ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತಿಬಿಂಬ | ಬೇಲಿ ಮೇಲೆಯೇ ಹಾಲ್ತುಂಬಿಕೊಂಡ ‘ತೆನೆ’

ಕನ್ನಡಿಗರ ನಿಜಧ್ವನಿಯಾಗುವ ಅವಕಾಶ ಕೈಚೆಲ್ಲಿದ ಜೆಡಿಎಸ್‌
Published 3 ಮೇ 2023, 18:36 IST
Last Updated 3 ಮೇ 2023, 18:36 IST
ಅಕ್ಷರ ಗಾತ್ರ

ಹದ ಮಳೆಯಿಂದ ತೋಯ್ದ ಗದ್ದೆಗೆ ಹಸಿಗೊಬ್ಬರ ಹಾಕಿ, ಚೆನ್ನಾಗಿ ಉತ್ತಿ ಭತ್ತದ ಸಸಿ ನಾಟಿ ಮಾಡಬೇಕು; ಸಕಾಲಕ್ಕೆ ನೀರು, ಗೊಬ್ಬರ ಹಾಕಿ, ರೋಗ ಬರದಂತೆ ತಡೆದಾಗಲಷ್ಟೇ ತೆನೆಗಳು ಪುಟಿದೇಳುತ್ತವೆ. ಪರಾಗಸ್ಪರ್ಶವಾದರಷ್ಟೇ ಭತ್ತದೊಳಗೆ ಹಾಲ್ತುಂಬಿ, ಕಾಳು ಬಲಿಯುತ್ತದೆ. ಕೊಯ್ಲು ಮತ್ತು ಒಕ್ಕಲಾಟದ ಮೇಲಷ್ಟೇ ಹೊಸ ಅಕ್ಕಿಯಿಂದ ಮಾಡಿದ ಅನ್ನದ ಘಮ ಮನೆ ತುಂಬುತ್ತದೆ. ಇದು ಮಣ್ಣಿನ ಮಕ್ಕಳು ಪ್ರತಿ ಹಂಗಾಮಿನಲ್ಲೂ ಪಡುವ ಕಷ್ಟದ ಕಥನ... 

ಸುಮಾರು 30 ವರ್ಷಗಳ ಇತಿಹಾಸ ಮೆಲುಕು ಹಾಕಿದರೆ, ಮಣ್ಣಿನ ಮಕ್ಕಳ ಪಕ್ಷ ಎಂದು ಬೀಗುವ ಜನತಾದಳ 1994ರಲ್ಲಿ ಬಿಟ್ಟರೆ ಮತ್ತೆಂದೂ ಸಸಿ ನೆಟ್ಟು, ಗೊಬ್ಬರವಿಕ್ಕಿ, ಫಸಲು ತೆಗೆದದ್ದೇ ಇಲ್ಲ. ವಿಧಾನಸಭೆ ಚುನಾವಣೆ ಒಂದು ವರ್ಷವಿದ್ದಾಗ ಪುಟಿದೇಳುವ ಈ ಪಕ್ಷದ ನಾಯಕರು, ಬೇಲಿ ಮೇಲೆ ನಿಂತದ್ದೇ ಹೆಚ್ಚು. ಗಾಳಿ ಬೀಸಿದ ಕಡೆ ಸಾಗಿ, ಅಧಿಕಾರ ಅನುಭವಿಸಿದ್ದನ್ನು ನಾಡು ಕಂಡಿದೆ. 

80ರ ದಶಕದಲ್ಲಿ ಕಾಂಗ್ರೆಸ್ ದಬ್ಬಾಳಿಕೆ, ರೈತರ ಮೇಲಿನ ಗೂಂಡಾಗಿರಿಯಿಂದಾಗಿ ಜನ ಬೇಸತ್ತಿದ್ದರು. ಸಮಾಜವಾದಿ ತಾತ್ವಿಕತೆಯನ್ನು ನೆಚ್ಚಿಕೊಂಡು ರಾಜಕಾರಣಕ್ಕೆ ಇಳಿದ ಅನೇಕರು, ಕಾಂಗ್ರೆಸ್‌ಗೆ ಪರ್ಯಾಯವಾಗಿ ಜನತಾ ಪಕ್ಷ ಕಟ್ಟಿದರು. 1983ರಲ್ಲಿ ಕಾಂಗ್ರೆಸ್‌ಗೆ ಪರ್ಯಾಯವಾದ ಬಲಿಷ್ಠ ರಾಜಕಾರಣವೊಂದು ಕರ್ನಾಟಕದಲ್ಲೂ ತಲೆ ಎತ್ತಿತು. ಆ ಹೊತ್ತಿಗೆ ಕ್ರಾಂತಿರಂಗ ಕಟ್ಟಿದ್ದ ಎಸ್.ಬಂಗಾರಪ್ಪ ಹಾಗೂ ಜನತಾ ಪಕ್ಷದ ನೇತಾರರಾಗಿದ್ದ ಎಚ್.ಡಿ.ದೇವೇಗೌಡರ ಪಾತ್ರ ಪ್ರಮುಖವಾಗಿತ್ತು. ರಾಷ್ಟ್ರಮಟ್ಟದಲ್ಲಿ ದೇಶವನ್ನೇ ಪ್ರಭಾವಿಸುವ ಅನೇಕ ನಾಯಕರೂ ಇದ್ದರು.

ವೈ.ಗ.ಜಗದೀಶ್‌
ವೈ.ಗ.ಜಗದೀಶ್‌

ಹೀಗೆ ರೂಪಿತಗೊಂಡ ಭೂಮಿಕೆ ಮತ್ತೆ ಛಿದ್ರಗೊಂಡು 1989ರಲ್ಲಿ ಪರ್ಯಾಯ ರಾಜಕಾರಣ ಸೋಲನುಭವಿಸಿತು. ಅಷ್ಟೊತ್ತಿಗೆ ದೇಶದ ರಾಜಕಾರಣದಲ್ಲೂ ಬದಲಾವಣೆಯಾಗಿತ್ತು. ಸಮಾಜವಾದಿ ಜನತಾ ಪಕ್ಷ ಮತ್ತು ಜನತಾ ಪಕ್ಷ ಎಂಬ ಎರಡು ಬಣಗಳು ರೂಪುಗೊಂಡಿದ್ದವು. 1993ರಲ್ಲಿ ಈ ಬಣಗಳು ವಿಲೀನಗೊಂಡು ಮತ್ತೆ ಜನತಾದಳವೇ ಅಸ್ತಿತ್ವ ಪಡೆಯಿತು. ದೇವೇಗೌಡರು ರಾಜ್ಯ ಘಟಕದ ಅಧ್ಯಕ್ಷರಾದರೆ, ಎಸ್.ಆರ್.ಬೊಮ್ಮಾಯಿ ರಾಷ್ಟ್ರೀಯ ಅಧ್ಯಕ್ಷರಾದರು. ಜಾತಿ ಅಥವಾ ಪ್ರದೇಶದ ಹಂಗಿಲ್ಲದಂತೆ ಎಲ್ಲ ಸಮುದಾಯದವರೂ ಜನತಾದಳದಲ್ಲಿದ್ದರು. 1989–1994ರ ಅವಧಿಯಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌, ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿದ್ದರಿಂದಾಗಿ ರಾಜ್ಯವು ಮೂವರು ಮುಖ್ಯಮಂತ್ರಿಗಳನ್ನು ನೋಡಿತ್ತು. ವೀರೇಂದ್ರ ಪಾಟೀಲರನ್ನು ಅಕಾಲಿಕವಾಗಿ ಕುರ್ಚಿಯಿಂದ ಇಳಿಸಿದ ಸಿಟ್ಟು ಕಾಂಗ್ರೆಸ್‌ಗೆ ಶಾಪವಾಗಿ ಪರಿಣಮಿಸಿತ್ತು. ಇದೇ ಹೊತ್ತಿಗೆ ಕಾಂಗ್ರೆಸ್ ರಾಜಕಾರಣದಿಂದ ರೋಸಿದ್ದ ಎಸ್.ಬಂಗಾರಪ್ಪ, ಕರ್ನಾಟಕ ಕಾಂಗ್ರೆಸ್ ಪಕ್ಷ (ಕೆಸಿಪಿ) ಕಟ್ಟಿದ್ದರು. ದೇವೇಗೌಡರು ರಾಜ್ಯವ್ಯಾಪಿ ನಡೆಸಿದ ಯಾತ್ರೆಯೂ ಬೆಂಬಲಕ್ಕೆ ಬಂದಿದ್ದರಿಂದಾಗಿ 1994ರಲ್ಲಿ 115 ಸ್ಥಾನ ಪಡೆದ ಜನತಾದಳ ಅಧಿಕಾರದ ಚುಕ್ಕಾಣಿ ಹಿಡಿಯಿತು.

ಎರಡೇ ವರ್ಷದಲ್ಲಿ ದೇವೇಗೌಡರು ಪ್ರಧಾನಿಯಾಗಿ ದೆಹಲಿಗೆ ಹೋದರು. ಅವರು ರಾಷ್ಟ್ರ ರಾಜಕಾರಣಕ್ಕೆ ಹೋಗದೇ ಇದ್ದರೆ ಕರ್ನಾಟಕದಲ್ಲೊಂದು ಪ್ರಬಲ ಪಕ್ಷವಾಗಿ ಜನತಾದಳ ಇರುತ್ತಿದ್ದುದರಲ್ಲಿ ಸಂಶಯ ಬೇಕಿಲ್ಲ. ನಂತರದ ದಿನಗಳಲ್ಲಿ ಜನತಾದಳದ ಒಳಜಗಳಗಳು ತಾರಕಕ್ಕೇರಿ, ಪಕ್ಷ ಚೂರುಚೂರಾಗಿ ಒಡೆಯಿತು. ರಾಷ್ಟ್ರಮಟ್ಟದ ವಿದ್ಯಮಾನ ಕರ್ನಾಟಕದಲ್ಲೂ ಪರಿಣಾಮ ಬೀರಿತು.

1994 ಕೊನೆ. ಮತ್ತೆಂದೂ ಜನತಾದಳಕ್ಕೆ ವಿಧಾನಸಭೆಯಲ್ಲಿ ಬಹುಮತ ಪಡೆಯಲು ಸಾಧ್ಯವಾಗಲೇ ಇಲ್ಲ. 1999ರಲ್ಲಿ ಜೆಡಿಎಸ್ 10 ಸ್ಥಾನ ಪಡೆದರೆ, ಜೆಡಿಯು 18 ಸ್ಥಾನಗಳನ್ನು ಪಡೆದಿತ್ತು. ಪಕ್ಷದೊಳಗಿನ ಸಂಘರ್ಷ ಜನತಾ ಪರಿವಾರವನ್ನು ತಳಾತಳಕ್ಕೆ ತಳ್ಳಿತ್ತು. 1999ರಲ್ಲಿ ಜನತಾದಳ ವಿಘಟನೆಯಾದಾಗ ದೇವೇಗೌಡರ ಗುಂಪು ಜನತಾದಳ (ಜಾತ್ಯತೀತ) ಎಂದು ಗುರುತಿಸಿಕೊಂಡಿತು. ಸಿದ್ದರಾಮಯ್ಯ ರಾಜ್ಯ ಘಟಕದ ಅಧ್ಯಕ್ಷರಾದರು. ಗೌಡರು–ಸಿದ್ದರಾಮಯ್ಯ ಜೋಡಿ 2004ರಲ್ಲಿ ಚುನಾವಣೆಯ ನೇತೃತ್ವ ವಹಿಸಿದಾಗ ಮತ್ತೆ ಚಿಗುರಿದ ಜೆಡಿಎಸ್ 58 ಸ್ಥಾನಗಳಿಗೆ ಏರಿತು. 2006ರಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದರು. ಅದಾದ ಬಳಿಕ ನಡೆದ ಚುನಾವಣೆಗಳಲ್ಲಿ ಜೆಡಿಎಸ್‌ 40ರ ಗಡಿ ದಾಟಲಿಲ್ಲ. 2008ರಲ್ಲಿ 28, 2013ರಲ್ಲಿ 40, 2018ರಲ್ಲಿ 37 ಸ್ಥಾನಗಳನ್ನು ಪಡೆಯಲಷ್ಟೇ ಶಕ್ಯವಾಯಿತು.

ಪರಿಸ್ಥಿತಿ ಪ್ರತಿಕೂಲವಾಗಿದ್ದರೂ ದೇಶದಲ್ಲಾದ ರಾಜಕೀಯ ಪಲ್ಲಟಗಳು, ವಿಸ್ತಾರಗೊಳ್ಳಲಾರಂಭಿಸಿದ್ದ ಬಿಜೆಪಿ ನೆಲೆ, ಕಾಂಗ್ರೆಸ್‌ನ ಹೀನಾಯ ಅಧಃಪತನವು ಜೆಡಿಎಸ್‌ಗೆ ಅನುಕೂಲಕಾರಿಯಾಯಿತು. 2004ರಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗಲಿಲ್ಲ. ಎಸ್.ಬಂಗಾರಪ್ಪ ಬಿಜೆಪಿ ಸೇರಿದ್ದ ಕಾರಣಕ್ಕೆ ಬಿಜೆಪಿ 79 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿತ್ತು. ಕೋಮುವಾದಿ ಶಕ್ತಿಗಳನ್ನು ಹೊರಗಿಡಬೇಕೆಂಬ ಸೂತ್ರದ ಅನುಸಾರ 65 ಸ್ಥಾನ ಪಡೆದಿದ್ದ ಕಾಂಗ್ರೆಸ್, 58 ಸ್ಥಾನ ಗಳಿಸಿದ್ದ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಎರಡೂ ಅಧಿಕಾರ ನಡೆಸಿದವು. 2006ರಲ್ಲಿ ಮೈತ್ರಿ ತೊರೆದ ಎಚ್.ಡಿ.ಕುಮಾರಸ್ವಾಮಿ ಅವರು ಬಿ.ಎಸ್.ಯಡಿಯೂರಪ್ಪ ಅವರ ಜತೆ ಸೇರಿ ಮೈತ್ರಿ ಸರ್ಕಾರ ಕಟ್ಟಿದರು. ಹೀಗೆ 2004ರಿಂದ 2007ರವರೆಗೆ ಜೆಡಿಎಸ್‌ಗೆ ಅಧಿಕಾರ ದಕ್ಕಿತು. ಮತ್ತೆ, 2018ರಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದಾಗ, ಕಾಂಗ್ರೆಸ್ ನಾಯಕರೇ ಜೆಡಿಎಸ್‌ಗೆ ದುಂಬಾಲು ಬಿದ್ದರು. ಎಚ್.ಡಿ.ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾದರು.

ಮೈತ್ರಿ ಸರ್ಕಾರ ಹೆಚ್ಚು ಕಾಲ ಬಾಳಲು ಕಾಂಗ್ರೆಸ್ ನಾಯಕರೇ ಬಿಡಲಿಲ್ಲ. ಎರಡು ಬಾರಿ ಕಾಂಗ್ರೆಸ್, ಒಮ್ಮೆ ಬಿಜೆಪಿ ಜತೆಗೆ ಸಖ್ಯ ಮಾಡಿದ್ದರಿಂದಾಗಿ, ಬದಲಾಗುತ್ತಲೇ ಹೋದ ಪಕ್ಷದ ನಿಲುವಿನಿಂದಾಗಿ ಜೆಡಿಎಸ್ ರಾಜ್ಯದುದ್ದಕ್ಕೂ ಇದ್ದ ತನ್ನ ಬಲಿಷ್ಠ ಕಾರ್ಯಕರ್ತರ ಪಡೆಯನ್ನೇ ಕಳೆದುಕೊಂಡಿತು.

2018ರ ಚುನಾವಣೆಯಲ್ಲಂತೂ ಕಾಂಗ್ರೆಸ್ ನಾಯಕರು ಜೆಡಿಎಸ್ ಅನ್ನು ಬಿಜೆಪಿಯ ‘ಬಿ’ ಟೀಂ ಎಂದೇ ಪ್ರಚಾರದುದ್ದಕ್ಕೂ ಹಂಗಿಸಿದರು. ಆದರೆ, ಫಲಿತಾಂಶ ಹೊರಬಿದ್ದ ಬಳಿಕ ‘ಬಿ’ ಟೀಂ ಜತೆಗೆ ಅಧಿಕಾರ ಹಂಚಿಕೊಂಡಿದ್ದು ಮಾತ್ರ ಚೋದ್ಯ.

ನಾಡಿನ ಹಕ್ಕು, ನ್ಯಾಯ ಕಾಪಾಡಬೇಕಾದ, ಕನ್ನಡಿಗರ ಧ್ವನಿಯಾಗಿರಬೇಕಾದ ಪ್ರಾದೇಶಿಕ ಪಕ್ಷವೊಂದು ಕರ್ನಾಟಕಕ್ಕೆ ಎಂದಿಗೂ ಅಗತ್ಯವಿದೆ. ರಾಷ್ಟ್ರೀಯ ಪಕ್ಷಗಳು ಯಾವತ್ತಿದ್ದರೂ ತನ್ನ ವರಿಷ್ಠರ ಆಣತಿ ಮೀರಿ ನಡೆಯಲಾರವು. ಅಂತಹದ್ದೊಂದು ಅವಕಾಶವೂ ಜೆಡಿಎಸ್‌ಗೆ ಇತ್ತು. ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್ ಹಾಗೂ ಆಂಧ್ರಪ್ರದೇಶದಲ್ಲಿ ಜಗನ್‌ಮೋಹನ್ ರೆಡ್ಡಿ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ಒಡಿಶಾದಲ್ಲಿ ಬಿಜು ಪಟ್ನಾಯಕ್ ಅವರೆಲ್ಲ ಪ್ರಾದೇಶಿಕ ಸೊಗಡುಳ್ಳ, ಕೇಂದ್ರದ ಎದುರು ನಿಂತು ರಾಜ್ಯಕ್ಕೆ ಬರಬೇಕಾದ ನ್ಯಾಯಯುತ ಪಾಲು ಕೇಳಬಲ್ಲ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಆಂಧ್ರ, ತಮಿಳುನಾಡು, ಒಡಿಶಾದಲ್ಲಿ ಕುಟುಂಬ ಆಧಾರಿತ ಪಕ್ಷಗಳೇ ಅಧಿಕಾರ ನಡೆಸುತ್ತಿವೆ. ತಳಮುಟ್ಟಿ ಹೋಗಿದ್ದ ತಮ್ಮ ಪಕ್ಷವನ್ನು ಬುಡಮಟ್ಟದಿಂದ ಮೇಲೆತ್ತಿ, ಅಧಿಕಾರದ ಕುರ್ಚಿಗೇರಿಸಿದವರು ಸ್ಟಾಲಿನ್ ಮತ್ತು ಜಗನ್‌.

ಎಚ್.ಡಿ.ಕುಮಾರಸ್ವಾಮಿಯವರಿಗೂ ಅಂತಹದ್ದೊಂದು ವರ್ಚಸ್ಸು ಇದೆ. ಒಂದು ಕುಟುಂಬದ ಪಕ್ಷವೆಂದು ಬಿಂಬಿತವಾಗುವುದರ ಜತೆಗೆ, ಒಂದು ಜಾತಿಗೆ ಸೀಮಿತವಾಗುವ ನಾಯಕರಾಚೆಗೆ ಪಕ್ಷದ ನೆಲೆಯನ್ನು ವಿಸ್ತರಿಸುವ ಗೋಜಿಗೇ ಅವರು ಹೋಗಲಿಲ್ಲ. ಹೀಗಾಗಿ, ಹಳೆ ಮೈಸೂರು ಭಾಗಕ್ಕೆ ಹರಡಿಕೊಂಡ ಪಕ್ಷವಾಗಿ ಅದು ಬೆಳೆಯಿತೇ ವಿನಾ ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದ ಕಡೆಗೆ ಹೆಚ್ಚಿನ ಒಲವು ಬೆಳೆಸಿಕೊಳ್ಳಲಿಲ್ಲ. ಎಲ್ಲ ಪಕ್ಷಗಳು ಕುಟುಂಬ ರಾಜಕಾರಣವನ್ನೇ ಆಶ್ರಯಿಸಿಕೊಂಡಿದ್ದರೂ, ಜೆಡಿಎಸ್‌ಗೆ ಮಾತ್ರ ಆ ಹಣೆಪಟ್ಟಿ ಅಂಟಿಸಿ ಅಪರಾಧವೆಂಬಂತೆ ರಾಷ್ಟ್ರೀಯ ಪಕ್ಷಗಳು ಬಿಂಬಿಸುತ್ತಿರುವುದು ದಳಪತಿಗಳ ನಡೆಗೆ ಬೇಲಿಯನ್ನೂ ಹಾಕಿದೆ.

ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರಬೇಕೆಂಬ ಮಹತ್ವಾಕಾಂಕ್ಷೆಯಿಂದ ವರ್ಷದ ಮೊದಲೇ ಚುನಾವಣೆ ತಯಾರಿಯನ್ನು ಕುಮಾರಸ್ವಾಮಿ ನಡೆಸಿದರು. ಜನತಾ ಜಲಧಾರೆ, ಪಂಚರತ್ನಯಾತ್ರೆ ಮೂಲಕ ಬಹುತೇಕ ಏಕಾಂಗಿಯಾಗಿ ಇಡೀ ರಾಜ್ಯ ಸುತ್ತಿದರು. ರಾಷ್ಟ್ರೀಯ ಪಕ್ಷಗಳಿಗಿಂತ ಮುಂಚೆಯೇ 93 ಕ್ಷೇತ್ರಗಳ ಅಭ್ಯರ್ಥಿಗಳನ್ನೂ ಘೋಷಿಸಿದರು. ಜನಹಿತಕಾರಿಯಾದ ಭರವಸೆಗಳನ್ನೂ ಪ್ರಕಟಿಸಿದರು. ಆದರೆ, ಕರ್ನಾಟಕಕ್ಕೆ ಬೇಕಾದ ಪ್ರಾದೇಶಿಕ ಪಕ್ಷವೊಂದರ ಅಗತ್ಯ ಮತ್ತು ಜೆಡಿಎಸ್‌ಗಿದ್ದ ಅವಕಾಶವನ್ನು ಅವರು ಪ್ರಜ್ಞಾಪೂರ್ವಕವಾಗಿ ಬಳಸಿಕೊಂಡಂತೆ ಕಾಣುತ್ತಿಲ್ಲ.

ಸ್ವತಂತ್ರ ಅಧಿಕಾರದ ಬದಲು ಅತಂತ್ರದ ಹಾಯಿದೋಣಿಯಲ್ಲಿ ಸಾಗುವ ಸುಲಭ ದಾರಿ ಬಿಟ್ಟು, ಕುಮಾರಸ್ವಾಮಿ ಅವರೇ ಹೇಳಿಕೊಳ್ಳುತ್ತಿರುವಂತೆ ‘123ರ ಮ್ಯಾಜಿಕ್ ಸಂಖ್ಯೆ’ಯನ್ನು ತಲುಪಲು ಐದು ವರ್ಷದ ಹಿಂದೆಯೇ ರೂಪುರೇಶೆ ಹಾಕಿದ್ದರೆ, ಕರ್ನಾಟಕಕ್ಕೆ ತನ್ನದೇ ಆದ ಒಂದು ಪ್ರಾದೇಶಿಕ ಪಕ್ಷದ ಬಲ ಸಿಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT