ಬುಧವಾರ, ಸೆಪ್ಟೆಂಬರ್ 23, 2020
22 °C

ಕಾಯ ಮತ್ತು ಕಾಯಕ

ಕೆ. ರತ್ನಪ್ರಭಾ Updated:

ಅಕ್ಷರ ಗಾತ್ರ : | |

ನಾನಾಗ ಹೈದರಾಬಾದ್‌ನ ಸೇಂಟ್‌ಜಾರ್ಜ್‌ ಗ್ರಾಮರ್ ಶಾಲೆಯಲ್ಲಿ ಓದುತ್ತಿದ್ದೆ. ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಮೊದಲ ಬಹುಮಾನ ವಿಮಾನ, ಎರಡನೆಯದ್ದು ಬಸ್‌. ಸಹಜವಾಗಿಯೇ ನನ್ನ ಗುರಿ ವಿಮಾನ ಗೆಲ್ಲುವುದಾಗಿತ್ತು. ನನ್ನ ಗೆಳತಿ ಮೇರಿ ಲೆನಿಯನ್‌ ಮತ್ತು ಅನಿತಾ ಪ್ರಭಾಕರ್‌ (ಇವರಮ್ಮ ನನ್ನಮ್ಮನ ಆಸ್ಪತ್ರೆಯಲ್ಲಿಯೇ ಶುಶ್ರೂಷಕಿಯಾಗಿದ್ದರು) ಸಹ ನನ್ನೊಟ್ಟಿಗೆ ಸ್ಪರ್ಧಿಸಿದ್ದರು. ಇಬ್ಬರೂ ಓಡಿದೆವು. ಇನ್ನೇನು ಗೆಲುವಿಗೆ ಕೆಲ ಹೆಜ್ಜೆಗಳ ದೂರವಷ್ಟೇ... ನನಗೆ ನನ್ನ ಗೆಳತಿ ಗೆಲ್ಲುವಳೋ ಇಲ್ಲವೋ ಎನಿಸಿ, ಹಿಂದಿರುಗಿ ನೋಡಿದೆ. ಹಾಗೆ ಓಟ ನಿಲ್ಲಿಸಿದ ಕ್ಷಣದಲ್ಲಿ ಅನಿತಾ ಓಟದ ಸ್ಪರ್ಧೆಯನ್ನು ಮುಗಿಸಿದ್ದಳು.

ಸೋತಿದ್ದಕ್ಕೆ ಆಗ ನನಗೆ ದುಃಖವಾಗಲಿಲ್ಲ. ಗೆಳತಿಯ ಗೆಲುವಿಗೆ ಸಂಕಟವೂ ಆಗಲಿಲ್ಲ. ನಾವಿಬ್ಬರೂ ಗೆದ್ದೆವು ಎಂಬ ಸಂತೋಷದ್ದೇ ಮೇಲುಗೈ ಆಗಿತ್ತು. ನನ್ನಮ್ಮ ಆಗಾಗ ಈ ಘಟನೆಯನ್ನು ನೆನಪಿಸಿಕೊಡುತ್ತಿದ್ದರು. ‘ಎಲ್ಲರ ಕಾಳಜಿ ಮಾಡುವುದು, ಗೆಲುವಿಗಿಂತಲೂ ಮುಖ್ಯವಾದುದು. ಸ್ಪರ್ಧೆಯಲ್ಲಿಯೂ ಸ್ನೇಹವನ್ನು ಮರೆಯದಿರುವುದು, ಸೋಲನ್ನು ಸ್ವೀಕರಿಸುವುದು ಮತ್ತು ಎಲ್ಲರೊಟ್ಟಿಗೆ ಗೆಲುವನ್ನು ಆನಂದಿಸುವುದು ಇವು ನಿನ್ನ ಮೂಲಗುಣಗಳಾಗಿವೆ. ಅವನ್ನು ನೇಪಥ್ಯಕ್ಕೆ ಸರಿಯಲು ಬಿಡಬೇಡ’ ಎಂದು ಹೇಳುತ್ತಿದ್ದರು.

ಇದರೊಟ್ಟಿಗೆ ನಮಗೆ ಕೇಡು ಬಯಸಿದವರನ್ನು ಕ್ಷಮಿಸುವುದು, ಕಷ್ಟ ಕೊಟ್ಟವರ ವಿರುದ್ಧ ದ್ವೇಷ ಸಾಧಿಸದೇ ಇರುವುದು, ನಮ್ಮಿಂದಾದಷ್ಟೂ ಸಮರ್ಥವಾಗಿ, ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದು... ಇಂದು ಈ ಎಲ್ಲ ಗುಣಗಳೂ ನನ್ನ ಜೀವನದ ಮೂಲಮಂತ್ರಗಳಾಗಿವೆ. ನನ್ನಣ್ಣನೂ ಸಹ ಈ ಗುಣಗಳನ್ನು ಮೆಚ್ಚುತ್ತಿದ್ದರು. ಆಗಾಗ ಅವನ್ನು ನೆನಪಿಸಿ, ನನ್ನೊಳಗನ್ನು ಗಟ್ಟಿಗೊಳಿಸಿದರು. ಹೀಗಾಗಿ ಬದುಕಿನ ಯಾವ ತಿರುವಿನಲ್ಲಿಯೂ ನಾನು ಈ ಮೂಲಮಂತ್ರಗಳನ್ನು ಬದಿಗೊತ್ತಲಿಲ್ಲ. ಅವೇ ನನ್ನನ್ನು ಮುನ್ನಡೆಸಿದವು.

ಮೆಟ್ರಿಕ್‌ ಮುಗಿಸಿದ ನಂತರ ನನಗೆ ಕಲಾ ವಿಭಾಗದಲ್ಲಿ ಓದಬೇಕೆಂದು ಇಷ್ಟವಿತ್ತು. ಆದರೆ ಆಗೆಲ್ಲ ಉತ್ತಮ ಫಲಿತಾಂಶ ಪಡೆದವರು ವಿಜ್ಞಾನವನ್ನೇ ಓದುತ್ತಿದ್ದರು. ನಾನು ಜೀವಶಾಸ್ತ್ರದ ಹೊರತಾಗಿ ವಿಜ್ಞಾನವನ್ನು ಓದಿದೆ. ಕಾಲೇಜು ದಿನಗಳಲ್ಲಿ ಟೇಬಲ್‌ಟೆನಿಸ್‌ ಚಾಂಪಿಯನ್‌ ಸಹ ಆಗಿದ್ದೆ. ವಿಜ್ಞಾನ ಓದಿದ ನಂತರ ಪದವಿಯಲ್ಲಿ ಇಂಗ್ಲಿಷ್‌ ಸಾಹಿತ್ಯ ಆಯ್ಕೆ ಮಾಡಿಕೊಂಡೆ. ಜೇನ್‌ ಆಸ್ಟಿನ್‌, ಜಾರ್ಜ್‌ ಎಲಿಯಟ್‌, ಶೇಕ್ಸ್‌ಪಿಯರ್‌ ಮುಂತಾದವರು ನನ್ನ ಅಚ್ಚುಮೆಚ್ಚಿನ ಸಾಹಿತಿಗಳಾಗಿದ್ದರು. ಅವರ ಸಾಹಿತ್ಯವನ್ನು ಓದುತ್ತಲೇ ಮಾನವ ಸಂಬಂಧಗಳು, ಮಾನವೀಯ ಮೌಲ್ಯಗಳ ಕುರಿತು ಚಿಂತಿಸುತ್ತಿದ್ದೆ.

ನಾನು ವೈದ್ಯೆಯಾಗಬೇಕು ಎಂಬುದು ಅಮ್ಮನ ಆಸೆಯಾಗಿತ್ತು. ಆದರೆ ನಾನು ಅಪ್ಪನಂತೆ ಜನರ ಕಷ್ಟ ನಿವಾರಣೆಗಾಗಿ ಆಡಳಿತದ ಕಡೆಗೆ ಹೆಚ್ಚು ವಾಲುತ್ತಿದ್ದೆ. ಆ ಕಾರಣಕ್ಕೇ ಅಖಿಲ ಭಾರತ ಆಡಳಿತ ಸೇವೆಯ ಪರೀಕ್ಷೆ ತೆಗೆದುಕೊಂಡೆ. ಮೊದಲು ರೆವೆನ್ಯೂ ಸರ್ವಿಸ್‌ಗೆ ಆಯ್ಕೆಯಾದೆ. ಎರಡನೆಯ ಪ್ರಯತ್ನದಲ್ಲಿ ಭಾರತ ಆಡಳಿತ ಸೇವೆಗೆ ಆಯ್ಕೆಯಾದೆ. ಸಂಕೋಚ ಸ್ವಭಾವದವಳಾಗಿದ್ದನಾನು, ಕರ್ನಾಟಕ ರಾಜ್ಯ ಕೇಡರ್‌ಗೆ ಆಯ್ಕೆಯಾದಾಗ ಅಧೀರಳಾಗಿದ್ದೆ. ಅಪ್ಪ ಅಮ್ಮನನ್ನು ಮೊದಲ ಬಾರಿಗೆ ಬಿಟ್ಟು ಹೋಗಬೇಕಾಗಿತ್ತು.ಅಪ್ಪ ಅಮ್ಮನಿಗೆ ಎಷ್ಟೇ ಮುದ್ದಿನ ಮಗಳಾಗಿದ್ದರೂ ಈ ವಿದಾಯ ಅನಿವಾರ್ಯವಾಗಿತ್ತು.

ಅಮ್ಮನೇ ನನ್ನನ್ನು ಮಸ್ಸೂರಿ ತರಬೇತಿ ಕೇಂದ್ರಕ್ಕೆ ಬಿಡಲು ಬಂದಿದ್ದರು. ಅಲ್ಲಿ ಅದಾಗಲೇ ಬಂದಿದ್ದ ಅಭ್ಯರ್ಥಿಗಳೆಲ್ಲ ನನ್ನಮ್ಮನನ್ನು ತರಬೇತಿ ಕೇಂದ್ರದ ಉಪನ್ಯಾಸಕಿಯಾಗಿರಬಹುದು. ನಾನವರ ಮಗಳಾಗಿರಬಹುದು ಎಂದುಕೊಂಡಿದ್ದರಂತೆ. ನನ್ನ ಸಂಕೋಚ ಸ್ವಭಾವ, ಸಪೂರ ಮೈಕಟ್ಟು ಇವೆಲ್ಲವೂ ಆಡಳಿತ ಸೇವೆಗೆ ಸೇರಿದವಳು ಎಂಬ ನೋಟವನ್ನೇ ನೀಡುತ್ತಿರಲಿಲ್ಲ.

ಇಲ್ಲಿ ತರಬೇತಿ ಮುಗಿದ ನಂತರ ನಾನು ಕರ್ನಾಟಕ ಕೇಡರ್‌ಗೆ ಆಯ್ಕೆಯಾಗಿದ್ದೆ. ಅಪ್ಪ ಅಮ್ಮ ಧೈರ್ಯ ತುಂಬಿದರು. ಕರ್ನಾಟಕಕ್ಕೆ ಹೋಗುವಂತೆ ಹುರಿದುಂಬಿಸಿದರು. ಮೈಸೂರಿನಲ್ಲಿ ಆಡಳಿತ ತರಬೇತಿ ನೀಡಲಾಯಿತು. ಪರಿವೀಕ್ಷಣಾ ಅವಧಿಯಲ್ಲಿ ಹೆಚ್ಚಿನ ತರಬೇತಿಗಾಗಿ ಬೆಳಗಾವಿ ಜಿಲ್ಲೆಗೆ ನಿಯೋಜಿಸಲಾಗಿತ್ತು. ಆಗ ಮಣಿಕಟ್ಟಿ ಅವರು ಬೆಳಗಾವಿ ಜಿಲ್ಲಾಧಿಕಾರಿಯಾಗಿದ್ದರು. ಕೆಲಸದಲ್ಲಿ ತಮ್ಮನ್ನೇ ಮರೆಯುವಷ್ಟು ಕಾರ್ಯನಿರತ ಅಧಿಕಾರಿಯಾಗಿದ್ದರು. ಎಲ್ಲವನ್ನೂ ಅವರೇ ನಿರ್ವಹಿಸುತ್ತಿದ್ದುದರಿಂದ ನನಗೆ ಹೆಚ್ಚಿನ ತರಬೇತಿ ಸಿಗಲಿಲ್ಲ. ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದೆ.

ಅವಕಾಶ ಸಿಕ್ಕಾಗಲೆಲ್ಲ ರಜೆ ಹಾಕಿ, ಹುಬ್ಬಳ್ಳಿಗೆ ಓಡುತ್ತಿದ್ದೆ. ಅಲ್ಲಿಂದ ರೈಲಿನ ಮೂಲಕ ಹೈದರಾಬಾದ್‌ಗೆ ಹೋಗುವುದನ್ನು ರೂಢಿಸಿಕೊಂಡಿದ್ದೆ. ಆದರೆ ಅಪ್ಪ ಗದರುತ್ತಿದ್ದರು. ‘ಹೆಚ್ಚಿನ ಸಮಯವನ್ನು ಕರ್ನಾಟಕದಲ್ಲಿಯೇ ಕಳೆಯಬೇಕು. ಇದು ತರಬೇತಿಯ ಸಮಯ. ಇದನ್ನು ಸದುಪಯೋಗಪಡಿಸಿಕೊಂಡಷ್ಟೂ ಒಳಿತು. ಪದೇಪದೇ ಮನೆಗೆ ಬರಬೇಡ’ ಎಂದು ಗದರಿಸಿ ವಾಪಸ್‌ ಕಳುಹಿಸುತ್ತಿದ್ದರು. ಆಗ ನನ್ನ ಗುರಿ, ಕರ್ತವ್ಯದ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯತೊಡಗಿತು. ಯಾರೂ ಏನನ್ನೂ ಕಲಿಸದಿದ್ದರೂ ನಮ್ಮನ್ನು ನಾವು ತೊಡಗಿಸಿಕೊಳ್ಳುವಷ್ಟು ಸಮರ್ಪಣಾಭಾವ ಬರಬೇಕು ಎಂಬ ಅರಿವು ಮೂಡಿತು.

ರಜೆ ಮೊಟಕುಗೊಳಿಸಿ ವಾಪಸ್‌ ಬೆಳಗಾವಿಗೆ ಬರುತ್ತಿದ್ದೆ. ಜಿಲ್ಲಾಧಿಕಾರಿಯ ಆಪ್ತ ಸಹಾಯಕರು, ‘ರಜೆ ಮೊಟಕುಗೊಳಿಸಿ ಬಂದದ್ದೇಕೆ? ಜಿಲ್ಲಾಧಿಕಾರಿ ನಿಮ್ಮನ್ನು ಕೇಳಲೇ ಇಲ್ಲ’ ಎಂದಾಗ ಬೇಸರವಾಗುತ್ತಿತ್ತು. ಇತ್ತ ಕಲಿಕೆಯೂ ಇಲ್ಲ, ಅತ್ತ ಅಪ್ಪ ಅಮ್ಮನೊಟ್ಟಿಗೆ ಇರುವಂತೆಯೂ ಆಗಲಿಲ್ಲವಲ್ಲ ಎಂದು ದುಃಖವೂ ಕಾಡುತ್ತಿತ್ತು.ತರಬೇತಿ ಅವಧಿಯ ನಂತರ ನನ್ನ ತಂಡದಲ್ಲಿದ್ದವರನ್ನು ಮೈಸೂರು, ಬೆಳಗಾವಿ ಜಿಲ್ಲೆಗಳಿಗೆ ನಿಯೋಜಿಸಲಾಗಿತ್ತು. ತಂಡದಲ್ಲಿದ್ದ ಏಕೈಕ ಮಹಿಳೆ ನಾನು. ನನಗೆ ಅತ್ಯಂತ ಹಿಂದುಳಿದ ಜಿಲ್ಲೆ ಎಂದು ಹೇಳಲಾಗುತ್ತಿದ್ದ ಬೀದರ್‌ಗೆ ಉಪವಿಭಾಗಾಧಿಕಾರಿಯಾಗಿ ನಿಯೋಜಿಸಲಾಗಿತ್ತು. ತಂಡದವರೆಲ್ಲ ನನ್ನನ್ನು ಕಂಡಕೂಡಲೆ ಅನುಕಂಪ ತೋರುತ್ತಿದ್ದರು.

‘ಅಯ್ಯೋ ಪಾಪ, ಮಹಿಳೆಯಾಗಿ ನಿಮ್ಮನ್ನು ಇಂಥ ಸ್ಥಳಕ್ಕೆ ನಿಯೋಜಿಸಿದ್ದಾರಲ್ಲ’ ಎಂದೆಲ್ಲ ಹೇಳುತ್ತಿದ್ದರು. ಅಣ್ಣಂದಿರೊಂದಿಗೆ ಬೆಳೆದ ನನಗೆ ಹೆಣ್ಣುಮಗುವೆಂಬ ಯಾವ ರಿಯಾಯಿತಿಯೂ ದೊರೆತಿರಲಿಲ್ಲ. ಈಗ ಇವರೆಲ್ಲ ಹೀಗೆ ಹೇಳುವುದು ನೋಡಿ ಅಚ್ಚರಿಯೆನಿಸುತ್ತಿತ್ತು. ಹಾಗಾಗಿ ಬೀದರ್‌ ಬಗ್ಗೆ ನನಗೆ ಯಾವ ಆತಂಕವೂ ಹುಟ್ಟಲಿಲ್ಲ. ಬದಲಿಗೆ ಖುಷಿಯೇ ಹೆಚ್ಚಾಗಿತ್ತು.

ಅಂತರ್ಮುಖಿಯಾಗಿರುತ್ತಿದ್ದ ನಾನು, ನಿಷ್ಠುರವಾಗುವುದನ್ನು, ನ್ಯಾಯಕ್ಕಾಗಿ ಸ್ಥೈರ್ಯದಿಂದ ಧ್ವನಿಯೆತ್ತುವುದನ್ನು ಕಲಿತಿದ್ದು ಅಲ್ಲಿಯ ಆಡಳಿತದ ದಿನಗಳ ಅನುಭವದಿಂದ. ಆದರೆ ಅದೆಷ್ಟೋ ಸಲ ನನ್ನ ಸರಳ ಉಡುಗೆ ಹಾಗೂ ಸಪೂರ ಮೈಕಟ್ಟಿನಿಂದ ಅಧಿಕಾರಿಯಲ್ಲವೆಂದು ಭಾವಿಸಿದವರನ್ನು ಎದುರಿಸಿದ್ದೇ ಹೆಚ್ಚು. ಜನಪರ ಕಾರ್ಯಗಳಿಂದಾಗಿ ‘ಕಾಯ’ಕ್ಕಿಂತಲೂ ನನ್ನನ್ನು ‘ಕಾಯಕ’ವೇ ಮುನ್ನಡೆಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.