ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಡಸಾಲೆ ಅಂಕಣ: ಸಾಹಿತಿಗಳಿಗಿದು ಸ್ವವಿಮರ್ಶೆಯ ಸಮಯ..

ಸ್ವಪ್ರಶಂಸೆಯಿಂದ ಸ್ವವಿಮರ್ಶೆಯೆಡೆಗೆ ಚಲಿಸಲು ಕನ್ನಡ ಸಾಹಿತ್ಯವಲಯಕ್ಕಿದು ಸಕಾಲ
Published 25 ಜೂನ್ 2024, 0:30 IST
Last Updated 25 ಜೂನ್ 2024, 0:30 IST
ಅಕ್ಷರ ಗಾತ್ರ

ಕನ್ನಡ ಸಾಹಿತ್ಯಕ್ಕೆ ಇತ್ತೀಚಿನ ಮಹತ್ವದ ಕೊಡುಗೆ ಯಾವುದು? ಆ ಕೀರ್ತಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಸಲ್ಲಬೇಕು. ‘ಸಾಹಿತಿಗಳೂ ರಾಜಕಾರಣಿಗಳೇ, ಅವರೂ ರಾಜಕಾರಣಕ್ಕೆ ಬರಬಹುದು’ ಎನ್ನುವ ಅವರ ಮಾತು ಕೇವಲ ಒಂದು ಹೇಳಿಕೆಯಲ್ಲ; ಅದು, ಸಮಕಾಲೀನ ಸಾಹಿತ್ಯ ಸಂದರ್ಭದ ಬಗ್ಗೆ ಜನಸಾಮಾನ್ಯರಲ್ಲಿ ಇರುವ ಭಾವನೆಯ ಅಭಿವ್ಯಕ್ತಿ ಹಾಗೂ ಸಾಹಿತ್ಯ–ಸಂಸ್ಕೃತಿಯ ವಲಯಕ್ಕೆ ಒದಗಿಬಂದಿರುವ ಆತ್ಮಾವಲೋಕನದ ಒಂದು ಅವಕಾಶ. ದುರದೃಷ್ಟದ ಸಂಗತಿಯೆಂದರೆ, ಉಪ ಮುಖ್ಯಮಂತ್ರಿಗಳ ಹೇಳಿಕೆಗೆ ಕನ್ನಡ ಸಾಹಿತ್ಯಲೋಕ ಧನ್ಯವಾದ ಹೇಳುವ ಬದಲು ಅಪಮಾನವಾಯಿತೆನ್ನುವ ರೀತಿಯಲ್ಲಿ ಸಿಡಿದೆದ್ದು ನಿಂತಿದೆ. 

ಸಾಹಿತ್ಯ–ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿದ ಅಕಾಡೆಮಿ–ಪ್ರಾಧಿಕಾರಗಳ ಅಧ್ಯಕ್ಷರ ಸಭೆಯನ್ನು ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ನಡೆಸಿದ ಉಪ ಮುಖ್ಯಮಂತ್ರಿಗಳ ಕ್ರಮ ಸಾಹಿತ್ಯವಲಯದ ಒಂದು ಗುಂಪಿನ ಆಕ್ಷೇಪ ಆಕ್ರೋಶಕ್ಕೆ ಕಾರಣವಾಗಿದೆ. ಸಭೆ ನಡೆಸಿದ್ದು ಮಾತ್ರವಲ್ಲ, ಅಕಾಡೆಮಿ–ಪ್ರಾಧಿಕಾರಗಳು ಸ್ವಾಯತ್ತ ಸಂಸ್ಥೆಗಳಲ್ಲ ಹಾಗೂ ಅವುಗಳ ಅಧ್ಯಕ್ಷ ಸ್ಥಾನದಲ್ಲಿರುವವರು ಅಂಬೆಗಾಲಿನ ರಾಜಕಾರಣಿಗಳೂ ಹೌದು ಎನ್ನುವ ಅರ್ಥದಲ್ಲಿ ಹೇಳಿರುವ ಉಪ ಮುಖ್ಯಮಂತ್ರಿಗಳ ಮಾತು ಸಾಹಿತ್ಯದ ಸ್ವಾಯತ್ತೆಯ ಅಪೇಕ್ಷೆಯಿಂದ ಖಂಡಿತವಾಗಿಯೂ ಆಕ್ಷೇಪಾರ್ಹವೇ. ಆದರೆ, ಹೀಗೆ ಆಕ್ಷೇಪಿಸುವವರು ಸಾಹಿತ್ಯ ಕ್ಷೇತ್ರದ ಸ್ವಾಯತ್ತತೆ ಹಾಗೂ ಘನತೆ ಈಗ ಎಷ್ಟರಮಟ್ಟಿಗೆ ಉಳಿದಿದೆ ಎನ್ನುವುದನ್ನೂ ಗಮನಿಸಬೇಕು. ಸಾಹಿತಿಗಳ ಮರ್ಮಸ್ಥಾನಕ್ಕೆ ಕೈ ಹಾಕಿರುವ ವ್ಯಕ್ತಿಯನ್ನು ಟೀಕಿಸುವಾಗ, ಅದಕ್ಕೆ ಅವಕಾಶ ಮಾಡಿಕೊಟ್ಟಿರುವ ವ್ಯಕ್ತಿತ್ವಗಳ ಬಗ್ಗೆ ಯೋಚಿಸದೆ ಹೋದರೆ ನಮ್ಮ ಟೀಕೆಗಳು ಧ್ವನಿಯಿಲ್ಲದ ಶಬ್ದಗಳಾಗಿ ಉಳಿದುಬಿಡುತ್ತವೆ. 

ತುರಿಕೆಯ ಸುಖಕ್ಕಾಗಿ ಕೆರೆದುಕೊಂಡು ಗಾಯ ಮಾಡಿಕೊಂಡ ನಂತರವೂ ಮತ್ತೆ ಮತ್ತೆ ತುರಿಸಿಕೊಂಡಂತೆ, ಕಳೆದ ಎರಡು ದಶಕಗಳ ಅವಧಿಯಲ್ಲಿ ಸಾಹಿತ್ಯ ಕ್ಷೇತ್ರ ತನ್ನನ್ನು ತಾನು ಮತ್ತೆ ಮತ್ತೆ ಗಾಸಿಗೊಳಿಸಿಕೊಂಡಿದೆ, ವಿಘಟನೆಗೆ ಒಳಪಡಿಸಿಕೊಂಡಿದೆ. ಅಂಥ ಗಾಯಗಳಲ್ಲೊಂದು ‘ಬಲಪಂಥೀಯ ಸಾಹಿತ್ಯ’ ಎನ್ನುವ ಗುಂಪನ್ನು ಬಲಪಡಿಸಿರುವುದು. ಕನ್ನಡ ಸಾಹಿತ್ಯದಲ್ಲಿ ಬಲಪಂಥದ ಕೀರಲು ದನಿಯೊಂದು ಮೊದಲಿನಿಂದಲೂ ಇತ್ತು. ಗುಣಮಟ್ಟದಲ್ಲಾಗಲೀ ಪರಿಣಾಮದಲ್ಲಾಗಲೀ ಗಮನಸೆಳೆಯದ ಆ ಲೇಖಕವರ್ಗ ಕನ್ನಡ ಸಾಹಿತ್ಯದ ಪ್ರಧಾನಧಾರೆಯೊಳಗೇ ಒಂದು ಮಗ್ಗುಲಲ್ಲಿತ್ತು ಹಾಗೂ ತೀರಾ ಇತ್ತೀಚಿನವರೆಗೆ ಅದಕ್ಕೆ ಯಾವ ಬಗೆಯ ಮಹತ್ವವೂ ಇರಲಿಲ್ಲ. ಯಂಡಮೂರಿ ವೀರೇಂದ್ರನಾಥ್‌ ಅವರಂತೆ ಜನಪ್ರಿಯ ಕಾದಂಬರಿಕಾರರಾಗಿಯಷ್ಟೇ ಚಾಲ್ತಿಯಲ್ಲಿದ್ದ, ಸಾಹಿತ್ಯಿಕವಾಗಿ ಹಾಗೂ ಸಾಮಾಜಿಕವಾಗಿ ಯಾವ ಮಹತ್ವವೂ ಇಲ್ಲದ ಬರಹಗಾರರನ್ನು ಸಿದ್ಧಾಂತದ ಕಾರಣಕ್ಕಾಗಿ ನಿರಂತರವಾಗಿ ದೂರೀಕರಿಸಿ ಅವರನ್ನು ರಾಜಕೀಯ ಪ್ರೇರಿತ ಓದುಗ ವಲಯವೊಂದರ ಡಾರ್ಲಿಂಗ್‌ ಮಾಡಲಾಯಿತು. ಹುತಾತ್ಮರ ಪೋಷಾಕು ತೊಟ್ಟ ಆ ಕಾದಂಬರಿಕಾರರಿಗೆ ಬದಲಾದ ರಾಜಕೀಯ ಸನ್ನಿವೇಶ ಸರ್ಕಾರಿ ಮನ್ನಣೆಯನ್ನೂ ಸಾಮಾಜಿಕ ಪ್ರಭೆಯನ್ನೂ ದೊರಕಿಸಿಕೊಟ್ಟಿತು. ಆವರೆಗೆ ಚಾಲ್ತಿಯಲ್ಲಿದ್ದ ಪ್ರತಿಭೆ, ವಿದ್ವತ್ತು, ಸಾಮಾಜಿಕ ನ್ಯಾಯ ಎನ್ನುವ ಮಾನದಂಡಗಳು ಹಿನ್ನೆಲೆಗೆ ಸರಿದು, ಸಿದ್ಧಾಂತದ ಬಲದಿಂದಲೇ ಸಾಹಿತಿಗಳ ಹೆಸರಿನ ಕೆಲವರು ಚಲಾವಣೆಗೆ ಬಂದರು. ಇದಕ್ಕೆ ತಕ್ಕಹಾಗೆ, ಕನ್ನಡದ ಓದುಗವರ್ಗವೂ ಒಡೆದುಹೋಯಿತು; ಒಂದು ವರ್ಗದ ಓದುಗ ಇನ್ನೊಂದು ವರ್ಗದ ಲೇಖಕನನ್ನು ಓದದಿರುವ ಅಥವಾ ನಿರಾಕರಿಸುವ ಪರಿಸ್ಥಿತಿ ಸೃಷ್ಟಿಯಾಯಿತು. ಮನಸ್ಸುಗಳನ್ನು ಬೆಸೆಯಬೇಕಾದ ಸಾಹಿತ್ಯದ ಆಶಯ ಸೀಮಿತಗೊಂಡು, ‘ಒಂದು ವರ್ಗದ ಮನಸ್ಸುಗಳನ್ನು ಮಾತ್ರ ಬೆಸೆಯುವ ಸಾಹಿತ್ಯ’ ಎನ್ನುವ ಚೌಕಟ್ಟು ರೂಪುಗೊಂಡಿತು. ಅಖಂಡ ಕನ್ನಡ ಓದುಗ ವರ್ಗದ‌ ಗೌರವಕ್ಕೆ‌ ಪಾತ್ರವಾಗುವ ಕೃತಿ ರೂಪುಗೊಳ್ಳಲಿಕ್ಕೆ ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ಇಂದಿನ ‘ಒಡಕಲು ಕರ್ನಾಟಕ’ದ್ದು. ಈ ಹೊತ್ತಿನ ಒಳ್ಳೆಯ ಅಥವಾ ಜನಪ್ರಿಯ ಪುಸ್ತಕ ಎನ್ನುವುದನ್ನು ನಿರ್ದಿಷ್ಟ ಗುಂಪಿನ‌ ಹಿನ್ನೆಲೆಯಲ್ಲಿಯಷ್ಟೇ‌ ಗುರ್ತಿಸಬೇಕಾಗಿದೆ. 

ಬರಹಗಾರನ ರಾಜಕೀಯ ಪ್ರಜ್ಞೆ ಯಾವ ರೀತಿಯದಾಗಿರಬೇಕು ಎನ್ನುವುದಕ್ಕೆ ನಿದರ್ಶನದಂತೆ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಡೀ ಕನ್ನಡ ಲೇಖಕವರ್ಗ ಆಡಳಿತ ವರ್ಗದ ವಿರುದ್ಧ ನಿಂತಿತ್ತು. ಆ ಒಕ್ಕೊರಲನ್ನು ಇಂದಿನ ಇಕ್ಕಟ್ಟಿನ ಸಂದರ್ಭದಲ್ಲಿ ಕಾಣಲು ಸಾಧ್ಯವೆ?

ಸಾಹಿತ್ಯಕ್ಷೇತ್ರದಲ್ಲಿನ ಒಡಕಲು ಬಿಂಬಗಳು ಸಾಂಸ್ಕೃತಿಕ ವಲಯಕ್ಕೆ ಹಾನಿ ಮಾಡಿದುದರ ಜೊತೆಗೆ ಸಾಮಾಜಿಕ ಸ್ವಾಸ್ಥ್ಯಕ್ಕೂ ಧಕ್ಕೆಯುಂಟು ಮಾಡಿದವು. ಲೇಖಕರ ಗುಂಪುಗಾರಿಕೆಯಿಂದಾಗಿ ಸಾಹಿತ್ಯ–ಸಾಹಿತಿಯ ಮೇಲಿದ್ದ ಸಮಾಜದ ವಿಶ್ವಾಸಕ್ಕೆ ಕುಂದುಂಟಾಯಿತು. ಶತಮಾನಗಳಿಂದ ಕನ್ನಡ ಜನರ ವಿಶ್ವಾಸಾರ್ಹತೆಯ ಕೇಂದ್ರದಲ್ಲಿದ್ದ ಬರಹಗಾರ, ಒಮ್ಮಿಂದೊಮ್ಮೆಗೆ ಸಮಾಜದ ಕಣ್ಣಲ್ಲಿ ಅನುಮಾನಾಸ್ಪದ ಪ್ರಾಣಿಯಂತೆ ಕಾಣಿಸಿಕೊಳ್ಳಲಿಕ್ಕೆ ಸಾಹಿತ್ಯ ವಲಯವೇ ಅವಕಾಶಗಳನ್ನು ಸೃಷ್ಟಿಸಿಕೊಟ್ಟಿತು. ರಾಜಕಾರಣದ ನಡೆಗಳನ್ನು ನಿರ್ದೇಶಿಸಲು ಹಾಗೂ ವರ್ತಮಾನದ ಬಿಕ್ಕಟ್ಟುಗಳನ್ನು ಪರಿಶೀಲಿಸಲು ತಾತ್ವಿಕ ಮಾದರಿಗಳನ್ನು ಸೃಷ್ಟಿಸಿಕೊಡುವ ನಿಟ್ಟಿನಲ್ಲಿ ಲೇಖಕನೊಬ್ಬನ ಪ್ರತಿಕ್ರಿಯೆಯನ್ನು ಗೌರವ ಹಾಗೂ ಕುತೂಹಲದಿಂದ ಗಮನಿಸುತ್ತಿದ್ದ ಸಮಾಜ, ಬರಹಗಾರರು ವರ್ತಮಾನದ ಬಿಕ್ಕಟ್ಟುಗಳ ಬಗ್ಗೆ ಮಾತನಾಡುವುದನ್ನು ಗುಮಾನಿಯಿಂದ ನೋಡುವಂತಾಯಿತು. ಈ ಗುಮಾನಿ ಅಸಹನೆಯ ರೂಪವನ್ನೂ ತಾಳಿ, ಲೇಖಕರ ಬಾಯಿಮುಚ್ಚಿಸುವ ಕೆಲಸವೂ ನಡೆಯಿತು, ನಡೆಯುತ್ತಿದೆ. ಗುಂಪೊಂದರ ಅಸಹನೆಗೆ ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿ ಬರಹಗಾರರು ಜೀವ ಕಳೆದುಕೊಂಡರು. ಯಾವುದೇ ಸಮಾಜಕ್ಕೆ ಕಲಂಕಪ್ರಾಯವಾದ ಇಂಥ ಘಟನೆಗಳು ರೂಪುಗೊಳ್ಳುವಲ್ಲಿ ಸಾಹಿತ್ಯದ ಎಲ್ಲ ಗುಂಪುಗಳ ಪಾತ್ರವೂ ಇದೆ. ಆದರೆ, ಹೊಣೆಗಾರಿಕೆಯನ್ನು ಇನ್ನೊಬ್ಬರಿಗೆ ವರ್ಗಾಯಿಸುವ ಆಟದಲ್ಲಿ ನಿರತರಾದ ಲೇಖಕರು ಮತ್ತೊಂದು ಗುಂಪಿನ ಕುರಿತು ಟೀಕೆ ಟಿಪ್ಪಣಿಗಳಲ್ಲಿ ಆಸಕ್ತರೇ ಹೊರತು, ಸ್ವವಿಮರ್ಶೆಯಿಂದ ದೂರವುಳಿದಿದ್ದಾರೆ. 

ನಾಡಿಗೆ ನೈತಿಕ–ತಾತ್ವಿಕ ಮಾದರಿಗಳನ್ನು ಸೃಷ್ಟಿಸಿಕೊಡುವ ಹೊಣೆಗಾರಿಕೆಯಿಂದ ಸಾಹಿತ್ಯಕ್ಷೇತ್ರ ದೂರವಾದಂತೆಲ್ಲ, ಆ ಸ್ಥಾನದಲ್ಲಿ ಮಠಗಳು, ಜಾತೀಯ ಸಂಘಟನೆಗಳು ಕಾಣಿಸಿಕೊಂಡಿದ್ದು ಆಧುನಿಕ ಕರ್ನಾಟಕದ ಬಹು ದೊಡ್ಡ ವ್ಯಂಗ್ಯ. ಈ ಸ್ಥಿತ್ಯಂತರಕ್ಕೂ, ರಾಜಕೀಯ ಹಾಗೂ ಸಾಮಾಜಿಕ ಭ್ರಷ್ಟತೆಯ ಕಾರಣದಿಂದಾಗಿ ಕರ್ನಾಟಕ ವಿಶ್ವಮಟ್ಟದಲ್ಲಿ ಸುದ್ದಿಯಾಗುತ್ತಿರುವುದಕ್ಕೂ ಸಂಬಂಧವಿದೆ. 

ಸಾಮಾಜಿಕ ಸಂವೇದನೆಗಳನ್ನು ರೂಪಿಸಬೇಕಾಗಿದ್ದ ಸಾಹಿತ್ಯಕ್ಷೇತ್ರವೇ ಎಷ್ಟರಮಟ್ಟಿಗೆ ಜಡಗೊಂಡಿದೆಯೆಂದರೆ, ಜನರ ವಿಶ್ವಾಸವನ್ನು ಮರಳಿಪಡೆಯುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವ ಅಗತ್ಯವೂ ಅದಕ್ಕೆ ಮುಖ್ಯವೆನ್ನಿಸಿದಂತಿಲ್ಲ. ಸಮಾಜದ ವಿಶ್ವಾಸವನ್ನು ಗಳಿಸಲು ಪ್ರಯತ್ನಿಸುವ ಬದಲು ರಾಜಕಾರಣಿಗಳ ವಿಶ್ವಾಸ ಪಡೆಯಲು ಕೆಲವು ಬರಹಗಾರರು ತಮ್ಮ ಪ್ರತಿಭೆಯನ್ನೆಲ್ಲ ಧಾರೆಯೆರೆದಿದ್ದು, ಅವರನ್ನು ಮತ್ತೆ ಕೆಲವರು ಅನುಸರಿಸುತ್ತ ಇಲ್ಲವೇ ದೂರುತ್ತಾ ತಾವೂ ‘ಅರೆ ರಾಜಕಾರಣ’ದ ದಾಳಗಳಾಗಿ ಬದಲಾಗಿದ್ದಾರೆ. ಮತ್ತೆ ಕೆಲವರು, ಯಾರು ಯಾವ ಕಾರ್ಯಕ್ರಮಕ್ಕೆ ಹೋಗಬೇಕು ಹೋಗಬಾರದು ಎನ್ನುವುದನ್ನು ನಿರ್ಣಯಿಸುವ ಯಜಮಾನಿಕೆಯನ್ನು ತಮ್ಮಷ್ಟಕ್ಕೆ ತೆಗೆದುಕೊಂಡಿದ್ದಾರೆ. ಕನ್ನಡ ಓದುಗ ಸಮುದಾಯ ಈವರೆಗೆ ಮಾತೃಮಾದರಿಗಳಂತೆ ನಂಬಿಕೊಂಡು ಬಂದಿದ್ದ ರೂಪಕಗಳನ್ನು ಒಡೆಯುವ ಪ್ರಯತ್ನವೂ ನಡೆದಿದೆ. ಯಾವುದೇ ಹೊಸ ಮಾದರಿಗಳನ್ನು ಸೃಷ್ಟಿಸುವ ಉತ್ತರದಾಯಿತ್ವವಿಲ್ಲದೆ ನಡೆಸುವ ಭಂಜನ ಪ್ರಕ್ರಿಯೆಯೂ ಸಾಹಿತ್ಯವಲಯದ ಬಗ್ಗೆ ಸಹೃದಯರ ವಿಶ್ವಾಸ ಕುಂದಲಿಕ್ಕೆ ಕಾರಣಗಳಲ್ಲೊಂದಾಗಿದೆ.

ಸಾಹಿತಿಯೊಬ್ಬ ರಾಜಕೀಯ ವಿದ್ಯಮಾನಗಳಲ್ಲಿ ಆಸಕ್ತನಾಗುವುದು ತಪ್ಪೇನೂ ಅಲ್ಲ. ಆದರೆ, ಆ ತೊಡಗಿಸಿಕೊಳ್ಳುವಿಕೆ ಸಾಹಿತಿಯೇ ರಾಜಕಾರಣಿಯಾಗುವ ಮಟ್ಟಿಗೆ ತೀವ್ರವಾಗಬಾರದು. ಕನ್ನಡದ ಸಾಹಿತ್ಯಪರಂಪರೆಯ ರಾಜಕಾರಣ ಗುರ್ತಿಸಿಕೊಂಡಿರುವುದು ಪ್ರತಿಪಕ್ಷಗಳ ಸ್ಥಾನದಲ್ಲಿ. ಆದರೆ, ಈ ಹೊತ್ತಿನ ಸಾಹಿತ್ಯಿಕ ರಾಜಕಾರಣದ್ದು ಅಧಿಕಾರದೊಂದಿಗಿನ ಅನುಸಂಧಾನ. ರಾಜಕಾರಣದ ಉದ್ದೇಶವೇ ಅಧಿಕಾರ ಪಡೆಯುವುದು ಎನ್ನುವ ರಾಜಕಾರಣಿಗಳ ನಂಬಿಕೆಯನ್ನು ಪ್ರಶ್ನಿಸಬೇಕಾದ ಬರಹಗಾರರೇ, ತಮ್ಮ ರಾಜಕೀಯ ಪ್ರಜ್ಞೆಯೇ ಅಧಿಕಾರಕ್ಕೆ ಅಡವಿಟ್ಟಿರುವ ಸನ್ನಿವೇಶ ಇಂದಿನದು. ಇಂಥ ಸಂದರ್ಭದಲ್ಲಿ, ಅಸಲಿ ರಾಜಕಾರಣಿಯ ಕಣ್ಣಿಗೆ ಲೇಖಕರೂ ರಾಜಕಾರಣಿಗಳಂತೆ ಕಾಣಿಸಿದರೆ ಆಶ್ಚರ್ಯವೇನು? 

ರಾಜಕಾರಣಿಯೊಬ್ಬ ಸಾಹಿತಿಗಳ ನೈತಿಕತೆಯನ್ನು ಅನುಮಾನಿಸುವಂತೆ ಆಡುವ ಮಾತಿಗೆ ಉತ್ತರ ಕೊಡಬೇಕಾದುದು ಸಾಹಿತ್ಯ ವಲಯದ ಜವಾವ್ದಾರಿಯಲ್ಲ. ಆ ಕೆಲಸವನ್ನು ಸಮಾಜ ಮಾಡಬೇಕು. ಬರಹಗಾರರ ವಿಶ್ವಾಸಾರ್ಹತೆಗೆ ಪ್ರಶ್ನೆ ಎದುರಾದಾಗ ಸಮಾಜ ಮೌನವಾಗಿದ್ದರೆ, ಅದು ಸಾಹಿತಿಗಳ ಆತ್ಮಾವಲೋಕನದ ಸಮಯ ಎಂದರ್ಥ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT