‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ’ (ಮನರೇಗಾ) ಜಾಗದಲ್ಲಿ ‘ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಆಜೀವಿಕ ಮಿಷನ್’ (ಗ್ರಾಮೀಣ್) (ವಿಬಿ ಜಿ ರಾಮ್) ಜಾರಿಗೆ ತರಲು ಹೊರಟಿರುವ ಕೇಂದ್ರ ಸರ್ಕಾರದ ನಿರ್ಧಾರದ ನೆಪದಲ್ಲಾದರೂ ನಮ್ಮ ರಾಜಕಾರಣಿಗಳಿಗೆ ಗಾಂಧೀಜಿಯ ನೆನಪಾಗಿರುವುದು ಆಶಾದಾಯಕ ಸಂಗತಿ. ಯೋಜನೆಯನ್ನು ವಿರೋಧಿಸುವವರು ಹಾಗೂ ಸಮರ್ಥಿಸಿಕೊಳ್ಳುವವರು, ಇಬ್ಬರಿಗೂ ಗಾಂಧಿಯೇ ಬೇಕು! ಭಾರತದ ರಾಜಕಾರಣ ಬಾಪುವಿನಿಂದ ಎಷ್ಟು ದೂರ ಓಡಿದರೂ, ಅದು ಮತ್ತೆ ಯಾವುದೋ ಬಿಂದುವಿನಲ್ಲಿ ಗಾಂಧೀಜಿಯನ್ನು ಸಮೀಪಿಸುತ್ತಿರುತ್ತದೆ. ಗಾಂಧಿ ಮತ್ತು ಅಂಬೇಡ್ಕರ್ ದೇಶದ ರಾಜಕಾರಣಕ್ಕೆ ಗತಿಯೂ ಹೌದು, ಮತಿಯೂ ಹೌದು. ಅನ್ಯಥಾ ಶರಣಂ ನಾಸ್ತಿ.

ಗಾಂಧೀಜಿಯನ್ನು ಕೇಂದ್ರವಾಗಿಟ್ಟುಕೊಂಡು ಕರ್ನಾಟಕದಲ್ಲಿ ‘ಮನರೇಗಾ’ ರಾಜಕಾರಣ ಪಡೆದುಕೊಂಡ ಸ್ವರೂಪ ಕುತೂಹಲಕರವಾದುದು. ಯೋಜನೆಯನ್ನು ಬದಲಿಸಲು ಹೊರಟ ಬಿಜೆಪಿಯನ್ನು ಟೀಕಿಸಲು, ಕಾಂಗ್ರೆಸ್ ಜಾಹೀರಾತಿನಲ್ಲಿ ಗಾಂಧೀಜಿ ಬಳಕೆಯಾದರು. ಇದಕ್ಕೆ ಪ್ರತಿಯಾಗಿ ಬಿಜೆಪಿ, ಕಾಂಗ್ರೆಸ್ ನಾಯಕರನ್ನು ಹೊಡೆಯಲು ಗಾಂಧೀಜಿ ತಮ್ಮ ಕೋಲು ಎತ್ತಿರುವಂತೆ ಜಾಹೀರಾತು ಪ್ರಕಟಿಸಿತು. ಮಹಾತ್ಮನ ಕೈಯ ಕೋಲಿಗೆ ಹಿಂಸೆ ಆರೋಪಿಸಿತು. ಈ ಜಾಹೀರಾತು ಗಾಂಧೀಜಿ ಅಹಿಂಸಾತತ್ತ್ವಕ್ಕೆ ವಿರುದ್ಧವಾದುದು; ಹಿಂಸೆಯ ಬಿಂಬವಾಗಿ ಬಳಸಿಕೊಳ್ಳುವ ಮೂಲಕ ಮಹಾತ್ಮನಿಗೆ ಅವಮಾನ ಎಸಗಲಾಗಿದೆ ಎಂದು ಅನೇಕರು ಟೀಕಿಸಿದರು. ಈ ಟೀಕೆ ಸರಿಯಾದುದೇ. ಆದರೆ, ಈ ಅವಿವೇಕವನ್ನು ಟೀಕಿಸುವ ಮುನ್ನ, ರಾಜಕೀಯ ಟೀಕೆಯ ಜಾಹೀರಾತಿಗೆ ಗಾಂಧೀಜಿಯನ್ನು ಯಾರಾದರೂ ಬಳಸಿಕೊಳ್ಳಬಹುದೇ ಎನ್ನುವ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕು. ಮಾತುಮಾತಿಗೂ ಗಾಂಧೀಜಿಯ ಹಿಂದೆ ಆಸರೆ ಪಡೆಯುವ ಕಾಂಗ್ರೆಸ್, ರಾಷ್ಟ್ರಪಿತನನ್ನೇ ರಾಜಕೀಯ ಜಾಹೀರಾತಿನ ಭಾಗವಾಗಿಸಿದ್ದು ಅನೈತಿಕವಲ್ಲದೆ ಬೇರೇನಲ್ಲ. ಗಾಂಧಿ ತಾತ್ತ್ವಿಕತೆಯನ್ನು ಅವಮಾನಿಸಲು ಬಿಜೆಪಿಗೆ ಅವಕಾಶ ಕಲ್ಪಿಸಿದ್ದೇ ಕಾಂಗ್ರೆಸ್.

ಗಾಂಧೀಜಿಯ ಊರುಗೋಲನ್ನು ಲಾಠಿಯಂತೆ ಚಿತ್ರಿಸಿರುವ ಬಿಜೆಪಿ ನಾಯಕರ ಕೃತ್ಯ ಕೆಲವರಿಗೆ ಅಪರಾಧವಾಗಿ ಕಂಡಿದೆ. ಇದನ್ನು ಇನ್ನೊಂದು ರೀತಿಯಲ್ಲಿ ನೋಡಬಹುದು. ಕೋಲಿರುವುದೇ ಹೊಡೆಯಲು, ಬೆದರಿಸಲು ಎಂದು ನಂಬಿರುವವರಿಗೆ ಗಾಂಧೀಜಿಯ ಕೈಯ ಕೋಲು ಭಿನ್ನವಾಗಿ ಕಾಣುವುದು ಸಾಧ್ಯವಿಲ್ಲ. ಕೋಲು ಅಹಿಂಸೆಯ ಸಂಕೇತವೂ ಆಗಬಹುದೆನ್ನುವ ನೀತಿಪಾಠ ಅವರು ಕಲಿತ ಶಾಲೆಯಲ್ಲಿ, ಶಾಖೆಯಲ್ಲಿ ಇರಲಿಕ್ಕಿಲ್ಲ. ಹಾಗಾಗಿ ಮಹಾತ್ಮನ ಕೋಲು ಅವರಿಗೆ ಲಾಠಿಯಂತೆ ಕಂಡಿರುವುದರಲ್ಲಿ ಅಸಹಜವೇನಲ್ಲ. ‘ಬಡಿ’ಯುವುದಷ್ಟೇ ಬಡಿಗೆಯ ಕೆಲಸ ಎಂದು ನಂಬಿದವರಿಗೆ ಕೋಲು ಒಂದು ಆಯುಧ. ಗಾಂಧೀಜಿ ಊರುಗೋಲನ್ನು ಲಾಠಿ ಆಗಿಸಿರುವವರು ಗುರ್ತಿಸಿಕೊಂಡಿರುವ ಪಕ್ಷ ಹಾಗೂ ಪಂಥ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಿರಲಿಲ್ಲ. ಇವರ ದೇಶಪ್ರೇಮ ಹಾಗೂ ರಾಷ್ಟ್ರೀಯತೆಯ ಪರಿಕಲ್ಪನೆ ಸ್ವಾತಂತ್ರ್ಯಾನಂತರದ್ದು; ಬಿಜೆಪಿಯ ತಾರಾವರ್ಚಸ್ಸಿನ ನಾಯಕಿ ಕಂಗನಾ ರನಾವತ್ ಪ್ರಕಾರ ದೇಶಕ್ಕೆ ಸ್ವಾತಂತ್ರ್ಯ ದೊರಕಿದ್ದೇ 2014ರಲ್ಲಿ. ಇನ್ನು ಬಿಜೆಪಿಯ ತಾತ್ತ್ವಿಕತೆಯನ್ನು ಅಮ್ಮನಂತೆ ಪೋಷಿಸುವ ಸಂಘ ನೂರು ವರ್ಷಗಳನ್ನು ಕಂಡಿದೆಯಾದರೂ, ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಅದರ ಲಾಠಿ ಮೌನವಾಗಿತ್ತು. ಸ್ವಾತಂತ್ರ್ಯದ ಸ್ಮೃತಿಗಳಿಗೇ ಬೆನ್ನುಹಾಕಿದ ಸಂಘಟನೆಗೆ ಅಹಿಂಸೆ ಮತ್ತು ಸತ್ಯಾಗ್ರಹದ ಹಂಗು ಇರುತ್ತದೆಂದು ನಿರೀಕ್ಷಿಸಬಾರದು. ಇಂಥ ಪರಂಪರೆಯೊಂದಿಗೆ ಗುರ್ತಿಸಿಕೊಳ್ಳುವವರಿಗೆ, ಒಂದಾನೊಂದು ಕಾಲದ ಸ್ವಾತಂತ್ರ್ಯ ಚಳವಳಿಯ ಅಂತರ್ಜಲವಾದ ಅಹಿಂಸೆ, ಸತ್ಯಾಗ್ರಹಗಳ ಬಗ್ಗೆ ಹೇಗಾದರೂ ತಿಳಿಯಬೇಕು?

ಗಾಂಧೀಜಿಯ ಕೋಲು ಆಸರೆಗೆ ಒದಗುವಂತಹದ್ದು; ಮನುಷ್ಯ ಎಡವದಿರುವಂತೆ ಮಾಡುವ ಊರುಗೋಲು, ಸಂಜೆ ಬೆಳಕಿನ ಹಿರಿಯರ ಪಾಲಿನ ಮೂರನೇ ಕಾಲು. ಆತ್ಮವಿಶ್ವಾಸ, ಸ್ವಾವಲಂಬನೆಯ ಸಂಕೇತ. ಅರಿತೋ ಅರಿಯದೆಯೋ ಬಿಜೆಪಿ ನಾಯಕರು ಗಾಂಧೀಜಿಯ ಊರುಗೋಲಿಗೆ ಕೈಹಾಕಿದ್ದಾರೆ. ರಾಮನ ಸ್ಪರ್ಶದಿಂದ ಕಲ್ಲು ಕರಗಿ ಹೆಣ್ಣಾದಂತೆ, ಗಾಂಧೀಜಿ ಕೋಲಿನ ಸ್ಪರ್ಶದಿಂದ ಬಿಜೆಪಿ ನಾಯಕರಿಗೆ ಶಾಪವಿಮೋಚನೆಯೇನಾದರೂ ಆಗಬಹುದೆ? ಆದೀತೆಂದು ನಿರೀಕ್ಷಿಸುವುದು ಕಷ್ಟ. ಏಕೆಂದರೆ, ಒಂದೂವರೆ ದಶಕದ ಹಿಂದೆ ಸ್ವಾತಂತ್ರ್ಯ ಪಡೆದ ಇವರು ಗಾಂಧೀಜಿಯ ಕೋಲನ್ನಷ್ಟೇ ಮುಟ್ಟಿದವರಲ್ಲ; ಮಹಾತ್ಮನ ಪಾಲಿನ ಪ್ರೇಮಮೂರ್ತಿಯಾದ ರಾಮನ ಧನುಸ್ಸಿಗೂ ಕೈಹಾಕಿದವರು. ಸೀತೆ ಲಕ್ಷ್ಮಣ ಹನುಮರನ್ನು ಗ್ರೂಪ್ ಫೋಟೊದಿಂದ ಹೊರಕಳುಹಿಸಿ, ರಾಮನನ್ನಷ್ಟೇ ಉಳಿಸಿಕೊಂಡು, ಅವನ ಕೈಗೆ ಬಿಲ್ಲು ಕೊಟ್ಟಿದ್ದಾರೆ. ಇವರ ಪಾಲಿಗೆ, ರಾಮನ ಬಿಲ್ಲಾದರೂ ಅಷ್ಟೇ, ಗಾಂಧೀಜಿಯ ಕೋಲಾದರೂ ಅಷ್ಟೇ: ಅವುಗಳಿರುವುದೇ ದಂಡಿಸಲಿಕ್ಕೆ. ರಾಮನ ಧನುಸ್ಸು ಮುಟ್ಟಿದಾಗ ಆಗದ ಶಾಪವಿಮೋಚನೆ ಮಹಾತ್ಮನ ಊರುಗೋಲಿನಿಂದ ಆದೀತೆ?

ಗಾಂಧೀಜಿ ಊರುಗೋಲಿನ ಬಗ್ಗೆ ನಡೆದ ಚರ್ಚೆಯ ಸಂದರ್ಭದಲ್ಲಿ, ಆ ಕೋಲಿಗೂ ಕರ್ನಾಟಕಕ್ಕೂ ಇರುವ ನಂಟು ಕೆಲವರಿಗೆ ನೆನಪಾಯಿತು. ಆ ನೆನಪು, ಗಾಂಧೀಜಿ ಕೈಯಲ್ಲಿನ ಕೋಲಿಗೂ ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರದ ಗೋವಿಂದ ಪೈ ಅವರಿಗೂ ಇರುವ ನಂಟಿಗೆ ಸಂಬಂಧಿಸಿದ್ದು. ಕಾಕಾ ಕಾಲೇಲ್ಕರ್ ಎನ್ನುವ ವಿದ್ವಾಂಸ ಹಾಗೂ ಸ್ವಾತಂತ್ರ್ಯ ಚಳವಳಿಕಾರ ಪೈ ಅವರ ಆಪ್ತಮಿತ್ರ. ಗೋವಿಂದ ಪೈ ಕುಟುಂಬದ ಹಿರಿಯರು ಬಳಸುತ್ತಿದ್ದ ಊರುಗೋಲು ಕಾಲೇಲ್ಕರ್ ಅವರಿಗೆ ಉಡುಗೊರೆ ರೂಪದಲ್ಲಿ ದೊರೆತಿದೆ. 1930ರಲ್ಲಿ ಗಾಂಧೀಜಿ ‘ದಂಡಿ ಯಾತ್ರೆ’ ಕೈಗೊಂಡಾಗ, ಕಾಲೇಲ್ಕರ್ ಅವರು ತಮ್ಮ ಬಳಿಯಿದ್ದ ಕೋಲನ್ನು ಮಹಾತ್ಮನಿಗೆ ನೀಡಿದರಂತೆ. 24 ದಿನಗಳ ಕಾಲ ನಡೆದ ಸುಮಾರು 390 ಕಿ.ಮೀ.ಗಳ ಕಾಲ್ನಡಿಗೆಯ ಆ ಯಾತ್ರೆಯಲ್ಲಿ ಗಾಂಧೀಜಿಗೆ ಆಸರೆಯಾದುದು ಅದೇ ಕೋಲು. ಮಹಾತ್ಮನ ಮೂಲಕ ಆ ಕೋಲಿಗೂ ವಿಶ್ವಪ್ರಸಿದ್ಧಿ ದೊರೆಯಿತು. ಹೀಗೆ, ಮಹಾತ್ಮನ ಕೈಯಲ್ಲಿನ ಕರ್ನಾಟಕದ ನಂಟಿನ ಕೋಲಿಗೆ ಸಂಬಂಧಿಸಿದಂತೆ ವರ್ತಮಾನದಲ್ಲಿನ ಜಗ್ಗಾಟ ಕರ್ನಾಟಕದಲ್ಲೇ ನಡೆದಿದೆ!

ಗೋವಿಂದ ಪೈ ಅವರಿಗೆ ಗಾಂಧೀಜಿಯ ಬಗೆಗೆ ಅಸದಳ ಪ್ರೇಮ, ಗೌರವ. ಗಾಂಧಿ ಹತ್ಯೆಯಾದಾಗ, ‘ಇನ್ನಿನಿಸು ನೀ, ಮಹಾತ್ಮಾ, ಬದುಕಬೇಕಿತ್ತು!’ ಎಂದವರು ಕಾವ್ಯಕಂಬನಿ ಮಿಡಿದಿದ್ದರು. ‘ಮಹಾತ್ಮನ ಆತ್ಮಕ್ಕೆ’ ಎನ್ನುವ ಮತ್ತೊಂದು ಕವಿತೆಯಲ್ಲಿ, ‘ನಿನ್ನೊಲವೂರದೆಡೆ ಜಗದೊಳಿಲ್ಲ’ ಎನ್ನುತ್ತಾರೆ. ಮರಣವೃಕ್ಷದೊಳಗಣ ಅಮೃತಫಲದ ರೂಪದಲ್ಲಿ ಕಂಡ ‘ಶಿಲುಬೆಗೇರಿದ ಕ್ರಿಸ್ತ’ನ ಅಂಶವನ್ನು ಕವಿ ಬಾಪುವಿನಲ್ಲೂ ಕಾಣುತ್ತಾರೆ. ‘ಕೃಷ್ಣ, ಮಾವೀರ, ಗೌತಮ, ಯೇಸುವೀ ನಾಲ್ವ/ ರವತಾರಿಗಳ ಧಾತುವಿಂದಾಯ್ದು ನಿನ್ನ/ ಸೃಜಿಸಿದಾ ಪ್ರಕೃತಿ ಸೃಜಿಸುವಳೆ ನಿನ್ನನು ಹೋಲ್ವ/ ನೀ ಭಾರತದೊಳೀ ಕ್ಷಿತಿಯೊಳನ್ಯನನ್ನ?’ ಎನ್ನುವ ಮೂಲಕ ಗಾಂಧಿಗೆ ಪರ್ಯಾಯವಿಲ್ಲದಿರುವುದನ್ನು ಸೂಚಿಸುತ್ತಾರೆ. ಬಾಪುವಿನಲ್ಲಿ ಗೋವಿಂದ ಪೈಗಳು ಕಾಣುವ ಅವತಾರಿಗಳ ಪಟ್ಟಿಯಲ್ಲಿ ಮಹಾತ್ಮನಿಗೆ ಅತಿ ಪ್ರಿಯನಾದ ರಾಮನಿಲ್ಲ! ಹಾಗೆಂದು ಕವಿ ರಾಮನನ್ನು ಬಾಪುವಿನಿಂದ ಬೇರ್ಪಡಿಸಿಲ್ಲ; ಆಧಾರವಾಗಿಸಿದ್ದಾರೆ. ‘ಸತ್ಯವೆ ಗಡಾ ನಿನ್ನ ಗುರಿ, ಪ್ರೀತಿ ಗಡ ದಾರಿ’ ಎನ್ನುವ ಕವಿ, ಪದ್ಯದಲ್ಲಿ ಊರುಗೋಲಿನ ಬಗ್ಗೆಯೂ ಮಾತನಾಡುತ್ತಾರೆ: ‘ರಾಮನಾಮವೆ ನಿನ್ನ ನಡೆವೂರುಗೋಲು.’ ನಮ್ಮ ನೋಟಕ್ಕೆ ಗಾಂಧೀಜಿಯ ಕೈಯಲ್ಲಿನ ಊರುಗೋಲು ಕಾಣುವುದು. ಆ ಕೋಲನ್ನು ಕೊಟ್ಟ ಕವಿಗೆ, ಮಹಾತ್ಮನ ವ್ಯಕ್ತಿತ್ವಕ್ಕೆ ಆಸರೆಯಾದ ಊರುಗೋಲು ಕಾಣಿಸುವುದು.

ಸ್ವತಂತ್ರ ಭಾರತದ ನಾಂದಿವರ್ಷವಾಗಿ 2014ನ್ನು ಪ್ರತಿಪಾದಿಸುವ ಭಾರತಪುತ್ರರ ಸ್ಥಿತಿ ನೋಡಿ: ಅವರಿಗೆ ಸತ್ಯ, ಅಹಿಂಸೆ ಸವಕಲು ಪದಗಳು. ಅವರಿಗೆ ಪೈಸೆ ತಿಳಿದಿದೆಯೇ ಹೊರತು, ಕವಿ ಪೈ ಅಲ್ಲ. ರಾಮನಾಮ ಊರುಗೋಲೂ ಆಗಬಲ್ಲದು ಎನ್ನುವುದನ್ನು ಅವರು ಕಲ್ಪಿಸಿಕೊಳ್ಳಲಾರರು. ಹಾಗಾಗಿ, ಅವರು ಗಾಂಧಿ ಎನ್ನುವ ರೂಪಕಕ್ಕೆ, ಮಹಾತ್ಮನ ತಾತ್ತ್ವಿಕತೆಗೆ ಅಪಚಾರ ಎಸಗಿದಲ್ಲಿ ಅದನ್ನು ಅಜ್ಞಾನ ಎಂದು ಭಾವಿಸಬೇಕೇ ಹೊರತು, ಅಪರಾಧ ಎಂದಲ್ಲ. ಆದರೆ, ಈ ತತ್ತ್ವ ಕಾಂಗ್ರೆಸ್ಗೆ ಹೊಂದುವುದಿಲ್ಲ. ಗಾಂಧೀಜಿ ಬೆಳೆಸಿದ ಪಕ್ಷದಲ್ಲಿ ಗುರ್ತಿಸಿಕೊಂಡವರು, ಸ್ವಾತಂತ್ರ್ಯ ಚಳವಳಿಯ ಯಶಸ್ಸಿನ ವಾರಸುದಾರರು, ಗಾಂಧೀಜಿ ತತ್ತ್ವಗಳ ಹಕ್ಕುದಾರರೂ ಹೌದು. ಇಂಥವರು ಗಾಂಧಿಯನ್ನು ಜಾಹೀರಾತು ಸರಕಾಗಿಸುವುದು ಅಕ್ಷಮ್ಯ.

ಕಾಂಗ್ರೆಸ್ನ ಗಾಂಧಿಪ್ರೇಮಕ್ಕೀಗ ಅಗ್ನಿಪರೀಕ್ಷೆಯ ಸಮಯ. ಅವರ ಗಾಂಧಿಪ್ರೇಮ ನೈಜವಾಗಿದ್ದಲ್ಲಿ, ಅವರೀಗ ಕನಿಷ್ಠ ಒಂದು ದಿನದ ಮಟ್ಟಿಗಾದರೂ ಉಪವಾಸ ಸತ್ಯಾಗ್ರಹ ಕೈಗೊಳ್ಳಬೇಕು. ಆ ಉಪವಾಸ, ಮಹಾತ್ಮನನ್ನು ಈ ಸ್ಥಿತಿಗೆ ತಂದಿರುವಲ್ಲಿ ತಮ್ಮ ಪಾಲೂ ಇರುವುದನ್ನು ಒಪ್ಪಿಕೊಂಡು ಮಾಡಿಕೊಳ್ಳುವ ಪ್ರಾಯಶ್ಚಿತ್ತ ಆಗಿರುವಂತೆ, ಗಾಂಧೀಜಿಯ ಅಹಿಂಸಾ ರೂಪಕಕ್ಕೆ ಧಕ್ಕೆ ತಂದವರ ವಿರುದ್ಧದ ಸಾತ್ವಿಕ ಪ್ರತಿಭಟನೆಯೂ ಆಗಬಲ್ಲದು. ಗಾಂಧೀಜಿಯ ಕೋಲಿನಿಂದ ಶಾಪವಿಮೋಚನೆ ಆಗಬೇಕಾದ ತುರ್ತು ಬಿಜೆಪಿಗಿಂತಲೂ ಕಾಂಗ್ರೆಸ್ಗೇ ಹೆಚ್ಚಾಗಿದೆ. ಗಾಂಧೀಜಿಗೆ ರಾಮನಾಮ ಊರುಗೋಲಾದಂತೆ, ಬಹುತ್ವ ಭಾರತವನ್ನು ಹಂಬಲಿಸುವವರಿಗೆ ಗಾಂಧಿಯ ತಾತ್ತ್ವಿಕತೆಯೇ ಊರುಗೋಲಾಗಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.