ಬುಧವಾರ, ಜೂನ್ 29, 2022
24 °C

ವೇದವ್ಯಾಸರ ಶಿವಪುರಾಣ ಸಾರ - ಭಾಗ 153| ಸತಿಯನ್ನು ಹಂಬಲಿಸಿ ಸಂಭ್ರಮಿಸಿದ ಶಿವ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಶಿವ-ಸತೀಕಲ್ಯಾಣಕ್ಕೆ ತಾನು ನಡೆಸಿದ ಸಂಧಾನ ಯಶಸ್ವಿಯಾದ ಕುರಿತು ಬ್ರಹ್ಮ ನಾರದನಿಗೆ ಹೇಳುತ್ತಾನೆ. ಕುತೂಹಲಿತನಾದ ನಾರದ ‘ಓ ಬ್ರಹ್ಮಪಿತನೇ, ನೀನು ಪರಮೇಶ್ವರನ ಬಳಿಗೆ ಹೋದ ನಂತರ ಏನಾಯಿತು? ಶಂಕರನೇನು ಮಾಡಿದ ಎಂಬುದನ್ನು ವಿವರವಾಗಿ ಹೇಳು’ ಎಂದು ಒತ್ತಾಯಿಸುತ್ತಾನೆ.

‘ಎಲೈ ನಾರದ! ನಾನು ದಕ್ಷದಂಪತಿಯೊಂದಿಗೆ ಸತೀದೇವಿಯನ್ನು ಶಿವನಿಗೆ ಕೊಟ್ಟು ವಿವಾಹ ಮಾಡಿಕೊಡುವ ವಿಚಾರ ಮಾತನಾಡಿ, ಅವರ ಒಪ್ಪಿಗೆ ಪಡೆದುಕೊಂಡ ನಂತರ, ಶಿವನನ್ನು ದಕ್ಷನ ಮನೆಗೆ ಕರೆತರಲು ಹಿಮವತ್ಪರ್ವತದಲ್ಲಿರುವ ಮಹಾದೇವನ ಬಳಿಗೆ ತೆರಳಿದೆ. ಅತ್ತ ಶಿವ ನನ್ನ ಮಾತುಕತೆ ಯಶಸ್ವಿಯಾಯಿತೋ ಇಲ್ಲವೋ ಎಂಬ ಸಂಶಯದಿಂದ ತವಕ ಪಡುತ್ತಿದ್ದ. ಸತೀದೇವಿಯಲ್ಲಿ ಅನುರಕ್ತನಾಗಿದ್ದ ಈಶ್ವರ, ನಾನು ಬರುವುದನ್ನು ದೂರದಿಂದಲೇ ನೋಡಿದ ತಕ್ಷಣವೇ ಸತಿಯೊಂದಿಗೆ ನನ್ನ ಮದುವೆ ವಿಷಯದಲ್ಲಿ ಏನಾಯಿತು? ನಿನ್ನ ಪುತ್ರ ದಕ್ಷ ಏನು ಹೇಳಿದ ಬೇಗನೆ ಹೇಳು – ಎಂದು ಒತ್ತಾಯ ಮಾಡಿದ.

‘ಶಿವನ ವರ್ತನೆ ಕಂಡು ನನಗೆ ಆಶ್ಚರ್ಯವಾಯಿತು. ಅವನು ಹೇಗೆ ಚಡಪಡಿಸುತ್ತಾ ಹೇಳಿದ ಅನ್ನೋದನ್ನ ನಿನಗೆ ತಿಳಿಸುತ್ತೇನೆ ಕೇಳು’ ಎಂದ ಬ್ರಹ್ಮ ಶಿವನಾಡಿದ ಮಾತುಗಳನ್ನು ವಿವರಿಸುತ್ತಾನೆ.

ಪರಮಶಿವ ಬಹಳ ಕಾತುರದಿಂದ ‘ಸತೀದೇವಿಯನ್ನು ಮದುವೆಯಾಗುವ ಬಯಕೆ ನನ್ನಲ್ಲಿ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ. ವಿರಹದ ಬೇಗೆ ನನ್ನ ತುಂಬಾ ಘಾಸಿಪಡಿಸುತ್ತಿದೆ. ಪ್ರತಿಕ್ಷಣವೂ ನನ್ನ ಮನದ ತುಂಬಾ ಸತೀದೇವಿಯೇ ಆವರಿಸುತ್ತಿದ್ದಾಳೆ. ನನ್ನ ಧ್ಯಾನಾಸಕ್ತಿ ಸಂಪೂರ್ಣ ಕ್ಷೀಣಿಸಿದೆ. ನಿತ್ಯವೂ ನಾನು ಸತೀದೇವಿಯನ್ನೇ ಚಿಂತಿಸುತ್ತಲಿರುವೆ. ಆದುದರಿಂದ ಅವಳು ನನ್ನೊಡನೆ ಸೇರುವಂತೆ ಜಾಗ್ರತೆ ಪ್ರಯತ್ನ ಮಾಡಿ ಬಂದೆಯಾ’ ಎಂದು ಬ್ರಹ್ಮನನ್ನು ಪ್ರಶ್ನಿಸುತ್ತಾನೆ.

ಸಾಮಾನ್ಯರಂತೆ ಶಿವನು ಆಡುತ್ತಿರುವ ಮಾತುಗಳನ್ನು ಕೇಳಿದ ಬ್ರಹ್ಮನಿಗೆ, ಮನ್ಮಥನ ಬಾಣಕ್ಕೆ ಸಿಲುಕಿದವರು ಹೇಗೆಲ್ಲಾ ಕಾಮವಿಕಾರದಿಂದ ಬಳಲುತ್ತಾರೆಂಬುದಕ್ಕೆ ಜಗದೊಡೆಯನಾದ ಶಿವನ ಈ ವರ್ತನೆಯೇ ಸಾಕ್ಷೀಕರಿಸುತ್ತದೆ ಅಂತ ಅಂದುಕೊಳ್ಳುತ್ತಾನೆ. ಚಡಪಡಿಸುತ್ತಿದ್ದ ಶಿವನನ್ನು ಸಮಾಧಾನಗೊಳಿಸುತ್ತಾ, ‘ಸತಿಯೊಂದಿಗೆ ನಿನ್ನ ಮದುವೆ ಮಾಡಿಕೊಡುವ ವಿಷಯದಲ್ಲಿ ದಕ್ಷನು ಏನು ಹೇಳಿದನೆಂಬುದನ್ನು ಹೇಳುತ್ತೇನೆ. ಸಾವಧಾನದಿಂದ ಕೇಳು. ನಿನ್ನ ಇಷ್ಠಾರ್ಥದಂತೆ ದಕ್ಷದಂಪತಿ ತಮ್ಮ ಪುತ್ರಿಯನ್ನು ನಿನಗೆ ಧಾರೆ ಎರೆದುಕೊಡಲು ಒಪ್ಪಿದ್ದಾರೆ. ನಾನು ಹೋದ ಕಾರ್ಯ ಸಿದ್ಧಿಸಿರುವುದೆಂದು ತಿಳಿ’ ಎನ್ನುತ್ತಾನೆ. ಬ್ರಹ್ಮನ ಮಾತಿನಿಂದ ಸಂತುಷ್ಟನಾದ ಶಿವ ಅಲ್ಲಿ ನಡೆದ ಸಂಪೂರ್ಣ ವಿಚಾರ ತಿಳಿಸುವಂತೆ ಕೋರುತ್ತಾನೆ. ಆಗ ಬ್ರಹ್ಮ ಅಲ್ಲಿ ನಡೆದ ಘಟನೆಯ ವಿವರವನ್ನೆಲ್ಲಾ ಒಂದೂ ಬಿಡದಂತೆ ಹೇಳುತ್ತಾನೆ.

‘ಶಿವನಿಗೆ ತನ್ನ ಪುತ್ರಿಯನ್ನು ಮದುವೆ ಮಾಡಿಕೊಡಲು ದಕ್ಷನೂ ಉತ್ಸುಕನಾಗಿದ್ದ. ನೀನು ಮದುವೆಯಾಗುವುದಾಗಿ ಹೇಳಿದ್ದನ್ನು ಸತೀದೇವಿ ಅವನಿಗೆ ಹೇಳಿದಾಗಿನಿಂದ ಹರ್ಷಚಿತ್ತನಾಗಿದ್ದಾನೆ. ಆ ಸಂತೋಷಾರ್ಥವಾಗಿ ಬಂಧು-ಮಿತ್ರರಿಗೆಲ್ಲಾ ಕಾಣಿಕೆ ನೀಡಿ, ಬಡವರಿಗೆಲ್ಲ ಧನಕನಕ ದಾನ ಮಾಡಿದ್ದಾನೆ. ನಾನು ದಕ್ಷನ ಬಳಿಗೆ ಹೋಗುವ ಮೊದಲೇ ನಿನ್ನ ಬಳಿಗೆ ಮದುವೆ ಮಾತುಕತೆಗೆ ಯಾರನ್ನು ಕಳುಹಿಸುವುದು? ಹೇಗೆ ವಿಚಾರ ಮಾಡುವುದು? – ಅಂತ ಚಿಂತಿತನಾಗಿದ್ದ. ನಾನು ವಿಷಯ ಪ್ರಸ್ತಾಪಿಸುತ್ತಿದ್ದಂತೆಯೇ ಆನಂದೋತ್ಸಾಹದಿಂದ ಸಂಭ್ರಮಿಸಿದ. ತನ್ನ ಮಗಳು ಸತೀದೇವಿ ಶಿವನಿಗೆ ನಿಶ್ಚಯಿಸಲ್ಪಟ್ಟಿರುವಳು. ಅವರಿಬ್ಬರ ವಿವಾಹಕಾರ್ಯ ತಮಗೆಲ್ಲಾ ಇಷ್ಟವಾದುದು. ಸತಿಯೂ ಶಿವನೇ ತನ್ನ ಪತಿಯಾಗಬೇಕೆಂದು ಆರಾಧಿಸಿ, ಒಲಿಸಿಕೊಂಡಿದ್ದಾಳೆ. ಆ ಶಿವನೂ ಈ ವಿಷಯಕ್ಕಾಗಿಯೇ ನನ್ನ ಅನುಮತಿಯನ್ನು ಕೇಳುವನೆಂದ ಮೇಲೆ ನಾನು ಸತೀದೇವಿಯನ್ನು ಶಿವನಿಗೆ ಅವಶ್ಯವಾಗಿ ಮದುವೆ ಮಾಡಿಕೊಡುವೆ. ಶುಭಲಗ್ನವುಳ್ಳ ಸುಮುಹೂರ್ತದಲ್ಲಿ ಶಂಕರನು ನಮ್ಮ ಮನೆಗೆ ಪಾಣಿಗ್ರಹಣಕ್ಕಾಗಿ ಬರಲಿ. ಆಗ ನಾನು ನನ್ನ ಪುತ್ರಿಯನ್ನು ವಿಧಿವತ್ತಾಗಿ ಮದುವೆ ಮಾಡಿಕೊಡುವೆ ಎಂದಿದ್ದಾನೆ. ಆದುದರಿಂದ ನೀನು ಶುಭಮಹೂರ್ತದಲ್ಲಿ ಅವನ ಮನೆಗೆ ಹೋಗಲು ಸಿದ್ಧನಾಗು’ ಎಂದ ಬ್ರಹ್ಮ. ಇದನ್ನು ಕೇಳಿದ ಶಿವ ಸಂತೋಷದಿಂದ ಸಂಭ್ರಮಿಸಿದ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು