ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಾಜಕಾರಣ: ಇಬ್ಬರ ನಡುವೆ ಎಎಪಿ ಸ್ಥಾನವೇನು?

ಗುಜರಾತ್‌ನಲ್ಲಿ ಬಿಜೆಪಿ ಪಾರಮ್ಯಕ್ಕೆ, ಹಿಮಾಚಲದಲ್ಲಿ ಚುನಾವಣಾ ಸಂಪ್ರದಾಯಕ್ಕೆ ಪರೀಕ್ಷೆ
Last Updated 18 ಅಕ್ಟೋಬರ್ 2022, 23:30 IST
ಅಕ್ಷರ ಗಾತ್ರ

2022ನೆಯ ಇಸವಿಯು ಎರಡು ಪ್ರಮುಖ ರಾಜ್ಯಗಳ ಚುನಾವಣೆಗಳೊಂದಿಗೆ ಕೊನೆಗೊಳ್ಳಲಿದೆ. ಹಿಮಾಚಲ ಪ್ರದೇಶ ಮತ್ತು ಗುಜರಾತ್ ಮತದಾರರು ತಮ್ಮ ವಿಧಾನಸಭೆಗಳಿಗೆ ಪ್ರತಿನಿಧಿಗಳನ್ನು ಚುನಾಯಿಸಲಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ನವೆಂಬರ್ 12ರಂದು ಮತದಾನ ನಡೆಯಲಿದೆ. ಹಿಮಾಚಲ ಪ್ರದೇಶದಲ್ಲಿ ಮತ ಎಣಿಕೆಯು ಡಿಸೆಂಬರ್ 8ಕ್ಕೆ ನಿಗದಿಯಾಗಿರುವ ಕಾರಣ, ಗುಜರಾತ್‌ನಲ್ಲಿ ಕೂಡ ನವೆಂಬರ್‌ ಕೊನೆಯಲ್ಲಿ ಅಥವಾ ಡಿಸೆಂಬರ್ ಆರಂಭದಲ್ಲಿ ಮತದಾನ ನಡೆಯುವ ಸೂಚನೆ ಇದೆ.

ಎರಡೂ ರಾಜ್ಯಗಳಲ್ಲಿ ಬಿಜೆಪಿಯು ಇನ್ನೊಂದು ಅವಧಿಗೆ ಅಧಿಕಾರ ನಡೆಸಲು ಅವಕಾಶ ಕೋರಲಿದೆ, ತನ್ನ ಇದುವರೆಗಿನ ಆಡಳಿತವನ್ನು ಸಮರ್ಥಿಸಿಕೊಳ್ಳಲಿದೆ. ಗುಜರಾತ್‌ನಲ್ಲಿ ಬಿಜೆಪಿಯು ಸತತ 24 ವರ್ಷಗಳಿಂದ ಅಧಿಕಾರದಲ್ಲಿದೆ. ವಾಸ್ತವದಲ್ಲಿ, ಇಲ್ಲಿ ಬಿಜೆಪಿಯು 1995ರಿಂದಲೇ ಪ್ರತೀ ಚುನಾವಣೆಯಲ್ಲಿಯೂ ಗೆಲುವು ಸಾಧಿಸುತ್ತಿದೆ, ಅಧಿಕಾರ ಹಿಡಿಯುತ್ತಿದೆ. ಆದರೆ, ಆಂತರಿಕ ಭಿನ್ನಮತದ ಕಾರಣದಿಂದಾಗಿ 1996ರಿಂದ 1998ರ ನಡುವೆ ಕಿರು ಅವಧಿಗೆ ಮಾತ್ರ ಅದು ಅಲ್ಲಿ ಅಧಿಕಾರದಲ್ಲಿ ಇರಲಿಲ್ಲ. ಗುಜರಾತ್ ರಾಜ್ಯದ ಮಟ್ಟದಲ್ಲಿ ಬಿಜೆಪಿಯು ಅಧಿಕಾರದ ಏಕಸ್ವಾಮ್ಯ ಸಾಧಿಸಿದೆ. ಅಲ್ಲಿ ಅದು ಸತತ ಆರು ವಿಧಾನಸಭಾ ಚುನಾವಣೆಗಳಲ್ಲಿ ಗೆಲುವು ಕಂಡಿದೆ. ಹಿಮಾಚಲ ಪ್ರದೇಶದ ಕಥೆ ಬೇರೆಯದೇ ಇದೆ. ಈ ಅರ್ಧ ಶತಮಾನದ ಅವಧಿಯಲ್ಲಿ ಅಲ್ಲಿ ಯಾವ ಆಡಳಿತಾರೂಢ ಪಕ್ಷವೂ ಅಧಿಕಾರಕ್ಕೆ ಮರಳಿಲ್ಲ. 1972ರ ನಂತರದಲ್ಲಿ ಇಲ್ಲಿ 11 ವಿಧಾನಸಭಾ ಚುನಾವಣೆಗಳು ನಡೆದಿವೆ. ಪ್ರತೀ ಬಾರಿಯೂ ಆಡಳಿತಾರೂಢ ಪಕ್ಷ ಸೋಲು ಕಂಡಿದೆ. 1980ರ ನಂತರದಲ್ಲಿ ಒಂದು ಬಾರಿ ಕಾಂಗ್ರೆಸ್, ಇನ್ನೊಂದು ಬಾರಿ ಬಿಜೆಪಿ ಕ್ರಮವಾಗಿ ಅಧಿಕಾರ ಹಿಡಿದಿವೆ.

ಮುಂದಿನ ತಿಂಗಳು ನಡೆಯುವ ಚುನಾವಣೆಯಲ್ಲಿ ಬಿಜೆಪಿಯು ಅರ್ಧ ಶತಮಾನದ ಈ ಸಂಪ್ರದಾಯ ವನ್ನು ಬದಲಾಯಿಸಲು ಯತ್ನಿಸುತ್ತದೆ, ರಾಜ್ಯದ ಜನ ಸಂಪ್ರದಾಯವನ್ನು ಮುಂದುವರಿಸಲಿ ಎಂದು ವಿರೋಧ ಪಕ್ಷವು ಬಯಸುತ್ತದೆ.

ಪಕ್ಷಗಳ ನಡುವಿನ ಸ್ಪರ್ಧೆಯ ವಿಚಾರದಲ್ಲಿ ಎರಡೂ ರಾಜ್ಯಗಳಲ್ಲಿ ಸಮಾನ ಅಂಶವೊಂದು ಇದೆ. ಎರಡೂ ರಾಜ್ಯಗಳಲ್ಲಿ ಇದುವರೆಗೆ ನೇರ ಸ್ಪರ್ಧೆ ಇದ್ದದ್ದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ. ಈ ಬಾರಿ ಎರಡೂ ರಾಜ್ಯಗಳಲ್ಲಿ ಆಮ್ ಆದ್ಮಿ ಪಕ್ಷವು (ಎಎಪಿ) ತನಗಾಗಿ ಒಂದು ರಾಜಕೀಯ ಸ್ಥಾನ ಕಲ್ಪಿಸಿಕೊಳ್ಳಲು ಗಂಭೀರ ಪ್ರಯತ್ನ ನಡೆಸಿದೆ. ದೆಹಲಿಯ ಆಚೆಗೆ, ಪಂಜಾಬ್‌ನಲ್ಲಿ ರಾಜಕೀಯ ಹೆಜ್ಜೆಗುರುತನ್ನು ಸ್ಪಷ್ಟವಾಗಿ ಮೂಡಿಸಿರುವ ಎಎಪಿ, ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಕೂಡ ಪ್ರಮುಖ ಪಕ್ಷವಾಗಿ ಬೆಳೆದುನಿಲ್ಲುವ ಆಸೆ ಹೊಂದಿದೆ. ಆದರೆ ಈ ಎರಡು ರಾಜ್ಯಗಳಲ್ಲಿ ಪಕ್ಷವು ತಳಮಟ್ಟದಲ್ಲಿ ಎದ್ದು ಕಾಣುವ ರೀತಿಯಲ್ಲಿ ಕೆಲಸ ಮಾಡಿರುವುದು ಸೀಮಿತ ವ್ಯಾಪ್ತಿಯಲ್ಲಿ ಮಾತ್ರ. ಪ್ರಮುಖ ಪ್ರತಿಪಕ್ಷದ ಸ್ಥಾನದಲ್ಲಿ ಇರುವ ಕಾಂಗ್ರೆಸ್ಸನ್ನು ಆ ಸ್ಥಾನದಿಂದ ಕೆಳಕ್ಕೆ ಇಳಿಸಲು ಅಗತ್ಯವಿರುವಷ್ಟು ಮತಗಳನ್ನು ಎಎಪಿ ಪಡೆಯಲಿದೆಯೇ, ಬಿಜೆಪಿಗೆ ಸವಾಲು ಒಡ್ಡಿ ಅಧಿಕಾರದ ಕುರ್ಚಿಗೆ ಹತ್ತಿರವಾಗಲಿದೆಯೇ ಎಂಬುದು ಈಗಿನ ದೊಡ್ಡ ಪ್ರಶ್ನೆ.

ಬಿಜೆಪಿಗೆ ಮತ್ತು ಅದರ ಕೇಂದ್ರ ನಾಯಕತ್ವಕ್ಕೆ ಗುಜರಾತ್ ಚುನಾವಣೆಯು ಮಹತ್ವದ ಪರೀಕ್ಷೆ ಯಾಗಲಿದೆ. ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವ ಇದೇ ರಾಜ್ಯದವರು. ಹೀಗಾಗಿ ಇಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಗೆಲ್ಲುವಂತೆ ನೋಡಿಕೊಳ್ಳಬೇಕಿರುವುದು ಮಹತ್ವದ್ದಾಗಲಿದೆ. ಒಂದು ವರ್ಷಕ್ಕೂ ತುಸು ಹಿಂದೆ, ಕೇಂದ್ರ ನಾಯಕತ್ವದ ಮಹತ್ವ ಮತ್ತು ಪರಿಣಾಮವು ಗುಜರಾತ್‌ನಲ್ಲಿ ಎದ್ದು ಕಾಣುವಂತಿತ್ತು. ಅಲ್ಲಿ ಆಗ ಹೊಸ ಮುಖ್ಯಮಂತ್ರಿ ಹಾಗೂ ಹೊಸ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂತು. 2014ರಲ್ಲಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಸ್ಥಾನ ತೊರೆದ ನಂತರದಲ್ಲಿ ಆ ರಾಜ್ಯವು ಮೂವರು ಮುಖ್ಯಮಂತ್ರಿಗಳನ್ನು ಕಂಡಿದೆ. 2021ರ ಸೆಪ್ಟೆಂಬರ್‌ ತಿಂಗಳಲ್ಲಿ ಆದಂತಹ ಸಂಪುಟ ಪುನರ್‌ ರಚನೆಯು ಹಿಂದೆಂದೂ ಆಗಿರದಿದ್ದ ಪ್ರಯೋಗ. ಬಿಜೆಪಿಯು ಅಧಿಕಾರದಲ್ಲಿ ಇರುವ ಬೇರೆ ಯಾವ ರಾಜ್ಯಗಳಲ್ಲಿಯೂ ಈ ಬಗೆಯ ಪುನರ್‌ ರಚನೆ ಆಗಿರಲಿಲ್ಲ. ಚುನಾವಣೆಯ ಯಶಸ್ಸಿನಲ್ಲಿ ಕೇಂದ್ರ ನಾಯಕತ್ವದ ಪಾಲು ಮಹತ್ವದ್ದು ಎಂಬ ನಂಬಿಕೆ ಪಕ್ಷದಲ್ಲಿ ಇರುವುದರ ಸ್ಪಷ್ಟ ಸೂಚನೆ ಇದು.

ಹಿಂದಿನ ಬಾರಿಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ (2017ರಲ್ಲಿ) ಬಿಜೆಪಿ ಇಲ್ಲಿ ಕಠಿಣ ಸ್ಪರ್ಧೆ ಎದುರಿಸಿತು. ವಿಧಾನಸಭೆಯಲ್ಲಿ ಪಕ್ಷದ ಬಲವು ಎರಡು ಅಂಕಿಗಳಿಗೆ ಕುಸಿಯಿತು. ಪ್ರಧಾನಿಯವರು ಅಲ್ಲಿ ಚುನಾವಣಾ ಪ್ರಚಾರ ನಡೆಸದೇ ಇದ್ದಿದ್ದರೆ ಬಿಜೆಪಿ ಇನ್ನಷ್ಟು ಸ್ಥಾನಗಳನ್ನು ಕಳೆದುಕೊಳ್ಳುತ್ತಿತ್ತು ಎಂದು ಹಲವರು ನಂಬಿದ್ದಾರೆ. ಈ ವರ್ಷದ ಚುನಾವಣೆಗೆ ಸಿದ್ಧತೆ ನಡೆಸಲು, ಹಿಂದಿನ ವರ್ಷ ರಾಜ್ಯ ಸರ್ಕಾರದ ಹೆಸರಿಗೆ ಒಂದಿಷ್ಟು ಹೊಳಪು ತರುವ ಯತ್ನ ನಡೆಸಲಾಯಿತು.‌

ಕಾಂಗ್ರೆಸ್‌ನ ಕೆಲವು ಪ್ರಮುಖ ಮುಖಂಡರು ಪಕ್ಷ ತೊರೆದಿದ್ದಾರೆ. ಪಕ್ಷವು ಹೊಸ ಅಧ್ಯಕ್ಷರನ್ನು ಚುನಾಯಿಸುವ ಪ್ರಕ್ರಿಯೆಯಲ್ಲಿ ತೊಡಗಿರುವ ಹೊತ್ತಿನಲ್ಲಿ, ರಾಹುಲ್ ಗಾಂಧಿ ಅವರು ‘ಭಾರತ್ ಜೋಡೊ’ ಯಾತ್ರೆಯಲ್ಲಿ ತೊಡಗಿರುವ ಹೊತ್ತಿನಲ್ಲಿ, ಗುಜರಾತ್‌ನಲ್ಲಿ ಅಧಿಕಾರ ಹಿಡಿಯಲು ಪಕ್ಷವು ಗಂಭೀರ ಪ್ರಯತ್ನ ನಡೆಸಲಿದೆಯೇ ಎಂಬುದೇ ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ.

ಈಗ ಗುಜರಾತ್‌ನಲ್ಲಿ ಎಎಪಿ ಹೊಸ ಸ್ಪರ್ಧಿಯಾಗಿ ನಿಂತಿದೆ. ಗುಜರಾತಿನ ಚುನಾವಣಾ ಪ್ರಚಾರಗಳಲ್ಲಿ ಬಿಜೆಪಿ ಮತ್ತು ಅದರ ನಾಯಕತ್ವವು ಎಎಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಅಂದರೆ, ಎಎಪಿ ತಳಮಟ್ಟದಲ್ಲಿ ಒಂದಿಷ್ಟು ಅಲೆಗಳನ್ನು ಸೃಷ್ಟಿಸಿದೆ ಎಂದಾಯಿತು. ಗುಜರಾತ್‌ನಲ್ಲಿ ಬಿಜೆಪಿ ಮೇಲುಗೈ ಹೊಂದಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಆದರೆ ಎರಡು ಕಾರಣಗಳಿಗಾಗಿ ಚುನಾವಣಾ ಪ್ರಚಾರವನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತದೆ. ಮೊದಲನೆಯದು, ಎರಡು ದಶಕಗಳಿಂದ ಅಧಿಕಾರದಲ್ಲಿ ಇರುವ ಬಿಜೆಪಿಯನ್ನು ಸೋಲಿಸಲು ಸಾಧ್ಯವಿದೆಯೇ? ಎರಡನೆಯದು, ಅಲ್ಲಿ ಪ್ರಧಾನ ವಿರೋಧ ಪಕ್ಷದ ಸ್ಥಾನದಲ್ಲಿ ಈ ಬಾರಿ ಬೇರೆಯವರು ಬರಲಿದ್ದಾರೆಯೇ ಅಥವಾ ಗುಜರಾತ್‌ನಲ್ಲಿ ಎರಡು ಪಕ್ಷಗಳ ನಡುವಿನ ಸ್ಪರ್ಧೆ ಬದಲಾಗಲಿದೆಯೇ?

ಹಿಮಾಚಲ ಪ್ರದೇಶದಲ್ಲಿ ಆಡಳಿತಾರೂಢ ಪಕ್ಷ ಅಧಿಕಾರ ಕಳೆದುಕೊಳ್ಳುವ ಸಂಪ್ರದಾಯವು ಈ ಬಾರಿ ಪರೀಕ್ಷೆಗೆ ಒಳಗಾಗಲಿದೆ. ಅಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ತಮ್ಮದೇ ಆದ ಆಂತರಿಕ ಸವಾಲುಗಳು ಇವೆ. 2017ರಲ್ಲಿ ಇಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯೇ ಸೋಲು ಕಂಡಿದ್ದರು. ಹೀಗಾಗಿ ಪಕ್ಷವು ಸರ್ಕಾರದ ನೇತೃತ್ವ ವಹಿಸಲು ಹೊಸ ನಾಯಕನನ್ನು ಆಯ್ಕೆ ಮಾಡಿಕೊಳ್ಳಬೇಕಾಯಿತು. ರಾಜ್ಯದ ಮಟ್ಟದಲ್ಲಿ ತಳಮಟ್ಟದಲ್ಲಿ ರಾಜಕೀಯವಾಗಿ ಬಿಗುವಿನ ವಾತಾವರಣ ಮುಂದು ವರಿದಿದೆ. ಕಾಂಗ್ರೆಸ್‌ನ ಪ್ರಮುಖ ನಾಯಕರು ಪಕ್ಷ ತೊರೆದಿದ್ದಾರೆ. ವೀರಭದ್ರ ಸಿಂಗ್ ನಿಧನದ ನಂತರದಲ್ಲಿ ಪಕ್ಷದ ನಾಯಕತ್ವದಲ್ಲಿ ಬದಲಾವಣೆ ಆಗಿದೆ. ಪಕ್ಷದ ಕೇಂದ್ರ ನಾಯಕತ್ವದಲ್ಲಿ ಆಗುವ ಬದಲಾವಣೆಗಳು ಕೂಡ ಒಂದಿಷ್ಟು ಪರಿಣಾಮ ಬೀರಲಿವೆ. ಇದು ಸಣ್ಣ ರಾಜ್ಯ ಆಗಿರುವ ಕಾರಣ ಇಲ್ಲಿ ತನಗೊಂದು ರಾಜಕೀಯ ಸ್ಥಾನ ಕಲ್ಪಿಸಿಕೊಳ್ಳುವ ಆಸೆಯನ್ನು ಎಎಪಿ ಹೊಂದಿದೆ. ಹೀಗಾಗಿ ಇಲ್ಲಿ ತುರುಸಿನ ಸ್ಪರ್ಧೆ ಖಂಡಿತ ಇರಲಿದೆ.

ಪ್ರೊ. ಸಂದೀಪ್ ಶಾಸ್ತ್ರಿ
ಪ್ರೊ. ಸಂದೀಪ್ ಶಾಸ್ತ್ರಿ

ಬಿಜೆಪಿಯು ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ತನ್ನ ರಾಷ್ಟ್ರೀಯ ನಾಯಕತ್ವದ ಮೇಲೆ ಬಹುವಾಗಿ ಅವಲಂಬಿತ ಆಗಿರಲಿದೆ. ಕಾಂಗ್ರೆಸ್ ಪಕ್ಷವು ಇನ್ನಷ್ಟೇ ಒಗ್ಗೂಡಿ ಕೆಲಸ ಆರಂಭಿಸಬೇಕಿದೆ. ಎಎಪಿಯು ಎರಡೂ ರಾಜ್ಯಗಳಲ್ಲಿ ಅಸ್ತಿತ್ವ ಕಂಡುಕೊಳ್ಳಲು ಕೆಲಸ ಮಾಡುತ್ತಿದೆ. ಕುತೂಹಲಕರ ಚುನಾವಣಾ ಅಭಿಯಾನವನ್ನು ನಾವು ಕಾಣಲಿದ್ದೇವೆ. ಗದ್ದಲಕ್ಕಿಂತ ಹೆಚ್ಚು ವಿವೇಕ, ಅರಚುವಿಕೆಗಿಂತ ಹೆಚ್ಚಿನ ಹೊಣೆಗಾರಿಕೆ, ನಿಜವಾದ ವಿಷಯಗಳಿಗೆ ಆದ್ಯತೆ ಸಿಗಲಿದೆ ಎಂದು ಆಶಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT