾರಣವಾಗುತ್ತದೆ.

ಮಿತಿಮೀರಿದ ಅಪೇಕ್ಷೆಗಳನ್ನು ಪೂರೈಸಿಕೊಳ್ಳುವುದು ಕಷ್ಟ. ಅದು ತನ್ನ ಮಿತಿಯನ್ನು ಮೀರಿದ್ದು ಎಂದು ತಿಳಿದಿದ್ದರೂ ಮನುಷ್ಯ ಆ ಆಸೆಯ ಪೂರೈಕೆಗಾಗಿ ಒದ್ದಾಡುತ್ತಾನೆ, ಉಬ್ಬಸಪಡುತ್ತಾನೆ, ಅದು ದಕ್ಕದೆ ಹೋದಾಗ ದು:ಖಪಡುತ್ತಾನೆ. ಅತಿಯಾದ ಇಚ್ಛೆ ಸೆರಗಿನಲ್ಲಿಯ ಕೆಂಡವಿದ್ದAತೆ. ಅದು ಸುಡುತ್ತಲೇ ಇರುತ್ತದೆ. ಅದನ್ನು ಮುಚ್ಚಿಡುವುದು ಸಾಧ್ಯವಿಲ್ಲ. ಅದು ಹೇಗೋ ಹೊರಬಿದ್ದು ತೊಂದರೆಗೆ ನೂಕುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು