ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ| ಶಿವಕಲ್ಯಾಣಕ್ಕೆ ಬ್ರಹ್ಮಸಂಧಾನ

ಭಾಗ 151
ಅಕ್ಷರ ಗಾತ್ರ

ರುದ್ರದೇವನನ್ನು ಪತಿಯಾಗಿ ಪಡೆಯಲು ಸತೀದೇವಿಯು ಮತ್ತೆ ಅಶ್ವಯುಜ ಶುಕ್ಲ ಅಷ್ಟಮಿಯಲ್ಲಿ ಉಪವಾಸವಿದ್ದು, ದೇವದೇವನಾದ ಶಿವನನ್ನು ಭಕ್ತಿಯಿಂದ ಆರಾಧಿಸುತ್ತಾಳೆ. ನಂದಾವ್ರತವು ಮುಗಿಯುವ ನವಮಿಯ ದಿನ ಪ್ರಾತಃಕಾಲದಲ್ಲಿ ಸತೀದೇವಿ ಧ್ಯಾನಮಗ್ನಳಾಗಿರುವಾಗ ಶಿವ ಅವಳೆದುರಿಗೆ ಪ್ರತ್ಯಕ್ಷನಾಗುತ್ತಾನೆ.

ಮಹಾಶಿವ ಸರ್ವಾಂಗಸುಂದರನಾಗಿ ಸುವರ್ಣದಂತೆ ಹೊಳೆಯುವ ಶರೀರಕಾಂತಿಯಿಂದ ಬೆಳಗುತ್ತಿದ್ದ. ಐದು ಮುಖಗಳು, ಮೂರು ಕಣ್ಣುಗಳು, ಲಲಾಟದಲ್ಲಿ ಚಂದ್ರಕಲೆಯು ಪ್ರಕಾಶಿಸುತ್ತಲಿದ್ದವು.
ಶಾಂತಮುದ್ರೆಯಿಂದೊಪ್ಪುತ್ತಿದ್ದ. ಅವನ ಕತ್ತು ನೀಲ ವರ್ಣವಾಗಿತ್ತು. ಆತನ ನಾಲ್ಕು ಬಾಹುಗಳಲ್ಲಿ ಒಂದು ಕೈಯಲ್ಲಿ ತ್ರಿಶೂಲ, ಇನ್ನೊಂದು ಕೈಯಲ್ಲಿ ಬ್ರಹ್ಮಕ, ಮತ್ತೊಂದು ಕೈಯಲ್ಲಿ ವರದಮುದ್ರೆ ಮತ್ತು ಮಗದೊಂದು ಕೈ ಅಭಯಮುದ್ರೆ ಪ್ರದರ್ಶಿಸುತ್ತಿತ್ತು. ಅವನ ಶರೀರ ಭಸ್ಮದಿಂದ ಕಂಗೊಳಿಸುತ್ತಿತ್ತು. ಶಿರಸ್ಸಿನಲ್ಲಿ ದೇವಗಂಗೆ ಪ್ರಕಾಶಿಸುತ್ತಿದ್ದಳು. ತುಂಬಾ ಲಾವಣ್ಯಮಯನಾಗಿ ಕೋಟಿಚಂದ್ರರಂತೆ ಪ್ರಕಾಶಿಸುತ್ತಾ
ಆನಂದದಾಯಕನಾಗಿದ್ದ ಜಗದೊಡೆಯ ಶಂಕರನನ್ನು ನೋಡಿ ಸತೀದೇವಿಯು ರೋಮಾಂಚಿತಳಾದಳು. ಆನಂದೋತ್ಸಾಹದಿಂದ ಶಿವನ ಪಾದಗಳಿಗೆ ನಮಸ್ಕರಿಸಿದಳು.

ಸತೀದೇವಿ ಮಹಾತಪಸ್ಸನ್ನಾಚರಿಸಲು ಕಾರಣ ಗೊತ್ತಿದ್ದರೂ, ಅವಳ ಇಂಪಾದ ವಾಕ್ಯವನ್ನು ಕೇಳಲಿಚ್ಛೆಯಿಂದ ‘ವರವನ್ನು ಕೇಳಿಕೋ’ ಎಂದ ಶಿವ. ಆಗ ಸತೀದೇವಿಯೂ ತನ್ನ ಮನಸ್ಸಿನಲ್ಲಿದ್ದುದನ್ನು ಹೇಳಲಾರದೆ ಲಜ್ಜೆಯಿಂದ ಮಾತನಾಡದೆ ಸುಮ್ಮನೆ ನಿಂತಿದ್ದಳು. ಶಂಕರ ಮತ್ತಷ್ಟು ಸತೀದೇವಿಯನ್ನು ಕೆಣಕಲು ‘ನಿನ್ನ ಭಕ್ತಿಗೆ ಮೆಚ್ಚಿದ್ದೇನೆ. ವರವನ್ನು ಕೇಳಿಕೋ’ ಎಂದು ಪುನಃ ಹೇಳುತ್ತಾನೆ. ಸತೀದೇವಿಯು ‘ಓ ದೇವನೆ, ನಿನಗೆ ಯಾವುದು ಯುಕ್ತವಾಗಿ ತೋರುವುದೋ, ಆ ವರವನ್ನು ಅನುಗ್ರಹಿಸು’ ಎಂದು ಹೇಳುತ್ತಾಳೆ.

ಆಗ ಶಂಕರ ಹೆಚ್ಚು ಕಾಡಿಸಬಾರದೆಂದು ‘ಎಲೈ, ಸತೀದೇವಿ, ನೀನು ನನ್ನ ಭಾರ್ಯೆಯಾಗು’ ಎಂದ. ತನಗೆ ಇಷ್ಟವಾದಂತಹ ಮಾತನ್ನು ಕೇಳಿ ತುಂಬಾ ಹರ್ಷಗೊಂಡ ಸತೀದೇವಿ ಮಾತುಹೊರಡಿಸಲಾಗದೆ ಸುಮ್ಮನೆ ಕೆಲಹೊತ್ತು ನಿಂತಳು. ಮಾತಾಡಲು ಸತೀದೇವಿಗೆ ಸಂಕೋಚವಾಗಿ, ಮಂದಹಾಸ ಬೀರುತ್ತಾ ತನ್ನ ಒಪ್ಪಿಗೆಯನ್ನು ಸೂಚಿಸಿದಳು.

ಈ ಸಂದರ್ಭದಲ್ಲಿ ಶಿವ-ಸತೀದೇವಿಯರ ನಡುವೆ ಶೃಂಗಾರರಸವು ಅವರ ಮನಸ್ಸನ್ನು ಪ್ರವೇಶಿಸಿತು. ಲೋಕಸಾಮಾನ್ಯರಂತೆ ಶಂಗಾರಲೀಲೆ
ಗಳನ್ನು ಪ್ರದರ್ಶಿಸುತ್ತ ಚಿತ್ರಾನಕ್ಷತ್ರದೊಡನಿರುವ ಚಂದ್ರನಂತೆ ಪ್ರಕಾಶಿಸಿದರು. ಸಾಂದ್ರವಾದ ಅಂಜನಖಂಡದಂತೆ ಕಪ್ಪಾದ ಶರೀರಕಾಂತಿಯಂತಿದ್ದ ಸತೀದೇವಿಯು ಶಿವನ ಬಳಿಯಲ್ಲಿ ಸ್ಫಟಿಕದಂತೆ ಶುಭ್ರವಾದ ಕಾಂತಿಯುಳ್ಳ ಚಂದ್ರನ ಬಳಿಯಲ್ಲಿರುವ ನೀಲಮೇಘರೇಖೆಯಂತೆ ಕಂಗೊಳಿಸಿದಳು. ಸತೀದೇವಿ ಸಂತೋಷದಿಂದ ‘ಶಂಕರನೆ, ನನ್ನ ತಂದೆ ಬಳಿ ಅನುಮತಿ ಪಡೆದು ನನ್ನ ಮದುವೆಯಾಗಬೇಕು’ ಎಂದು ಕೋರಿದಳು. ಶಿವನು ಹಾಗೆಯೇ ಆಗಲಿ ಎಂದು ಒಪ್ಪಿದ. ನಂತರ ಸತೀದೇವಿ ಶಂಕರನಿಗೆ ನಮಸ್ಕರಿಸಿ, ತನ್ನ ತಾಯಿಯ ಬಳಿಗೆ ಹೋದಳು.

ಇತ್ತ ಶಿವ ಸಹ ಹಿಮಾಲಯದ ತಪ್ಪಲಲ್ಲಿರುವ ತನ್ನ ಆಶ್ರಮಕ್ಕೆ ತೆರಳಿದ. ಆದರೆ ಸತೀದೇವಿಯ ವಿರಹದಿಂದ ತುಂಬಾ ಪ್ರಯಾಸದಿಂದ ಧ್ಯಾನನಿರತನಾದ. ಮನಸ್ಸು ವಿಚಲಿತವಾಗುತ್ತಿದ್ದರಿಂದ ಬ್ರಹ್ಮನನ್ನು ಸ್ಮರಿಸಿದ. ಕೂಡಲೇ ಬ್ರಹ್ಮ ತನ್ನ ಪತ್ನಿ ಸರಸ್ವತೀದೇವಿಯೊಡನೆ ಶಿವನಿರುವ ಹಿಮಾಲಯದ ತಪ್ಪಲಿಗೆ ಆಗಮಿಸಿದ. ಸರಸ್ವತಿಯೊಡನೆ ಬಂದ ಬ್ರಹ್ಮನನ್ನು ನೋಡಿ ಶಿವ ಉತ್ಸುಕತೆಯಿಂದ ಹೇಳಿದ ‘ಎಲೈ ಬ್ರಹ್ಮನೆ, ಈಗ ನಾನು ಮದುವೆಯನ್ನು ಮಾಡಿಕೊಳ್ಳಬೇಕೆಂದಿರುವೆ. ದಕ್ಷಪುತ್ರಿಯಾದ ಸತೀದೇವಿಯು ಭಕ್ತಿಯಿಂದ ನಂದಾವ್ರತವನ್ನಾಚರಿಸಿ ನನ್ನನ್ನಾರಾಧಿಸಿದಳು. ಅವಳ ಕೋರಿಕೆಯಂತೆ ಮದುವೆಯಾಗಬೇಕೆಂದಿದ್ದೇನೆ. ಆದುದರಿಂದ ನೀನೀಗ ದಕ್ಷನ ಮನೆಗೆ ಹೋಗಿ, ಅವನು ತನ್ನ ಪುತ್ರಿಯನ್ನು ನನಗೆ ಮದುವೆ ಮಾಡಿಕೊಡುವಂತೆ ಹೇಳಬೇಕು’ ಎಂದ.

ಶಿವನ ಮಾತನ್ನು ಕೇಳಿ ಆನಂದಿತನಾದ ಬ್ರಹ್ಮ ಮದುವೆಯ ಸಂಧಾನಕ್ಕಾಗಿ ದಕ್ಷಬ್ರಹ್ಮನ ಬಳಿ ಹೋಗಲು ಒಪ್ಪಿದ. ಸತೀದೇವಿಯನ್ನು ಶಿವ ಮದುವೆಯಾಗುವುದರಲ್ಲಿ ತನಗೂ ಇತರ ದೇವತೆಗಳಿಗೂ ಸಹಮತವಿದೆ ಎಂದು ತಿಳಿಸಿದ್ದಲ್ಲದೆ, ‘ದಕ್ಷಪ್ರಜಾಪತಿ ತನ್ನ ಮಗಳನ್ನು ನಿನಗೆ ಮದುವೆ ಮಾಡಿಕೊಡಲು ಉತ್ಸುಕನಾಗಿದ್ದಾನೆ. ನನ್ನ ಮದುವೆ ಸಂಧಾನ ಔಪಚಾರಿಕವಾಗಿಯಷ್ಟೇ ನಡೆಯುತ್ತದೆ. ಸತೀದೇವಿಯೊಂದಿಗೆ ನಿನ್ನ ವಿವಾಹ ನಿಶ್ಚಿತ’ ಎಂದು ಶಿವನಿಂದ ಬೀಳ್ಕೊಂಡು ಹೊರಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT