ಅಂಚೆ ಜಾಗೃತಿಗಾಗಿ ‘ಪೋಸ್ಟಲ್‌ ಸೈಕ್ಲೋತ್ಥಾನ–2019’

7

ಅಂಚೆ ಜಾಗೃತಿಗಾಗಿ ‘ಪೋಸ್ಟಲ್‌ ಸೈಕ್ಲೋತ್ಥಾನ–2019’

Published:
Updated:
Prajavani

ಅಂಚೆ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಲು ಈಚೆಗೆ ಇಲಾಖೆಯ ನೌಕರರು ಹಮ್ಮಿಕೊಂಡಿದ್ದ ‘ಪೋಸ್ಟಲ್ ಸೈಕ್ಲೋತ್ಥಾನ- 2019’ ಅಭಿಯಾನ, ಬೀದಿ ನಾಟಕ ಪ್ರದರ್ಶನ ಜನರ ಗಮನ ಸೆಳೆಯಿತು.

ವಿಜಯಪುರದಿಂದ ಬಸವನಬಾಗೇವಾಡಿವರೆಗೆ (42 ಕಿ.ಮೀ) ನಡೆದ ಸೈಕಲ್ ಜಾಥಾದಲ್ಲಿ, ಜಿಲ್ಲೆಯ 60ಕ್ಕೂ ಹೆಚ್ಚು ನೌಕರರು ಸೈಕಲ್ ತುಳಿದರು. ಹಾದಿ ನಡುವೆ ಇಲಾಖೆ ನೀಡುವ ಸೇವೆಗಳ ಬಗ್ಗೆ ಜಾಗೃತಿ ಮೂಡಿಸಿದರು.

ಹಿಟ್ನಳ್ಳಿ, ಮನಗೂಳಿ, ಯರನಾಳ ಗ್ರಾಮಗಳಲ್ಲಿ ಜಾಥಾ ಹಾದು ಹೋಗುವಾಗ ಕಿರು ನಾಟಕ ಪ್ರದರ್ಶಿಸಿ, ಗ್ರಾಮೀಣರ ಗಮನ ಸೆಳೆದರು. ಇಲಾಖೆಯ ಟಪಾಲು, ಬ್ಯಾಂಕಿಂಗ್, ವಿಮಾ ಸೇವೆ, ಸುಕನ್ಯಾ ಸಮೃದ್ಧಿ, ಅಟಲ್‌ ಪಿಂಚಣಿ ಯೋಜನೆ ಸೇರಿದಂತೆ ವಿವಿಧ ಸೇವೆಗಳ ಕುರಿತು ಮಾಹಿತಿ ನೀಡಿದರು.

‘ದೇಶದಾದ್ಯಂತ 1.55 ಲಕ್ಷ ಅಂಚೆ ಕಚೇರಿಗಳ ಮೂಲಕ ಜನರ ಮನೆ ಬಾಗಿಲಿಗೆ ಸೇವೆಗಳನ್ನು ಒದಗಿಸಲಾಗುತ್ತಿದೆ. ಅಂಚೆ ಸೇವೆಗಳ ಬಗ್ಗೆ ಮತ್ತಷ್ಟು ಮಾಹಿತಿ ನೀಡುವುದಕ್ಕಾಗಿ ಈ ಜಾಥಾ ಆಯೋಜನೆ ಮಾಡಲಾಗಿದೆ. ಜಿಲ್ಲೆಯ ಅಂಚೆ ಇಲಾಖೆ ನೌಕರರು, ಗ್ರಾಮೀಣ ಅಂಚೆ ನೌಕರರು ಸಾಮೂಹಿಕವಾಗಿ ಸೈಕಲ್ ಜಾಥಾ ನಡೆಸಿದ್ದು ಖುಷಿ ತಂದಿತು. ಈ ರೀತಿ ಜಾಗೃತಿ ಮೂಡಿಸುವುದರಿಂದ ಜನರಿಗೆ ಇಲಾಖೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದಂತಾಗಿದೆ’ ಎಂದು ವಿಜಯಪುರ ಅಂಚೆ ಅಧೀಕ್ಷಕ ಮಹಾದೇವಪ್ಪ ಕರಬುಚೆ, ಸಹಾಯಕ ಅಂಚೆ ಅಧೀಕ್ಷಕ ಎಂ.ಬಿ.ಪಾಟೀಲ, ಕೆ.ಎಂ.ಗಜೇಂದ್ರ ತಿಳಿಸಿದರು.

ವಿಜಯಪುರದಿಂದ ಬಸವನಬಾಗೇವಾಡಿಗೆ ಬಂದ ಸೈಕಲ್ ಜಾಥಾಕ್ಕೆ ಸಂಭ್ರಮದ ಸ್ವಾಗತ ಸಿಕ್ಕಿತು. ಬಸವಜನ್ಮ ಸ್ಮಾರಕದಲ್ಲಿ ಜರುಗಿದ ಜಾಥಾದ ಸಮಾರೋಪದಲ್ಲಿ ಸುಕನ್ಯಾ ಸಮೃದ್ಧಿ, ಗ್ರಾಮೀಣ ಅಂಚೆ ಜೀವ ವಿಮೆ ಯೋಜನೆಗಳ ಫಲಾನುಭವಿಗಳನ್ನು ಹಾಗೂ ಸೈಕಲ್ ಸವಾರರನ್ನು ಸನ್ಮಾನಿಸಲಾಯಿತು.

ಜಾಥಾದಲ್ಲಿ ಅಂಚೆ ನಿರೀಕ್ಷಕರಾದ ಎಂ.ಎಲ್.ಬಾಗವಾನ, ಸಿ.ಕೆ.ಚವ್ಹಾಣ, ಎಸ್.ಎಸ್.ಕಾಸೆ, ಎಸ್.ಬಿ.ಪಾಟೀಲ, ಐ.ಎನ್.ಬಿದರಕುಂದಿ, ನಿಂಗಣ್ಣ ಹೆಬ್ಬಾಳ, ಮಡಿವಾಳಯ್ಯ ಹಿರೇಮಠ, ಪಿ.ಟಿ.ಕಬಾಡೆ ಸೇರಿದಂತೆ 60ಕ್ಕೂ ಹೆಚ್ಚು ಉದ್ಯೋಗಿಗಳು ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !