ಶುಕ್ರವಾರ, ಡಿಸೆಂಬರ್ 3, 2021
24 °C
ಉತ್ತರಪ್ರದೇಶ, ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳ ಪಾತ್ರ ಪರೀಕ್ಷೆಗೆ ಒಳಪಡಲಿದೆ

ವಿರೋಧ ಪಕ್ಷ: ಸ್ಥಾನಭದ್ರತೆಗೆ ಕಸರತ್ತು

ಸಂದೀಪ್‌ ಶಾಸ್ತ್ರಿ Updated:

ಅಕ್ಷರ ಗಾತ್ರ : | |

Prajavani

ಬಿಜೆಪಿ ನೇತೃತ್ವದ ಈಗಿನ ಎನ್‌ಡಿಎ ಸರ್ಕಾರವು ಮುಂದಿನ ತಿಂಗಳ ವೇಳೆಗೆ ತನ್ನ ಎರಡನೇ ಅಧಿಕಾರ ಅವಧಿಯ ಮಧ್ಯಭಾಗದಲ್ಲಿರುತ್ತದೆ. ಮುಂದಿನ ವರ್ಷ ನಡೆಯಲಿರುವ ಉತ್ತರಪ್ರದೇಶ ಹಾಗೂ ಪಂಜಾಬ್ ವಿಧಾನಸಭೆ ಚುನಾವಣೆಗಳ ಸುತ್ತ ಬಹಳಷ್ಟು ರಾಜಕೀಯ ಆಸಕ್ತಿ ಮೂಡಿದ್ದರೂ ಈ ಚುನಾವಣೆಗಳು 2024ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಮುಂಚಿನ ಸೆಮಿಫೈನಲ್ ಆಗಿರುತ್ತವೆ ಅಷ್ಟೆ.

ಇತ್ತೀಚಿನ ದಿನಗಳಲ್ಲಿ ಗೋಚರಿಸುತ್ತಿರುವ ಸ್ಪಷ್ಟ ಮಾದರಿ ಎಂದರೆ, ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಚುನಾವಣೆ ಪ್ರವೃತ್ತಿಗಳಲ್ಲಿ ಎದ್ದು ಕಾಣಿಸುವಂತಹ ವ್ಯತ್ಯಾಸಗಳು. ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಿಕೊಂಡ ಪಕ್ಷವು ರಾಜ್ಯ ವಿಧಾನಸಭೆ ಚುನಾವಣೆಯಲ್ಲೂ ಅಂತಹದೇ ಸಾಧನೆ ತೋರಬೇಕೆಂದೇನೂ ಇಲ್ಲ ಅಥವಾ ತೋರುತ್ತದೆ ಎಂದೇನೂ ಇಲ್ಲ. ಇಂತಹದೊಂದು ಮಾದರಿಯ ಹಿನ್ನೆಲೆಯಲ್ಲಿ, ಅಧಿಕಾರ ಸ್ಥಾನದಲ್ಲಿ ಒಂದು ದಶಕ ಪೂರೈಸಲು ಸಜ್ಜಾಗುತ್ತಿರುವ ಪಕ್ಷ– ಮೈತ್ರಿಕೂಟಕ್ಕೆ ಸವಾಲು ಹಾಕಲು ಪ್ರತಿಪಕ್ಷದ ಸ್ಥಾನವನ್ನು ಆಕ್ರಮಿಸಿಕೊಳ್ಳುವುದಕ್ಕಾಗಿಯೇ ನಡೆಯಲಿರುವ ಸಮರವನ್ನು ಮುಂದಿನ ಮೂವತ್ತು ತಿಂಗಳುಗಳಲ್ಲಿ ಕಾಣಬಹುದು.

ಸತತ ಎರಡು ಅವಧಿ ಪೂರೈಸಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ, 2014ರ ಮಹಾಚುನಾವಣೆಯಲ್ಲಿ
ಮಹಾಸೋಲನ್ನು ಕಂಡಿತು. ಬಲವಾದ ಆಡಳಿತ ವಿರೋಧಿ ಅಲೆಯನ್ನೇರಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರದ ಗದ್ದುಗೆಗೆ ಏರಿತು. ಕಾಲು ಶತಮಾನದ ನಂತರ ಮೊದಲ ಬಾರಿಗೆ ಲೋಕಸಭೆಯಲ್ಲಿ ಬಹುಮತ ಸಾಧಿಸಲು ಏಕಪಕ್ಷವೊಂದು (ಬಿಜೆಪಿ) ಸಫಲವಾಗಿತ್ತು. ಬಲಿಷ್ಠ ನಾಯಕತ್ವದ ಪ್ರಭಾವ ಹಾಗೂ ದುರ್ಬಲ ಮತ್ತು ವಿಭಜಿತ ಪ್ರತಿಪಕ್ಷದ ಅಂಶಗಳು ಸೇರಿದಂತೆ ಹಲವು ಕಾರಣಗಳಿಗಾಗಿ 2019ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಪುನಃ ಅಧಿಕಾರ ಹಿಡಿಯಿತು. 2014ರಲ್ಲಿ ಬಿಜೆಪಿ ಗೆಲುವಿನ ನಂತರ, ಲೋಕಸಭೆಯಲ್ಲಿ ವಿರೋಧ ಪಕ್ಷದ ಉಪಸ್ಥಿತಿ ಸೀಮಿತವಾಗಿದೆ. ಈ ಎರಡೂ ಚುನಾವಣೆಗಳಲ್ಲಿ (2014 ಮತ್ತು 2019), ವಿರೋಧ ಪಕ್ಷಗಳ ಪೈಕಿ ದೊಡ್ಡದಾದ ಕಾಂಗ್ರೆಸ್ ಪಕ್ಷವು, ವಿರೋಧ ಪಕ್ಷದ ಅಧಿಕೃತ ಸ್ಥಾನಮಾನ ಪಡೆದುಕೊಳ್ಳಲು ಅಗತ್ಯವಾದಂತಹ ಕನಿಷ್ಠ ಶೇ 10ರಷ್ಟು ಸ್ಥಾನಗಳನ್ನು ಗಳಿಸಲೂ ವಿಫಲವಾಯಿತು. ಹೀಗಾಗಿ, ಲೋಕಸಭೆಯಲ್ಲಿ ಪ್ರತಿಪಕ್ಷದ ಅಧಿಕೃತ ನಾಯಕನೇ ಇಲ್ಲದಂತಹ ಸ್ಥಿತಿ ಉಂಟಾಯಿತು.

2014ರಲ್ಲಿ ಅಧಿಕಾರ ಕಳೆದುಕೊಂಡಾಗಿನಿಂದ, ತಪ್ಪುಗಳನ್ನು ಸರಿಪಡಿಸಿಕೊಂಡು ಹೆಚ್ಚು ಸಂಘಟಿತವಾಗಲು ಕಾಂಗ್ರೆಸ್ ಪ್ರಯತ್ನಿಸುತ್ತಲೇ ಇದೆ. 2014ರ ಲೋಕಸಭೆ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಸ್ಥಾನಗಳನ್ನು ಗೆದ್ದ ಕಾಂಗ್ರೆಸ್, 2019ರ ಲೋಕಸಭಾ ಚುನಾವಣೆಯಲ್ಲೂ ಅಂಚಿನಲ್ಲೇ ಉಳಿದುಹೋಯಿತು. ನಂತರ ಈ ಎರಡೂವರೆ ವರ್ಷಗಳಲ್ಲಿ ಪ್ರಮುಖ ಪ್ರತಿಪಕ್ಷ ಸ್ಥಾನದ ಉಪಸ್ಥಿತಿಯನ್ನು ಪ್ರತಿಪಾದಿಸಿಕೊಳ್ಳುವಲ್ಲಿಯೂ ವಿಫಲವಾಗಿದೆ. ಪಕ್ಷದೊಳಗೆ ನಾಯಕತ್ವದ ಶೂನ್ಯತೆ ಮುಂದುವರಿದಿದೆ. ಪ್ರಮುಖ ವಿಚಾರಗಳ ಬಗ್ಗೆ ದೀರ್ಘ ಕಾಲ ನಿರ್ಧಾರ ಕೈಗೊಳ್ಳದೇ ಇರುವುದು, ‘ರಾಜ್ಯ ಮಟ್ಟದ ನೆಲೆ’ ಇರುವ ಪಕ್ಷಗಳಿಗೆ ಪ್ರತಿಪಕ್ಷದ ಜಾಗ ತೆರವು ಮಾಡಿಕೊಡುವಂತಹ ಸ್ಥಿತಿ ಸೃಷ್ಟಿಯಾಗುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇರುವ ರಾಜ್ಯಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಅಧಿಕಾರದಲ್ಲಿರುವೆಡೆಯೂ ತನ್ನನ್ನು ಸಂಘಟಿತವಾಗಿ ಇಟ್ಟುಕೊಳ್ಳಲು ಹೋರಾಡುತ್ತಿದೆ. ಇದು, ‘ಪ್ರತಿಪಕ್ಷದ ನೆಲೆ’ಯ ‘ಕೇಂದ್ರ ಬಿಂದು’ವಾಗಿ ಯಾವ ರಾಜಕೀಯ ರಚನೆಗಳು ಹೊರಹೊಮ್ಮಲಿವೆ ಎಂಬ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

2014ರ ಲೋಕಸಭೆ ಚುನಾವಣೆಯ ನಂತರ, ಬಿಜೆಪಿಯು ರಾಜಕೀಯ ಭೂಪಟದಲ್ಲಿ ಕೇಂದ್ರ ಸ್ಥಾನವನ್ನು ಹೆಚ್ಚಾಗಿ ಆಕ್ರಮಿಸಿಕೊಳ್ಳುತ್ತಿದೆ. ಪ್ರಬಲ ಪಕ್ಷ ವ್ಯವಸ್ಥೆಯು ಉದಯವಾಗುತ್ತಿರುವುದನ್ನು ಭಾರತ ಕಾಣುತ್ತಿದೆ. ‘ಕಾಂಗ್ರೆಸ್‌ಮುಕ್ತ ಭಾರತ’ ಎಂಬುದು ಬಿಜೆಪಿಯ ಪ್ರಮುಖ ಘೋಷಣೆ ಆಗಿರುವುದು ಆಕಸ್ಮಿಕವೇನಲ್ಲ. ಕಾಂಗ್ರೆಸ್ ಪಕ್ಷದಲ್ಲಿನ ದಿಕ್ಕು ತಪ್ಪಿದ ಸ್ಥಿತಿ, ಅದರೊಳಗಿನ ಆಂತರಿಕ ಬಿಕ್ಕಟ್ಟು ಹಾಗೂ ವಿರೋಧಾಭಾಸಗಳಿಂದಾಗಿ ‘ಪ್ರತಿಪಕ್ಷದ ನೆಲೆ’ಯಲ್ಲಿ ‘ನುಸುಳುತ್ತಿರುವ ಅಪ್ರಸ್ತುತತೆ’ಗೆ ಕಾಂಗ್ರೆಸ್ ಪಕ್ಷವೇ ಕೊಡುಗೆ ಸಲ್ಲಿಸುತ್ತಿದೆ ಎಂದು ಅನೇಕ ವೀಕ್ಷಕರು ನಂಬುವುದಕ್ಕೆ ಇದು ಇನ್ನಷ್ಟು ಕಾರಣವಾಗಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ನಂತರ ಹೊಣೆಗಾರಿಕೆ ಹೊತ್ತುಕೊಂಡು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ ನಂತರ ಉಂಟಾದ ನಾಯಕತ್ವ ಶೂನ್ಯತೆಯು ಪಕ್ಷಕ್ಕೆ ಹೆಚ್ಚಿನ ಪೆಟ್ಟು ನೀಡಿದೆ. ವಿವಿಧ ಬಣಗಳ ನಡುವೆ ಆಂತರಿಕ ಅಧಿಕಾರ ಕಿತ್ತಾಟದಿಂದಾಗಿ ಪಕ್ಷದೊಳಗಿನ ಏಕತೆಗೂ ತೀವ್ರವಾದ ಬೆದರಿಕೆಯುಂಟಾಗಿದೆ. 2019ರ ಲೋಕಸಭೆ ಚುನಾವಣೆ ನಂತರ, ತನ್ನದೇ ಬಲದಿಂದ ಯಾವುದೇ ರಾಜ್ಯದಲ್ಲೂ ಅಧಿಕಾರಕ್ಕೆ ಬರುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಕೇರಳದಲ್ಲಿ ಅಧಿಕಾರ ಹಿಡಿಯಲಾಗಲಿಲ್ಲ. ಮಧ್ಯಪ್ರದೇಶ ಹಾಗೂ ಕರ್ನಾಟಕದಲ್ಲಿ ತನ್ನದೇ ಸರ್ಕಾರಗಳನ್ನು ಕಳೆದುಕೊಂಡಿತು. ಜಾರ್ಖಂಡ್, ತಮಿಳುನಾಡು ಹಾಗೂ ಮಹಾರಾಷ್ಟ್ರದಲ್ಲಿನ ಮೈತ್ರಿ ಸರ್ಕಾರಗಳಲ್ಲಿ ಸಣ್ಣ ಪಾಲುದಾರ ಪಕ್ಷವಾಗಿದೆ ಕಾಂಗ್ರೆಸ್. ತಾನು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಮತ್ತೆ ಮತದಾರರ ಮುಂದೆ ಹೋಗಲಿದೆ. ಅಷ್ಟೇ ಅಲ್ಲ, ಇದೇ ಅವಧಿಯಲ್ಲಿ ಬಿಜೆಪಿಯೊಂದಿಗೆ ನೇರ ಸ್ಪರ್ಧೆಯಲ್ಲಿರುವ ಕೆಲವು ಪ್ರಮುಖ ರಾಜ್ಯಗಳಲ್ಲಿಯೂ ಬಿಜೆಪಿ ವಿರುದ್ಧ ಕಾಂಗ್ರೆಸ್ ಸೆಣಸಲಿದೆ.

2019ರ ನಂತರ, ರಾಜ್ಯ ಮಟ್ಟದ ಪ್ರಮುಖ ಚುನಾವಣೆ ಸಮರಗಳಲ್ಲಿ ಬಿಜೆಪಿ (ಹಾಗೂ ಅದರ ಮಿತ್ರ ಪಕ್ಷಗಳು) ಅಧಿಕಾರವನ್ನು ಮತ್ತೆ ಹಿಡಿದಿರುವುದನ್ನು ನೋಡಿದ್ದೇವೆ ಅಥವಾ ರಾಜ್ಯ ಮಟ್ಟದ ಪ್ರಾದೇಶಿಕ ಪಕ್ಷವು (ಸ್ವಂತ ಬಲದಿಂದ ಅಥವಾ ಮೈತ್ರಿಯೊಂದಿಗೆ) ಬಿಜೆಪಿ ಅಥವಾ ಎನ್‌ಡಿಎ ಕೂಟವನ್ನು ಸೋಲಿಸಿರುವುದನ್ನು ನೋಡಿದ್ದೇವೆ. ಜಾರ್ಖಂಡ್‌ನಲ್ಲಿ ಜೆಎಂಎಂ ನೇತೃತ್ವದ ಮಿತ್ರಪಕ್ಷಗಳು ಚುನಾವಣೆ ಗೆಲ್ಲುವುದರೊಂದಿಗೆ ಚುನಾವಣಾ ಗೆಲುವುಗಳಲ್ಲಿ ‘ರಾಜ್ಯ ಮಟ್ಟದ ಪ್ರಾದೇಶಿಕ ಪಕ್ಷಗಳ’ ನೇತೃತ್ವ ಆರಂಭವಾಯಿತು. ನಂತರ ದೆಹಲಿಯಲ್ಲಿ ಎಎಪಿ ಗೆಲುವು ಸಾಧಿಸಿತು. ಈ ಮಧ್ಯೆ, ಮಹಾರಾಷ್ಟ್ರದಲ್ಲಿ ಹೊಸ ಆಡಳಿತ ಮೈತ್ರಿ ರಚನೆ (ರಾಜ್ಯ ಮಟ್ಟದ ಪ್ರಾದೇಶಿಕ ಪಕ್ಷಗಳ ಪ್ರಮುಖ ಪಾತ್ರದೊಂದಿಗೆ) ಆರಂಭವಾಯಿತು. ಕೇರಳದಲ್ಲಿ ಸಿಪಿಎಂ ನೇತೃತ್ವದ ಮೈತ್ರಿಕೂಟ ಅಧಿಕಾರ ಉಳಿಸಿಕೊಂಡಿತು. ತಮಿಳುನಾಡಿನಲ್ಲಿ ಎಐಎಡಿಎಂಕೆ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಡಿಎಂಕೆ ನೇತೃತ್ವದ ಮೈತ್ರಿಕೂಟ ಸೋಲಿಸಿತು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ನೇರ ಚುನಾವಣಾ ಸ್ಪರ್ಧೆಯನ್ನು ಮಣಿಸಿ ತೃಣಮೂಲ ಕಾಂಗ್ರೆಸ್ ಅಧಿಕಾರ ಉಳಿಸಿಕೊಂಡಿತು.

ಹೊಸದಾಗಿ ಹೊಮ್ಮುತ್ತಿರುವ ‘ಪ್ರತಿಪಕ್ಷದ ನೆಲೆ’ಯಲ್ಲಿ ‘ರಾಜ್ಯ ಮಟ್ಟದ ಪ್ರಾದೇಶಿಕ ಪಕ್ಷಗಳ’ ಪ್ರಮುಖ ಪಾತ್ರ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದು, ಉತ್ತರ ಪ್ರದೇಶ ಹಾಗೂ ಪಂಜಾಬ್ ವಿಧಾನಸಭೆಗೆ ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಪರೀಕ್ಷೆಗೆ ಒಳಪಡಲಿದೆ. ಈ ಚುನಾವಣೆಗಳ ಫಲಿತಾಂಶಗಳು, 2024ರ ಚುನಾವಣಾ ಸ್ಪರ್ಧೆಯ ರೂಪುರೇಷೆಗಳನ್ನು ವ್ಯಾಖ್ಯಾನಿಸಿ ನಿರ್ಧರಿಸಲಿವೆ. ಈ ಸಂಬಂಧ ಮೂರು ಅಂಶಗಳು ಪ್ರಾಮುಖ್ಯ ಗಳಿಸಿಕೊಳ್ಳುತ್ತವೆ. ಮೊದಲಿಗೆ, ಪ್ರತಿಪಕ್ಷಗಳ ಪೈಕಿ ‘ನಿರ್ಣಾಯಕ ಆಟಗಾರ’ನ ಸ್ಥಾನವನ್ನು ಕಾಪಾಡಿಕೊಳ್ಳುವುದು ಕಾಂಗ್ರೆಸ್‌ಗೆ ಸಾಧ್ಯವಾಗಲಿದೆಯೇ? ಅಥವಾ ‘ಪ್ರತಿಪಕ್ಷದ ನೆಲೆ’ಯಲ್ಲಿ ತಾನೂ ಕೇವಲ ಒಬ್ಬ ಮಾಮೂಲಿ ಆಟಗಾರನಷ್ಟೇ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆಯೇ?

ಎರಡನೆಯದಾಗಿ, ಆಡಳಿತ ಮೈತ್ರಿಕೂಟ ಹಾಗೂ ಪ್ರತಿಪಕ್ಷಗಳ ನಡುವಿನ ಸ್ಪರ್ಧೆಯನ್ನು ನಾಯಕತ್ವಕ್ಕೆ ಸಂಬಂಧಿಸಿದ ಆಯ್ಕೆಯಾಗಿ ಕಾಣುವುದು ಹೆಚ್ಚಾಗುತ್ತಿದೆಯೇ? ನಾಯಕತ್ವದ ಸಮರವೆಂಬಂತೆ ರೂಪುಗೊಳ್ಳುವ ಚುನಾವಣಾ ಸ್ಪರ್ಧೆಯು ಬಿಜೆಪಿಗೆ ಹೆಚ್ಚು ಅನುಕೂಲಕರ ಆಗಲಿದೆ ಹಾಗೂ ಬಿಜೆಪಿಯು ಹೆಚ್ಚು ಅನುಕೂಲಕರ ನೆಲೆಯಲ್ಲಿರುತ್ತದೆ.

ಕಡೆಯದಾಗಿ, ಪ್ರತಿಪಕ್ಷ ನೆಲೆಯಲ್ಲಿರುವ ಮುಖ್ಯ ಆಟಗಾರರು, ಈ ಸಮರವನ್ನು ಬರೀ ನಾಯಕತ್ವ ಸ್ಪರ್ಧೆ
ಯಾಗಿಸದೇ ಪರ್ಯಾಯ ಕಾರ್ಯಕ್ರಮಗಳು ಹಾಗೂ ಆಡಳಿತನೀತಿ ಆದ್ಯತೆಗಳ ಗುಚ್ಛಗಳನ್ನಾಧರಿಸಿದ ಸ್ಪರ್ಧೆಯಾಗಿಸಲು ಶಕ್ತರಾಗಬಲ್ಲರೇ? ಈ ಮೂರೂ ಪ್ರಶ್ನೆಗಳ ಉತ್ತರಗಳನ್ನು ಹೊಸದಾಗಿ ‘ಹೊಮ್ಮುತ್ತಿರುವ ಪ್ರತಿಪಕ್ಷ ನೆಲೆ’ಯ ಮುಖ್ಯ ಅಂಶಗಳು ಅವಲಂಬಿಸಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು