ಶುಕ್ರವಾರ, ಏಪ್ರಿಲ್ 10, 2020
19 °C
ಆ ಕ್ಷಣದ ಷರತ್ತು ಈಗ ಮುಳುವಾಗುವುದೇ, ಕೈಕೊಡಲಿದ್ದಾರಾ ಮೋದಿ– ಶಾ?

ಆಪರೇಷನ್‌ ಯಡಿಯೂರಪ್ಪ!

ವೈ.ಗ. ಜಗದೀಶ್‌ Updated:

ಅಕ್ಷರ ಗಾತ್ರ : | |

ಜಗತ್ತನ್ನೇ ಬೆಚ್ಚಿಬೀಳಿಸುವ ರೀತಿಯಲ್ಲಿ ಕೊರೊನಾ ವೈರಸ್‌ ಹರಡುತ್ತಿರುವಷ್ಟೇ ವ್ಯಾಪಕವಾಗಿ ‘ಆಪರೇಷನ್‌ ಕಮಲ’ ಎಂಬ ರಾಜಕೀಯ ವೈರಸ್‌ ದೇಶವ್ಯಾಪಿ ದಾಂಗುಡಿ ಇಡುತ್ತಿದೆ. ‘ಕೇಸರಿ ಪತಾಕೆ’ಯನ್ನು ಭಾರತದಗಲ ಹಾರಿಸಿ ‘ಹಸ್ತ’ ಹೊಸಕುವ ಮಹದಾಕಾಂಕ್ಷೆ ಹೊತ್ತ ಅಮಿತ್ ಶಾ, ‘ಕಮಲಚಕ್ರ’ ಎಂಬ ನವ್ಯಾಸ್ತ್ರವನ್ನು ದೇಶದುದ್ದಗಲಕ್ಕೂ ಗಿರ‍್ರನೆ ತಿರುಗಿಸುತ್ತಿದ್ದಾರೆ. 

ದಶಕದ ಹಿಂದೆ ಅಧಿಕಾರ ಉಳಿಸಿಕೊಳ್ಳಲು, ಅಧಿಕಾರ ಕಿತ್ತುಕೊಳ್ಳಲು ಕಾಂಗ್ರೆಸ್ ನಾಯಕರು ಇಂತಹುದೇ ಹೀನಮಾರ್ಗ ಹಿಡಿದಿದ್ದನ್ನು ದೇಶದ ಜನರೇನೂ ಮರೆತಿಲ್ಲ. ರಾಷ್ಟ್ರಪತಿ ಭವನ, ರಾಜಭವನವನ್ನು ತನ್ನ ಮುಷ್ಟಿಯಡಿ ಇಟ್ಟುಕೊಂಡು, ಚುನಾಯಿತ ಸರ್ಕಾರವನ್ನೇ ರಾತ್ರೋರಾತ್ರಿ ಬುಡಮೇಲು ಮಾಡಿದ ನಿದರ್ಶನಗಳು ಸಾಕಷ್ಟಿವೆ. ಆಗೆಲ್ಲ ಅಧಿಕೃತ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವ ‘ಅರ್ಹತೆ’ ಗಳಿಸದೇ ಇದ್ದ ಬಿಜೆಪಿಯ ನಾಯಕರು, ಕಾಂಗ್ರೆಸ್‌ ನಡೆಯನ್ನು ಏರುಗಂಟಲಿನಲ್ಲಿ ಖಂಡಿಸುತ್ತಿದ್ದರು. ಇಂದು ಇತಿಹಾಸಚಕ್ರ ತಿರುಗಿದೆ. ಕಾಂಗ್ರೆಸ್‌ ಸ್ಥಾನದಲ್ಲಿ ಬಿಜೆಪಿ ನಿಂತಿದೆ. 

ಅನ್ಯ ಪಕ್ಷದ ಚಿಹ್ನೆಯಡಿ ಗೆದ್ದ ಶಾಸಕರನ್ನು ಆಸೆ–ಆಮಿಷಕ್ಕೆ ಒಗ್ಗಿಸಿ ಕಮಲ ಪಾಳಯದತ್ತ ಸೆಳೆಯುವ ರಾಜಕೀಯ ತಂತ್ರಗಾರಿಕೆಯಾದ ‘ಆಪರೇಷನ್‌ ಕಮಲ’ದ ವಿಷಯದಲ್ಲಿ ‘ಡಾಕ್ಟರೇಟ್’ ಪಡೆದವರು ಬಿ.ಎಸ್‌. ಯಡಿಯೂರಪ್ಪ. ಹಾಗಂತ ಅದಕ್ಕಿಂತ ಮೊದಲು ಕರ್ನಾಟಕದಲ್ಲಿ ‘ಆಪರೇಷನ್‌’ ಆಗಿರಲಿಲ್ಲವೇ? 2004ರ ವಿಧಾನಸಭೆ ಚುನಾವಣೆ ವೇಳೆ, ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಅವರು ಬಿಜೆಪಿಯ ಆರೇಳು ಶಾಸಕರನ್ನು ಕಾಂಗ್ರೆಸ್‌ಗೆ ಕರೆತಂದಿದ್ದರು. ಚುನಾವಣೆ ಹೊತ್ತಲ್ಲಿ ರಾಜಕೀಯ ಮರುಹುಟ್ಟು ಬಯಸಿ ಇಂತಹ ನೆಗೆದಾಟ ಮಾಮೂಲು. 1999ರ ವಿಧಾನಸಭೆ ಚುನಾವಣೆ ಹೊತ್ತಿನೊಳಗೆ ಆರ್.ವಿ. ದೇಶಪಾಂಡೆ ಕೂಡ ಜನತಾದಳ ತೊರೆದು ‘ಕೈ’ ಹಿಡಿದಿದ್ದರು. 

ಗೋವಾ, ಅಸ್ಸಾಂನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಪರಿಣತಿ ಪಡೆದಿರುವ ಅಮಿತ್ ಶಾ, ಯಡಿಯೂರಪ್ಪ ಅವರನ್ನು ಮುಂದೆ ಬಿಟ್ಟು ರಾಜ್ಯದಲ್ಲೂ ಸರ್ಕಾರ ರಚಿಸಿದರು. ಮಹಾರಾಷ್ಟ್ರದಲ್ಲಿ ಹಿನ್ನಡೆಯಾದರೂ ಸೊಪ್ಪು ಹಾಕದ ಅವರು, ಈಗ ಮಧ್ಯಪ್ರದೇಶಕ್ಕೆ ಕೈ ಇಟ್ಟಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಸ್ವತಃ ಮುಂದೆ ನಿಂತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭೇಟಿ ಮಾಡಿಸಿ, ಸರ್ಕಾರ ಪತನಗೊಳಿಸಲು ಅನುವು ಮಾಡಿಕೊಟ್ಟಿದ್ದಾರೆ. ಇದಾದ ಬಳಿಕ ಮಹಾರಾಷ್ಟ್ರದಲ್ಲಿ ‘ಆಪರೇಷನ್’ ನಡೆಯಲಿದೆ ಎಂಬ ಮಾತುಗಳು ಬಿಜೆಪಿ ಪಡಸಾಲೆಯಲ್ಲಿ ಹರಿದಾಡುತ್ತಿವೆ.

ಮುಂದಿನ ಹಂತದ ಕಾರ್ಯಾಚರಣೆ ಕರ್ನಾಟಕದಲ್ಲಿ ನಡೆಯಲಿರುವುದರ ಸೂಚನೆಗಳು ಅಸ್ಪಷ್ಟವಾಗಿ ಗೋಚರಿಸುತ್ತಿವೆ. ‘ಆಪರೇಷನ್ ವೈದ್ಯ’ ಯಡಿಯೂರಪ್ಪ ಅವರನ್ನೇ ಗುರಿ ಮಾಡಿ ‘ಸೂಪರ್ ಆಪರೇಷನ್‌’ ಮಾಡಲು ಶಸ್ತ್ರಚಿಕಿತ್ಸಾ ಕೊಠಡಿ, ಹತಾರಗಳು, ಆಪರೇಷನ್‌ಗೆ ಬೇಕಾದ ‘ಸಿಬ್ಬಂದಿ’ ತಯಾರು ಮಾಡುವ ರಣತಂತ್ರ ಹೆಣೆಯಲಾಗಿದೆ. 

ಬಿಜೆಪಿ ನಾಯಕರು ಲೆಕ್ಕಿಸಿದಂತೆ ಎಲ್ಲವೂ ನಡೆದರೆ, ಯಡಿಯೂರಪ್ಪ ಅವರನ್ನು ಖೆಡ್ಡಾಕ್ಕೆ ಕೆಡಹುವ ಕಾರ್ಯಾಚರಣೆ ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆ ಶುರುವಿಟ್ಟುಕೊಳ್ಳುತ್ತದೆ. ಯಡಿಯೂರಪ್ಪ ಜಾಗಕ್ಕೆ ಲಿಂಗಾಯತ ಗಾಣಿಗ ಒಳಪಂಗಡಕ್ಕೆ ಸೇರಿದ ಲಕ್ಷ್ಮಣ ಸವದಿ ಅವರನ್ನು ಕೂರಿಸುವುದು ಸದ್ಯದ ಅಂದಾಜು. ಯಡಿಯೂರಪ್ಪ ಒಪ್ಪಿದರೆ ವಿಜಯೇಂದ್ರ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ, ಮತ್ತೊಬ್ಬ ಪುತ್ರ, ಸಂಸದ ರಾಘವೇಂದ್ರ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಕೊಡುವ ಪ‍್ರಸ್ತಾವಗಳು ಚಿಗುರೊಡೆಯುತ್ತಿವೆ. ಈ ಸೂತ್ರಕ್ಕೆ ಒಪ್ಪದೇ ಇದ್ದರೆ ಕೇಂದ್ರವು ಹೆಣೆಯುವ ತಂತ್ರಕ್ಕೆ ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳುವ ಸ್ಥಿತಿ ಸೃಷ್ಟಿಯಾಗಲಿದೆಯೇ ಎಂಬ ಚರ್ಚೆ ಬಿರುಸುಗೊಂಡಿದೆ.

ಇದು ಹೊಸ ವಿದ್ಯಮಾನವೇನಲ್ಲ; ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಯಡಿಯೂರಪ್ಪ ಅವರಿಗೆ ಅಮಿತ್ ಶಾ ಒಡ್ಡಿದ್ದ ಷರತ್ತಿನ ಭಾಗ. ಮುಖ್ಯಮಂತ್ರಿಯಾಗಬೇಕು ಎಂಬ ಹಂಬಲದಲ್ಲಿ, ಮೈತ್ರಿ ಸರ್ಕಾರದ ಅವಧಿಯಲ್ಲಿ ಮೂರ್ನಾಲ್ಕು ಬಾರಿ ಸೋತು ಹೈರಾಣಾಗಿದ್ದ ಯಡಿಯೂರಪ್ಪ ಸುಮ್ಮನಾಗಿದ್ದರು. ಆಗ ಪ್ರವೇಶ ಕೊಟ್ಟ ಸಿ.ಪಿ. ಯೋಗೇಶ್ವರ್‌ ಇಂತಹದ್ದೊಂದು ಪ್ರಸ್ತಾವ ಮುಂದಿಟ್ಟರು. ಈ ಹೊತ್ತಿನೊಳಗೆ ಯೋಗೇಶ್ವರ್ ಸಂಪರ್ಕಕ್ಕೆ ಬಂದ ಸಿ.ಎನ್‌. ಅಶ್ವತ್ಥನಾರಾಯಣ ಒಂದು ಸುತ್ತಿನ ಮಾತುಕತೆ ನಡೆಸಿ, ನೇರವಾಗಿ ಅವರನ್ನು ಬಿಜೆಪಿ ನಾಯಕ ಬಿ.ಎಲ್. ಸಂತೋಷ್‌ ಮುಂದೆ ಕೂರಿಸಿದರು. ಈ ಹಂತದ ಚರ್ಚೆಯ ತರುವಾಯ, ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತರುವ ಬಗ್ಗೆ ಅಮಿತ್ ಶಾ ಅವರಿಗೂ ಮನವರಿಕೆ ಮಾಡಿಕೊಟ್ಟು ಒಪ್ಪಿಗೆಯನ್ನೂ ಪಡೆಯಲಾಗಿತ್ತು ಎಂಬ ಮಾತು ಪಕ್ಷದ ವಲಯದಲ್ಲಿ ಹಬ್ಬಿದೆ.

ಜೆಡಿಎಸ್‌– ಕಾಂಗ್ರೆಸ್‌ ಶಾಸಕರು ರಾಜೀನಾಮೆ ಕೊಡಲು ತಯಾರಾಗುತ್ತಿದ್ದಂತೆ ಯಡಿಯೂರಪ್ಪ ಅವರನ್ನು ಮುನ್ನೆಲೆಗೆ ತರಲಾಯಿತು. ಸರ್ಕಾರ ರಚಿಸಲು ಅಮಿತ್ ಶಾ ಒಪ್ಪಿಗೆ ಪಡೆದುಕೊಳ್ಳಿ ಎಂಬ ಮನವಿಯನ್ನು ಯಡಿಯೂರಪ್ಪ ಹೆಗಲಿಗೆ ಹೊರಿಸಲಾಯಿತು. ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚಿಸಿದಾಗ, ಏನೂ ಗೊತ್ತಿಲ್ಲದಂತೆ ತಲೆ ಅಲ್ಲಾಡಿಸಿದ ಅವರು, ‘ಎಲ್ಲವೂ ನಿಮ್ಮದೇ ಹೊಣೆ. ಮುಂದೊಂದು ದಿನ ನೀವು ಅಧಿಕಾರ ಬಿಟ್ಟುಕೊಡಲು ಸಿದ್ಧರಿದ್ದರೆ ಒಪ್ಪಿಗೆ ನೀಡಲು ತಕರಾರಿಲ್ಲ’ ಎಂದು ಹೇಳಿ ಕಳುಹಿಸಿದ್ದರು. ಈಗ ಅದನ್ನು ಅನುಷ್ಠಾನಗೊಳಿಸುವ ಯತ್ನ ತೆರೆಮರೆಯಲ್ಲಿ ಶುರುವಾಗಿದೆ.

ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕೇಂದ್ರದಿಂದ ₹ 3 ಸಾವಿರ ಕೋಟಿ ಬರಲಿಲ್ಲ ಎಂದು ಪ್ರಧಾನಿ ಮೋದಿ ಅವರ ಎದುರೇ ಹೇಳಿ ಎದೆಗಾರಿಕೆ ಪ್ರದರ್ಶಿಸಿದ್ದು, ಕೇಂದ್ರದ ನೆರವು ₹23 ಸಾವಿರ ಕೋಟಿ ಕೈ ತಪ್ಪುತ್ತದೆ ಎಂದು ಬಜೆಟ್‌ನಲ್ಲೇ ಘಂಟಾಘೋಷವಾಗಿ ವಿವರಿಸಿದ್ದು ಇವೆಲ್ಲವೂ ಯಡಿಯೂರಪ್ಪ ಸಡ್ಡು ಹೊಡೆಯುತ್ತಿರುವುದರ ದ್ಯೋತಕದಂತಿವೆ. 78ನೇ ಜನ್ಮದಿನಕ್ಕೆ ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ ಅವರನ್ನು ಆಹ್ವಾನಿಸಿದ್ದರ ಹಿಂದೆ ಬೇರೆಯದೇ ಉದ್ದೇಶ ಇತ್ತು. ಮೇಲ್ನೋಟಕ್ಕೆ ರಾಜಕೀಯೇತರ ಬಾಂಧವ್ಯವನ್ನು ಸಾರುವ ಕಾರ್ಯಕ್ರಮ ಎಂದೆನಿಸಿದರೂ ಒಂದು ವೇಳೆ ಕೇಂದ್ರ ಕೈಕೊಟ್ಟರೆ ವಿರೋಧ ಪಕ್ಷಗಳು ತಮ್ಮ ಬೆನ್ನಿಗೆ ನಿಲ್ಲಲಿವೆ ಎಂಬ ಸಂದೇಶ ರವಾನಿಸುವ ಇರಾದೆ ಇದರ ಹಿಂದೆ ಇದ್ದುದೇನೂ ರಹಸ್ಯವಲ್ಲ. 

ಬಜೆಟ್‌ ಮಂಡನೆ ಮಾಡಿದ ಯಡಿಯೂರಪ್ಪ, ವಾರಾಂತ್ಯದಲ್ಲಿ ದೆಹಲಿಗೆ ಹೋಗಿ, ಹೆಚ್ಚಿನ ಅನುದಾನ ನೀಡುವಂತೆ ಕೇಂದ್ರದ ನಾಯಕರ ಮನವೊಲಿಸುವೆ ಎಂದಿದ್ದರು. ಮುಖ್ಯಮಂತ್ರಿಯಾದವರು ತಾವು ಮಂಡಿಸಿದ ಬಜೆಟ್‌ನ ಪ್ರತಿಯನ್ನು, ತಮ್ಮದೇ ಪಕ್ಷದವರಿದ್ದರೆ ಪ್ರಧಾನಿ, ಗೃಹ ಸಚಿವರು ಮತ್ತು ಹಣಕಾಸು ಸಚಿವರಿಗೆ ನೀಡಿ ಹೆಚ್ಚಿನ ನೆರವು ಕೇಳುವುದು ವಾಡಿಕೆ. ಅದನ್ನೇ ಮಾಡುವ ಲೆಕ್ಕಾಚಾರವೂ ಯಡಿಯೂರಪ್ಪ ಅವರದ್ದಾಗಿತ್ತು. ಆದರೆ, ರಾಜನಾಥ ಸಿಂಗ್‌ ಬಿಟ್ಟರೆ ಬೇರೆಯವರ ಭೇಟಿಗೆ ಅವಕಾಶವೇ ಸಿಗದಿರುವುದು ಸಂದೇಹಕ್ಕೆ ಕಾರಣವಾಗಿದೆ.

ಯೆಸ್‌ ಬ್ಯಾಂಕ್‌, ಜೆಟ್ ಏರ್‌ವೇಸ್‌ಗಳು ದಿವಾಳಿ ಏಳುವ ಸ್ಥಿತಿ ತಲುಪಿದಾಗ ಸಾವಿರಾರು ಕೋಟಿಯನ್ನು ಧಾರೆ ಎರೆಯುವಂತೆ ಎಸ್‌ಬಿಐಗೆ ಸೂಚಿಸುವ, ವಸೂಲಾಗದ ಸಾಲದಿಂದ ಬ್ಯಾಂಕ್‌ಗಳನ್ನು ರಕ್ಷಿಸಲು, ಜನರಿಗೆ ಸೇರಿದ ₹80 ಸಾವಿರ ಕೋಟಿಯಷ್ಟು ದುಡ್ಡನ್ನು ಬ್ಯಾಂಕ್‌ಗಳಿಗೆ ಕೊಡುಗೆ ನೀಡಿದ ಪ್ರಧಾನಿ, ತಮ್ಮದೇ ಪಕ್ಷದ ಸರ್ಕಾರ ಇರುವ ಕರ್ನಾಟಕಕ್ಕೆ ಕೊಡಲೇಬೇಕಾದ ಅನುದಾನದಲ್ಲೂ ಚೌಕಾಸಿ ಮಾಡುತ್ತಿರುವುದೂ ಈ ಅನುಮಾನಗಳಿಗೆ ಪುಷ್ಟಿ ನೀಡುವಂತಿದೆ.

ಬ್ರಾಹ್ಮಣ ರೂಪದಲ್ಲಿ ಬಂದ ‘ವಾಮನ’, ಮೂರು ಹೆಜ್ಜೆ ಇಡಲು ಜಾಗವನ್ನು ಬಲಿ ಚಕ್ರವರ್ತಿಯಲ್ಲಿ ಕೇಳುತ್ತಾನೆ. ಮೊದಲ ಹೆಜ್ಜೆಯನ್ನು ಭೂಮಿಯಲ್ಲಿ, ಎರಡನೇ ಹೆಜ್ಜೆಯನ್ನು ಆಕಾಶದಲ್ಲಿ ಇಡುತ್ತಾನೆ. ಇನ್ನೊಂದು ಕಾಲು ಎಲ್ಲಿಡುವುದು ಎಂದು ಕೇಳಿದಾಗ, ತನ್ನ ತಲೆಯನ್ನೇ ಬಲಿ ತೋರಿಸುತ್ತಾನೆ. ಈಗ ಬಲಿ ಚಕ್ರವರ್ತಿ ಸ್ಥಾನದಲ್ಲಿ ಯಡಿಯೂರಪ್ಪ ನಿಂತಿದ್ದಾರಾ ಎಂಬ ಸಂಶಯ ಮಾತ್ರ ದಟ್ಟವಾಗುತ್ತಲೇ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು