ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಪ್ಟೋಕರೆನ್ಸಿ: ಎರಡಲಗಿನ ಕತ್ತಿ

ಕ್ರಿಪ್ಟೋಕರೆನ್ಸಿ ಹೊರಗಟ್ಟಿ ಬ್ಲಾಕ್‌ಚೈನ್‌ ತಂತ್ರಜ್ಞಾನದಲ್ಲಿ ಆವಿಷ್ಕಾರ ಸಾಧ್ಯವೇ?
Last Updated 7 ನವೆಂಬರ್ 2018, 20:42 IST
ಅಕ್ಷರ ಗಾತ್ರ

ಈ ವರ್ಷದ ಅಕ್ಟೋಬರ್ ತಿಂಗಳಿಗೆ ಬಿಟ್‌ಕಾಯಿನ್ ಎಂಬ ಕ್ರಿಪ್ಟೋಕರೆನ್ಸಿಗೆ ಹತ್ತು ವರ್ಷ ತುಂಬಿತು. ಇದೇ ಹೊತ್ತಿಗೆ ಭಾರತದ ಡಿಜಿಟಲ್ ಹಣಕಾಸಿನ ಇತಿಹಾಸದಲ್ಲಿ ಬಹುಮುಖ್ಯವೆನಿಸುವಂಥ ಘಟನೆಯೊಂದು ನಡೆಯಿತು. ಇದು ಸಂಭವಿಸಿದ್ದು ಬೆಂಗಳೂರಿನಲ್ಲಿ. ನಗರದ ಕೆಂಪ್‌ಪೋರ್ಟ್ ಮಾಲ್‌ನಲ್ಲಿ ಅಕ್ಟೋಬರ್ ಮೂರನೇ ವಾರ ಭಾರತದ ಮೊಟ್ಟ ಮೊದಲ ಬಿಟ್‌ಕಾಯಿನ್‌ನ ಎಟಿಎಂ ಆರಂಭವಾಯಿತು. ಒಂದೇ ವಾರದಲ್ಲಿ ಪೊಲೀಸರು ಅದನ್ನು ಮುಚ್ಚಿಸಿ ಇಬ್ಬರನ್ನು ಬಂಧಿಸಿದರು.

ಬಿಟ್‌ಕಾಯಿನ್ ಎಂಬುದು ಸದ್ಯ ಚಲಾವಣೆಯಲ್ಲಿರುವ ಸ್ವತಂತ್ರ ಡಿಜಿಟಲ್ ದುಡ್ಡುಗಳಲ್ಲಿ ಒಂದು. ಈ ದುಡ್ಡಿಗೆ ಯಾವುದೇ ದೇಶದ ಸೆಂಟ್ರಲ್ ಬ್ಯಾಂಕ್‌ನ ಖಾತರಿಯಿಲ್ಲ. ಬಳಕೆದಾರ ಸಮುದಾಯವೇ ಇದಕ್ಕೆ ಖಾತರಿ ನೀಡುತ್ತದೆ. ಸರಳವಾಗಿ ಹೇಳುವುದಾದರೆ ಇದು ಯಾವುದೇ ಸರ್ಕಾರದ ನಿಯಂತ್ರಣದಲ್ಲಿ ಇಲ್ಲದ ಪ್ರಪಂಚದ ಎಲ್ಲೆಡೆಯೂ ಚಲಾವಣೆ ಮಾಡಬಹುದಾದ ದುಡ್ಡು. ಆದರೆ ಇದರ ಬಳಕೆಯನ್ನು ಭಾರತ ಸರ್ಕಾರ ಒಪ್ಪುತ್ತಿಲ್ಲ.

ಹಾಗೆಯೇ ನಮ್ಮ ಸೆಂಟ್ರಲ್ ಬ್ಯಾಂಕ್ ಆಗಿರುವ ರಿಸರ್ವ್ ಬ್ಯಾಂಕ್ ಕೂಡಾ ಎಲ್ಲಾ ಬ್ಯಾಂಕುಗಳಿಗೂ ಸುತ್ತೋಲೆ ಕಳುಹಿಸಿ ಯಾವುದೇ ಕಾರಣಕ್ಕೂ ಕ್ರಿಪ್ಟೋಕರೆನ್ಸಿಯಲ್ಲಿ ವ್ಯವಹರಿಸುವವರ ಜೊತೆಗೆ ಸಂಬಂಧ ಇಟ್ಟುಕೊಳ್ಳಬೇಡಿ ಎಂದು ಸ್ಪಷ್ಟವಾಗಿ ಹೇಳಿಬಿಟ್ಟಿದೆ. ಹಣಕಾಸು ಸಚಿವರು ‘ಯಾವುದೇ ಕ್ರಿಪ್ಟೋಕರೆನ್ಸಿ ಅಧಿಕೃತವಾಗಿ ಚಲಾವಣೆಯಲ್ಲಿದೆ ಎಂದು ಸರ್ಕಾರ ಭಾವಿಸುವುದಿಲ್ಲ. ಆದ್ದರಿಂದ ಯಾವುದೇ ವ್ಯವಹಾರಕ್ಕೆ ಇವುಗಳನ್ನು ಬಳಸುವುದನ್ನು ತಡೆಯಲಾಗುವುದು’ ಎಂದು ತಮ್ಮ ಬಜೆಟ್ ಭಾಷಣದಲ್ಲಿಯೇ ಹೇಳಿದ್ದರು.

ಇಷ್ಟರ ಮೇಲೆಯೂ ಬೆಂಗಳೂರಿನಲ್ಲೊಂದು ಬಿಟ್‌ಕಾಯಿನ್ ಎಟಿಎಂ ಆರಂಭವಾದದ್ದು ಹೇಗೆ? ಈ ಪ್ರಶ್ನೆಯ ಉತ್ತರವನ್ನು ಎಟಿಎಂ ಆರಂಭಿಸಿದ ಯೂನಿಕಾಯಿನ್‌ನ ಸಹ ಸ್ಥಾಪಕ ಸಾತ್ವಿಕ್ ವಿಶ್ವನಾಥ್ ಈಗಾಗಲೇ ನೀಡಿದ್ದಾರೆ. ಅವರ ಪ್ರಕಾರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಈ ಹಣವನ್ನು ಮಾನ್ಯ ಮಾಡುವುದಿಲ್ಲ ಎಂದಿದೆಯೇ ಹೊರತು ಇದನ್ನು ಜನರು ಖರೀದಿಸಬಾರದು ಎಂದು ಹೇಳಿಲ್ಲ. ಈ ಮಾತಿನಲ್ಲಿ ಸ್ವಲ್ಪ ನಿಜಾಂಶವಿದೆ. ಸದ್ಯಕ್ಕೆ ನಮ್ಮಲ್ಲಿ ಬಿಟ್‌ಕಾಯಿನ್ ಸೇರಿದಂತೆ ಯಾವುದೇ ಕ್ರಿಪ್ಟೋಕರೆನ್ಸಿಯ ಬಳಕೆ ಮತ್ತು ನಿಯಂತ್ರಣಕ್ಕಾಗಿ ಯಾವುದೇ ಕಾನೂನುಗಳಿಲ್ಲ. ಇವುಗಳ ಬಳಕೆಯನ್ನು ಸರ್ಕಾರ ಮಾನ್ಯ ಮಾಡದೇ ಇರುವುದರಿಂದ ಇದರಲ್ಲಿ ಮಾಡುವ ಹೂಡಿಕೆಗೆ ಕಾನೂನಿನ ಮಾನ್ಯತೆ ಇಲ್ಲ.

ಸದ್ಯದ ಮಟ್ಟಿಗೆ ತ್ರಿಶಂಕು ಸ್ಥಿತಿಯಲ್ಲಿರುವ ಕ್ರಿಪ್ಟೋಕರೆನ್ಸಿ ವ್ಯವಹಾರವನ್ನು ಒಂದು ಕಾನೂನು ತಂದು ಸಂಪೂರ್ಣವಾಗಿ ನಿಷೇಧಿಸಿದರೂ ಸಮಸ್ಯೆ ಪರಿಹಾರವಾಗುವುದಿಲ್ಲ. ಏಕೆಂದರೆ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಜಪಾನ್ ಮತ್ತು ಯುರೋಪ್ ಒಕ್ಕೂಟ ಕ್ರಿಪ್ಟೋಕರೆನ್ಸಿ ವ್ಯವಹಾರವನ್ನು ಮಾನ್ಯ ಮಾಡಿವೆ. ಡೆಲ್‌ನಂಥ ಕಂಪ್ಯೂಟರ್ ತಯಾರಿಕೆ ಮತ್ತು ಮಾರಾಟ ಕಂಪನಿ ಕೂಡಾ ಇದನ್ನು ಸ್ವೀಕರಿಸುತ್ತದೆ. ಇದರ ಜೊತೆಗೆ ಕ್ರಿಪ್ಟೋಕರೆನ್ಸಿ ಸ್ವೀಕರಿಸುವ ಸಣ್ಣ ಮತ್ತು ದೊಡ್ಡ ಅನೇಕ ಸಂಸ್ಥೆಗಳಿವೆ. ಆರ್ಥಿಕವಾಗಿ ಸಬಲವಾಗಿರುವ ಈ ದೇಶಗಳೆಲ್ಲವೂ ಕ್ರಿಪ್ಟೋಕರೆನ್ಸಿ ಬಳಸಿ ಕಪ್ಪುಹಣವನ್ನು ಸಂಗ್ರಹಿಸದಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡಿವೆಯೇ ಹೊರತು ಇವುಗಳ ನಿಯಂತ್ರಣಕ್ಕೆ ಸಮಗ್ರ ಕಾನೂನು ಚೌಕಟ್ಟನ್ನೇನೂ ರೂಪಿಸಿಲ್ಲ.

ಕ್ರಿಪ್ಟೋಕರೆನ್ಸಿ ಬೇಡ ಎನ್ನುತ್ತಿರುವ ಭಾರತದಂಥ ದೇಶಗಳು ಎದುರಿಸುತ್ತಿರುವ ಸವಾಲು ಬಹಳ ಸಂಕೀರ್ಣವಾದುದು. ಸರ್ಕಾರದ ನಿಯಂತ್ರಣಕ್ಕೆ ಒಳಪಡದ ‘ದುಡ್ಡು’ ವ್ಯಾವಹಾರಿಕ ಮಾನ್ಯತೆ ಪಡೆಯುವುದರಲ್ಲಿ ಅನೇಕ ಅಪಾಯಗಳಿವೆ. ಇದನ್ನು ಅರ್ಥ ಮಾಡಿಕೊಳ್ಳಲು ದುಡ್ಡು ಎಂಬ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳಬೇಕು. ಭಾರತದಲ್ಲಿ ನಾವೀಗ ಬಳಸುವ ಕರೆನ್ಸಿ ನೋಟುಗಳು ಅಥವಾ ನಾಣ್ಯಗಳಿಗೆ ಇರುವ ಮೌಲ್ಯ ಬರುವುದು ರಿಸರ್ವ್ ಬ್ಯಾಂಕ್ ನೀಡುವ ಖಾತರಿಯಿಂದ. ಅಂದರೆ ಇವಕ್ಕೆ ರಿಸರ್ವ್ ಬ್ಯಾಂಕ್ ಮತ್ತು ಸರ್ಕಾರ ಜವಾಬ್ದಾರವಾಗಿರುತ್ತವೆ.

ಕ್ರಿಪ್ಟೋಕರೆನ್ಸಿಗೆ ಈ ಬಗೆಯ ಖಾತರಿ ದೊರೆಯುವುದು ಬಳಕೆದಾರರಿಂದ. ಬಳಕೆದಾರರು ಇದನ್ನು ಖಾತರಿ ಪಡಿಸುವುದಕ್ಕೆ ಬೇಕಿರುವ ವ್ಯವಸ್ಥೆಯನ್ನು ತಂತ್ರಜ್ಞಾನ ಮಾಡುತ್ತದೆ. ಇದನ್ನು ಬ್ಲಾಕ್‌ಚೈನ್ ತಂತ್ರಜ್ಞಾನ ಎಂದು ಕರೆಯುತ್ತಾರೆ. ಪ್ರತಿಯೊಂದು ಬಿಟ್‌ಕಾಯಿನ್ ಅಥವಾ ಯಾವುದೇ ಕ್ರಿಪ್ಟೋಕರೆನ್ಸಿಯ ಮೂಲಕ ನಡೆಯುವ ವ್ಯವಹಾರವೂ ಇವುಗಳ ಬಳಕೆದಾರರಿಗೆಲ್ಲಾ ತಿಳಿಯುತ್ತಿರುತ್ತದೆ. ಆದ್ದರಿಂದ ನಕಲಿ ಕರೆನ್ಸಿ ಬರಲು ಸಾಧ್ಯವಿಲ್ಲ. ಈ ಪಾರದರ್ಶಕತೆಯೇ ಈ ಕರೆನ್ಸಿಯ ಶಕ್ತಿ. ಇಲ್ಲಿ ಪಾರದರ್ಶಕತೆಯೇನೋ ಇದೆ. ಆದರೆ ಇಡೀ ಹಣಕಾಸು ವ್ಯವಸ್ಥೆಯ ಮೇಲೆ ಸರ್ಕಾರದ ನಿಯಂತ್ರಣ ಸಂಪೂರ್ಣವಾಗಿ ಇಲ್ಲವಾಗುತ್ತದೆ. ಹಣದುಬ್ಬರದಿಂದ ತೊಡಗಿದ ಯಾವುದನ್ನೂ ಸರ್ಕಾರ ನಿಯಂತ್ರಿಸಲಾಗದ ಸ್ಥಿತಿ ಉದ್ಭವಿಸುತ್ತದೆ.

ಈ ಭಯ ಈಗಾಗಲೇ ಕ್ರಿಪ್ಟೋಕರೆನ್ಸಿಯನ್ನು ಅಧಿಕೃತವಾಗಿ ಮಾನ್ಯ ಮಾಡಿರುವ ದೇಶಗಳಿಗೂ ಇದೆ. ಇದೇ ಕಾರಣದಿಂದ ಕ್ರಿಪ್ಟೋಕರೆನ್ಸಿಗಳನ್ನು ಸ್ವೀಕರಿಸುವ ಎಲ್ಲಾ ಸಂಸ್ಥೆಗಳು ಕಡ್ಡಾಯವಾಗಿ ಇದನ್ನು ಸರ್ಕಾರಕ್ಕೆ ತಿಳಿಸಿ ನೋಂದಾಯಿಸಿಕೊಳ್ಳಬೇಕೆಂಬ ಕಾನೂನು ಮಾಡಲಾಗಿದೆ. ಇದು ಕ್ರಿಪ್ಟೋಕರೆನ್ಸಿ ವ್ಯವಹಾರಗಳನ್ನು ತೆರಿಗೆಯ ವ್ಯಾಪ್ತಿಗೆ ತಂದಿದೆಯಷ್ಟೇ ಅಲ್ಲದೇ ಅದರ ಒಟ್ಟು ಮೌಲ್ಯದ ಅಂದಾಜು ಸರ್ಕಾರಕ್ಕೆ ಗೊತ್ತಾಗುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ಕ್ರಿಪ್ಟೋಕರೆನ್ಸಿಗಳು ಬಳಸುವ ‘ಬ್ಲಾಕ್ ಚೈನ್’ ತಂತ್ರಜ್ಞಾನವನ್ನು ಇತರ ಕ್ಷೇತ್ರಗಳಲ್ಲಿ ಬಳಸುವ ಬಗ್ಗೆ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೆಚ್ಚಿನ ಆಸಕ್ತಿ ಇದೆ.

ಭಾರತ ಸರ್ಕಾರಕ್ಕೂ ಬ್ಲಾಕ್‌ಚೈನ್ ತಂತ್ರಜ್ಞಾನ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಬೇಕೆಂಬ ಆಸೆಯಿದೆ. ಆದರೆ ಅದಕ್ಕೆ ಬೇಕಿರುವ ನೀತಿ ನಿರೂಪಣೆಯಲ್ಲಿ ಮಾತ್ರ ಸೋಲುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಆಗಿರುವ ಬೆಳವಣಿಗೆಗಳನ್ನು ನೋಡಿದರೆ ಇದು ಅರ್ಥವಾಗುತ್ತದೆ. ಬಜೆಟ್ ಭಾಷಣದಲ್ಲಿ ಕ್ರಿಪ್ಟೋಕರೆನ್ಸಿಯ ವಿರುದ್ಧ ಮಾತನಾಡುವಾಗಲೇ ಹಣಕಾಸು ಸಚಿವರು ಬ್ಲಾಕ್ ಚೈನ್ ತಂತ್ರಜ್ಞಾನದ ಸಾಧ್ಯತೆಗಳನ್ನು ಶೋಧಿಸುವುದಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದೂ ಹೇಳಿದ್ದರು.

ಈ ವರ್ಷದ ಜನವರಿಯಲ್ಲೇ ಕರ್ನಾಟಕ ಸರ್ಕಾರ ತನ್ನ ಎಲ್ಲಾ ಇಲಾಖೆಗಳಿಗೂ ಪತ್ರಬರೆದು ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸುವ ಸಾಧ್ಯತೆಗಳನ್ನು ಶೋಧಿಸಲು ಹೇಳಿತ್ತು. ಇದೇ ತಿಂಗಳಿನಲ್ಲಿ ಬೆಂಗಳೂರಿನಲ್ಲೊಂದು ಇ-ಆಡಳಿತಕ್ಕಾಗಿ ಬ್ಲಾಕ್ ಚೈನ್ ಬಳಸುವ ಒಂದು ಹ್ಯಾಕಥಾನ್ ನಡೆಸಲಾಗಿತ್ತು. ಆದರೆ ಈ ವರ್ಷದ ಅಕ್ಟೋಬರ್ ತಿಂಗಳ ಹೊತ್ತಿಗೆ ಕೇಂದ್ರ ಹಣಕಾಸು ಸಚಿವಾಲಯವು ಕ್ರಿಪ್ಟೋಕರೆನ್ಸಿ ಬಳಕೆಯ ಸಂಪೂರ್ಣ ನಿಷೇಧ ಹೇಗೆ ಎಂಬುದನ್ನು ಚರ್ಚಿಸಲು ಆರಂಭಿಸಿತು. ಆದರೆ 2017ರಲ್ಲೇ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗಾರ್ಗ್ ಅವರ ನೇತೃತ್ವದಲ್ಲಿ ಕ್ರಿಪ್ಟೋಕರೆನ್ಸಿಯ ಸಾಧಕ ಬಾಧಕಗಳ ಕುರಿತು ಅರಿಯಲು ಸಮಿತಿಯೊಂದನ್ನು ನೇಮಿಸಲಾಗಿತ್ತು. ಅದರ ವರದಿ ಪಡೆಯುವ ಮೊದಲೇ ಈ ನಿಷೇಧದ ಉತ್ಸಾಹವೇಕೆ ಎಂಬುದೂ ಒಂದು ರಹಸ್ಯವೇ.

ಈ ಬಗೆಯ ವಿರೋಧಾಭಾಸಕರ ನಿಲುವಿನಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಕ್ರಿಪ್ಟೋಕರೆನ್ಸಿಯ ವ್ಯವಹಾರ ನಿಂತು ಹೋದರೆ ಅರ್ಥವ್ಯವಸ್ಥೆಯ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ. ಆದರೆ ಬ್ಲಾಕ್ ಚೈನ್ ತಂತ್ರಜ್ಞಾನದಲ್ಲಿ ಭಾರತ ಹಿಂದುಳಿಯುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಸದ್ಯದ ಮಟ್ಟಿಗೆ ಈ ತಂತ್ರಜ್ಞಾನ ಬಳಕೆಯಲ್ಲಿರುವ ಅತಿದೊಡ್ಡ ಕ್ಷೇತ್ರವೆಂದರೆ ಕ್ರಿಪ್ಟೋಕರೆನ್ಸಿ. ಈ ಕ್ಷೇತ್ರವನ್ನು ದೇಶದಿಂದ ಹೊರಗಟ್ಟಿ ಅದು ಬಳಸುವ ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರಗಳಿಗೆ ಮುಂದಾಗುತ್ತೇವೆ ಎಂಬುದು ವಿಲಕ್ಷಣ ನಿಲುವು. ತಂತ್ರಜ್ಞಾನ ಒಡ್ಡುವ ಸವಾಲುಗಳು ಯಾವಾಗಲೂ ಸಂಕೀರ್ಣವೇ. ಅವುಗಳನ್ನು ಎದುರಿಸಬೇಕೇ ಹೊರತು ಅದರಿಂದ ಪಲಾಯನ ಮಾಡಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT