ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಸಾಕ್ಷರತೆ: ಸಂಪತ್ತಿನ ಗಣಿ ‘ಕಾಫಿ ಕ್ಯಾನ್ ಹೊಡಿಕೆ’

Last Updated 11 ಜುಲೈ 2022, 1:11 IST
ಅಕ್ಷರ ಗಾತ್ರ

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಸಂಪತ್ತು ಸೃಷ್ಟಿಸಲು ನೆರವಾಗುವ ಹಲವಾರು ಸೂತ್ರಗಳ ಬಗ್ಗೆ ನೀವು ಕೇಳಿರಬಹುದು. ಅವುಗಳಲ್ಲಿ ಒಂದಾಗಿರುವ ‘ಕಾಫಿ ಕ್ಯಾನ್ ಹೂಡಿಕೆ’ ಸೂತ್ರದ ಬಗ್ಗೆ ನಿಮಗೆ ಗೊತ್ತೇ? 2018ರಿಂದ ಈಚೆಗೆ ಭಾರತದಲ್ಲಿ ಈ ಬಗೆಯ ಹೂಡಿಕೆ ಪದ್ಧತಿ ಮುನ್ನೆಲೆಗೆ ಬಂದಿದೆ. ಉತ್ತಮ ಕಂಪನಿಗಳ ಷೇರುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ದೀರ್ಘಾವಧಿಗೆ ಇಟ್ಟುಕೊಂಡು ಲಾಭ ಗಳಿಸಿಕೊಳ್ಳುವ ಹೂಡಿಕೆ ಪದ್ಧತಿಯನ್ನು ‘ಕಾಫಿ ಕ್ಯಾನ್ ಹೂಡಿಕೆ’ ಎಂದು ಕರೆಯುತ್ತಾರೆ. ಸಂಪತ್ತು ಸೃಷ್ಟಿಯ ಗಣಿ ಎಂದೇ ಕರೆಸಿಕೊಂಡಿರುವ ‘ಕಾಫಿ ಕ್ಯಾನ್ ಹೂಡಿಕೆ’ ಬಗ್ಗೆ ಮತ್ತಷ್ಟು ತಿಳಿಯೋಣ.

‘ಕಾಫಿ ಕ್ಯಾನ್ ಹೂಡಿಕೆ’ ಅಂದರೆ: ಉತ್ತಮ ಕಂಪನಿಯ ಷೇರುಗಳನ್ನು ಗುರುತಿಸಿ ಅವುಗಳಲ್ಲಿ ಹೂಡಿಕೆ ಮಾಡಿ, ಕನಿಷ್ಠ 10 ವರ್ಷಗಳ ಕಾಲವಾದರೂ ಅವುಗಳನ್ನು ಹಾಗೇ ಇರಿಸಿಕೊಳ್ಳುವುದೇ ‘ಕಾಫಿ ಕ್ಯಾನ್ ಹೂಡಿಕೆ’. ಉದಾಹರಣೆಗೆ, 2002ರಲ್ಲಿ ₹ 2 ಸಾವಿರ ಖರ್ಚು ಮಾಡಿ ಟೈಟನ್ ಕಂಪನಿಯ ಒಂದು ಸಾವಿರ ಷೇರುಗಳನ್ನು ಖರೀದಿಸಿದ್ದರೆ ಇವತ್ತು ನಿಮ್ಮ ಬಳಿ ₹ 21 ಲಕ್ಷಕ್ಕೂ ಹೆಚ್ಚು ಹಣ ಇರುತ್ತಿತ್ತು. 2002ರಲ್ಲಿ ಟೈಟನ್ ಕಂಪನಿಯ ಪ್ರತಿ ಷೇರಿನ ಬೆಲೆ ₹ 2 ಆಗಿತ್ತು. ಈಗ ಅದರ ಬೆಲೆ ₹ 2,100ಕ್ಕೂ ಹೆಚ್ಚು. ಖರೀದಿಸಿ ಮತ್ತು ಮರೆತುಬಿಡಿ ಎನ್ನುವುದೇ ‘ಕಾಫಿ ಕ್ಯಾನ್ ಹೂಡಿಕೆ’ಯ ತತ್ವ.

ಉತ್ತಮ ಷೇರುಗಳನ್ನು ದೀರ್ಘಾವಧಿಗೆ ಖರೀದಿಸಿ ಇಟ್ಟುಕೊಂಡಾಗ ಹೂಡಿಕೆದಾರನಿಗೆ ದೊಡ್ಡ ಮೊತ್ತದ ಲಾಭ ಸಿಗುವ ಸಾಧ್ಯತೆ ಹೆಚ್ಚು ಎನ್ನುವುದೇ ಇದರ ಹಿಂದಿನ ಲೆಕ್ಕಾಚಾರ. ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿಸಬೇಕು ಎಂದು ಬಯಸುವವರಿಗೆ ಇದೊಂದು ಒಳ್ಳೆಯ ಹೂಡಿಕೆ ವಿಧಾನ.

‘ಕಾಫಿ ಕ್ಯಾನ್ ಹೂಡಿಕೆ’ ಹುಟ್ಟು: 1984ರಲ್ಲಿ ಅಮರಿಕದ ಹೂಡಿಕೆ ತಜ್ಞ ರಾಬರ್ಟ್ ಜಿ. ಕರ್ಬಿ ‘ಕಾಫಿ ಕ್ಯಾನ್ ಹೂಡಿಕೆ’ ಪದ್ಧತಿಯನ್ನು ಪರಿಚಯಿಸಿದರು. ಪಶ್ಚಿಮ ಅಮೆರಿಕದಲ್ಲಿ ಜನರು ಅಮೂಲ್ಯ ವಸ್ತುಗಳನ್ನು ಕಾಫಿ ಡಬ್ಬದಲ್ಲಿ ಬಚ್ಚಿಡುತ್ತಿದ್ದರು. ಆ ಕಾರಣದಿಂದ ಈ ಪರಿಕಲ್ಪನೆಗೆ ‘ಕಾಫಿ ಕ್ಯಾನ್ ಹೂಡಿಕೆ’ ಎನ್ನುವ ಹೆಸರು ಬಂತು. ಭಾರತೀಯರು ಚಿನ್ನ, ರಿಯಲ್ ಎಸ್ಟೇಟ್ ಮತ್ತಿತರ ಹೂಡಿಕೆಗಳಲ್ಲಿ ‘ಕಾಫಿ ಕ್ಯಾನ್ ಹೂಡಿಕೆ’ ಪದ್ಧತಿಯನ್ನು ಅದಾಗಲೇ ಅನುಸರಿಸಿಕೊಂಡು ಬರುತ್ತಿದ್ದಾರೆ. ಈಗ ಅದು ಷೇರು ಹೂಡಿಕೆಗೂ ಬಂದಿದೆ.

ಭಾರತದಲ್ಲಿ ಆಂಬಿಟ್ ಕ್ಯಾಪಿಟಲ್‌ನ ಸೌರಬ್ ಮುಖರ್ಜಿ ‘ಕಾಫಿ ಕ್ಯಾನ್ ಹೂಡಿಕೆ’ಯನ್ನು 2018ರಲ್ಲಿ ಮುನ್ನೆಲೆಗೆ ತಂದರು.

ಈ ಮೂರು ಅಂಶಗಳು ಮುಖ್ಯ

1. ಕಂಪನಿಯ ಮಾರುಕಟ್ಟೆ ಮೌಲ್ಯ ₹ 500 ಕೋಟಿಗಿಂತ ಹೆಚ್ಚಿರಬೇಕು: ‘ಕಾಫಿ ಕ್ಯಾನ್’ ಪದ್ಧತಿಯಲ್ಲಿ ಹೂಡಿಕೆಗೆ ನಾವು ಆಯ್ಕೆ ಮಾಡಿಕೊಳ್ಳುವ ಕಂಪನಿಯ ಮಾರುಕಟ್ಟೆ ಮೌಲ್ಯ (ಮಾರ್ಕೆಟ್ ಕ್ಯಾಪಿಟಲೈಸೇಷನ್) ₹ 500 ಕೋಟಿಗೂ ಹೆಚ್ಚಿಗೆ ಇರಬೇಕು. ಅದಕ್ಕಿಂತ ಕಡಿಮೆ ಮೌಲ್ಯದ ಕಂಪನಿಯ ಷೇರುಗಳನ್ನು ಪರಿಗಣಿಸಬಾರದು. ಕಂಪನಿಯೊಂದರ ಒಟ್ಟು ಷೇರುಗಳನ್ನು ಆ ಷೇರಿನ ಪ್ರಸ್ತುತ ಬೆಲೆಯೊಂದಿಗೆ ಗುಣಿಸಿದಾಗ ಕಂಪನಿಯ ಮಾರುಕಟ್ಟೆ ಮೌಲ್ಯ ತಿಳಿಯುತ್ತದೆ.

2. ಸ್ಥಿರ ಲಾಭ ಕೊಡುವ ಷೇರು ಆಯ್ಕೆ ಮುಖ್ಯ: ‘ಕಾಫಿ ಕ್ಯಾನ್’ ಹೂಡಿಕೆ ಮಾಡುವಾಗ ಸ್ಥಿರವಾಗಿ ಲಾಭ ತಂದುಕೊಡುತ್ತಿರುವ ಕಂಪನಿಗಳ ಷೇರುಗಳನ್ನು ಮಾತ್ರ ಪರಿಗಣಿಸಬೇಕು. ಕಳೆದ 5ರಿಂದ 10 ವರ್ಷಗಳಲ್ಲಿ ನಿರ್ದಿಷ್ಟ ಕಂಪನಿಯ ಗಳಿಕೆ (ರೆವಿನ್ಯೂ) ಸರಾಸರಿ ಶೇಕಡ 10ರಷ್ಟು ಇರಲೇಬೇಕು.

3. ಹೂಡಿಕೆ ಮೇಲಿನ ಗಳಿಕೆ: ಷೇರು ಆಯ್ಕೆ ಮಾಡಿಕೊಳ್ಳುವಾಗ ಆ ಷೇರಿನ ಹೂಡಿಕೆ ಮೇಲಿನ ಗಳಿಕೆ ಕಳೆದ ಐದು ವರ್ಷಗಳ ಅವಧಿಯಲ್ಲಿ ಕನಿಷ್ಠ ಶೇ 15ರಷ್ಟು ಇರುವಂತೆ ನೋಡಿಕೊಳ್ಳಿ.

4. ದೀರ್ಘಾವಧಿಯ ಮಹತ್ವ: ‘ಕಾಫಿ ಕ್ಯಾನ್ ಹೂಡಿಕೆ’ ಮಾಡುವಾಗ ದೀರ್ಘಾವಧಿ ಲೆಕ್ಕಾಚಾರ ಇರಬೇಕು. ಮಾರುಕಟ್ಟೆ ಏರಿಳಿತಕ್ಕೆ ತಲೆಕೆಡಿಸಿಕೊಳ್ಳದೆ ನಿರಂತರವಾಗಿ ಹೂಡಿಕೆ ಮಾಡುತ್ತ ಮುನ್ನಡೆಯುವ ಮನಃಸ್ಥಿತಿ ನಿಮ್ಮದಾಗಿರಬೇಕು.

ನೆನಪಿಡಿ: ‘ಕಾಫಿ ಕ್ಯಾನ್ ಹೂಡಿಕೆ’ ಮಾಡುವಾಗ ಸೂಕ್ತ ಷೇರುಗಳ ಆಯ್ಕೆ ಬಹಳ ಮುಖ್ಯ. ವಿವಿಧ ಆನ್‌ಲೈನ್ ಉಪಕರಣಗಳನ್ನು, ಕೆಲವು ವಿಶ್ವಾಸಾರ್ಹ ವೆಬ್‌ಸೈಟ್‌ಗಳಲ್ಲಿನ ಮಾಹಿತಿ ಬಳಸಿ ಮೇಲೆ ಸೂಚಿಸಿರುವ ನಿಯಮದ ಆಧಾರದಲ್ಲಿ ಉತ್ತಮ ಕಂಪನಿಗಳನ್ನು ಪತ್ತೆ ಮಾಡಬಹುದು. ನಿಮಗೆ ಅದು ತಿಳಿಯದಿದ್ದಲ್ಲಿ ವೃತ್ತಿಪರ, ಸ್ವತಂತ್ರ ಹಣಕಾಸು ಮತ್ತು ಹೂಡಿಕೆ ಸಲಹೆಗಾರರ ನೆರವು ಪಡೆದು ಮುನ್ನಡೆಯಿರಿ.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

****

ಷೇರುಪೇಟೆ ಸೂಚ್ಯಂಕಗಳ ಓಟ

ಜುಲೈ 9ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಉತ್ತಮ ಗಳಿಕೆ ಕಂಡಿವೆ. 54,481 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇಕಡ 2.97ರಷ್ಟು ಜಿಗಿದಿದೆ.

16,220 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ–50 ಸೂಚ್ಯಂಕ ಶೇ 2.97ರಷ್ಟು ಹೆಚ್ಚಳ ದಾಖಲಿಸಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಚೇತರಿಕೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರಲ್ಲಿ ಕಡಿಮೆಯಾದ ಮಾರಾಟದ ಒತ್ತಡ, ತೈಲ ಬೆಲೆ ಇಳಿಕೆ ಸೇರಿ ಹಲವು ಅಂಶಗಳು ಮಾರುಕಟ್ಟೆ ಜಿಗಿತಕ್ಕೆ ಕೊಡುಗೆ ನೀಡಿವೆ.

ವಲಯವಾರು ಪ್ರಗತಿಯಲ್ಲಿ ಎಲ್ಲ ಕ್ಷೇತ್ರಗಳ ಸೂಚ್ಯಂಕಗಳಲ್ಲೂ ಸುಧಾರಣೆ ಕಂಡುಬಂದಿದೆ. ಬಿಎಸ್‌ಇ ಕನ್ಸ್ಯೂಮರ್ ಡ್ಯೂರೆಬಲ್ ಸೂಚ್ಯಂಕ ಶೇ 6.5ರಷ್ಟು ಹೆಚ್ಚಳವಾಗಿದೆ. ಬಿಎಸ್‌ಇ ಕ್ಯಾಪಿಟಲ್ ಗೂಡ್ಸ್ ಸೂಚ್ಯಂಕ ಶೇ 6ರಷ್ಟು ಹೆಚ್ಚಳವಾಗಿದೆ. ಬಿಎಸ್ಇ ಎಫ್‌ಎಂಸಿಜಿ ವಲಯ ಶೇ 5ರಷ್ಟು ಜಿಗಿದಿದೆ.

ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರು ₹ 2,218.38 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 3,910.33 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಗಳಿಕೆ: ಬಿಎಸ್ಇ ಮಿಡ್ ಕ್ಯಾಪ್ ಸೂಚ್ಯಂಕ ಶೇ 3.6ರಷ್ಟು ಗಳಿಸಿಕೊಂಡಿದೆ. ಈ ವಲಯದಲ್ಲಿ ಕೆನರಾ ಬ್ಯಾಂಕ್, ಎಬಿಬಿ ಇಂಡಿಯಾ, ಮಹಿಂದ್ರ ಆ್ಯಂಡ್ ಮಹಿಂದ್ರ ಫೈನಾನ್ಸಿಯಲ್ ಸರ್ವಿಸಸ್, ಇಮಾಮಿ, ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾ, ಕುಮಿನ್ಸ್ ಇಂಡಿಯಾ, ಹನಿವೆಲ್ ಆಟೋಮೇಷನ್, ಯುನೈಟೆಡ್ ಬ್ರೆವೆರಿಸ್ ಮತ್ತು ಒಬೆರಾಯ್ ರಿಯಾಲ್ಟಿ ಒಳ್ಳೆಯ ಗಳಿಕೆ ದಾಖಲಿಸಿವೆ.

ಬಿಎಸ್ಇ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 3.3ರಷ್ಟು ಸುಧಾರಿಸಿದೆ. ಹಿಮಾದ್ರಿ ಸ್ಪೆಷಾಲಿಟಿ ಕೆಮಿಕಲ್, ಪಿಸಿ ಜ್ಯುವೆಲರ್ಸ್, ಸ್ಟೀಲ್ ಎಕ್ಸ್‌ಚೇಂಜ್ ಇಂಡಿಯಾ, ಶೋಭಾ, ಟಾರ್ಸನ್ಸ್ ಪ್ರಾಡಕ್ಟ್ಸ್, ಸಿಯೇಟ್, ಎಎಂಐ ಆರ್ಗ್ಯಾನಿಕ್ಸ್, ಟಸಿಪಿಎಲ್ ಪ್ಯಾಕಿಂಗ್, ಡಿಬಿ ರಿಯಾಲ್ಟಿ, ಬಟರ್ ಫ್ಲೈ ಗಾಂಧಿಮತಿ ಅಪ್ಲಯೆನ್ಸಸ್ ತಲಾ ಶೇ 15ರಷ್ಟು ಗಳಿಸಿಕೊಂಡಿವೆ.

ಬಿಎಸ್ಇ ಲಾರ್ಜ್ ಕ್ಯಾಪ್‌ನಲ್ಲಿ ಡಿಮಾರ್ಟ್, ಸ್ಟಾರ್ ಹೆಲ್ತ್, ಐಸಿಐಸಿಐ ಲೊಂಬಾರ್ಡ್, ಸೀಮನ್ಸ್, ಟಾಟಾ ಮೋಟರ್ಸ್ – ಡಿವಿಆರ್, ಎಸ್‌ಬಿಐ ಕಾರ್ಡ್ಸ್ ಆ್ಯಂಡ್ ಪೇಮೆಂಟ್ಸ್, ಟೈಟನ್ ಕಂಪನಿಗಳು ಶೇ 10ರಿಂದ ಶೇ 16ರವರೆಗೆ ಜಿಗಿತ ಕಂಡಿವೆ.

ಮುನ್ನೋಟ: ಸೂಚ್ಯಂಕಗಳು ಕಳೆದ ವಾರ ಭಾರೀ ಚೇತರಿಕೆ ಕಂಡಿವೆ ಎಂದಮಾತ್ರಕ್ಕೆ ಪೇಟೆಯಲ್ಲಿ ಗೂಳಿಯ ಓಟ ಶುರುವಾಗಿದೆ ಎಂದಲ್ಲ. ಷೇರುಪೇಟೆಯಲ್ಲಿ ಅನಿಶ್ಚಿತತೆ ಇದ್ದೇ ಇದೆ. ಫೈಪೈಸಾ, ಮೈಂಡ್ ಟ್ರೀ, ಎಚ್‌ಸಿಎಲ್ ಟೆಕ್, ಎಸಿಸಿ, ಬಟರ್ ಫ್ಲೈ, ಜಿಂದಾಲ್ ಸ್ಟೀಲ್, ಫೆಡರಲ್ ಬ್ಯಾಂಕ್, ಬಿಇಎಲ್, ಎಚ್‌ಡಿಎಫ್‌ಸಿ ಬ್ಯಾಂಕ್, ಸಹರಾ, ಐಸಿಐಸಿಐ ಪ್ರುಡೆನ್ಸಿಯಲ್, ಆನಂದ್ ರಾಠಿ, ಡೆಲ್ಟಾ ಕಾರ್ಪ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT