ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಸಂಗೀತದ ಸಾತ್ವಿಕ ಜೋಡಿ

Last Updated 30 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬಾಂಬೆ ಸಹೋದರಿಯರು’ ಎಂದೇ ಖ್ಯಾತರಾಗಿರುವ ಸಿ. ಸರೋಜಾ ಮತ್ತು ಸಿ. ಲಲಿತಾ ಅವರದ್ದು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅಚ್ಚಳಿಯದ ಹೆಸರು. ಈ ಸೋದರಿಯರ ಯುಗಳ ನಾದ ಲಹರಿ ಎಂಥವರನ್ನೂ ಸೆಳೆದುಕೊಳ್ಳುತ್ತದೆ. ಕನ್ನಡ, ಸಂಸ್ಕೃತ, ತೆಲುಗು, ಮರಾಠಿ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ನೂರಾರು ಗೀತೆಗಳ ದನಿಯಾದ ಈ ಜೋಡಿ 1950ರ ದಶಕದಿಂದಲೂ ಸಂಗೀತ ಲೋಕದಲ್ಲಿ ಸಕ್ರಿಯವಾಗಿದೆ.

‘ಇನ್ನೂ ದಯ ಬಾರದೆ’, ‘ಕರೆದರೆ ಬರಬಾರದೇ ಗುರುವೇ’ ಈ ಜೋಡಿಯ ಸಿಗ್ನೇಚರ್ ಗೀತೆಗಳೆಂದೇ ಖ್ಯಾತಿ ಪಡೆದಿವೆ. ಬಾಲಕೃಷ್ಣನ ತುಂಟತನಗಳನ್ನು ಅಧ್ಯಾತ್ಮದ ನೆಲೆಗಟ್ಟಿನಲ್ಲಿ ಪರಿಶೀಲಿಸುವ
‘ಆಡ ಹೋದಲ್ಲೇ ಮಕ್ಕಳು’ ಕೀರ್ತನೆ ಈ ಜೋಡಿಯ ಖ್ಯಾತಿ ಹೆಚ್ಚಿಸಿದ ಮತ್ತೊಂದು ಕೃತಿ. ಕರ್ನಾಟಕ ಸಂಗೀತ ಅಭ್ಯಾಸ ಮಾಡುವವರ ‘ಆಲ್ ಟೈಂ ಫೇವರೀಟ್’ ಗೀತೆ ಇದು.

ಸುದೀರ್ಘ ಕಾಲದಿಂದ ಕಂಠಶುದ್ಧಿಯ ಜತೆಗೆ ಶಾಸ್ತ್ರೀಯ ಸಂಗೀತದ ಸಂಪ್ರದಾಯವನ್ನು ಅಚ್ಚುಕಟ್ಟಾಗಿ ಕಾಪಾಡಿಕೊಂಡು ಬಂದಿರುವ ‘ಬಾಂಬೆ ಸಹೋದರಿಯರು’ ಶ್ರೀರಾಮ ಸೇವಾ ಮಂಡಳಿ ಟ್ರಸ್ಟ್ ನೀಡುತ್ತಿರುವ ಎಸ್‌.ವಿ.ನಾರಾಯಣಸ್ವಾಮಿ ರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಂಬೆ ಸಹೋದರಿಯರನ್ನು ಹತ್ತಿರದಿಂದ ಬಲ್ಲ ಸಂಗೀತ ವಿದ್ವಾಂಸರು ತಮ್ಮ ನೆನಪುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಸಾತ್ವಿಕ ಜೋಡಿ
ಕನ್ನಡ ದೇವರನಾಮಗಳನ್ನು ಹಾಡುವುದರಲ್ಲಿ ಮುಂಚೂಣಿಯಲ್ಲಿರುವ ಯುಗಳ ಜೋಡಿ ಇದು. ಬೆರಕೆಯ ಸಂಗೀತ ಇವರದ್ದಲ್ಲ. ಆಮಿಷಕ್ಕಾಗಿ ಶಾಸ್ತ್ರೀಯತೆಯನ್ನು ಬಲಿ ಕೊಡುವಂಥ ವ್ಯಕ್ತಿತ್ವವೂ ಇವರದ್ದಲ್ಲ. ಕರ್ನಾಟಕ ಸಂಗೀತದ ಶಾಸ್ತ್ರೀಯತೆಯನ್ನು ಸಂಪ್ರದಾಯಬದ್ಧವಾಗಿ ಕಾಪಾಡಿಕೊಂಡು ಬಂದ ಅಪರೂಪದ ಜೋಡಿ ಇದು. ಸಿ.ಲಲಿತಾ ಮತ್ತು ಸಿ. ಸರೋಜಾ ಅವರ ಸಂಗೀತದಲ್ಲಿ ಸಾತ್ವಿಕತೆ ಹೇಗೆ ಹಾಸುಹೊಕ್ಕಾಗಿದೆಯೋ ಅವರ ಬದುಕಿನಲ್ಲೂ ಸಾತ್ವಿಕತೆ ಇದೆ.

ಸಂಗೀತ ಕ್ಷೇತ್ರದಲ್ಲಿ ಸುದೀರ್ಘಾವಧಿಯವರೆಗೆ ತಮ್ಮತನವನ್ನು ಕಾಪಾಡಿಕೊಂಡು ಬರುವುದು ಕಷ್ಟವೇ ಸರಿ. ಆದರೆ, ಬಾಂಬೆ ಸಹೋದರಿಯರದ್ದು ಇದಕ್ಕೆ ವ್ಯತಿರಿಕ್ತ ಅನ್ನಬಹುದಾದ ಸಾಧನೆ. ಇಬ್ಬರೂ ಮೊದಲಿನಿಂದಲೂ ತಮ್ಮ ಕೆಲಸವನ್ನು ಬಹು ಅಚ್ಚುಕಟ್ಟಾಗಿ ಮಾಡಿಕೊಂಡು ಬಂದವರು.

ಬಾಂಬೆ ಸಹೋದರಿಯರು ಆಗಿನ ಕಾಲಕ್ಕೇ ಬೋಧಪ್ರದವಾದ ಕ್ಯಾಸೆಟ್‌ಗಳನ್ನು ಮಾಡಿ ಹೆಸರುವಾಸಿಯಾದರು. ಪುರಂದರದಾಸ, ತ್ಯಾಗರಾಜರ ಕೀರ್ತನೆ, ಪ್ರಚಾರದಲ್ಲಿರುವ ವರ್ಣಗಳನ್ನು ಕ್ಯಾಸೆಟ್ ರೂಪದಲ್ಲಿ ತಂದವರು ಇವರು.

ಸುದೀರ್ಘ ವರ್ಷಗಳ ಕಾಲ ಯುಗಳ ಸಂಗೀತವನ್ನು ನಡೆಸಿಕೊಂಡು ಬರುವುದು ಕಷ್ಟ. ಎಷ್ಟೋ ಬಾರಿ ಭಾವನೆಗಳಲ್ಲಿ ವ್ಯತ್ಯಾಸವಾಗುತ್ತಿರುತ್ತದೆ. ಮತ್ತೆ ಕೆಲವೊಮ್ಮೆ ಬಾಹ್ಯಶಕ್ತಿಗಳು ಈ ಸಂಗೀತಗಾರರ ಸಂಬಂಧವನ್ನೇ ಬೇರ್ಪಡಿಸುವ ಸಾಧ್ಯತೆ ಇರುತ್ತದೆ. ಆದರೆ, ಇವೆಲ್ಲವನ್ನೂ ಮೀರಿ ಬಾಂಬೆ ಸಹೋದರಿಯರು ಯಶಸ್ವಿ ಯುಗಳ ಜೋಡಿಯಾಗಿದ್ದಾರೆ. ಒಬ್ಬರೇ ಹಾಡುವಾಗ ತಪ್ಪಾದರೆ ನಿಭಾಯಿಸಬಹುದು. ಆದರೆ, ಯುಗಳ ಜೋಡಿಯಲ್ಲಿ ಆ ರೀತಿಯಲ್ಲಿ ಆಗಲ್ಲ. ಇಬ್ಬರೂ ಬದ್ಧತೆಯಿಂದ ಹಾಡಲೇಬೇಕು. ಎಲ್ಲೂ ರಾಜಿ ಮಾಡಿಕೊಳ್ಳುವಂತಿಲ್ಲ. ಒಬ್ಬರು ಮಾತ್ರ ಸಮರ್ಥರಿದ್ದು, ಮತ್ತೊಬ್ಬರು ಶಕ್ತಿಹೀನರಾದರೆ ಇಲ್ಲಿ ನಡೆಯದು. ಒಬ್ಬರಿಗೊಬ್ಬರು ಸೋಲದೇ ಏಕತ್ರವಾಗಿ ಹಾಡಿದಾಗ ಮಾತ್ರ ಅದು ಯುಗಳವಾಗುತ್ತದೆ. ಬಾಂಬೆ ಸಹೋದರಿಯರು ಪರಸ್ಪರ ತಮಗೆ ತಾವೇ ಸ್ಪರ್ಧಿಗಳು ಅನ್ನುವಷ್ಟು ಮಟ್ಟಿಗೆ ಒಂದೇ ದನಿಯಾಗಿ ಹಾಡುತ್ತಾರೆ.

ಸುಶ್ರಾವ್ಯ, ವ್ಯಾಕರಣ, ಲಯ, ರಾಗ, ಆಲಾಪ, ಜತಿ ಎಲ್ಲವೂ ಸುಮಧುರವಾಗಿ ಮೇಳೈಸುವುದೇ ಈ ಸಹೋದರಿಯರ ಸಂಗೀತದ ವಿಶೇಷ.

 – ಆರ್.ಕೆ. ಪದ್ಮನಾಭ, ಕರ್ನಾಟಕ ಸಂಗೀತ ಕಲಾವಿದ
**

ಕ್ಯಾಸೆಟ್ ಕ್ವೀನ್ಸ್‌

‘ಸಂಪ್ರದಾಯಬದ್ಧ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಹೆಸರುವಾಸಿಯಾದವರು ಬಾಂಬೆ ಸಹೋದರಿಯರು. ಅವರ ಧ್ವನಿಸುರುಳಿಗಳಿಂದಾಗಿ ‘ಕ್ಯಾಸೆಟ್ ಕ್ವೀನ್ಸ್’ ಅಂತ ಪ್ರಸಿದ್ಧರಾದವರು. ದೇವರನಾಮ, ಭಕ್ತಿ ಸಂಗೀತ, ಶಾಸ್ತ್ರೀಯ ಸಂಗೀತ ಹೀಗೆ ಎಲ್ಲ ರೀತಿಯ ಹಾಡುಗಳನ್ನು ಕ್ಯಾಸೆಟ್ ರೂಪದಲ್ಲಿ ಹೊರತಂದಿದ್ದಾರೆ. ಆ ಮೂಲಕ ಅನೇಕರಿಗೆ ಮಾರ್ಗದರ್ಶಕರಾಗಿದ್ದಾರೆ. ಮುಂದಿನ ಜನಾಂಗಕ್ಕೆ ಇದರಿಂದ ಬಹಳ ಉಪಯುಕ್ತವಾಗಿದೆ.

ಸುದೀರ್ಘ ಸಂಗೀತ ಪಯಣದಲ್ಲಿ ಯುಗಳ ಜೋಡಿಯಾಗಿ ಹೆಸರು ಮಾಡಿರುವುದು ವಿಶೇಷ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಮೂರ್ನಾಲ್ಕು ದಶಕಗಳ ಕಾಲ ಈ ಜೋಡಿ ಮಾಡಿದ ಮೋಡಿ ಅಮೋಘ. ಪು.ತಿ.ನರಸಿಂಹಾಚಾರ್ ಅವರ ಗೀತೆಗಳಿಗೆ ದನಿಯಾಗಿರುವ ಈ ಸಹೋದರಿಯರು ಸಂಗೀತ ಪ್ರಿಯ ಕನ್ನಡಿಗರ ಮನದಲ್ಲಿ ನೆಲೆನಿಂತಿದ್ದಾರೆ. ಹೊಸದಾಗಿ ಸಂಗೀತ ಕಲಿಯುವವರಿಗೆ ಸ್ಫೂರ್ತಿದಾಯಕವಾಗಿದ್ದಾರೆ.
 –ಎಸ್.ಶಂಕರ್. ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದ
****

ಸಂಪ್ರದಾಯ ಬಿಡದ ದಿಟ್ಟೆಯರು
ಹೊರಗಿನ ಆಮಿಷ, ಒತ್ತಡಗಳೆಷ್ಟೇ ಇದ್ದರೂ ಶುದ್ಧ ಸಂಪ್ರದಾಯವನ್ನು ಬಿಟ್ಟುಕೊಡದ ದಿಟ್ಟೆಯರು ಬಾಂಬೆ ಸಹೋದರಿಯರು. ಶೋತೃಗಳ ಕಾರಣಕ್ಕಾಗಿ ಸಂಗೀತವನ್ನು ಬೆರೆಸುವುದು, ಯಾರೂ ಮಾಡದೇ ಇರುವಂಥ ವಿಶೇಷವಾದದ್ದನ್ನು ಮಾಡ್ತೀನಿ ಅನ್ನುವಂಥ ಹುಚ್ಚುತನ ಅವರಿಗಿಲ್ಲ. ಮುಂದಿನ ಜನಾಂಗಕ್ಕೆ ಮಾದರಿಯಾಗಬಲ್ಲ ಸಂಗೀತ ಅವರದ್ದು. ಎಂ.ಎಸ್.ಸುಬ್ಬುಲಕ್ಷ್ಮಿ, ಪಟ್ಟಾಮ್ಮಾಳ್ ಅವರ ಸಂಗೀತವನ್ನು ನಾವು ಶುದ್ಧತೆಯ ಪ್ರತೀಕವೆಂದು ಭಾವಿಸುತ್ತೇವೆ. ಆ ಶುದ್ಧತೆಯ ಸೊಗಸನ್ನು ಉಳಿಸಿಕೊಂಡು ತಮ್ಮದೇ ಆದ ಶೈಲಿಯನ್ನು ರೂಪಿಸಿಕೊಂಡವರು ಬಾಂಬೆ ಸಹೋದರಿಯರು. ಯಾರ ಅನುಕರಣೆ ಮಾಡದೇ, ಸಂಗೀತದ ಶುದ್ಧಗುಣವನ್ನು ಉಳಿಸಿಕೊಂಡು ಬಂದ ಅಪರೂಪದ ಜೋಡಿ ಇವರದ್ದು.

‘ಏಕದೇಹ ನ್ಯಾಯ‘ ಅನ್ನುವಂತೆ ದನಿ ಎರಡಾದರೂ ಚಿಂತನೆಯಲ್ಲಾಗಲೀ, ಸಂಗೀತ ದೃಷ್ಟಿಯಲ್ಲಾಗಲೀ ಅವರಿಬ್ಬರೂ ಒಂದೇ. ಕಣ್ಣೆರಡಾದರೂ ದೃಷ್ಟಿ ಒಂದೇ ಎನ್ನುವಂಥ ಜೋಡಿ ಅವರದ್ದು. ಯಾವುದೇ ಹೊಸತನ್ನು ಕಂಡರೂ ಕಲಿಯುವ ಸರಳ ಮನಸು ಅವರದ್ದು. ಕಿರಿಯರಿಂದಲೂ ಕಲಿಯುವ ಅಪೇಕ್ಷೆ ಅವರದ್ದು. ಸಂಗೀತವನ್ನು ಸಂಗೀತಕ್ಕಾಗಿ ಪ್ರೀತಿಸುವ ಲಕ್ಷಣವಿರುವ ಅಪರೂಪದ ಸಹೋದರಿಯರು ಇವರು.
–ಟಿ.ಎಸ್.ಸತ್ಯವತಿ, ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT