ಸೋಮವಾರ, ಏಪ್ರಿಲ್ 12, 2021
23 °C
ಸಂರಕ್ಷಣೆಯ ಮಹತ್ವವನ್ನು ಸರ್ಕಾರ ಅರಿಯುವುದು ಯಾವಾಗ?

ವಿಶ್ವ ಪಾರಂಪರಿಕ ತಾಣ: ಒತ್ತಾಸೆಯಿಂದ ಸ್ಥಾನ

ಟಿ. ಆರ್. ಅನಂತರಾಮು Updated:

ಅಕ್ಷರ ಗಾತ್ರ : | |

Prajavani

ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಇತ್ತೀಚೆಗಷ್ಟೇ ಸೇರಿದ ರಾಜಸ್ಥಾನದ ಜೈಪುರ ನಗರ ಸಹಜವಾಗಿಯೇ ಭಾರತಕ್ಕೆ ಹೆಮ್ಮೆ ತಂದಿದೆ. ವಿಶ್ವ ಪಾರಂಪರಿಕ ತಾಣಗಳಲ್ಲಿ ಮೂರು ಬಗೆ. ಸಾಂಸ್ಕೃತಿಕ ತಾಣಗಳು, ನೈಸರ್ಗಿಕ ತಾಣಗಳು ಜೊತೆಗೆ ಸಮ್ಮಿಶ್ರ ತಾಣಗಳು. ಸಾಂಸ್ಕೃತಿಕ ತಾಣವಾಗಿ ಜೈಪುರ ಆಯ್ಕೆಯಾಗಿದೆ. ಇದನ್ನು ನಿರ್ಧರಿಸುವುದು ಯುನೆಸ್ಕೊ ಸಂಸ್ಥೆ. ಅದರದೂ ಸ್ವತಂತ್ರ ನಿರ್ಧಾರವಲ್ಲ. ‘ವರ್ಲ್ಡ್‌ ಹೆರಿಟೇಜ್ ಕಮಿಟಿ’ ಶಿಫಾರಸು ಮಾಡಿದ ಮೇಲೆ ಚರ್ಚಿಸಿ, ಪರಿಶೀಲಿಸಿ ಒಪ್ಪಿಕೊಳ್ಳುತ್ತದೆ.

ಕೆಲವು ದೇಶಗಳಂತೂ ತಮ್ಮ ಕೆಲವು ತಾಣಗಳನ್ನು ಯಾವುದಾದರೂ ವರ್ಗಕ್ಕೆ ಸೇರಿಸಿ ಎಂದು ಬೆಂಬಿಡದೇ ಲಾಬಿ ಮಾಡುವುದುಂಟು. ಲಾಬಿ ಎಂದರೆ ಅದರಲ್ಲಿ ಹಣದ ವ್ಯವಹಾರ ಇರುವುದಿಲ್ಲ. ಬದಲು, ಪದೇ ಪದೇ ತಮ್ಮ ತಾಣಗಳ ಕುರಿತು ಪ್ರತಿನಿಧಿಸುತ್ತ ಹೋಗುವುದು, ಸಕಾರಣವಾಗಿ ಒತ್ತಾಯ ಮಾಡುವುದು. ಆಗ ಸಮಿತಿಯು ತಜ್ಞರ ತಂಡವನ್ನು ಕಳಿಸಿ, ಆ ತಾಣಗಳನ್ನು ವೀಕ್ಷಿಸಿ, ಪರಿಶೀಲಿಸಿ ನಿರ್ಧಾರ ತಳೆಯುವುದುಂಟು. ಭಾರತದಲ್ಲಿ ಈವರೆಗೆ ಅಜಂತಾ ಗುಹೆಯಿಂದ ತೊಡಗಿ ಜೈಪುರವೂ ಸೇರಿದಂತೆ 39 ತಾಣಗಳು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿವೆ. ಈ ಪೈಕಿ ಕರ್ನಾಟಕದ ಹಂಪಿಯು ಸಾಂಸ್ಕೃತಿಕ ತಾಣವಾಗಿ, ಪಶ್ಚಿಮ ಘಟ್ಟಗಳಲ್ಲಿ ತಲಕಾವೇರಿ, ಕುದುರೆಮುಖ ಮತ್ತು ಸಹ್ಯಾದ್ರಿಯು ನೈಸರ್ಗಿಕ ತಾಣಗಳಾಗಿ ಸೇರ್ಪಡೆಯಾಗಿವೆ.

ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರುವುದು ಸುಲಭದ ಕೆಲಸವಲ್ಲ. ಇಲ್ಲಿ ಒಂದು ಸಂಗತಿ ಉಲ್ಲೇಖನಾರ್ಹ. ಪಶ್ಚಿಮ ಘಟ್ಟಗಳಲ್ಲಿ ಅಗಸ್ತ್ಯಮಲೈ, ಪೆರಿಯಾರ್, ಆನೆಮಲೈ, ನೀಲಗಿರಿ ತಾಣಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿಕೊಳ್ಳಬೇಕೆಂದು ತಮಿಳುನಾಡು ಮತ್ತು ಕೇರಳ ಹಟ ತೊಟ್ಟು ನಿಂತವು. ಆದರೆ ಅದು ಸುಲಭವಾಗಿ ‘ಪಾಸ್’ ಆಗಲಿಲ್ಲ. ಭಾರತದ ನಿಲುವನ್ನು ಅಲ್ಜೀರಿಯ ಸೇರಿದಂತೆ ಹನ್ನೆರಡು ದೇಶಗಳು ಬೆಂಬಲಿಸಿದ್ದರಿಂದ ಪಶ್ಚಿಮಘಟ್ಟದ ತಾಣಗಳು ಪಟ್ಟಿಯನ್ನು ಸೇರಿದವು. 2010ರಲ್ಲಿ ಪರಿಸರ ತಜ್ಞ ಮಾಧವ ಗಾಡ್ಗೀಳ್ ಅವರು ಪಶ್ಚಿಮ ಘಟ್ಟದಲ್ಲಿ ಯಾವ ಯಾವ ಸೂಕ್ಷ್ಮ ಜೈವಿಕ ಆವಾಸಗಳು ಪಟ್ಟಿಯಲ್ಲಿ ಇರಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಯಾದಿ ತಯಾರಿಸಿ ಕೊಟ್ಟರು. ಆದರೆ ಇದನ್ನು ಆಧರಿಸಿ ಸರ್ಕಾರವು ಯುನೆಸ್ಕೊಗೆ ಶಿಫಾರಸು ಮಾಡುವುದನ್ನು ತಡೆಯುವಲ್ಲಿ ಗಣಿ ಲಾಬಿ ಯಶಸ್ವಿಯಾಯಿತು. ಈ ಮಧ್ಯೆ ‘ಇಂಟರ್‌ ನ್ಯಾಷನಲ್ ಯೂನಿಯನ್ ಆಫ್ ಕನ್ಸರ್‍ವೇಷನ್ ಆಫ್ ನೇಚರ್’ (ಐ.ಯು.ಸಿ.ಎನ್) ಖುದ್ದಾಗಿ ತಂಡವೊಂದನ್ನು ಕಳಿಸಿ, ಪಶ್ಚಿಮಘಟ್ಟದಲ್ಲಿ ಸೂಚಿಸಿದ್ದ ತಾಣಗಳನ್ನು ಅಧ್ಯಯನ ಮಾಡಿ, ಪರಿಗಣಿಸಬೇಕೆಂದು ಶಿಫಾರಸು ಮಾಡಿತು. ಆದರೆ, ಸದ್ಯಕ್ಕೆ ಇದನ್ನು ಮುಂದೂಡಬಹುದು ಎಂಬ ಷರಾವನ್ನೂ ಬರೆಯಿತು.

ಇನ್ನೊಂದು ಕಥೆ- 2012ರಲ್ಲಿ ಕರ್ನಾಟಕ ಸರ್ಕಾರ ಹಟ ಮಾಡಿ ಕರ್ನಾಟಕ ಭಾಗದ ತಲಕಾವೇರಿ, ಕುದುರೆಮುಖ, ಸಹ್ಯಾದ್ರಿಯನ್ನು ಪಟ್ಟಿಯಿಂದ ಕೈಬಿಡ ಬೇಕೆಂದು ಒತ್ತಾಯಿಸಿತು. ಇದಕ್ಕೆ ನೀಡಿದ ಕಾರಣ ಮಾತ್ರ ಅಪ್ರಬುದ್ಧವಾದದ್ದು. ಈ ತಾಣಗಳನ್ನು ವಿಶ್ವ ಪಾರಂಪರಿಕ ತಾಣಗಳಾಗಿ ಪರಿಗಣಿಸಿದರೆ ಅವೆಲ್ಲವೂ ಯುನೆಸ್ಕೊ ಸುಪರ್ದಿಗೆ ಬರುತ್ತವೆ, ಸ್ಥಳೀಯರನ್ನು ಅಲ್ಲಿಂದ ಒಕ್ಕಲು ಎಬ್ಬಿಸುತ್ತಾರೆ ಎಂಬ ಭೀತಿಯನ್ನು ಸರ್ಕಾರವೇ ಹುಟ್ಟು ಹಾಕಿತು. ‘ನಮ್ಮ ಪಾಲಿನ ತಾಣಗಳನ್ನು ನಾವೇ ಸಂರಕ್ಷಿಸುವಷ್ಟು ಸಾಮರ್ಥ್ಯ ನಮಗಿದೆ, ಯುನೆಸ್ಕೊ ಪ್ರವೇಶ ಬೇಡ’ ಎಂಬ ತಿಳಿಗೇಡಿತನವನ್ನು ಪ್ರದರ್ಶಿಸಿತು. ಹಾಗೆ ಸಂರಕ್ಷಿಸಿದ್ದರೆ ದೇಶದ ಅರಣ್ಯ ಕಾನೂನಿನಂತೆ ಶೇ 33 ಭಾಗ ಕಾಡು ಇರಬೇಕಾಗಿತ್ತು. ಆದರೆ ಈಗಿರುವುದು ಶೇ 22 ಭಾಗ.

ಸಾಮಾನ್ಯವಾಗಿ ಯುನೆಸ್ಕೊ ಸಂಸ್ಥೆಯು ತಾಣಗಳನ್ನು ಪಟ್ಟಿಗೆ ಸೇರಿಸುವಾಗ, ಅವು ಸಾಂಸ್ಕೃತಿಕ ನೆಲೆಗ ಳಾಗಿದ್ದರೆ ಇಡೀ ಪರಂಪರೆಯನ್ನೇ ಬಿಂಬಿಸುವಂತಿರಬೇಕು, ಮಾನವ ನಿರ್ಮಿತ ರಚನೆಗಳು ಬೌದ್ಧಿಕತೆಯ ಪಾರಮ್ಯವನ್ನು ಮೆರೆಯಬೇಕು ಎಂದೂ, ಹಾಗೆಯೇ ನೈಸರ್ಗಿಕ ತಾಣಗಳಾಗಿದ್ದರೆ ಅನನ್ಯ ರಚನೆಗಳಾಗಿರ ಬೇಕು, ಜೀವಿ ವೈವಿಧ್ಯದ ಅಪರೂಪದ ತಾಣಗಳಾಗಿರಬೇಕು, ಅಳಿವಿನಂಚಿಗೆ ಬಂದಿದ್ದರೆ ಸಂರಕ್ಷಣೆಗೆ ಮೊದಲ ಆದ್ಯತೆ- ಹೀಗೆ ಒಟ್ಟು ಹತ್ತು ಅಂಶಗಳನ್ನು ಪರಿಗಣಿಸುತ್ತದೆ. ಯುನೆಸ್ಕೊ ತನ್ನ ಪ್ರಕಟಣೆಯಲ್ಲಿ ಸ್ಪಷ್ಟವಾಗಿ ಹೀಗೆ ಹೇಳಿದೆ: ಯಾವುದೇ ಪಾರಂಪರಿಕ ತಾಣದ ಒಡೆತನ ಯುನೆಸ್ಕೊಗೆ ಸೇರಿಲ್ಲ, ಬದಲು ಅದು ಜನರಿಂದ ಸಂರಕ್ಷಣೆ ಪಡೆಯಬೇಕು. ಇಂಥ ತಾಣವು ಸಂರಕ್ಷಣೆಗೆ ಯೋಗ್ಯ ಎನ್ನುವುದನ್ನಷ್ಟೇ ಸಂಸ್ಥೆ ತಿಳಿಸಿಕೊಡುತ್ತದೆ. ಆಯಾ ದೇಶದ ಸರ್ಕಾರವೇ ಸಂರಕ್ಷಣೆಯ ಹೊಣೆ ಹೊರಬೇಕು. ಇದರಲ್ಲಿ ಏನಾದರೂ ಲಾಭವಿದೆಯೇ? ಒಂದರ್ಥದಲ್ಲಿ ಇದೆ. ಏಕೆಂದರೆ ಒಂದು ತಾಣವನ್ನು ವಿಶ್ವ ಪಾರಂಪರಿಕ ತಾಣವೆಂದು ಗುರುತಿಸಿದರೆ, ಸ್ಥಳೀಯ ವ್ಯಾಪಾರ ವಹಿವಾಟು ಹೆಚ್ಚುತ್ತದೆ, ‘ನಮ್ಮದು’ ಎಂಬ ಪ್ರೀತಿ ಬೆಳೆಯುತ್ತದೆ.

ಕರ್ನಾಟಕವಂತೂ ಈ ಪ್ರಶ್ನೆ ಬಂದಾಗಲೆಲ್ಲ ಅನಾ ಸಕ್ತಿಯನ್ನೇ ತೋರುತ್ತಿದೆ. ಹೀಗಿರದಿದ್ದರೆ ರಾಜ್ಯದ ಅನೇಕ ತಾಣಗಳು ಎಂದೋ ಈ ಪಟ್ಟಿಗೆ ಸೇರಬೇಕಾಗಿತ್ತು. ಜೋಗ ಜಲಪಾತವು ಬರೀ ರಾಜ, ರಾಣಿ, ರೋರರ್, ರಾಕೆಟ್‍ನಿಂದಷ್ಟೇ ಲೋಕಪ್ರಸಿದ್ಧವಾಗಿಲ್ಲ. ಅದು ತನ್ನ ಮೂಲ ನೆಲೆಯಿಂದ 28 ಕಿ.ಮೀ.ನಷ್ಟು ಹಿಂದೆ ಸರಿದಿದೆ ಎಂದು ಅಂತರರಾಷ್ಟ್ರೀಯ ಖ್ಯಾತಿಯ ಭೂವಿಜ್ಞಾನಿ ಬಿ.ಪಿ. ರಾಧಾಕೃಷ್ಣ 50 ವರ್ಷಗಳ ಹಿಂದೆಯೇ ಹೇಳಿದ್ದರು. ಇದು ಅದ್ಭುತ ಸಂಗತಿಯಲ್ಲವೇ? ಜಗತ್ತಿನ ಯಾವ ಜಲಪಾತಕ್ಕೂ ಈ ಬಗೆಯ ಹಿನ್ನೆಲೆ ಇಲ್ಲ. ಇನ್ನು ‘ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮೈಸೂರರಸರಿಗೆ ಮಕ್ಕಳಾಗದಿರಲಿ’ ಎಂಬ ಅಲಮೇಲಮ್ಮನ ಶಾಪವನ್ನು ಈಗಲೂ ನಿಜ ಎಂದೇ ನಂಬುವವರಿದ್ದಾರೆ. ಕಾವೇರಿಯ ವಿಶಿಷ್ಟ ಬಳುಕು, ಕಲ್ಲು ಸವೆತದಿಂದ ತಾನೇ ಭರ್ತಿ ಮಾಡಿಕೊಂಡ ಮರಳ ರಾಶಿ, ಇತ್ತ ಎರಡು ಬೆಟ್ಟಗಳ ನಡುವೆ ಕೊಳ್ಳೇಗಾಲದ ಕಡೆಯಿಂದ ಬೀಸುವ ಗಾಳಿಯು ಮರಳನ್ನು ತೂರುವುದು, ಕೇರುವುದು ವಿಜ್ಞಾನಿಗಳ ಗಮನಕ್ಕೆ ಬಂದಿದೆಯೇ ಹೊರತು ಸರ್ಕಾರಕ್ಕಲ್ಲ. ಜಗತ್ತಿನ ಎಲ್ಲೂ ತಲಕಾಡಿನಂಥ ರಚನೆಯೇ ಇಲ್ಲ ಎಂಬುದು ಉತ್ಪ್ರೇಕ್ಷೆಯ ಮಾತಲ್ಲ.

ಉಡುಪಿ ಜಿಲ್ಲೆಯ ಮಲ್ಪೆಯ ಬಳಿ ಸೇಂಟ್ ಮೇರಿ ದ್ವೀಪವಿದೆ. ಆರೂವರೆ ಕೋಟಿ ವರ್ಷಗಳ ಹಿಂದೆ, ಅಂದರೆ ಡೈನೊಸಾರ್‌ಗಳು ಜಗತ್ತನ್ನು ಆಳುತ್ತಿದ್ದ ಕಾಲದಲ್ಲಿ ಇಲ್ಲಿ ಜ್ವಾಲಾಮುಖಿ ಸ್ಫುರಿಸಿದ ಲಾವಾರಸವು ಶಿಲ್ಪಿಯು ಕಡೆದಂತೆ ಕಂಬಾಕೃತಿ ತಳೆದು, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯಾಗಿದೆ. ಕ್ಯಾಲಿ ಫೋರ್ನಿಯಾದ ಬಳಿ ಇರುವ ಡೆವಿಲ್ಸ್‌ ಪೋಸ್ಟ್‌ಪೈಲ್, ಉತ್ತರ ಐರ್ಲೆಂಡಿನ ಜೈಂಟ್ಸ್‌ ಕಾಸ್ವೆ, ಸ್ಕಾಟ್‍ಲೆಂಡಿನ ಸ್ಟಾಫ ದ್ವೀಪದಲ್ಲಿನ ಫಿಂಗಲ್ಸ್ ಕೇವ್- ಈ ಸ್ಥಳಗಳಲ್ಲಿ ಮಾತ್ರ ಇಂಥ ರಚನೆಗಳಿವೆ. ಅಲ್ಲಿನ ವಿಜ್ಞಾನಿಗಳಿಗೆ ನಮ್ಮ ಮಲ್ಪೆ ಬಳಿಯ ದ್ವೀಪ ಗೊತ್ತು. ನಮ್ಮಲ್ಲಿ ಸಿನಿಮಾ ಮಂದಿ ‘ಇದು ಅದ್ಭುತ ಲೊಕೇಷನ್’ ಎಂದು ಉದ್ಗರಿಸುತ್ತಾರೆ. ಆದರೆ ವೈಜ್ಞಾನಿಕ ತಿಳಿವನ್ನು ಸರ್ಕಾರ ಪುರಸ್ಕರಿಸುವುದು ಯಾವಾಗ? ಅಮೆರಿಕದ ‘ಸ್ಟ್ಯಾಚೂ ಆಫ್ ಲಿಬರ್ಟಿ’ ವಿಶ್ವ ಪಾರಂಪರಿಕ ತಾಣವಾಗಿ ಪುರಸ್ಕೃತವಾಗಿದೆ. ನಮ್ಮ ಶ್ರವಣಬೆಳಗೊಳದ ಬಾಹುಬಲಿ ಏಕೆ ಇಲ್ಲ? ಬಾದಾಮಿ, ಐಹೊಳೆ, ಪಟ್ಟದಕಲ್ಲು, ಬೇಲೂರು, ಹಳೆಬೀಡುಗಳಿಗೆ ಏಕೆ ಸ್ಥಾನವಿಲ್ಲ?

ಈಗಲೂ ಕಾಲ ಮಿಂಚಿಲ್ಲ. ರಾಜ್ಯ ಸರ್ಕಾರವು ರಾಜ್ಯದ ಅಪರೂಪದ ತಾಣಗಳನ್ನು ಪಟ್ಟಿ ಮಾಡಲು ತಜ್ಞರನ್ನು ನೇಮಿಸಿ ವರದಿಯನ್ನು ಯುನೆಸ್ಕೊಗೆ ಸಲ್ಲಿಸಬಹುದು. ಸರ್ಕಾರದ ಒಲವಿದ್ದರೆ ಮಾತ್ರ ಇದು ಸಾಧ್ಯ. ಯುನೆಸ್ಕೊದಲ್ಲಿ ಇನ್ನೊಂದು ಅವಕಾಶವಿದೆ. ತಾತ್ಕಾಲಿಕ ಪಟ್ಟಿಗೆ ಅಂಥ ತಾಣಗಳನ್ನು ಸೇರಿಸುವುದು. ಈಗಾಗಲೇ 193 ರಾಷ್ಟ್ರಗಳ ಪೈಕಿ 184 ರಾಷ್ಟ್ರಗಳು ಹೆಮ್ಮೆಯಿಂದ ತಮ್ಮ ಪಟ್ಟಿಗಳನ್ನು ಪುರಸ್ಕರಿಸಲು ಒತ್ತಾಯ ಮಾಡುತ್ತಿವೆ. ತಾತ್ಕಾಲಿಕ ಪಟ್ಟಿಗೆ ಬಡ್ತಿ ಸಿಕ್ಕಿದರೆ ಮುಂದೆ ಕಾಯಂ ವಿಶ್ವ ಪಾರಂಪರಿಕ ತಾಣಗಳಾಗಲು ಅವಕಾಶವಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು