ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತಿಬಿಂಬ | ದಳಕ್ಕೆ ಮುಳುವಾಗಲಿದೆಯೇ ಕಮಲದ ಸಖ್ಯ?

ನೆಲೆ ವಿಸ್ತರಣೆಗೆ ಬಿಜೆಪಿ ಅಡ್ಡಮಾರ್ಗ, ಭ್ರಷ್ಟರ ಪರಿಶುದ್ಧಿಗೆ ಇದೆ ‘ವಾಷಿಂಗ್ ಮಷೀನ್’
Published 16 ಮಾರ್ಚ್ 2024, 0:24 IST
Last Updated 16 ಮಾರ್ಚ್ 2024, 0:24 IST
ಅಕ್ಷರ ಗಾತ್ರ

ಸರಿಯಾಗಿ ಹತ್ತು ವರ್ಷದ ಹಿಂದಿನ ಮಾತು. ದೇಶದಾದ್ಯಂತ ಚುನಾವಣೆಯ ಕಾವು ಈಗಿನದಕ್ಕಿಂತ ಜೋರಾಗಿಯೇ ಇತ್ತು. ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಪ್ರಧಾನಿ ಪಟ್ಟಕ್ಕೇರುವ ಸೂಚನೆಯೂ ಇತ್ತು. ಆ ಹೊತ್ತಿನಲ್ಲಿ ಮಾಧ್ಯಮದವರ ಜತೆ ಮಾತನಾಡಿದ್ದ ಎಚ್.ಡಿ. ದೇವೇಗೌಡ, ‘ಬಿಜೆಪಿ 272ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದು ಸಾಧ್ಯವೇ ಇಲ್ಲ. ಹಾಗೊಂದು ವೇಳೆ ಗೆದ್ದು ಮೋದಿ ಪ್ರಧಾನಿಯಾದರೆ ದೇಶವನ್ನೇ ತೊರೆಯುತ್ತೇನೆ’ ಎಂದು ವೀರಾವೇಶದಿಂದ ಅಬ್ಬರಿಸಿದ್ದರು.
‘ಮೋದಿಯವರು ದೈವಾಂಶ ಸಂಭೂತ’ ಎಂದು 2024ರಲ್ಲಿ ದೇವೇಗೌಡರು ಹೇಳುತ್ತಿದ್ದಾರೆ.

ಅದಕ್ಕಿಂತ 10 ವರ್ಷ ಹಿಂದೆ ಹೋಗೋಣ; 2004ರಲ್ಲಿ ಧರ್ಮಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್–ಜೆಡಿಎಸ್‌ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. 20 ತಿಂಗಳು ಕಳೆಯುವಷ್ಟರಲ್ಲೇ ಮೈತ್ರಿ ಬಿರುಕುಬಿಟ್ಟಿತು. ಜೆಡಿಎಸ್‌ನಲ್ಲಿದ್ದ ಸಿದ್ದರಾಮಯ್ಯ ಆಗ ಉಪಮುಖ್ಯಮಂತ್ರಿ ಆಗಿದ್ದರು. ಅವರನ್ನು ಪಕ್ಷದಿಂದ ಹೊರಗಟ್ಟುವ ಯತ್ನ ಜೆಡಿಎಸ್‌ನಲ್ಲಿ ಶುರುವಾಗಿತ್ತು. ಆಗಿನ್ನೂ ಪ್ರವರ್ಧಮಾನಕ್ಕೆ ಬರುತ್ತಿದ್ದ ಎಚ್‌.ಡಿ.ಕುಮಾರಸ್ವಾಮಿ, ತಮ್ಮದೇ ರಾಜಕೀಯ ಪರ್ವಕ್ಕೆ ಅಣಿಯಾಗುತ್ತಿದ್ದರು. ಈ ಸಂಕ್ರಮಣ ಕಾಲದಲ್ಲಿ, ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ‘ಹೇಗಾದರೂ ಸಚಿವರನ್ನಾಗಿ ಮಾಡಿ, ಪಕ್ಷ ಬಿಟ್ಟುಬರುವೆ’ ಎಂದು ಹೇಳಿಕೊಂಡಿದ್ದರಂತೆ. ಈ ಗುಟ್ಟನ್ನು ಕುಮಾರಸ್ವಾಮಿ ಅನೇಕ ಬಾರಿ ಹೇಳಿದ್ದುಂಟು. ಅದಾದ ಬಳಿಕ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌–ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತು. ಯಡಿಯೂರಪ್ಪ ಉಪಮುಖ್ಯಮಂತ್ರಿಯೂ ಆದರು. ಆನಂತರ ವಿಶ್ವಾಸದ್ರೋಹದ ಮಾತುಗಳೆಲ್ಲ ಆಗಿಹೋದವು. ಅಂದು ಕುಮಾರಸ್ವಾಮಿ ಎದುರು ಯಡಿಯೂರಪ್ಪ ಅಲವತ್ತುಕೊಂಡಿದ್ದರು. ಈಗ ಲೋಕಸಭೆ ಚುನಾವಣೆಯ ಒಂದು ಹೆಚ್ಚುವರಿ ಕ್ಷೇತ್ರಕ್ಕಾಗಿ ಯಡಿಯೂರಪ್ಪನವರ ಬಳಿಯೇ ಅಂಗಲಾಚುವ ಸ್ಥಿತಿ ಕುಮಾರಸ್ವಾಮಿ ಅವರಿಗೆ ಬಂದೊದಗಿದೆ.

ಅಸ್ತಿತ್ವದ ಆತಂಕ ಹುಟ್ಟಿಸಿಯೋ ಆದಾಯ ತೆರಿಗೆ, ಸಿಬಿಐ, ಇ.ಡಿ. ಎಂಬ ಈಟಿ, ಭರ್ಜಿ, ಚೂರಿಗಳಿಂದ ಹೆದರಿಸಿಯೋ ಪ್ರಾದೇಶಿಕ ಪಕ್ಷಗಳನ್ನು ಹೀಗೆ ನಡುಬಗ್ಗಿಸುವಂತೆ ಮಾಡುವುದು ಬಿಜೆಪಿಗೆ ಕರಗತವಾಗಿದೆ. ಬೆದರಿಕೆಗೆ ಮಣಿಯದ ಕಡೆ ಒಡೆದಾಳುವ ವಿಧಾನ ಅಥವಾ ‘ಆಪರೇಷನ್ ಕಮಲ’ದ ಮೂಲಕ ಎದುರಾಳಿ ಬಲವನ್ನು ಕುಗ್ಗಿಸಿ ತಮ್ಮ ಪಕ್ಷದ ಬಾವುಟವನ್ನು ದೇಶದಗಲ ವಿಸ್ತರಿಸುವ ತಂತ್ರವನ್ನು ಬಳಸಿದೆ, ಬಳಸುತ್ತಲೇ ಇದೆ. ತಮಿಳುನಾಡಿನಲ್ಲಿ ಎಐಎಡಿಎಂಕೆ, ಡಿಎಂಕೆ ಹೀಗೆ ಎರಡೂ ಪಕ್ಷಗಳ ಸಖ್ಯವನ್ನು ಆಗೀಗ ಬದಲಾಯಿಸುತ್ತಾ ಅಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸಿತು. ಹಾಗಿದ್ದರೂ ತಮಿಳುನಾಡು, ಕೇರಳ, ತೆಲಂಗಾಣ, ಒಡಿಶಾ, ಆಂಧ್ರಪ್ರದೇಶದಂತಹ ರಾಜ್ಯಗಳಲ್ಲಿ ಕೆಲವೆಡೆ ಇನ್ನೂ ಕಾಲೂರಲು ಆಗಿಲ್ಲ, ಮತ್ತೆ ಕೆಲವೆಡೆ ನೆಲೆ ಗಟ್ಟಿಗೊಳಿಸಿಕೊಳ್ಳಲು ಆಗಿಲ್ಲ.

ಮಹಾರಾಷ್ಟ್ರದಲ್ಲಿ ಶಿವಸೇನಾ– ಕಾಂಗ್ರೆಸ್– ಎನ್‌ಸಿಪಿಯ ಮೈತ್ರಿ ಸರ್ಕಾರವಿತ್ತು. ಏಕನಾಥ ಶಿಂದೆ ಅವರನ್ನು ಬಳಸಿಕೊಂಡು ಶಿವಸೇನಾವನ್ನು ಛಿದ್ರಗೊಳಿಸಿದ ಬಿಜೆಪಿ, ಅಲ್ಲೀಗ ಮೈತ್ರಿ ಸರ್ಕಾರದ ಭಾಗವಾಗಿದೆ. ಕಡು ಭ್ರಷ್ಟರೆಂದೇ ಬಿಜೆಪಿ ಆಪಾದಿಸುತ್ತಿದ್ದ ಅಜಿತ್ ಪವಾರ್ ಅವರನ್ನು ಬಳಸಿಕೊಂಡು ಎನ್‌ಸಿಪಿಯನ್ನು ಒಡೆದಿದೆ.‌ ಬಿಜೆಪಿ ಜತೆಗೆ ಕೈಜೋಡಿಸುತ್ತಿದ್ದಂತೆ, ಶಿಂದೆ, ಅಜಿತ್ ಪವಾರ್‌ ಅವರಿಗೆ ಮೆತ್ತಿದ್ದ ಎಲ್ಲ ಕಳಂಕವೂ ಕಳಚಿತು.

ಆಂಧ್ರಪ್ರದೇಶದಲ್ಲಿ ತನ್ನ ಅಸ್ತಿತ್ವಕ್ಕಾಗಿ ಟಿಡಿಪಿಯ ಚಂದ್ರಬಾಬು ನಾಯ್ಡು ಅವರ ಹೆಗಲನ್ನು ಆಶ್ರಯಿಸಿದೆ. ನಾಯ್ಡು ಅವರಿಗೂ ಇದು ಅನಿವಾರ್ಯವಾದಂತಿದೆ. ಹರಿಯಾಣದಲ್ಲಿ ಜನನಾಯಕ್ ಜನತಾ ಪಾರ್ಟಿ ಸಖ್ಯ ಈಗ ಬೇಡವಾದಂತಿದೆ. ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿ ದಳದ ನೆರವಿನಲ್ಲಿ ತನ್ನ ನೆಲೆ ವಿಸ್ತರಿಸಿಕೊಳ್ಳುವ ಪ್ರಯತ್ನ ಮಾಡಿತ್ತು. ಅದಕ್ಕಾಗಿ ಆಗಾಗ್ಗೆ ತಂತ್ರಗಳನ್ನೂ ಬದಲಿಸುತ್ತಿದೆ. ಅನುಕೂಲಸಿಂಧು ರಾಜಕಾರಣದ ದೋಣಿಯಲ್ಲಿರುವ ಬಿಹಾರದ ನಿತೀಶ್ ಕುಮಾರ್ ಒಂದೊಮ್ಮೆ ಬಿಜೆಪಿಗೆ ಆಸರೆಯಾಗಿದ್ದರು. ಈಗ ಅವರಿಗೇ ಬಿಜೆಪಿಯ ಆಸರೆ ಬೇಕಾಗಿದೆ. ಭ್ರಷ್ಟರು, ಕುಟುಂಬ ರಾಜಕಾರಣದ ಪಿತಾಮಹರು ಎಂದು ಬಿಜೆಪಿಯು ಯಾರನ್ನೇ ಟೀಕಿಸಿದರೂ ಅದು, ಅವರು ಕೇಸರಿ ಬಾವುಟ ಹಿಡಿಯುವವರೆಗೆ ಮಾತ್ರ. ಬಿಜೆಪಿಯ ‘ವಾಷಿಂಗ್ ಮಷೀನ್’ ಒಳಗೆ ಬಿದ್ದು ಹೊರಬಂದರೆ ಎಂತಹ ಕಡುಭ್ರಷ್ಟರೂ ‘ಸ್ವಚ್ಛ ಭಾರತ’ದಲ್ಲಿ ಪರಿಶುದ್ಧರಾಗಿ
ಹೊರಹೊಮ್ಮಿಬಿಡುತ್ತಾರೆ.

ಕರ್ನಾಟಕ ರಾಜಕಾರಣದ ವಿಚಾರಕ್ಕೆ ಬಂದರೆ, ಎಸ್.ಬಂಗಾರಪ್ಪ ಬಿಜೆಪಿ ಸೇರದೇ ಇದ್ದರೆ, ಕುಮಾರಸ್ವಾಮಿ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸದೇ ಇದ್ದರೆ ಇಲ್ಲಿಯೂ ಆ ಪಕ್ಷಕ್ಕೆ ಇಷ್ಟರಮಟ್ಟಿಗಿನ ಬಲ ಬರುತ್ತಿರಲಿಲ್ಲ. ಚುನಾವಣೆ ಪೂರ್ವ ಅಥವಾ ಚುನಾವಣೆ ಬಳಿಕ ಮೈತ್ರಿ ಮಾಡಿಕೊಂಡು ಪ್ರಾದೇಶಿಕ ಪಕ್ಷದ ಕಾಲಾಳುಗಳನ್ನು ತನ್ನ ಬಾವುಟ ಹಿಡಿಯುವಂತೆ ಮಾಡುವುದು, ಅವರ ಮೂಲಕವೇ ಪಕ್ಷದ ತಳಹದಿಯನ್ನು ವಿಸ್ತರಿಸುವುದು ಬಿಜೆಪಿ ಬಳಸುತ್ತಿರುವ ಅಡ್ಡಮಾರ್ಗ. ಅಟಲ್ ಬಿಹಾರಿ ವಾಜಪೇಯಿ ‘ದ ಪಾರ್ಟಿ ವಿಥ್ ಡಿಫರೆನ್ಸ್‌’ ಎಂಬ ಘೋಷವಾಕ್ಯವನ್ನು ಪಕ್ಷಕ್ಕೆ ಕೊಟ್ಟಿದ್ದರು. ಕುಟುಂಬ ರಾಜಕಾರಣ, ಭ್ರಷ್ಟಾಚಾರ, ದುರಾಡಳಿತಕ್ಕಿಂತ ಭಿನ್ನವಾಗಿ ಹೊಸದೇನನ್ನೋ ಆ ಪಕ್ಷ ಕೊಡಲಿದೆ ಎಂಬ ಹುಸಿ ಭರವಸೆಯನ್ನು ಹುಟ್ಟಿಸಲಾಗಿತ್ತು. ಆಂತರ್ಯದಲ್ಲಿ ಹಿಂದುತ್ವದ ಅಮಲು, ಹಿಂದೂರಾಷ್ಟ್ರ ನಿರ್ಮಾಣವೇ ಅದರ ಗುರಿಯಾದರೂ ಕೇಳುಗರಿಗೆ ಇದು ಹಿತವೆನಿಸುವಂತಿತ್ತು. ‘ಪಾರ್ಟಿ ವಿಥ್ ಡಿಫರೆನ್ಸ್’ ಎಂಬುದು ಈಗ ಹಳಸಲಾಗಿ, ಹುಳು ತುಂಬಿಕೊಂಡ ಹಿಟ್ಟಿನಂತಾಗಿದೆ.

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಮುನ್ನ ಜೆಡಿಎಸ್‌ ಜತೆಗೆ ಬಿಜೆಪಿ ಮೈತ್ರಿಗೆ ಮುಂದಾಯಿತು. ‘ಎನ್‌ಡಿಎ ಜತೆ ಬನ್ನಿ, ಮುಂದಿನದನ್ನು ವಿಶ್ವಾಸದಲ್ಲೇ ತೀರ್ಮಾನಿಸೋಣ’ ಎಂಬ ಅಮಿತ್ ಶಾ ಮಾತು ನಂಬಿದ ಕುಮಾರಸ್ವಾಮಿ, ಕೈಜೋಡಿಸಿಯೇ ಬಿಟ್ಟರು. ಮೊದ ಮೊದಲು ಐದು ಕ್ಷೇತ್ರಗಳು ಸಿಗಲಿವೆ, ಜೆಡಿಎಸ್‌ಗೆ ಬಲ ಬರಲಿದೆ ಎಂಬ ಭಾವನೆ ಅವರಿಗೆ ಇತ್ತು. ಚುನಾವಣೆ ಹತ್ತಿರವಾಗುತ್ತಿದ್ದಂತೆ ಅದು ಮೂರು ಮತ್ತೊಂದಕ್ಕೆ ಇಳಿಯಿತು. ಈಗ ಎರಡಕ್ಕೆ ಸೀಮಿತವಾದಂತಿದೆ. ಕೋಲಾರವನ್ನು ಬಿಟ್ಟುಕೊಡುವಂತೆ ಬೇಡಿಕೊಳ್ಳಬೇಕಾದ ದಯನೀಯ ಸ್ಥಿತಿಯೂ ಬಂದಿದೆ. 2019ರಲ್ಲಿ ಕಾಂಗ್ರೆಸ್ ಜತೆಗೆ ಹೋದಾಗ ಏಳು ಕ್ಷೇತ್ರಗಳು ದಕ್ಕಿದ್ದವು. ಈಗ ಎರಡಕ್ಕೆ ತೃಪ್ತಿಪಡಬೇಕಾಗಿದೆ.

ಏಕೆಂದರೆ 25 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ ತನ್ನ ನೆಲೆಯಿರುವ ಕ್ಷೇತ್ರಗಳನ್ನು ಬಿಟ್ಟುಕೊಡಲು ತಯಾರಿಲ್ಲ. ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ, ಜೆಡಿಎಸ್‌ ಚಿಹ್ನೆಯಡಿ ವಿ.ಸೋಮಣ್ಣ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತಾದರೂ ಈಗವರು ಬಿಜೆಪಿ ಹುರಿಯಾಳು. ಹಾಸನ, ಮಂಡ್ಯದಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತಹ ನೆಲೆಯಿಲ್ಲ. ಬೆಂಗಳೂರು ಗ್ರಾಮಾಂತರದಲ್ಲಿ ನೆಲೆ ಇಲ್ಲದೇ ಇದ್ದರೂ ಅಲ್ಲಿ, ಗೌಡರ ಅಳಿಯ ಡಾ. ಸಿ.ಎನ್.ಮಂಜುನಾಥ್‌ ಅವರನ್ನು ಬಿಜೆಪಿಯಿಂದ ಕಣಕ್ಕೆ ಇಳಿಸಲಾಗಿದೆ. ಗೌಡರ ನೆರವಿನಿಂದ ಕೇಸರಿ ಪತಾಕೆ ಹಾರಿಸುವುದು ಮೋದಿ–ಶಾ ಇಚ್ಛೆ. ಮಂಜುನಾಥ್ ಗೆದ್ದರೂ ಅದು ಬಿಜೆಪಿ ಲೆಕ್ಕವೇ ವಿನಾ ಜೆಡಿಎಸ್‌ನದ್ದಲ್ಲ. ಮೈಸೂರಿನ ಕಡೆ ಕುಮಾರಸ್ವಾಮಿ ಒಲವಿತ್ತಾದರೂ ಅದನ್ನೂ ಬಿಟ್ಟುಕೊಡಲಿಲ್ಲ. 

ಬಿಜೆಪಿ ಸಖ್ಯದ ದಾಕ್ಷಿಣ್ಯಕ್ಕೆ ಕುಮಾರಸ್ವಾಮಿ ಸಿಲುಕಿದ್ದಾರೆ. ಬೇಕೋ ಬೇಡವೋ ಮಂಡ್ಯ–ಹಾಸನ ಬಿಟ್ಟು ಎಲ್ಲ ಕ್ಷೇತ್ರಗಳಲ್ಲಿನ ತಮ್ಮ ನಾಯಕರು, ಕಾರ್ಯಕರ್ತರನ್ನು ಬಿಜೆಪಿ ಪರ ಪ್ರಚಾರಕ್ಕೆ ದೂಡಲೇಬೇಕು. ಜೆಡಿಎಸ್ ಬಾವುಟವನ್ನು ಬಿಟ್ಟ ಈ ಕಾರ್ಯಕರ್ತರು ಕೇಸರಿ ಬಾವುಟ ಹಿಡಿದು, ಶಾಲು ಹೆಗಲಿಗೇರಿಸಿಕೊಂಡು
ಅನ್ಯಪಕ್ಷಕ್ಕೆ ದುಡಿಯಬೇಕು. ತೆನೆ ಹೊತ್ತ ಮಹಿಳೆಗೆ ಕೈಕೊಟ್ಟು ಕಮಲವನ್ನು ಮುಡಿಯಲೇಬೇಕು. ಬಿಜೆಪಿಗೆ ಬೇಕಾಗಿರುವುದು ಕೂಡ ಇಷ್ಟೇ. ಈ ಕಾರ್ಯಕರ್ತರ ಪೈಕಿ ಶೇ 50ರಷ್ಟು ಮಂದಿ, ಮನಃಪರಿವರ್ತನೆಗೊಂಡು ಮುಂದಿನ ದಿನಗಳಲ್ಲಿ ಭಾವನಾತ್ಮಕವಾಗಿ ಬಿಜೆಪಿ ಜತೆ ಗುರುತಿಸಿಕೊಳ್ಳುತ್ತಾರೆ. ಅಲ್ಲೆಲ್ಲ, ಜೆಡಿಎಸ್ ಬಲ ಕುಗ್ಗಿ, ಆ ಬಲವು ಬಿಜೆಪಿಯ ಮಡಿಲೊಳಗೆ ಭದ್ರವಾಗುತ್ತದೆ. ಮುಂದಿನ ಚುನಾವಣೆಗಳಲ್ಲಿ, ಎರಡು ಜಿಲ್ಲೆಗಳನ್ನು ಬಿಟ್ಟು ಉಳಿದ ಕಡೆಗಳಲ್ಲಿ ಜೆಡಿಎಸ್‌ ತನ್ನ ನೆಲೆಯನ್ನೇ ಕಳೆದುಕೊಂಡಿರುತ್ತದೆ. ಬಿಜೆಪಿಗೆ ಕಾಂಗ್ರೆಸ್‌ ಪಕ್ಷವೇ ನೇರ ಎದುರಾಳಿಯಾಗಿರುತ್ತದೆ.

ಬಿಜೆಪಿಗೆ ಬೇಕಾಗಿರುವುದು ಪ್ರಾದೇಶಿಕ ಅಸ್ಮಿತೆಯನ್ನು ಹೊಂದಿದ್ದ ಜೆಡಿಎಸ್‌ ಪಕ್ಷವನ್ನು ನುಂಗಿ, ಅದರ ಶಕ್ತಿಯನ್ನು ಆವಾಹಿಸಿಕೊಂಡು ತಾನು ಬಲಿಷ್ಠವಾಗುವುದಷ್ಟೆ. ಲೋಕಸಭೆ ಚುನಾವಣೆಗೆ ಬಿಜೆಪಿಯ ಕಂಕುಳಲ್ಲಿ ಸಿಕ್ಕಿಕೊಂಡಿರುವ ಕುಮಾರಸ್ವಾಮಿ ಅವರಿಗೆ ಆ ಕಂಕುಳು ಪೊರೆಯುವುದಕ್ಕಲ್ಲ, ಹೊಸಕಿ ಹಾಕುವುದನ್ನು
ಗುರಿಯಾಗಿಟ್ಟುಕೊಂಡಿದೆ ಎಂಬುದು ಗೊತ್ತಿಲ್ಲದ ಸಂಗತಿಯಲ್ಲ. ಹಾಗಿದ್ದರೆ, ಯಾವ ಅನಿವಾರ್ಯ ಅವರನ್ನು ಈ ಸ್ಥಿತಿಗೆ ದೂಡಿದೆ? ಅದು, ದೇವೇಗೌಡರಿಂದ ‘ದೈವಾಂಶ ಸಂಭೂತ’ರೆಂದು ಹೊಗಳಿಸಿಕೊಂಡ
ಮೋದಿಯವರಿಗಷ್ಟೇ ಗೊತ್ತಿರಬಹುದಾದ ರಹಸ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT