ಶುಕ್ರವಾರ, ಮೇ 29, 2020
27 °C

ರಫೇಲ್ ಡೀಲ್‌: ಮಹಾನ್ ‘ಮೂರ್ಖ ಹಗರಣ’ದಲ್ಲಿ ಅಹಂಕಾರದ ಸರಣಿ

ಶೇಖರ್‌ ಗುಪ್ತ Updated:

ಅಕ್ಷರ ಗಾತ್ರ : | |

ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದವು ಬೃಹತ್ ಹಗರಣ ಎನ್ನಲು ಸಾಕುಬೇಕಾದಷ್ಟು ಪುರಾವೆಗಳು ಈಗ ಬಹಿರಂಗಗೊಂಡಿವೆ. ಅದನ್ನು ಹೊರತುಪಡಿಸಿದರೆ ಈ ‘ಹಗರಣ’ವನ್ನು ‘ಮೂರ್ಖತನ’ ಎನ್ನಬಹುದು.

ಒಂದೊಮ್ಮೆ ‘ಮೂರ್ಖತನ’ ಎನ್ನುವುದು ತುಂಬಾ ಕಠೋರ ಎನ್ನಿಸಿದ್ದೇ ಆದರೆ, ಪ್ರಜಾತಾಂತ್ರಿಕ ರಾಷ್ಟ್ರಗಳೆರಡರ ನಡುವಿನ ಗೋಪ್ಯತೆಯ ಪರಿಚ್ಛೇದವನ್ನು ಮುಂದಿಟ್ಟುಕೊಂಡು, 10 ಶತಕೋಟಿ ಡಾಲರ್‌ಗಳ ಒಪ್ಪಂದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗೆ ಉತ್ತರಿಸಲು ಸರ್ಕಾರ ನಿರಾಕರಿಸುತ್ತಿರುವ ವೈಖರಿಗೆ ಬೇರೆ ಯಾವುದಾದರೂ ಸೌಮ್ಯವಾದ ಪದವನ್ನು ಆಯ್ಕೆ ಮಾಡಿಕೊಳ್ಳಬಹುದು. ಅಥವಾ ದಿನದಿಂದ ದಿನಕ್ಕೆ ಪ್ರಹಸನವಾಗುತ್ತಿರುವ ವಿವರಣೆಗಳನ್ನು ನೀಡಬಹುದು.

ಇವತ್ತಿನ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ಯುದ್ಧಾಸ್ತ್ರಗಳು ಮತ್ತು ಅವುಗಳ ಬಿಡಿಭಾಗಗಳ ವಿಷಯ ಯಾವುದೂ ರಹಸ್ಯವಾಗಿ ಉಳಿದಿಲ್ಲ. ರಫೇಲ್ ವಿಮಾನದೊಟ್ಟಿಗೆ ಬಳಸಲು ನೀವು ಮೀಟಿಯೋರ್ ಕ್ಷಿಪಣಿಯನ್ನೂ ಖರೀದಿಸಬೇಕೆಂದರೆ ಅದರ ಬಗ್ಗೆ ಪಾಕಿಸ್ತಾನ ಮತ್ತು ಚೀನಾ ವಾಯುಪಡೆಗಳಿಂದ ಪಾಠ ಹೇಳಿಸಿಕೊಳ್ಳಬೇಕಿಲ್ಲ; ಸ್ಮಾರ್ಟ್ ಫೋನ್ ಇರುವ ಯಾವುದೇ ಒಬ್ಬ ಹದಿಹರೆಯದ ಯೋಧ ಇದರ ಬಗ್ಗೆ ಸಾಕಷ್ಟು ಮಾಹಿತಿ ನೀಡಬಲ್ಲ. ಇದರಲ್ಲಿ ಬಳಸಿರುವ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಗಾರಿಕೆ ಕುರಿತಷ್ಟೇ ಗೋಪ್ಯತೆ ಕಾಪಾಡಿಕೊಳ್ಳಬಹುದು ಹಾಗೂ ಕಾಪಾಡಿಕೊಳ್ಳಬೇಕು. ಇಂದು ಪೈಲಟ್ ಬಳಸುವ ಇಸ್ರೇಲಿ ನಿರ್ಮಿತ 360 ಡಿಗ್ರಿ ಕೋನದ ಹೆಲ್ಮೆಟ್ ಬಗ್ಗೆ ಕೂಡ ಸೇನಾ ಸಾಹಿತ್ಯದಲ್ಲಿ ಮುಕ್ತವಾಗಿ ಚರ್ಚೆ ನಡೆಯುತ್ತದೆ. ಹಾಗೆ ಸಾರ್ವಜನಿಕವಾಗಿ ಚರ್ಚಿಸುವುದರಿಂದ ಯಾವುದೇ ಹಾನಿಯೂ ಇಲ್ಲ; ಅದನ್ನು ಬಚ್ಚಿಡಲು ಕಾರಣಗಳೂ ಇಲ್ಲ. ‘ರಕ್ಷಣಾ ಒಪ್ಪಂದಕ್ಕೆ ಸಂಬಂಧಿಸಿದಂತೆ ನಮ್ಮನ್ನು ಪ್ರಶ್ನಿಸುವ ಧೈರ್ಯ ಅದ್ಯಾರಿಗಿದೆ? ನಾವು ಬೊಫೋರ್ಸ್ ದಶಕದ ಅವಧಿಯ ಕಾಂಗ್ರೆಸ್ಸಿನಂತೇನು?’ ಎಂಬ ಅಹಂಕಾರವನ್ನು ಹೊರತುಪಡಿಸಿದರೆ ಬೇರೆ ಯಾವ ಕಾರಣವೂ ಇಲ್ಲ.

ಬೊಫೋರ್ಸ್ ಹಗರಣದ ನಂತರ ಬೃಹತ್ ರಕ್ಷಣಾ ಸಾಮಗ್ರಿ ಖರೀದಿಸುವ ಸರ್ಕಾರಕ್ಕೆ ಲೂಟಿಕೋರ ಎಂಬ ಹಣೆಪಟ್ಟಿ ಅಂಟಿಕೊಳ್ಳುವುದು ನಿರೀಕ್ಷಿತ ಎಂಬುದು ಬಿಜೆಪಿಗೆ ಈಗ ಅರಿವಿಗೆ ಬರುತ್ತಿರಬಹುದು. ಅದು ಈ ಸಮಸ್ಯೆಯನ್ನು ಈ ಮುಂದಿನ ಯಾವುದೇ ಒಂದು ವಿಧದಲ್ಲಿ ನಿರ್ವಹಿಸಬಹುದು. ಮೊದಲನೆಯದು, ಎ.ಕೆ. ಆಂಟನಿ ಮಾರ್ಗ: ಎಲ್ಲಾ ಖಾಸಗಿ ಜಾಗತಿಕ ಶಸ್ತ್ರಾಸ್ತ್ರ ತಯಾರಿಕಾ ಕಂಪನಿಗಳೊಂದಿಗೆ ವ್ಯವಹಾರ ನಿಷೇಧಿಸಿ ಹಾಗೂ ಏನನ್ನೂ ಖರೀದಿಸುವ ಉಸಾಬರಿಗೆ ಹೋಗಬೇಡಿ. ದರ ಹಾಗೂ ಸ್ಪರ್ಧಾತ್ಮಕತೆಗೆ ಸಂಬಂಧಿಸಿದಂತೆ ಯಾವುದೇ ಪಾರದರ್ಶಕತೆ ಹೊಂದಿರದ ರಷ್ಯಾ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡು ಒಂದಷ್ಟು ಖರೀದಿ ಹಾಗೂ ಅಮೆರಿಕದಿಂದ ಪ್ರಾಣಾಂತಿಕವಲ್ಲದ ಕೆಲವು ವ್ಯವಸ್ಥೆಗಳನ್ನು ಖರೀದಿಸಿದ್ದನ್ನು ಬಿಟ್ಟರೆ ಇವರ ಅವಧಿಯಲ್ಲಿ ಬೇರೇನೂ ಆಗಲಿಲ್ಲ. ಎರಡನೆಯದಾಗಿ, ಪಾರದರ್ಶಕ ವಿಧಾನವನ್ನು ಅಳವಡಿಸಿಕೊಳ್ಳಿ; ಧೈರ್ಯ ಮಾಡಿ ಖರೀದಿಸಿ; ಆದರೆ, ಇದರಿಂದ ಉದ್ಭವಿಸಿಯೇ ತೀರುವ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಾಗಿರಿ. ಮೂರನೆಯದು, ರಕ್ಷಣೆಗೆ ಸಂಬಂಧಿಸಿದ ಸಂಪುಟ ಉಪಸಮಿತಿಯಂತಹ ‘ಬೋರು ಹೊಡೆಸುವ’ ವಿಧಿವಿಧಾನಗಳನ್ನೆಲ್ಲಾ ಉಪೇಕ್ಷಿಸಿ ಸರ್ವಾಧಿಕಾರಿಯಂತೆ ಖರೀದಿಸಿ; ವಿದೇಶಕ್ಕೆ ಭೇಟಿ ನೀಡಿದಾಗ ಮಾಧ್ಯಮಗಳಲ್ಲಿ ಹೆಡ್ ಲೈನ್ ಸುದ್ದಿಯಾಗುವಂತೆ ನೋಡಿಕೊಳ್ಳಿ ಹಾಗೂ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ತಿರಸ್ಕಾರದಿಂದ ನಿರಾಕರಿಸಿ. ಇದು ಅಹಂಕಾರದಿಂದ ಕೂಡಿದ ಮೂರ್ಖತನದ ಸರಣಿಯಾಗಿ, ಮೋದಿ ಅವರ ಸರ್ಕಾರವು ತನ್ನಷ್ಟಕ್ಕೆ ತಾನೇ ಹೇಗೆ ಗುಂಡಿ ತೋಡಿಕೊಂಡಿದೆ ಎಂಬುದನ್ನು ತೋರಿಸುತ್ತದೆ.

ಈ ವಿಷಯದಲ್ಲಿ ಕೇಂದ್ರ ಸರ್ಕಾರವು ದಿನೇದಿನೇ ತಾನೇ ಗುಂಡಿಯನ್ನು ಆಳಗೊಳಿಸಿಕೊಳ್ಳುತ್ತಿದೆ. 126 ರಫೇಲ್ ವಿಮಾನಗಳ ಪೈಕಿ 108 ವಿಮಾನಗಳನ್ನು ನಮ್ಮ ಸಾರ್ವಜನಿಕ ಸ್ವಾಮ್ಯದ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ತಯಾರಿಸಬೇಕೆಂಬ ಮೊದಲಿನ ಒಪ್ಪಂದ ಕೈಬಿಡಲು ಎಚ್ಎಎಲ್ ಬಳಿ ಮೂಲಸೌಕರ್ಯ ಇಲ್ಲದಿದ್ದುದೇ ಕಾರಣ ಎಂದು ಸರ್ಕಾರ ಇತ್ತೀಚೆಗೆ ನೆಪ ಹೇಳುತ್ತಿದೆ.

ಆದರೆ, ವಾಸ್ತವವೇನೆಂದರೆ, ನಿಶ್ಚಿತ ವಿದೇಶಿ ಯುದ್ಧವಿಮಾನ ತಯಾರಿಕೆಗೆ ಬೇಕಾಗುವ ಜೋಡಣಾ ವ್ಯವಸ್ಥೆ ಜಗತ್ತಿನ ಯಾವುದೇ ಕಂಪನಿಯಲ್ಲಿ ಮುಂಚೆಯೇ ಸಿದ್ಧವಿರುವುದಿಲ್ಲ. ಆದರೆ, ಇಂತಹ ಅಧಿಕೃತ ತಯಾರಿಕೆಗೆ ಬೇರೆ ಯಾವುದೇ ಕಂಪನಿಗಿಂತ ನಮ್ಮ ಎಚ್ಎಎಲ್ ಉತ್ತಮ ಎಂಬುದು ಸಾಮಾನ್ಯ ಜ್ಞಾನವಿರುವ ಯಾವುದೇ ವ್ಯಕ್ತಿಗೆ ಗೊತ್ತಿರುವ ಸಂಗತಿಯಾಗಿದೆ. ತನ್ನ ಏಕಸ್ವಾಮ್ಯವಿದ್ದ ದಿನಮಾನಗಳಲ್ಲಿ ತಯಾರಿಕಾ ದಕ್ಷತೆಗೆ ಸಂಬಂಧಿಸಿದಂತೆ ಎಚ್ಎಎಲ್‌ನಿಂದ ಕೆಲವು ಲೋಪಗಳಾಗಿದ್ದರೂ ಅದರ ಬಗ್ಗೆ ಯಾರೂ ತೀವ್ರ ಅಪಸ್ವರ ಎತ್ತಲಾರರು. ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಭಾರತೀಯ ವಾಯುಪಡೆಯು ಮಿರೇಜ್-2000 ಯುದ್ಧವಿಮಾನ ಜೋಡಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಭಾರತಕ್ಕೆ ವರ್ಗಾಯಿಸಲು ಬಯಸಿದಾಗ ಅದು ಕೈತಪ್ಪಿದ್ದು ಬೇರೆಯೇ ಕತೆ. ಒಂದೊಮ್ಮೆ ಹೀಗಾಗಿದ್ದೇ ಆದರೆ ರಫೇಲ್ ತಯಾರಿಕೆಗೆ ಎಚ್‌ಎಎಲ್ ಅಣಿಯಾಗಿರುತ್ತಿತ್ತು. ಆದರೆ ಆಗ ತೆಹೆಲ್ಕಾ ವರದಿಯಿಂದ ಕಷ್ಟಕ್ಕೆ ಸಿಲುಕಿದ್ದ ಆಗಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರಿಗೆ ಈ ಕುರಿತು ಇದ್ದ ಅನುಮಾನದಿಂದ ಇದು ಕಾರ್ಯಗತಗೊಳ್ಳಲಿಲ್ಲ.

ಆದರೆ ಯಾವ ಕಾರಣಕ್ಕೋ ಏನೋ ಈಗ ಸರ್ಕಾರವು ಸರಳ ಸತ್ಯವನ್ನು ಬಹಿರಂಗಗೊಳಿಸುತ್ತಿಲ್ಲ. 126 ರಫೇಲ್‌ಗಳನ್ನು ಖರೀದಿಸುವ ದೊಡ್ಡ ವ್ಯವಹಾರವು ಭೂಸೇನೆ ಮತ್ತು ನೌಕಾಪಡೆಗಳಿಗೆ ಬಜೆಟ್ ಇಲ್ಲದಂತೆ ಮಾಡುತ್ತಿತ್ತು. ಆದರೆ, ಮೂರ್ಖತೆಯ ಬಲೆಯನ್ನು ಹೆಣೆದು ಅದರಲ್ಲಿ ತಾನೇ ಸಿಲುಕಿಕೊಳ್ಳುವುದು ಹೆಚ್ಚು ರಮ್ಯ ಎನ್ನಿಸುತ್ತಿರುವಾಗ ಸತ್ಯ ಹೇಳುವುದಾದರೂ ಏಕೆ ಎಂದು ಸರ್ಕಾರ ಭಾವಿಸಿರುವಂತಿದೆ.

ಆದರೆ, ಭಾರತೀಯ ವಾಯುಪಡೆಯ ಶಕ್ತಿ ಸಾಮರ್ಥ್ಯವು ಅಪಾಯಕಾರಿ ಮಟ್ಟಕ್ಕೆ ಕುಸಿದಿದ್ದರಿಂದ, ಅದಕ್ಕೆ ಕಾರಣವಾಗುವ ಅಪವಾದದಿಂದ ತಪ್ಪಿಸಿಕೊಳ್ಳಲು ತರಾತುರಿಯಲ್ಲಿ ಯುದ್ಧವಿಮಾನ ಖರೀದಿ ಅನಿವಾರ್ಯವಾಯಿತು. ಇದು 15 ವರ್ಷಗಳಿಂದ ನಿಚ್ಚಳವಾಗಿ ಗೊತ್ತಿರುವ ವಿಷಯವೇ ಆಗಿದೆ. ಈ ಯುದ್ಧವಿಮಾನದ ಅಗತ್ಯ ಮೊದಲಿಗೆ ಕೇಳಿಬಂದಿದ್ದು 2001ರಲ್ಲಿ. ರಫೇಲ್ ಒಪ್ಪಂದವು ಎರಡು ದಶಕಗಳ ಹಿಂದೆ ಅತ್ಯಂತ ಅನಿವಾರ್ಯವಾಗಿದ್ದ ಯುದ್ಧವಿಮಾನ ಪಡೆಗಳನ್ನು ತನ್ನ ವಾಯುಪಡೆಗೆ ಖರೀದಿಸಲಾಗದ ರಾಷ್ಟ್ರದ ಅಸಮರ್ಥತೆಯ ಕುರಿತ ದೊಡ್ಡ ವ್ಯಾಖ್ಯಾನ ಕೂಡ ಹೌದು. ಈ ಎರಡು ರಫೇಲ್ ಯುದ್ಧವಿಮಾನ ಪಡೆಗಳು ಕೂಡ 2022ರವರೆಗೆ ಪೂರ್ತಿಯಾಗಿ ಯುದ್ಧ ಹೋರಾಟಕ್ಕೆ ಸಿದ್ಧವಾಗಿರುವುದಿಲ್ಲ. ಭಾರತದಂತೆ ಸ್ಪರ್ಧಾತ್ಮಕವಲ್ಲದ ಸರ್ಕಾರ ಅಥವಾ ವ್ಯವಸ್ಥೆಯು (ಯಾವುದೇ ಪಕ್ಷ ಅಧಿಕಾರದಲ್ಲಿರಲಿ) ತನ್ನ ರಾಷ್ಟ್ರೀಯ ಭದ್ರತೆಯನ್ನು ಶಕ್ತ ರಾಷ್ಟ್ರವೊಂದಕ್ಕೆ ಹೊರಗುತ್ತಿಗೆ ನೀಡಬೇಕು ಅಥವಾ ಕಾಶ್ಮೀರ ಮತ್ತು ಅರುಣಾಚಲ ಪ್ರದೇಶವನ್ನು ಪಾಕಿಸ್ತಾನ ಮತ್ತು ಚೀನಾಕ್ಕೆ ಬಿಟ್ಟುಕೊಡಬೇಕು, ಸೇನಾರಹಿತಗೊಳಿಸಬೇಕು ಹಾಗೂ ಆ ಎಲ್ಲಾ ಹಣವನ್ನು ಆರೋಗ್ಯ ಹಾಗೂ ಶಿಕ್ಷಣಕ್ಕೆ ವಿನಿಯೋಗಿಸಬೇಕು.

ನರೇಂದ್ರ ಮೋದಿ ಅವರು 2014ರಲ್ಲಿ ಗೆಲುವು ಸಾಧಿಸಲು ಕಠಿಣ ಹಾಗೂ ನಿರ್ಣಾಯಕ ರಾಷ್ಟ್ರೀಯ ಭದ್ರತಾ ನೀತಿಯ ಪ್ರಸ್ತಾಪ ಕೂಡ ಕಾರಣವಾಗಿತ್ತು. ಯುಪಿಎ ಸರ್ಕಾರವು ಹೊಸ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಭೀತಿ ಪಡುವ ಮೂಲಕ ರಾಷ್ಟ್ರದ ಸಶಸ್ತ್ರಪಡೆಗಳನ್ನು ದುರ್ಬಲಗೊಳಿಸಿದೆ ಎಂಬ ಆರೋಪಗಳನ್ನು ಅವರು ಮಾಡಿದ್ದರು. ಅವರು ಆಗ ಹೇಳಿದ್ದು ಸರಿ ಇದ್ದುದರಿಂದ ಜನ ಕೂಡ ಅವರನ್ನು ನಂಬಿದ್ದರು. ಹೀಗಾಗಿ, ಅದೇ ಜನಕ್ಕೆ, ಈಗ ಅವರದ್ದೇ ಸರ್ಕಾರ ಇನ್ನೇನು ಪೂರ್ಣಾವಧಿ ಆಳ್ವಿಕೆ ಪೂರೈಸುತ್ತಿರುವ ಸಂದರ್ಭದಲ್ಲಿ, ಮೇಲಿನ ಲೋಪ ಸರಿಪಡಿಸಲು ನೀವೇನು ಮಾಡಿದ್ದೀರಿ ಎಂದು ಕೇಳಲು ಎಲ್ಲಾ ಹಕ್ಕು ಕೂಡ ಇದೆ.

‘ಭಾರತದಲ್ಲೇ ತಯಾರಿಸಿ’ ಎಂಬ ಕೆಲವು ತಮಾಷೆಯ ಉದಾಹರಣೆಗಳನ್ನು ಕೊಟ್ಟು ಮತ್ತು ವೈಮಾನಿಕ ಪ್ರದರ್ಶನಗಳನ್ನು ಮುಂದಿಟ್ಟುಕೊಂಡು ಇದಕ್ಕೆ ಉತ್ತರ ನೀಡಲಾಗದು. ರಕ್ಷಣಾ ಸಾಮಗ್ರಿಗಳ ತಯಾರಿಕೆಗೆ ಸಂಬಂಧಪಟ್ಟಂತೆ ಹೂಡಿಕೆಯಾಗಿರುವ ವಿದೇಶಿ ನೇರ ಬಂಡವಾಳ ತೀರಾ ಕೊಂಚ ಪ್ರಮಾಣದ್ದಾಗಿದೆ. ಇದು ಕೆಲವು ದಶಲಕ್ಷ ಡಾಲರ್‌ಗಳಷ್ಟೂ ಇಲ್ಲವಾಗಿದ್ದು, ಹೇಳಿಕೊಳ್ಳಲು ಮುಜುಗರ ತರಿಸುವಂಥದ್ದಾಗಿದೆ. ಈ ಸರ್ಕಾರ ಕೂಡ ಯುಪಿಎ ಸರ್ಕಾರದಂತೆಯೇ ಧೈರ್ಯವಿಲ್ಲದ, ವಿವೇಚನಾರಹಿತವಾದ, ಅತಿ ಜಾಗರೂಕತೆ ಪ್ರದರ್ಶಿಸುತ್ತಿರುವ ಮತ್ತು ವಿಫಲ ಸರ್ಕಾರವಾಗಿದೆ. ಒಂದೇ ಒಂದು ವಿಷಯವೆಂದರೆ, ಈ ವಿಷಯದಲ್ಲಿ ಯುಪಿಎ ಯಾವುದೇ ಭರವಸೆಗಳನ್ನು ನೀಡಲಿಲ್ಲ. ಆದರೆ ಬಿಜೆಪಿ ಉದಾರವಾಗಿ ಭರವಸೆಗಳನ್ನು ಕೊಟ್ಟಿತು.

ರಫೇಲ್ ಯುದ್ಧವಿಮಾನಗಳು ಖಂಡಿತವಾಗಿಯೂ ಮುಂದಿನ ವರ್ಷ ನಮ್ಮ ಬಾನಂಗಳದಲ್ಲಿ ಹಾರಾಡಲಿವೆ. ಈ ಎರಡು ಯುದ್ಧವಿಮಾನ ಪಡೆಗಳು ಸರಿಯಾದ ಸಮಯಕ್ಕೆ ಆಗಸಕ್ಕೇರಲಿವೆ. ಆದರೆ, ಬಿಜೆಪಿ ನೇತೃತ್ವದ ಸರ್ಕಾರವು ಈ ಸಂಬಂಧ ಸೃಷ್ಟಿಸಿದ ಗೊಂದಲವು ಮುಂಬರುವ ವರ್ಷಗಳಲ್ಲೂ ರಕ್ಷಣಾ ಸಾಮಗ್ರಿ ಖರೀದಿ ಒಪ್ಪಂದಗಳ ಮೇಲೆ ಕರಿಛಾಯೆ ಚಾಚಲಿದೆ. ಇನ್ನು, ರಕ್ಷಣಾ ಕ್ಷೇತ್ರದಲ್ಲಿ ‘ಮೇಕ್ ಇನ್ ಇಂಡಿಯಾ’ ಕತೆ ಏನಾಗಲಿದೆ? ಭಾರತದ ಅತಿದೊಡ್ಡ ರಕ್ಷಣಾ ಒಪ್ಪಂದದಲ್ಲಿ ದೇಶದ ವಿವಾದಾಸ್ಪದ ಕಾರ್ಪೊರೇಟ್ ಕಂಪನಿಯೇ ಫಲಾನುಭವಿ ಎಂಬ ಕಳಂಕ ಅಂಟಿಕೊಂಡಿರುವುದರಿಂದ ಇದು ಆರಂಭದಲ್ಲೇ ರಾಹುಗ್ರಸ್ತವಾಗಿದೆ ಎಂದೇ ಹೇಳಬೇಕಾಗುತ್ತದೆ.

ಯಾವುದೇ ಖಾಸಗಿ ವಲಯದ ಕಂಪನಿಯೊಂದು ಸೇನೆಗಾಗಿ ಯಾವುದೇ ಮಹತ್ವದ ಕೊಡುಗೆ ನೀಡುವ ಮುನ್ನವೇ ಹೀಗಾಗಿದೆ. ಖಾಸಗಿ ವಿಮಾನಯಾನ ಮತ್ತು ದೂರವಾಣಿ ಕಂಪನಿಗಳಿಗೆ ಅನುಮತಿ ನೀಡುವುದಕ್ಕೇ 5 ವರ್ಷ ತೆಗೆದುಕೊಂಡ ನಮ್ಮ ರಾಷ್ಟ್ರದಲ್ಲಿ ಇದು ಆಗಿದೆ. ಕಾರ್ಪೊರೇಟ್ ಕಂಪನಿಯೊಂದು ವಿವಾದಕ್ಕೆ ಸಿಲುಕುವ ಲಕ್ಷಣಗಳಿದ್ದಾಗ, ಅದರ ಹಲವಾರು ಯೋಜನೆಗಳ ಬಗ್ಗೆ ವ್ಯಾಜ್ಯಗಳಿದ್ದಾಗ, ಬೆಂಗಳೂರಿನ ವೈಮಾನಿಕ ಪ್ರದರ್ಶನದ ವೇಳೆಯ ಸಮವಸ್ತ್ರ ಖರೀದಿಯೂ ಗೊಂದಲಕ್ಕೆ ಆಸ್ಪದವಾಗಿದ್ದಾಗ, ಕಂಪನಿಯು ಪತ್ರಿಕಾಗೋಷ್ಠಿ ಕರೆದು ತನ್ನ ಸಾಮರ್ಥ್ಯದ ಬಗ್ಗೆ ಅನಗತ್ಯವಾಗಿ ಬಡಾಯಿ ಕೊಚ್ಚಿಕೊಂಡಾಗಲೇ ಸರ್ಕಾರವು ತೊಂದರೆಯನ್ನು ನಿರೀಕ್ಷಿಸಬೇಕಿತ್ತು. ಈಗ ನೀವು ಈ ಕಂಪನಿಯು ರಫೇಲ್ ಗಾಗಿ ಒಂದು ತಿರುಪನ್ನು ಕೂಡ ತಯಾರಿಸುವುದಿಲ್ಲ ಅಥವಾ ದಸ್ಸಾಲ್ಟ್‌ನಿಂದ ಅದು ಪಡೆಯುವ ಆರ್ಡರ್ 6,000- 12,000 ಕೋಟಿ ರೂಪಾಯಿಗಳ ಮೊತ್ತವನ್ನು ಮೀರುವುದಿಲ್ಲ ಎನ್ನುತ್ತೀರಿ. ನೀವು ನಿಜವನ್ನೇ ಹೇಳುತ್ತಿರಬಹುದು. ಇದೇನೂ ಅಷ್ಟು ಮುಖ್ಯವಲ್ಲ. ಜನ ತಮಗೆ ಯಾವುದನ್ನು ನಂಬಬೇಕು ಎನ್ನಿಸುತ್ತದೆಯೋ ಅದನ್ನು ನಂಬಿ, ಮುಂಚೆ ಈ ಕಂಪನಿ ಏನೆಲ್ಲಾ ಬಡಾಯಿ ಕೊಚ್ಚಿಕೊಂಡಿತ್ತು ಎಂಬುದನ್ನು ಹೋಲಿಸಿ ಅವಲೋಕಿಸಿಕೊಳ್ಳುತ್ತಾರೆ.

ಕಾರ್ಪೊರೇಟ್ ಕಂಪನಿಯು ಮಾಧ್ಯಮ ಕಚೇರಿಗಳು ಮತ್ತು ಪತ್ರಕರ್ತರಿಗೆ (ಈ ಲೇಖಕನೂ ಸೇರಿದಂತೆ) ಈ ಸಂಬಂಧ ವಕೀಲರ ನೋಟಿಸ್ ಕಳುಹಿಸಿದ್ದು, ಈ ಸರಣಿ ಅಸಂಗತ ಮೂರ್ಖತನದ ಅಂತಿಮ ಪ್ರದರ್ಶನವಾಗಿದೆ. ಇದರಿಂದ ಎಲ್ಲರನ್ನೂ ಆಘಾತಗೊಳಿಸಿ ಮೌನಿಗಳನ್ನಾಗಿಸಬಹುದು ಎಂಬುದು ಇದರ ಹಿಂದಿನ ಎಣಿಕೆಯಿರಬಹುದು. ರಫೇಲ್ ವಿಷಯದಲ್ಲಿ ಕಂಪನಿ ತನ್ನ ಬಗ್ಗೆ ಬಡಾಯಿ ಕೊಚ್ಚಿಕೊಂಡಿದ್ದರಿಂದ ಸರ್ಕಾರಕ್ಕೆ ಹೆಚ್ಚು ಹಾನಿಯಾಗಿದೆಯೋ ಅಥವಾ ಈ ದುರಂಹಕಾರಿ ನೋಟಿಸಿನಿಂದ ಹೆಚ್ಚು ಹಾನಿಯಾಗಿದೆಯೋ ಎಂಬುದು ನನಗೆ ಗೊತ್ತಿಲ್ಲ. ಸರ್ಕಾರವನ್ನು ಇದು ಸಂಕಷ್ಟದಲ್ಲಿ ಸಿಲುಕಿಸಲಿದೆ. ಆದರೆ ದುಃಖದ ಸಂಗತಿಯೆಂದರೆ, ಇವೆರಡರಿಂದಲೂ ಐಎಎಫ್ ಗೆ ಮತ್ತು ರಕ್ಷಣಾ ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಧಕ್ಕೆಯಾಗಲಿದೆ.

ರಕ್ಷಣಾ ದಲ್ಲಾಳಿಗಳು, ಫಿಕ್ಸರ್‌ಗಳು, ಕಾರ್ಪೊರೇಟ್ ಲಾಬಿದಾರರು ಮತ್ತು ಸಕಲವನ್ನೂ ಬಲ್ಲೆವು ಎಂಬ ಸ್ವಯಂ ಘೋಷಿತ  ಪಂಡಿತರೊಂದಿಗೆ ಸೇರಿ ಏರ್ಪಡುವ ಯಾವುದೇ ಮಹತ್ವದ ರಕ್ಷಣಾ ಒಪ್ಪಂದವು ಹಗರಣ ಎಂದೇ ಎನ್ನಿಸಿಕೊಳ್ಳುತ್ತದೆ.
ಬೊಫೋರ್ಸ್ ಹಗರಣದ ನಂತರ ಎಲ್ಲ ಸರ್ಕಾರಗಳೂ ಇಂತಹ ಕಳಂಕದಿಂದ ಪಾರಾಗುವ ಸಲುವಾಗಿ ಹೆಚ್ಚೆಚ್ಚು ಸಂಕೀರ್ಣವಾದ ವಿಧಿವಿಧಾನಗಳನ್ನು ಸೇರಿಸಿಕೊಳ್ಳುತ್ತಲೇ ಇವೆ. ಆದರೆ ಅದರಿಂದ ಪಾರಾಗಲು ಯಾವುದೇ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಸಾಧ್ಯವಾಗುವುದೂ ಇಲ್ಲ. ಆದರೆ ಪಾರದರ್ಶಕತೆ, ಬಹಿರಂಗಪಡಿಸುವಿಕೆ ಮತ್ತು ತೊಡಗಿಸಿಕೊಳ್ಳುವಿಕೆಯಿಂದ ಅಂತಹ ಅಪವಾದದಿಂದ ಪಾರಾಗುವ ಅವಕಾಶ ಮೋದಿ ಅವರ ಸರ್ಕಾರಕ್ಕೆ ಒದಗಿಬಂದಿತ್ತು. ಆದರೆ, ಅದು ಅದನ್ನು ಛಿದ್ರಗೊಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು