ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣ ಸಾರ| ಶಿವ–ಸತೀ ಮದುವೆ ಸಂಭ್ರಮ

Last Updated 22 ಜೂನ್ 2022, 19:30 IST
ಅಕ್ಷರ ಗಾತ್ರ

ದಕ್ಷಪ್ರಜಾಪತಿ ತನ್ನ ಮಗಳು ಸತೀದೇವಿಯನ್ನು ತನಗೆ ವಿವಾಹ ಮಾಡಿಕೊಡಲು ಒಪ್ಪಿದ್ದಾನೆ ಎಂದು ಬ್ರಹ್ಮ ಹೇಳಿದ ಮಾತನ್ನು ಕೇಳಿ ಸಂಭ್ರಮಿಸಿದ ಶಿವ ಮುಂದಿನ ವಿವಾಹಕಾರ್ಯಕ್ಕೆ ಅಣಿಯಾಗುತ್ತಾನೆ. ಬ್ರಹ್ಮನಿಗೆ ಹೇಳುತ್ತಾನೆ: ‘ವಿಧಿಬ್ರಹ್ಮನೇ, ನಿನ್ನೊಡನೆ ಹಾಗೂ ನಾರದನೊಂದಿಗೆ ಈಗಲೇ ನಾನು ದಕ್ಷನ ಮನೆಗೆ ತೆರಳುವೆ. ನೀನು ನಾರದ, ಮರೀಚಿಮುನಿ ಮೊದಲಾದ ನಿನ್ನ ಮಾನಸಪುತ್ರರನ್ನು ಕರೆಸು. ಅವರ ಜೊತೆ ನನ್ನ ಪ್ರಮಥಗಣಗಳನ್ನೂ ಕರೆದುಕೊಂಡು ದಕ್ಷನ ಮನೆಗೆ ಹೋಗೋಣ’ ಎಂದು.

ಶಿವನ ಮಾತಿನಂತೆ ಬ್ರಹ್ಮ ತನ್ನ ಮಾನಸಪುತ್ರರಾದ ನಾರದ, ಮರೀಚಿ ಮೊದಲಾದವರ ಸ್ಮರಿಸುತ್ತಾನೆ. ತಕ್ಷಣವೇ ಮಾನಸಪುತ್ರರೆಲ್ಲ ಬ್ರಹ್ಮನ ಮುಂದೆ ಪ್ರತ್ಯಕ್ಷರಾಗುತ್ತಾರೆ. ಶಿವ-ಸತೀಯ ವಿವಾಹ ಸಮಾರಂಭಕ್ಕೆ ಹೋಗಬೇಕೆಂದು ಬ್ರಹ್ಮ ತಿಳಿಸಿದಾಗ ಮಾನಸಪುತ್ರರೆಲ್ಲ ಸಂತೋಷದಿಂದ ದಕ್ಷನ ಮನೆ ಕಡೆಗೆ ಹೊರಟರು. ಇತ್ತ ಶಿವ ವಿಷ್ಣುವನ್ನು ಸ್ಮರಿಸಿದಾಗ ಆತ ಕೂಡಲೇ ಲಕ್ಷ್ಮಿಯೊಂದಿಗೆ ಗರುಡವನ್ನೇರಿ ತನ್ನ ಸೈನ್ಯದೊಡನೆ ಅಲ್ಲಿಗೆ ಬಂದ. ಬ್ರಹ್ಮ-ವಿಷ್ಣು ಮತ್ತು ತನ್ನ ಪರಿವಾರದೊಂದಿಗೆ ಶಿವ ಚೈತ್ರ ಮಾಸದ ಶುಕ್ಲ ಪಕ್ಷದ ತ್ರಯೋದಶಿ ದಿನವಾದ ಭಾನುವಾರದಂದು ಉತ್ತರಾ ನಕ್ಷತ್ರದ ಘಳಿಗೆಯಲ್ಲಿ ಮದುವೆಗಾಗಿ ಹೊರಟ.

ಶಿವನ ವಿವಾಹದ ಸುದ್ದಿ ಕೇಳಿ ಬ್ರಹ್ಮ-ವಿಷ್ಣು-ಶಿವನ ಪರಿವಾರವಲ್ಲದೆ, ಹದಿನಾಲ್ಕು ಲೋಕದ ಎಲ್ಲಾ ದೇವತೆಗಳು, ಮುನಿಗಳು ಮದುವೆ ದಿಬ್ಬಣದೊಂದಿಗೆ ಸೇರಿದರು. ಮದುವೆ ಪರಿವಾರದೊಂದಿಗೆ ದಕ್ಷನ ಮನೆಗೆ ಮದುಮಗನಾಗಿ ಶಿವ ಹೋಗುತ್ತಿರುವಾಗ ತುಂಬಾ ಆಕರ್ಷಕವಾಗಿ ಶೋಭಿಸುತ್ತಿದ್ದ. ನಂದೀಕೇಶ್ವರನ ಮೇಲೆ ಮದುಮಗ ಶಿವ ಕುಳಿತಿದ್ದ. ಹಿಂಬಾಲಿಸಿ ಹೋಗುತ್ತಿದ್ದ ದೇವತೆಗಳು, ಮುನಿಗಳು ಮತ್ತು ಶಿವನ ಪ್ರಮಥಗಣಗಳು ಉತ್ಸಾಹಭರಿತರಾಗಿದ್ದರು. ಗಜಚರ್ಮ, ವ್ರಾಘ್ರಚರ್ಮ, ಸರ್ಪಗಳು, ಸಿಂಹ, ಜಟೆಯಲ್ಲಿನ ಚಂದ್ರಕಲೆ ಇವೆಲ್ಲವೂ ಶಿವನ ಅಂಗಗಳಿಗೆ ಯೋಗ್ಯವಾದ ಅಲಂಕಾರಗಳಾಗಿ ಕಂಗೊಳಿಸುತ್ತಿದ್ದವು.

ವರನ ದಿಬ್ಬಣ ದಕ್ಷನ ಮನೆಯನ್ನು ಪ್ರವೇಶಿಸುತ್ತಿದ್ದಂತೆ ವಧುವಿನ ಪೋಷಕರಾದ ದಕ್ಷ ಮತ್ತವನ ಪತ್ನಿ ವೀರಿಣಿ ತಮ್ಮ ಪರಿವಾರದೊಡನೆ ಸಂತೋಷದಿಂದ ಬರಮಾಡಿಕೊಂಡರು. ದಕ್ಷ ದೇವತೆಗಳೆಲ್ಲರನ್ನೂ ಯೋಗ್ಯವಾಗಿ ಸತ್ಕರಿಸಿದ. ದೇವತೆಗಳು, ಪ್ರಮಥಗಳು ಮತ್ತು ಮುನಿಗಳೊಡನೆ ಶಿವನನ್ನು ಮನೆಯ ಒಳಗೆ ಕರೆದುಕೊಂಡು ಬಂದ.

ಶಿವನಿಗೆ ಮಹಾರ್ಘವಾದ ಸಿಂಹಾಸನವನ್ನು ಕೊಟ್ಟು ಕುಳ್ಳಿರಿಸಿದ. ಸರ್ವೇಶ್ವರನಾದ ಶಿವನನ್ನು ದಕ್ಷ ಪ್ರಜಾಪತಿ ವಿಧಿವತ್ತಾಗಿ ಪೂಜಿಸಿದ. ದೇವತೆಗಳು, ಪ್ರಮಥಗಣಗಳು ಮತ್ತು ಮುನಿಗಳನ್ನು ಸಹ ವಿಧಿವತ್ತಾಗಿ ಭಕ್ತಿಯಿಂದ ಪೂಜಿಸಿದ. ತನ್ನ ಮನೆಗೆ ಬಂದ ವರನ ಕಡೆಯವರೆಲ್ಲರಿಗೂ ಯಥೋಚಿತವಾಗಿ ಆದರಿಸಿ ಉಪಚರಿಸಿದ. ಬ್ರಹ್ಮನ ಮಾನಸಪುತ್ರರು ಮತ್ತು ತನ್ನ ಸೋದರ ಮುನಿಗಳನ್ನು ಬರಮಾಡಿಕೊಂಡು, ಅವರ ಕುಶಲಕ್ಷೇಮ ವಿಚಾರಿಸಿದ.

ಬಳಿಕ ದಕ್ಷಬ್ರಹ್ಮನು ತಂದೆಯಾದ ಬ್ರಹ್ಮನಿಗೆ ನಮಸ್ಕರಿಸಿ ‘ಓ ತಂದೆಯಾದ ಬ್ರಹ್ಮನೇ, ನೀನೇ ನನ್ನ ಮಗಳ ವಿವಾಹವನ್ನು ನೆರವೇರಿಸಿಕೊಡಬೇಕು’ ಎಂದು ಪ್ರಾರ್ಥಿಸಿದ. ದಕ್ಷನ ಪ್ರಾರ್ಥನೆಗೆ ಸಮ್ಮತಿಸಿದ ಬ್ರಹ್ಮ, ತನ್ನ ನೇತೃತ್ವದಲ್ಲೆ ವಿಧಿವತ್ತಾದ ವಿವಾಹಮಾಡಲು ಸಿದ್ಧನಾದ. ಆಗ ದಕ್ಷನು ಗ್ರಹಬಲದಿಂದ ಕೂಡಿರುವ ಒಳ್ಳೆಯ ಲಗ್ನವಿರುವ ಸುಮುಹೂರ್ತದಲ್ಲಿ ತನ್ನ ಪುತ್ರಿ ಸತಿಯನ್ನು ಹರ್ಷದಿಂದ ಶಂಕರನಿಗೆ ಧಾರೆ ಎರೆದುಕೊಟ್ಟ. ಆಗ ಶಿವ ಸಹ ವಿವಾಹವಿಧಿಯಂತೆ ಸುಂದರಿಯಾದ ಸತೀದೇವಿಯ ಪಾಣಿಗ್ರಹಣವನ್ನು ಸಂತೋಷದಿಂದ ಮಾಡಿದ.

ಬ್ರಹ್ಮ, ವಿಷ್ಣು, ನಾರದ, ಮೊದಲಾದ ದೇವತೆಗಳು, ಮುನಿಗಳು, ಪ್ರಮಥಗಣಗಳು ಶಂಕರನನ್ನು ಸ್ತೋತ್ರ ಮಾಡಿ ಸಂತೋಷಗೊಳಿಸಿದರು. ಮದುವೆ ನಂತರ ಗಾನ-ನರ್ತನಗಳ ಮನರಂಜನೆಯ ಉತ್ಸವವು ವಿಜೃಂಭಣೆಯಿಂದ ನಡೆಯಿತು. ಮಗಳ ಮದುವೆ ಯಶಸ್ವಿಯಾಗಿ ನಡೆದಿದ್ದಕ್ಕೆ ದಕ್ಷ ಮತ್ತವನ ಪತ್ನಿ ವೀರಿಣಿ ಸಂತೋಷಗೊಂಡರಲ್ಲದೆ, ತಮ್ಮ ಕನ್ಯೆಯನ್ನು ಶಿವನಿಗೆ ಕೊಟ್ಟು ಕೃತಾರ್ಥರಾದೆವೆಂದು ಸಂಭ್ರಮಿಸಿದರು. ಶಿವ–ಸತಿಯರ ಮದುವೆಯು ಮಂಗಳಮಯವಾಗಿ ನಡೆದು, ಸುಖಮಯವಾಯಿತು ಎಂಬಲ್ಲಿಗೆ ಶಿವಪುರಾಣದ ರುದ್ರಸಂಹಿತೆಯಲ್ಲಿನ ಸತೀಖಂಡದ ಹದಿನೆಂಟನೆಯ ಅಧ್ಯಾಯ ಮುಗಿಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT