ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸು-ಕನ್ನಡಿ|ಚಾರುಲತಾ ಎಂಬ ಪ್ರೇಮಕಾವ್ಯ

ರೇ ಅವರ ಈ ಚಿತ್ರದಲ್ಲಿ, ಪ್ರೇಮದ ಉತ್ಕಟತೆ ಅದ್ಭುತವಾಗಿ ಅಭಿವ್ಯಕ್ತಗೊಂಡಿದ್ದು ಹೇಗೆ?
Last Updated 21 ಮೇ 2020, 9:49 IST
ಅಕ್ಷರ ಗಾತ್ರ

ಚಾರುಲತಾ ಅರ್ಥಾತ್‌ ಒಬ್ಬಂಟಿ ಹೆಣ್ಣು. ಶ್ರೀಮಂತ ಉದ್ಯಮಿ ಭೂಪತಿ ದತ್ತಾನ ಪತ್ನಿ. ‘ನವೋದಯ’ ಬಂಗಾಳದ ಉದಾರವಾದಿ ಪತ್ರಿಕೋದ್ಯಮಿ ಭೂಪತಿಗೆ ಬ್ರಿಟಿಷರೆಂದರೆ ಸಿಟ್ಟು. ಆತನ ಆಂಗ್ಲ ಪತ್ರಿಕೆಯಲ್ಲಿ ಬ್ರಿಟಿಷರ ವಿರುದ್ಧ ಕಟುಟೀಕೆ. ಲಂಡನ್ನಿನಲ್ಲಿ ಲೇಬರ್‌ ಪಕ್ಷ ಗೆದ್ದರೆ ಭೂಪತಿಗೆ ಖುಷಿ; ಜಗತ್ತಿನೆಲ್ಲೆಡೆ ಉದಾರವಾದ ಹರಡುವ ಸಂಭ್ರಮ. ಓದು, ರಾಜಕೀಯ ಚರ್ಚೆ, ಸಾಹಿತ್ಯ ವಿಮರ್ಶೆ, ಸಂಪಾದಕೀಯಗಳಲ್ಲಿ ಆತ ಬ್ಯುಸಿ.

ಸಾಹಿತ್ಯ, ಸಂಗೀತ, ಚಿತ್ರಕಲೆಯಲ್ಲಿ ಆಸಕ್ತಿಯಿರುವ ಸುಶಿಕ್ಷಿತ ಹೆಣ್ಣುಮಗಳು ಚಾರು. ಬಂಗಲೆಯಲ್ಲಿ ಪಂಜರದ ಗಿಳಿ. ಕೊಠಡಿಯಿಂದ ಕೊಠಡಿಗೆ ಓಡಾಡುತ್ತಾ ಒಪೇರಾ ಗ್ಲಾಸ್‌ ಮೂಲಕ ಹೊರಗಿನ ರಸ್ತೆಗಳನ್ನು ದಿಟ್ಟಿಸುತ್ತಾಳೆ. ‘ಓಹ್‌... ಮಾ...! ಎಷ್ಟೊಂದು ಸುಂದರ...!’ – ಇದು ಸಿನಿಮಾದ ಮೊದಲ ಡೈಲಾಗ್‌.

ಗಂಡ ಹೇಳುತ್ತಾನೆ– ಸಾಹಿತ್ಯ ಓದು, ಕವಿತೆ ಬರೆ, ಹೆಣಿಗೆಯಲ್ಲಿ ತೊಡಗು. ಆಕೆ ಅದೆಲ್ಲವನ್ನೂ ಮಾಡುತ್ತಾಳೆ. ಆದರೆ ಎಷ್ಟೆಂದು ಓದುವುದು? ಮನೆಯಲ್ಲಿ ಸಾಹಿತ್ಯದ ಗಂಧಗಾಳಿಯಿಲ್ಲದ ನಾದಿನಿ. ಮನೆಯೊಳಗೆ ಪೈಪ್‌ ಸೇದುತ್ತಾ ಪುಸ್ತಕ ಓದುತ್ತಾ ನಡೆದಾಡುವ ಗಂಡನನ್ನೂ ಆಕೆ ಒಪೆರಾ ಗ್ಲಾಸ್‌ ಮೂಲಕವೇ ನೋಡುತ್ತಾಳೆ! ಆತ ಹತ್ತಿರದಲ್ಲಿದ್ದರೂ ದೂರ!

ಅದೊಂದು ಮುಂಗಾರುಪೂರ್ವ ದಿನ. ಹೊರಗೆ ಒಮ್ಮಿಂದೊಮ್ಮೆಲೆ ಸುಂಟರಗಾಳಿ, ಮಳೆಯ ಸೂಚನೆ. ಚಾರುಲತಾ ಮಹಡಿಯ ಮೇಲೆ ಒಣಹಾಕಿದ್ದ ಬಟ್ಟೆಗಳನ್ನು ತರಲು ಓಡುತ್ತಾಳೆ. ಗಾಳಿಗೆ ತರಗೆಲೆಗಳೆಲ್ಲ ಹಾರಾಡುತ್ತಿವೆ, ಜೊತೆಗೆ ದೂಳು. ಅದೇ ಹೊತ್ತಿಗೆ ಸುಂಟರಗಾಳಿ
ಯಂತೆಯೇ ಭವ್ಯ ಮಹಲಿನೊಳಗೆ ಪ್ರವೇಶಿಸುತ್ತಾನೆ ಅಮಲ್‌. ಉನ್ನತ ಶಿಕ್ಷಣ ಮುಗಿಸಿ ಮನೆಗೆ ಮರಳಿದ ಮೈದುನ; ಭೂಪತಿಯ ಕಸಿನ್‌. ಆತನೀಗ ಸ್ವತಂತ್ರ. ಸಾಹಿತಿಯಾಗಬೇಕೆಂಬ ಆಸೆ. ಅಣ್ಣನನ್ನು ಮಾತನಾಡಿಸಿ, ಅತ್ತಿಗೆಯ ಬಳಿಗೆ ಬರುತ್ತಾನೆ. ಆಕೆಯದ್ದೊಂದು ವಾತ್ಸಲ್ಯದ ನೋಟ. ಸದ್ಯ ಇವನಾದರೂ ಬಂದನಲ್ಲ. ಸಾಹಿತ್ಯ ಗೊತ್ತಿರುವವ. ಚಾರುವಿಗೆ ಸಮಾಧಾನ.

‘ಆಕೆಯೊಂದಿಗೆ ಸಾಹಿತ್ಯ ಚರ್ಚಿಸು, ಗೈಡ್‌ ಮಾಡು’ ಎನ್ನುತ್ತಾನೆ ಭೂಪತಿ. ಚಾರು ಮತ್ತು ಅಮಲ್‌ ಇಬ್ಬರದ್ದೂ ಸಮವಯಸ್ಸು. ನಿಂತಲ್ಲಿ, ಕೂತಲ್ಲಿ ಸಾಹಿತ್ಯದ ಚರ್ಚೆ, ಸಂಗೀತದ ಸಾಥ್. ಕಾಲ ಸರಿಯುತ್ತದೆ. ಚಾರು ಈಗ ಸುಖಿ. ಅದ್ಯಾವ ಕ್ಷಣದಲ್ಲಿ ಸ್ನೇಹ ಪ್ರೀತಿಗೆ ತಿರುಗಿತೋ ಗೊತ್ತಾಗಲಿಲ್ಲ. ಕ್ಯಾಮೆರಾದ ಪ್ರತಿ ಫ್ರೇಮ್‌ನಲ್ಲೂ ಚಾರುಲತಾಳ ಮುಖ. ಪ್ರೀತಿ ಪಲ್ಲವಿಸುವ ಅನನ್ಯ ಪರಿ. ಆಕೆಯ ಮುಖದ ಪ್ರತಿಯೊಂದು ಕದಲಿಕೆಗಳಿಗೆ ಅಮಲ್‌ ತಣ್ಣಗೆ ಕರಗುತ್ತಾನೆ. ಭಾರತೀಯ ಸಂಪ್ರದಾಯದಂತೆ ಆಕೆಗೆ ಅವನು ಮಗನ ಸಮಾನ. ಆದರೆ ಪ್ರೀತಿಯ ಸುಂಟರಗಾಳಿ ಇಬ್ಬರನ್ನೂ ತರಗೆಲೆಯನ್ನಾಗಿಸುತ್ತದೆ. ಮನಕ್ಕೆ ತನುವೂ ಸಹಕರಿಸುತ್ತದೆ. ಜಗತ್ತಿನ ಪರಿವೆಯಿಲ್ಲದ ಪ್ರೀತಿ.

ಹೀಗಿದ್ದಾಗಲೇ ಭೂಪತಿಗೆ ಕಷ್ಟಗಳು ಎದುರಾಗುತ್ತವೆ. ಭೂಪತಿಯ ಬಲಗೈಯಂತೆ ದುಡಿಯುತ್ತಿದ್ದ ಚಾರುವಿನ ಅಣ್ಣ ಭಾರಿ ವಂಚನೆ ಮಾಡಿ ಹೆಂಡತಿಯ ಜೊತೆಗೆ ಪರಾರಿಯಾಗಿದ್ದಾನೆ. ಭೂಪತಿಗೆ ನಂಬಲಾಗು
ತ್ತಿಲ್ಲ. ಅಮಲ್‌ನೊಡನೆ ಅವನು ಹೇಳುತ್ತಾನೆ– ‘ಆಸ್ತಿ ನಷ್ಟವಾಯಿತೆಂದು ಬೇಜಾರಿಲ್ಲ. ಆದರೆ ಇಷ್ಟೊಂದು ಆತ್ಮೀಯನಾಗಿದ್ದವ ಹೀಗೆ ವಂಚಿಸಿದ ಎಂದರೆ... ಪ್ರಾಮಾಣಿಕತೆ ಅನ್ನುವುದೇ ಜಗತ್ತಿನಲ್ಲಿ ಇಲ್ಲವೇ? ಇಲ್ಲಿರೋದು ಬರೀ ಸುಳ್ಳು ಮತ್ತು ಸೋಗಿನ ನಟನೆಯೇ?’

ಅಮಲ್ ತಲ್ಲಣಿಸುತ್ತಾನೆ. ತಾನಾದರೂ ಅಣ್ಣನಿಗೆ ಮಾಡುತ್ತಿರುವುದೇನು? ವಂಚನೆಯೇ! ರಾತ್ರೋರಾತ್ರಿ ಆತ ಮನೆ ಬಿಡುತ್ತಾನೆ. ಸುದ್ದಿ ತಿಳಿದ ಚಾರು ಆಘಾತ, ಪಶ್ಚಾತ್ತಾಪದಿಂದ ನರಳುತ್ತಾಳೆ. ಭೂಪತಿಗೂ ಎಲ್ಲ ವಿಷಯ ಗೊತ್ತಾಗುತ್ತದೆ.

–ಇದು, 20ನೇ ಶತಮಾನದ ಸರ್ವಶ್ರೇಷ್ಠ ನಿರ್ದೇಶಕ ಸತ್ಯಜಿತ್‌ ರೇ ಚಿತ್ರಿಸಿದ ಬಂಗಾಳಿ ಚಿತ್ರ ‘ಚಾರುಲತಾ’ದ ಕಥೆ.1964ರಲ್ಲಿ ‘ಅತ್ಯುತ್ತಮ ಸಿನಿಮಾ’ ರಾಷ್ಟ್ರಪ್ರಶಸ್ತಿ ಗೆದ್ದುಕೊಂಡಿತು.‌ ರೇ ಅವರಿಗೆ ಶ್ರೇಷ್ಠ ನಿರ್ದೇಶಕನ ಪ್ರಶಸ್ತಿ. ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಪ್ರದರ್ಶನ.ಚಾರು ಮತ್ತು ಅಮಲ್‌ರ ಪ್ರೇಮವನ್ನು ದೃಶ್ಯಕಾವ್ಯದಲ್ಲಿ ಸೆರೆಹಿಡಿದ ರೇ ಅವರ ಸೃಜನಶೀಲತೆಯನ್ನು ಜಗತ್ತೇ ಕೊಂಡಾಡಿತು. ಚಿತ್ರದ ಸಂಗೀತ, ಕ್ಯಾಮೆರಾ, ಕಲಾವಿಭಾಗ ಎಲ್ಲದರಲ್ಲೂ ರೇ ಕೈಯಾಡಿಸಿದ ಚಿತ್ರವಿದು. ಅವರೇ ಅಂದದ್ದು– ‘ಇದು ನನ್ನ ಫೇವರೆಟ್‌ ಸಿನಿಮಾ’.

ಈಗಲೂ ಸಿನಿಮೋಹಿಗಳನ್ನು ಕಾಡುತ್ತಿರುವ ಪ್ರಶ್ನೆ: ಗಂಡು– ಹೆಣ್ಣಿನ ಪ್ರೇಮ ಅರಳುವ ಪರಿಯನ್ನು ಇಷ್ಟೊಂದು ಅದ್ಭುತವಾಗಿ ಸಿನಿಮಾ ಆಗಿಸಲು ಹೇಗೆ ಸಾಧ್ಯವಾಯಿತು? ರೇ ಸಿನಿಮಾಗಳಲ್ಲಿ ಮಾತಿಗಿಂತ ಮೌನವೇ ಹೆಚ್ಚು. ಕಣ್ಣುಗಳಲ್ಲಿ, ಹಾವಭಾವಗಳಲ್ಲಿ, ದೇಹದ ಪ್ರತೀ ತಿರುವಿನಲ್ಲಿ ಪ್ರೇಮದ ತಲ್ಲಣವನ್ನು ತುಳುಕಿಸುತ್ತಾ ಚಾರುಲತಾ ಪಾತ್ರಕ್ಕೆ ಜೀವ ತುಂಬಿದ ನಟಿ ಮಧಾಬಿ ಮುಖರ್ಜಿ.ಮುಂದೆ ಬಂಗಾಳಿ ಸಿನಿರಂಗವನ್ನು ಅಕ್ಷರಶಃ ಆಳಿದ ಅಪರೂಪದ ಸುಂದರಿ.

ಸಿನಿಮಾದ ಮೂಲ ರವೀಂದ್ರನಾಥ ಟ್ಯಾಗೋರರು 1901ರಲ್ಲಿ ಬರೆದ ‘ನಷ್ತಾನಿರ್’ (ಭಗ್ನಗೂಡು) ಕಾದಂಬರಿ. ಸಿನಿಮಾದಲ್ಲಿ ಕಥೆಯ ಕಾಲಮಾನ ತೋರಿಸಿದ್ದು 1879–80. ಅದು ಟ್ಯಾಗೋರರ ಯೌವನದ ಕಾಲ. ಕಥೆ ಸ್ವತಃ ಟ್ಯಾಗೋರರ ಜೀವನ
ದಲ್ಲಿ ನಡೆದದ್ದು ಎನ್ನುವವರಿದ್ದಾರೆ. ಠ್ಯಾಗೋರರ ಅಣ್ಣ ಜ್ಯೋತಿರಿಂದ್ರನಾಥ್‌. ಅತ್ತಿಗೆ ಕಾದಂಬರಿ ದೇವಿ. ಅಣ್ಣ ರವೀಂದ್ರನಿಗಿಂತ 12 ವರ್ಷ ದೊಡ್ಡವ. ಅತ್ತಿಗೆಗಿಂತ ರವೀಂದ್ರ 2 ವರ್ಷ ಚಿಕ್ಕವ. ಅತ್ತಿಗೆಯ ಜೊತೆಗೆ ಸಹಜ ಗೆಳೆತನವಿತ್ತು. ಇಬ್ಬರಿಗೂ ಸಾಹಿತ್ಯ, ಚಿತ್ರಕಲೆಯ ಆಸಕ್ತಿ. ರವೀಂದ್ರನಾಥನಿಗೆ 23ನೇ ವಯಸ್ಸಿನಲ್ಲಿ ಹಿರಿಯರು ನೋಡಿದ ಹುಡುಗಿಯೊಂದಿಗೆ ಮದುವೆಯಾಯಿತು. ಕೆಲವೇ ತಿಂಗಳಲ್ಲಿ ಕಾದಂಬರಿ ದೇವಿ ಆತ್ಮಹತ್ಯೆ ಮಾಡಿಕೊಂಡರು. ಕಥೆ ರವೀಂದ್ರರ ಜೀವನದ್ದೇ ಎನ್ನಲು ಇದು ಕಾರಣ.

‘ಇಲ್ಲ, ಕಥೆ ಸ್ವತಃ ಸತ್ಯಜಿತ್ ‌ರೇ ಅವರ ಜೀವನದ್ದು’ ಎನ್ನುವ ಇನ್ನೊಂದು ವರ್ಗವಿದೆ! ನಟಿ ಮಧಾಬಿ ಮುಖರ್ಜಿ ಜೊತೆಗೆ ರೇ ಅವರಿಗೆ ಪ್ರೇಮವಾಗಿತ್ತು. ಅದರಿಂದಾಗಿಯೇ ‘ಚಾರುಲತಾ’ದಲ್ಲಿ ಪ್ರೇಮದ ಉತ್ಕಟತೆಯನ್ನು ಅಷ್ಟೊಂದು ಅದ್ಭುತವಾಗಿ ತೋರಿಸಲು ಸಾಧ್ಯವಾಯಿತು ಎನ್ನುವುದು ಇವರ ವಾದ.

ರೇ ಅವರದ್ದು ಪ್ರೇಮವಿವಾಹ. ನಟಿ, ಗಾಯಕಿಯಾಗಿದ್ದ ಬಿಜೋಯ್‌ ರೇ ಅವರನ್ನು ಸತ್ಯಜಿತ್‌ ಪ್ರೀತಿಸಿದ್ದರು. ಆದರೆ ಮದುವೆಗೆ ಎರಡೂ ಮನೆಯವರ ಒಪ್ಪಿಗೆ ಸಿಗಲು ಎಂಟು ವರ್ಷ ಕಾದಿದ್ದರು! ಮಧಾಬಿ ಜೊತೆಗಿನ ರೇ ಅವರ ಪ್ರೇಮಪ್ರಕರಣ ಮುಂದೆ ಮಡದಿಯ ಮುನಿಸಿಗೂ ಕಾರಣವಾಗಿತ್ತಂತೆ. ಹಾಗೆಂದು ತಮ್ಮ ‘ಅಮಾದರ್‌ ಕೊಥಾ’ ಆತ್ಮಕಥೆಯಲ್ಲಿ ಬಿಜೋಯ್‌ ಅವರು ಆ ನಟಿಯನ್ನು ಹೆಸರಿಸದೆ ಬರೆದಿದ್ದಾರೆ. ‘ಆಕೆ ಸುಂದರಿ, ಪ್ರತಿಭಾವಂತೆ. ಆದರೆ ಮಾಣಿಕ್‌ಗೆ ಖಂಡಿತ ಸರಿಜೋಡಿಯಲ್ಲ’ ಎಂದಿದ್ದಾರೆ (ಮಾಣಿಕ್‌ ಎಂಬುದು ರೇ ಅವರ ಪ್ರಿಯನಾಮಧೇಯ). ಈ ಆತ್ಮಕಥೆ ‘ದೇಶ್’ ಬಂಗಾಳಿ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿತ್ತು. ಆದರೆ ಬಳಿಕ ಇಂಗ್ಲಿಷ್‌ನಲ್ಲಿ ಪ್ರಕಟವಾದ ‘Manik & I’ ಎನ್ನುವ ಆತ್ಮಕಥೆಯಲ್ಲಿ ಇದರ ಪ್ರಸ್ತಾಪ ಇಲ್ಲ.

ಮಾಧವಿ ಅವರಿಗೀಗ 78 ವರ್ಷ. ಗಂಡನಿಂದ ಬೇರೆಯಾಗಿ ವಾಸಿಸುತ್ತಿದ್ದಾರೆ. 12 ವರ್ಷಗಳ ಹಿಂದೆ ಅವರದ್ದೊಂದು ಸಂದರ್ಶನ ಪ್ರಕಟವಾಗಿತ್ತು. ಆಗ ಪ್ರೇಮದ ಕುರಿತ ಪ್ರಶ್ನೆಗೆ ಅವರಂದದ್ದು– ‘ಏನೇ ಹೇಳುವುದಿದ್ದರೂ ಇಡೀ ಸತ್ಯ ಗೊತ್ತಿದ್ದರೆ ಹೇಳಿ. ಇಲ್ಲವಾದಲ್ಲಿ ಏನೂ ಕೇಳಬೇಡಿ’. 1995ರಲ್ಲಿ ಅವರ ಆತ್ಮಕಥೆ ‘ಅಮಿ ಮಾಧಬಿ’ ಪ್ರಕಟವಾಯಿತು. ಅದರಲ್ಲಿ, ‘ಪ್ರೇಮವಿದ್ದದ್ದು ನಿಜ. ಆದರೆ ನಾನು ಮನೆ ಮುರಿಯಲು ಸಿದ್ಧಳಿರಲಿಲ್ಲ’ ಎಂದು ಬರೆದುಕೊಂಡಿದ್ದಾರೆ.ಚಾರುಲತೆಯಾಗಿ ಮಾಧವಿಅಭಿನಯ ಅನುಪಮ. ‘ಮೇರಾ ನಾಮ್‌ ಜೋಕರ್‌’ನಲ್ಲಿನಟಿಸಲು ರಾಜ್‌ಕಪೂರ್‌ ಬ್ಲ್ಯಾಂಕ್‌ ಚೆಕ್‌ ನೀಡಿ ಆರು ತಿಂಗಳು ಕಾದರೂ ಅವರು ಬಾಲಿವುಡ್‌ಗೆ ಬರಲಿಲ್ಲ!

ಅಂದಹಾಗೆ ಇದು ಸತ್ಯಜಿತ್‌ ರೇ ಜನ್ಮಶತಮಾನೋತ್ಸವ ವರ್ಷ. ‘ಚಾರುಲತಾ’ ನೋಡಿ. ಹಿಂದೆ ನೋಡಿದ್ದರೆ ಮತ್ತೊಮ್ಮೆ ನೋಡಿ. ‘ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ...’ ಎನ್ನದಿದ್ದರೆ ಕೇಳಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT