ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತು ಅಶ್ವತ್ಥ ವೃಕ್ಷ

Last Updated 18 ಫೆಬ್ರುವರಿ 2020, 4:27 IST
ಅಕ್ಷರ ಗಾತ್ರ

ತಲೆಯ ಮೇಗಡೆ ಬೇರು, ಕೆಳಗೆ ಕೊಂಬೆಲೆ ಚಿಗುರು |
ಬಿಳಲೂರೆಗಳ ಲೆಕ್ಕಕ್ಕಿಲ್ಲ ಕೊನೆ ಮೊದಲು ||
ಬೆಳೆವುದೀ ಪರಿಯರಳಿಮರದಂತೆ ನರಕೋಟಿ |
ನಲಿವನದರಲಿ ಬೊಮ್ಮ – ಮಂಕುತಿಮ್ಮ || 251 ||

ಪದ-ಅರ್ಥ: ಮೇಗಡೆ=ಮೇಲುಗಡೆ, ಕೊಂಬೆಲೆ=ಕೊಂಬೆ+ಎಲೆ, ಬಿಳಲೂರೆಗಳ=ಬಿಳಲು+ಊರೆಗಳ(ಆಸರೆಗಳ), ಪರಿಯರಳಿಮರದಂತೆ=ಪರಿ+ಅರಳಿ ಮರದಂತೆ, ನಲಿವನದರಲಿ=ನಲಿವನು+ಅದರಲಿ.

ವಾಚ್ಯಾರ್ಥ: ಬೇರುಗಳು ತಲೆಯ ಮೇಲೆ ಇವೆ, ಕೊಂಬೆ, ಎಲೆ, ಚಿಗುರುಗಳು ಕೆಳಗಿವೆ. ಬಿಳಲುಗಳ ಆಸರೆಗಳು ಲೆಕ್ಕಕ್ಕಿಲ್ಲದಷ್ಟು, ಕೊನೆ ಮೊದಲಿಲ್ಲದಷ್ಟು. ಈ ಅರಳಿಮರದಂತೆ ಬೆಳೆಯುವುದು ಮನುಷ್ಯ ಜೀವಕೋಟಿ ಸಂಖ್ಯೆಯಲಿ. ಅದರಲ್ಲಿ ಬ್ರಹ್ಮ ನಲಿಯುತ್ತಾನೆ.

ವಿವರಣೆ: ಉಪನಿಷತ್ತುಗಳಲ್ಲಿ ಮತ್ತು ಭಗವದ್ಗೀತೆಯಲ್ಲಿ ಅರಳಿಮರದ ಪ್ರಸಕ್ತಿ ಆಗಾಗ ಬರುತ್ತದೆ. ಈ ಕಗ್ಗಕ್ಕೆ ಸಂವಾದಿಯಾದದ್ದು ಭಗವದ್ಗೀತೆಯ ಹದಿನೈದನೆಯ ಅಧ್ಯಾಯದ (ಪುರುಷೋತ್ತಮ ಯೋಗದ) ಮೊದಲ ಶ್ಲೋಕ.

ಊರ್ಧ್ವಮೂಲಮಧಃಶಾಖಂ ಅಶ್ವತ್ಥಂ ಪ್ರಾಹುರವ್ಯಯಮ್ |
ಛಂದಾಂಸಿ ಯಸ್ಯಪರ್ಣಾನಿ ಯಸ್ತಂ ವೇದ ಸ ವೇದವಿತ್ ||

‘ಮೇಲೆ ಬೇರು, ಕೆಳಗೆ ಕೊಂಬೆಗಳು ಇರುವ ಅಶ್ವತ್ಥವನ್ನು ಅವ್ಯಯ (ಅವಿನಾಶಿಯಾದ) ವೃಕ್ಷವೆನ್ನುವರು. ಇದರ ಎಲೆಗಳು ವೇದಗಳು. ಯಾವನು ಈ ವೃಕ್ಷವನ್ನು ಮೂಲದಿಂದ ಬಲ್ಲವನೊ ಅವನು ವೇದವನ್ನು ಬಲ್ಲವನು’.

ಇದೊಂದು ಒಗಟಿನ ಮಾತಿನಂತೆ ತೋರುತ್ತದಲ್ಲವೆ? ಮರದ ಬೇರು, ಕೆಳಗೆ, ನೆಲದಲ್ಲಿರಬೇಕು. ಬೇರುಗಳು ಮೇಲೆ ಹೇಗಿರುತ್ತವೆ? ಬೇರುಗಳು ಮೇಲಿದ್ದು ರೆಂಬೆ, ಕೊಂಬೆ, ಎಲೆಗಳು ಕೆಳಗಿರುವುದು ಸಾಧ್ಯವೇ? ಈ ಪ್ರಶ್ನೆಗಳು ಸಾಮಾನ್ಯ ಮರವನ್ನು ಕಲ್ಪಿಸಿಕೊಂಡಾಗ ಬರುವುದು ಸರಿ. ಆದರೆ ಕಗ್ಗ ಹೇಳುವುದು ಮತ್ತು ಭಗವದ್ಗೀತೆಯ ಶ್ಲೋಕ ಹೇಳುತ್ತಿರುವುದು ಸಾಮಾನ್ಯ. ಮರವನ್ನು ಉದ್ದೇಶಿಸಿ ಅಲ್ಲ. ಈ ಜಗತ್ತೇ ಒಂದು ಅಶ್ವತ್ಥವೃಕ್ಷ. ಈ ಜಗತ್ತಿನ ಬೇರು ಶಾಶ್ವತವಾದ ಪರಬ್ರಹ್ಮ. ಮರಕ್ಕೆ ಬೇರು ಮೂಲವಲ್ಲವೇ? ಅದು ಅತ್ಯಂತ ಶ್ರೇಷ್ಠವಾದದ್ದು, ಮೇಲಿನದ್ದು, ಆದ್ದರಿಂದ ಊರ್ಧ್ವ. ಈಗ ಕೆಲವು ಮನೆತನಗಳಲ್ಲಿ ವಂಶವೃಕ್ಷವನ್ನು ಬರೆದಿಡುವ ಪದ್ಧತಿ ಇದೆ. ಅದನ್ನು ಬರೆಯುವುದು ಹೇಗೆ? ವಂಶದ ಮೂಲಪುರುಷರಿಂದ ಪ್ರಾರಂಭಿಸಿ ಅಲ್ಲಿಂದ ಇಳಿಯುತ್ತ ಅತ್ಯಂತ ಕಿರಿಯರವರೆಗೆ ಕೆಳಗೆ ಬರುತ್ತದೆ. ಇಲ್ಲಿ ಕೂಡ ಮೂಲವಾದದ್ದು ಮೇಲೆಯೇ ಅಲ್ಲವೇ? ಅದನ್ನೇ ಈ ಕಗ್ಗ ಮತ್ತು ಭಗವದ್ಗೀತೆಯ ಶ್ಲೋಕ ಎಷ್ಟು ಸುಂದರವಾಗಿ, ಸಾಂಕೇತಿಕವಾಗಿ ಹೇಳುತ್ತವೆ!

ಈ ಮರಕ್ಕೆ ಆಸರೆಯಾಗಿರುವ ಬಿಳಲುಗಳಿಗೆ ಲೆಕ್ಕವೇ ಇಲ್ಲ. ಎಷ್ಟೋ ಬಾರಿ ದೊಡ್ಡ ಮರಕ್ಕೆ ನೂರಾರು ದೊಡ್ಡ ಬಿಳಲುಗಳಿದ್ದಾಗ ಮೂಲಬೇರು ಯಾವುದು ಎನ್ನುವುದೇ ಗೊತ್ತಾಗದ ಹಾಗೆ ಆಗಿರುತ್ತದೆ. ಇದರಂತೆ ಈ ಮನುಷ್ಯ ಜೀವನ, ಮೂಲವಾದ ಬ್ರಹ್ಮದಿಂದ ಹೊರಟು, ಕೋಟಿ, ಕೋಟಿ ರೂಪಗಳಲ್ಲಿ ಬೆಳೆದು ನಿಂತಿದೆ. ತನ್ನ ರೂಪ ಇಷ್ಟು ಅನಂತವಾದ ಮುಖದಲ್ಲಿ ಹೊಮ್ಮಿರುವುದನ್ನು ಕಂಡು ಪರಬ್ರಹ್ಮ ವಸ್ತುವು ಆನಂದಪಡುತ್ತದೆ. ಈ ಪ್ರಪಂಚ ಎನ್ನುವುದು ಶಾಶ್ವತವಾದ ವೃಕ್ಷ. ಯಾಕೆಂದರೆ ಇದರ ಮೂಲವಾದ ಬ್ರಹ್ಮವಸ್ತು ಅವಿನಾಶಿಯಾದದ್ದು. ಅದರಿಂದ ಕೆಳಗಿಳಿದುಬರುವ ಮನುಷ್ಯ ಜೀವರಾಶಿ ಮತ್ತು ಅವುಗಳ ಸೃಷ್ಟಿಗೆ ಕಾರಣವಾದ ಪರಬ್ರಹ್ಮಕ್ಕೂ ಇರುವ ಅವಿನಾ ಸಂಬಂಧವನ್ನು ಈ ಕಗ್ಗ ತಿಳಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT