ಶನಿವಾರ, ಮಾರ್ಚ್ 6, 2021
28 °C

ಹಿರಿಯರಿಗೆ ಊರುಗೋಲು ‘ರಿವರ್ಸ್ ಮಾರ್ಟ್‌ಗೇಜ್‌’

ಅವಿನಾಶ್ ಕೆ.ಟಿ. Updated:

ಅಕ್ಷರ ಗಾತ್ರ : | |

Prajavani

ಬ್ಯಾಂಕುಗಳು ಆಸ್ತಿ ಮೇಲೆ ಅಡಮಾನ ಸಾಲ (ಮಾರ್ಟ್‌ಗೇಜ್‌ ಲೋನ್‌) ಕೊಡುವುದು ಎಲ್ಲರಿಗೂ ತಿಳಿದಿದೆ. ಆದರೆ ಹಿಮ್ಮುಖ ಅಡಮಾನದ (ರಿವರ್ಸ್‌ ಮಾರ್ಟ್‌ಗೇಜ್‌) ಬಗ್ಗೆ ನಮ್ಮಲ್ಲಿ ತಿಳಿವಳಿಕೆ ಕಡಿಮೆ. ಪಾಶ್ಚಿಮಾತ್ಯ ದೇಶಗಳಲ್ಲಿ ಜನಪ್ರಿಯತೆ ಗಳಿಸಿರುವ ರಿವರ್ಸ್‌ ಮಾರ್ಟ್‌ಗೇಜ್‌ ಭಾರತದಲ್ಲೂ ಈಗ ಮುನ್ನೆಲೆಗೆ ಬರುತ್ತಿದೆ.

ಇಳಿವಯಸ್ಸಿನಲ್ಲಿ ಪ್ರತಿದಿನದ ಖರ್ಚು–ವೆಚ್ಚಗಳಿಗೆ, ವೈದ್ಯಕೀಯ ಅಗತ್ಯಗಳಿಗೆ ಹಣವಿಲ್ಲದೆ ಹಿರಿಯ ನಾಗರಿಕರು ಪರದಾಡುವ ನಿದರ್ಶನಗಳನ್ನು ನಾವು ನೋಡಿದ್ದೇವೆ. ಇಂಥವರಿಗೆ ಪರಿಹಾರದ ರೂಪದಲ್ಲಿ ರಿವರ್ಸ್‌ ಮಾರ್ಟ್‌ಗೇಜ್‌ ಹುಟ್ಟಿಕೊಂಡಿದೆ. ಹಿರಿಯ ನಾಗರಿಕರಿಗೆ ಸ್ವಂತದ್ದೊಂದು ಮನೆ ಇದ್ದರೆ ಈ ಯೋಜನೆಯ ಪ್ರಯೋಜನ ಪಡೆಯಬಹುದು. ಸ್ಥಿರಾಸ್ತಿಯನ್ನು ಬ್ಯಾಂಕ್‌ಗೆ ‘ರಿವರ್ಸ್ ಮಾರ್ಟ್‌ಗೇಜ್’ ರೂಪದಲ್ಲಿ ಅಡವಿಟ್ಟು ಪ್ರತಿ ತಿಂಗಳು ಹಣ ಪಡೆಯಬಹುದು.

ಗೃಹಸಾಲ ಕೊಡುವಾಗ ಬ್ಯಾಂಕ್ ನಾವು ಪಡೆಯುವ ಗೃಹಸಾಲದ ಮೊತ್ತವನ್ನು ನೇರವಾಗಿ ಕಟ್ಟಡದ ಮಾಲೀಕರಿಗೆ (ಬಿಲ್ಡರ್‌ಗೆ) ವರ್ಗಾಯಿಸುತ್ತದೆ. ಹೀಗೆ ವರ್ಗಾಯಿಸುವಾಗ ಮನೆಯ ದಾಖಲೆಗಳನ್ನು ಅವರಿಂದ ಬ್ಯಾಂಕ್ ತನ್ನ ಸುಪರ್ದಿಗೆ ಪಡೆದುಕೊಳ್ಳುತ್ತದೆ. ನಾವು ಮಾಸಿಕ ಕಂತುಗಳ (ಇಎಂಐ) ಮೂಲಕ ಸಾಲ ತೀರಿಸಿದ ನಂತರ ಬ್ಯಾಂಕ್ ಆ ಮನೆಯ ಮಾಲೀಕತ್ವವನ್ನು ನಮಗೆ ಒಪ್ಪಿಸುತ್ತದೆ. ಈ ವ್ಯವಸ್ಥೆಯನ್ನು ಬ್ಯಾಂಕಿಂಗ್ ಪರಿಭಾಷೆಯಲ್ಲಿ ಮಾರ್ಟ್‌ಗೇಜ್‌ ಎನ್ನಲಾಗುತ್ತದೆ. ಆದರೆ ರಿವರ್ಸ್ ಮಾರ್ಟ್‌ಗೇಜ್‌ನಲ್ಲಿ ಹಿರಿಯ ನಾಗರಿಕರು ತಮ್ಮ ಹೆಸರಿನಲ್ಲಿರುವ ಮನೆಯನ್ನು ಬ್ಯಾಂಕ್‌ಗೆ ಅಡವಿಟ್ಟು ಪ್ರತಿ ತಿಂಗಳೂ ಹಣ ಪಡೆಯಬಹುದು. ಅಲ್ಲದೆ, ತಮ್ಮ ಜೀವತಾವಧಿವರೆಗೂ ಅದೇ ಮನೆಯಲ್ಲಿ ವಾಸ ಮಾಡಬಹುದು. ಮನೆಯನ್ನು ಅಡಮಾನ ಇಟ್ಟಿರುವ ಹಿರಿಯ ನಾಗರಿಕರ ಮರಣದ ನಂತರ ಮನೆಯನ್ನು ಬ್ಯಾಂಕ್ ತನ್ನ ವಶಕ್ಕೆ ಪಡೆದುಕೊಳ್ಳುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ?: ಇಬ್ಬರು ಹಿರಿಯ ನಾಗರಿಕರಿದ್ದಾರೆ, ಒಬ್ಬರ ವಯಸ್ಸು 55 ವರ್ಷ, ಮತ್ತೊಬ್ಬರ ವಯಸ್ಸು 61 ವರ್ಷ ಎಂದಿಟ್ಟುಕೊಳ್ಳೋಣ. ಈ ಹಿರಿಯ ನಾಗರಿಕರಿಗೆ ಮಕ್ಕಳಿಲ್ಲ ಅಥವಾ ಮಕ್ಕಳಿದ್ದರೂ ಅವರ ಮೇಲೆ ಅವಲಂಬಿತರಾಗಲು ಇಷ್ಟವಿಲ್ಲ ಎಂದು ಭಾವಿಸೋಣ. ಪರಿಸ್ಥಿತಿ ಹೀಗಿರುವಾಗ ಇಬ್ಬರೂ ಹಿರಿಯ ನಾಗರಿಕರಿಗೆ ಹಣಕಾಸಿನ ಕೊರತೆ ಇದೆ, ವೈದ್ಯಕೀಯ ಚಿಕಿತ್ಸೆಗೆ ದುಡ್ಡು ಹೊಂದಿಸಲು ಕಷ್ಟವಾಗುತ್ತಿದೆ ಎಂದು ತಿಳಿಯೋಣ. ಇಂತಹ ಸಂದರ್ಭದಲ್ಲಿ ಈ ಹಿರಿಯ ನಾಗರಿಕರ ಬಳಿ ಒಂದು ಮನೆಯಿದ್ದರೆ ಆ ಮನೆಯನ್ನು ಬ್ಯಾಂಕಿಗೆ ರಿವರ್ಸ್ ಮಾರ್ಟ್‌ಗೇಜ್‌ ರೂಪದಲ್ಲಿ ಅಡವಿಟ್ಟು ಪ್ರತಿ ತಿಂಗಳು ನಿರ್ದಿಷ್ಟ ಆದಾಯವನ್ನು ಬ್ಯಾಂಕಿನಿಂದ ಪಡೆಯಬಹುದು. ಈ ಅನುಕೂಲ ಸಾಮಾನ್ಯ ನಾಗರಿಕರಿಗೆ ಸಿಗುವುದಿಲ್ಲ. ಈ ಯೋಜನೆಯ ಅನುಕೂಲ ಪಡೆಯಲು ಹಿರಿಯ ನಾಗರಿಕರಿಬ್ಬರಲ್ಲಿ ಒಬ್ಬರಿಗೆ ಕನಿಷ್ಠ 60 ವರ್ಷ ವಯಸ್ಸಾಗಿರಬೇಕು, ಮತ್ತೊಬ್ಬರಿಗೆ ಕನಿಷ್ಠ 55 ವರ್ಷ ವಯಸ್ಸಾಗಿರಬೇಕು.

‘ರಿವರ್ಸ್ ಮಾರ್ಟ್‌ಗೇಜ್‌’ನಲ್ಲಿ ಸಿಗುವ ಗರಿಷ್ಠ ಮೊತ್ತವೆಷ್ಟು?: ರಿವರ್ಸ್ ಮಾರ್ಟ್‌ಗೇಜ್ ಮಾಡಿದಾಗ ಆಸ್ತಿ ಮೌಲ್ಯದ ಶೇಕಡ 60ರಷ್ಟು ಹಣ ಸಿಗುತ್ತದೆ. ಆಸ್ತಿಯ ಮೌಲ್ಯ ₹ 1 ಕೋಟಿ ಎಂದಾದಲ್ಲಿ ಮನೆಯನ್ನು ರಿವರ್ಸ್ ಮಾರ್ಟ್‌ಗೇಜ್ ಮಾಡಿದವರಿಗೆ ₹ 60 ಲಕ್ಷ ಸಿಗುತ್ತದೆ. ಈ ಮೊತ್ತದಿಂದ 10 ವರ್ಷ ಅಥವಾ 20 ವರ್ಷಗಳ ಅವಧಿವರೆಗೆ ಪ್ರತಿ ತಿಂಗಳೂ ಬ್ಯಾಂಕ್ ಹಣ ನೀಡುತ್ತದೆ. ಎಲ್ಲ ಪ್ರಮುಖ ಬ್ಯಾಂಕುಗಳಲ್ಲಿ ರಿವರ್ಸ್ ಮಾರ್ಟ್‌ಗೇಜ್ ಸೌಲಭ್ಯ ಲಭ್ಯವಿದೆ.

ಮೇಲಿನ ಉದಾಹರಣೆಯಲ್ಲಿ ಹಿರಿಯ ನಾಗರಿಕರಿಬ್ಬರು ₹ 1 ಕೋಟಿ ಮೌಲ್ಯದ ಮನೆಯನ್ನು ಅಡಮಾನ ಇಟ್ಟಿದ್ದಾರೆ, ಅದಕ್ಕೆ ಅವರಿಗೆ ಬ್ಯಾಂಕ್ ₹ 60 ಲಕ್ಷ ಕೊಡಲು ಒಪ್ಪಿದೆ. ₹ 60 ಲಕ್ಷವನ್ನು ಮುಂದಿನ 10 ವರ್ಷಗಳ ಅವಧಿಯಲ್ಲಿ ಹಿರಿಯ ನಾಗರಿಕರು ಪಡೆಯಲಿದ್ದಾರೆ ಎಂದಿಟ್ಟುಕೊಳ್ಳೋಣ. ಪರಿಸ್ಥಿತಿ ಹೀಗಿರುವಾಗ ಐದು ವರ್ಷಗಳ ನಂತರ ಹಿರಿಯ ನಾಗರಿಕರು ಒಂದೊಮ್ಮೆ ಸಾವನ್ನಪ್ಪಿದರೆ ಅವರಿಗೆ ₹ 30 ಲಕ್ಷ ಮಾತ್ರ ಪಾವತಿಯಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್ ಆಸ್ತಿಯನ್ನು ಮಾರಾಟ ಮಾಡಿ ತನಗೆ ಬರಬೇಕಿರುವ ಮೊತ್ತವನ್ನು ಇಟ್ಟುಕೊಂಡು ಇನ್ನುಳಿದ ಹಣವನ್ನು ಹಿರಿಯ ನಾಗರಿಕರ ವಾರಸುದಾರರಿಗೆ ನೀಡಲಿದೆ. ವಾರಸುದಾರರು ರಿವರ್ಸ್ ಮಾರ್ಟ್‌ಗೇಜ್‌ ಸಾಲವನ್ನು ಬಡ್ಡಿ ಸಮೇತ ತೀರಿಸಲು ಒಪ್ಪಿದರೆ ಆಸ್ತಿಯನ್ನು ಅವರೇ ಪಡೆದುಕೊಳ್ಳಲು ಅವಕಾಶವಿದೆ.

ಗಮನಿಸಿ:

l ಈ ಯೋಜನೆಯ ಅವಧಿ ಗರಿಷ್ಠ 20 ವರ್ಷ.

l ರಿವರ್ಸ್‌ ಮಾರ್ಟ್‌ಗೇಜ್‌ ಪಡೆಯಲು ಅಡಮಾನ ಮಾಡುವ ಮನೆ ಅವರ ಹೆಸರಿನಲ್ಲಿಯೇ ಇರಬೇಕು.

l ರಿವರ್ಸ್ ಮಾರ್ಟ್‌ಗೇಜ್‌ನಲ್ಲಿ ವಾಸದ ಮನೆ ಮಾತ್ರ ಅಡಮಾನ ಮಾಡಬಹುದು.

l ರಿವರ್ಸ್ ಮಾರ್ಟ್‌ಗೇಜ್ ಸಾಲ ತೆರಿಗೆಯಿಂದ ಮುಕ್ತವಾಗಿರುತ್ತದೆ.

l ಪ್ರತಿ 5 ವರ್ಷಗಳಿಗೊಮ್ಮೆ ಆಸ್ತಿಯ ಮೌಲ್ಯ ಪರಿಷ್ಕರಣೆಗೆ ಅವಕಾಶವಿದೆ.

l ರಿವರ್ಸ್‌ ಮಾರ್ಟ್‌ಗೇಜ್‌ನಲ್ಲಿ ಜೀವಿತಾವಧಿವರೆಗೆ ಪಡೆದ ಸಾಲಕ್ಕೆ ಕಂತು, ಬಡ್ಡಿ ಕಟ್ಟಬೇಕಿಲ್ಲ.

ಲಾಭ ಗಳಿಕೆಯತ್ತ ಹೂಡಿಕೆದಾರರ ಚಿತ್ತ!

ಷೇರುಪೇಟೆಯಲ್ಲಿ ಮಾರಾಟದ ಒತ್ತಡದ ನಡುವೆಯೂ ಸೂಚ್ಯಂಕಗಳು ವಾರದ ಅವಧಿಯಲ್ಲಿ ಏರಿಕೆ ದಾಖಲಿಸಿವೆ. 49,034 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ಕಳೆದ ವಾರ ಶೇಕಡ 0.5ರಷ್ಟು ಗಳಿಸಿದ್ದರೆ, 14,433 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.6ರಷ್ಟು ಗಳಿಸಿದೆ. ಆದರೆ ನಿಫ್ಟಿ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಶೇ 1.2ಕ್ಕಿಂತ ಹೆಚ್ಚು ಕುಸಿತ ಕಂಡು ನಷ್ಟ ಅನುಭವಿಸಿವೆ. ಇದು 2021ರ ಮೊದಲ ಕುಸಿತವಾಗಿದೆ.

ವಲಯವಾರು ನೋಡಿದಾಗ ಲೋಹ ಮತ್ತು ಫಾರ್ಮಾ ಷೇರುಗಳು ಕುಸಿತ ಕಂಡಿವೆ. ಆದರೆ ವಾಹನ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ವಲಯಗಳು ಗಳಿಕೆ ಕಂಡಿವೆ. ನಿಫ್ಟಿಯಲ್ಲಿ ಟಾಟಾ ಮೋಟರ್ಸ್, ಏರ್‌ಟೆಲ್, ಐಟಿಸಿ, ಮಹೀಂದ್ರ ಆ್ಯಂಡ್ ಮಹೀಂದ್ರ ಉತ್ತಮ ಗಳಿಕೆ ಕಂಡಿವೆ. ಏಷ್ಯನ್ ಪೇಂಟ್ಸ್, ಬಜಾಜ್ ಫಿನ್‌ಸರ್ವ್, ಡಿವಿಸ್, ಹಿಂಡಾಲ್ಕೋ ಕುಸಿತ ಕಂಡಿವೆ.

ಐಪಿಒ ಮಾಹಿತಿ: ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೊರೇಷನ್‌ನ ಐಪಿಒ ಸೋಮವಾರ ಆರಂಭವಾಗಲಿದೆ. ಜನವರಿ 20ರಂದು ಇಂಡಿಗೋ ಪೇಂಟ್ಸ್ ಐಪಿಒ ಸಾರ್ವಜನಿಕರಿಗೆ ಮುಕ್ತವಾಗಲಿದೆ.

ಮುನ್ನೋಟ: ಬಜೆಟ್‌ನತ್ತ ಚಿತ್ತ ಹರಿಸಿರುವುದರಿಂದ ಹೂಡಿಕೆದಾರರು ಅಳೆದು ತೂಗಿ ನಿರ್ಧಾರ ಮಾಡಲಿದ್ದಾರೆ. 2021ರ ಬಜೆಟ್ ತನಕ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್‌ಗಳಲ್ಲಿ ಲಾಭ ಗಳಿಕೆ ಉದ್ದೇಶದ ವಹಿವಾಟು ಹೆಚ್ಚಿಗೆ ಇರುವ ಸಾಧ್ಯತೆಯಿದೆ. ಈ ವಾರ ಮೈಂಡ್ ಟ್ರೀ, ಸಿಯೆಟ್, ಬಜಾಜ್ ಫೈನಾನ್ಸ್, ಫೆಡರಲ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಏಷ್ಯನ್ ಪೇಂಟ್ಸ್, ಬಜಾಜ್ ಆಟೊ, ಬಯೋಕಾನ್, ಬಂಧನ್ ಬ್ಯಾಂಕ್, ಜೆಕೆ ಟೈರ್, ಜಿಂದಾಲ್ ಸ್ಟೀಲ್, ಎಸ್‌ಬಿಐ ಕಾರ್ಡ್, ಜೆಎಸ್‌ಡಬ್ಲ್ಯೂ ಸ್ಟೀಲ್, ರಿಲಯನ್ಸ್, ಯೆಸ್ ಬ್ಯಾಂಕ್ ಸೇರಿ ಪ್ರಮುಖ ಕಂಪನಿಗಳ ತ್ರೈಮಾಸಿಕ ಫಲಿತಾಂಶ ಹೊರಬೀಳಲಿದೆ.

(ಲೇಖಕ: ‘ಇಂಡಿಯನ್‌ಮನಿ.ಕಾಂ’ನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು