ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಸಾಲೆ: ಸಾಹಿತ್ಯ ಇರುವಲ್ಲಿ ಸರ್ವಾಧಿಕಾರಕ್ಕೇನು ಕೆಲಸ?

ಅಧಿಕಾರಸ್ಥರು ನೈತಿಕಶಕ್ತಿ ಪ್ರದರ್ಶಿಸಬೇಕೇ ವಿನಾ ಕಾನೂನಿನ ಗುರಾಣಿಯನ್ನಲ್ಲ
Last Updated 26 ಮಾರ್ಚ್ 2023, 20:30 IST
ಅಕ್ಷರ ಗಾತ್ರ

ರಾಹುಲ್‌ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿರುವ ಕ್ರಮವನ್ನು ರಾಜಕೀಯ ಪಿತೂರಿ ಮತ್ತು ಸರ್ವಾಧಿಕಾರದ ರೂಪದಲ್ಲಿ ನೋಡಲಾಗುತ್ತಿದೆ. ಈ ಸರ್ವಾಧಿಕಾರಿ ಮನೋಭಾವ ಪ್ರಾದೇಶಿಕ ರೂಪದಲ್ಲೂ ಬಲಗೊಳ್ಳುತ್ತಿರುವುದಕ್ಕೆ ಉದಾಹರಣೆಯ ರೂಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವಿದ್ಯಮಾನಗಳನ್ನು ಗಮನಿಸಬಹುದು. ಅನುಚಿತ ವರ್ತನೆಯ ಆರೋಪದಲ್ಲಿ ಸದಸ್ಯರೊಬ್ಬರನ್ನು ಪರಿಷತ್ತಿನ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ ಹಾಗೂ ಅವರಿಗೆ ಪ್ರಕಟಿಸಲಾಗಿದ್ದ ಪ್ರಶಸ್ತಿಯನ್ನು ಹಿಂಪಡೆಯಲಾಗಿದೆ. ರಾಹುಲ್‌ ಗಾಂಧಿ ಎದುರಿಸುತ್ತಿರುವ ಕಾನೂನು–ರಾಜಕೀಯ ಬಿಕ್ಕಟ್ಟು ಹಾಗೂ ಸಾಹಿತ್ಯ ಪರಿಷತ್ತಿನ ಸದಸ್ಯರ ಅಮಾನತಿನ ಪ್ರಕರಣದ ಸ್ವರೂಪ ಭಿನ್ನವಾಗಿದ್ದರೂ, ಎರಡೂ ಘಟನೆಗಳ ಹಿಂದಿರುವ ಮನೋಭಾವ ಒಂದೇ ಆಗಿದೆ. ಅಧಿಕಾರದಲ್ಲಿ ಇರುವವರಿಗೆ ಅಂತಃಕರಣ ಮತ್ತು ಆತ್ಮಸಾಕ್ಷಿ ಇರಬೇಕೆನ್ನುವುದನ್ನು ಎರಡೂ ಪ್ರಕರಣಗಳು ಬೆಟ್ಟುಮಾಡಿ ಹೇಳುವಂತಿವೆ.

ಸಾಹಿತ್ಯ ‍ಪರಿಷತ್ತಿನ ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿ. ಹಾವೇರಿ ಸಮ್ಮೇಳನದಲ್ಲಿನ ಅವ್ಯವಸ್ಥೆಯನ್ನು
ಪ್ರಶ್ನಿಸಿರುವುದು ಹಾಗೂ ಸಾಹಿತ್ಯ ಪರಿಷತ್ತಿನ ವಿರುದ್ಧ ಒಂದು ನಿಮಿಷದ ಮೌನ ಆಚರಿಸಿರುವುದು ಸದಸ್ಯತ್ವದಿಂದ
ಅಮಾನತುಗೊಂಡಿರುವ ಸದಸ್ಯರ ಮೇಲಿರುವಆರೋಪಗಳು. ಇಂಥ ಪ್ರತಿಭಟನೆಗಳು ಎದುರಾದಾಗ ಅಥವಾ ಸಾಹಿತ್ಯ ಪರಿಷತ್ತಿನ ಸದಸ್ಯರು ಒರಟಾಗಿಯೋ ಅನುಚಿತವಾಗಿಯೋ ನಡೆದುಕೊಂಡಾಗ, ಅಧ್ಯಕ್ಷರು ಮಾಡಬೇಕಾದುದು ತಿಳಿಹೇಳುವ ಕೆಲಸವನ್ನೇ ವಿನಾ ಕಾನೂನು ಕ್ರಮ ಜರುಗಿಸುವ ಮೂಲಕ ತಮಗಿರುವ ಅಧಿಕಾರವನ್ನು ಸಾಬೀತುಪಡಿಸುವುದಲ್ಲ. ನಿಯಮಗಳ ಮೂಲಕವೇ ಪ್ರತಿಯೊಂದನ್ನೂ ನಡೆಸುವುದಾದರೆ, ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೂ ಗುಮಾಸ್ತ ಸ್ಥಾನಕ್ಕೂ ವ್ಯತ್ಯಾಸವಿಲ್ಲದಂತಾಗುತ್ತದೆ.

ಸಾಹಿತ್ಯದ ಪ್ರಮುಖ ಉದ್ದೇಶ ಮನಸ್ಸನ್ನು ತಿಳಿಗೊಳಿಸುವುದು ಹಾಗೂ ವ್ಯಕ್ತಿ–ಸಮಷ್ಟಿ ನೆಲೆಗಟ್ಟಿನಲ್ಲಿಸೌಹಾರ್ದ ಮತ್ತು ಸೌಂದರ್ಯ ಹೆಚ್ಚಿಸುವುದು, ಸಂವಾದಗಳ ಮೂಲಕ ತಿಳಿವು ಅರಳಿಸುವುದು. ಸೌಹಾರ್ದ–ಸೌಂದರ್ಯದ ಆಡುಂಬೊಲವಾಗಬೇಕಿದ್ದ ಸಾಹಿತ್ಯ ಪರಿಷತ್ತು ಸಂಘರ್ಷದ ವೇದಿಕೆಯಾಗಲು ಪರಿಷತ್ತಿನ ಚುಕ್ಕಾಣಿ ಹಿಡಿದವರೇ ಅವಕಾಶ ಕಲ್ಪಿಸುತ್ತಿದ್ದಾರೆ.ಮಾತೃತ್ವದ ಮೂರ್ತರೂಪ ಆಗಿರಬೇಕಿದ್ದ ಅಧ್ಯಕ್ಷರು, ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಸಂವಾದ ಮತ್ತು ಸಂಘರ್ಷ ಸೃಜನಶೀಲವಾಗಿದ್ದಾಗ
ಸಾಹಿತ್ಯದ ವಾತಾವರಣ ರೂಪುಗೊಳ್ಳುತ್ತದೆ.ಸೃಜನಶೀಲತೆಯ ಜಾಗದಲ್ಲಿ ವೈಯಕ್ತಿಕ ಪ್ರತಿಷ್ಠೆ ಕಾಣಿಸಿ
ಕೊಂಡರೆ ಸಾಹಿತ್ಯದ ಮಾತುಗಳ ಬದಲು ಕಾನೂನಿನ ನುಡಿಗಟ್ಟುಗಳು ಕಾಣಿಸಿಕೊಳ್ಳುತ್ತವೆ ಹಾಗೂ ಸಾಹಿತ್ಯದ ಪಡಸಾಲೆಗಳು ಕೋರ್ಟು ಕಚೇರಿಗಳ ರೂಪ ಪಡೆದುಕೊಳ್ಳುತ್ತವೆ. ಕಾನೂನಿನ ಅಗತ್ಯವಿರುವುದು ಅಧಿಕಾರದಲ್ಲಿ ಇಲ್ಲದಿರುವವರಿಗೆ ಹಾಗೂ ಜನಸಾಮಾನ್ಯರಿಗೆ. ಅಧಿಕಾರ ಸ್ಥಾನದಲ್ಲಿರುವವರು ನೈತಿಕತೆಯನ್ನು ತಮ್ಮ ಶಕ್ತಿಯನ್ನಾಗಿ ಪ್ರದರ್ಶಿಸಬೇಕೇ ವಿನಾ ಕಾನೂನಿನ ಗುರಾಣಿಯನ್ನಲ್ಲ.

ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸದಸ್ಯರು ಏರುಧ್ವನಿಯಲ್ಲಿ ಮಾತನಾಡಬಾರದು ಹಾಗೂ ಸಭೆಯ ನಿರ್ಣಯಗಳ ಬಗ್ಗೆ ಮಾಧ್ಯಮ ಹೇಳಿಕೆಗಳನ್ನು ನೀಡಬಾರದು ಎನ್ನುವ ಪರಿಷತ್ತಿನ ಹೊಸ ನಿರ್ಬಂಧಗಳೂ ಸರ್ವಾಧಿಕಾರ ಸಂಸ್ಕೃತಿಗೆ ಅನುಗುಣ
ವಾಗಿವೆಯೇ ಹೊರತು, ‘ಸಂವಾದ ಸಂಸ್ಕೃತಿ’ಗೆ ಪೂರಕವಾಗಿಲ್ಲ. ಏರುದನಿಯಲ್ಲಿ ಮಾತನಾಡಬಾರದು ಎನ್ನುವ ಅಪೇಕ್ಷೆಯಲ್ಲಿ ಪ್ರಶ್ನೆಗಳನ್ನು ಹತ್ತಿಕ್ಕುವ ಧೋರಣೆಯಿದೆ. ಮಾತಿನ ಸ್ವರೂಪ ಮತ್ತು ಧ್ವನಿಗೆ ಕಡಿವಾಣ ಹಾಕಲು ಬಯಸುವುದು ಪರಿಷತ್ತು ಸಾಹಿತ್ಯದಿಂದ ಅಂತರ ಕಾಪಾಡಿಕೊಂಡು ಸರ್ಕಾರಿ ಕಚೇರಿಯ ಸ್ವರೂಪ ಪಡೆಯುತ್ತಿರುವ ಸೂಚನೆಯಂತಿದೆ.

ಒಂದೆಡೆ ಕೇಂದ್ರ ಸಾಹಿತ್ಯ ಪರಿಷತ್ತು ಸಾಹಿತ್ಯದ ಸಂವೇದನೆಗೂ ತನಗೂ ಸಂಬಂಧವಿಲ್ಲ ಎನ್ನುವಂತೆ ನಡೆದುಕೊಳ್ಳುತ್ತಿದ್ದರೆ, ಇನ್ನೊಂದೆಡೆ ಸಾಹಿತ್ಯ ಪರಿಷತ್ತಿನ ಒಳಗಿನಿಂದಲೇ ಪ್ರತಿಭಟನೆಯ ದನಿಗಳು ಸಣ್ಣ ಪ್ರಮಾಣದಲ್ಲಾದರೂ ಕೇಳಿಸುತ್ತಿರುವುದು ಕುತೂಹಲಕರ. ಪರಿಷತ್ತಿನ ಅಸ್ತಿತ್ವ ಉಳಿದುಕೊಂಡಿರುವುದು ಅದು ನಡೆಸುವ ವಾರ್ಷಿಕ ಸಾಹಿತ್ಯ ಸಮ್ಮೇಳನಗಳಲ್ಲಷ್ಟೆ. ಇತ್ತೀಚಿನ ವರ್ಷಗಳಲ್ಲಿ ಪ್ರತೀ ಸಮ್ಮೇಳನದ ಸಮಯದಲ್ಲೂ ಅವುಗಳ ಪ್ರಸ್ತುತತೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆ ಚರ್ಚೆ ಹಾವೇರಿ ಸಮ್ಮೇಳನದಲ್ಲಿ ಮತ್ತಷ್ಟು ತೀವ್ರಗೊಂಡು, ಪ್ರಜಾಸತ್ತಾತ್ಮಕಸ್ವರೂಪವೂ ಸಮ್ಮೇಳನಕ್ಕಿಲ್ಲ ಎನ್ನುವ ಆರೋಪವೂ ಕೇಳಿಬಂತು. ರಾಜಕಾರಣದಲ್ಲಿ ಧರ್ಮವನ್ನು ಬೆರೆಸಲಾಗುತ್ತಿರುವ ಸೋಂಕು ಸಾಹಿತ್ಯ ಸಮ್ಮೇಳನಕ್ಕೂ ತಗುಲಿರುವ ಬಗ್ಗೆ ಆತಂಕ ವ್ಯಕ್ತವಾಯಿತು. ನಿರ್ದಿಷ್ಟ ಸಮುದಾಯವನ್ನು ಹೊರಗಿಟ್ಟುದನ್ನು ವಿರೋಧಿಸಿ ಬೆಂಗಳೂರಿನಲ್ಲಿ ‘ಜನ ಸಾಹಿತ್ಯ ಸಮ್ಮೇಳನ’ ಎನ್ನುವ ಸಮಾವೇಶವೂ ನಡೆಯಿತು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಕಣ್ಣಿಗೆ ‘ಜನ ಸಾಹಿತ್ಯ ಸಮ್ಮೇಳನ’ ಅತೃಪ್ತರ ಚಟುವಟಿಕೆಯಂತೆ ಕಂಡಿದೆ. ಆದರೆ, ಇಂಥ ಅಲ್ಪಸಂಖ್ಯಾತ ಅತೃಪ್ತರಿಂದಲೇ ಪ್ರಜಾಪ್ರಭುತ್ವದ ಮೌಲ್ಯಗಳು ಇಂದಿಗೂ ಜೀವಂತವಾಗಿರುವುದು.

ಸಾಹಿತ್ಯ ಪರಿಷತ್ತಿನಾಚೆಗೆ ಪರ್ಯಾಯಗಳ ಹುಡುಕಾಟ ನಡೆಯುತ್ತಿರುವುದು ಒಂದೆಡೆಯಾದರೆ, ಪರಿಷತ್ತಿನ ಚೌಕಟ್ಟಿನೊಳಗೇ ಪ್ರತಿಭಟನೆಯ ಧ್ವನಿ ಹಾಗೂ ಪರ್ಯಾಯಗಳ ಹುಡುಕಾಟದ ಅಪೇಕ್ಷೆ ವ್ಯಕ್ತವಾಗುತ್ತಿರುವುದು ಗಮನಾರ್ಹ. ಆಂತರಿಕ ಪ್ರತಿಭಟನೆ ಮತ್ತು ವಿಮರ್ಶೆಗೆ ಉದಾಹರಣೆಗಳಾಗಿ ಜಿಲ್ಲಾ‌ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಕೆಲವು ಸಾಹಿತ್ಯ ಸಮ್ಮೇಳನ
ಗಳನ್ನು ಗಮನಿಸಬಹುದು. ಹಿಂದಿನ ಮೂರು ತಿಂಗಳ ಅವಧಿಯಲ್ಲಿ ನಡೆದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಸಾಹಿತ್ಯ ಸಮ್ಮೇಳನ ಹಾಗೂ ಕೋಲಾರ, ಚಿಕ್ಕಬಳ್ಳಾಪುರ,ಬಳ್ಳಾರಿ, ಬೆಂಗಳೂರು ನಗರ ಜಿಲ್ಲೆಗಳ ಸಾಹಿತ್ಯ ಸಮ್ಮೇಳನಗಳು ಗುಣಮಟ್ಟದ ದೃಷ್ಟಿಯಿಂದ ಕೇಂದ್ರ ಕಸಾಪದ ಸಮ್ಮೇಳನದ ಗೋಷ್ಠಿಗಳನ್ನು ಮೀರಿಸುವಂತಿದ್ದವು. ಬರಗೂರಿನಲ್ಲಿ ನಡೆದ‌ ಹೋಬಳಿ ಮಟ್ಟದ ಸಮ್ಮೇಳನದ‌ ಗೋಷ್ಠಿಗಳೂ ಮೌಲಿಕವಾಗಿದ್ದವು. ಸ್ವರೂಪದಲ್ಲಿ ಪುಟ್ಟದಾದ ಸಮ್ಮೇಳನವೊಂದು ನಾಡಿನ ವಿವಿಧ ಭಾಗಗಳ ವಿಷಯತಜ್ಞರನ್ನು ಒಳಗೊಳ್ಳುವ ಪ್ರಯತ್ನ ನಡೆಸಿದ್ದು ಕುತೂಹಲಕರವಾಗಿತ್ತು.

ಕೇಂದ್ರ ಸಾಹಿತ್ಯ ಪರಿಷತ್ತು ಪ್ರಜಾಪ್ರಭುತ್ವ ಮೌಲ್ಯಗಳಿಂದ ದೂರ ಸರಿಯುತ್ತಿರುವುದರ ಬಗ್ಗೆ ಈ ಸಮ್ಮೇಳನಗಳಲ್ಲಿ ಟೀಕೆ ಟಿಪ್ಪಣಿಗಳಿದ್ದವು. ಬೆಂಗಳೂರು ನಗರ ಜಿಲ್ಲೆಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಎಚ್.ಎಸ್.ಶ್ರೀಮತಿ ಅವರು, ‘ಸದಸ್ಯತ್ವ ಅಮಾನತುಗೊಳಿಸಿ ಪ್ರಶಸ್ತಿ ವಾಪಸ್ ಪಡೆದಿರುವುದು ಪಿತೃಪ್ರಧಾನ ವ್ಯವಸ್ಥೆಯ ಮನಃಸ್ಥಿತಿ’ ಎಂದು ಸಮ್ಮೇಳನದ ವೇದಿಕೆಯಲ್ಲಿಯೇ ಹೇಳಿರುವುದು ಗಮನಾರ್ಹ. ಪರಿಷತ್ತಿನ‌ ವೇದಿಕೆಗಳಿಂದಲೇ ಹುಟ್ಟುತ್ತಿರುವ ಇಂಥ ವಿಮರ್ಶೆ, ಪ್ರತಿಭಟನೆಯ ದನಿಗಳಿಗೆ ವಿಶೇಷ ಮಹತ್ವವಿದೆ.

ಕಸಾಪ ವಿರುದ್ಧ ಪ್ರತಿಭಟನೆಯ ರೂಪದಲ್ಲಿ ಸದಸ್ಯರೊಬ್ಬರು ಮೌನಾಚರಣೆ ನಡೆಸಿದ್ದು ಸರಿಯಲ್ಲ ಎಂದು ಪರಿಷತ್ತಿನ ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದ್ದಾರೆ. ಅವರ ಬೇಸರ ಸರಿಯಾಗಿಯೇ ಇದೆ. ಆದರೆ, ಪರಿಷತ್ತಿನ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಸಾಹಿತ್ಯದ ಅಂತಃಕರಣದ ಬಗ್ಗೆ ಮತ್ತು ಸಾಹಿತ್ಯ ಪರಿಷತ್ತಿನ ಘನ ಪರಂಪರೆಯ ಬಗ್ಗೆ ನಂಬಿಕೆಯುಳ್ಳವರ ಕಣ್ಣಿಗೆ ಪರಿಷತ್ತಿನ ಚುಕ್ಕಾಣಿ ಹಿಡಿದವರೇ ಮೌನಾಚರಣೆಯ ಮತ್ತೊಂದು ತುದಿಯಲ್ಲಿ ನಿಂತಿರುವಂತೆ ಕಾಣಿಸುತ್ತಿದೆ.

ಸರ್ವಾಧಿಕಾರಿ ಮನೋಭಾವ ಹಾಗೂ ಸಾಹಿತ್ಯ ಜೊತೆಜೊತೆಯಾಗಿ ನಡೆಯುವುದು ಸಾಧ್ಯವಿಲ್ಲ. ಕನ್ನಡ ಸಾಹಿತ್ಯ ಪರಂಪರೆಯಂತೂ ಸರ್ವಾಧಿಕಾರಿ ಧೋರಣೆಯನ್ನು ಸತತವಾಗಿ ವಿರೋಧಿಸಿಕೊಂಡೇ ಬಂದಿದೆ. ಸಾಹಿತ್ಯದ ಪೋಷಾಕಿನಲ್ಲಿ ನಡೆಯುತ್ತಿರುವ ಅಸಾಹಿತ್ಯಕ ಚಟುವಟಿಕೆಗಳನ್ನು ಹೊರತುಪಡಿಸಿದರೆ,ಸಮಕಾಲೀನ ಕನ್ನಡ ಸಾಹಿತ್ಯವೂ ನಿರಂಕುಶತೆಯ ವಿರೋಧಿಯಾಗಿಯೇ ಉಳಿದಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ವಿದ್ಯಮಾನಗಳಲ್ಲಿಕಾಣಿಸುತ್ತಿರುವ ಸರ್ವಾಧಿಕಾರಿ ಧೋರಣೆಯನ್ನು ಸಮಕಾಲೀನ ರಾಜಕೀಯ ವಿದ್ಯಮಾನಗಳ ಚೌಕಟ್ಟಿನಲ್ಲಿ ನೋಡಬೇಕು. ದೇಶವನ್ನು ಮುನ್ನಡೆಸುವ ಅಧಿಕಾರ ಸೂತ್ರಗಳನ್ನು ಹಿಡಿದವರೇ ಭಿನ್ನಾಭಿಪ್ರಾಯಗಳ ಬಗ್ಗೆ ಅಸಹನೆ ಮತ್ತು ಅಳುಕಿನಿಂದ ನಡೆದುಕೊಳ್ಳುತ್ತಿದ್ದಾರೆ. ಧರ್ಮವನ್ನು ರಾಜಕಾರಣದ ಭಾಗವಾಗಿಸಿಕೊಂಡವರು
ಧರ್ಮಸೂಕ್ಷ್ಮವನ್ನು ಕಾಲಡಿಗೆ ಹಾಕಿಕೊಂಡಿದ್ದಾರೆ. ಅಧಿಕಾರಸ್ಥರ ಈ ಕಿಸುರುಗಣ್ಣಿನ ಹುಣ್ಣಿನ ಸೋಂಕು ಪ್ರಾದೇಶಿಕವಾಗಿ ಕಾಣಿಸದಿದ್ದೀತೆ?

ಸಾಹಿತ್ಯ ಪರಿಷತ್ತಿಗೆ ಸಂಬಂಧಿಸಿದಂತೆ ಟೀಕೆ ಟಿಪ್ಪಣಿಗಳು ಅದರೊಳಗಿನಿಂದಲೇ ಕೇಳಿಬರುತ್ತಿವೆ. ಅಷ್ಟರಮಟ್ಟಿಗೆ ಸಾಹಿತ್ಯ ಪರಿಷತ್ತಿನ ಆರೋಗ್ಯ ಇನ್ನೂ ಪೂರ್ಣ ಹದಗೆಟ್ಟಿಲ್ಲ ಎಂದು ಸಹೃದಯರು ಸಮಾಧಾನ ಹೊಂದಬಹುದು. ಆದರೆ, ಇಂಥ ಸಮಾಧಾನವನ್ನು ರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಹೇಳುವುದು ಸಾಧ್ಯವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT