ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಜ್ಞಾನಿಕ ಹೊಣೆ ಮತ್ತು ರಾಷ್ಟ್ರೀಯ ನೀತಿ

ಪ್ರಬಲ ವೈಜ್ಞಾನಿಕ ಸಾಮಾಜಿಕ ಜವಾಬ್ದಾರಿ ರೂಪುಗೊಳ್ಳಲು ಮುಕ್ತ ಪರಿಸರ ಅಗತ್ಯ
Last Updated 5 ನವೆಂಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಅಥವಾ ಸಿಎಸ್‍ಆರ್), 2014ರ ಏಪ್ರಿಲ್ 1ರಿಂದ ಶಾಸನಬದ್ಧ ರೂಪ ಪಡೆದಿರುವ ಒಂದು ಪರಿಕಲ್ಪನೆ. ಇದರಡಿಯಲ್ಲಿ ವಾರ್ಷಿಕ ₹ 5 ಕೋಟಿಗಿಂತ ಹೆಚ್ಚಿನ ನಿವ್ವಳ ಲಾಭ ಗಳಿಸುವ ಕಂಪನಿಗಳು, ತಮ್ಮ ಲಾಭದ ಕನಿಷ್ಠ ಶೇ 2ರಷ್ಟು ಭಾಗವನ್ನು, ಸಮಾಜ-ಸಮುದಾಯಗಳಿಗೆ ಪ್ರಯೋಜನವಾಗುವ ಶಿಕ್ಷಣ, ಆರೋಗ್ಯ, ಬಡತನ ನಿರ್ಮೂಲನೆ, ಪರಿಸರ ಸಂರಕ್ಷಣೆ, ಮಹಿಳಾ ಸಬಲೀಕರಣ, ಗ್ರಾಮಾಭಿವೃದ್ಧಿ, ಸ್ಮಾರಕಗಳ ಸಂರಕ್ಷಣೆಯಂತಹ ಕಾರ್ಯಗಳಿಗೆ ಕಡ್ಡಾಯವಾಗಿ ಕೊಡುಗೆಯಾಗಿ ನೀಡಬೇಕು. ಈ ಯೋಜನೆಯಡಿ ಯಶಸ್ಸು ಕಂಡಿರುವ ನೂರಾರು ನಿದರ್ಶನಗಳಿವೆ.

ಡಾ. ಎಚ್.ಆರ್.ಕೃಷ್ಣಮೂರ್ತಿ

2017ರಲ್ಲಿ ತಿರುಪತಿಯಲ್ಲಿ ನಡೆದ ಇಂಡಿಯನ್ ಸೈನ್ಸ್ ಕಾಂಗ್ರೆಸ್‍ನ 104ನೇ ವಾರ್ಷಿಕ ಸಮಾವೇಶದಲ್ಲಿ, ಸಿಎಸ್‍ಆರ್ ಮಾದರಿಯಲ್ಲೇ ವೈಜ್ಞಾನಿಕ ಸಾಮಾಜಿಕ ಜವಾಬ್ದಾರಿಯ (ಸೈಂಟಿಫಿಕ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ, ಸಂಕ್ಷಿಪ್ತವಾಗಿ ಎಸ್‍ಎಸ್‍ಆರ್) ಪರಿಕಲ್ಪನೆಯನ್ನು ರೂಪಿಸಿ ದೇಶದಲ್ಲಿ ಅನುಷ್ಠಾನಗೊಳಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು. ಎರಡೂವರೆ ವರ್ಷಗಳ ಚಿಂತನ-ಮಂಥನ ನಂತರ, 2019ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಆ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಕರಡು ನೀತಿಯನ್ನು ನಾಗರಿಕರ ಪರಿಗಣನೆ, ಪರಾಮರ್ಶೆಗೆ ಬಿಡುಗಡೆ ಮಾಡಿತು. ಇದೀಗ ಈ ವರ್ಷದ ಅಂತ್ಯದೊಳಗಾಗಿ ವೈಜ್ಞಾನಿಕ ಸಾಮಾಜಿಕ ಜವಾಬ್ದಾರಿಗೆ ಸಂಬಂಧಿಸಿದ ರಾಷ್ಟ್ರೀಯ ನೀತಿಯನ್ನು ಅನುಷ್ಠಾನಗೊಳಿಸುವುದಾಗಿ ಸರ್ಕಾರ ಪ್ರಕಟಿಸಿದೆ.

ಸ್ವಾತಂತ್ರ್ಯಾನಂತರದ ಏಳು ದಶಕಗಳ ಅವಧಿಯಲ್ಲಿ ವಿಜ್ಞಾನ, ತಂತ್ರಜ್ಞಾನದ ಅಭಿವೃದ್ಧಿಗೆ ಅಗತ್ಯವಾದ ಮೂಲಭೂತ ವ್ಯವಸ್ಥೆಗಳನ್ನು ಬೃಹತ್ ಪ್ರಮಾಣದಲ್ಲಿ ದೇಶದಲ್ಲಿ ನಿರ್ಮಿಸಲಾಗಿದೆ. ಇಂದು ದೇಶದಲ್ಲಿ 2,000ಕ್ಕೂ ಹೆಚ್ಚಿನ ಸಂಖ್ಯೆಯ ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳಿವೆ. 54 ಕೇಂದ್ರೀಯ ವಿಶ್ವವಿದ್ಯಾಲಯಗಳು, 411 ರಾಜ್ಯ ವಿಶ್ವವಿದ್ಯಾಲಯಗಳು, 282 ಖಾಸಗಿ ಮತ್ತು 132 ಡೀಮ್ಡ್ ವಿಶ್ವವಿದ್ಯಾಲಯಗಳಿವೆ. ಪ್ರಪಂಚದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯ ವಿಜ್ಞಾನಿ, ತಂತ್ರಜ್ಞರ ಸಮುದಾಯವಿದೆ. ಈ ಸಮುದಾಯವು ದೇಶದ ಅತಿ ಮಹತ್ವದ ಸಂಪನ್ಮೂಲವೂ ಹೌದು.

ಶಿಕ್ಷಣ, ತರಬೇತಿ, ಕೌಶಲ, ತರ್ಕಬದ್ಧ ಚಿಂತನೆ, ಮನೋಧರ್ಮಗಳ ದೃಷ್ಟಿಯಿಂದ ವಿಜ್ಞಾನಿಗಳು, ತಂತ್ರಜ್ಞರು ಸಮಾಜದ ವಿಶಿಷ್ಟ ವ್ಯಕ್ತಿಗಳು. ಸಮಾಜದ, ದಿನನಿತ್ಯ ಜೀವನದ ಹಲವಾರು ಸಮಸ್ಯೆಗಳನ್ನು ಗಮನಿಸಿ, ವಿಶ್ಲೇಷಿಸಿ, ಅವುಗಳಿಗೆ ಸೂಕ್ತವಾದ ಪರಿಹಾರಗಳನ್ನು ಕಂಡುಹಿಡಿಯಬಲ್ಲ ಸಾಮರ್ಥ್ಯವಿರುವವರು. ಇಂಥ ವಿಶಿಷ್ಟ ಸಾಮರ್ಥ್ಯವನ್ನು ಸಮಾಜದ ಒಳಿತಿಗೆ ಬಳಸಬೇಕಾದ ಸಾಮಾಜಿಕ ಹಾಗೂ ನೈತಿಕ ಹೊಣೆಗಾರಿಕೆ ವಿಜ್ಞಾನಿಗಳ ಹಾಗೂ ದೇಶದ ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳ ಮೇಲಿದೆ. ಆ ಸಾಮಾಜಿಕ ಜವಾಬ್ದಾರಿಯನ್ನು ಉದ್ದೀಪನಗೊಳಿಸಿ, ಜ್ವಲಂತವಾಗಿರಿಸಿ, ಆ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸುವ ಪರಿಸರವನ್ನು ಸೃಷ್ಟಿಸುವುದೇ ವೈಜ್ಞಾನಿಕ ಸಾಮಾಜಿಕ ಜವಾಬ್ದಾರಿಯ ಮುಖ್ಯ ಉದ್ದೇಶ.

ದೇಶದಲ್ಲಿ ವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಅಪಾರ ಪ್ರಮಾಣದ ಜ್ಞಾನ ಸೃಷ್ಟಿಯಾಗುತ್ತಿದೆ. ಆದರೆ ಅಂತಹ ಅಮೂಲ್ಯ ಜ್ಞಾನವು ಪ್ರಯೋಗಾಲಯಗಳಿಂದ ಹೊರಬಂದು, ಜನಸಮುದಾಯಗಳಿಗೆ ದೊರೆತು, ವಿವಿಧ ಸಮಸ್ಯೆಗಳ ಪರಿಹಾರಕ್ಕೆ ನೆರವಾಗುವ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿಲ್ಲ. ಇದು ಸಾಧ್ಯವಾಗಬೇಕಾದರೆ ವಿಜ್ಞಾನ- ಸಮಾಜದ ನಡುವೆ, ವಿಜ್ಞಾನಿ- ಜನಸಾಮಾನ್ಯರ ನಡುವೆ, ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳು- ಬಳಕೆದಾರರ ನಡುವೆ ನಿರಂತರವಾದ ಆರೋಗ್ಯಪೂರ್ಣ ವಿಚಾರ ವಿನಿಮಯ, ಚರ್ಚೆ, ಸಂವಾದಗಳಿಗೆ ಅವಕಾಶವಿರಬೇಕು. ಇದು ಪರಸ್ಪರ ನಂಬಿಕೆ, ವಿಶ್ವಾಸ, ಪಾಲುದಾರಿಕೆಯನ್ನು ಬೆಳೆಸುತ್ತದೆ. ಸ್ವಲ್ಪಮಟ್ಟಿಗೆ ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳನ್ನು ಬಿಟ್ಟರೆ ಉಳಿದಂತೆ ಬೇರೆ ವಲಯಗಳಲ್ಲಿ ಈ ರೀತಿಯ ನಿರಂತರ ಸಮಾಲೋಚನೆ ಬಹು ಅಪರೂಪ.

ದೇಶದಲ್ಲಿನ ಜ್ಞಾನಸೃಷ್ಟಿ ಮತ್ತು ಬಳಕೆಯ ವ್ಯವಸ್ಥೆಯನ್ನು ಬಲಪಡಿಸುವುದು, ವಿಜ್ಞಾನಿ- ನಾಗರಿಕರ ನಡುವಿನ ಅಂತರವನ್ನು ಕಡಿಮೆ ಮಾಡಿ, ಸಂವಹನವನ್ನು ಉತ್ತಮಪಡಿಸುವುದು ಮತ್ತು ವೈಜ್ಞಾನಿಕ ಸಂಶೋಧನೆಗಳನ್ನು ಸಾಮಾಜಿಕ ಪ್ರಯೋಜನಗಳನ್ನಾಗಿ ಪರಿವರ್ತಿಸುವುದು- ಈ ಹೊಸ ರಾಷ್ಟ್ರೀಯ ನೀತಿಯ ಮುಖ್ಯ ಗುರಿಗಳು. ಈ ಗುರಿ ಸಾಧನೆಗೆ ಹಲವಾರು ಕ್ರಮಗಳನ್ನು ಸೂಚಿಸಲಾಗಿದೆ.

ಈ ರಾಷ್ಟ್ರೀಯ ನೀತಿಯಡಿ ದೇಶದ ಎಲ್ಲ ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳು, ರಾಷ್ಟ್ರೀಯ ಪ್ರಯೋಗಾಲಯಗಳು, ವಿಶ್ವವಿದ್ಯಾಲಯಗಳಲ್ಲಿರುವ ವಿಜ್ಞಾನಿಗಳು, ವೈಜ್ಞಾನಿಕ ಸಿಬ್ಬಂದಿ ವರ್ಷದಲ್ಲಿ ಕನಿಷ್ಠ ಹತ್ತು ದಿನಗಳ ಕಾಲ ಸಮುದಾಯದೊಡನೆ ಬೆರೆತು, ವಿಚಾರ ವಿನಿಮಯ, ಚರ್ಚೆ, ಸಂವಾದ, ಜ್ಞಾನದಾನ, ಸಬಲೀಕರಣ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಈ ಕಾರ್ಯಕ್ರಮಗಳಲ್ಲಿ ವಿಜ್ಞಾನಿಗಳು, ನಾಗರಿಕರಿಗೆ ಕೇವಲ ಮಾಹಿತಿ ನೀಡಿದರೆ ಸಾಲದು. ಅದನ್ನು ಅರ್ಥಮಾಡಿಕೊಂಡು, ಜೀವನದಲ್ಲಿ ಅಳವಡಿಸಿಕೊಳ್ಳಲು ಬೇಕಾದ ಸಾಮರ್ಥ್ಯವನ್ನು, ಅಂದರೆ ವೈಜ್ಞಾನಿಕ ಸಾಕ್ಷರತೆಯನ್ನು ಅವರಲ್ಲಿ ಬೆಳೆಸಬೇಕು. ಈ ರೀತಿಯ ಕಾರ್ಯಕ್ರಮಗಳನ್ನು ವೈಜ್ಞಾನಿಕ ಸಂಸ್ಥೆಗಳು ಮತ್ತು ವಿಜ್ಞಾನಿಗಳು, ತಾವಾಗಿಯೇ ಮುಂದಾಗಿ ವಿದ್ಯಾರ್ಥಿಗಳು, ಶಿಕ್ಷಕರು, ರೈತರು, ಸಣ್ಣ ಉದ್ಯಮಿಗಳು, ಸ್ಥಳೀಯ ಸಂಸ್ಥೆಗಳು, ಮಹಿಳಾ ಮಂಡಲಿಗಳು, ಸ್ವಸಹಾಯ ಸಂಘಗಳು, ಸ್ಟಾರ್ಟ್‌ ಅಪ್‍ಗಳು, ಜೀವವೈವಿಧ್ಯ ಸಮಿತಿಯಂತಹವುಗಳಲ್ಲಿ ಇರುವವರಿಗೆ ಏರ್ಪಡಿಸಬೇಕೆಂಬ ಸೂಚನೆಯಿದೆ. ದೇಶದ ಎಲ್ಲ ಸಂಶೋಧನಾ ಸಂಸ್ಥೆಗಳಲ್ಲಿರುವ ವಿವಿಧ ಸೌಲಭ್ಯಗಳನ್ನು ಅಗತ್ಯವಿದ್ದಾಗ ಈ ಸಮುದಾಯಗಳು ಬಳಸಿಕೊಳ್ಳಲು ಅವಕಾಶವನ್ನು ಈ ನೀತಿಯಲ್ಲಿ ಕಲ್ಪಿಸಲಾಗಿದೆ. ಸಿಎಸ್‍ಆರ್‌ನಲ್ಲಿ ಹಣವನ್ನು ಯಾವುದೇ ಸ್ವಯಂ ಸೇವಾ ಸಂಸ್ಥೆಗೆ ನೀಡಿ ಅದರ ಮೂಲಕ ಸಮುದಾಯಕ್ಕೆ ಒಳಿತಾಗುವ ಕೆಲಸಗಳನ್ನು ಮಾಡಿಸಲು ಅವಕಾಶವಿದೆ. ಆದರೆ ಎಸ್‍ಎಸ್‍ಆರ್ ನೀತಿಯಲ್ಲಿ ಸಂಶೋಧನಾ ಸಂಸ್ಥೆಗಳು ಮತ್ತು ವಿಜ್ಞಾನಿಗಳು ಸ್ವತಃ ಈ ಜವಾಬ್ದಾರಿಯನ್ನು ನಿರ್ವಹಿಸಬೇಕು. ವಿವಿಧ ಚಟುವಟಿಕೆಗಳ ನಿಗಾ ಮತ್ತು ಮಾರ್ಗದರ್ಶನಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಲ್ಲಿ ಪ್ರತ್ಯೇಕ ಘಟಕವೊಂದನ್ನು ಸ್ಥಾಪಿಸಲಾಗುತ್ತದೆ. ಈ ನೀತಿಯ ಅನುಷ್ಠಾನಕ್ಕೆ ಸಂಬಂಧಿಸಿದ ವಿವಿಧ ಅನುಭವಗಳನ್ನು ಹಂಚಿಕೊಳ್ಳಲು ರಾಷ್ಟ್ರೀಯ ಡಿಜಿಟಲ್ ಪೋರ್ಟಲ್ ಒಂದು ಅಸ್ತಿತ್ವಕ್ಕೆ ಬರಲಿದೆ. ವಿಜ್ಞಾನಿ, ವೈಜ್ಞಾನಿಕ ಸಿಬ್ಬಂದಿಯ ಕೆಲಸದ ವಾರ್ಷಿಕ ಮೌಲ್ಯಮಾಪನದ ಸಂದರ್ಭದಲ್ಲಿ ಈ ಸೇವೆಯನ್ನು ವಿಶೇಷವಾಗಿ ಪರಿಗಣಿಸಲಾಗುತ್ತದೆ.

ವೈಜ್ಞಾನಿಕ ಸಾಮಾಜಿಕ ಜವಾಬ್ದಾರಿಯ ಹೊಸ ರಾಷ್ಟ್ರೀಯ ನೀತಿ ಜಾರಿಗೆ ಬಂದ ನಂತರ ವಿಜ್ಞಾನಿಗಳು ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಸಮರ್ಥವಾಗಿ ಪ್ರದರ್ಶಿಸಿ, ವಿಜ್ಞಾನ- ಜನಸಮುದಾಯದ ನಡುವಿನ ಅನಪೇಕ್ಷಿತ ಅಂತರವನ್ನು ಕಡಿಮೆ ಮಾಡಿ, ದೇಶದ ಅಭಿವೃದ್ಧಿಗೆ ಅಗತ್ಯವಾದ ಸ್ಪಂದನಶೀಲ ಪರಿಸರವನ್ನು ಸೃಷ್ಟಿಸಬೇಕೆಂದು ಸರ್ಕಾರ ನಿರೀಕ್ಷಿಸುತ್ತಿದೆ. ಆದರೆ ಅದು ಮಂತ್ರದಂಡ ಆಡಿಸಿದಂತೆ ಆಗುವ ಕೆಲಸವಲ್ಲ. ಪ್ರಬಲವಾದ ವೈಜ್ಞಾನಿಕ ಸಾಮಾಜಿಕ ಜವಾಬ್ದಾರಿ ರೂಪುಗೊಂಡು ಕಾರ್ಯಗತವಾಗಲು ಸ್ವತಂತ್ರವಾಗಿ ಆಲೋಚಿಸುವ, ಪ್ರಶ್ನಿಸುವ, ಬೇರೊಂದು ಅಭಿಪ್ರಾಯವನ್ನು ವ್ಯಕ್ತಪಡಿಸುವ ಮುಕ್ತ ಪರಿಸರ ಅಗತ್ಯ. ಆದರೆ ಸಂಪೂರ್ಣವಾಗಿ ಅಥವಾ ಆಂಶಿಕವಾಗಿ ಸರ್ಕಾರದ ನಿಯಂತ್ರಣದಲ್ಲಿರುವ ವಿಜ್ಞಾನಿ, ವೈಜ್ಞಾನಿಕ ಸಂಸ್ಥೆಗಳಿಂದ ಇದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಉದಾಹರಣೆಗೆ, ಪರಿಸರ ಪರಿಣಾಮ ವಿಶ್ಲೇಷಣೆಯ ಹೊಸ ನೀತಿಯ ಹೆಸರಿನಲ್ಲಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಅನೇಕ ಕಾನೂನುಗಳನ್ನು ದುರ್ಬಲಗೊಳಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಯಾವ ವಿಜ್ಞಾನಿ, ವೈಜ್ಞಾನಿಕ ಸಂಸ್ಥೆ ಗಳೂ ಸಂಘಟಿತವಾಗಿ ಬಲವಾಗಿ ದನಿಯೆತ್ತಿಲ್ಲ. ಹೀಗೆಂದ ಮಾತ್ರಕ್ಕೆ ಸಾಮಾಜಿಕ ಕಳಕಳಿಯಿರುವ ವಿಜ್ಞಾನಿಗಳೇ ಇಲ್ಲ ಎಂದಲ್ಲ. ಅಂತಹ ಜವಾಬ್ದಾರಿಯನ್ನು ನಿರ್ವಹಿಸಲು ಅಗತ್ಯವಾದ ದಮನಕಾರಿಯಾಗದ, ಭಿನ್ನಾಭಿಪ್ರಾಯವನ್ನು ಸಹಿಸಿಕೊಳ್ಳುವ ಆರೋಗ್ಯಪೂರ್ಣ ಪರಿಸರ ಇಲ್ಲ ಎಂದರ್ಥ. ಹೀಗಾಗಿ, ವೈಜ್ಞಾನಿಕ ಸಾಮಾಜಿಕ ಜವಾಬ್ದಾರಿ ನೀತಿಯ ಅನುಷ್ಠಾನಕ್ಕೆ ಅಗತ್ಯವಾದ ಪರಿಸರವನ್ನೂ ಸರ್ಕಾರ ಸೃಷ್ಟಿಸಬೇಕು. ಅಲ್ಲಿಯವರೆಗೆ ಈ ಹೊಸ ನೀತಿಯ ಅನುಷ್ಠಾನ ಕೇವಲ ಯಾಂತ್ರಿಕವಾದ, ಕಾಟಾಚಾರದ ಆಚರಣೆಯಾದರೆ ಆಶ್ಚರ್ಯವೇನಿಲ್ಲ.

‘ಈ ಪ್ರಪಂಚದಲ್ಲಿ ಒಳ್ಳೆಯದನ್ನೆಲ್ಲ ಹೇಳಿ ಆಗಿದೆ. ಬಾಕಿ ಇರುವುದು ಆಚರಣೆ ಮಾತ್ರ’ ಎಂಬುದು ಎರಡೂವರೆ ಸಾವಿರ ವರ್ಷಗಳ ಹಿಂದೆ, ಜಗತ್ತು ಕಂಡ ಮಹಾನ್ ತತ್ವಜ್ಞಾನಿ ಸಾಕ್ರಟೀಸ್ ಹೇಳಿದ ಮಾತು. ಇದು ಇಂದಿಗೂ ನಿಜವಷ್ಟೇ ಅಲ್ಲ, ಈ ಹೊಸ ನೀತಿಗೂಅನ್ವಯಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT