ಬುಧವಾರ, ಸೆಪ್ಟೆಂಬರ್ 23, 2020
23 °C

ಮುಂಗಡ ಪಿಎಫ್ ಪಡೆಯಬೇಕೆ?

ನರಸಿಂಹ ಬಿ. Updated:

ಅಕ್ಷರ ಗಾತ್ರ : | |

Prajavani

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆಗೆ ಜಮೆ ಆಗುವ ಹಣ ನಿವೃತ್ತಿ ನಂತರದ ಸ್ವಾವಲಂಬಿ ಜೀವನಕ್ಕೆ ಸಹಕಾರಿ. ಆದರೆ ಅನೇಕ ಸಂದರ್ಭಗಳಲ್ಲಿ ಸೇವಾವಧಿ ಮಧ್ಯೆಯೇ ಇಪಿಎಫ್ ಹಣ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಅನಾರೋಗ್ಯ, ಮಕ್ಕಳ ಶಿಕ್ಷಣ, ಮದುವೆ, ಮನೆ ಖರೀದಿ ಸೇರಿ ಕೆಲ ವಿಶೇಷ ಸಂದರ್ಭಗಳಲ್ಲಿ, ನಿರ್ದಿಷ್ಟ ಕಾರಣಗಳಿಗಾಗಿ ಮುಂಗಡ ಹಣ ನೀಡಲು ಅವಕಾಶ ಕಲ್ಪಿಸಿದೆ. ಯಾವ ಉದ್ದೇಶಕ್ಕೆ ಎಷ್ಟು ಹಣ ಸಿಗುತ್ತದೆ ಎನ್ನುವುದು ಸೇವಾವಧಿ ಮತ್ತು ಕೆಲ ಮಾನದಂಡಗಳ ಮೇಲೆ ಆಧರಿತವಾಗಿದೆ.

ಅನಾರೋಗ್ಯ: ವೈದ್ಯಕೀಯ ಉದ್ದೇಶಕ್ಕಾಗಿ ಇಪಿಎಫ್‌ನ ಭಾಗಶಃ ಹಣವನ್ನು ವಾಪಸ್ ಪಡೆಯಬಹುದಾಗಿದೆ. ವೈಯಕ್ತಿಕ ಅನಾರೋಗ್ಯ ಅಥವಾ ಮಡದಿ, ಮಕ್ಕಳು ಮತ್ತು ಪೋಷಕರ ಚಿಕಿತ್ಸೆ ಉದ್ದೇಶಕ್ಕಾಗಿ ಹಣ ಲಭ್ಯ. ಉದ್ಯೋಗಿಯು ತನ್ನ 6 ತಿಂಗಳ ಮೂಲ ವೇತನ- ತುಟ್ಟಿ ಭತ್ಯೆ ಅಥವಾ ತನ್ನ ಸಂಪೂರ್ಣ ಹೂಡಿಕೆ ಹಣ ,ಇವೆರಡರ ಪೈಕಿ ಯಾವುದು ಕಡಿಮೆ ಇದೆ ಅಷ್ಟು ಹಣ ಪಡೆದುಕೊಳ್ಳಬಹುದಾಗಿದೆ. ಈ ಕಾರಣಕ್ಕೆ ಮುಂಗಡ ಹಣ ಪಡೆಯಲು ಯಾವುದೇ ಸೇವಾವಧಿ ಇತಿಮಿತಿ ಇಲ್ಲ.

ಶಿಕ್ಷಣ: ಮಕ್ಕಳ 10ನೇ ತರಗತಿ ನಂತರದ ಶಿಕ್ಷಣದ ಉದ್ದೇಶಕ್ಕಾಗಿ ಇಪಿಎಫ್‌ನಿಂದ ಉದ್ಯೋಗಿಯು ತನ್ನ ಹೂಡಿಕೆಯ ಶೇ 50 ರಷ್ಟು ಪಾಲನ್ನು (ಬಡ್ಡಿ ಸೇರಿ) ಪಡೆದುಕೊಳ್ಳಬಹುದಾಗಿದೆ. ಈ ರೀತಿ ಮೂರು ಬಾರಿ ಹಣ ಪಡೆಯಲು ಇಪಿಎಫ್ಒ ಅವಕಾಶ ನೀಡುತ್ತದೆ. ಆದರೆ ಶಿಕ್ಷಣದ ಉದ್ದೇಶಕ್ಕೆ ಮುಂಗಡ ಹಣ ಪಡೆಯಬೇಕಾದರೆ ಕನಿಷ್ಠ 7 ವರ್ಷ ಸೇವಾವಧಿ ಪೂರೈಸಿರಬೇಕು.

ಮದುವೆ: ಮದುವೆಯ ವೈಯಕ್ತಿಕ ಖರ್ಚಿನ ನಿರ್ವಹಣೆಗೆ, ಮಗ/ಮಗಳು/ತಂಗಿ/ತಮ್ಮನ ಮದುವೆ ಉದ್ದೇಶಕ್ಕಾಗಿ ಇಪಿಎಫ್‌ನಿಂದ
ಉದ್ಯೋಗಿಯು ತನ್ನ ಹೂಡಿಕೆಯ ಶೇ 50 ರಷ್ಟು ಪಾಲನ್ನು (ಬಡ್ಡಿ ಸೇರಿ) ಪಡೆದುಕೊಳ್ಳಬಹುದಾಗಿದೆ. ಈ ರೀತಿ ಮೂರು ಬಾರಿ ಹಣ ಪಡೆಯಲು ಇಪಿಎಫ್ಒ ಅವಕಾಶ ನೀಡುತ್ತದೆ. ಆದರೆ ಮದುವೆ ಉದ್ದೇಶಕ್ಕೆ ಮುಂಗಡ ಹಣ ಪಡೆಯಬೇಕಾದರೆ ಕನಿಷ್ಠ 7 ವರ್ಷ ಸೇವೆ ಸಲ್ಲಿಸಿರಬೇಕು.

ಮನೆ ನಿರ್ಮಾಣ, ಖರೀದಿ, ಸಾಲ ಮರುಪಾವತಿ: ಐದು ವರ್ಷ ಪೂರೈಸಿರುವ ಇಪಿಎಫ್ ಖಾತೆದಾರರು ಮನೆ ಖರೀದಿ, ಸೈಟ್ ಖರೀದಿ, ಮನೆ ನಿರ್ಮಾಣ, ಫ್ಲ್ಯಾಟ್ ಖರೀದಿಗೆ ಕೆಲ ನಿಬಂಧನೆಗಳೊಂದಿಗೆ ಮುಂಗಡ ಹಣ ಪಡೆಯಬಹುದು. ಮನೆಯ ಉದ್ದೇಶಕ್ಕಾಗಿ 36 ತಿಂಗಳ ಮೂಲ ವೇತನದ ಜತೆ ತುಟ್ಟಿ ಭತ್ಯೆ, ಅಥವಾ ಬಡ್ಡಿ ಒಳಗೊಂಡ ಉದ್ಯೋಗಿ ಮತ್ತು ಉದ್ಯೋಗದಾತರ ಹೂಡಿಕೆ ಪಾಲು, ಅಥವಾ ಮನೆ ಖರೀದಿಗೆ ತಗಲುವ ಒಟ್ಟು ವೆಚ್ಚವನ್ನು ಪಡೆದುಕೊಳ್ಳಬಹುದು.

ಈ ಮುಂಗಡ ಹಣ ಪಡೆಯಲು ಇಪಿಎಫ್ ಖಾತೆದಾರ ಅಥವಾ ಆತನ ಪತ್ನಿ ಅಥವಾ ಇಬ್ಬರ ಹೆಸರಿನಲ್ಲೂ ಜಂಟಿಯಾಗಿ ಆಸ್ತಿ ಖರೀದಿಸಬೇಕು.ಈಗಾಗಲೇ ಅಸ್ತಿತ್ವದಲ್ಲಿರುವ ಮನೆ ಸಾಲ ಮರುಪಾವತಿಗೂ ಪಿಎಫ್ ಖಾತೆಯಿಂದ ಹಣ ತೆಗೆಯಬಹುದು. ಇದಲ್ಲದೆ ಮನೆ ದುರಸ್ತಿ ಮತ್ತು ನವೀಕರಣಕ್ಕೂ ಇಪಿಎಫ್‌ನಿಂದ ಹಣ ಪಡೆಯಬಹುದು.

ನಿರುದ್ಯೋಗ: ಒಂದು ತಿಂಗಳಿಗಿಂತ ಹೆಚ್ಚು ದಿನಗಳ ಕಾಲ ನಿರುದ್ಯೋಗಿಯಾಗಿದ್ದ ಪಕ್ಷದಲ್ಲಿ ಇಪಿಎಫ್ ಖಾತೆದಾರ ಶೇ 75 ರಷ್ಟು ಹೂಡಿಕೆ ಹಣವನ್ನು ಹಿಂಪಡೆದುಕೊಳ್ಳಬಹುದು.

ನಿವೃತ್ತಿ: ಇಪಿಎಫ್‌ನಿಂದ ಶೇ 90 ರ ವರೆಗೆ ಹಣ ಪಡೆಯಲು ಖಾತೆದಾರ 54 ವರ್ಷ ಪೂರೈಸಿರಬೇಕು.

ಇತರೆ: ಮೇಲೆ ತಿಳಿಸಿರುವ ಉದ್ದೇಶಗಳನ್ನು ಹೊರತುಪಡಿಸಿ ದೈಹಿಕ ಅಥವಾ ಮಾನಸಿಕ ಅಸಮರ್ಥತೆ, ಉತ್ತಮ ಉದ್ಯೋಗಕ್ಕಾಗಿ ವಿದೇಶಕ್ಕೆ ವಲಸೆ ಅಥವಾ ವಿದೇಶದಲ್ಲಿ ನೆಲೆಸುವುದಕ್ಕೆ ಹಣ ಹಿಂಪಡೆಯಬಹುದು.

ಸೆನ್ಸೆಕ್ಸ್ ಹೊಸ ದಾಖಲೆಗೆ ಕಾರಣಗಳೇನು?
ಷೇರುಪೇಟೆ ಸಂವೇದಿ ಸೂಚ್ಯಂಕ 40,392 ಅಂಶಗಳಿಗೆ ತಲುಪುವ ಮೂಲಕ ಹೊಸ ದಾಖಲೆ ಬರೆದಿದೆ. ವಾರಾಂತ್ಯಕ್ಕೆ ಸೆನ್ಸೆಕ್ಸ್ ಶೇ 2.8 ರಷ್ಟು ಏರಿಕೆ ಕಂಡು 40,165 ಅಂಶಗಳಲ್ಲಿ ವಹಿವಾಟು ಮುಗಿಸಿದ್ದರೆ, ನಿಫ್ಟಿ ಶೇ 2.6 ರಷ್ಟು ಏರಿಕೆ ದಾಖಲಿಸಿ 11.891 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದೆ. ಕಳೆದ ವಾರ ಭಾರತದ ಮಾರುಕಟ್ಟೆಗೆ ಸುಮಾರು ₹ 11,103.95 ಕೋಟಿ ವಿದೇಶಿ ಬಂಡವಾಳ ಹರಿದುಬಂದಿದೆ.

ವಲಯವಾರು: ವಲಯವಾರು ಪ್ರಗತಿಯಲ್ಲಿ ನಿಫ್ಟಿ ಮಾಧ್ಯಮ ವಲಯ ಶೇ 11 ರಷ್ಟು ಏರಿಕೆ ಕಂಡಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 10.5, ಲೋಹ ವಲಯ ಶೇ 6, ವಾಹನ ವಲಯ ಶೇ 5, ಮಾಹಿತಿ ತಂತ್ರಜ್ಞಾನ ಶೇ 3.8 ಮತ್ತು ನಿಫ್ಟಿ ಬ್ಯಾಂಕ್ ವಲಯ ಶೇ 3 ರಷ್ಟು ಏರಿಕೆ ದಾಖಲಿಸಿವೆ.

ಹೊಸ ದಾಖಲೆಗೆ ಕಾರಣ: ನವರಾತ್ರಿ ಮತ್ತು ದೀಪಾವಳಿ ಸಂದರ್ಭದಲ್ಲಿ ಖರೀದಿ ಭರಾಟೆ, ಕಾರ್ಪೊರೇಟ್ ತೆರಿಗೆಯಿಂದ ಕೆಲ ಪ್ರಮುಖ ಕಂಪನಿಗಳ ಲಾಭಾಂಶದಲ್ಲಿ ಹೆಚ್ಚಳ, ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್‌ 2019 ರಲ್ಲಿ ಮೂರನೇ ಬಾರಿಗೆ ಬಡ್ಡಿ ಡರ ಕಡಿತ ಮಾಡಿರುವುದು ಸೇರಿದಂತೆ ಇನ್ನು ಕೆಲ ಪ್ರಮುಖ ಬೆಳವಣಿಗೆಗಳು ಸೆನ್ಸೆಕ್ಸ್‌ನ ಹೊಸ ದಾಖಲೆಗೆ ಕಾರಣವಾಗಿವೆ.

ಸುಮಾರು 400 ಕಂಪನಿಗಳು 2ನೇ ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿದ್ದು , ಕಾರ್ಪೊರೇಟ್ ತೆರಿಗೆ ಕಡಿತದ ಪರಿಣಾಮದಿಂದ ಹಲವು ಕಂಪನಿಗಳ ಲಾಭಾಂಶದಲ್ಲಿ ಹೆಚ್ಚಳವಾಗಿದೆ. ಇನ್ನು ಅಮೆರಿಕದಲ್ಲಿ ಮೂಲ ಬಡ್ಡಿ ದರ ಶೇ 1.50 ರಿಂದ ಶೇ 1.75 ರ ಮಟ್ಟಿಕ್ಕೆ ತಲುಪಿರುವುದರಿಂದ ಹೂಡಿಕೆದಾರರಿಗೆ ಕಡಿಮೆ ಬಡ್ಡಿ ದರಕ್ಕೆ ಸಾಲ ಲಭ್ಯವಾಗುತ್ತಿದ್ದು, ಭಾರತದಂತಹ ಪ್ರಮುಖ ಮಾರುಕಟ್ಟೆಗಳಿಗೆ ಬಂಡವಾಳ ಹೂಡಿಕೆ ಹೆಚ್ಚಾಗಲಿದೆ.

ಗಳಿಕೆ-ಇಳಿಕೆ: ಟಾಟಾ ಮೋಟರ್ಸ್, ಯೆಸ್ ಬ್ಯಾಂಕ್, ಇಂಡಿಯಾ ಬುಲ್ಸ್ ಹೌಸಿಂಗ್, ಎಸ್‌ಬಿಐ, ಟಾಟಾ ಸ್ಟೀಲ್ ಷೇರುಗಳು ಶೇ 10 ರಿಂದ ಶೇ 38 ರಷ್ಟು ಜಿಗಿದಿವೆ. ಎರಡನೇ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ಹೆಚ್ಚು ಗಳಿಕೆ ದಾಖಲಿಸಿದ ಕಾರಣ ಟಾಟಾ ಮೋಟರ್ಸ್ ಶೇ 38 ರಷ್ಟು ಏರಿಕೆಯಾಗಿದೆ. ಸಮಸ್ಯೆಗಳ ಮಧ್ಯೆ ಯೆಸ್ ಬ್ಯಾಂಕ್ ಶೇ 28 ರಷ್ಟು ಏರಿಕೆ ಕಂಡಿದೆ. ಭಾರ್ತಿ ಇನ್ಫ್ರಾಟೆಲ್, ಪವರ್ ಗ್ರಿಡ್, ಟೈಟಾನ್‌, ಅದಾನಿ ಪೋರ್ಟ್ಸ್, ಏಷ್ಯನ್ ಪೇಂಟ್ಸ್ ಷೇರುಗಳು ಶೇ 1.5 ರಿಂದ ಶೇ 6.6 ರಷ್ಟು ಕುಸಿದಿವೆ.

ಮುನ್ನೋಟ: ಈ ವಾರ ಟೆಕ್ ಮಹೀಂದ್ರಾ, ಟೈಟಾನ್, ಟಾಟಾ ಸ್ಟೀಲ್, ಸಿಪ್ಲಾ, ಬಿಪಿಸಿಎಲ್, ಪವರ್ ಗ್ರಿಡ್, ಸನ್ ಫಾರ್ಮಾ, ಗೇಲ್, ಐಷರ್ ಎನ್‌ಟಿಪಿಸಿ ಸೇರಿ ಪ್ರಮುಖ ಕಂಪನಿಗಳ ತ್ರೈಮಾಸಿಕ ಫಲಿತಾಂಶ ಹೊರಬೀಳಲಿದೆ. ಸೆನ್ಸೆಕ್ಸ್ 40,392 ಅಂಶಗಳಷ್ಟು ಏರಿಕೆ ಕಾಣುವ ಮೂಲಕ ಹೊಸ ದಾಖಲೆ ಬರೆದ ಮರುದಿನವೇ 40,165 ಕ್ಕೆ ಇಳಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ಕಂಪನಿಗಳು, ಲೋಹ ಕಂಪನಿಗಳು ಮತ್ತು ವಾಹನ ತಯಾರಿಕಾ ಕಂಪನಿ ಷೇರುಗಳು ಈ ವಾರ ಒಂದು ಹಂತದ ಚೇತರಿಕೆ ಕಾಣುವ ನಿರೀಕ್ಷೆಯಿದೆ. ಮಧ್ಯಮ ಮತ್ತು ಸಣ್ಣ ಶ್ರೇಣಿಯ ಷೇರುಗಳಲ್ಲೂ ಚೇತರಿಕೆ ಕಂಡುಬಂದಿರುವುದು ಆಶಾದಾಯಕವಾಗಿದೆ.

(ಲೇಖಕ: ಇಂಡಿಯನ್ ಮನಿಡಾಟ್ ಕಾಂ ಉಪಾಧ್ಯಕ್ಷ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು