ಶನಿವಾರ, ಮೇ 28, 2022
21 °C
ಅಭಿವೃದ್ಧಿಯ ಆದ್ಯತೆ ಗುರುತಿಸುವುದರಲ್ಲಿ ಕಲ್ಯಾಣ ಕರ್ನಾಟಕದ ‘ಜನಕಲ್ಯಾಣ’ ಅಡಗಿದೆ

ಟಿ.ಆರ್.ಚಂದ್ರಶೇಖರ ಅಂಕಣ| ಅಭಿವೃದ್ಧಿ: ಆದ್ಯತೆಯಲ್ಲಿ ಎಡವಟ್ಟು

ಟಿ.ಆರ್.ಚಂದ್ರಶೇಖರ Updated:

ಅಕ್ಷರ ಗಾತ್ರ : | |

ರಾಜ್ಯದ ಕಲ್ಯಾಣ ಕರ್ನಾಟಕ ಪ್ರದೇಶದ ಎಲ್ಲ ಜಿಲ್ಲೆಗಳೂಅತ್ಯಂತ ಹಿಂದುಳಿದಿವೆ. ಇದನ್ನು ರಾಜ್ಯದ ಮೊದಲ ಮಾನವ ಅಭಿವೃದ್ಧಿ ವರದಿ, ಡಾ. ಡಿ.ಎಂ.ನಂಜುಂಡಪ್ಪ ಸಮಿತಿ ವರದಿ, 2011ರ ಜನಗಣತಿ ವರದಿ, 2005 ಮತ್ತು2015ರ ಕರ್ನಾಟಕ ಮಾನವ ಅಭಿವೃದ್ಧಿ ವರದಿಗಳು ಅನುಮಾನಕ್ಕೆ ಆಸ್ಪದವಿಲ್ಲದಂತೆ ದೃಢಪಡಿಸಿವೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ– 5 ಮತ್ತು ನೀತಿ ಆಯೋಗದ ‘ಭಾರತದಲ್ಲಿ ಬಹುಮುಖಿ ಬಡತನ’ ವರದಿಯೂ ಈ ವಿಷಯವನ್ನು ಇತ್ತೀಚೆಗೆ ಖಚಿತಪಡಿಸಿವೆ.


ಟಿ.ಆರ್.ಚಂದ್ರಶೇಖರ 

ಕಳೆದ 20-30 ವರ್ಷಗಳ ಅವಧಿಯಲ್ಲಿ ಈ ಪ್ರದೇಶದ ಅಭಿವೃದ್ಧಿಗೆ ಸರ್ಕಾರ ಏನೇನೂ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಹೇಳಲು ಬರುವುದಿಲ್ಲ. ಅದು ಅನೇಕಕಾರ್ಯಯೋಜನೆಗಳನ್ನು ಜಾರಿಗೆ ತಂದಿದೆ. ಉದಾಹರಣೆಗೆ, ನಂಜುಂಡಪ್ಪ ವರದಿಯ ಶಿಫಾರಸಿನ ಅನ್ವಯ ರಾಜ್ಯದ 114 ಹಿಂದುಳಿದ ತಾಲ್ಲೂಕುಗಳಿಗೆ ಸಂಬಂಧಿಸಿದ ‘ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆ’. ಯೋಜನೆ ಆರಂಭವಾದ 2007- 08ರಿಂದ 2020- 21ರವರೆಗೆ ಸರ್ಕಾರ ನೀಡಿರುವ ಅನುದಾನ ₹ 36,848 ಕೋಟಿ. ಆದರೆ ವೆಚ್ಚವಾದದ್ದು ₹ 27,362 ಕೋಟಿ (ಶೇ 74.25).

ಕಲ್ಯಾಣ ಕರ್ನಾಟಕದ ಅತ್ಯಂತ ಹಿಂದುಳಿದಿರುವಿಕೆಗೆಮುಖ್ಯ ಕಾರಣ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿನ ಸಮಸ್ಯೆಗಳು ಎಂಬುದನ್ನು ಎಲ್ಲ ವರದಿಗಳು ದಾಖಲಿಸಿವೆ. ಆದರೆ ವಿಶೇಷ ಅಭಿವೃದ್ಧಿ ಯೋಜನೆಯ ಒಟ್ಟು ಅನುದಾನದಲ್ಲಿ ಇವೆರಡಕ್ಕೆ ಮೀಸಲಿಟ್ಟ ಹಣ ₹ 3,836 ಕೋಟಿ (ಶೇ 10.41). ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗೆ ನೀಡಿದ ಪ್ರಮಾಣ ಶೇ 1.41 (₹ 521 ಕೋಟಿ). ಹಾಗಾದರೆ ಇದರಲ್ಲಿ ಯಾವುದಕ್ಕೆ ಹೆಚ್ಚು ಹಣ ನೀಡಲಾಗಿದೆ? ನೀರಾವರಿ (₹ 7,860 ಕೋಟಿ), ಮೂಲಸೌಕರ್ಯ (₹ 1,780 ಕೋಟಿ), ಇಂಧನ (₹ 2,738 ಕೋಟಿ) ಮತ್ತು ಲೋಕೋಪಯೋಗಿ ಇಲಾಖೆಗಳಿಗೆ (₹ 2,738 ಕೋಟಿ) ನೀಡಿರುವ ಒಟ್ಟು ಅನುದಾನ ₹ 14,523 ಕೋಟಿ(ಶೇ 39.41). ಇದೇ ರೀತಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು 371 ಜೆ ಪರಿಚ್ಛೇದದಡಿ 2013-14ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಇದರಡಿ ಸರ್ಕಾರ ಎಂಟು
ವರ್ಷಗಳಲ್ಲಿ ಘೋಷಿಸಿದ ಒಟ್ಟು ಅನುದಾನ ₹ 7,385 ಕೋಟಿ. ವೆಚ್ಚವಾದದ್ದು ₹ 6,079 ಕೋಟಿ (ಶೇ 82.31). ಇದರಲ್ಲಿ ಶೇ 70ರಷ್ಟು ಹಣ ಮೂಲಸೌಲಭ್ಯ ಕಾಮಗಾರಿಗಳಿಗೆ ಎಂಬ ನಿಯಮವನ್ನೇ ಮಾಡಲಾಗಿದೆ.

ಇವೆಲ್ಲವೂ ಕಾಮಗಾರಿ- ಕಾಂಟ್ರಾಕ್ಟ್‌ಗಿರಿ ಅನುದಾನಗಳು. ಕಲ್ಯಾಣ ಕರ್ನಾಟಕ ಪ್ರದೇಶ ಇಂದಿಗೂ ಹಿಂದುಳಿದಿರುವುದಕ್ಕೆ ಕಾರಣ ಇಂತಹ ಅಭಿವೃದ್ಧಿ ಆದ್ಯತೆಗಳ ವಿಕೃತಿಯಲ್ಲಿದೆ. ಅಭಿವೃದ್ಧಿಯಲ್ಲಿ ಜನರು, ಜೀವನೋಪಾಯ, ಮಹಿಳೆಯರು, ಮಕ್ಕಳ ಬದುಕು- ಬವಣೆ ಮುಖ್ಯ ಎಂಬುದನ್ನು ಎಲ್ಲ ವರದಿಗಳೂ ಸಾರಿವೆ. ಆದರೆ ಸರ್ಕಾರ ಇದನ್ನು ಧಿಕ್ಕರಿಸಿ ರಸ್ತೆ, ಸೇತುವೆ, ನೀರಾವರಿ ಅಂತಹವೇ ಅಭಿವೃದ್ಧಿ ಎಂದು ಭಾವಿಸಿದೆ. ಸಮಗ್ರ ಅಭಿವೃದ್ಧಿಗೆ ಇವೆಲ್ಲವೂ ಬೇಕು. ಆದರೆ ಇವೇ ಅಭಿವೃದ್ಧಿಯಲ್ಲ.

ನೀತಿ ಆಯೋಗದ ವರದಿಯ ಪ್ರಕಾರ, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಬಹುಮುಖಿ ಬಡತನ ಎದುರಿಸುತ್ತಿರುವವರ ಪ್ರಮಾಣ ಶೇ 13.16ರಷ್ಟು. ಕಲ್ಯಾಣ ಕರ್ನಾಟಕದ ಯಾದಗಿರಿ ಜಿಲ್ಲೆಯಲ್ಲಿ ಇದರ ಪ್ರಮಾಣ ಶೇ 41.67, ರಾಯಚೂರಿನಲ್ಲಿ ಶೇ 32.39, ನಾಲ್ಕು ಜಿಲ್ಲೆಗಳಲ್ಲಿ ಈ ಪ್ರಮಾಣ ಶೇ 20ಕ್ಕಿಂತ ಅಧಿಕವಾಗಿದೆ. ಇದಕ್ಕೆ ಕಾರಣವಾಗಿರುವ ಸಂಗತಿಗಳನ್ನು ವರದಿ ದಾಖಲಿಸಿದೆ. ಈ ಸೂಚ್ಯಂಕದ ಮಾಪನಕ್ಕೆ ಆರೋಗ್ಯ ಕ್ಷೇತ್ರದ ಮೂರು, ಶಿಕ್ಷಣ ಕ್ಷೇತ್ರದ ಎರಡು ಮತ್ತು ಜೀವನಮಟ್ಟದ ಏಳು ಸೂಚಿಗಳನ್ನು ಬಳಸಲಾಗಿದೆ. ಈ 12ಸೂಚಿಗಳಲ್ಲಿ ಪೌಷ್ಟಿಕತೆ, ಮಹಿಳೆಯರ ಆರೋಗ್ಯ ಹಾಗೂ ಮಕ್ಕಳ ಮರಣಸೂಚಿಗಳ ಕೊರತೆಯ ಕಾಣಿಕೆ ಶೇ 38.9ರಷ್ಟಿದ್ದರೆ, ಶಿಕ್ಷಣ ಕ್ಷೇತ್ರದ ಸೂಚಿಗಳ ಕೊರತೆಯ ಕೊಡುಗೆ ಶೇ 23.1 ಮತ್ತು ಜೀವನಮಟ್ಟದ ಸೂಚಿಗಳ ಕೊರತೆಯ ಕೊಡುಗೆ ಶೇ 36.1. ಒಟ್ಟಾರೆ ರಾಜ್ಯದಲ್ಲಿ ಬಹುಮುಖಿ ಬಡತನಕ್ಕೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿನ ಕೊರತೆಯ ಕಾಣಿಕೆ ಶೇ 62ರಷ್ಟಿದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ– 5 ವರದಿಯು ಈ ಜಿಲ್ಲೆಗಳಲ್ಲಿನ ಮಕ್ಕಳು ಮತ್ತು ಮಹಿಳೆಯರ ಅಪೌಷ್ಟಿಕತೆ (ರಕ್ತಹೀನತೆ/ಅನೀಮಿಯ) ಪ್ರಮಾಣ 2019-20ರಲ್ಲಿ ಅತ್ಯಧಿಕ ಎಂಬುದನ್ನು ದೃಢಪಡಿಸಿದೆ. ಈ ಜಿಲ್ಲೆಗಳಲ್ಲಿ 6ರಿಂದ 59 ತಿಂಗಳ ವಯೋಮಾನದ ಒಟ್ಟು ಮಕ್ಕಳಲ್ಲಿ ಅನೀಮಿಯ ಪ್ರಮಾಣ ಸರಾಸರಿ ಶೇ 70ಕ್ಕಿಂತ ಅಧಿಕ ಮಕ್ಕಳಲ್ಲಿದೆ. ಇದೇ ರೀತಿಯಲ್ಲಿ 15ರಿಂದ 49 ವರ್ಷಗಳ ವಯೋಮಾನದ ಒಟ್ಟು ಮಹಿಳೆಯರಲ್ಲಿನ ಅನೀಮಿಯ ಪ್ರಮಾಣ ಶೇ 65ಕ್ಕಿಂತ ಅಧಿಕವಾಗಿದೆ. ಈ ಸಮಸ್ಯೆಗಳನ್ನು ಎದುರಿಸುವುದಕ್ಕೆ ಸರ್ಕಾರವು ಯಾವುದೇ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿಲ್ಲ.

ಸರ್ಕಾರವು ಇತ್ತೀಚೆಗಿನ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ₹ 2,398.45 ಕೋಟಿವೆಚ್ಚದ ವಿವಿಧ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದರಲ್ಲಿ ಘೋಷಿಸಿರುವ ಹತ್ತಾರುಕಾರ್ಯಕ್ರಮಗಳಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳು ಗೈರಾಗಿವೆ. ಇಲ್ಲಿಯೂ ಕಾಮಗಾರಿ- ಕಾಂಟ್ರಾಕ್ಟ್‌ಗಿರಿ ಯೋಜನೆಗಳಿಗೆ ಒತ್ತು ನೀಡಲಾಗಿದೆ. ಇಲ್ಲಿನ ಒಟ್ಟು ವೆಚ್ಚದಲ್ಲಿ ಬೆಳಗಾವಿ ವಿಭಾಗದ ಜಿಲ್ಲೆಗಳಿಗೆ ಸಿಂಹಪಾಲು ದೊರೆತರೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಕನಿಷ್ಠ ಪಾಲು ದೊರೆತಿದೆ. ನಂಜುಂಡಪ್ಪ ವರದಿಯ ಪ್ರಕಾರ, 2002ರಲ್ಲಿ ರಾಜ್ಯದ ಒಟ್ಟು ಹಿಂದುಳಿದಿರುವಿಕೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಪಾಲು ಶೇ 40ರಷ್ಟಿದ್ದರೆ ಬೆಳಗಾವಿ ವಿಭಾಗದ ಪಾಲು ಶೇ 20. ಆದರೆ ಅನುದಾನ ಹಂಚಿಕೆಯಲ್ಲಿ ಸದರಿ ಅನುಪಾತವನ್ನು ಸರ್ಕಾರ ಕಿಂಚಿತ್ತೂ ಪಾಲಿಸುತ್ತಿಲ್ಲ.

ದುರ್ಬಲ ವರ್ಗದವರ ಪ್ರಮಾಣವು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅಧಿಕ. ಒಂದು ಪ್ರದೇಶದ ಅಭಿವೃದ್ಧಿಯ ಮೌಲ್ಯಮಾಪನದಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಅಲ್ಲಿನ ಒಟ್ಟು ಜನಸಂಖ್ಯೆಯಲ್ಲಿದುರ್ಬಲ ವರ್ಗದವರ (ವಲ್‍ನರಬಲ್ ಸೆಕ್ಷನ್) ಪ್ರಮಾಣ. ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತರನ್ನು ‘ದುರ್ಬಲ ವರ್ಗ’ ಎಂದು ಪರಿಗಣಿಸಬಹುದು. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಈ ವರ್ಗದ ಒಟ್ಟು ಪ್ರಮಾಣ ಶೇ 39.81. ಆದರೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಇವರ ಪ್ರಮಾಣ ಶೇ 51.21ರಷ್ಟಿದೆ. ಅನೇಕ ಚಾರಿತ್ರಿಕ ಮತ್ತು ಧಾರ್ಮಿಕ ಕಾರಣಗಳಿಂದಾಗಿ ಈ ವರ್ಗಗಳ ಆರ್ಥಿಕ- ಸಾಮಾಜಿಕ ಸ್ಥಿತಿಗತಿಯು ಉಳಿದ ವರ್ಗಗಳ ಸ್ಥಿತಿಗತಿಗಿಂತ ಕೆಳಮಟ್ಟದಲ್ಲಿದೆ.

ಈ ಪ್ರದೇಶದ ಅಭಿವೃದ್ಧಿಗಾಗಿ ಯೋಜನೆ ರೂಪಿಸುವಾಗ ಈ ಜನಸಂಖ್ಯಾ ಸ್ವರೂಪವನ್ನು ಗಮನಿಸಬೇಕಾಗುತ್ತದೆ. ಆದರೆ ಸರ್ಕಾರ ಇಂತಹ ಸೂಕ್ಷ್ಮ ಸಂರಚನೆಗಳನ್ನು ಗಮನಿಸುವುದಿಲ್ಲ. ಇಂತಹ ವಿವಿಧ ಸಾಮಾಜಿಕ ಸ್ತರದ ಜನಸಂಖ್ಯಾ ಸ್ವರೂಪದ ವ್ಯವಸ್ಥೆಯಲ್ಲಿ ಅಭಿವೃದ್ಧಿಯನ್ನು ಅಖಂಡವಾಗಿ ಪರಿಗಣಿಸಿದರೆ ಅಲ್ಲಿ ದುರ್ಬಲ ವರ್ಗಗಳಿಗೆ ‘ನ್ಯಾಯ’ ದೊರೆಯುವುದಿಲ್ಲ.

ಒಂದು ಪ್ರದೇಶದ ಅಭಿವೃದ್ಧಿಯ ಬಗ್ಗೆ ಚರ್ಚಿಸುವಾಗ ಗಮನಿಸಬೇಕಾದ ಮತ್ತೊಂದು ಜನಸಂಖ್ಯಾ ಸಂಗತಿಯೆಂದರೆ, ಅಲ್ಲಿನ ಭೂರಹಿತ ದಿನಗೂಲಿ ಕಾರ್ಮಿಕರ ಪ್ರಮಾಣ. 2011ರ ಜನಗಣತಿ ಪ್ರಕಾರ, ರಾಜ್ಯದ ಒಟ್ಟು ದುಡಿಮೆಗಾರರಲ್ಲಿ ಭೂರಹಿತ ದಿನಗೂಲಿ ಕಾರ್ಮಿಕರ ಪ್ರಮಾಣ ಶೇ 25.67ರಷ್ಟಿದ್ದರೆ, ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಇವರ ಪ್ರಮಾಣ ಸರಾಸರಿ ಶೇ 39.74. ಈ ವರ್ಗದ ಕಾರ್ಮಿಕರಲ್ಲಿ ಮಹಿಳೆಯರ ಪ್ರಮಾಣ ಪುರುಷರ ಪ್ರಮಾಣಕ್ಕಿಂತ ಅಧಿಕವಾಗಿರುತ್ತದೆ. ಇದನ್ನು ತೀವ್ರ ದುಃಸ್ಥಿತಿಯ ಸೂಚಿಯನ್ನಾಗಿ ಪರಿಗಣಿಸಬಹುದು. ರಾಜ್ಯದಲ್ಲಿನ ಬಹಳಷ್ಟು ವಲಸೆ ಕಾರ್ಮಿಕರಲ್ಲಿ ಈ ವರ್ಗದ ಪ್ರಮಾಣ ಅಧಿಕವಾಗಿರುತ್ತದೆ. ಇವರಲ್ಲಿ ಅನಕ್ಷರತೆ ಅಧಿಕ. ಈ ವರ್ಗವು ಆಹಾರ ಅಭದ್ರತೆಯನ್ನು ಎದುರಿಸುತ್ತಿರು
ತ್ತದೆ. ರಾಜ್ಯದಲ್ಲಿ ಇವರ ಪ್ರಮಾಣ 71.55 ಲಕ್ಷದಷ್ಟು ಇದ್ದರೆ, ಕಲ್ಯಾಣ ಕರ್ನಾಟಕದಲ್ಲಿ 19.91 ಲಕ್ಷದಷ್ಟು ಇದೆ. ಇದು ಸಣ್ಣ ಸಂಖ್ಯೆಯೇನಲ್ಲ. ಒಟ್ಟಾರೆ ಈ ಪ್ರದೇಶದ‘ಜನಕಲ್ಯಾಣ’ ಬರೀ ಭರವಸೆಗಳಲ್ಲಿ, ಹೆಸರು ಬದಲಾವಣೆ ಪ್ರಕ್ರಿಯೆಯಲ್ಲಿ ಮತ್ತು ಜನರಿಗೆ ಮುಖ್ಯವಲ್ಲದ ಸಂಗತಿಗಳಲ್ಲಿ ಮರೆಯಾಗಿಬಿಟ್ಟಿದೆ.

ಈ ಎಲ್ಲ ಸಂಗತಿಗಳನ್ನು ಗಮನದಲ್ಲಿಟ್ಟು ಸರ್ಕಾರವು ಈ ಪ್ರದೇಶದಲ್ಲಿನ ಜನರ ಕಲ್ಯಾಣಕ್ಕೆ ತೀವ್ರಗತಿಯಲ್ಲಿ ಗಮನ ನೀಡುವುದು ಅವಶ್ಯಕ. ರಾಜ್ಯದ ಅಭಿವೃದ್ಧಿಯು ಹಿಂದುಳಿದ ಪ್ರದೇಶದ ಅಭಿವೃದ್ಧಿಯನ್ನು ಹೆಚ್ಚಾಗಿ ಅವಲಂಬಿಸಿರುತ್ತದೆ. ಏಕೆಂದರೆ ಇಲ್ಲಿ ಅಭಿವೃದ್ಧಿಯ ಸಂಭಾವ್ಯ ಸಾಮರ್ಥ್ಯವು ಈಗಾಗಲೇ ಅಭಿವೃದ್ಧಿ ಹೊಂದಿದ ಪ್ರದೇಶಗಳಿಗಿಂತ ಉತ್ತಮವಾಗಿರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು