ಶುಕ್ರವಾರ, ಮಾರ್ಚ್ 24, 2023
31 °C

ಹಣಕಾಸು ಸಾಕ್ಷರತೆ | ಬಡ್ಡಿ ದರ ಹೆಚ್ಚಳ: ಯಾರಿಗೆ ಲಾಭ? ಯಾರಿಗೆ ನಷ್ಟ?

ರಾಜೇಶ್ ಕುಮಾರ್ ಟಿ. ಆರ್. Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಆರ್‌ಬಿಐ ತುರ್ತಾಗಿ ಬಡ್ಡಿ ದರ ಹೆಚ್ಚಳ ಮಾಡಿರುವುದು ಸಾಲ ಪಡೆದವರಿಗೆ ಮತ್ತು ಪಡೆಯುವವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಆದ್ರೆ, ರೆಪೊ ದರ ಹೆಚ್ಚಳ ಠೇವಣಿದಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಕಳೆದ ನಾಲ್ಕು ವರ್ಷಗಳಿಂದ ಸಾಲಗಳ ಮೇಲೆ ಕಡಿಮೆ ಬಡ್ಡಿ ಪಾವತಿಸಿ ನೆಮ್ಮದಿಯಾಗಿದ್ದ ಗ್ರಾಹಕರಿಗೆ ಮೇ 4 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಶಾಕ್ ಕೊಟ್ಟಿದೆ. ರೆಪೊ ದರ ಅಂದರೆ, ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಸಾಲಗಳ ಮೇಲಿನ ಬಡ್ಡಿ ದರವನ್ನು 40 ಮೂಲಾಂಶಗಳಷ್ಟು (ಶೇ 0.40) ಏರಿಕೆ ಮಾಡಿದೆ. ಬೆಲೆ ಏರಿಕೆ (ಹಣದುಬ್ಬರ) ಕಾರಣದಿಂದ ಬಡ್ಡಿ ದರ ಹೆಚ್ಚಳ ಅನಿವಾರ್ಯ
ವಾಗಿದ್ದರೂ ಆರ್‌ಬಿಐ ತುರ್ತಾಗಿ ಬಡ್ಡಿ ದರ ಹೆಚ್ಚಳ ಮಾಡಿರುವುದು ಸಾಲ ಪಡೆದವರಿಗೆ ಮತ್ತು ಪಡೆಯುವವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಆದ್ರೆ, ರೆಪೊ ದರ ಹೆಚ್ಚಳ ಠೇವಣಿದಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಏನಿದು ರೆಪೊ ಆಧಾರಿತ ಸಾಲ?: ಅಕ್ಟೋಬರ್ 2019 ರ ನಂತರ ರೆಪೊ ಆಧಾರಿತ ಸಾಲ ಪದ್ಧತಿ ಜಾರಿಗೆ ಬಂತು. ಸಾಲ ಪಡೆಯುವ ಗ್ರಾಹಕನಿಗೆ ಬಡ್ಡಿ ಇಳಿಕೆಯ ಲಾಭ ವರ್ಗಾವಣೆ ಮಾಡುವಲ್ಲಿ ಬ್ಯಾಂಕ್‌ಗಳು ಮಂದಗತಿಯ ಧೋರಣೆ ಅನುಸರಿ
ಸುತ್ತಿದ್ದವು ಎನ್ನುವ ಕಾರಣದಿಂದ ರೆಪೊ ದರ ಆಧರಿಸಿ ಸಾಲದ ಬಡ್ಡಿ ದರ ನಿಗದಿ ಮಾಡುವ ವ್ಯವಸ್ಥೆಯನ್ನು ಆರ್‌ಬಿಐ ಜಾರಿಗೆ ತಂದಿತು. ಆರ್‌ಬಿಐ ಪ್ರಕಟಿಸುವ ರೆಪೊ ದರಕ್ಕೆ ಅನುಗುಣವಾಗಿ ಸಾಲದ ಬಡ್ಡಿ ದರಗಳನ್ನು ನಿಗದಿ ಮಾಡುವುದಕ್ಕೆ ರೆಪೊ ದರದ ಸಾಲ ಎಂದು ಕರೆಯಬಹುದು.

ಸಾಲ ಪಡೆದವರಿಗೆ ಕಾದಿದೆ ಕಷ್ಟಕಾಲ: ಕೊರೊನಾ ನಂತರದಲ್ಲಿ ರೆಪೊ ದರ 4 ಕ್ಕೆ ನಿಂತಿತ್ತು. ಆಗ ಬ್ಯಾಂಕ್ ಸಾಲಗಳ ಬಡ್ಡಿ ದರ ಶೇ 6.25 ರ ವರೆಗೂ ಇಳಿಕೆಯಾಗಿತ್ತು. ಬಡ್ಡಿ ದರ ಕಡಿಮೆಯಾಗುತ್ತದೆ ಎಂದು ಅನೇಕ ಗ್ರಾಹಕರು ರೆಪೊ ಪದ್ಧತಿಗೆ ಸಾಲವನ್ನು ವರ್ಗಾವಣೆ ಮಾಡಿಕೊಂಡರು. ಸಾಲವನ್ನು ರೆಪೊಗೆ ವರ್ಗಾಯಿಸಿಕೊಂಡ ಗ್ರಾಹಕರು ನಿರೀಕ್ಷೆಯಂತೆ ಬಡ್ಡಿ ಇಳಿಕೆಯ ಲಾಭವನ್ನೂ ಸುಮಾರು 2 ವರ್ಷಗಳಿಗೂ ಹೆಚ್ಚು ಕಾಲ ಪಡೆದುಕೊಂಡರು. ಇದೀಗ ಮತ್ತೆ ರೆಪೊ ದರ ಹೆಚ್ಚಳವಾಗಿರುವುದರಿಂದ ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಳವಾಗಲಿದೆ. ಐಸಿಐಸಿಐ, ಬ್ಯಾಂಕ್ ಆಫ್ ಬರೋಡಾ, ಫೆಡರಲ್ ಬ್ಯಾಂಕ್ ಸೇರಿ ಅನೇಕ ಬ್ಯಾಂಕ್‌ಗಳು ಈಗಾಗಲೇ ಬಡ್ಡಿ ದರ ಹೆಚ್ಚಳ ಮಾಡಿವೆ. ಅಂದಾಜಿನ ಪ್ರಕಾರ ಈ ವರ್ಷ ಇನ್ನೂ 50 ರಿಂದ 100 ಮೂಲಾಂಶಗಳಷ್ಟು ರೆಪೊ ದರ ಹೆಚ್ಚಳವಾಗಲಿದೆ. ಸದ್ಯ ಗೃಹ ಸಾಲ ಪಡೆದು ಶೇ 6.25 ರಿಂದ ಶೇ 7 ರ ವರೆಗೆ ಬಡ್ಡಿ ಪಾವತಿಸುತ್ತಿದ್ದವರು ಮುಂದಿನ ದಿನಗಳಲ್ಲಿ ಶೇ 7.5 ರಿಂದ ಶೇ 8.5 ರ ವರೆಗೂ ಬಡ್ಡಿ ಪಾವತಿಸಬೇಕಾಗಿ ಬರುತ್ತದೆ. ಕ್ರೆಡಿಟ್ ಸ್ಕೋರ್ 750ಕ್ಕಿಂತ ಕಡಿಮೆ ಇರುವವರು ಮತ್ತಷ್ಟು ಹೆಚ್ಚಿನ ಬಡ್ಡಿ ತೆರಬೇಕಾಗುತ್ತದೆ.

ಸಾಲ ಪಡೆಯದ್ದಿದ್ದರೆ ಈಗಲೇ ಪಡೆಯಿರಿ: ಹೊಸದಾಗಿ ಗೃಹ ಸಾಲ, ವಾಹನ ಸಾಲ ಪಡೆಯುವ ಉದ್ದೇಶವಿದ್ದರೆ ಆದಷ್ಟು ಬೇಗ ಸಾಲ ಪಡೆಯುವುದು ಒಳಿತು. ಬೇಗ ಸಾಲ ಪಡೆದುಕೊಂಡರೆ ಕಡಿಮೆ ಬಡ್ಡಿ ದರದ ಲಾಭ ನಿಮಗೆ ತಕ್ಕಮಟ್ಟಿಗಾದರೂ ಸಿಗಬಹುದು. ಏಕೆಂದರೆ ಕೂಡಲೇ ಬಡ್ಡಿ ದರಗಳು ಮತ್ತಷ್ಟು ಹೆಚ್ಚಳ ಕಾಣಲಿವೆ. ಒಂದೊಮ್ಮೆ ನೀವು ಪೂರ್ವ ನಿಗದಿತ ಬಡ್ಡಿ ದರ (Fixed Rate) ದಲ್ಲಿ ಸಾಲ ಪಡೆದಿದ್ದರೆ ಆರ್‌ಬಿಐ ಬಡ್ಡಿ ದರ ಹೆಚ್ಚಳದ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಆದರೆ ನೆನಪಿರಲಿ ಸಾಮಾನ್ಯವಾಗಿ ಬ್ಯಾಂಕ್‌ಗಳು ಪೂರ್ವ ನಿಗದಿತ ಬಡ್ಡಿ ದರದ (Fixed Rate) ಅಡಿಯಲ್ಲಿ ಸಾಲಗಳನ್ನು ಮಂಜೂರು ಮಾಡುವಾಗ ತುಸು ಹೆಚ್ಚೇ ಬಡ್ಡಿ ನಿಗದಿ ಮಾಡಿರುತ್ತವೆ.

ಸಾಲದ ಹೊರೆಯಿಂದ ಬಚಾವಾಗಲು ಹೀಗೆ ಮಾಡಿ: ಸಾಲದ ಅವಧಿ ಹೆಚ್ಚಾದಂತೆ ಬಡ್ಡಿ ದರವೂ ಹೆಚ್ಚುತ್ತದೆ. ಇದನ್ನು ತಪ್ಪಿಸಲು ಹೆಚ್ಚುವರಿ ಹಣ ಸಿಕ್ಕಾಗಲೆಲ್ಲಾ ಸಾಲದ ಅಸಲಿನ ಮೊತ್ತಕ್ಕೆ ನೀವು ಹಣ ಜಮೆ ಮಾಡುತ್ತಾ ಹೋದರೆ ಸಾಲದ ಒಟ್ಟು ಪ್ರಮಾಣ ಕಡಿಮೆಯಾಗುತ್ತದೆ. ಸಾಲದ ಒಟ್ಟು ಪ್ರಮಾಣ ಕಡಿಮೆಯಾದಾಗ ಸಾಲದ ಅವಧಿಯೂ ತಗ್ಗುತ್ತದೆ. ಸಾಲದ ಅವಧಿ ತಗ್ಗಿದಾಗ ಬಡ್ಡಿಯ ಹೊರೆ ಕಡಿಮೆಯಾಗುತ್ತದೆ. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು ಹೆಚ್ಚುವರಿ ಹಣ ಪಾವತಿಸಲು ಯೋಜನೆ ರೂಪಿಸಿಕೊಳ್ಳಿ.

ಮಾಸಿಕ ಕಂತು (ಇಎಂಐ) ಕಡಿಮೆ ಮಾಡಿಕೊಳ್ಳಬೇಡಿ: ಬಹಳಷ್ಟು ಮಂದಿ ಹೆಚ್ಚುವರಿ ಕಂತುಗಳನ್ನು (Part Payment) ಪಾವತಿಸಿದಾಗ ಸಾಲದ ಅವಧಿಯನ್ನು ತಗ್ಗಿಸಿಕೊಳ್ಳುವ ಬದಲು ಮಾಸಿಕ ಕಂತಿನ ಮೊತ್ತವನ್ನು ಕಡಿಮೆ ಮಾಡಿಸಿಕೊಳ್ಳುತ್ತಾರೆ. ಇದು ಸರಿಯಾದ ನಿರ್ಧಾರವಲ್ಲ. ಇಎಂಐ ಕಡಿಮೆ ಮಾಡಿಸಿಕೊಳ್ಳುವುದರಿಂದ ಸಾಲದ ಅವಧಿ ಹೆಚ್ಚುತ್ತದೆ. ಸಾಲದ ಅವಧಿ ಹೆಚ್ಚಿದಂತೆ ಸಾಲಕ್ಕೆ ಹೆಚ್ಚೆಚ್ಚು ಬಡ್ಡಿ ಕಟ್ಟುತ್ತಲೇ ಇರುತ್ತೀರಿ. ಹಾಗಾಗಿ ನಿಮಗೆ ಆರ್ಥಿಕ ಸಮಸ್ಯೆ ಇಲ್ಲ ಎಂದಾದಲ್ಲಿ ಯಾವುದೇ ಕಾರಣಕ್ಕೂ ಇಎಂಐ ತಗ್ಗಿಸಿಕೊಳ್ಳಬೇಡಿ.

ಹೆಚ್ಚಲಿದೆ ಠೇವಣಿ ದರ: ರೆಪೊ ದರ ಹೆಚ್ಚಳ ಸಾಲ ಪಡೆಯುವವರ ಪಾಲಿಗೆ ಕಹಿ ಸುದ್ದಿಯಾದರೂ ಠೇವಣಿ ಇಡುವವರ ಪಾಲಿಗೆ ಸಿಹಿ ಸುದ್ದಿಯಾಗಿದೆ. ಈಗಾಗಲೇ ಹಲವು ಬ್ಯಾಂಕ್ ಗಳು ಠೇವಣಿ ಮೇಲಿನ ಬಡ್ಡಿ ದರಗಳನ್ನು ಹೆಚ್ಚಳ ಮಾಡಿವೆ. ಆರ್ ಬಿಐ ರೆಪೊ ದರವನ್ನು ಮತ್ತಷ್ಟು ಹೆಚ್ಚಳ ಮಾಡಿದರೆ ಠೇವಣಿಗಳ ಮೇಲಿನ ಬಡ್ಡಿ ದರವೂ ಅದಕ್ಕೆ ತಕ್ಕಂತೆ ಹೆಚ್ಚಳವಾಗಲಿದೆ. ಈಗಿನ ಸನ್ನಿವೇಷದಲ್ಲಿ ರೆಪೊ ಬಡ್ಡಿ ದರದಲ್ಲಿ ಮೇಲಿಂದ ಮೇಲೆ ಪರಿಷ್ಕರಣೆಗಳನ್ನು ನಿರೀಕ್ಷೆ ಮಾಡಬಹುದಾಗಿರುವುದರಿಂದ ದೀರ್ಘಾವಧಿಗೆ ನಿಶ್ಟಿತ ಠೇವಣಿಗಳಿಗೆ ಗ್ರಾಹಕರು ಅಂಟಿಕೊಳ್ಳದಿರುವುದು ಒಳಿತು.


ರಾಜೇಶ್ ಕುಮಾರ್ ಟಿ.ಆರ್.

ಷೇರುಪೇಟೆಯಲ್ಲಿ ನಿಲ್ಲದ ಕುಸಿತ

ಮೇ 13 ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಗಣನೀಯ ಕುಸಿತ ದಾಖಲಿಸಿವೆ. 52,793 ಅಂಶಗಳಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 3.72 ರಷ್ಟು ಕುಸಿತ ಕಂಡಿದೆ. 15,782 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 3.83 ರಷ್ಟು ತಗ್ಗಿದೆ. ಅಮೆರಿಕದಲ್ಲಿ ಹೆಚ್ಚಳವಾಗುತ್ತಿರುವ ಹಣದುಬ್ಬರ, ಭಾರತದಲ್ಲೂ ಬೆಲೆ ಏರಿಕೆ ಬಿಸಿ, ಜಾಗತಿಕವಾಗಿ ಪ್ರಮುಖ ದೇಶಗಳ ಬ್ಯಾಂಕ್ ಗಳಿಂದ ಮತ್ತಷ್ಟು ಬಡ್ಡಿ ದರ ಹೆಚ್ಚಳದ ಮುನ್ಸೂಚನೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಸೃಷ್ಟಿಯಾಗಿರುವ ಮಾರಾಟದ ಒತ್ತಡ ಸೇರಿ ಅನೇಕ ಬೆಳವಣಿಗೆಗಳು ಷೇರುಪೇಟೆ ಇಳಿಕೆಗೆ ಕಾರಣವಾಗಿವೆ.

ವಲಯವಾರು ಸೂಚ್ಯಂಕಗಳಲ್ಲಿ ಎಲ್ಲಾ ವಿಭಾಗಗಳಲ್ಲೂ ಕುಸಿತ ಕಂಡುಬಂದಿದೆ. ನಿಫ್ಟಿ ಬ್ಯಾಂಕ್ ಸೂಚ್ಯಂಕ ಶೇ 4.25 ರಷ್ಟು ತಗ್ಗಿದೆ. ಮಿಡ್ ಕ್ಯಾಪ್ ಶೇ 5.24, ಲೋಹ ವಲಯ ಶೇ 12.41 ಮತ್ತು ಎನರ್ಜಿ ಸೂಚ್ಯಂಕ ಶೇ 10.56 ರಷ್ಟು ಕುಸಿದಿವೆ.

ಗಳಿಕೆ–ಇಳಿಕೆ: ಮಾರುಕಟ್ಟೆಯಲ್ಲಿ ಗಣನೀಯ ಕುಸಿತದ ನಡುವೆಯೂ ಕೆಲ ಕಂಪನಿಗಳು ಹೆಚ್ಚಳ ಕಂಡಿವೆ, ಬಜಾಜ್ ಆಟೋ ಶೇ 4.07, ಐಷರ್ ಮೋಟರ್ಸ್ ಶೇ 2.97, ಡಿವೀಸ್ ಲ್ಯಾಬ್ಸ್ ಶೇ 2.77, ಎಚ್‌ಯುಎಲ್ ಶೇ 2.09 ಮತ್ತು ಏಶಿಯನ್ ಪೇಂಟ್ಸ್ ಶೇ 1.58 ರಷ್ಟು ಗಳಿಕೆ ಕಂಡಿವೆ. ಟಾಟಾ ಸ್ಟೀಲ್ ಶೇ 14.54, ಜೆಎಸ್ ಡಬ್ಲ್ಯೂ ಸ್ಟೀಲ್ ಶೇ 13.03 ರಷ್ಟು ತಗ್ಗಿವೆ.

ಮುನ್ನೋಟ: ಸದ್ಯದ ಮಟ್ಟಿಗೆ ಗುಣಮಟ್ಟದ ಕಂಪನಿಗಳನ್ನು ಮಾತ್ರ ಹೂಡಿಕೆಗೆ ಪರಿಗಣಿಸಬಹುದು. ಹೆಚ್ಚು ಸಾಲ ಹೊಂದಿರುವ ಕಂಪನಿಗಳು ಮತ್ತು ಉತ್ತಮ ಆಡಳಿತ ಮಂಡಳಿ ಇಲ್ಲದ ಕಂಪನಿಗಳಿಂದ ದೂರವಿರುವುದು ಒಳಿತು. ಷೇರುಪೇಟೆ ಕರಡಿ ಹಿಡಿತದಲ್ಲಿರುವಾಗ ಉತ್ತಮ ಕಂಪನಿಗಳ ಷೇರುಗಳು ಕಡಿಮೆ ಬೆಲೆಗೆ ಸಿಗುತ್ತವೆ. ಅಂತಹ ಆಯ್ಕೆಗಳನ್ನು ಅಧ್ಯಯನದ ಮೂಲಕ ಪರಿಗಣಿಸಬಹುದು. ಇದರಿಂದ ದೀರ್ಘಾವಧಿಯಲ್ಲಿ ಹೆಚ್ಚು ಲಾಭ ಗಳಿಸಲು ಸಾಧ್ಯವಾಗುತ್ತದೆ.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು