ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕೀರ್ಣ ಸಮಾಜ ಮತ್ತು ನ್ಯಾಯಾಂಗದ ‘ಚೌಕಟ್ಟು’

Last Updated 20 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಕೇರಳದ ಹಿಂದುತ್ವವಾದಿ ನಾಯಕರಿಗೆ ಏನೋ ಮನೋವಿಕಲ್ಪವಾಗಿರಬೇಕು ಅಥವಾ ಅವರಲ್ಲಿ ಅಪಹಾಸ್ಯದ ವಿನೋದ ಪ್ರವೃತ್ತಿ ಮೈಗೂಡಿಬಿಟ್ಟಿರಬೇಕು. ಇಲ್ಲವೆಂದರೆ, 10ರಿಂದ 50 ವರ್ಷದೊಳಗಿನವರೂ ಸೇರಿದಂತೆ ಎಲ್ಲಾ ಮಹಿಳೆಯರಿಗೂ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಪ್ರವೇಶ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಅವರು ಪ್ರತಿಭಟಿಸುವ ಅಗತ್ಯವಾದರೂ ಏನಿದೆ? ಹಾಗೆ ನೋಡಿದರೆ, ಶಿವ ಹಾಗೂ ವಿಷ್ಣು ದೇವನ ಸ್ತ್ರೀ ರೂಪ ಎನ್ನಲಾದ ಮೋಹಿನಿಯ ಪುತ್ರ ಅಯ್ಯಪ್ಪನ ದರ್ಶನಕ್ಕೆ ಸಂಬಂಧಿಸಿದ ಈ ತೀರ್ಪು ನೀಡಿದ ನ್ಯಾಯಮೂರ್ತಿಗಳನ್ನು ಅವರು ಹೂಗುಚ್ಛ ನೀಡಿ ಅಭಿನಂದಿಸಬೇಕು.

ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠವು 4-1 ಮತಗಳಿಂದ ನೀಡಿರುವ ಈ ತೀರ್ಪು, ಎರಡು ಪೀಳಿಗೆಗಳ ಆರ್‌ಎಸ್ಎಸ್- ಜನಸಂಘ- ಬಿಜೆಪಿ ನಾಯಕರು ನೀಡಲಾಗದ ಕೊಡುಗೆಯನ್ನು ಹಿಂದುತ್ವಕ್ಕೆ ನೀಡಿದೆ. ಹಿಂದುತ್ವವಾದಕ್ಕೆ ಕೇರಳದಲ್ಲಿ ತನ್ನ ನೆಲೆಯನ್ನು ಸೃಷ್ಟಿಸಿಕೊಳ್ಳಲು ಮತ್ತು ರಾಜಕೀಯ ಸಮರ್ಥನೆಯನ್ನು ಇದು ಒದಗಿಸಿಕೊಟ್ಟಿದೆ. ನ್ಯಾಯಾಲಯವು ತಮಗೆ ನೆಲೆಯಿಲ್ಲದ ಪ್ರದೇಶದಲ್ಲಿ ಕ್ರಿಯಾಶೀಲರಾಗುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ.

ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಎದುರಾಳಿ ಪಕ್ಷಗಳು. ಇವುಗಳ ಪೈಕಿ ಯಾವ ಪಕ್ಷ ಬೇಕಾದರೂ ಬಿಜೆಪಿ ಮೈತ್ರಿಕೂಟದ ಜೊತೆ ಸೇರಬಹುದು. ಆದರೆ, ಕೇರಳದ ಪರಿಸ್ಥಿತಿ ಹಾಗಲ್ಲ. ಸಿಪಿಎಂ ಒಳಗೊಂಡ ಎಲ್‌ಡಿಎಫ್‌ ಮೈತ್ರಿಕೂಟ ಮತ್ತು ಕಾಂಗ್ರೆಸ್ ಒಳಗೊಂಡ ಯುಡಿಎಫ್ ಮೈತ್ರಿಕೂಟ ಎರಡಕ್ಕೂ ಬಿಜೆಪಿ ಎಂದರೆ ಅಪಥ್ಯ. ಇಲ್ಲಿ ಆರ್‌ಎಸ್‌ಎಸ್‌ ತನ್ನ ಹೆಜ್ಜೆಯೂರಲು ಶತಾಯಗತಾಯ ಪ್ರಯತ್ನಿಸುತ್ತಿದೆ.

ಇದಕ್ಕಾಗಿ ಆ ಸಂಘಟನೆಯ ಕಾರ್ಯಕರ್ತರು ಎಡಪಕ್ಷದವರ ವಿರುದ್ಧ ರಕ್ತಪಾತ, ಕೊಲೆಯ ಸಂಚಿನ ಪ್ರಕರಣಗಳಲ್ಲಿ ಸೆರೆಯಾಗಿದ್ದಾರೆ. ಇಷ್ಟಾದರೂ ತಿರುವನಂತಪುರದಲ್ಲಿ ಕಾಂಗ್ರೆಸ್ಸಿನ ಶಶಿ ತರೂರ್ ಅವರ ವಿರುದ್ಧ ಅಲ್ಪಮತದ ಮುನ್ನಡೆಯಲ್ಲಿ ಗೆಲುವು ಸಾಧಿಸಿದ್ದನ್ನು ಬಿಟ್ಟರೆ ರಾಜ್ಯದ ಬೇರೆಲ್ಲೂ ಅದಕ್ಕೆ ಹಿಂದೂ ಮತಗಳನ್ನು ತನ್ನೆಡೆಗೆ ಕ್ರೋಡೀಕರಿಸಿಕೊಳ್ಳಲು ಆಗಲಿಲ್ಲ.

ನ್ಯಾಯಾಲಯದ ಈಗಿನ ತೀರ್ಪು ಹಿಂದೂ ಭಾವುಕತೆಗೆ ಸಂಬಂಧಪಟ್ಟಂತೆ ಕೇರಳ ಮತ್ತು ಆರ್‌ಎಸ್‌ಎಸ್‌/ ಬಿಜೆಪಿಗೆ ಮೊದಲನೆಯ ಸಲ ವಿಷಯವೊಂದನ್ನು ಒದಗಿಸಿಕೊಟ್ಟಿದೆ. ಅವು ಈ ಸಂದರ್ಭವನ್ನು ಜನಸಮೂಹದ ಒಲವನ್ನು ತಮ್ಮೆಡೆಗೆ ಸೆಳೆದುಕೊಳ್ಳಲು ಬಳಸಿಕೊಳ್ಳುತ್ತವೋ ಅಥವಾ ಮಲೆಯಾಳಿಗರ ಅನುಮಾನ ಪ್ರವೃತ್ತಿ, ಇದರೊಳಗಿನ ವಾಸ್ತವಾಂಶವನ್ನು ಗ್ರಹಿಸಿ ಮೋಸ ಹೋಗುವುದನ್ನು ತಡೆಯುತ್ತದೆಯೇ? ಕೇರಳದ ವಿಶಿಷ್ಟ ರಾಜಕಾರಣದ ಬಗ್ಗೆ ಹೆಚ್ಚಿನ ಅರಿವು ಹೊಂದಿದವರೊಂದಿಗೆ ಮಾತನಾಡಿದರೆ ಇದನ್ನು ಊಹಿಸಲು ಸಾಧ್ಯವಾದೀತು.

ಅದೇನೇ ಇರಲಿ, ಸದ್ಯದ ಮಟ್ಟಿಗೆ ಹಿಂದುತ್ವದ ಶಕ್ತಿಗಳು ಅಲ್ಲಿ ಪ್ರವೇಶಿಸಿವೆ. ಆರ್‌ಎಸ್‌ಎಸ್‌ ಹಾಗೂ ಅದರ ಬಳಗ ಶಬರಿಮಲೆಯಲ್ಲಿ ರೋಷಾವೇಶದ ಪ್ರತಿಭಟನೆ ನಡೆಸಲು ಕೇರಳ ಮಾತ್ರವಲ್ಲದೆ ಹೊರಗಿನಿಂದಲೂ ಮಹಿಳಾ ಕಾರ್ಯಕರ್ತರನ್ನು ಕರೆಸಿವೆ. ಹೀಗೆ ಬಂದಿರುವ ಬಹುತೇಕರು ಸಂಸ್ಕೃತದ ಪ್ರಭಾವ ಎದ್ದುಕಾಣುವ ಪರಿಶುದ್ಧ ಹಿಂದಿ ಭಾಷೆಯಲ್ಲಿ ಮಾತನಾಡುವುದನ್ನು ನೋಡಿದರೆ, ಅವರೆಲ್ಲಾ ಆರ್‌ಎಸ್‌ಎಸ್‌ ವ್ಯವಸ್ಥೆಯಲ್ಲಿ ಪಳಗಿದವರು ಎಂಬುದು ಯಾರಿಗಾದರೂ ಗೊತ್ತಾಗುತ್ತದೆ.

ಅವರೀಗ ಕೇರಳದಲ್ಲಿ ಪ್ರಬಲವಾಗಿ ಹೋರಾಡುತ್ತಿದ್ದಾರೆ. ಅವರು ಅಲ್ಲಿರಬಾರದು ಎಂಬುದಕ್ಕೆ ಯಾವ ಕಾರಣವೂ ಇಲ್ಲ. ರಾಜಕಾರಣವಾಗಲೀ ಪ್ರಜಾತಾಂತ್ರಿಕ ಪೈಪೋಟಿಯಾಗಲೀ ಎಡಪಕ್ಷಗಳ ಸ್ವತ್ತೇನೂ ಅಲ್ಲ. ಬಲಪಂಥೀಯ ಹಿಂದುತ್ವವಾದಿಗಳಿಗೆ ಕೇರಳಕ್ಕೆ ಸ್ವಾಗತ. ಅದಕ್ಕಾಗಿ ಇದನ್ನು ಆಗುಮಾಡಿಕೊಟ್ಟ ಉದಾರವಾದಿ ನ್ಯಾಯಮೂರ್ತಿಗಳಿಗೆ ಧನ್ಯವಾದಗಳು.

ಕಾನೂನು ಮತ್ತು ಸಂವಿಧಾನ ತತ್ವಗಳನ್ನು ಚಿಕಿತ್ಸಕ ನಿಖರತೆಯೊಂದಿಗೆ ಅನ್ವಯಗೊಳಿಸುವ ಸರ್ವಶಕ್ತ ನ್ಯಾಯಾಂಗ ವ್ಯವಸ್ಥೆಯು ಧಾರ್ಮಿಕ ನಂಬಿಕೆಯ ವಿಷಯಗಳಲ್ಲೂ ಹಸ್ತಕ್ಷೇಪ ಮಾಡಿ ಅವನ್ನು ವ್ಯಾಖ್ಯಾನಿಸಲು ಮುಂದಾದರೆ, ಎಂತೆಂತಹ ಅನಪೇಕ್ಷಿತ ಪರಿಣಾಮಗಳು ಉದ್ಭವವಾಗುತ್ತವೆ ಎಂಬುದಕ್ಕೆ ಶಬರಿಮಲೆ ಪ್ರಕರಣವು ಒಂದು ಪಾಠವಾಗಿದೆ.

ಹೀಗೆ ಮಾಡಲು ಹೊರಟಾಗ ಯಾವುದೇ ಬಗೆಯ ನಂಬಿಕೆಯನ್ನಾದರೂ ವೈಚಾರಿಕ ಮತ್ತು ತರ್ಕಬದ್ಧ ಎಂದು ಪರಿಭಾವಿಸಬೇಕಾಗುತ್ತದೆ. ಇದು ನಿಜವಾಗಿಯೂ ತೊಡಕಿನ ಸಂಗತಿಯಾಗಿದೆ.

ದೇವ-ದೇವತೆಗಳ ದಿವ್ಯ ಅವತಾರಗಳು ವೈಜ್ಞಾನಿಕವೇ? ಒಂದೇ ದೇವ ಅಥವಾ ದೇವತೆಯ ನೂರಾರು ಅವತಾರಗಳು ವೈಜ್ಞಾನಿಕವೇ? ಇದು ಎಷ್ಟು ಸಂಕೀರ್ಣವೆಂದರೆ, ಪ್ರಧಾನಿ ನರೇಂದ್ರ ಮೋದಿ ಅವರ ಸಾಮಾಜಿಕ ಮಾಧ್ಯಮಗಳ ನಿರ್ವಹಣೆಗಾರರು ಕೂಡ ಕಾಳಿಯನ್ನು ದುರ್ಗಾ ದೇವತೆಯೆಂದು ಬಣ್ಣಿಸಿ ಕೈತೊಳೆದುಕೊಳ್ಳುತ್ತಾರೆ. ಅದೇನೇ ಆಗಲಿ ದೇವಿಯು ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಯಾವ ಹೆಸರಿನಿಂದ ಕರೆದರೂ ಅದು ಅದೇ ದೇವತೆಯೇ.

ಆದರೆ ಯಾವುದೇ ದಿವ್ಯ ದೇವಾನುದೇವತೆಗಳ ಬಹುಮುಖಿ ಅವತಾರಗಳನ್ನು ಬೆಂಬಲಿಸಿ ಉತ್ಕೃಷ್ಟ ಸಂಶೋಧನಾ ಪ್ರಬಂಧವನ್ನು ಬರೆಯಲು ಸಾಧ್ಯವೇ? ಅಥವಾ ಕನ್ಯೆ ಶಿಶುವಿಗೆ ಜನ್ಮ ನೀಡುವುದರ ಬಗ್ಗೆ ಹಾಗೆ ಬರೆಯಲಾಗುವುದೇ? ಅಥವಾ ಅಯ್ಯಪ್ಪ ಸ್ವಾಮಿಯು ಶಿವ ಹಾಗೂ ವಿಷ್ಣುವಿನ ಸ್ತ್ರೀ ರೂಪವಾದ ಮೋಹಿನಿಯ ಸಮಾಗಮದಿಂದ ಜನ್ಮ ತಳೆದ ಎಂಬುದರ ಬಗ್ಗೆ ಬರೆಯಬಹುದೇ? ಅಥವಾ ಏಸುಕ್ರಿಸ್ತನ ಪುನರುತ್ಥಾನದ ಬಗ್ಗೆ ಬರೆಯಬಹುದೇ?

ಒಂದೊಮ್ಮೆ ಅಲ್ಲಾಹುವು ಪ್ರವಾದಿಗೆ ಹೇಳಿದ ಹಿತವಚನವೇ ಪವಿತ್ರ ಕುರಾನ್ ಎಂಬುದಾದರೆ, ನ್ಯಾಯಾಲಯವು ಅದಕ್ಕೆ ಸಾಕ್ಷ್ಯಗಳನ್ನು ಕೇಳಲು ಸಾಧ್ಯವೇ ಅಥವಾ, ಹಲವಾರು ಬುಡಕಟ್ಟು ನಂಬಿಕೆಗಳು, ಸೂರ್ಯಚಂದ್ರರ ಪೂಜೆ, ಬಲಿ ನೀಡುವ ಪದ್ಧತಿಗಳ ಬಗ್ಗೆ ಸಂಶೋಧನಾ ಪ್ರಬಂಧ ಬರೆಯಲು ಸಾಧ್ಯವೇ?

ನಮ್ಮದು ಅಸಂಖ್ಯಾತ ಬಗೆಯ ನಿಷ್ಠೆಗಳು, ನಂಬಿಕೆಗಳು ಮತ್ತು ಆಚರಣೆಗಳು ಪರಸ್ಪರ ಹೆಣೆದುಕೊಂಡಿರುವ ಸಂಕೀರ್ಣ ಸಮಾಜವಾಗಿದೆ. ಒಂದು ಮರಕ್ಕೋ ಅಥವಾ ಬಂಡೆಗೋ ಯಾರಾದರೂ ಸುಣ್ಣವನ್ನೋ ಅಥವಾ ಕೇಸರಿ ಬಣ್ಣವನ್ನೋ ಹಚ್ಚಿಬಿಟ್ಟರೆ ಅಥವಾ ಅನಾಥ ಗೋರಿಯೊಂದರ ಮೇಲೆ ಒಂದೆರಡು ಕಲ್ನಾರು ಶೀಟುಗಳನ್ನು ಹಾಕಿಬಿಟ್ಟರೆ ಅಸಂಖ್ಯಾತ ಜನ ಅದನ್ನು ಪೂಜಿಸತೊಡಗುತ್ತಾರೆ.

ನ್ಯಾಯಾಲಯವು ಈ ಸಂಬಂಧದ ಪ್ರಶ್ನೆಗಳನ್ನು ಉತ್ತೇಜಿಸುತ್ತದೆಯೇನು? ಚರ್ಚಿನ ಧಾರ್ಮಿಕ ಮಂಡಳಿಯಲ್ಲಿ ಮಹಿಳೆಯರಿಗೂ ಸಮಾನ ಹಕ್ಕುಗಳು ಮತ್ತು ಸ್ಥಾನಮಾನಗಳನ್ನು ನೀಡಬೇಕೆಂದು ಆದೇಶಿಸಲು ಕೋರಿ ಕ್ರೈಸ್ತ ಮಹಿಳೆಯೊಬ್ಬರು ಸುಪ್ರೀಂ ಕೋರ್ಟ್ ಕದ ತಟ್ಟಲು ಸಾಧ್ಯವೇ? ಕ್ರೈಸ್ತ ಪಾದ್ರಿಗಳ ಆಯ್ಕೆಗಾಗಿ ಯುಪಿಎಸ್‌ಸಿ ರೀತಿಯ ಸಂಸ್ಥೆಯನ್ನು ರಚಿಸಬೇಕು ಎಂದು ಕೇಳಲಾಗುವುದೇ? ಪುರುಷರಿಂದಲೇ ತುಂಬಿರುವ ಆರ್‌ಎಸ್‌ಎಸ್‌ನ ವರಿಷ್ಠ ಸಮಿತಿಗಳಿಗೆ ಮಹಿಳೆಯರಿಗೂ ಪ್ರವೇಶ ನೀಡಲು ಆದೇಶಿಸಬೇಕೆಂದು ಹಿಂದೂ ಮಹಿಳೆಯೊಬ್ಬರು ನ್ಯಾಯಮೂರ್ತಿಗಳನ್ನು ಕೇಳಲು ಸಾಧ್ಯವೇ? ಆರ್‌ಎಸ್‌ಎಸ್‌ನ ‘ಸರಸಂಘಚಾಲಿಕಾ’ ಆಗಿ ಮಹಿಳೆಯೊಬ್ಬರು ನೇಮಕಗೊಂಡರೆ ಅದು ತುಂಬಾ ಖುಷಿಯ ಸಂಗತಿ ಎಂಬುದರಲ್ಲಿ ಎರಡನೇ ಮಾತಿಲ್ಲ. ಮುಂದೊಮ್ಮೆ ಅಂತಹ ದಿನವೂ ಬರಬಹುದು. ಆದರೆ, ಅದು ಯಾವುದೇ ನ್ಯಾಯಾಲಯದ ಆದೇಶದಿಂದ ಆಗುವಂಥದ್ದಲ್ಲ ಎಂಬುದು ನಿಶ್ಚಿತ.

ನಾವು ಒಂದು ಜನಸಮೂಹವಾಗಿ ಶಾಂತಿಯುತವಾಗಿ ಸೌಹಾರ್ದದಿಂದ ಬದುಕಲು ಸಾಧ್ಯವಾಗಿರುವುದಕ್ಕೆ, ನಾವು ನಮ್ಮ ನೆರೆಹೊರೆಯವರನ್ನು ನಮ್ಮಂತೆಯೇ ಇರಲು ಬಿಡುವುದೇ ಕಾರಣವಾಗಿದೆ. ನಮ್ಮ ಸರ್ಕಾರಗಳು ಧಾರ್ಮಿಕ ನಿಷ್ಠೆ-ನಂಬಿಕೆಗಳ ವಿಷಯದಲ್ಲಿ ಮಧ್ಯಪ್ರವೇಶಿಸುವುದು ತುಂಬಾ ಕಡಿಮೆ.

ಹಿಂದೂ ಸಂಹಿತೆ ಮಸೂದೆಯು ಸುದೀರ್ಘ ಚರ್ಚೆಯ ನಂತರ ಕೂಡ ಇನ್ನೂ ವಿವಾದಾಸ್ಪದವಾಗಿಯೇ ಅಸ್ತಿತ್ವ ಉಳಿಸಿಕೊಂಡಿದೆ. ಪೀಳಿಗೆಗಳ ನಂತರವೂ ಸುಪ್ರೀಂ ಕೋರ್ಟ್ ಮಾಡಲಾಗದ ಹಿಂದೂ ವೈಯಕ್ತಿಕ ಕಾನೂನುಗಳು ಮತ್ತು ಆಚರಣೆಗಳ ಸುಧಾರಣೆಯನ್ನು ಜವಾಹರಲಾಲ್ ನೆಹರೂ ಅವರು ಸದನದ ಚರ್ಚೆ ಮತ್ತು ಬಹುಮತದೊಂದಿಗೆ ಜಾರಿಗೊಳಿಸಿದ್ದಾರೆ ಎಂದು ನಾನು ವಿನಮ್ರತೆಯೊಂದಿಗೆ ಹೇಳಲು ಬಯಸುತ್ತೇನೆ.

ಶಾಬಾನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ನಮ್ಮ ಸಂಸತ್ತು ಒಪ್ಪಿಕೊಂಡಿರಲಿಲ್ಲ. ಈಗ ಅದೇ ನ್ಯಾಯಾಲಯ ತ್ರಿವಳಿ ತಲಾಖ್ ಅನ್ನು ಅಕ್ರಮ ಎಂದು ತೀರ್ಪಿತ್ತಿದ್ದು, ಆಡಳಿತಾರೂಢ ಪಕ್ಷದ ರಾಜಕಾರಣ ಈಗ ಬೇರೆಯಾಗಿರುವುದರಿಂದ ಅದು ಈ ತಲಾಖ್ ಪದ್ಧತಿಯನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಿದೆ.

ಆದರೆ ಇದಕ್ಕಾಗಿ ನಮ್ಮ ಒಕ್ಕೂಟದ ಯಾವುದಾದರೂ ರಾಜ್ಯದಲ್ಲಿ ಪೊಲೀಸರು ಮನೆಗಳನ್ನು ಹೊಕ್ಕು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುತ್ತಿರುವುದನ್ನು ನೋಡಿದ್ದೀರಾ? ಈಗಾಗಲೇ ಸ್ವಯಂ ದಿಗ್ಬಂಧನದಿಂದಾಗಿ ಅಭದ್ರತೆಯಲ್ಲಿ ತೊಳಲಾಡುತ್ತಿರುವ ಸಮುದಾಯದಲ್ಲಿ ಇದು ಎಂತಹ ಹಿಂಸಾತ್ಮಕ ಘಟನೆಗಳಿಗೆ ಕಾರಣವಾಗಬಹುದು ಎಂಬುದನ್ನು ಊಹಿಸಲು ಸಾಧ್ಯವೇ? ತ್ರಿವಳಿ ತಲಾಖ್ ಎಂಬುದು ಮಧ್ಯಕಾಲೀನ ಯುಗದ ಭಯಾನಕ ಪದ್ಧತಿ ಎಂಬುದು ನಿಜವೇ. ಹಲವಾರು ಇಸ್ಲಾಂ ರಾಷ್ಟ್ರಗಳು ಮತ್ತು ಸಮಾಜಗಳು ಇದನ್ನು ತಿರಸ್ಕರಿಸಿವೆ.

ಭಾರತದ ಮುಸ್ಲಿಮರೂ ಇದನ್ನು ಅನುಸರಿಸಬೇಕಿದೆ. ಆದರೆ, ಈ ಒತ್ತಡವು ವ್ಯವಸ್ಥೆಯೊಳಗಿನ ಸುಧಾರಣೆಗಳಿಂದ ಮೂಡಿಬರಬೇಕೇ ಹೊರತು ‘ಉದಾರವಾದಿ’ ನ್ಯಾಯಾಲಯಗಳು ಪೊರೆದ ‘ಕ್ರಿಮಿನಲ್ ಅಪರಾಧ’ವೆಂಬ ಅಸ್ತ್ರ ಹಿಡಿದು ಹೊರಡುವ ಪೊಲೀಸರಿಂದ ಜಾರಿಗೊಳ್ಳಬಾರದು.

ಶಬರಿಮಲೆ ಪ್ರಕರಣದಲ್ಲಿ ನ್ಯಾಯಾಲಯ ನೀಡಿರುವ ತೀರ್ಪು ವೈಯಕ್ತಿಕ ಸ್ವಾತಂತ್ರ್ಯದ ಸಮರ್ಥನೆಗೆ ಸಂಬಂಧಿಸಿದ್ದು ಎಂಬುದು ನಮಗೆ ಅರ್ಥವಾಗುತ್ತದೆ. ಸಂತಾನೋತ್ಪತ್ತಿ ಸಾಮರ್ಥ್ಯವಿರುವ ಮಹಿಳೆಯರು (10ರಿಂದ 50ರೊಳಗಿನ ವಯೋಮಾನದವರು) ಪುರುಷರ ಮನಸ್ಸನ್ನು ಚಂಚಲವಾಗಿಸಬಲ್ಲರು ಎಂಬ ಕಾರಣಕ್ಕೆ ತಮ್ಮ ನೆಚ್ಚಿನ ದೈವವನ್ನು ಪೂಜಿಸುವ ಹಕ್ಕನ್ನು ಅವರಿಗೆ ನಿರಾಕರಿಸುವುದಾದರೂ ಹೇಗೆ ಸಾಧ್ಯ? ಹೀಗೆ ಪ್ರಶ್ನಿಸಿ ತೀರ್ಪು ನೀಡುವ ಮೂಲಕ ನ್ಯಾಯಾಲಯವು ಸಮಾನತೆಯನ್ನು ಪ್ರತಿಪಾದಿಸಿ, ಪತ್ರಿಕೆಗಳ ಸಂಪಾದಕೀಯ ಬರಹಗಾರರು ಮತ್ತು ಪ್ರಚಾರಪ್ರಿಯ ವಿಶ್ಲೇಷಕ ಕಾರ್ಯಕರ್ತರ ಮೆಚ್ಚುಗೆಗೆ ಪಾತ್ರವಾಗಬಹುದು.

ಆದರೆ, ನಮ್ಮ ರಾಷ್ಟ್ರದಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಾಗದ ನ್ಯಾಯಾಲಯದ ತೀರ್ಪುಗಳ ಬಗ್ಗೆ ಒಂದಾದರೂ ಸಂಶೋಧನಾ ಪ್ರಬಂಧ ಮಂಡನೆ ಆಗಿದೆಯೇ? ಉದಾಹರಣೆಯೊಂದನ್ನು ನೋಡೋಣ. ನಮ್ಮಲ್ಲಿ ದ್ವಿಚಕ್ರ ವಾಹನ ಚಾಲನೆ ಮಾಡುವ ಎಲ್ಲಾ ಮಹಿಳೆಯರಿಗೆ ಹೆಲ್ಮೆಟ್ ಧರಿಸುವಿಕೆ ಕಡ್ಡಾಯ ಎಂದು ನ್ಯಾಯಾಲಯ ಪದೇಪದೇ ಆದೇಶ ಹೊರಡಿಸಿರುವುದನ್ನು ನೋಡಿದ್ದೇವೆ. ಯಾವುದೇ ಬಗೆಯ ಧಾರ್ಮಿಕ ನಿಷ್ಠೆ ಹೊಂದಿರುವವರಿಗೂ ಅನ್ವಯವಾಗುವ ಈ ಆದೇಶವನ್ನು ಸಿಖ್ಖರ ಪ್ರತಿಭಟನೆಯಿಂದಾಗಿ ಅನುಷ್ಠಾನಗೊಳಿಸಲಾಗುತ್ತಿಲ್ಲ.

ಆದರೆ, ಸಂವೇದನಾಶೀಲ ಸಿಖ್ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹೆಲ್ಮೆಟ್ ಬಳಸುತ್ತಿದ್ದು, ಯಾರೇ ಆಗಲಿ ಅವರನ್ನು ತಡೆಯಲು ಮುಂದಾಗಿಲ್ಲ. ಗುಲ್ ಪನಾಗ್ ಅವರು ಹೆಲ್ಮೆಟ್ ಧರಿಸದೆ ಬೈಕಿಂಗ್ ಇಷ್ಟಪಡುತ್ತಾರೆ ಎಂದು ನನಗೆ ಅನ್ನಿಸುತ್ತಿಲ್ಲ. ಇದಕ್ಕಾಗಿ ಅವರು ಯಾವ ನ್ಯಾಯಾಲಯದ ಆದೇಶಕ್ಕೂ ಕಾದು ಕುಳಿತಿಲ್ಲ. ಸಂಪ್ರದಾಯನಿಷ್ಠ ನಿಷೇಧಗಳ ಬಗ್ಗೆಯೂ ಅವರು ತಲೆಕೆಡಿಸಿಕೊಂಡಿಲ್ಲ. ಹೆಚ್ಚೆಚ್ಚು ಸಿಖ್ ಮಹಿಳೆಯರು ಇದನ್ನು ತಮ್ಮ ಒಳಿತಿಗಾಗಿ ಸ್ವಯಂ ವಿವೇಚನೆಯಿಂದ ಅನುಸರಿಸುತ್ತಿದ್ದಾರೆಯೇ ಹೊರತು ಇದರಲ್ಲಿ ಯಾರ ಒತ್ತಾಯವೂ ಇಲ್ಲ.

ಈಗ ಇದೇ ನ್ಯಾಯಾಲಯವು, ಕೆಲವು ಮುಸ್ಲಿಂ ಪಂಗಡಗಳಲ್ಲಿ ಆಚರಣೆಯಲ್ಲಿರುವ ಮಹಿಳಾ ಜನನಾಂಗ ಸುನ್ನತಿಯ ಬಗ್ಗೆ ವಿಚಾರಣೆ ನಡೆಸುತ್ತಿದೆ. ನ್ಯಾಯಾಲಯವು ಇದನ್ನು ಕಾನೂನುಬಾಹಿರ ಎಂದು ತೀರ್ಪು ಪ್ರಕಟಿಸಬಹುದು. ಆದರೆ, ಆ ಆದೇಶವನ್ನು ಅನುಷ್ಠಾನಗೊಳಿಸಲು ಸಾಧ್ಯವೇ? ಈ ಪಂಗಡದವರು ಅಧಿಕ ಸಂಖ್ಯೆಯಲ್ಲಿರುವ ಬಿಜೆಪಿ ಆಡಳಿತಾರೂಢ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳು ಕೂಡ, ಇದನ್ನು ಆಚರಿಸುವವರ ವಿರುದ್ಧ ಪೊಲೀಸರ ನೆರವಿನಿಂದ ಕ್ರಮ ಕೈಗೊಳ್ಳಲು ನಿರಾಕರಿಸುತ್ತವೆ ಎಂಬುದು ಖಡಾಖಂಡಿತ.

ಕೆಲವೊಮ್ಮೆ ರಾಜಕಾರಣಿಗಳು ನ್ಯಾಯಾಧೀಶರಿಗಿಂತ ಜಾಣರು ಎಂಬುದರಲ್ಲಿ ಸಂಶಯವೇ ಇಲ್ಲ. ತ್ರಿವಳಿ ತಲಾಖ್ ಬಗ್ಗೆ ಖಡಕ್ ಆಗಿದ್ದ ನರೇಂದ್ರ ಮೋದಿ ಅವರಾಗಲೀ ಮತ್ತು ಅವರ ಸರ್ಕಾರವಾಗಲೀ ಈಗ ಮಹಿಳಾ ಸುನ್ನತಿಯ ವಿಷಯದಲ್ಲಿ ತುಟಿಪಿಟಕ್ಕೆನ್ನುತ್ತಿಲ್ಲ. ಆದೇಶವನ್ನು ಅನುಷ್ಠಾನಗೊಳಿಸಲು ಸಾಧ್ಯವಾಗದು ಎಂದು ರಾಜ್ಯ ಸರ್ಕಾರ ಹೇಳಿಕೆ ನೀಡಿದ್ದರಿಂದ, ವಾರಾಣಸಿಯ ಸ್ಮಶಾನ ವಿವಾದಕ್ಕೆ ಸಂಬಂಧಪಟ್ಟಂತೆ ಶಿಯಾ- ಸುನ್ನಿಗಳ ನಡುವಿನ ಪ್ರಕರಣವೊಂದರಲ್ಲಿ ತಾನು 40 ವರ್ಷಗಳ ಹಿಂದೆ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟೇ ಇತ್ತೀಚೆಗೆ ತಡೆ ನೀಡಿರುವುದು ಇಲ್ಲಿ ಉಲ್ಲೇಖಾರ್ಹ.

‘ಅನುಕೂಲಸಿಂಧು ರಾಜಕಾರಣ’ದ ತಾತ್ವಿಕತೆಯನ್ನು ಆಧರಿಸಿ ಯಾವುದೇ ವಿವಾದಾಸ್ಪದ ವಿಷಯದ ಕುರಿತು ರೂಢಿಗತವಲ್ಲದ ಭಿನ್ನ ದೃಷ್ಟಿ ಹೊಂದುವುದರ ಅಪಾಯವೇನೆಂದರೆ, ಅದು ತಪ್ಪು ವ್ಯಾಖ್ಯಾನಕ್ಕೆ ಒಳಗಾಗುತ್ತದೆ. ಆದ್ದರಿಂದ, ನಾನೀಗ ದುರುಪಯೋಗಕ್ಕೆ ಆಸ್ಪದವಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಬಾರದೇ? ಖಂಡಿತವಾಗಿಯೂ ಅವರಿಗೆ ಪ್ರವೇಶ ನೀಡಬೇಕು ಎಂಬುದೇ ನನ್ನ ಖಚಿತ ಅಭಿಮತವಾಗಿದೆ.

ಸಿಖ್ ಮಹಿಳೆಯರು ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಾಡಬೇಕೇ? ‘ಇಲ್ಲ’ ಎಂಬುದೇ ನನ್ನ ದೃಢ ಉತ್ತರ. ತ್ರಿವಳಿ ತಲಾಖ್? ಸ್ತ್ರೀ ಸುನ್ನತಿಯ ಕಂದಾಚರಣೆಯಂತೆ ಇದು ಕೂಡ ಮುಸಲ್ಮಾನ ಮಹಿಳೆಯರಿಗೆ ಮಾಡುವ ಘೋರ ಅನ್ಯಾಯವೇ ಸರಿ. ಇವೆಲ್ಲವೂ ಮೂಲೋತ್ಪಾಟನೆ ಆಗಬೇಕು. ಆದರೆ, ಇವೆಲ್ಲವೂ ಸಮುದಾಯದ ಒಳಗಿನ ಸಾಮಾಜಿಕ ಮತ್ತು ರಾಜಕೀಯ ಸುಧಾರಣೆಗಳಿಂದ ಹೊರಹೊಮ್ಮಬೇಕು.

ಎಲ್ಲಾ ಸಮಸ್ಯೆಗಳನ್ನು ನ್ಯಾಯಾಲಯದ ಮಧ್ಯಪ್ರವೇಶದಿಂದಲೇ ಬಗೆಹರಿಸಲು ಸಾಧ್ಯವೇ? ‘ಇದು ಸಾಧ್ಯವಿಲ್ಲ’ ಎಂದು ಗೌರವದಿಂದಲೇ ದೃಢವಾಗಿ ಹೇಳಬಯಸುತ್ತೇನೆ. ಇದರಿಂದ ಅನಿರೀಕ್ಷಿತ ದುಷ್ಪರಿಣಾಮಗಳು ಉಂಟಾಗುತ್ತವೆ. ಇದೀಗ ನ್ಯಾಯಾಲಯ ಸಮಭಾವದ ಜಗತ್ತನ್ನು ಕಾಣಬಯಸಿ ನೀಡಿರುವ ತೀರ್ಪು, ನೈತಿಕ ಅಥವಾ ಆಧ್ಯಾತ್ಮಿಕ ಕಾರಣದಷ್ಟೇ ರಾಜಕೀಯ ಕಾರಣಕ್ಕಾಗಿ ಕೇರಳದಲ್ಲಿ ಬಿಜೆಪಿ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿರುವಂತೆ.

ಲೇಖಕ: ‘ದಿ ಪ್ರಿಂಟ್‌’ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT