ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರವಿಂದ ಚೊಕ್ಕಾಡಿ ಲೇಖನ | ಆರ್ಥಿಕತೆ ಮತ್ತು ಸ್ವಾವಲಂಬನೆ

Last Updated 6 ಆಗಸ್ಟ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

‘ಮನುಷ್ಯನ ಆಸೆಗಳು ಅಗಾಧವಿರುತ್ತವೆ. ಆದರೆ ಅವನ್ನು ಪೂರೈಸಿಕೊಳ್ಳಲು ಇರುವ ಅವಕಾಶಗಳು ಕಡಿಮೆ ಇರುತ್ತವೆ. ಆಗ ಅವಶ್ಯಕತೆಗಳ ನಡುವೆ ಮನುಷ್ಯನು ಆಯ್ಕೆಗಳನ್ನು ಮಾಡಿಕೊಳ್ಳುತ್ತಾನೆ’ ಎನ್ನುವುದು ಲಯನೋಲ್ ರಾಬಿನ್ಸ್ ಅವರ ‘ಕೊರತೆ’ಯ ವ್ಯಾಖ್ಯಾನ. ಇದು, ಅರ್ಥಶಾಸ್ತ್ರದಲ್ಲಿ ಪ್ರಸಿದ್ಧವಾಗಿದೆ. ಆಸೆಗಳು ಎಂದರೆ ಬೇಕುಗಳು. ಅವನ್ನು ಈಡೇರಿಸಿಕೊಳ್ಳಲು ಇರುವ ಅವಕಾಶಗಳು ಅಂದರೆ ಸಂಪನ್ಮೂಲ; ಅರ್ಥಾತ್ ಹಣ. ಆಸೆ ಜಾಸ್ತಿ ಇದ್ದು, ಹಣ ಕಡಿಮೆ ಇದ್ದಾಗ ಹೆಚ್ಚು ಅಗತ್ಯವಾದದ್ದು ಯಾವುದಿದೆಯೋ ಅದನ್ನು ಖರೀದಿಸುತ್ತೇವೆ. ಇದು ಒಂದು ಸಾರ್ವಕಾಲಿಕ ಸತ್ಯವಾಗಿದೆ.

ಇದರ ನಡುವೆ ಇನ್ನೊಂದು ಸಂಗತಿ ಇದೆ. ಬಡತನದ ವಿಷವರ್ತುಲದೊಳಗೆ ಸರ್ಕಾರವು ಪ್ರವೇಶಿಸಿ ಬಡವರನ್ನು ಬಡತನದಿಂದ ಹೊರಗೆ ತರಬೇಕು ಎನ್ನುವುದು. 1990ರ ದಶಕದ ಮಧ್ಯದತನಕ ಸರ್ಕಾರಗಳು ಈ ಕೆಲಸವನ್ನೇ ಮಾಡಿದವು. ಬಡವರಲ್ಲಿ ಆದಾಯದ ಕೊರತೆ ಇರುವುದರಿಂದ ಅವರ ಹೂಡಿಕೆ ಕಡಿಮೆ ಇರುತ್ತದೆ. ಕಡಿಮೆ ಹೂಡಿಕೆಯಿಂದ ಕಡಿಮೆ ಉತ್ಪಾದನೆ. ಕಡಿಮೆ ಉತ್ಪಾದನೆಯಿಂದ ಕಡಿಮೆ ಆದಾಯ. ಆದ್ದರಿಂದ ಬಡತನದ ವಿಷವರ್ತುಲ ಹಾಗೆಯೇ ಉಳಿಯುತ್ತದೆ. ಈ ವಿಷವರ್ತುಲಕ್ಕೆ ಸರ್ಕಾರವು ಪ್ರವೇಶಿಸಿ ಬಡವರ ಹೂಡಿಕೆಯ ಶಕ್ತಿಯನ್ನು ಜಾಸ್ತಿ ಮಾಡಬೇಕು. ಆಗ ಉತ್ಪಾದನೆ ಜಾಸ್ತಿಯಾಗಿ ಆದಾಯವೂ ಜಾಸ್ತಿ ಬಂದು ಬಡತನದ ವಿಷವರ್ತುಲದಿಂದ ಬಡವರು ಹೊರಬರಲು ಸಾಧ್ಯವಾಗುತ್ತದೆ. ಅಂದರೆ ಸರ್ಕಾರವು ನೀಡುವ ಆರ್ಥಿಕ ಉತ್ತೇಜನವು ಬಡವರ ಹೂಡಿಕೆ ಮತ್ತು ಉತ್ಪಾದನಾ ಶಕ್ತಿಯ ಹೆಚ್ಚಳಕ್ಕಾಗಿ ಇರುವುದು ವಿನಾ ಅನುತ್ಪಾದಕವಾಗಿ ಖರ್ಚು ಮಾಡಲು ಅಲ್ಲ. ಭೂಸುಧಾರಣೆ, 20 ಅಂಶಗಳ ಕಾರ್ಯಕ್ರಮಗಳಂತಹವು ಇದೇ ಉದ್ದೇಶವನ್ನು ಹೊಂದಿದ್ದವು. ಆದರೆ ಜಾಗತೀಕರಣದ ನಂತರ ಬಂದ ದೊಡ್ಡ ಪ್ರಮಾಣದ ಹಣದ ಹರಿವು ಬಡತನದ ವಿಷ ವರ್ತುಲದೊಳಗೆ ಸರ್ಕಾರದ ಪ್ರವೇಶವನ್ನು ಬೇರೆಯದೇ ಅರ್ಥದಲ್ಲಿ ಕಾಣಿಸತೊಡಗಿತು. ಹಲವು ಹೆಸರುಗಳಲ್ಲಿ ಜನರಿಗೆ ಹಣ ಅಥವಾ ನೆರವನ್ನು ಕೊಡುವುದು ಎಂಬ ಅರ್ಥವನ್ನು ರೂಪಿಸಿತು. ಈ ಅರ್ಥವು ಜನರ ಚಿಂತನಾಕ್ರಮವನ್ನು ಬದಲಿಸಿತು. ನಮ್ಮೆಲ್ಲ ಅಗತ್ಯಗಳನ್ನು ಪೂರೈಸಿಕೊಡುವುದು ಸರ್ಕಾರದ ಜವಾಬ್ದಾರಿ, ಸಣ್ಣ ತೊಂದರೆಯಾದರೂ ಸರ್ಕಾರ ನಷ್ಟ ತುಂಬಿಕೊಡಬೇಕು ಎಂಬ ಆಲೋಚನಾ ಕ್ರಮವನ್ನು ಬೆಳೆಸಿತು.

ಅರವಿಂದ ಚೊಕ್ಕಾಡಿ

ಸರ್ಕಾರದ ನೆರವನ್ನು ನಿರೀಕ್ಷಿಸುವುದೇ ತಪ್ಪಲ್ಲ. ಜನರಿಗೆ ನೆರವು ನೀಡುವ ಜವಾಬ್ದಾರಿ ಸರ್ಕಾರಕ್ಕಿದೆ. ಒಂದು ಆಡಳಿತಾತ್ಮಕ ಅಗತ್ಯವಾಗಿ ಈ ವ್ಯವಸ್ಥೆ ಇರಬೇಕು. ಜನರನ್ನು ಬೆಂಬಲಿಸುವ ಶಕ್ತಿಯಾಗಿ ಸರ್ಕಾರ ಇಲ್ಲದೇ ಹೋದರೆ ಜನ ಹತಾಶೆಗೆ ಒಳಗಾಗಿ ಆರ್ಥಿಕ ಮತ್ತು ಆರ್ಥಿಕೇತರ ದುಷ್ಪರಿಣಾಮಗಳು ಉಂಟಾಗುತ್ತವೆ. ಆದರೆ ಆಡಳಿತಾತ್ಮಕ ಅಗತ್ಯವನ್ನು ಸಾರ್ವಜನಿಕ ಒತ್ತಡದ ಶಕ್ತಿಗಳು ಒಂದು ತಂತ್ರವಾಗಿ ಮಾರ್ಪಡಿಸಿದಾಗ, ಜನರಲ್ಲಿ ತಮ್ಮ‌ ಬಗ್ಗೆ ತಾವೇ ವಹಿಸಬೇಕಾದ ಎಚ್ಚರಿಕೆ, ತೆಗೆದುಕೊಳ್ಳಬೇಕಾದ ಜವಾಬ್ದಾರಿಯ ಪ್ರವೃತ್ತಿ ಕಡಿಮೆಯಾಗುತ್ತದೆ. ಜನಜೀವನದಲ್ಲಿ ಆರ್ಥಿಕ ಅಶಿಸ್ತು ಉಂಟಾಗುತ್ತದೆ. ಈ ಸ್ಥಿತಿಯೂ ಭಾರತದಲ್ಲಿ ಆಗಿದೆ.

ಆದರೆ, ಜಾಗತೀಕರಣ ಪ್ರಕ್ರಿಯೆಯಲ್ಲಿ ಭಾರತವು ವಿದೇಶಿ ವಸ್ತುಗಳಿಗೆ ತನ್ನ ಮಾರುಕಟ್ಟೆಯನ್ನು ಒದಗಿಸುವುದರಲ್ಲಿ ಸಫಲವಾಯಿತೇ ವಿನಾ ಬೇರೆ ದೇಶದ ಮಾರುಕಟ್ಟೆಯನ್ನು ಗಳಿಸಿಕೊಳ್ಳುವಲ್ಲಿ ಹಿನ್ನಡೆ ಅನುಭವಿಸಿತು. ನಮ್ಮ‌ ಮಾರುಕಟ್ಟೆಯನ್ನು ಕಳೆದುಕೊಂಡೆವು. ಹೊಸ ಮಾರುಕಟ್ಟೆಯನ್ನು ಪಡೆಯಲಿಲ್ಲ. ಈ ಸಮಸ್ಯೆಯನ್ನು ಚೀನಾ, ಜಪಾನ್‌ ಅನುಭವಿಸಲಿಲ್ಲ. ಅವು ತಮ್ಮ‌ ಮಾರುಕಟ್ಟೆಯನ್ನು ಬೆಳೆಸಿದವು. ತಮ್ಮ‌ ಮಾರುಕಟ್ಟೆಯಲ್ಲಿ ವಿದೇಶಿ ವಸ್ತುಗಳು ಹೆಚ್ಚು ಯಶಸ್ಸನ್ನು ಪಡೆಯಲು ಬಿಡಲಿಲ್ಲ.

ಭಾರತವು ಜಾಗತೀಕರಣವನ್ನು ಬಳಸಿದ ರೀತಿಯಿಂದಾಗಿ ಇಲ್ಲಿ ಆವಿಷ್ಕಾರದ ಪ್ರವೃತ್ತಿ ಕಡಿಮೆಯಾಯಿತು. ಇದರರ್ಥ, ಭಾರತಕ್ಕೆ ಆವಿಷ್ಕಾರದ ಶಕ್ತಿ ಇಲ್ಲವೆಂದಲ್ಲ. ಜಾಗತೀಕರಣ ಬರುವ ಮೊದಲು ಸ್ವಯಂ ಶಕ್ತಿಯಿಂದಲೇ ಕೃಷಿ, ನೀರಾವರಿ, ಕೈಗಾರಿಕೆ, ವಿಜ್ಞಾನ- ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ಬಹಳಷ್ಟು ಸಾಧನೆ ಮಾಡಿದೆ. ಆದರೆ ಜಾಗತೀಕರಣವು ತೆರೆದಿಟ್ಟ, ಸುಲಭವಾಗಿ ಹಣ ಬರುವ ವ್ಯವಸ್ಥೆಯು ಬೆಳೆಸಿದ ಆಲಸ್ಯದಿಂದಾಗಿ ನಂತರ ಹೆಚ್ಚು ಹೆಚ್ಚು ವಿದೇಶಿ ವಸ್ತುಗಳ ಮೇಲೆ ಅವಲಂಬಿತರಾದೆವು.

ಈ ಸ್ಥಿತಿಯು 2013ರ ವೇಳೆಗೆ ಭಾರತದಲ್ಲಿ ಜಾಗತೀಕರಣದ ಇನ್ನಷ್ಟು ವ್ಯಾಪಕ ಸಾಧ್ಯತೆ ಇಲ್ಲ ಎಂಬ ಸನ್ನಿವೇಶ ನಿರ್ಮಿಸಿತು. ಇದನ್ನು ಅಂದಿನ ಪ್ರಧಾನಿ ಮನಮೋಹನ ಸಿಂಗ್ ಸಂದರ್ಶನವೊಂದರಲ್ಲಿ, ಉದ್ಯೋಗ ಸೃಷ್ಟಿಯ ಕುರಿತಾಗಿ ಮಾತನಾಡುತ್ತಾ ಸೂಚ್ಯವಾಗಿ ಹೇಳಿದ್ದರು.

ಭಾರತದಲ್ಲಿ 2013ರಿಂದ ಪ್ರಾರಂಭವಾದ ಜಾಗತೀಕರಣದ ಅವಕಾಶಗಳ ಕುಸಿತವು, 2014ರಲ್ಲಿ ಅಸ್ತಿತ್ವಕ್ಕೆ ಬಂದ ಎನ್.ಡಿ.ಎ. ಸರ್ಕಾರವು ‘ಮೇಕ್ ಇನ್ ಇಂಡಿಯಾ’ ಪರಿಕಲ್ಪನೆಯನ್ನು ಎಷ್ಟು ತೀವ್ರಗತಿಯಲ್ಲಿ ಪ್ರಚುರಪಡಿಸಿದರೂ ವಿಶೇಷ ಅನುಕೂಲವನ್ನು ಉಂಟುಮಾಡಲಿಲ್ಲ. ಕಾರಣ, ನಾವು ಮಾಡಬೇಕಾಗಿದ್ದ ಮಾರುಕಟ್ಟೆ ವಿಸ್ತರಣೆಯನ್ನು ಮಾಡಿರಲಿಲ್ಲ. ಆದರೆ ಆಗಲೂ ಸರ್ಕಾರದಿಂದ ಜನರಿಗೆ ಕೊಡುಗೆ ಕೊಡಿಸುವ ವ್ಯವಸ್ಥೆ ಮುಂದುವರಿದೇ ಇತ್ತು.

ಪ್ರಜಾಪ್ರಭುತ್ವದಲ್ಲಿರುವ ಒತ್ತಡದ ತಂಡಗಳು ಜನರ ಪರವಾಗಿ ಹೋರಾಟಗಳನ್ನು ಮಾಡುತ್ತವೆ. ಹೋರಾಟದ ಭಾಗವಾಗಿ ಚೌಕಾಸಿಯೂ ಇರುತ್ತದೆ. ಆದರೆ ಜಾಗತೀಕರಣದ ನಂತರ ಹೋರಾಟ ತೀರಾ ಕ್ಷೀಣವಾಯಿತು. ಚೌಕಾಸಿ ಜಾಸ್ತಿಯಾಯಿತು. ಹೋರಾಟ ಮತ್ತು ಚೌಕಾಸಿಯ ನಡುವೆ ವ್ಯತ್ಯಾಸವಿದೆ. ವಿಶಾಲ ವ್ಯಾಪ್ತಿಯ ಸೈದ್ಧಾಂತಿಕ ತಳಹದಿ ಇಟ್ಟುಕೊಂಡು ಮಾಡುವುದು ಹೋರಾಟ. ತನಗೆ ಬೇಕಾದವನಿಗೆ ಏನಾದರೂ ಕೊಡಿಸುವುದಕ್ಕಾಗಿ ಆ ಕ್ಷಣಕ್ಕೆ ಅನುಕೂಲಕರವಾದ ಒಂದು ವಾದವನ್ನು ರಚನೆ ಮಾಡಿಕೊಂಡು ಸಾರ್ವಜನಿಕರ ಗಮನ ಸೆಳೆದು, ಬೇಕಾದ್ದನ್ನು ಕೊಡಿಸಿ ಬಿಟ್ಟುಬಿಡುವುದು ಚೌಕಾಸಿ.

ಆದರೆ ತೀರಾ ದೊಡ್ಡ ಹೊಡೆತ ಬಿದ್ದಾಗ ಚೌಕಾಸಿಯನ್ನೂ ಮಾಡಲು ಆಗುವುದಿಲ್ಲ. ಕೊರೊನಾ ಆ ಸ್ಥಿತಿಯನ್ನು ನಿರ್ಮಿಸಿದೆ. ಸರ್ಕಾರ ನೆರವು ಕೊಟ್ಟಿದೆ. ಆದರೆ ಜನರ ದೃಷ್ಟಿಯಲ್ಲಿ, ಚೌಕಾಸಿಯ ಶಕ್ತಿಗಳ ದೃಷ್ಟಿಯಲ್ಲಿ ಅದು ಸಾಲುತ್ತಿಲ್ಲ. ಸಾಲುತ್ತಿಲ್ಲ ಎನ್ನುವುದು ಸತ್ಯ ಹೌದು. ಆದರೆ ಜನ ಬಯಸಿದ್ದನ್ನೆಲ್ಲ ಕೊಡಲು ಸರ್ಕಾರಕ್ಕೂ ಸಾಧ್ಯವಾಗುತ್ತಿಲ್ಲ ಎನ್ನುವುದೂ ಸತ್ಯವೇ. ಆಗ ಚೌಕಾಸಿಯ ತಂಡಗಳು ನಿಧಾನವಾಗಿ ಮಹತ್ವ ಕಳೆದುಕೊಳ್ಳುತ್ತವೆ. ಹೋರಾಟ ಮಹತ್ವ ಕಳೆದುಕೊಳ್ಳುವುದಿಲ್ಲ. ಬದಲು ಹೋರಾಟದ ಶಕ್ತಿಗಳು ತಮಗೆ ಬೇಕಾದಂತೆ ವಾದ ಹೂಡಿ, ಜನರ ಮುಂದೆ ಹೋಗುವ ಪ್ರವೃತ್ತಿಯಿಂದ ಹೊರಬಂದು, ವಿಶಾಲ ಸೈದ್ಧಾಂತಿಕ ನೆಲೆಗಟ್ಟಿನ ಕಡೆ ಹೋಗಬೇಕಾದ ಅನಿವಾರ್ಯಕ್ಕೆ ಸಿಲುಕಿಕೊಳ್ಳುತ್ತವೆ.

ಜನರ ಮನೋಪ್ರವೃತ್ತಿಯಲ್ಲೂ ಬದಲಾವಣೆಯು ಅನಿವಾರ್ಯವಾಗಿ ಉಂಟಾಗುತ್ತದೆ. ಈಗ ಹಲವರಿಗೆ ಕಂಪನಿಗಳಲ್ಲಿ ಸಂಬಳ ಸಿಗುವುದು ತಡವಾಗುವುದು, ನಗರ ಬಿಟ್ಟು ಹಳ್ಳಿಗೆ ಹೋಗಬೇಕಾದ ಅನಿವಾರ್ಯ ಸ್ಥಿತಿ, ಸಂಬಳ ಕಡಿತ... ಇಂತಹವೆಲ್ಲ ಆಗುತ್ತಿವೆ. ಇಲ್ಲೆಲ್ಲ ‘ಕಳೆದುಕೊಳ್ಳುವಿಕೆ’ಯು ಮೌನವಾಗಿ ನಡೆಯುತ್ತಲೇ ಇದೆ. ಆದರೆ ಹತಾಶೆ ಆಗಿಲ್ಲ. ಭಾರತೀಯರ ಈ ಸ್ವಭಾವವು ಭಾರತದ ಬಹು ದೊಡ್ಡ ಶಕ್ತಿ. ಪರಿಸ್ಥಿತಿ ಏನೇ ಆದರೂ ಜನ ಹತಾಶರಾಗುವುದು ತೀರಾ ಕಡಿಮೆ. ಬದಲಿ ಮಾರ್ಗಗಳನ್ನು ಹುಡುಕಿಕೊಳ್ಳುತ್ತಾರೆ. ಖರ್ಚು ಕಡಿಮೆ ಮಾಡಿಕೊಳ್ಳುತ್ತಾರೆ. ಬೇಕುಗಳ ನಡುವೆ ಆಯ್ಕೆಗಳನ್ನು ಮಾಡಿಕೊಂಡು ಅತೀ ಅನಿವಾರ್ಯವಾದ ‘ಬೇಕು’ ಅನ್ನು ಮಾತ್ರ ಖರೀದಿಸುತ್ತಾರೆ.

ಜನರಿಗೆ ಖಂಡಿತ ಕಷ್ಟವಾಗಿದೆ. ಕಷ್ಟ ಆಗಿರುವುದರಿಂದಲೇ ಅದನ್ನು ನಿರ್ವಹಿಸುವುದು ಹೇಗೆ ಎಂಬ ಹೊಸ ಆಲೋಚನಾ ಕ್ರಮವನ್ನೂ ಬೆಳೆಸಿಕೊಳ್ಳುತ್ತಿದ್ದಾರೆ. ಯಾವ ತಲೆಮಾರು ಹಣದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಖರ್ಚು ಮಾಡುತ್ತಾ ಹೋಯಿತೊ ಅದೇ ತಲೆಮಾರು ಖರ್ಚನ್ನು ಸಮರ್ಪಕಗೊಳಿಸುವುದು ಹೇಗೆ ಎಂಬ ಚಿಂತನೆಯನ್ನು ಯಶಸ್ವಿಯಾಗಿ ರೂಪಿಸಿಕೊಳ್ಳುತ್ತಿದೆ. ಜನ ಸ್ವಾವಲಂಬಿಗಳಾಗುವ ಹಂಬಲವನ್ನೇನೂ ಹೊಂದಿಲ್ಲ. ಆದರೆ ಜಾಗತಿಕ ಆರ್ಥಿಕತೆಯೇ ಜನರನ್ನು ಸ್ವಾವಲಂಬಿಗಳಾಗಬೇಕಾದ ಕಡೆಗೆ ತಳ್ಳಿದೆ. ಹೊಟ್ಟೆ ನೋವಿಗೆ ಔಷಧಿ ಸಿಗಬೇಕಾದರೂ ಕೊರೊನಾ ಪರೀಕ್ಷೆ ಆಗಬೇಕು ಎಂದಾಗ, ಹೊಟ್ಟೆ ನೋವು ಬಾರದ ಹಾಗೆ ತಿನ್ನುವ ವ್ಯವಸ್ಥೆಯನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬ ಆಹಾರ ಪದ್ಧತಿಯೊಂದು ಬೆಳೆಯುತ್ತಾ ಹೋಗಿದೆ. ಈ ಆಲೋಚನಾಕ್ರಮವು ಆರ್ಥಿಕತೆಯನ್ನು ಬೆಳೆಸುವುದಿಲ್ಲ. ಬದಲು ಆರ್ಥಿಕತೆಯನ್ನು ಜವಾಬ್ದಾರಿಯುತವಾಗಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT