ವಿಶ್ವಕಥೆ

7

ವಿಶ್ವಕಥೆ

ಗುರುರಾಜ ಕರಜಗಿ
Published:
Updated:

ಆವುದಿರುವಿಕೆಗಾದಿ? ಎಂದು ಸೃಷ್ಟಿಯ ಮೊದಲು ? |

ಆವುದಬ್ಧಿಯ ತೆರೆಗಳಲಿ ಮೊಟ್ಟ ಮೊದಲು ? ||

ಆವುದೆಲರಿನ ನಿಲ್ಲದಲೆತಕ್ಕೆ ಗಡುಸೀಮೆ?|

ಈ ವಿಶ್ವಕಥೆಯಂತು – ಮಂಕುತಿಮ್ಮ || 90 ||

ಪದ-ಅರ್ಥ: ಆವುದಿರುವಿಕೆಗಾದಿ=ಆವುದು+ಇರುವಿಕೆಗೆ+ಆದಿ, ಆವುದಬ್ಧಿಯ=ಆವುದು+ಅಬ್ಧಿಯ(ಸಮುದ್ರದ), ಆವುದೆಲರಿನ=
ಆವುದು+ಎಲರಿನ(ಗಾಳಿಯ), ನಿಲ್ಲದಲೆತಕ್ಕೆ=ನಿಲ್ಲದ+ಅಲೆತಕ್ಕೆ,
ಗಡುಸೀಮೆ=ಕೊನೆಯ ಸೀಮೆ, ಎಲ್ಲೆ.

ವಾಚ್ಯಾರ್ಥ: ಈ ಇರುವಿಕೆಗೆ ಪ್ರಾರಂಭವಾವುದು? ಸೃಷ್ಟಿ ಮೊದಲಾದದ್ದು ಎಂದು? ಸಮುದ್ರದ ತೆರೆಗಳಲ್ಲಿ ಮೊಟ್ಟಮೊದಲನೆಯ ತೆರೆ ಯಾವಾಗ ಬಂದಿತು? ನಿಲ್ಲದೆ ಸತತವಾಗಿ ಅಲೆಯುವ ಗಾಳಿಗೆ ಕೊನೆಯ ಸೀಮೆ ಯಾವುದು? ಈ ವಿಶ್ವಕಥೆಯೂ ಹಾಗೆಯೇ.

ವಿವರಣೆ: ಈ ಕಗ್ಗದಲ್ಲಿ ಬರುವ ಪ್ರಶ್ನೆಗಳು, ಕುತೂಹಲದಿಂದ ಕಣ್ಣಿಗೆ ಕಾಣುವ ಪ್ರಪಂಚವನ್ನು ಕುರಿತು ಸಾಮಾನ್ಯ ಮನುಷ್ಯರು ಕೇಳಬಹುದಾದ ಪ್ರಶ್ನೆಗಳು. ಜೀವಿಗೆ ಒಂದು ಹುಟ್ಟು ಇದೆ ಮತ್ತೆ ಒಂದು ಅಂತ್ಯವಿದೆ. ನಮ್ಮ ಅವಗಾಹನೆಗೆ ಸಿಲುಕುವ ಪ್ರತಿಯೊಂದು ವಸ್ತುವಿಗೂ ಒಂದು ಪ್ರಾರಂಭ ಮತ್ತೊಂದು ಕೊನೆ ಎಂಬುದಿದೆ. ಮರ ಒಂದು ದಿನ ಹುಟ್ಟುತ್ತದೆ, ಒಂದು ದಿನ ಉರುಳುತ್ತದೆ. ಅಂತೆಯೇ ಕಟ್ಟಡಕ್ಕೆ, ಸಂಸ್ಥೆಗೆ ಮತ್ತು ಪ್ರತಿಯೊಂದು ವ್ಯವಸ್ಥೆಗೆ ಒಂದು ಪ್ರಾರಂಭದ ದಿನ ಎಂದಿದೆಯಲ್ಲವೇ? ಅದಕ್ಕೇ ಮಾನವನ ಮನಸ್ಸಿಗೆ, ಈ ಜಗತ್ತಿಗೂ ಪ್ರಾರಂಭದ ದಿನಾಂಕವೊಂದಿರಬೇಕು ಎನ್ನಿಸಿದರೆ ಆಶ್ಚರ್ಯವಿಲ್ಲ. ಪ್ರತಿಯೊಂದರ ಮೂಲವನ್ನು ಹುಡುಕುತ್ತ ಹೋಗುವ ‘ಮೂಲ’ ವ್ಯಾಧಿ ಇಂಥ ಪ್ರಶ್ನೆಗಳನ್ನು ಕೇಳುತ್ತದೆ. ಅದಕ್ಕೆ ಸರಿಯಾಗಿ ಅನೇಕಾನೇಕ ಕಥೆಗಳು, ಉಪಕಥೆಗಳು ಹುಟ್ಟಿಕೊಂಡಿವೆ. ಅವು ಭ್ರಮೆಗಳನ್ನು ಕರಗಿಸಲು ಹುಟ್ಟಿಕೊಂಡ ಮತ್ತಷ್ಟು ಭ್ರಮೆಗಳು! ಸಮುದ್ರ ಎಂದೋ ಒಂದು ದಿನ ಹುಟ್ಟಿರಬೇಕಲ್ಲ? ಅಂದೇ ಅದರ ಮೊದಲ ತೆರೆ ಎದ್ದಿರಬೇಕು. ಆ ದಿನ ಯಾವುದು? ಎಲ್ಲೆಲ್ಲಿಯೂ ಸುಳಿದಾಡುವ ಗಾಳಿಗೆ ಒಂದು ಗಡಿ, ಮೇರೆ ಎಂಬುದಿಲ್ಲವೇ?

ಈ ಎಲ್ಲ ಪ್ರಶ್ನೆಗಳ ಹಿಂದಿರುವ ಮೂಲ ತಿಳಿವೆಂದರೆ ಪ್ರಕೃತಿಯೂ ಒಂದು ವಸ್ತು ಎಂಬ ನಂಬಿಕೆ. ಅದರ ಬಗೆಗಿನ ಮೋಹವೂ ಪ್ರಶ್ನೆಗಳಿಗೆ ಕಾರಣವಾಗುತ್ತದೆ. ಮೋಹಕ್ಕೆ ಕಾರಣ ಬ್ರಹ್ಮಚೈತನ್ಯದ ಬಗೆಗಿನ ಅಜ್ಞಾನ. ಒಂದು ಬಾರಿ ಸಾಧನೆಯಿಂದ ಮೋಹದ ಪೊರೆ ಹರಿಯಿತೋ ಆಗ ಈ ಸೃಷ್ಟಿ ವಸ್ತುವಲ್ಲ. ಅದಕ್ಕೆ ಹುಟ್ಟು, ಸಾವು ಎನ್ನುವುದಿಲ್ಲ, ಅದು ಅನಾದಿಯಾದದ್ದು ಎಂಬ ಅರಿವುಂಟಾಗುತ್ತದೆ.

ಸೃಷ್ಟಿ ಅನಾದಿಯಾದದ್ದು ಎಂದು ತಿಳಿದಾಗ ಅದು ಹುಟ್ಟಿದ್ದು ಯಾವಾಗ ಎಂಬ ಇಂಥ ಪ್ರಶ್ನೆಗಳಿಗೆ ತೆರೆ ಬೀಳುತ್ತದೆ. ಅಲ್ಲಿಯವರೆಗೂ ಈ ಪ್ರಶ್ನೆಗಳ ಸರಮಾಲೆ ಬಿಟ್ಟಿದ್ದಲ್ಲ.

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !