ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ| ವೈದ್ಯಕೀಯ ಶಿಕ್ಷಣ ಎತ್ತ ಸಾಗುತ್ತಿದೆ?

ಬದಲಾದ ಸಮಾಜದ ಆದ್ಯತೆಗಳು ವೈದ್ಯರ ಆದ್ಯತೆಗಳನ್ನೂ ಬದಲಿಸುತ್ತಿವೆ
Published 30 ಜೂನ್ 2023, 23:30 IST
Last Updated 30 ಜೂನ್ 2023, 23:30 IST
ಅಕ್ಷರ ಗಾತ್ರ

ಈ ಬಾರಿಯ ರಾಷ್ಟ್ರೀಯ ವೈದ್ಯಕೀಯ ಅರ್ಹತಾ ಪ್ರವೇಶ ಪರೀಕ್ಷೆಯ (ನೀಟ್) ಫಲಿತಾಂಶವನ್ನು ಗಮನಿಸಿರುತ್ತೀರಿ. ಪರೀಕ್ಷೆ ಬರೆದ 20.36 ಲಕ್ಷ ಯುವಜನರಲ್ಲಿ 11.46 ಲಕ್ಷ ಜನ ಅರ್ಹತೆ ಗಳಿಸಿದರು. ಕಷ್ಟಕುಲಗಳ, ಬಡತನದ ಮನೆಗಳ ಮಕ್ಕಳು ಹಣ, ಪ್ರಭಾವವಿಲ್ಲದಿದ್ದರೂ ಸ್ವಯಂ ಪರಿಶ್ರಮದಿಂದ ಉತ್ತಮ ರ್‍ಯಾಂಕ್‌ ಗಳಿಸಿರುವ ಸುದ್ದಿತುಣುಕುಗಳು ಕೆಳವರ್ಗಗಳ ವಿದ್ಯಾರ್ಥಿಗಳಲ್ಲಿ ಭರವಸೆ, ಕನಸುಗಳನ್ನು ಬಿತ್ತಿವೆ. ಆದರೆ ಸೀಟು ಹಂಚಲು ರೂಪಿಸಿದ ರ್‍ಯಾಂಕಿಂಗ್ ವ್ಯವಸ್ಥೆಯೇ ಏಣಿಶ್ರೇಣಿ, ಮೇಲರಿಮೆ, ಕೀಳರಿಮೆಗಳನ್ನು ಸೃಷ್ಟಿಸಿರುವುದು ಗಾಬರಿ ಹುಟ್ಟಿಸುವಂತಿದೆ.

ಡಾ. ಎಚ್‌.ಎಸ್‌ ಅನುಪಮಾ
ಡಾ. ಎಚ್‌.ಎಸ್‌ ಅನುಪಮಾ

ನೀಟ್‍ನಲ್ಲಿ ಅರ್ಹತೆ ಗಳಿಸದವರ ಪಾಲಕರಲ್ಲಿ ನಿರಾಸೆ, ಬೇರೆ ದಾರಿ ಅರಸುವ ಅನಿವಾರ್ಯ ಉಂಟಾಗಿದೆ. ಅರ್ಹತೆ ಪಡೆದವರ ಕೆಲ ಕುಟುಂಬಗಳಲ್ಲಿ ಮೊದಲ ಬಾರಿ ಡಾಕ್ಟರಾಗಲಿರುವ ತಮ್ಮ ಕುಟುಂಬ ಸದಸ್ಯರ ಬಗ್ಗೆ ಹೆಮ್ಮೆ, ನಿರೀಕ್ಷೆ ತುಂಬಿಕೊಂಡಿದೆ. ಕೆಲವರು ತಮ್ಮ ವರ್ಗ, ಜಾತಿ, ಸಿರಿವಂತಿಕೆಯ ಗರ್ವಕ್ಕೆ ತಕ್ಕಂತೆ ಮಕ್ಕಳಿಗೆ ಮೆಡಿಕಲ್ ಸೀಟು ಸಿಕ್ಕಿತೆಂದು ಹಿಗ್ಗಿದ್ದಾರೆ. ಸರ್ಕಾರಿ ಸೀಟು ಸಿಗದಿದ್ದರೇನು, ಕ್ಯಾಪಿಟೇಶನ್ ಕೊಟ್ಟಾದರೂ ಮಕ್ಕಳು ‘ಡಾ.’ ಆಗಬೇಕೆಂದು ಸೈಟು, ಬಂಗಾರ ಮಾರಿ ಸಿದ್ಧರಾದವರಿದ್ದಾರೆ. ದುಡ್ಡಿನ ರಾಶಿಯ ಮೇಲೆ ಕುಳಿತವರಿಗೆ ಸೀಟಿನ ಚಿಂತೆಯಿಲ್ಲ. ಇವೆಲ್ಲದರ ನಡುವೆ ಜನಸೇವೆ ಮಾಡಲೆಂದೇ ವೈದ್ಯರಾಗುವ, ವೈದ್ಯರನ್ನಾಗಿಸುವ ಕನಸು ಕಂಡವರು ಎಷ್ಟಿರಬಹುದು ಎನ್ನುವುದು ನಮ್ಮ ಊಹೆಗೆ ಬಿಟ್ಟದ್ದು.

ಭಾರತದಲ್ಲಿ ಸುಮಾರು 700 ಮೆಡಿಕಲ್ ಕಾಲೇಜುಗಳಿವೆ. ಅತಿಹೆಚ್ಚು (68) ಕಾಲೇಜುಗಳಿರುವ ಕರ್ನಾಟಕದಲ್ಲಿ ಭಾರತೀಯ ವೈದ್ಯಕೀಯ ಮಂಡಳಿಯಿಂದ (ಎಂಸಿಐ) ಮಾನ್ಯತೆ ಪಡೆದ 21 ಸರ್ಕಾರಿ ಕಾಲೇಜುಗಳಿವೆ. ಮೊದಲ ಸರ್ಕಾರಿ ಮೆಡಿಕಲ್ ಕಾಲೇಜು ಮೈಸೂರಿನಲ್ಲಿ (1924) ಶುರುವಾಯಿತು. ನಂತರ ಬೆಂಗಳೂರು (1955), ಹುಬ್ಬಳ್ಳಿ (1957) ಬಳ್ಳಾರಿಯಲ್ಲಿ (1961) ಶುರುವಾದವು. ಅದಾದಮೇಲೆ 40 ವರ್ಷ ಒಂದೇಒಂದು ಹೊಸ ಸರ್ಕಾರಿ ಮೆಡಿಕಲ್ ಕಾಲೇಜೂ ತೆರೆಯಲಿಲ್ಲ. ಆ ಅವಕಾಶವನ್ನು ಖಾಸಗಿಯವರು ಬಳಸಿಕೊಂಡರು. ಜಾತಿ, ಧರ್ಮ, ಪಕ್ಷ, ರಾಜಕಾರಣಿ, ಸ್ವಾಮಿಯ ಹೆಸರಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳು ಪುತುಪುತನೆದ್ದವು. ಹೊಸಹೊಸ ಕಾಲೇಜುಗಳು ಈಗಲೂ ಆರಂಭವಾಗುತ್ತಲೇ ಇವೆ. ಅದರ ಜೊತೆಗೆ ಪ್ರತಿ ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸುವ ಗುರಿಯಿಂದ 17 ಹೊಸ ಸರ್ಕಾರಿ ಮೆಡಿಕಲ್ ಕಾಲೇಜುಗಳು ಆರಂಭವಾಗಿವೆ.

ಆಗಸ್ಟ್ 2022ರ ಮಾಹಿತಿಯಂತೆ, ದೇಶದಾದ್ಯಂತ 48,028 ಸರ್ಕಾರಿ ಸೀಟುಗಳು, 44,765 ಖಾಸಗಿ ಸೀಟುಗಳು (ಒಟ್ಟು 92,793) ನೀಟ್ ಬರೆದವರಿಗೆ ಲಭ್ಯವಿವೆ (ಏಮ್ಸ್, ಜಿಪ್ಮರ್, ಸಶಸ್ತ್ರ ಸೇನಾಪಡೆಗಳ ಮೆಡಿಕಲ್ ಕಾಲೇಜು, ನಿಮ್ಹಾನ್ಸ್, ಇಎಸ್‌ಐನಂತಹ ಸ್ವಾಯತ್ತ ಸಂಸ್ಥೆಗಳಲ್ಲಿ ಮತ್ತು ಡೀಮ್ಡ್-ಟು-ಬಿ ಯೂನಿವರ್ಸಿಟಿಗಳಲ್ಲಿ 28,920 ಸರ್ಕಾರಿ, 17,915 ಖಾಸಗಿ ಸೀಟುಗಳಿವೆ. ಅದಕ್ಕೆ ಅವರದೇ ಪರೀಕ್ಷೆ ಬರೆಯಬೇಕು). ಕರ್ನಾಟಕದ 10,395 ಮೆಡಿಕಲ್ ಸೀಟುಗಳಲ್ಲಿ 21 ಸರ್ಕಾರಿ ಮೆಡಿಕಲ್ ಕಾಲೇಜುಗಳ 3,200ರಷ್ಟು ಸೀಟುಗಳು ಲಭ್ಯವಿವೆ. ಉಳಿದವು ಖಾಸಗಿ ಮತ್ತು ಸ್ವಾಯತ್ತ ವಿದ್ಯಾಲಯಗಳಲ್ಲಿವೆ.

ಭಾರತದಾದ್ಯಂತ 1,39,628 ವೈದ್ಯರು ಪ್ರತಿವರ್ಷ ಹೊರಬರುತ್ತಾರೆ. ಅಷ್ಟಾದರೂ ಗ್ರಾಮೀಣ ಪ್ರದೇಶಗಳಿಗೆ, ಬಡವರಿಗೆ ಆರೋಗ್ಯ ಸೇವೆ ನೀಡಲು ವೈದ್ಯರಿಲ್ಲ ಎಂಬ ಕೂಗು ಕೇಳಿಬರುತ್ತಿದೆ. ಹೀಗೇಕೆ?

ಸೇವಾಕ್ಷೇತ್ರದಿಂದ ಉದ್ಯಮದ ಮಟ್ಟಕ್ಕಿಳಿದಿರುವ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯ ಆಳ– ಅಗಲ ಅರಿತರೆ ಇದಕ್ಕೆ ಕಾರಣಗಳು ಸ್ಪಷ್ಟವಾಗುತ್ತವೆ. ಮೊದಲೆಲ್ಲ ವೈದ್ಯರಾಗಲು ರಾತ್ರಿ ಹಗಲೆನ್ನದೆ ರೋಗಿಗಳನ್ನು ನೋಡಲು ಸಿದ್ಧರಿರುವ, ರಕ್ತ, ಕೀವಿಗೆ ಹೇಸದ, ಸೇವಾ ಮನೋಭಾವವಿರುವ ವ್ಯಕ್ತಿತ್ವ ಬೇಕು ಎಂಬ ನಿರೀಕ್ಷೆಯಿತ್ತು. ಈಗ ವೈದ್ಯಕೀಯವೆಂದರೆ, ಅತಿ ಸ್ಪರ್ಧಾತ್ಮಕವಾಗಿ ಗೆಲ್ಲಬೇಕಿರುವ, ಅತಿ ಹೆಚ್ಚು ಭದ್ರತೆ, ಅವಕಾಶ, ಗಳಿಕೆ, ಗೌರವ ತಂದುಕೊಡುವ ಉದ್ಯೋಗ ಎನಿಸಿಕೊಂಡಿದೆ. ರೋಗಿಗಳಿಲ್ಲಿ ಗ್ರಾಹಕರು. ಫಾರ್ಮಾ ಕಂಪನಿಗಳ ಪ್ರಾಡಕ್ಟ್‌ಗಳನ್ನು ಜನರಿಗೆ ಮುಟ್ಟಿಸಲು ವೈದ್ಯರು, ದಾದಿಯರು ಮತ್ತು ಆಸ್ಪತ್ರೆಗಳು ಉಪಕರಣಗಳಷ್ಟೇ.

ಅತಿ ಶ್ರೇಣೀಕೃತ ವ್ಯವಸ್ಥೆಯಾದ ವೈದ್ಯಕೀಯ ಶಿಕ್ಷಣವು ಹೆಚ್ಚು ಖಾಸಗೀಕರಣಗೊಂಡಿದೆ. ಸರ್ಕಾರಿ ಸೀಟುಗಳ ಮೂರು ಪಟ್ಟು ಅವಕಾಶ ಖಾಸಗಿ ಕಾಲೇಜುಗಳಲ್ಲಿದೆ. ಖಾಸಗಿ ಕಾಲೇಜುಗಳ ಶೇ 25ರಷ್ಟು ಸೀಟುಗಳನ್ನು ಸರ್ಕಾರಿ ಕೋಟಾದಲ್ಲಿ ಭರ್ತಿ ಮಾಡುತ್ತಾರೆ. ಅಲ್ಲಿನ ದುಬಾರಿ ಫೀಸು ತೆತ್ತು ಸರ್ಕಾರಿ ಸೀಟಿನ ವಿದ್ಯಾರ್ಥಿಗಳು ಓದಬೇಕು. ಉಳಿದ ಶೇ 75ರಷ್ಟು ಸೀಟುಗಳಿಗೆ ಪ್ರವೇಶ ಪಡೆಯಲು ಇರಬೇಕಾದ ಮುಖ್ಯ ಅರ್ಹತೆ ಹಣ. ಆಯಾ ಕಾಲೇಜಿನ ನಿಯಮಗಳಿಗೆ ತಕ್ಕಂತೆ ₹ 80 ಲಕ್ಷದಿಂದ ಒಂದೆರಡು ಕೋಟಿಯತನಕ ಬೇಕಾಗುತ್ತದೆ. ನಂತರ ಐದೂವರೆ ವರ್ಷದ ಓದಿನ ಖರ್ಚು ನಿಭಾಯಿಸಿ, ಬಳಿಕ ದುಬಾರಿ ಬೆಲೆಗೆ ಪಿ.ಜಿ ಸೀಟು ಪಡೆಯಬೇಕು. ಅದನ್ನೂ ಕ್ಯಾಪಿಟೇಶನ್ ಕೊಟ್ಟೇ ಪಡೆಯುವುದಾದರೆ ಮೂರ್ನಾಲ್ಕೈದು ಕೋಟಿ ಖರ್ಚು ಮಾಡಿ ಎಂಡಿ/ಎಂಎಸ್ ಪಡೆಯಬೇಕು. ಅಂದರೆ ತಜ್ಞವೈದ್ಯರಾಗಲು ಕನಿಷ್ಠ 9-10 ವರ್ಷ ಮತ್ತು 7-8 ಕೋಟಿ ರೂಪಾಯಿ ಬೇಕು.

ಯಾವ ತಾಯ್ತಂದೆಯಾದರೂ ಜನಸೇವೆ ಮಾಡಲಿ ಎಂದು ಇಷ್ಟು ಹಣ ಸುರಿದು ಮಕ್ಕಳನ್ನು ಓದಿಸುತ್ತಾರೆಯೇ? ಅತ್ಯಾಧುನಿಕ ಆಸ್ಪತ್ರೆಗಳಲ್ಲಿ, ಸಿರಿವಂತರ ನಡುವೆ ಕಲಿತ ಆ ಯುವವೈದ್ಯರು ಅತಿ ಕಡಿಮೆ ಸೌಲಭ್ಯವಿರುವ, ಕಡಿಮೆ ಆದಾಯದ ಗ್ರಾಮೀಣ, ಸರ್ಕಾರಿ ಕೆಲಸಗಳಿಗೆ ಹೋಗಲು ಇಚ್ಛಿಸಿಯಾರೇ? ಹೀಗೆ ವೈದ್ಯಕೀಯ ಶಿಕ್ಷಣವನ್ನು ದುಬಾರಿ ವ್ಯವಹಾರವನ್ನಾಗಿಸಿರುವ ವ್ಯವಸ್ಥೆ ಒಂದೆಡೆ; ವೈದ್ಯರು ಉದಾರಿಗಳೂ ಉದಾತ್ತ ಗುಣದವರೂ ಸೇವಾಮನೋಭಾವ ಇರುವವರೂ ಆಗಿರಬೇಕೆಂದು ಬಯಸುವ ಸಮಾಜ ಇನ್ನೊಂದೆಡೆ.

ಕೆಲ ವರ್ಷಗಳ ಹಿಂದಿನತನಕ ಮಕ್ಕಳ ತಜ್ಞರು, ಸರ್ಜರಿ, ಸ್ತ್ರೀರೋಗ, ಎಲುಬುಕೀಲು, ಹೃದ್ರೋಗ ತಜ್ಞತೆಗಳು ಬಹುಬೇಡಿಕೆಯ ಸ್ನಾತಕೋತ್ತರ ಪದವಿಗಳಾಗಿದ್ದವು. ಈಗ ಅತಿಹೆಚ್ಚು ಡಿಮ್ಯಾಂಡ್ ಇರುವುದು ಚರ್ಮರೋಗ ತಜ್ಞರಾಗಲು! ಜೀವನ್ಮರಣದ ಪ್ರಶ್ನೆಯಲ್ಲದಿದ್ದರೂ ‘ಚೆಂದ’ ಕಾಣುವುದು ಜನರ ಪ್ರಾಥಮಿಕ ಆದ್ಯತೆಯಾಗಿದೆ. ಮಾರುಕಟ್ಟೆಯ ವ್ಯಾಖ್ಯಾನಕ್ಕೆ ತಕ್ಕಂತೆ ಜನರನ್ನು ಚೆಲುವ ಚೆಲುವೆಯರನ್ನಾಗಿಸಲು ವೈದ್ಯಕೀಯ ರಂಗ ಟೊಂಕಕಟ್ಟಿ ನಿಂತಿದೆ! ಈ ಕಾಲದ ಮೌಲ್ಯಗಳ ವೈರುಧ್ಯಕ್ಕೆ, ಆಷಾಢಭೂತಿತನಕ್ಕೆ, ಬದಲಾದ ಸಮಾಜದ ಆದ್ಯತೆಗಳು ವೈದ್ಯರ ಆದ್ಯತೆಗಳನ್ನೂ ಬದಲಿಸುತ್ತಿವೆ ಎನ್ನಲಿಕ್ಕೆ ಇದಕ್ಕಿಂತ ಉದಾಹರಣೆ ಬೇಕೇ?

ಮೆಡಿಕಲ್ ಪ್ರವೇಶ ಪಡೆಯುವುದು ಅತ್ಯಂತ ಹೆಗ್ಗಳಿಕೆಯ ವಿಷಯ ಎಂಬಂತೆ ಮಾಧ್ಯಮಗಳ ಮೂಲಕ ಬಿಂಬಿಸಲಾಗುತ್ತಿದೆ. ಹೀಗೆ ಶುರುವಾಗುವ ಮೆಡಿಕಲ್ ಹೈಪ್, ‘ಅಪರೂಪದಲ್ಲಿ ಅಪರೂಪದ ಅವಕಾಶ ಪಡೆದವರು ನಾವು’ ಎಂಬ ಅಹಮನ್ನು ವೈದ್ಯ ವಿದ್ಯಾರ್ಥಿಗಳಲ್ಲಿ ಬೆಳೆಸುತ್ತದೆ. ವೈದ್ಯರಾದರೂ ಅದು ಮುಂದುವರಿಯುತ್ತದೆ.

ಅಹಂ ನಿರಸನ ಅಷ್ಟೇನೂ ಸುಲಭವಲ್ಲ. ಅದಕ್ಕೆ ನಮ್ಮನ್ನು ನಿರಂತರವಾಗಿ ದಿವ್ಯಕ್ಕೆ ಒಡ್ಡಿಕೊಳ್ಳಬೇಕು. ರೋಗಿಗಳಂತೆ ತಾವೂ ಮರಣಾಧೀನರೇ ವಿನಾ ಸರ್ವಶಕ್ತರಲ್ಲ ಎಂಬ ಪ್ರಜ್ಞಾ (ವಿನಯ), ಅಸಹಾಯಕತೆಯಲ್ಲಿ ಇರುವವರಿಗೆ ತನ್ನ ಬಳಿ ಸಾಧ್ಯವಿರುವ ಸಹಾಯವನ್ನೆಲ್ಲ ಮಾಡಬೇಕು ಎಂಬ ಕರುಣಾ, ಜಾತಿ, ಲಿಂಗ ಮತ್ತು ವರ್ಗಪ್ರಜ್ಞೆಗಳ ಮೀರಿದ ಸಮತಾ- ಇವೇ ಆ ದಿವ್ಯಗಳು.

‘ಜನಕೆ ಸಂತಸವೀವ ಘನನು ನಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ಬಿಡದೆ
ವನಸುಮದೊಳೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು...’ –(ಡಿವಿಜಿ)

ಎಲ್ಲಕ್ಕಿಂತ ಮುಖ್ಯವಾದದ್ದು ನಮ್ಮ ‘ಗಳಿಕೆ’ಯ ದುಡ್ಡಿಗೆ ಉತ್ತರದಾಯಿತ್ವ ಆರೋಪಿಸಿಕೊಳ್ಳುವುದು. ನಮ್ಮ ಬಳಿ ಹೊಟ್ಟೆತುಂಬ ಉಂಡು ಮಿಗುವಷ್ಟು ಇದೆಯೆಂದರೆ, ಅದಕ್ಕೆ ಹಸಿದವರ ಅನ್ನ ಕಸಿದುಕೊಂಡ ಕಳಂಕ ಅಂಟಿರುತ್ತದೆ. ವೈದ್ಯರ ಯೋಚನೆ ಈ ದಿಕ್ಕಿನಲ್ಲಿ ಕೊಂಚ ಹರಿದರೂ ಸಾಕು, ತಂತಾನೇ ಅವರ ಸ್ಟ್ಯಾಂಡರ್ಡ್‍ಗಳು, ಫೀಸುಗಳು, ಚಿಕಿತ್ಸೆ-ತಪಾಸಣೆಯ ಯಾದಿಗಳು ಬದಲಾಗಿಬಿಡುತ್ತವೆ.

ಹೀಗೆ ಜನರ ಋಣಭಾರವನ್ನು ನೆನಪಿಸುವಂತಹ ಶಿಕ್ಷಣವು ವೈದ್ಯಕೀಯವಷ್ಟೇ ಅಲ್ಲ, ಎಲ್ಲ ಕ್ಷೇತ್ರಗಳಲ್ಲೂ ಅವಶ್ಯವಾಗಿದೆ. ಅದರಲ್ಲಿ ಸಮಾಜದ ಪಾತ್ರವೂ ಮಹತ್ವದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT