ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಾಜಕಾರಣ –ಸಂದೀಪ್‌ ಶಾಸ್ತ್ರಿ ಲೇಖನ: ರಾಜಕೀಯ ಪಕ್ಷಗಳ ಆದ್ಯತೆ ಏನು?

ಪ್ರಚಾರ ಸಮಿತಿ: ಯಡಿಯೂರಪ್ಪ ವರ್ಚಸ್ಸಿಗೆ ಸರಿಹೊಂದುವುದೇ ಸದಸ್ಯ ಸ್ಥಾನ?
Last Updated 10 ಮಾರ್ಚ್ 2023, 19:31 IST
ಅಕ್ಷರ ಗಾತ್ರ

ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಿಸುವ ಸಮಯ ಹತ್ತಿರವಾಗುತ್ತಿರುವ ಹೊತ್ತಿನಲ್ಲಿ, ಪಕ್ಷಗಳು ಕೂಡ ಹಣಾಹಣಿಗೆ ಸಜ್ಜಾಗಿ ನಿಂತಿವೆ. ಪ್ರಮುಖ ಪಕ್ಷಗಳೆಲ್ಲ ತಮ್ಮ ಕಾರ್ಯತಂತ್ರವನ್ನು ಅನುಷ್ಠಾನಕ್ಕೆ ತರುತ್ತಿವೆ. ನಾಮಪತ್ರ ಸಲ್ಲಿಸುವ ದಿನಾಂಕ ಹತ್ತಿರವಾದಂತೆಲ್ಲ, ಪ್ರಮುಖರು ಪಕ್ಷಗಳಿಂದ ಹೊರನಡೆಯುವ ಹಾಗೂ ಬೇರೆ ಪಕ್ಷ ಸೇರುವ ಪ್ರಕ್ರಿಯೆ ಜೋರಾಗಲಿದೆ. ಪಕ್ಷಾಂತರ ಪರ್ವ ಈಗ ಶುರುವಾಗಿದೆ. ಮೂರು ಪ್ರಮುಖ ರಾಜಕೀಯ ಪಕ್ಷಗಳ ಕಾರ್ಯತಂತ್ರದ ಕುರಿತು ಮುಖ್ಯ ಒಳನೋಟಗಳನ್ನು ನೀಡುವ, ಈಚಿನ ದಿನಗಳಲ್ಲಿ ಕಂಡುಬಂದಿರುವ ಕೆಲವು ಬೆಳವಣಿಗೆಗಳ ಬಗ್ಗೆ ಗಮನ ಹರಿಸಬಹುದು.

ಬಿಜೆಪಿಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪಕ್ಷದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಘೋಷಿಸಿದೆ. ತಾನು ಅಧಿಕಾರದಲ್ಲಿದ್ದರೂ ಪಕ್ಷವು ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಘೋಷಿಸಿಲ್ಲ. ಚುನಾವಣೆಯ ನಂತರದಲ್ಲಿ ಪಕ್ಷವು ಅಧಿಕಾರ ಹಿಡಿಯುವ ಸಂದರ್ಭ ಸೃಷ್ಟಿಯಾದರೆ, ಮೂಡಬಹುದಾದ ಕುತೂಹಲವನ್ನು ಇದು ತೋರಿಸುತ್ತಿದೆ. ಹೀಗಿದ್ದರೂ, ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನವು ಬೊಮ್ಮಾಯಿ ಅವರಿಗೆ ನೀಡಿರುವ ‘ಸಮಾಧಾನಕರ ಬಹುಮಾನ’ ಆಗಿರಬಹುದು. ಈ ಸ್ಥಾನದ ಮೂಲಕ ಅವರ ಹಾಗೂ ಅವರ ಬೆಂಬಲಿಗರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಯತ್ನ ನಡೆದಿರಬಹುದು. ಈ ಸಮಿತಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಸದಸ್ಯರು. ಪಕ್ಷದ ಮಾಜಿ ಮುಖ್ಯಮಂತ್ರಿಗಳೆಲ್ಲ ಈ ಸಮಿತಿಯಲ್ಲಿದ್ದಾರೆ. ಯಡಿಯೂರಪ್ಪ ಅವರು ತಮ್ಮ ಸ್ಥಾನ ಹಾಗೂ ತಮಗಿರುವ ವರ್ಚಸ್ಸಿಗೆ ತಕ್ಕುದಾದ, ಇನ್ನೂ ದೊಡ್ಡದಾದ ಹಾಗೂ ಇನ್ನೂ ಹೆಚ್ಚು ತೂಕದ ಸ್ಥಾನಕ್ಕೆ ಅರ್ಹರಾಗಿದ್ದರೇ ಎಂಬ ಪ್ರಶ್ನೆ ಇದೆ.

ಸಮಿತಿಯ ಹಲವು ಸದಸ್ಯರ ಪೈಕಿ ತಾವೂ ಒಬ್ಬರು ಎಂಬುದು ಯಡಿಯೂರಪ್ಪ ಅವರ ಸಾಮರ್ಥ್ಯ ಮತ್ತು ಅವರು ನಿಭಾಯಿಸಬೇಕು ಎಂದು ಹೇಳಲಾಗಿರುವ ಪಾತ್ರಕ್ಕೆ ಪೂರ್ಣ ನ್ಯಾಯ ಒದಗಿಸಿದಂತೆ ಆಗುವುದಿಲ್ಲ. ಕಠಿಣ ಚುನಾವಣೆಯಲ್ಲಿ ಪಕ್ಷವು ತನ್ನ ಕೇಂದ್ರ ನಾಯಕರ ಮೇಲೆ ಹೆಚ್ಚು ಅವಲಂಬಿತವಾಗಿರುವಂತೆ ಕಾಣುತ್ತಿದೆ. ಬಿಜೆಪಿಗೆ ನಿಜವಾದ ಸವಾಲು ಎದುರಾಗುವುದು ಟಿಕೆಟ್ ಹಂಚಿಕೆ ವೇಳೆ. ಹಳಬರು ಹಾಗೂ ನಿಷ್ಠಾವಂತರು ಟಿಕೆಟ್‌ನಲ್ಲಿ ಹೆಚ್ಚಿನ ಪಾಲು ಕೇಳುತ್ತಾರೆ. ಪಕ್ಷಾಂತರ ಮಾಡಿ, ಬಿಜೆಪಿಯು ಅಧಿಕಾರಕ್ಕೆ ಬರುವಲ್ಲಿ ನೆರವಾದವರು ತಮಗೂ ಹೆಚ್ಚಿನ ಪಾಲು ಬೇಕು ಎನ್ನುತ್ತಾರೆ. ಹೊಸ ಪ್ರತಿಭೆಗಳು ತಮ್ಮ ಪಾಲಿಗೆ ಕಾಯುತ್ತಿರುತ್ತಾರೆ. ಅಲ್ಲದೆ, ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಯುವವರು ಸಚ್ಚಾರಿತ್ರ್ಯ ಹೊಂದಿರುವವರು ಎಂಬುದನ್ನೂ ಪಕ್ಷವು ಖಾತರಿಪಡಿಸಬೇಕಿರುತ್ತದೆ. ಈಚಿನ ದಿನಗಳಲ್ಲಿ ಆದ ಕೆಲವು ಬೆಳವಣಿಗೆಗಳ ಕಾರಣದಿಂದಾಗಿ ಇದು ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ.

ಇವೆಲ್ಲವುಗಳ ನಡುವೆ, ಬಹುಮತ ಪಡೆಯಬೇಕು ಎಂದಾದರೆ ಪಕ್ಷವು ಗೆಲ್ಲುವ ಸಾಮರ್ಥ್ಯವನ್ನು ಕಡೆಗಣಿಸಲು ಸಾಧ್ಯವಿಲ್ಲ. ಹೀಗಾಗಿ ಟಿಕೆಟ್ ಹಂಚಿಕೆಯು ಬಿಜೆಪಿ ಪಾಲಿಗೆ ಹಗ್ಗದ ಮೇಲಿನ ನಡಿಗೆಯೇ ಆಗಲಿದೆ.

ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಮರಳಲು ಅವಕಾಶ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದೆ. ಆದರೆ, ಪಕ್ಷದಲ್ಲಿ ಒಗ್ಗಟ್ಟು ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಹೇಳಿಕೊಳ್ಳುವ ವಿಚಾರದಲ್ಲಿ ಹಿಂದೇಟು ಹಾಕಿಲ್ಲವಾದರೂ, ಅವರಿಬ್ಬರೂ ರಾಜಕೀಯ ಜಾಣ್ಮೆಯ ಎಲ್ಲೆಗಳನ್ನು ಮೀರಿ ಮಾತನಾಡದೇ ಇರುವ ಎಚ್ಚರಿಕೆಯನ್ನು ತೋರಿದ್ದಾರೆ. ಮುಂದೆ ಸರ್ಕಾರವನ್ನು ಮುನ್ನಡೆಸುವ ಅಭಿಲಾಷೆ ತಮಗೆ ಇದೆ ಎಂದು ಹೇಳಿಕೊಂಡಿದ್ದರೂ ಅದು ನಾಯಕತ್ವದ ವಿಚಾರದಲ್ಲಿ ಬಹಿರಂಗ ತಿಕ್ಕಾಟಕ್ಕೆ ತಿರುಗದಂತೆ ಇಬ್ಬರೂ ಎಚ್ಚರಿಕೆ ವಹಿಸಿದ್ದಾರೆ. ಪಕ್ಷವು ಅಧಿಕಾರಕ್ಕೆ ಬರುವಂತೆ ವಾತಾವರಣ ಸೃಷ್ಟಿಸುವುದರಲ್ಲಿ ತಮ್ಮಿಬ್ಬರ ಹಿತ ಅಡಗಿದೆ ಎಂಬುದನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ. ನಾಯಕತ್ವದ ಪ್ರಶ್ನೆಯನ್ನು ನಂತರದಲ್ಲಿ ಇತ್ಯರ್ಥಮಾಡಿಕೊಳ್ಳಬಹುದು.

ಕಾಂಗ್ರೆಸ್ ಪಕ್ಷವು ರೂಪಿಸಲು ಬಯಸುತ್ತಿರುವ ಸಾಮಾಜಿಕ ಮೈತ್ರಿಕೂಟದ ಎರಡು ತಂತುಗಳನ್ನು– ಅಂದರೆ ಒಕ್ಕಲಿಗ ಮತಗಳು ಹಾಗೂ ಪ್ರಬಲವಲ್ಲದ ಒಬಿಸಿ ಸಮುದಾಯಗಳ ಮತಗಳು – ಈ ಇಬ್ಬರು ಪ್ರತಿನಿಧಿಸುತ್ತಿದ್ದಾರೆ. ಇವರಿಬ್ಬರಲ್ಲಿ ಯಾವುದೇ ಒಬ್ಬ ಮುಖಂಡ ತಾನು ನಾಯಕತ್ವದ ಸ್ಪರ್ಧೆಯಲ್ಲಿ ಇಲ್ಲ ಎಂದು ತೋರಿಸಿಕೊಂಡರೆ, ಕಾಂಗ್ರೆಸ್ ಪಕ್ಷಕ್ಕೆ ಆ ಮಹತ್ವದ ಸಮುದಾಯದ ಮತಗಳು ಕೈತಪ್ಪಬಹುದು. ಇಲ್ಲಿ ಕೂಡ ಟಿಕೆಟ್ ಹಂಚಿಕೆ ಹೇಗೆ ನಡೆಯಲಿದೆ ಎಂಬುದು ಪಕ್ಷದ ಒಗ್ಗಟ್ಟಿನ ವಿಚಾರದಲ್ಲಿ ಮಹತ್ವದ್ದಾಗುತ್ತದೆ. ಟಿಕೆಟ್ ಹಂಚಿಕೆ ವೇಳೆ ತಮ್ಮ ಬೆಂಬಲಿಗರಿಗೆ ಹೆಚ್ಚಿನ ಟಿಕೆಟ್ ಸಿಗುವಂತೆ ನೋಡಿಕೊಳ್ಳಲು ಇಬ್ಬರೂ ಯತ್ನಿಸುತ್ತಾರೆ. ಗೆಲ್ಲುವ ಸಾಮರ್ಥ್ಯವನ್ನು ಮುನ್ನೆಲೆಗೆ ತರಲಾಗುತ್ತದೆಯಾದರೂ, ಬೇರೆ ಬೇರೆ ಗುಂಪುಗಳ ನಡುವೆ ಸಮತೋಲನ ಸಾಧಿಸುವುದಕ್ಕೆ ಬಿರುಸಿನ ಮಾತುಕತೆಗಳು ಆಗಬೇಕಾಗಬಹುದು. ಹಿಂದಿನ ಕೆಲವು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಬಂಡಾಯ ಅಭ್ಯರ್ಥಿಗಳ ಕಾರಣದಿಂದಾಗಿ ದುರ್ಬಲಗೊಂಡ ಉದಾಹರಣೆಗಳು ಇವೆ.

ಹಲವು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿ ಯಾರು ಎಂಬುದನ್ನು ಮೊದಲಿಗನಾಗಿ ಜೆಡಿಎಸ್ ಘೋಷಿಸಿದೆ. ಹೀಗಿದ್ದರೂ ಮಹತ್ವದ ಕ್ಷೇತ್ರಗಳಿಗೆ ಅಭ್ಯರ್ಥಿ ಯಾರು ಎಂಬುದನ್ನು ಪಕ್ಷವು ಇನ್ನೂ ಘೋಷಿಸಿಲ್ಲ. ಇಲ್ಲಿ ಹಲವು ಸ್ಥಾನಗಳಿಗೆ ದೇವೇಗೌಡರ ಕುಟುಂಬದ ಅಥವಾ ಕುಟುಂಬಕ್ಕೆ ಹತ್ತಿರದ ಸದಸ್ಯರನ್ನು ಅಂತಿಮಗೊಳಿಸುವ ಬಗ್ಗೆ ತೀರ್ಮಾನ ಆಗಬೇಕಿದೆ. ಜೆಡಿಎಸ್ ಪಕ್ಷವು ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸಿನಲ್ಲಿ ಟಿಕೆಟ್ ಸಿಗದಿರುವವರ ಮೇಲೆ ಕಣ್ಣಿಟ್ಟಿರುತ್ತದೆ, ಅವರು ತನ್ನಲ್ಲಿ ಟಿಕೆಟ್ ಕೋರಿ ಬರಲಿ ಎಂದು ಅದು ಬಯಸಬಹುದು. ಯಾರಿಗೂ ಸ್ಪಷ್ಟ ಬಹುಮತ ಇಲ್ಲದ ಫಲಿತಾಂಶ ಬರಲಿ, ಆಗ ತಾನು ಕಿಂಗ್‌ ಮೇಕರ್ ಆಗಬಹುದು ಎಂಬ ನಿರೀಕ್ಷೆಯಲ್ಲಿ ಜೆಡಿಎಸ್ ಇದ್ದಿರಬಹುದು.

ಈ ಬಾರಿಯ ವಿಧಾನಸಭಾ ಚುನಾವಣೆಯು ಬಿಜೆಪಿ ಹಾಗೂ ಕಾಂಗ್ರೆಸ್ಸಿಗೆ ರಾಜಕೀಯವಾಗಿ ಬಹಳ ಮಹತ್ವದ್ದು. ಬಿಜೆಪಿ ಪಾಲಿಗೆ, ವಿಂಧ್ಯ ಪರ್ವತದ ದಕ್ಷಿಣ ದಿಕ್ಕಿನಲ್ಲಿ ತನ್ನ ಪಾಲಿನ ಏಕೈಕ ಕೋಟೆಯನ್ನು ರಕ್ಷಿಸಿಕೊಳ್ಳುವುದು ರಾಜಕೀಯವಾಗಿ ಅತ್ಯಂತ ಮಹತ್ವದ್ದಾಗಿರಲಿದೆ. ಇಲ್ಲಿ ಜಯ ಸಾಧಿಸಿದರೆ ಬಿಜೆಪಿ ಪಾಲಿಗೆ ಅದು ದೇಶದಾದ್ಯಂತ ಹೆಚ್ಚು ಸ್ಪಷ್ಟವಾದ, ಎದ್ದುಕಾಣುವ ರಾಜಕೀಯ ಹೆಜ್ಜೆಗುರುತುಗಳನ್ನು ಮೂಡಿಸಿದಂತೆ ಆಗುತ್ತದೆ. ಅಲ್ಲದೆ, ಭಾರತದ ಆದ್ಯಂತ ಅಧಿಕಾರಯುತ ಅಸ್ತಿತ್ವವನ್ನು ಹೊಂದಿದಂತೆ ಆಗುತ್ತದೆ. ಈ ಚುನಾವಣೆಯಲ್ಲಿ ಸೋಲು ಕಂಡರೆ ಅದು, ದಕ್ಷಿಣ ಭಾರತದಲ್ಲಿ ಮುಂದೆ ನಡೆಯಲಿರುವ ಮಹತ್ವದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಬಿಆರ್‌ಎಸ್‌ ಪಕ್ಷಕ್ಕೆ ಸವಾಲು ಒಡ್ಡುವ ಕಾರ್ಯಕ್ಕೆ ಹಿನ್ನಡೆ ಆಗಲಿದೆ.

ಪಕ್ಷದ ಕೇಂದ್ರ ನಾಯಕತ್ವವು ರಾಜ್ಯದಲ್ಲಿ ತಮ್ಮ ಸಮಯವನ್ನು ಹೆಚ್ಚು ವ್ಯಯಿಸುತ್ತಿದೆ ಹಾಗೂ ಇಲ್ಲಿ ಹೆಚ್ಚು ಶ್ರಮ ಹಾಕುತ್ತಿದೆ. ಇಲ್ಲಿ ಚುನಾವಣೆಯಲ್ಲಿ ಬರುವ ಫಲಿತಾಂಶವು, ಈ ಭಾಗದಲ್ಲಿ ಪಕ್ಷದ ನಾಯಕತ್ವಕ್ಕೆ ಜನರ ಮನವೊಲಿಕೆ ಸಾಮರ್ಥ್ಯ ಎಷ್ಟಿದೆ ಎಂಬುದನ್ನೂ ತೋರಿಸಲಿದೆ.

ಕಾಂಗ್ರೆಸ್ ಪಾಲಿಗೆ ಇದು ರಾಜಕೀಯವಾಗಿ ಉಳಿದುಕೊಳ್ಳುವುದಕ್ಕೆ ಸಂಬಂಧಿಸಿದ ಚುನಾವಣೆ. ಪಕ್ಷದ ರಾಜ್ಯ ಘಟಕವು ಅಭಿಯಾನವನ್ನು ನಿಜಕ್ಕೂ ಸ್ಥಳೀಯವಾಗಿಸಿದೆ. ಎಐಸಿಸಿ ಅಧ್ಯಕ್ಷರು ಕರ್ನಾಟಕದವರು ಎಂಬುದನ್ನು ಪಕ್ಷವು ತನ್ನ ನೆರವಿಗೆ ಬಳಸಿಕೊಳ್ಳಲಿದೆ. ತಳಮಟ್ಟದಲ್ಲಿ ಪಕ್ಷದ ಒಗ್ಗಟ್ಟು ಎಷ್ಟಿರುತ್ತದೆ ಎಂಬುದು ಯಶಸ್ಸಿಗೆ ಕೀಲಿಕೈ ಆಗಿರಲಿದೆ. ಈ ಬಾರಿ ಸೋತರೆ, ರಾಜಕೀಯವಾಗಿ ಮತ್ತೆ ಪುನಶ್ಚೇತನ ಪಡೆಯಲು ಬಹುಕಾಲ ಬೇಕಾಗುತ್ತದೆ. ಜೆಡಿಎಸ್ ಪಕ್ಷವು ತಾನು ಹಳೆ ಮೈಸೂರು ಪ್ರದೇಶದಲ್ಲಿ ಹೊಂದಿರುವ ಹಿಡಿತವನ್ನು ಬಿಜೆಪಿಗೆ ಬಿಟ್ಟುಕೊಡಲು ತಯಾರಿಲ್ಲ. ಜೆಡಿಎಸ್‌ ತನ್ನ ಹಿಡಿತವನ್ನು ಬಿಟ್ಟುಕೊಟ್ಟರೆ ರಾಜ್ಯದಲ್ಲಿ ಎರಡು ಪಕ್ಷಗಳ ನಡುವೆ ಮಾತ್ರ ಸ್ಪರ್ಧೆ ಎಂಬ ಸ್ಥಿತಿ ನಿರ್ಮಾಣವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT