ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮಾರುಕಟ್ಟೆ: ಹೊಸಬರಿಗೆ ಯಾವ ಫಂಡ್ ಸೂಕ್ತ?

Last Updated 6 ನವೆಂಬರ್ 2022, 19:31 IST
ಅಕ್ಷರ ಗಾತ್ರ

‘ಮ್ಯೂಚುವಲ್ ಫಂಡ್ ಹೂಡಿಕೆಗೆ ನಾನು ಹೊಸಬ. ಆದರೆ ಮ್ಯೂಚುವಲ್ ಫಂಡ್‌ನಲ್ಲಿ ಎಸ್ಐಪಿ (ವ್ಯವಸ್ಥಿತ ಹೂಡಿಕೆ ಯೋಜನೆ) ಆರಂಭಿಸಬೇಕು ಅಂದುಕೊಂಡಿದ್ದೇನೆ. ಅತ್ಯಂತ ಕಡಿಮೆ ರಿಸ್ಕ್ ಇರುವ ಮ್ಯೂಚುವಲ್ ಫಂಡ್‌ಗಳ ಬಗ್ಗೆ ತಿಳಿಸಬಹುದೇ’ ಎಂದು ಅನೇಕರು ಕೇಳುತ್ತಾರೆ. ಅವರೆಲ್ಲರಿಗೂ ನಾನು ಸೂಚಿಸುವುದು ಇಂಡೆಕ್ಸ್ ಫಂಡ್‌ಗಳನ್ನು.

ಮ್ಯೂಚುವಲ್ ಫಂಡ್ ಬಗ್ಗೆ ಹೆಚ್ಚು ಅರಿವಿಲ್ಲ ಎನ್ನುವವರೂ ಇಂಡೆಕ್ಸ್ ಫಂಡ್‌ಗಳಲ್ಲಿ ಹೂಡಿಕೆ ಶುರು ಮಾಡಬಹುದು. ಹಾಗಾದರೆ ಏನಿದು ಇಂಡೆಕ್ಸ್ ಫಂಡ್, ಇದರಲ್ಲಿ ಹೂಡಿಕೆ ಹೇಗೆ ಎನ್ನುವುದನ್ನು ಕಲಿಯೋಣ.

ದೇಶದ ಷೇರು ಮಾರುಕಟ್ಟೆಯ ಎರಡು ಪ್ರಮುಖ ಸೂಚ್ಯಂಕಗಳು (ಇಂಡೆಕ್ಸ್) ಮುಂಬೈ ಷೇರುಪೇಟೆಯನ್ನು ಪ್ರತಿನಿಧಿಸುವ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆಯನ್ನು ಪ್ರತಿನಿಧಿಸುವ ನಿಫ್ಟಿ. ಸೆನ್ಸೆಕ್ಸ್ ಸೂಚ್ಯಂಕವು ಆಯ್ದ ಪ್ರಮುಖ 30 ಕಂಪನಿಗಳ ಷೇರು ಬೆಲೆ ಏರಿಳಿತ ಆಧರಿಸಿ, ಷೇರುಪೇಟೆಯ ಒಟ್ಟು ಏರಿಳಿತವನ್ನು ಹೇಳುತ್ತದೆ. ಹಾಗೆಯೇ ನಿಫ್ಪಿ ಸೂಚ್ಯಂಕವು ರಾಷ್ಟ್ರೀಯ ಷೇರುಪೇಟೆಯ ಪ್ರಮುಖ 50 ಕಂಪನಿಗಳ ಷೇರು ಬೆಲೆ ಏರಿಳಿತವನ್ನು ಗಣನೆಗೆ ತೆಗೆದುಕೊಂಡು ಇಡೀಷೇರುಪೇಟೆಯು ಸಕಾರಾತ್ಮಕವಾಗಿಯೋ ನಕಾರಾತ್ಮಕವಾಗಿದೆಯೋ ಎಂಬುದನ್ನು ತಿಳಿಸುತ್ತದೆ.

ಸೂಚ್ಯಂಕಗಳನ್ನು ಯಥಾವತ್ತಾಗಿ ಅನುಕರಿಸಿ ಕೆಲವು ಮ್ಯೂಚುವಲ್ ಫಂಡ್‌ಗಳನ್ನು ರೂಪಿಸಲಾಗಿದೆ. ಅಂತಹ ಫಂಡ್‌ಗಳನ್ನು ಇಂಡೆಕ್ಸ್ ಮ್ಯೂಚುವಲ್ ಫಂಡ್ ಎಂದು ಕರೆಯುತ್ತಾರೆ.

ಉದಾಹರಣೆಗೆ ನಿಫ್ಟಿ ಸೂಚ್ಯಂಕದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೊಸಿಸ್, ರಿಲಯನ್ಸ್, ಹಿಂದೂಸ್ಥಾನ್ ಯುನಿಲಿವರ್, ಐಸಿಐಸಿಐ ಬ್ಯಾಂಕ್ ಸೇರಿದಂತೆ ಹಲವು ವಲಯಗಳ ಒಟ್ಟು 50 ಪ್ರಾತಿನಿಧಿಕ ಕಂಪನಿಗಳಿವೆ. ಈ ಸೂಚ್ಯಂಕದಲ್ಲಿರುವ ಎಲ್ಲ 50 ಕಂಪನಿಗಳನ್ನು ಯಥಾವತ್ತಾಗಿ ಒಳಗೊಂಡು ಒಂದು ಮ್ಯೂಚುವಲ್ ಫಂಡ್ ರೂಪಿಸಿ ಹೂಡಿಕೆ ಮಾಡುವ ವ್ಯವಸ್ಥೆಯೇ ಇಂಡೆಕ್ಸ್ ಮ್ಯೂಚುವಲ್ ಫಂಡ್. ಇಂಡೆಕ್ಸ್ ಫಂಡ್‌ಗಳಲ್ಲಿ ಫಂಡ್ ಮ್ಯಾನೇಜರ್‌ಗೆ ಹೆಚ್ಚಿನ ಕೆಲಸ ಇಲ್ಲದ ಕಾರಣ ಇಲ್ಲಿ ನಿರ್ವಹಣಾ ಶುಲ್ಕ ಕಡಿಮೆ.

ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳ ವೆಚ್ಚ ಅನುಪಾತ (ಎಕ್ಸ್‌ಪೆನ್ಸ್ ರೇಷ್ಯೊ) ಶೇ 1.5ರಷ್ಟಿದ್ದರೆ ಇಂಡೆಕ್ಸ್ ಫಂಡ್‌ ವೆಚ್ಚ ಅನುಪಾತ ಶೇ 0.2ರಷ್ಟು ಮಾತ್ರ. ಶುಲ್ಕ ಕಡಿಮೆ ಇರುವುದರಿಂದ ಇಲ್ಲಿ ಹೂಡಿಕೆದಾರನಿಗೆ ಹೆಚ್ಚು ಲಾಭ ಸಿಗುತ್ತದೆ. ಷೇರು ಮಾರುಕಟ್ಟೆ ಎಷ್ಟು ಪ್ರಮಾಣದಲ್ಲಿ ಏರಿಕೆ ಕಾಣುವುದೋ ಅಷ್ಟೇ ಲಾಭ ಸಿಕ್ಕಿದರೆ ಸಾಕು, ಹೆಚ್ಚು ರಿಸ್ಕ್ ತೆಗೆದುಕೊಳ್ಳುವುದಿಲ್ಲ ಎನ್ನುವವರಿಗೆ ಇಂಡೆಕ್ಸ್ ಫಂಡ್ ಒಳ್ಳೆಯ ಆಯ್ಕೆ.

ಇಂಡೆಕ್ಸ್ ಫಂಡ್‌ಗಳು ಹತ್ತಾರು ವಲಯಗಳನ್ನು ಪ್ರತಿನಿಧಿಸುವ ಕಂಪನಿಗಳಲ್ಲಿ ಹಣ ತೊಡಗಿಸುವುದರಿಂದ ಹೂಡಿಕೆಯಲ್ಲಿ ವೈವಿಧ್ಯ ಕಾಯ್ದುಕೊಳ್ಳಬಹುದು.

ಇವು ಪ್ಯಾಸಿವ್ ಫಂಡ್‌ಗಳು: ಪ್ಯಾಸಿವ್ ಫಂಡ್‌ಗಳಲ್ಲಿ ಹೂಡಿಕೆ ನಿರ್ಧಾರವನ್ನು ಫಂಡ್ ನಿರ್ವಾಹಕ ತೆಗೆದುಕೊಳ್ಳುವುದಿಲ್ಲ. ಸೂಚ್ಯಂಕದ ಭಾಗವಾಗಿರುವ ಕಂಪನಿಗಳ ಷೇರುಗಳೇ ಇಂಡೆಕ್ಸ್ ಫಂಡ್‌ನ ಭಾಗವೂ ಆಗಿರುತ್ತವೆ. ಹೀಗಾಗಿ ಇಂಡೆಕ್ಸ್ ಫಂಡ್, ಪ್ಯಾಸಿವ್ ಫಂಡ್ ಎನಿಸಿಕೊಳ್ಳುತ್ತದೆ.

ಲಾಭ ಜಾಸ್ತಿ ಎಲ್ಲಿ?: ಆ್ಯಕ್ಟಿವ್‌ ಫಂಡ್‌ಗಳು ಇಂಡೆಕ್ಸ್‌ ಫಂಡ್‌ಗಳಿಗಿಂತ ಹೆಚ್ಚು ಲಾಭ ನೀಡುತ್ತವೆ. ಆದರೆ ಆ್ಯಕ್ಟಿವ್‌ ಫಂಡ್‌ಗಳ ಪೈಕಿ ಯಾವ ಫಂಡ್ ಉತ್ತಮವಾಗಿ ಲಾಭ ನೀಡುತ್ತಿದೆ ಎನ್ನುವುದನ್ನು ನೀವು ನಿರಂತರವಾಗಿ ಗಮನಿಸುತ್ತಿರಬೇಕು. ಕೆಲವು ವರ್ಷಗಳ ಹಿಂದೆ ಹೆಚ್ಚು ಲಾಭ ಕೊಡುತ್ತಿದ್ದ ಫಂಡ್‌ಗಳು ಈಗ ಉತ್ತಮ ಪ್ರಮಾಣದಲ್ಲಿ ಲಾಭ ತಂದುಕೊಡುತ್ತಿಲ್ಲದಿರಬಹುದು. ಇನ್ನು ಕೆಲವು ಆ್ಯಕ್ಟಿವ್‌ ಫಂಡ್‌ಗಳು ಹಿಂದೆ ಚೆನ್ನಾಗಿ ಲಾಭ ತಂದುಕೊಡದಿದ್ದರೂ, ಈಗ ಲಾಭದ ಓಟದಲ್ಲಿ ಇದ್ದಿರಬಹುದು. ಈ ರೀತಿಯ ತಲೆನೋವು ಬೇಡ, ಹೂಡಿಕೆ ರಿಸ್ಕ್ ಕಡಿಮೆಯಿದ್ದರೆ ಒಳ್ಳೆಯದು ಎನ್ನುವವರು ಇಂಡೆಕ್ಸ್ ಫಂಡ್ ಹೂಡಿಕೆ ಪರಿಗಣಿಸಬಹುದು.

ಸತತ ಗಳಿಕೆ ದಾಖಲಿಸಿದ ಷೇರುಪೇಟೆ: ಷೇರುಪೇಟೆ ಸೂಚ್ಯಂಕಗಳು ಸತತ ಮೂರನೇ ವಾರ ಗಳಿಕೆ ದಾಖಲಿಸಿವೆ. 60,950 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 1.65ರಷ್ಟು ಗಳಿಸಿದೆ. 18,117 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 1.86ರಷ್ಟು ಜಿಗಿದಿದೆ. ತ್ರೈಮಾಸಿಕ ಫಲಿತಾಂಶಗಳಲ್ಲಿ ಕಂಪನಿಗಳ ಉತ್ತಮ ಸಾಧನೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಖರೀದಿ ಭರಾಟೆ, ರೂಪಾಯಿ ಮೌಲ್ಯದಲ್ಲಿ ಅಲ್ಪಾವಧಿಯಲ್ಲಿ ಕಂಡುಬಂದ ಸ್ಥಿರತೆ ಸೇರಿ ಹಲವು ಅಂಶಗಳು ಮಾರುಕಟ್ಟೆ ಜಿಗಿತಕ್ಕೆ ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಲೋಹ ಸೂಚ್ಯಂಕ ಶೇ 7.5ರಷ್ಟು ಜಿಗಿದಿದೆ. ಫಾರ್ಮಾ ವಲಯ, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ವಲಯ, ತೈಲ ಮತ್ತು ಅನಿಲ ವಲಯಗಳು ತಲಾ ಶೇ 3ರಷ್ಟು ಹೆಚ್ಚಳ ದಾಖಲಿಸಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಕಳೆದ ವಾರ ₹ 10,388.72 ಕೋಟಿ ಮೌಲ್ಯದ ಷೇರು ಖರೀದಿಸಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 4,496.06 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದ್ದಾರೆ.

ಬಿಎಸ್ಇ ಲಾರ್ಜ್ ಕ್ಯಾಪ್‌ನಲ್ಲಿ ಅದಾನಿ ಎಂಟರ್‌ಪ್ರೈಸಸ್, ವೇದಾಂತ, ಬಜಾಜ್ ಫಿನ್‌ಸರ್ವ್, ಅದಾನಿ ಟೋಟಲ್ ಗ್ಯಾಸ್, ಅಂಬುಜಾ ಸಿಮೆಂಟ್ಸ್, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಹಿಂಡಾಲ್ಕೊ ಇಂಡಸ್ಟ್ರೀಸ್ ಗಳಿಕೆ ದಾಖಲಿಸಿವೆ.

ಬಿಎಸ್ಇ ಮಿಡ್ ಕ್ಯಾಪ್ ಸೂಚ್ಯಂಕ ಶೇ 2.4ರಷ್ಟು ಗಳಿಕೆ ಕಂಡಿದ್ದು ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ದಾಲ್ಮಿಯಾ ಭಾರತ್, ರಾಜೇಶ್ ಎಕ್ಸ್‌ಪೋರ್ಟ್ಸ್, ಡೆಲಿವರಿ, ಸುಪ್ರೀಂ ಇಂಡಸ್ಟ್ರೀಸ್, ಎಬಿಬಿ ಇಂಡಿಯಾ ಮತ್ತು ಟ್ಯೂಬ್ ಇನ್ವೆಸ್ಟ್ಮೆಂಟ್ಸ್ ಗಳಿಕೆ ಕಂಡಿವೆ. ಎಲ್‌ಐಸಿ ಹೌಸಿಂಗ್ ಫೈನಾನ್ಸ್, ನೆರೋಲ್ಯಾಕ್ ಪೇಂಟ್ಸ್, ಅಪೋಲೊ ಹಾಸ್ಪಿಟಲ್ಸ್ ಎಂಟರ್‌ಪ್ರೈಸಸ್, ಅಜಂತಾ ಫಾರ್ಮಾ, ಪಿಬಿ ಫಿನ್‌ಟೆಕ್ ಮತ್ತು ಆದಿತ್ಯ ಬಿರ್ಲಾ ಫ್ಯಾಷನ್ ಆ್ಯಂಡ್‌ ರಿಟೇಲ್ ಶೇ 4ರಿಂದ ಶೇ 11ರಷ್ಟು ಕುಸಿದಿವೆ.

ಬಿಎಸ್ಇ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 1.4ರಷ್ಟು ಸುಧಾರಿಸಿದೆ. ಕರ್ಣಾಟಕ ಬ್ಯಾಂಕ್, ಲ್ಯಾನ್ಸರ್ ಕಂಟೇನರ್ ಲೈನ್ಸ್, ಪಿಡಿಎಸ್, ರಿಲಯನ್ಸ್ ಕಮ್ಯೂನಿಕೇಷನ್ಸ್, ಮೆಜಗಾನ್ ಡಾಕ್ ಶಿಪ್ ಬಿಲ್ಡರ್ಸ್, ಸಿಯಾರಾಮ್ ಸಿಲ್ಕ್ ಮಿಲ್ಸ್ ಶೇ 20ರಿಂದ ಶೇ 45ರಷ್ಟು ಗಳಿಕೆ ಕಂಡಿವೆ. ಮತ್ತೊಂದೆಡೆ ಮಂಗಳೂರು ಕೆಮಿಕಲ್ಸ್, ಕ್ರೆಸಂಡಾ ಸಲ್ಯೂಷನ್, ಇಂಟಲೆಕ್ಟ್ ಡಿಸೈನ್ ಅರೀನಾ, ಸ್ಪೋರ್ಟ್ ಕಿಂಗ್ ಇಂಡಿಯಾ, ಅಪೆಕ್ಸ್ ಫ್ರೋಜನ್ ಫ್ರುಟ್ಸ್, ವಿಷ್ಣು ಕೆಮಿಕಲ್ಸ್, ಟಾರ್ಸ್ ಪೋರ್ಟ್ ಕಾರ್ಪೊರೇಷನ್ ಅಪ್ ಇಂಡಿಯಾ, ಫಿನೋಟೆಕ್ಸ್ ಕೆಮಿಕಲ್ ಶೇ 10ರಿಂದ ಶೇ 28ರಷ್ಟು ಇಳಿಕೆಯಾಗಿವೆ.

ಮುನ್ನೋಟ: ಈ ವಾರ ಆರ್ಕಿಡ್ ಪ್ಲೈ, ಅಫೆಲ್, ಎಬಿ ಕ್ಯಾಪಿಟಲ್, ಬಿಪಿಸಿಎಲ್, ಸಿಸಿಸಿಎಲ್, ಸಿಯೇಟ್ ಲಿ., ಕೋಲ್ ಇಂಡಿಯಾ, ಡಿವೀಸ್ ಲ್ಯಾಬ್ಸ್, ಗ್ರೀನ್ ಪ್ಲೈ, ಪೇಟಿಎಂ, ಪಾಲಿಸಿ ಬಜಾರ್, ಪ್ರಿಸಿಷನ್, ಉಜ್ಜೀವನ್ ಸ್ಮಾಲ್ ಫೈನಾನ್ಸ್ ಕಾರ್ಪೊರೇಷನ್, ಎನ್‌ಸಿಸಿ, ಸ್ಟವ್ ಕ್ರಾಫ್ಟ್, ಬಿಇಎಂಎಲ್, ಗೋದ್ರೇಜ್ ಪ್ರಾಪರ್ಟಿಸ್, ಎನ್‌ಡಿಟಿವಿ, ಟಾಟಾ ಮೋಟರ್ಸ್, ಅದಾನಿ ಗ್ರೀನ್, ನೀಲ್ ಕಮಲ್, ಅಶೋಕ್ ಲೇಲೆಂಡ್, ಐಟಿಡಿಸಿ, ಕಾಫಿ ಡೇ, ಎಚ್‌ಸಿಜಿ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

(ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT