ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮೊಳಗಿನ ನರಕಾಸುರರು

ಹಸಿರು ಪಟಾಕಿ ಈಗಿನ್ನೂ ಬಂದಿಲ್ಲ. ಮಾಮೂಲು ಪಟಾಕಿಗಳನ್ನು ಸುಡಬೇಕೆ, ಹೂಳಬೇಕೆ?
Last Updated 2 ನವೆಂಬರ್ 2018, 8:37 IST
ಅಕ್ಷರ ಗಾತ್ರ

ಒಂದು ಗೇಣುದ್ದದ ಪಟಾಕಿಯಿಂದಾಗಿ ಇಡೀ ರಾಷ್ಟ್ರದ ಮಾನ ಹೋದ ಪ್ರಸಂಗ ನೆನಪಿದೆಯೆ? ಚಿಲಿ ಮತ್ತು ಬ್ರಝಿಲ್ ದೇಶಗಳು 1990ರ ವಿಶ್ವಕಪ್ ಪಂದ್ಯಾವಳಿಗೆ ಪ್ರವೇಶ ಪಡೆಯಲು ರಿಯೊ ನಗರದಲ್ಲಿ ಸೆಣಸುತ್ತಿದ್ದವು. ಆಗಲೇ ಬ್ರಝಿಲ್ ಒಂದು ಗೋಲು ಹೊಡೆದಿತ್ತು. ಚಿಲಿ ಸೋಲಲಿತ್ತು.

ಹಠಾತ್ತಾಗಿ ಪ್ರೇಕ್ಷಕರ ಕಡೆಯಿಂದ ಒಂದು ಪಟಾಕಿ ಹಾರಿ ಚಿಲಿಯ ಗೋಲ್‍ಕೀಪರ್ ರೊಬರ್ಟೊ ರೋಜಸ್ ಬಳಿ ಸಿಡಿಯಿತು. ರೋಜಸ್ ಮಾರು ದೂರಕ್ಕೆ ಚಿಮ್ಮಿ ಮಕಾಡೆ ಬಿದ್ದ. ಅವನ ಮುಖ, ಮೈಕೈ ಎಲ್ಲ ರಕ್ತ. ಪಂದ್ಯವನ್ನೇ ರದ್ದು ಮಾಡಬೇಕಾದ ಪ್ರಸಂಗ. ಕೆಲವರಿಗೆ ಸಂಶಯ ಬಂದು ಫೋಟೊ ಫೂಟೇಜ್ ನೋಡಿದಾಗ ಮೋಸ ಗೊತ್ತಾಯಿತು, ಪಟಾಕಿಯಿಂದ ಏನೂ ಆಗಿರಲಿಲ್ಲ. ರೋಜಸ್ ತನ್ನ ಕೈಗೌಸಿನಲ್ಲಿ ಬ್ಲೇಡ್ ಬಚ್ಚಿಟ್ಟುಕೊಂಡು ತಲೆಗೆ ಗೀರು ಹಾಕಿಕೊಂಡು ರಕ್ತ ಸುರಿಸಿದ್ದ. ಅವನಿಗೆ ಜೀವಾವಧಿ ನಿಷೇಧ ಹಾಕಿ, ಚಿಲಿ ದೇಶಕ್ಕೆ 1994ರ ವಿಶ್ವಕಪ್ ಪಂದ್ಯಗಳಿಗೂ ನಿಷೇಧ ಹಾಕಲಾಯಿತು.

ನಮ್ಮ ದೇಶವೂ ಪಟಾಕಿಯಿಂದಾಗಿ ಪದೇ ಪದೇ ವಿಶ್ವಮಟ್ಟದಲ್ಲಿ ಮಾನ ಕಳೆದುಕೊಳ್ಳುತ್ತಿದೆ. ಮೋಸ ವಂಚನೆಯಿಂದಲ್ಲ; ನಿಷ್ಕಾಳಜಿಯಿಂದ. ಇಲ್ಲಿ ಬಾಣಬಿರುಸುಗಳಿಂದಾಗಿ ಜೀವ ಕಳೆದುಕೊಳ್ಳುವ ಮತ್ತು ಅಂಗವಿಕಲರಾಗುವವರ ಸಂಖ್ಯೆ ಇತರೆಲ್ಲ ದೇಶಗಳ ಒಟ್ಟೂ ಅಂಥವರ ಸಂಖ್ಯೆಗಿಂತ ಹೆಚ್ಚಿದೆ. ಈಚೆಗೆ, ಅಕ್ಟೋಬರ್ 23ರಂದು ನಮ್ಮ ಸರ್ವೋಚ್ಚ ನ್ಯಾಯಾಲಯ ಪಟಾಕಿಗೆ ನಿರ್ಬಂಧ ಹೇರಿತು. ಅದಕ್ಕಿಂತ ಹನ್ನೊಂದು ದಿನ ಮುಂಚೆ ತೆಲಂಗಾಣದ ವಾರಂಗಲ್‍ನಲ್ಲಿ 11 ಜನ ಪಟಾಕಿ ಸ್ಫೋಟದಿಂದ ಸತ್ತರು. ತೀರ್ಪು ಬಂದ ಮೂರನೇ ದಿನವೇ ಉತ್ತರ ಪ್ರದೇಶದ ಬದೌನಿ ಎಂಬಲ್ಲಿ ಎಂಟು ಮಂದಿ ಸತ್ತರು. ಪಟಾಕಿ ಗೋದಾಮುಗಳಲ್ಲಿನ ಸ್ಫೋಟಗಳ ವಿವರಗಳೇನೊ ಅಲ್ಲಲ್ಲಿ ಸಿಗುತ್ತವೆ. ಆದರೆ ಹಬ್ಬದ ದಿನಗಳಲ್ಲಿ ಒಂದೊಂದು ನಗರದಲ್ಲಿ ಒಬ್ಬರೊ ಇಬ್ಬರೊ ಸತ್ತು, ಇಪ್ಪತ್ತೊ ಮುವತ್ತೊ ಮಕ್ಕಳು ಕೈ- ಕಣ್ಣು, ಕಾಲು ಕಳೆದುಕೊಂಡಿದ್ದು ರಾಷ್ಟ್ರಮಟ್ಟದಲ್ಲಿ ದಾಖಲಾಗುವುದಿಲ್ಲ. ಹಳ್ಳಿಗಳ ದುರ್ಘಟನೆಗಳ ಬಗ್ಗೆ ಜಿಲ್ಲಾ ಮಟ್ಟದಲ್ಲೂ ದಾಖಲೆ ಸಿಗುವುದಿಲ್ಲ.

ಜಗತ್ತಿನ ಬಹುತೇಕ ಎಲ್ಲ ರಾಷ್ಟ್ರಗಳಲ್ಲೂ ವಿಶೇಷ ಸಂದರ್ಭಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಆದರೆ ಇಷ್ಟೆಲ್ಲ ಬೇಕಾಬಿಟ್ಟಿ ಎಲ್ಲೂ ಇಲ್ಲ. ಅಲ್ಲೆಲ್ಲ ಒಂದಲ್ಲ ಒಂದು ವಿಧದ ನಿರ್ಬಂಧ ಇದ್ದೇ ಇದೆ. ಅಮೆರಿಕ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಅಧಿಕೃತ ಗುತ್ತಿಗೆ ಪಡೆದ ಸಂಸ್ಥೆಗಳು ಮಾತ್ರ ಪಟಾಕಿ ಸುಡಬಹುದು. ಸ್ವೀಡನ್ನಿನಲ್ಲಿ ರಾಕೆಟ್ ಮಾತ್ರ. ವಿಯೆಟ್ನಾಮಿನಲ್ಲಿ ಸರ್ಕಾರವಷ್ಟೇ ಬಾಣಬಿರುಸು ಸುಡಬಹುದೇ ವಿನಾ ಪ್ರಜೆಗಳಿಗೆ ಆ ಹಕ್ಕು ಇಲ್ಲ. ತೈವಾನಿನ ನಗರಗಳಲ್ಲಿ ಪಟಾಕಿಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಫಿನ್‍ಲ್ಯಾಂಡಿನಲ್ಲಿ ಬಳಕೆದಾರರು ಕೇವಲ 0.95 ಗ್ರಾಮ್‍ಗಳಷ್ಟು ಬಂದೂಕು ಮದ್ದುಳ್ಳ ಪಟಾಕಿಯನ್ನಷ್ಟೆ ಸುಡಬಹುದು.

ತಾಂಝಾನಿಯಾದಲ್ಲಿ ಬೆಳೆ ಸಂರಕ್ಷಣೆಗೆ ಪಟಾಕಿ ಸಿಡಿಸಬಹುದು (ರಕ್ಷಿತಾರಣ್ಯಗಳ ಸುತ್ತಲಿನ ರೈತರು ನಿರೋಧ್ ಕವಚದಲ್ಲಿ ಮರಳು, ಮೆಣಸಿನ ಪುಡಿ ಮತ್ತು ಹುಲಿಮಲದ ಒಣಪುಡಿಗೆ ಪಟಾಕಿಯನ್ನು ತೂರಿಸಿ ಸಿಡಿಸಿ ಆನೆಗಳನ್ನು ಓಡಿಸುತ್ತಾರೆ. ರೈತರಿಗೆ ವನರಕ್ಷಕರೇ ತರಬೇತಿ ಕೊಡುತ್ತಾರೆ). ಆ ಎಲ್ಲ ದೇಶಗಳಲ್ಲೂ ಪಟಾಕಿಯ ಸ್ಫೋಟದ ಅಪಾಯಕ್ಕಿಂತ ಅದು ಹೊಮ್ಮಿಸುವ ಸದ್ದು ಮತ್ತು ಹೊಗೆಯ ಬಗ್ಗೆ ಪ್ರಜೆಗಳ ಆಕ್ಷೇಪ ಇದೆ. ಭಾರತದಲ್ಲಿ ಯಾರೇ ಸತ್ತರೂ ಒಟ್ಟಾರೆ ನಮಗೆ ಪಟಾಕಿ ಬೇಕು. ಕೇರಳದ ಪುತ್ತಿಂಗಳ್ ದೇಗುಲದ ಬಳಿ 2016ರ ಏಪ್ರಿಲ್ 10ರಂದು ಪಟಾಕಿ ಗೋದಾಮು ಸ್ಫೋಟಿಸಿ 110 ಜನ ಸತ್ತು, 350ಕ್ಕೂ ಹೆಚ್ಚು ಜನರು ಗಾಯಗೊಂಡು 150ಕ್ಕೂ ಹೆಚ್ಚು ಮನೆಗಳು ಧ್ವಂಸವಾಗಿವೆ. ಪಟಾಕಿ ಉತ್ಪಾದನೆಯ ನಾಭಿಕೇಂದ್ರ ಎನ್ನಿಸಿದ ಶಿವಕಾಶಿಯಲ್ಲಿ ಸ್ಫೋಟಕ ದುರಂತಗಳ ಉದ್ದ ಪಟ್ಟಿಯೇ ಇದೆ. ನಮ್ಮಲ್ಲಿ ಸಾವುನೋವುಗಳೇ ಲೆಕ್ಕಕ್ಕಿಲ್ಲ. ಇನ್ನು ಹೊಗೆ ಮಾಲಿನ್ಯದ ಬಗ್ಗೆ ಕ್ಯಾರೆ ಅನ್ನುವವರುಂಟೆ?

ಆದರೂ ಪಟಾಕಿ ವಿಷಯ ನ್ಯಾಯಾಲಯಕ್ಕೆ ಹೋಗಿದ್ದಕ್ಕೆ ಪಂಜಾಬ್- ಹರ್ಯಾಣಾಗಳ ರೈತರಿಗೆ ಧನ್ಯವಾದ ಹೇಳಬೇಕು. ಅವರು ಪ್ರತಿ ಅಕ್ಟೋಬರ್‍ನಲ್ಲಿ ಗೋಧಿ ತೆನೆಗಳ ಕಟಾವಿನ ನಂತರ ಒಣಹುಲ್ಲಿಗೆ ಬೆಂಕಿ ಹಚ್ಚುತ್ತಾರೆ. ಅದು ದಿಲ್ಲಿಯ ನಿತ್ಯದ ಹೊಗೆ ಮತ್ತು ಈ ದಿನಗಳ ಮಂಜಿಗೆ ಇನ್ನಷ್ಟು ನಂಜು ಸೇರಿಸುತ್ತದೆ. ಜೊತೆಗೆ ಇದೇ ದಿನಗಳಲ್ಲಿ ದಸರೆಯ ರಾಮಲೀಲಾ ಮತ್ತು ದೀಪಾವಳಿಯ ಮೋಜುಲೀಲಾ ಒಟ್ಟಿಗೆ ಬಂದು ನಗರದ ಉಸಿರುಗಟ್ಟಿಸುತ್ತಿದೆ. ಎರಡು ವರ್ಷಗಳ ಹಿಂದೆ ದಿಲ್ಲಿಯ ಮಟ್ಟಿಗೆ ಸರ್ವೋಚ್ಚ ನ್ಯಾಯಾಲಯ ಪಟಾಕಿಗೂ ನಿಷೇಧ ಹಾಕಿ ಆಜ್ಞೆ ಹೊರಡಿಸಿತ್ತು. ಅದೇನೊ ದೊಡ್ಡ ಬಾಂಬ್ ಬಿದ್ದಂತೆ ಆಗಲೇ ಪಟ್ಟಭದ್ರರು ಹಾಹಾಕಾರ ಎಬ್ಬಿಸಿದರು. ಏಕೆಂದರೆ ನಮ್ಮ ದೇಶದಲ್ಲಿ ಪಟಾಕಿ ಬಿಸಿನೆಸ್ ಎಂದರೆ ಕಡೇಪಕ್ಷ ಆರು ಸಾವಿರ ಕೋಟಿ ರೂಪಾಯಿಗಳ ವ್ಯವಹಾರ. ಅದಕ್ಕೆ ನಿಷೇಧ ಹಾಕದಂತೆ ಪ್ರತಿಭಟಿಸಲೆಂದು ಯಾರ‍್ಯಾರನ್ನೋ ಎತ್ತಿ ಕಟ್ಟುವ ಯತ್ನಗಳು ನಡೆದವು. ಐದು ಲಕ್ಷ ಕಾರ್ಮಿಕರ ಕೆಲಸ ಹೋಗುತ್ತದೆ ಎಂದರು. ಪಟಾಕಿ ಸುಡುವುದು ಧಾರ್ಮಿಕ ಆಚರಣೆ ಎನ್ನುತ್ತ (ಶಬರಿಮಲೈ ವಿವಾದದ ಹಾಗೆ) ನ್ಯಾಯಾದೇಶವನ್ನು ಧಿಕ್ಕರಿಸುವ ಯತ್ನಗಳೂ ನಡೆದವು.

ಈ ಬಾರಿ ಎಲ್ಲ ಧರ್ಮಗಳಿಗೂ ತುಸು ವಿನಾಯ್ತಿ ಕೊಟ್ಟು ಪಟಾಕಿ ನಿರ್ಬಂಧವನ್ನು ನ್ಯಾಯಾಲಯ ಇಡೀ ದೇಶಕ್ಕೇ ವಿಸ್ತರಿಸಿದೆ. ಹಬ್ಬ, ಹುಟ್ಟುಹಬ್ಬ, ಚುನಾವಣೆ ಜಯ, ಕ್ರೀಡಾಜಯ, ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ನಿಗದಿತ ವೇಳೆಯಲ್ಲಿ ಮಾತ್ರ ಅದೂ ‘ಹಸಿರು ಪಟಾಕಿ’ ಸುಡಬೇಕು ಎಂದು ಹೇಳಿದೆ. ಹಸಿರು ಪಟಾಕಿ ಎಂದರೆ ಸದ್ದು, ಹೊಗೆ, ದೂಳು ಮಾಲಿನ್ಯವನ್ನು ಈಗಿಗಿಂತ ಶೇಕಡಾ 25-30ರಷ್ಟು ಕಮ್ಮಿ ಮಾಡಬಲ್ಲ ಪಟಾಕಿ. ಜೊತೆಗೆ ಅದು ನೀರಿನ ಆವಿಯನ್ನೂ ಸಿಡಿಸಬೇಕು. ಅಂಥದ್ದನ್ನು ‘ತಯಾರಿಸುವ ವಿಧಾನ ರೆಡಿ ಇದೆ’ ಎಂದು ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷಾ ಸಂಸ್ಥೆ (ಪೆಸೊ), ಸಿಎಸ್‍ಐಆರ್ ಮತ್ತು ರಾಷ್ಟ್ರೀಯ ಪರಿಸರ ತಂತ್ರಜ್ಞಾನ ಸಂಶೋಧನ ಸಂಸ್ಥೆ (ನೀರಿ) ಹೇಳುತ್ತಿವೆ. ಆದರೆ ಈ ದೀಪಾವಳಿಗೆ ಹಸಿರು ಪಟಾಕಿ ಮಾರುಕಟ್ಟೆಗೆ ಬರುವ ಸಂಭವವೇನೂ ಇಲ್ಲ. ಅದರ ಬದಲು ಚೀನಾದಿಂದ ಇ-ಪಟಾಕಿ ಸರಮಾಲೆ ಬಂದಿವೆ. ಈ ಪಟಾಕಿ ಮಾಲೆಯನ್ನು ಪ್ಲಗ್ಗಿಗೆ ಸಿಕ್ಕಿಸಿ ಸ್ವಿಚ್ ಹಾಕಿದರೆ ಹತ್ತಾರು ಕೊಂಡಿಗಳಲ್ಲಿ ಬೆಳಕು ಹೊಮ್ಮಿಸುತ್ತ ಸೊಳ್ಳೆಬ್ಯಾಟಿನಂತೆ ಚಟಪಟ ಸದ್ದು ಮಾಡುತ್ತದೆ. ಇದನ್ನು ತೋರಣದಂತೆ ಕಟ್ಟಬಹುದು.

ಮಾಮೂಲು ಪಟಾಕಿಗಳಲ್ಲಿ ಘಾತುಕ ವಿಷಲೋಹಗಳು, ಅಂದರೆ ಕ್ಯಾಡ್ಮಿಯಂ, ಬೇರಿಯಂ, ////ಮಕ್ರ್ಯುರಿ, ಸ್ಟ್ರಾನ್ಶಿಯಂ, ತಾಮ್ರ ಮುಂತಾದ ಬಣ್ಣ ಕಕ್ಕುವ ದ್ರವ್ಯಗಳಿರುತ್ತವೆ. ಸಿಡಿತ ಮತ್ತು ಸದ್ದಿಗೆಂದು ಅಲ್ಯೂಮಿನಿಯಂ, ಗಂಧಕ ಮತ್ತು ಪೊಟ್ಯಾಸಿಯಂ ನೈಟ್ರೇಟ್ ಇರುತ್ತವೆ. ನಗರಗಳಲ್ಲಿ ದೀಪಾವಳಿಯ ರಾತ್ರಿಯ ವಿಷಗಾಳಿ ಸುರಕ್ಷಾ ಮಿತಿಗಿಂತ ಐದುನೂರು ಪಟ್ಟು ಹೆಚ್ಚಿರುತ್ತದೆ. ಇನ್ನು ನಮ್ಮಿಂದ ಎರಡು ಮೀಟರ್ ದೂರದಲ್ಲಿ ಭೂಚಕ್ರ, ಹೂದಾನಿ, ಸರಪಟಾಕಿ ಸಿಡಿಸಿದಾಗ ಹೊಮ್ಮುವ ಹೊಗೆಯಂತೂ ಅನೇಕ ಸಾವಿರ ಪಟ್ಟು ಜಾಸ್ತಿ ಪ್ರಮಾಣದಲ್ಲಿ ನಮ್ಮ ಶ್ವಾಸಕೋಶಕ್ಕೆ ಹೋಗುತ್ತದೆ. ವಿಷಕಣಗಳು ಅಲ್ಲೇ ಶಾಶ್ವತ ಅಂಟಿ ಕೂರುತ್ತವೆ. ಎಳೆಯರಲ್ಲಿ ಅದರ ಪರಿಣಾಮ ಗೊತ್ತಾಗಲಿಕ್ಕಿಲ್ಲ. ವಯಸ್ಸಾಗುತ್ತ ಹೋದಂತೆ ಅದರ ಮಾತೇ ಬೇರೆ.

ನಾವೇನೋ ಕಾಯಿದೆ ಕಾನೂನುಗಳನ್ನು ‘ನೂಕಾಚೆ ದೂರ’ ಎನ್ನುತ್ತ ಪಟಾಕಿ ಸಿಡಿಸಿ ಮಕ್ಕಳಿಗೆ ಮೋಜಿನ ವಿಷವುಣಿಸುತ್ತೇವೆ. ಮಾಲಿನ್ಯಪ್ರಜ್ಞೆ ಮತ್ತು ನಾಗರಿಕ ಪ್ರಜ್ಞೆಯಿರುವ ಕುಟುಂಬಗಳಲ್ಲಿ ನೂರು ದೇವರು ಹೇಳಿದರೂ ಪಟಾಕಿಯನ್ನು ಹತ್ತಿರ ಸುಳಿಯಗೊಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT