ಶನಿವಾರ, ಮಾರ್ಚ್ 25, 2023
31 °C
ದ್ವೇಷದ ಬೇಲಿ ಮುರಿಯಲಿ, ಶಾಂತಿ ಮತ್ತು ಸಹಬಾಳ್ವೆಯ ರಸಬಳ್ಳಿ ಹಬ್ಬಲಿ

ಗತಿಬಿಂಬ: ಕಳೆಯಲಿ ದ್ವೇಷ, ಕೂಡಲಿ ದೇಶ

ವೈ.ಗ.ಜಗದೀಶ್ Updated:

ಅಕ್ಷರ ಗಾತ್ರ : | |

‘ಸರ್ವ ಜನಾಂಗದ ಶಾಂತಿಯ ತೋಟ’ವಾದ ಕನ್ನಡನಾಡಿಗೆ ಕಾಲಿಟ್ಟ ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಅವರು ಶಾಂತಿ, ಸಹಬಾಳ್ವೆಯನ್ನು ಧ್ಯಾನಿಸುತ್ತಾ ನಾಡಿನುದ್ದಕ್ಕೂ ನಡೆಯುತ್ತಿದ್ದಾರೆ. ದ್ವೇಷದ ಮಾತುಗಳಿಲ್ಲದೆ, ಜತೆಗೂಡಿದವರ ಕೈ–ಕೈ ಬೆಸೆಯುತ್ತಾ ಎಲ್ಲರೊಡನೊಂದಾಗಿ ದಣಿವಿಲ್ಲದೆ ಹೆಜ್ಜೆ ಹಾಕುತ್ತಿದ್ದಾರೆ. ಜಾತಿ, ಧರ್ಮ, ಭಾಷಾ ದ್ವೇಷವನ್ನು ಹರಡುತ್ತಿರುವ ದುರಿತ ಕಾಲದೊಳಗೆ ರಾಹುಲ್ ಪ್ರತಿಪಾದಿಸುತ್ತಿರುವ ಶಾಂತಿಯ ಪರವಾದ ಮಾತುಗಳು ಕೆಲವರಿಗೆ ಸಹ್ಯ ವಾಗುತ್ತಿಲ್ಲ. ದ್ವೇಷವನ್ನು ಬಿತ್ತಿ, ಜನರನ್ನು ವಿಭಜಿಸುವ ಮೂಲಕವೇ ತಮ್ಮ ಅಧಿಕಾರವನ್ನು ಶಾಶ್ವತಗೊಳಿಸಿಕೊಳ್ಳಲು ಹವಣಿಸುತ್ತಿರುವವರಿಗೆ ಶಾಂತಿಯ ಮಾತುಗಳು ಸಜೀವ ಬಾಂಬುಗಳಂತೆ ಕಂಡರೆ ಅಚ್ಚರಿಪಡಬೇಕಾಗಿಲ್ಲ.

ರಾಹುಲ್‌ ಅವರ ‘ಭಾರತ್ ಜೋಡೊ’ ಪಾದಯಾತ್ರೆಯನ್ನು ಶುರುವಿನಲ್ಲೇ ಬಿಜೆಪಿ ಕಟುವಾಗಿ ಟೀಕಿಸಲಾ ರಂಭಿಸಿತು. ಒಂದು ರಾಜಕೀಯ ಪಕ್ಷವಾಗಿ ಮತ್ತೊಂದು ರಾಜಕೀಯ ಪಕ್ಷದ ಕಾರ್ಯಕ್ರಮದಲ್ಲಿ ಹುಳುಕುಗಳಿದ್ದರೆ ಅವುಗಳನ್ನು ಜನರೆದುರು ಬಯಲು ಮಾಡುವುದು ತಪ್ಪೇನಲ್ಲ. ಕಾಂಗ್ರೆಸ್‌ ಪಕ್ಷವನ್ನು ಜನರು ತಿರಸ್ಕರಿಸಿ ದ್ದಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿರುತ್ತಾರೆ. ಕಾಂಗ್ರೆಸ್‌ಮುಕ್ತ ಭಾರತವನ್ನು ಸಾಧಿಸಿಬಿಟ್ಟೆವು ಎಂದು ಹೆಮ್ಮೆಯನ್ನೂ ಪಡುತ್ತಾರೆ. ರಾಹುಲ್ ಅವರನ್ನು ಅಮ್ಮನ ಸೆರಗಿನ ಹಿಂದೆ ಅವಿತುಕೊಳ್ಳುವ ಪಪ್ಪು, ಬಚ್ಚಾ ಎಂದೆಲ್ಲ ಕಿಚಾಯಿಸಿದ್ದೂ ಉಂಟು. ಅಂತಹ ‘ಬಚ್ಚಾ’ ಕರ್ನಾಟಕದಲ್ಲಿ ಯಾತ್ರೆ ಶುರು ಮಾಡಿದರೆ, ‘ವಿಶ್ವಗುರು’ವನ್ನೇ ತಮ್ಮ ತಲೆ ಮೇಲೆ ಹೊತ್ತುಕೊಂಡ, ‘ಚಾಣಕ್ಯ’ನನ್ನೇ ತಮ್ಮ ನೇತಾರರನ್ನಾಗಿಸಿಕೊಂಡ ಪಕ್ಷಕ್ಕೆ ಭಯ ಹುಟ್ಟಿದ್ದು ಮಾತ್ರ ನಿಗೂಢ. ಬಿಜೆಪಿಗರ ಪ್ರಕಾರ, ರಾಹುಲ್‌ ಜನಬೆಂಬಲ ಕಳೆದುಕೊಂಡ, ವ್ಯಕ್ತಿತ್ವವೇ ಇಲ್ಲದ ನಾಯಕ. ಅಂತಹ ನಾಯಕನೊಬ್ಬ ಯಾತ್ರೆ ಮಾಡಿದರೆ, ಬಿಜೆಪಿ ಅಂಜಿದ್ದು, ಅಳುಕಿದ್ದು ಮಾತ್ರ ಸೋಜಿಗ!

ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಎಂಟು ವರ್ಷಗಳಲ್ಲಿ ಭರತಖಂಡವು ‘ವಿಶ್ವಗುರು’ವಿನ ಪಟ್ಟಕ್ಕೆ ಏರಿದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ, ಅದೇ ಹೊತ್ತಿನೊಳಗೆ ಡಾಲರ್ ಮುಂದೆ ರೂಪಾಯಿಯ ಮೌಲ್ಯ ₹ 82ಕ್ಕೆ ಕುಸಿದುಬಿದ್ದಿದೆ. ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ವಿಶ್ವದ 121 ರಾಷ್ಟ್ರಗಳ ಪೈಕಿ 2020ರಲ್ಲಿ 94ನೇ ಸ್ಥಾನದಲ್ಲಿದ್ದ ಭಾರತವು 2021ರಲ್ಲಿ 101ಕ್ಕೆ ಇಳಿಯಿತು. 2022ರಲ್ಲಿ ಪಾಕಿಸ್ತಾನ, ಶ್ರೀಲಂಕಾವನ್ನು ಹಿಂದಿಕ್ಕಿ 107ನೇ ಸ್ಥಾನಕ್ಕೆ ಕುಸಿದಿದೆ. ಮಕ್ಕಳಲ್ಲಿನ ಅಪೌಷ್ಟಿಕತೆ ಪ್ರಮಾಣ ಶೇ 19.3ರ‌ಷ್ಟಿದ್ದು, ಇದರಲ್ಲೂ ಭಾರತ ‘ವಿಶ್ವಗುರು’ವಿನ ಸ್ಥಾನವನ್ನು ಉಳಿಸಿಕೊಂಡಿದೆ.

ನಿರುದ್ಯೋಗ ಪ್ರಮಾಣ ಶೇ 7.60ರಿಂದ ಶೇ 7.90ಕ್ಕೆ ಏರಿದೆ. ನಗರ ನಿರುದ್ಯೋಗವು ಶೇ 8.28ರಿಂದ ಶೇ 9.28ಕ್ಕೆ ಜಿಗಿದಿದೆ. ಪರಿಶಿಷ್ಟ ಜಾತಿ–ಪಂಗಡದವರ ಮೇಲಿನ ದೌರ್ಜನ್ಯ ಹೆಚ್ಚುತ್ತಲೇ ಇದೆ. 2015ರಲ್ಲಿ 44,946 ಪ್ರಕರಣಗಳು ದಾಖಲಾಗಿದ್ದರೆ 2021ರಲ್ಲಿ ಈ ಪ್ರಮಾಣ 60,045ಕ್ಕೆ ಏರಿಕೆಯಾಗಿದೆ. ಆರ್ಥಿಕ ಹಿಂಜರಿತ, ನಿರುದ್ಯೋಗ, ಬಡತನ, ಜಾತಿ ದೌರ್ಜನ್ಯವನ್ನು ಕೊನೆಗಾಣಿಸಬೇಕಾದ ಆಳುವವರು ಜನರ ಗಮನ ಬೇರೆಡೆಗೆ ಸೆಳೆಯಲು ದ್ವೇಷ ಹಂಚುತ್ತಿದ್ದಾರೆ. ಅದಕ್ಕಾಗಿ ಮಸೀದಿಯಲ್ಲಿ ಶಿವಲಿಂಗ ಹುಡುಕುವ, ಹಿಜಾಬ್‌, ಮತಾಂತರ ನಿಷೇಧದಂತಹ ಸಂಗತಿಗಳನ್ನು ಮುನ್ನೆಲೆಗೆ ತರಲಾಗುತ್ತಿದೆ. ಮುಸ್ಲಿಮರಿಗೆ ನೀಡಿರುವ ಮೀಸಲಾತಿ ರದ್ದತಿಯ ಬೇಡಿಕೆ, ಏಕರೂಪ ನಾಗರಿಕ ಸಂಹಿತೆ, ಮದರಸಾಗಳ ಅನುಮತಿ ರದ್ದು, ಟಿಪ್ಪು ಸುಲ್ತಾನ್‌ನಂತ ಪ್ರಶ್ನಾತೀತ ಸ್ವಾತಂತ್ರ್ಯವೀರನ ಹೆಸರು ಅಳಿಸುವಿಕೆ, ಊರ ಹೆಸರುಗಳನ್ನು ಬದಲಾಯಿಸುವುದು ಇಂತಹವುಗಳೇ ಆಳುವವರ ಆದ್ಯತೆಯಾಗಿವೆ.

ಈ ಹೊತ್ತಿನೊಳಗೆ ಭಾರತವನ್ನು ಒಗ್ಗೂಡಿಸಲು ಪಾದಯಾತ್ರೆ ಮಾಡುತ್ತಿರುವುದಾಗಿ ರಾಹುಲ್ ಹೇಳುತ್ತಿದ್ದಾರೆ. ದಾರಿಯುದ್ದಕ್ಕೂ ಪೌರಕಾರ್ಮಿಕರು, ನರೇಗಾ ಕಾರ್ಮಿಕರು, ರೈತರು, ಸಾಮಾನ್ಯ ಜನರ ಕಷ್ಟ ಆಲಿಸುತ್ತಾ ಅವರ ಬದುಕನ್ನು ಅರಿಯುವ ಯತ್ನ ಮಾಡುತ್ತಿದ್ದಾರೆ. ‘ಪ್ರಧಾನಿ ಮೋದಿಯವರನ್ನು ಟೀಕಿಸಿದವರ ವಿರುದ್ಧ ಹೋದಲ್ಲೆಲ್ಲ ಪ್ರತಿಭಟನೆ ನಡೆಸಿ’ ಎಂದು ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಕರೆ ಕೊಟ್ಟರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌, ತಮ್ಮ ಪಕ್ಷದ ಕಾರ್ಯಕ್ರಮ ತಡೆದರೆ ಕರಾವಳಿಗೆ ಬೆಂಕಿ ಹಾಕುತ್ತೇವೆ ಎಂದು ಹಿಂದೊಮ್ಮೆ ಅಬ್ಬರಿಸಿದ್ದರು. ಬಿಜೆಪಿಯ ಜತೆಗೆ ಗುರುತಿಸಿಕೊಂಡಿರುವ ಅನೇಕರು ಕಡಿ, ಕೊಚ್ಚು, ಕೊಲ್ಲು ಎಂಬ ಮಾತುಗಳ ಮೂಲಕ ಧರ್ಮಗಳ ಮಧ್ಯೆ ದ್ವೇಷ ಹುಟ್ಟಿಸುವ ಕೆಲಸ ಮಾಡುತ್ತಲೇ ಇದ್ದಾರೆ. ಪ್ರಬಲ ಜಾತಿಗಳಿಗೆ ಮೀಸಲಾತಿಯಿಂದಾಗಿ ಉದ್ಯೋಗ ಸಿಗುತ್ತಿಲ್ಲ ಎಂದು ಈ ಜಾತಿಗಳ ಸಂಘಟನೆಗಳು ಹಲುಬುತ್ತಿದ್ದವು.

ಸಂಕಷ್ಟಗಳಿಗೆಲ್ಲ ಮೀಸಲಾತಿಯೇ ಕಾರಣ ಎಂದು ಶುರುವಾದ ವಾದಗಳು ಈ ದಿನಗಳಲ್ಲಿ ದುಷ್ಪರಿಣಾಮ ಬೀರುತ್ತಿವೆ. ಇತ್ತೀಚಿನ ದಿನಮಾನಗಳಲ್ಲಿ ಪರಿಶಿಷ್ಟ ಸಮುದಾಯದವರನ್ನು ಅವಮಾನಿಸುತ್ತಿರುವ ಪ್ರಕರಣ ಗಳು ಹೆಚ್ಚುತ್ತಿರುವುದಕ್ಕೆ ಇದೇ ಕಾರಣವಿದ್ದಂತಿದೆ.

ದ್ವೇಷವನ್ನೇ ಉಸಿರಾಗಿಸುತ್ತಿರುವ ಕಾಲದೊಳಗೆ ರಾಹುಲ್ ಪ್ರತಿಪಾದಿಸುತ್ತಿರುವ ಶಾಂತಿ, ಸತ್ಯದ ಮಾತುಗಳು ಕೆಲವರಿಗೆ ರುಚಿಸುತ್ತಿಲ್ಲ. ಕಣ್ಣೆದುರೇ ಅಜ್ಜಿ, ಅಪ್ಪ ಕೊಲೆಯಾಗಿದ್ದನ್ನು ಕಂಡಿರುವ ರಾಹುಲ್‌, ಮರೆಯಲಾಗದ ನೋವನ್ನು ನುಂಗಿಕೊಂಡು ಪ್ರೀತಿ ಹಂಚಲು ಹೊರಟಿದ್ದಾರೆ. ಆದರೆ, ರಾಹುಲ್ ಹೊರಟಿರುವುದು ಸುರಕ್ಷಿತ ಹಾದಿಯ‌ಲ್ಲಿಯೇ ವಿನಾ ದುರ್ಗಮ ದಾರಿಯಲ್ಲಲ್ಲ. ಎಲ್ಲಿ ಕಾಂಗ್ರೆಸ್‌ಗೆ ಅನುಕೂಲಕರ ವಾತಾವರಣ ಇದೆಯೋ, ಬಿಜೆಪಿ ಎಲ್ಲಿ ಬಲಿಷ್ಠವಾಗಿಲ್ಲವೋ ಬಹುತೇಕ ಅಂತಹ ಪ್ರದೇಶಗಳನ್ನಷ್ಟೇ ಅವರು ಆಯ್ದುಕೊಂಡಿದ್ದಾರೆ. ಕೋಮುದ್ವೇಷ ಹರಡುವವರ ವಿರುದ್ಧ ಜಾಗೃತಿ ಮೂಡಿಸುವುದು ತಮ್ಮ ಯಾತ್ರೆಯ ಉದ್ದೇಶ ಎಂದು ರಾಹುಲ್ ಪ್ರತಿಪಾದಿಸು ತ್ತಿದ್ದರೂ ಅವರು ನಡೆವ ದಾರಿಗುಂಟದ ಚರಿತ್ರೆ ಮತ್ತು ವರ್ತಮಾನ ನೋಡಿದರೆ, ಸಾಮರಸ್ಯದ ಪಸೆಯಿರುವ ಪ್ರದೇಶಗಳಷ್ಟೇ ಅವರ ಆದ್ಯತೆಯಾಗಿವೆ. ಬಿಜೆಪಿಯನ್ನೇ ಅವರು ಗುರಿಯಾಗಿಸಿಕೊಂಡಿದ್ದರೂ ಕೇಸರಿ ಪಡೆ ಪ್ರಬಲವಾಗಿರುವ ಕಡೆ ಅವರು ಸುಳಿಯುತ್ತಿಲ್ಲ. ಕರ್ನಾಟಕದಲ್ಲಿನ ಅವರ ಯಾತ್ರೆಯ ಜಾಡು ನೋಡಿದರೂ ಕರಾವಳಿ, ಮಲೆನಾಡು ಹಾಗೂ ಕಿತ್ತೂರು ಕರ್ನಾಟಕದ ಕಡೆಗೆ ಅವರು ಕಾಲಿಡಲಿಲ್ಲ. ಜೆಡಿಎಸ್–ಕಾಂಗ್ರೆಸ್‌ ಆಯ್ಕೆ ವಿಷಯದಲ್ಲಿ ಅಡ್ಡಗೋಡೆಯ ಮೇಲೆ ಕುಳಿತ ಮತದಾರರನ್ನು ಹಸ್ತದತ್ತ ಸೆಳೆಯುವುದು ಅವರ ಉದ್ದೇಶವಾದಂತಿದೆ. ಬಿಜೆಪಿ ಪ್ರಾಬಲ್ಯ ಇರುವ, ಕಾಂಗ್ರೆಸ್‌ ಸತತ ಸೋಲುಂಡ ರಾಜ್ಯಗಳ ಕಡೆ ರಾಹುಲ್ ಮುಖವೆತ್ತಿ ನೋಡುವ ಧೈರ್ಯ ಮಾಡಿಲ್ಲ.

ರಾಹುಲ್ ಹೋದ ಕಡೆಯಲ್ಲೆಲ್ಲ ಭಾರಿ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಪಕ್ಷದ ನಾಯಕರು ಕೂಡ ಹುಮ್ಮಸ್ಸಿನಿಂದ ಹೆಜ್ಜೆ ಹಾಕುತ್ತಿದ್ದಾರೆ, ಜನರನ್ನು ಸೇರಿಸು ತ್ತಿದ್ದಾರೆ. ಇಂದಿರಮ್ಮನ ಮೊಮ್ಮಗ ಹೇಗಿದ್ದಾನೆಂದು ಕಾಣುವ, ಯಾತ್ರೆ ನೋಡುವ ಕುತೂಹಲಕ್ಕೆ ಜನ ಸೇರುತ್ತಿರುವುದು ಹೌದು.‌ ಕೋಮುವಾದ ವಿರೋಧಿ ಸುವ ವಿಷಯದಲ್ಲಿ ಕಾಂಗ್ರೆಸ್‌ನ ಕೆಲವು ನಾಯಕರು ಮೃದು ಧೋರಣೆ ಅನುಸರಿಸುತ್ತಿರುವುದು, ಓಲೈಕೆ ರಾಜಕಾರಣಕ್ಕೆ ಆತುಕೊಂಡಿರುವುದು ರಹಸ್ಯವೇನಲ್ಲ. ಇಂತಹವರಿಗೆ ಕನ್ನಡ ನೆಲದ ಸಹಿಷ್ಣುತೆ, ಸಾಮರಸ್ಯದ ಬಗ್ಗೆ ಕಿವಿ ಹಿಂಡುವ ಕೆಲಸವನ್ನು ರಾಹುಲ್ ಮಾಡಬೇಕಿದೆ. ಇಲ್ಲದಿದ್ದರೆ ಬಂದ ಪುಟ್ಟ–ಹೋದ ಪುಟ್ಟ ಎಂಬುದಕ್ಕಷ್ಟೇ ಯಾತ್ರೆಯ ರಂಗು ಸೀಮಿತವಾಗಲಿದೆ. ದೇಶದ ಉದ್ದಕ್ಕೂ ಹರಡಲಾಗುತ್ತಿರುವ ದ್ವೇಷದ ತಂತುಗಳನ್ನು ತುಂಡರಿಸಿ, ಶಾಂತಿ, ಸಹಬಾಳ್ವೆಯ ಜೀವತಂತುಗಳನ್ನು ಜೋಡಿಸುವತ್ತಲೂ ಕಾರ್ಯಪ್ರವೃತ್ತರಾಗಬೇಕಿದೆ.

ಒಂದು ದೇಶದ‌ ‌ರಾಜನೊಬ್ಬ, ಅರಮನೆಯ ದರ್ಜಿಯನ್ನು ಕರೆದು, ಯಾರೊಬ್ಬರೂ ಹಾಕಲಾರದಂತಹ ವೈಶಿಷ್ಟ್ಯವಿರುವ ಬಟ್ಟೆಯನ್ನು ಹೊಲಿದುಕೊಡು ಎಂದು ಆದೇಶಿಸಿದ. ವಿಶೇಷ ಮುತುವರ್ಜಿ ವಹಿಸಿದ ದರ್ಜಿ, ಬಟ್ಟೆಯನ್ನು ಹೊಲಿದು ತಂದು, ‘ಈ ಬಟ್ಟೆ ಸತ್ಯವಂತರಿಗೆ ಮಾತ್ರ ಕಾಣಿಸುತ್ತದೆ; ಸುಳ್ಳು ಹೇಳಿದವರಿಗೆ ಕಾಣಿಸುವುದಿಲ್ಲ’ ಎಂದಿದ್ದ. ಹೊಸಬಟ್ಟೆ ಹೊಲಿಸಿರುವ ರಾಜರು ಅದನ್ನು ಧರಿಸಿ ಮೆರವಣಿಗೆಯಲ್ಲಿ ಬರಲಿದ್ದು ಎಲ್ಲರೂ ರಾಜಬೀದಿಗೆ ಬರಬೇಕೆಂದು ರಾಜಾಜ್ಞೆಯಾಯಿತು. ಸತ್ಯವಂತರಿಗೆ ಮಾತ್ರ ಕಾಣಿಸುವ ಬಟ್ಟೆಯಾಗಿದ್ದರಿಂದ ಎಲ್ಲರೂ ಆಹಾಹ ಓಹೋಹೋ ಎಂದು ಹೊಗಳಿದರು. ಕೆಲವರಿಗೆ ರಾಜರಹಸ್ಯ ಗೊತ್ತಾದರೂ ಭಯದಿಂದ ಸುಮ್ಮನಿದ್ದರು. ಬೀದಿಯಲ್ಲಿದ್ದ ಮಗುವೊಂದು ಮಾತ್ರ, ‘ಅಯ್ಯೋ ರಾಜನ ಮೈಮೇಲೆ ಬಟ್ಟೆಯೇ ಇಲ್ಲ; ಆತ ಬೆತ್ತಲೆ ಇದ್ದಾನೆ ಛೀ ಯ್ಯಾ’
ಎಂದು ಕೂಗಿತು. ‘ಪಪ್ಪು, ಬಚ್ಚಾ’ ಎಂದು ಕರೆಸಿಕೊಳ್ಳು ತ್ತಿದ್ದ ರಾಹುಲ್‌ ಈಗ ಆ ಮಗುವಿನಂತೆ ಕಾಣಿಸುತ್ತಿದ್ದಾರೆ.


ವೈ.ಗ.ಜಗದೀಶ್

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು