ಭೂಮಿಯ ಕಾಲಗತಿಯ ಜೊತೆಜೊತೆಯಲ್ಲೇ ಪ್ರತಿಯೊಂದು ಜೀವಿಯ ವೈಯಕ್ತಿಕ ಕಾಲಗಣನೆಯೂ ನಡೆಯುತ್ತಿರುತ್ತದೆ. ದಿನಗಳು ಉರುಳಿದಂತೆ ನಮ್ಮ ಜೀವಿತದ ಅವಧಿಗಳು ಮುಗಿಯುತ್ತಹೋಗುತ್ತವೆ. ಭೂಮಿ ತಿರುಗಿದಂತೆ ನಮ್ಮ ಬದುಕು ಸಹ ಸಾಗಲೇ ಬೇಕು. ನಮಗಿಷ್ಟವಿರಲಿ, ಇಲ್ಲದಿರಲಿ, ಪ್ರತಿಕ್ಷಣ ಪ್ರಕೃತಿಯೊಂದಿಗೆ ನಾವು ಹೆಜ್ಜೆ ಹಾಕುತ್ತಲೇ ಇರಬೇಕು. ಕೊನೆಗೊಂದು ದಿನ ಕಾಲಗತಿಯೊಂದಿಗೆ ಹೆಜ್ಜೆ ಹಾಕಲು ಸಾಧ್ಯವಾಗದೇ ಇದ್ದಾಗ ನಮ್ಮ ಜೀವನಪಯಣ ಮುಕ್ತಾಯಗೊಳ್ಳುತ್ತೆ. ಇದು ಜೀವಕಾಯಕ್ಕೆ ಮಾತ್ರವಲ್ಲ, ಭೂಮಿ-ಸೂರ್ಯರಂಥ ಗ್ರಹ-ನಕ್ಷತ್ರಕಾಯಗಳಿಗೆಲ್ಲಾ ಕಾಲನಿಯಮ ಅನ್ವಯಿಸುತ್ತೆ. ಈ ಪ್ರಕೃತಿಯ ನಿಯಮ ಮೀರಿ ಯಾರೂ, ಯಾವುದೂ ಅನಂತವಾಗಿರಲು ಸಾಧ್ಯವಿಲ್ಲ.
ನಮ್ಮ ಹುಟ್ಟು ಎಷ್ಟು ನಿಜವೋ, ನಮ್ಮ ಅಂತ್ಯವೂ ಅಷ್ಟೇ ನಿಜ. ನಾವು ಯಾರೂ ಇಲ್ಲಿ ಶಾಶ್ವತವಾಗಿ ಇರಲು ಬಂದವರಲ್ಲ. ತಾತ್ಕಾಲಿಕವಾಗಿ ಈ ಭೂಮಿಗೆ ಬಂದ ಪ್ರವಾಸಿಗರು. ಈ ಗ್ರಹದಿಂದ ಮತ್ತೊಂದು ಗ್ರಹಕ್ಕೆ, ಒಂದು ದೇಹದಿಂದ ಮತ್ತೊಂದು ದೇಹಕ್ಕೆ ನಮ್ಮ ಆತ್ಮಗಳು ಸಂಚರಿಸುತ್ತಲೇ ಇರುತ್ತವೆ. ಪ್ರತಿ ಯಾನವೂ ಯಾತನಾದಾಯಕವೇ ಆದರೂ, ಅದರಲ್ಲೊಂದು ಸೊಗಡಿರುತ್ತೆ. ಬದುಕಿನ ಸೊಬಗು ಇರುತ್ತೆ. ನಾವು ಇರುವಷ್ಟು ಕಾಲ ನಾಲ್ಕು ಜನಕ್ಕೆ ಒಳ್ಳೆಯದು ಮಾಡಿ ಈ ಜಗತ್ತಿನ ವಾಸ್ತವ್ಯಕ್ಕೆ ವಿದಾಯ ಹೇಳುವುದರಲ್ಲಿ ಸೊಗಸಿದೆ. ಇದನ್ನೇ ನಮ್ಮ ಧರ್ಮದಲ್ಲಿ ಕಾಮ-ಅರ್ಥ-ಮೋಕ್ಷ ಅಂತ ಸರಳವಾಗಿ ಬದುಕಿನ ಸೂತ್ರ ಬಿಡಿಸಲಾಗಿದೆ.
ಕೆಲವರು ಹುಟ್ಟು ಆಕಸ್ಮಿಕ ಅನ್ನುತ್ತಾರೆ. ದೇವರ ದೃಷ್ಟಿಯಲ್ಲಿ ಯಾವುದೂ ಆಕಸ್ಮಿಕವಲ್ಲ. ಪೂರ್ವನಿರ್ಧಾರದಂತೆ ನಮ್ಮ ಹುಟ್ಟು-ಸಾವು ನಡೆಯುತ್ತೆ. ಭಗವಂತನ ಇಚ್ಛೆಯಂತೆ ನಡೆವ ಈ ಜಗದ ಚಲನೆಯಲ್ಲಿ ನಾವೆಲ್ಲಾ ಪೂರಕಸಾಧನಗಳಷ್ಟೆ. ಜಗದ ಚಕ್ರಕ್ಕೆ ಕಡಾಣಿಯಾಗಿ, ತೈಲವಾಗಿ, ನೊಗವಾಗಿ ಸಹಕರಿಸುತ್ತಿರುತ್ತೇವೆ. ಚಕ್ರದ ಕಡಾಣಿ ಸವೆದಂತೆ ಮತ್ತೊಂದು ಕಡಾಣಿ ಹುಟ್ಟುತ್ತದೆ, ತೈಲ ಖಾಲಿಯಾದಂತೆ ಮತ್ತೆ ಹೊಸ ತೈಲ ಉತ್ಪತ್ತಿ ಆಗುತ್ತಿರುತ್ತದೆ. ಹೀಗೆ ಜಗದ ಚಕ್ರ ಹೊಸ ಜೀವ ತಳಿಗಳಿಂದ ಮುನ್ನಡೆಯುತ್ತಲೇ ಇರುತ್ತೆ. ಆ ಸೃಷ್ಟಿಚಕ್ರ ಚಲನೆ ನಿಲ್ಲಿಸಿದಾಗ ಪ್ರಳಯವಾಗಿ ಜಗತ್ತು ಕತ್ತಲೆಯಲ್ಲಿ ಮುಳುಗುತ್ತದೆ. ಸಾವಿರಾರು ವರ್ಷಗಳ ನಂತರ ಬ್ರಹ್ಮ ನಿದ್ರೆಯಿಂದ ಎದ್ದಾಗ ಮತ್ತೊಂದು ಸೃಷ್ಟಿ ಚಕ್ರಕ್ಕೆ ಚಾಲನೆ ನೀಡುತ್ತಾನೆ. ಆಗ ಕಾಣುವ ಸೂರ್ಯನ ಹೊಸ ಬೆಳಕು ಹೊಸವರ್ಷವಾಗುತ್ತದೆ.
ಸೂರ್ಯನಿಂದ ಭೂಮಿಗೆ ಬಿದ್ದ ಮೊದಲ ಕಿರಣವೇ ವರ್ಷದ ಮೊದಲ ದಿನ. ಆ ದಿನ ಯಾವುದೂ ಅಂತ ನಮಗೆ ಗೊತ್ತಿಲ್ಲ. ಸೂರ್ಯನ ಚಲನೆಯನ್ನಾಧರಿಸಿ ಭಾರತೀಯರು ಚೈತ್ರಮಾಸದ ಮೊದಲ ದಿನವನ್ನು ಹೊಸ ವರ್ಷವೆಂದು ‘ಯುಗಾದಿ’ ಆಚರಿಸುತ್ತಾರೆ. ಯುಗದ ಆದಿಯನ್ನು ಬಲ್ಲವರಿಲ್ಲ. ಹೀಗಿದ್ದರೂ ನಮ್ಮ ಮಸ್ತಿಷ್ಕಕ್ಕೆ ಹೊಳೆದಂತೆ, ನಮ್ಮ ಐತಿಹ್ಯಕ್ಕೆ ಮತ್ತು ಭೌಗೋಳಿಕತೆಗೆ ತಕ್ಕಂತೆ ಹೊಸ ವರ್ಷವನ್ನು ಆಚರಿಸುತ್ತೇವೆ. ಜಗತ್ತಿನೆಲ್ಲೆಡೆ ಮಾನವರು ತಮ್ಮ ಧರ್ಮ-ಸಂಸ್ಕೃತಿಗೆ ಅನುಗುಣವಾಗಿ ವಿವಿಧ ದಿನ ಹೊಸ ವರ್ಷ ಆಚರಿಸುತ್ತಾರೆ. ಈ ಹೊಸ ವರ್ಷ ಆಚರಣೆ ಸಾಮಾನ್ಯವಾಗಿ ಮೋಜಿನ ಮತ್ತಿನಲ್ಲಿ ನಡೆಯುತ್ತಿರುವುದು ಸರಿಯಲ್ಲ. ಹೊಸ ವರ್ಷದ ದಿನ ಎಂದರೆ, ಅದು ನಮ್ಮ ಬದುಕಿನ ಮೌಲ್ಯಮಾಪನ ದಿನ. ನಮ್ಮ ಹಿಂದಿನ ಬದುಕನ್ನೊಮ್ಮೆ ತಿರುವಿ ಹಾಕಿ, ಮುಂದಿನ ಬದುಕನ್ನು ಸರಿಯಾದ ರೀತಿಯಲ್ಲಿ ರೂಪಿಸಿಕೊಳ್ಳುವ ಪರ್ವಕಾಲ. ನಾವು ಕಳೆದ ವರ್ಷ ಎಲ್ಲಿ ತಪ್ಪು ಮಾಡಿದ್ದೇವೆ? ಮುಂದೆ ಆ ತಪ್ಪನ್ನ ಸರಿಪಡಿಸಿಕೊಂಡು ಹೇಗೆ ಜೀವನ ರೂಪಿಸಿಕೊಳ್ಳಬೇಕು ಎಂಬ ಬಗ್ಗೆ ಸ್ವಯಂ ಆತ್ಮಾವಲೋಕನ ಮಾಡುವ ದಿನ. ಪ್ರತಿಯೊಬ್ಬರು ಹೊಸ ವರ್ಷಕ್ಕೆ ಮುನ್ನಾ, ಕಳೆದ ಬದುಕನ್ನೊಮ್ಮೆ ನೋಡಿ ಮುನ್ನಡೆದರೆ ‘ಸಚ್ಚಿದಾನಂದ’ದ ಸಾರ್ಥಕ ಬದುಕು ಪ್ರಾಪ್ತವಾಗುವುದರಲ್ಲಿ ಸಂದೇಹವಿಲ್ಲ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.