ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಸಾಲೆ: ರಾಮ ಮಂದಿರ– ಕಾಲ ನಮ್ಮ ಕೈಗಿತ್ತಿರುವ ಮಂದಿರಗನ್ನಡಿ

ದೇಶದ ಒಗ್ಗಟ್ಟು ಮತ್ತು ಒಡಕು ಎರಡನ್ನೂ ಏಕಕಾಲಕ್ಕೆ ಪ್ರತಿಫಲಿಸುತ್ತಿದೆ ‘ಮಂದಿರಗನ್ನಡಿ’
Published 12 ಜನವರಿ 2024, 19:48 IST
Last Updated 12 ಜನವರಿ 2024, 19:48 IST
ಅಕ್ಷರ ಗಾತ್ರ

ಎಲ್ಲ ಮಹತ್ವದ ವಾಸ್ತುಶಿಲ್ಪಗಳು ತಮ್ಮ ಕಾಲದ ಪ್ರತಿಬಿಂಬಗಳೂ ಆಗಿರುತ್ತವೆ, ಗತಿಬಿಂಬಗಳೂ ಆಗಿರುತ್ತವೆ; ಭವಿಷ್ಯದಲ್ಲಿ ಇತಿಹಾಸವನ್ನು ಉಸುರಲು ವರ್ತಮಾನದಲ್ಲಿ ನಿರ್ಮಿಸಿದ ಸ್ಥಾವರಗಳಾಗಿರುತ್ತವೆ. ಅಯೋಧ್ಯೆಯ ರಾಮ ಮಂದಿರ ಅಂತಹದೊಂದು ಅನನ್ಯ ವಾಸ್ತುಶಿಲ್ಪ. ಈ ಮಂದಿರ, ಕಾಲ ನಮ್ಮ ಕೈಗೆ ಕೊಟ್ಟಿರುವ ಕನ್ನಡಿ. ಅದರಲ್ಲಿ ಇಣುಕಿ ನೋಡಿದರೆ ರಾಮನಷ್ಟೇ ಕಾಣುವುದಿಲ್ಲ; ರಾಮನ ಹೆಸರಿನಲ್ಲಿ ದೇಶದಲ್ಲಿ ನಡೆಯುತ್ತಿರುವ ಅಸಂಖ್ಯ ವಿದ್ಯಮಾನಗಳೂ ಕಾಣಿಸುತ್ತವೆ; ನಾವು ನೀವು ಅವರೂ ಇವರೂ ಎಲ್ಲರೂ ಅಲ್ಲಿ ಕಾಣಿಸುತ್ತೇವೆ. ಮಂದಿರಗನ್ನಡಿಯಲ್ಲಿ ಕೆಲವರಿಗೆ ಭಾರತದಲ್ಲಿನ ಅಖಂಡ ಹಿಂದೂ
ಪ್ರಜ್ಞೆಯ ಒಗ್ಗಟ್ಟು ಕಾಣಿಸಬಹುದು, ಮತ್ತೆ ಕೆಲವರಿಗೆ ಸಮಾಜದಲ್ಲಿನ ಒಡಕಲು ಬಿಂಬಗಳು ಕಾಣಿಸಬಹುದು. ದೇಶದ ಒಗ್ಗಟ್ಟು ಮತ್ತು ಒಡಕು ಎರಡನ್ನೂ ಏಕಕಾಲಕ್ಕೆ ಬಿಂಬಿಸುತ್ತಿರುವುದು ‘ಮಂದಿರಗನ್ನಡಿ’ಯ ವಿಶೇಷ.

ಮಂದಿರಗಳಿಂದ ದೂರವುಳಿದ ಜನರಿಗಾಗಿ ಪರ್ಯಾಯ ದೇಗುಲಗಳನ್ನು ನಿರ್ಮಿಸುತ್ತಾ ಹೋದ ನಾರಾಯಣ ಗುರುಗಳು ಕೂಡ ವಿಗ್ರಹದ ಜಾಗದಲ್ಲಿ ಕನ್ನಡಿಯನ್ನು ಇರಿಸುವ ಪ್ರಯೋಗ ಮಾಡಿದರು. ಎದುರು ನಿಂತವರೆಲ್ಲರ ಬಿಂಬವನ್ನು ಕನ್ನಡಿ ಪ್ರತಿಫಲಿಸಿದರೂ, ಯಾವ ಪ್ರತಿಬಿಂಬವನ್ನೂ ತನ್ನದಾಗಿಸಿಕೊಳ್ಳುವುದಿಲ್ಲ. ದೇವರ ನಿರಾಕಾರವನ್ನು ಹಾಗೂ ಆ ಆಕಾರ ನಮ್ಮೊಳಗೇ ಇರುವುದನ್ನು ಕನ್ನಡಿಗಿಂತಲೂ ಸಮರ್ಥವಾಗಿ ಬಿಂಬಿಸುವುದು ಬೇರಾವುದಕ್ಕೆ ಸಾಧ್ಯವಿದೆ? ದೇವರ ದರ್ಶನವೆನ್ನುವುದು ನಮ್ಮ ಅಂತರಂಗದ ಹುಡುಕಾಟವೇ ಆಗಿದೆ ಎನ್ನುವುದನ್ನು ನಾರಾಯಣ ಗುರುಗಳ ‘ಕನ್ನಡಿ ಸಿದ್ಧಾಂತ’ ಹೇಳುವಂತಿದೆ. ಈ ದರ್ಪಣ ತಾತ್ವಿಕತೆಯನ್ನು ಇಂದಿನ ರಾಮ ಮಂದಿರಕ್ಕೂ ಅನ್ವಯಿಸಿದರೆ, ಇಡೀ ಮಂದಿರವೇ ಒಂದು ಕನ್ನಡಿಯಾಗಿ ಈ ಕಾಲಘಟ್ಟದ ಅಗಣಿತ ಬಿಂಬಗಳನ್ನು ತೋರಿಸುವಂತಿದೆ ಹಾಗೂ ಆ ಬಿಂಬಗಳ ನಡುವೆಯೇ ನಮಗೆ ಬೇಕಾದ ರಾಮನನ್ನು ಹುಡುಕಿಕೊಳ್ಳಲು ಒತ್ತಾಯಿಸುತ್ತಿದೆ.

ಮಂದಿರಗನ್ನಡಿ ನಮಗೆ ಕಾಣಿಸುತ್ತಿರುವ ಬಿಂಬಗಳನ್ನು ಜೋಡಿಸಿಕೊಂಡು ನಾವು ರಾಮನ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಲಿಕ್ಕೆ ಸಾಧ್ಯವಿದೆ. ರಾಮನನ್ನು ಓರ್ವ ಪುರಾಣ ಪುರುಷನ ರೂಪದಲ್ಲಿ ಅಥವಾ ದೈವದ ರೂಪದಲ್ಲಿ ನೋಡುವುದರಿಂದ ಆತನ ವ್ಯಕ್ತಿತ್ವವನ್ನು ಕುಗ್ಗಿಸಿದಂತಾಗುತ್ತದೆ. ರಾಮ ಮೌಲ್ಯದ ಸಂಕೇತ. ಶಬರಿಯ ಎಂಜಲು ಹಣ್ಣುಗಳನ್ನು ಪವಿತ್ರವೆಂದು ಸ್ವೀಕರಿಸಿದಂತೆಯೇ, ಅಳಿಲಿನ ಅಸ್ತಿತ್ವಕ್ಕೂ ಮನ್ನಣೆ ಕೊಡುವಂತಹದ್ದು, ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಮಾತಿಗೂ ಮನ್ನಣೆ ಕೊಡುವಂತಹ ಪ್ರಜಾಪ್ರಭುತ್ವವಾದಿ ನಿಲುವಿನದು ಆ ಮೌಲ್ಯ.

ಪ್ರಜಾಪ್ರಭುತ್ವದ ಸೊಗಸು ಮತ್ತು ಸಾಧ್ಯತೆಗಳನ್ನು ಅರ್ಥ ಮಾಡಿಕೊಳ್ಳಲು ಮಂದಿರಗನ್ನಡಿಗಿಂತಲೂ ಸೃಜನಶೀಲವಾದ ಮತ್ತೊಂದು ಪರಿಕರವಿಲ್ಲ. ಬಹುಸಂಖ್ಯಾತರ ಒಲವು–ಒಮ್ಮತದಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಪ್ರತಿನಿಧಿಗಳನ್ನು ಚುನಾಯಿಸುತ್ತದಷ್ಟೇ. ಹೀಗೆ ಆಯ್ಕೆಯಾದ ಪ್ರತಿನಿಧಿಗಳು ತಮ್ಮ ನಿಷ್ಠೆಯನ್ನು ತಮಗೆ ಮತ ಚಲಾಯಿಸಿದವರಿಗಷ್ಟೇ ಸೀಮಿತಗೊಳಿಸುವಂತಿಲ್ಲ. ಭಿನ್ನಮತ, ತಕರಾರು ಹೊಂದಿರುವ ವ್ಯಕ್ತಿಗಳ ಮಾತನ್ನೂ ಅವರು ಕೇಳಿಸಿಕೊಳ್ಳಬೇಕು ಹಾಗೂ ಆ ಅಭಿಪ್ರಾಯಗಳಿಗೆ ಸ್ಪಂದಿಸಬೇಕು. ರಾಮನ ಉದಾಹರಣೆಯನ್ನೇ ನೋಡಿ: ಆತ ಅಧಿಕಾರಕ್ಕೆ ಅಂಟಿಕೊಂಡವನಲ್ಲ. ತಂದೆಯ ಮಾತಿಗೆ ಕಟ್ಟುಬಿದ್ದು ಕಾಡಿಗೆ ನಡೆದದ್ದು ನಿಜವಾದರೂ, ಆ ನಡೆಯಲ್ಲಿ ಅಧಿಕಾರದ ಕುರಿತ ನಿರ್ಮೋಹವೂ ಇತ್ತು.
ಇಡೀ ಸಾಮ್ರಾಜ್ಯ ಉಘೇ ಉಘೇ ಎನ್ನುತ್ತಿದ್ದರೂ ಸಾಮಾನ್ಯ ವ್ಯಕ್ತಿಯೊಬ್ಬನ ಅಪಸ್ವರ ರಾಮನ ಸಾಕ್ಷಿಪ್ರಜ್ಞೆಯನ್ನು ಕಲಕಿದ್ದು ಅಸಾಧಾರಣ ಸಂಗತಿ. ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತ ರಾಮನ ಬದ್ಧತೆ ಎಷ್ಟು ಸೂಕ್ಷ್ಮವಾಗಿತ್ತೆಂದರೆ, ಜನಸಾಗರದ ಜಯಘೋಷದ ನಡುವೆಯೂ ಕ್ಷೀಣಾತಿಕ್ಷೀಣ ಧ್ವನಿಯನ್ನು ಗಮನಿಸುವ ಹಾಗೂ ಆ ಮಾತನ್ನು ಮುಖ್ಯವೆಂದು ಭಾವಿಸಿ ಸ್ಪಂದಿಸುವ ಮನಸ್ಸು ಆತನದಾಗಿತ್ತು. ಅಧಿಕಾರದ ಅಗ್ನಿದಿವ್ಯಕ್ಕೆ ಒಪ್ಪಿಸಿಕೊಂಡವರಿಗೆ ವೈಯಕ್ತಿಕ ಸುಖ ನಗಣ್ಯವಾಗಬೇಕು, ಕುಟುಂಬದ ಹಿತ ಅಮುಖ್ಯವಾಗಬೇಕು ಎನ್ನುವುದನ್ನು ಅನುಸರಿಸಿ ತೋರಿದವನು ರಾಮ. ಆ ರಾಮಮಾರ್ಗದ ಬಿಂಬವೂ ಇಂದಿನ ಕನ್ನಡಿಯೊಳಗಿನ ಅಗಣಿತ ಬಿಂಬಗಳಲ್ಲಿ ಎಲ್ಲೋ ಅವಿತಿದೆ, ಹುಡುಕಿಕೊಳ್ಳಬೇಕಷ್ಟೆ.

ಭಾರತದ ಚೆಲುವು ಅದರ ಬಹುತ್ವದಲ್ಲಿರುವುದನ್ನು ಸಂವಿಧಾನ ಧ್ವನಿಸುತ್ತದೆ. ಈ ಬಹುತ್ವ, ವರ್ತಮಾನದ ಭಾರತದಲ್ಲಿ ಅಭಿಪ್ರಾಯಭೇದಗಳ ರೂಪದಲ್ಲಿ ಮೈದೋರಿದೆ. ಜಾತಿ, ಧರ್ಮ, ಭಾಷೆಗಳೆಲ್ಲವೂ ಭಿನ್ನಾಭಿಪ್ರಾಯಕ್ಕೆ ಕಾರಣಗಳೇ ಆಗಿವೆ. ಈ ಬಿಂಬಗಳೆಲ್ಲವೂ ಮಂದಿರಗನ್ನಡಿಯಲ್ಲಿ ಪ್ರತಿಫಲನಗೊಳ್ಳುತ್ತಿವೆ. ಧರ್ಮವೊಂದಕ್ಕೆ ಬದ್ಧವಾಗುವ ಭರದಲ್ಲಿ ಸರ್ಕಾರಕ್ಕೆ ರಾಜಧರ್ಮದ ಮರೆವೆಯಾಗಿದೆ. ತಾವು ಎಲ್ಲ ಪ್ರಜೆಗಳಿಗೂ ಸೇರಿದವರು ಎನ್ನುವುದನ್ನು ರಾಜಕಾರಣಿಗಳು ಮರೆತಿದ್ದಾರೆ. ಮಂದಿರದ ಮೂಲಕ ರಾಮರಾಜ್ಯದ ಶಕೆಯಾರಂಭವಾಯಿತು ಎಂದು ಬೀಗುತ್ತಿರುವವರೇ, ಪ್ರಜಾಪ್ರಭುತ್ವವಾದಿ ರಾಮನ ಆಶಯಗಳನ್ನು ಮೂಲೆಗುಂಪು ಮಾಡಿರುವ ವಿರೋಧಾಭಾಸಕ್ಕೂ ಮಂದಿರ ಕನ್ನಡಿ ಹಿಡಿಯುತ್ತಿದೆ. ರಾಮನ ಆಡಳಿತದಲ್ಲಿ ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಯ ಅಭಿಪ್ರಾಯಕ್ಕೆ ಮನ್ನಣೆಯಿದ್ದುದಕ್ಕೂ, ವರ್ತಮಾನದ ಆಡಳಿತ ವ್ಯವಸ್ಥೆಯಲ್ಲಿ ಭಿನ್ನಾಭಿ‍ಪ್ರಾಯಗಳು ಪಿತೂರಿಯಂತೆ ಕಾಣಿಸುತ್ತಿರುವ ವಿರೋಧಾಭಾಸಕ್ಕೂ ಮಂದಿರ ಕನ್ನಡಿಯಾಗಿದೆ. ದೇಶದ ಅಸ್ಮಿತೆಯ ಸಂಕೇತವಾಗಬೇಕಾದ ಮಂದಿರ, ಒಂದು ಪಕ್ಷದ, ಒಂದು ಧರ್ಮದ, ಒಂದು ಸಮುದಾಯದ ತುತ್ತೂರಿಯಾಗಿ ಬಿಂಬಿತಗೊಳ್ಳುತ್ತಿದೆ. ರಾಮ ಮಂದಿರದ ಬಗ್ಗೆ ಯಾವ ಸಮುದಾಯ ಹೆಮ್ಮೆಯಿಂದ ಮಾತನಾಡುತ್ತಿದೆಯೋ, ಅದೇ ಸಮುದಾಯದ ಕೆಲವು ಪೀಠಾಧಿಪತಿಗಳೇ ಭಿನ್ನರಾಗ ಹಾಡುತ್ತಿದ್ದಾರೆ. ಜಾತಿ, ಧರ್ಮ, ಆಹಾರ, ಭಾಷೆ ಸೇರಿದಂತೆ ಹಲವು ಕಾರಣಗಳು ಜನರ ನಡುವೆ ಗೆರೆಗಳಾಗಿವೆ. ಆ ಕಾರಣಗಳ ಪಟ್ಟಿಗೆ ಮಂದಿರವೂ ಸೇರಿಕೊಂಡಿದೆ. ಮಂದಿರದ ಪರ–ಹತ್ತಿರ ಹಾಗೂ ಮಂದಿರದಿಂದ ದೂರ ಎಂದು ಜನಮನ ಎರಡಾಗಿ ಹಂಚಿಹೋಗಿರುವ ಒಡಕಲು ಬಿಂಬವನ್ನೂ ಕನ್ನಡಿ ಕಾಣಿಸುತ್ತಿದೆ. ಮಂದಿರಗನ್ನಡಿಗೆ ನಿಲುಕದ ಬಿಂಬವಾದರೂ ಯಾವುದು?

ಭಾರತದ ವರ್ತಮಾನದ ಸಂಕೀರ್ಣತೆಯನ್ನು ಅರಿಯಲಿಕ್ಕೂ ಮಂದಿರ ಅಂಗೈಗನ್ನಡಿ. ಈ ದೇಶದ ಯಾವುದೋ ಭಾಗದಲ್ಲಿನ ಮಸೀದಿಯಲ್ಲಿ ಅಲ್ಲಾಹುವಿನ ಮೊರೆಹೋಗುವ ಸಹೃದಯನ ಮನಃಪಟಲದಲ್ಲಿ ರಾಮನೋ ಕೃಷ್ಣನೋ ಮೂಡಬಹುದು. ಮಂದಿರದಲ್ಲಿ ರಾಮನನ್ನು ಧ್ಯಾನಿಸುವ ಸಹೃದಯಿಯ ಚಿತ್ತದಲ್ಲಿ ಅಲ್ಲಾಹುವಿನ ನೆರಳು ಹಾದುಹೋಗಬಹುದು. ಧ್ಯಾನವೂ, ಧ್ಯಾನದ ಕೇಂದ್ರದಲ್ಲಿರುವ ಮೂರ್ತಿಗಳ ಚಹರೆಗಳೂ ಬೆರೆತುಹೋಗಿರುವ ಕಲಸುಮೇಲೋಗರ ಆಗಿರುವ ಕಾಲಘಟ್ಟವಿದು. ಒಂದು ಧರ್ಮದ ಸ್ಥಾವರದ ಅಡಿಯಲ್ಲಿ ಮತ್ತೊಂದು ಧರ್ಮದ ಚಹರೆಗಳನ್ನು ಹುಡುಕುವುದರಲ್ಲಿ ಸುಖ ಕಾಣುವ ಉನ್ಮಾದದ ದಿನಗಳಿವು.

‘ತುಪ್ಪೇರಿದ ದರ್ಪಣದೊಳ್ ಪಜ್ಜಳಿಸಲಾರ್ಪುದೇ ಪ್ರತಿಬಿಂಬಂ’ ಎನ್ನುವುದು ಕವಿ ಜನ್ನನ ಮಾತು. ತುಕ್ಕು ಹಿಡಿದಿರುವ ಅಂತರಂಗದಲ್ಲಿ ಮಾನವೀಯತೆಯ ಬಿಂಬ ಪ್ರತಿಫಲಿಸುವುದು ಹೇಗೆ? ಈಗಿನ ಸಂದರ್ಭ ಭಿನ್ನವಾದುದು: ಮಂದಿರಗನ್ನಡಿಯೇನೋ ಸ್ವಚ್ಛವಾಗಿದೆ, ನೋಡುವ ಕಣ್ಣುಗಳಿಗೆ ಜಿಡ್ಡು ಆವರಿಸಿಕೊಂಡಿದೆ. ಜಿಡ್ಡು ಕಳೆದುಕೊಂಡು, ಕಣ್ಣುಗಳನ್ನು ತಿಳಿಯಾಗಿಸಿಕೊಂಡು, ನೋಟವನ್ನು ನಿರ್ಮಲವಾಗಿಸಿಕೊಳ್ಳಲು ದೊರೆತಿರುವ, ರಾಮನೇ ಕಲ್ಪಿಸಿರುವ ಅವಕಾಶವನ್ನು ಶ್ರೀಸಾಮಾನ್ಯರು ಉಪಯೋಗಿಸಿಕೊಳ್ಳಬೇಕಾಗಿದೆ.

ಭೀತಿಯನ್ನು ನಿವಾರಿಸುವವನು, ಅಸಹಾಯಕರಲ್ಲಿ ಭರವಸೆಯನ್ನು ತುಂಬುವವನು ರಾಮ. ಜನತಂತ್ರದ ಶ್ರೇಷ್ಠ ಪ್ರತಿನಿಧಿಯಾದ ರಾಮನಿಗೆ ಅರಮನೆ ಹಾಗೂ ಪರ್ಣಕುಟೀರಗಳ ನಡುವೆ, ಸಾಮ್ರಾಜ್ಯ ಹಾಗೂ ಕಾಡುಗಳ ನಡುವೆ ವ್ಯತ್ಯಾಸವಿಲ್ಲ. ಹೀಗಳೆದವರನ್ನೂ ಪ್ರೇಮದಿಂದ ನೋಡುವ ಉದಾತ್ತ ವ್ಯಕ್ತಿತ್ವ ಅವನದು. ಇಂಥ ರಾಮ ಈಗ ನಮ್ಮೆದುರಿಗೆ ನಿಂತಿರುವ ಸ್ವರೂಪ ಯಾವುದು ಎನ್ನುವುದನ್ನೂ ಮಂದಿರಗನ್ನಡಿ ತೋರುತ್ತಿದೆ. ರಾಮನ ಹೆಸರಿನಲ್ಲಿ ಯಾರು ಆರಾಮವಾಗಿದ್ದಾರೆ, ಯಾರು ಆರಾಮ ಕಳೆದುಕೊಂಡಿದ್ದಾರೆ ಎನ್ನುವುದನ್ನು ಅನುಮಾನಕ್ಕೆಡೆಯಿಲ್ಲದಂತೆ ಕಾಣಿಸುತ್ತಿದೆ; ಧರ್ಮ ಮತ್ತು ರಾಜಧರ್ಮದ ನಡುವಿನ ಗೆರೆ ಅಳಿಸಿಹೋಗಿರುವ ಬಿಂಬವನ್ನೂ ಮೂಡಿಸುತ್ತಿದೆ. ರಾಮನ ಕಾರಣದಿಂದಾಗಿ ಯಾರಾದರೂ ಆರಾಮ ಕಳೆದುಕೊಳ್ಳುವ ಸ್ಥಿತಿಯಿದೆ ಎನ್ನುವುದಾದರೆ, ಆ ಸ್ಥಿತಿಯನ್ನು ರಾಮರಾಜ್ಯ ಎನ್ನುವುದಾದರೂ ಹೇಗೆ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವಂತೆ ‘ಮಂದಿರಗನ್ನಡಿ’ ಜನಸಾಮಾನ್ಯರನ್ನು ಒತ್ತಾಯಿಸುತ್ತಿದೆ.

ರಘುನಾಥ

ರಘುನಾಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT