ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಯ ಸಹವರ್ತಿಗಳ ನಿಗೂಢ ಸಾವು: ಕಾಂಗ್ರೆಸ್‌ ಆರೋಪ

Last Updated 31 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಎಚ್‌ ಲೋಯ ಅವರ ಸಹವರ್ತಿಗಳೂ ನಿಗೂಢ ರೀತಿ
ಯಲ್ಲಿ ಮೃತಪಟ್ಟಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಸೊಹ್ರಾಬುದ್ದೀನ್‌ ಶೇಖ್‌ ಎನ್‌ಕೌಂಟರ್‌ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಲೋಯ, 2014ರ ಡಿಸೆಂಬರ್‌ನಲ್ಲಿ ಮೃತಪಟ್ಟಿದ್ದಾರೆ. ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರುವುದಕ್ಕೆ ಎರಡು ದಿನ ಮೊದಲು ಈ ಆರೋಪ ಮಾಡಲಾಗಿದೆ.

ಪ್ರಕರಣದ ತ್ವರಿತ ವಿಚಾರಣೆ ನಡೆಸಿ ಒಬ್ಬ ಆರೋಪಿಯನ್ನು ಖುಲಾಸೆಗೊಳಿಸುವಂತೆ ಲೋಯ ಮೇಲೆ ಒತ್ತಡ ಇತ್ತು. ಅಲ್ಲದೆ, ವಕೀಲ ಶ್ರೀಕಾಂತ್‌ ಖಾಂಡಾಲ್ಕರ್‌ ಮತ್ತು ನಿವೃತ್ತ ಜಿಲ್ಲಾ ನ್ಯಾಯಾಧೀಶ ಪ್ರಕಾಶ್‌ ತೊಂಬ್ರೆ ಅವರೂ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

‘ಲೋಯ ಅವರ ಮರಣೋತ್ತರ ವರದಿಯನ್ನು ತಿರುಚಲಾಗಿದೆ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಕಪಿಲ್‌ ಸಿಬಲ್‌, ಸಲ್ಮಾನ್‌ ಖುರ್ಷಿದ್‌, ವಿವೇಕ್‌ ತಂಖಾ ಆರೋಪಿಸಿದ್ದಾರೆ.

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಸೊಹ್ರಾಬುದ್ದೀನ್‌ ಎನ್‌ಕೌಂಟರ್‌ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಲೋಯ ಅವರ ಸಾವಿನ ಬಳಿಕ ಅವರ ಸ್ಥಾನಕ್ಕೆ ಬಂದ ನ್ಯಾಯಾಧೀಶರು ಶಾ ಅವರನ್ನು ದೋಷಮುಕ್ತಗೊಳಿಸಿದರು.

ಲೋಯ ಸಾವಿನ ಬಗ್ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು. ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ. ಈ ಎಸ್‌ಐಟಿಯಲ್ಲಿ ಸಿಬಿಐ ಅಥವಾ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಯಾವ ಅಧಿಕಾರಿಯೂ ಇರ
ಬಾರದು ಎಂದೂ ಕಾಂಗ್ರೆಸ್‌ ಆಗ್ರಹಿಸಿದೆ.

ಈ ಬೇಡಿಕೆ ಈಡೇರಿಸದಿದ್ದರೆ ಬೀದಿಗಿಳಿದು ಹೋರಾಟ ನಡೆಸಲಾಗುವುದು. ಈ ವಿಚಾರವನ್ನು ಪ್ರತಿ ಹಳ್ಳಿಗೂ ತಲುಪಿಸಲಾಗುವುದು ಎಂದು ಕಾಂಗ್ರೆಸ್‌ ಮುಖಂಡರು ಹೇಳಿದ್ದಾರೆ.

ಸ್ವತಂತ್ರ ತನಿಖೆಗೆ ಅರ್ಜಿ (ಪಿಟಿಐ ವರದಿ): ಲೋಯ ಸಾವಿನ ತನಿಖೆಯನ್ನು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ನಡೆಸಬೇಕು ಎಂದು ನಿವೃತ್ತ ನೌಕಾಮುಖ್ಯಸ್ಥ ಅಡ್ಮಿರಲ್ ಎಲ್.ರಾಮದಾಸ್ ಅರ್ಜಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT