ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮೋಲ್ಲಂಘನ | ಅಧೀರ ಚೀನಾ, ಅಚಲ ಅರುಣಾಚಲ

Published 21 ಏಪ್ರಿಲ್ 2023, 23:02 IST
Last Updated 21 ಏಪ್ರಿಲ್ 2023, 23:02 IST
ಅಕ್ಷರ ಗಾತ್ರ

ಸುಧೀಂದ್ರ ಬುಧ್ಯ

ಚೀನಾ ಅಧೀರಗೊಂಡಿದೆ. ಚೀನಾದ ಕಳವಳ ಮತ್ತು ಅಧೈರ್ಯ, ಅದು ಇತ್ತೀಚೆಗೆ ಭಾರತ ಹಾಗೂ ತೈವಾನ್ ವಿಷಯದಲ್ಲಿ ನಡೆದುಕೊಂಡ ರೀತಿಯಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಅಮೆರಿಕದ ಸಂಸದೀಯ ನಿಯೋಗವು ಹಿಂದಿನ ವರ್ಷ ನ್ಯಾನ್ಸಿ ಫೆಲೋಸಿ ಅವರ ನೇತೃತ್ವದಲ್ಲಿ ತೈವಾನಿಗೆ ಬಂದು ಹೋದಾಗ, ಚೀನಾದ ಸೇನೆಯು ತೈವಾನ್ ಸುತ್ತಲಿನ ಸಮುದ್ರ ಪ್ರದೇಶದಲ್ಲಿ ಮೂರು ದಿನಗಳ ಕವಾಯತು ನಡೆಸಿತ್ತು. ತೈವಾನ್ ಅಧ್ಯಕ್ಷರು ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದರು. ಆಗಲೂ ಚೀನಾ ಸಿಟ್ಟಾಯಿತು. ಮರುದಿನವೇ ಚೀನಾದ ಸೇನೆ ಯಥಾಪ್ರಕಾರ ತೈವಾನ್ ಸುತ್ತಲಿನ ಪ್ರದೇಶದಲ್ಲಿ ಯುದ್ಧ ಕಸರತ್ತು ನಡೆಸಿತು. ತೈವಾನ್ ವಶ ಮಾಡಿಕೊಳ್ಳುವ ತನ್ನ ಕನಸಿಗೆ ಅಮೆರಿಕ ಎಲ್ಲಿ ಭಂಗ ತರುವುದೋ ಎಂಬ ಆತಂಕ ಚೀನಾವು ಗಲಿಬಿಲಿಗೊಳ್ಳುವಂತೆ ಮಾಡಿತು.

ಇತ್ತ ಭಾರತದ ಕುರಿತಾಗಿ ಚೀನಾದ ಕಳವಳ ಭಿನ್ನವಾಗಿಯೇನೂ ಇಲ್ಲ. ಮಾರ್ಚ್ ಕೊನೆಯವಾರ
ಜಿ- 20 ರಾಷ್ಟ್ರಗಳ ಸಭೆಯೊಂದನ್ನು ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದಲ್ಲಿ ಭಾರತ ಆಯೋಜಿಸಿತ್ತು. ಆ ಸಭೆಯಲ್ಲಿ ಐವತ್ತು ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಆದರೆ ಸಭೆಯನ್ನು ಅರುಣಾಚಲದಲ್ಲಿ ಆಯೋಜಿಸಿದ್ದಕ್ಕೆ ವ್ಯಗ್ರಗೊಂಡ ಚೀನಾ, ಸಭೆಯನ್ನು ಬಹಿಷ್ಕರಿಸಿತು. ಅದರ ಬೆನ್ನಲ್ಲೇ ಭೂತಾನ್ ದೊರೆ ಭಾರತಕ್ಕೆ ಆಗಮಿಸಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಚೀನಾದ ತಳಮಳ ದುಪ್ಪಟ್ಟಾಯಿತು.

ಈ ಬೆಳವಣಿಗೆಗಳಿಂದ ವಿಚಲಿತಗೊಂಡ ಚೀನಾ, ಈ ತಿಂಗಳ 2ರಂದು ಅರುಣಾಚಲ ಪ್ರದೇಶದ ಕೆಲವು ಸ್ಥಳಗಳಿಗೆ ಮರುನಾಮಕರಣ ಮಾಡಿ, ಅರುಣಾಚಲ ಪ್ರದೇಶವು ಟಿಬೆಟ್ ಸ್ವಾಯತ್ತ ಪ್ರದೇಶದ ಭಾಗ ಮತ್ತು ಚೀನಾಕ್ಕೆ ಸೇರಿದ್ದು ಎಂದು ತನ್ನ ಹಕ್ಕು ಚಲಾಯಿಸುವ ನಡೆ ಪ್ರದರ್ಶಿಸಿತು. ಚೀನಾದ ಹೇಳಿಕೆಯನ್ನು ತಿರಸ್ಕರಿಸಿದ ಭಾರತ, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂಬುದನ್ನು ಪುನರುಚ್ಚರಿಸಿತು. ಅಷ್ಟಲ್ಲದೇ ಗೃಹ ಸಚಿವ ಅಮಿತ್ ಶಾ ಈ ತಿಂಗಳ 10ರಂದು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿ, ಗಡಿ ಗ್ರಾಮಗಳನ್ನು ಅಭಿವೃದ್ಧಿಪಡಿಸುವ ‘ವೈಬ್ರಂಟ್ ವಿಲೇಜಸ್’ ಯೋಜನೆಗೆ ಚಾಲನೆ ಕೊಟ್ಟರು. ಮತ್ತೊಮ್ಮೆ ಚೀನಾದ ಸಿಡಿಮಿಡಿ, ಆಕ್ಷೇಪ ಪುನರಾವರ್ತನೆಯಾಯಿತು.

ಅರುಣಾಚಲ ಪ್ರದೇಶದ ವಿಷಯದಲ್ಲಿ ಅಥವಾ ಭಾರತ ಮತ್ತು ಭೂತಾನ್ ನಡುವಿನ ಸಖ್ಯದ ಕುರಿತಾಗಿ ಚೀನಾ ಹೀಗೆ ವರ್ತಿಸುತ್ತಿರುವುದು ಇದು ಮೊದಲೇನಲ್ಲ. ಜಾಗತಿಕವಾಗಿ ಅಮೆರಿಕಕ್ಕೆ ಸಡ್ಡು ಹೊಡೆಯಬೇಕು, ಏಷ್ಯಾದ ಮಟ್ಟಿಗೆ ತಾನು ಅಗ್ರೇಸರನಾಗಿರಬೇಕು ಎಂಬ ಮಹತ್ವಾಕಾಂಕ್ಷೆ ಇಟ್ಟುಕೊಂಡಿರುವ ಚೀನಾಕ್ಕೆ, ಭಾರತ ರಾಜತಾಂತ್ರಿಕವಾಗಿ ಒಂದು ಸಣ್ಣ ಹೆಜ್ಜೆ ಮುಂದಿಟ್ಟರೂ ಕಳವಳವಾಗುತ್ತದೆ. ಭೂತಾನ್ ಮತ್ತು ಭಾರತದ ನಾಯಕರು ಕೈ ಕುಲುಕಿದರೆ, ದೋಕ್ಲಾಮ್ ಮತ್ತು ತವಾಂಗ್ ತನ್ನಿಂದ ಶಾಶ್ವತವಾಗಿ ದೂರವಾದಂತೆ ಚೀನಾಕ್ಕೆ ಕನಸು ಬೀಳುತ್ತದೆ. ಹಾಗಾಗಿಯೇ ಭಾರತ ಮತ್ತು ಭೂತಾನ್ ಸಖ್ಯವನ್ನು ಮುರಿಯಲು ಚೀನಾ ಈ ಹಿಂದೆ ಹಲವು ಬಾರಿ ಪ್ರಯತ್ನಿಸಿತ್ತು. ಭೂತಾನಿಗೆ ಹಣ ಮತ್ತು ಅಭಿವೃದ್ಧಿಯ ಆಮಿಷ ಒಡ್ಡಿತ್ತು. ಭೂತಾನ್ ಗಡಿಯಲ್ಲಿ ತನ್ನ ಹಕ್ಕು ಸ್ಥಾಪಿಸಿ ಆ ಮೂಲಕ ಆ ದೇಶವನ್ನು ಬೆದರಿಸುವ ತಂತ್ರವನ್ನೂ ಬಳಸಿತ್ತು. ಆದರೆ ಭಾರತ ಮತ್ತು ಭೂತಾನ್ ನಡುವಿನ ಸಂಬಂಧದಲ್ಲಿ ವ್ಯತ್ಯಾಸವಾಗ
ಲಿಲ್ಲ. ಇತ್ತ ಅರುಣಾಚಲ ಪ್ರದೇಶದ ಗಡಿಯಲ್ಲಿ ಒತ್ತುವರಿ ಮಾಡಿಕೊಳ್ಳುವ ಚೀನಾ ಸೇನೆಯ ಪ್ರಯತ್ನಗಳೂ ವಿಫಲವಾದವು.

ನಂತರ ಚೀನಾ ಹೊಸದೊಂದು ವರಸೆ ಆರಂಭಿಸಿತು. ಭಾರತದ ಭಾಗವಾಗಿರುವ ಅರುಣಾಚಲ ಪ್ರದೇಶವನ್ನು ಝಂಗ್ನಾನ್ (ದಕ್ಷಿಣ ಟಿಬೆಟ್) ಎಂದು ಕರೆಯತೊಡಗಿತು. ಆ ಭಾಗದ ಜನವಸತಿ ಪ್ರದೇಶ, ನದಿ, ಬೆಟ್ಟಗುಡ್ಡಗಳಿಗೆ ಹೊಸ ಹೆಸರುಗಳನ್ನು ಕೊಡುವ ಪ್ರಯತ್ನ ಮಾಡಿತು. ಮುಖ್ಯವಾಗಿ ಟಿಬೆಟ್ ಮತ್ತು ಭೂತಾನ್‌ಗೆ ತಾಗಿಕೊಂಡಿರುವ ತವಾಂಗ್ ಪ್ರದೇಶದ ಮೇಲೆ ಗಮನ ನೆಟ್ಟಿತು.

ಇಡಿಯಾಗಿ ಅರುಣಾಚಲ ಪ್ರದೇಶ ಅಲ್ಲದಿದ್ದರೂ ತವಾಂಗ್ ತನ್ನದಾಗಬೇಕು ಎಂಬ ಆಸೆ ಚೀನಾಕ್ಕಿದೆ. 1959ರಲ್ಲಿ ಟಿಬೆಟ್ ಸ್ವಾಯತ್ತ ಪ್ರದೇಶವನ್ನು ಚೀನಾದ ಸೇನೆ ಆಕ್ರಮಿಸಿಕೊಂಡಾಗ, ಈಗಿನ ದಲೈಲಾಮ (14ನೇ ದಲೈಲಾಮ) ಲಾಸಾದಿಂದ ತಪ್ಪಿಸಿಕೊಂಡು ತವಾಂಗ್ ಮೂಲಕ ಭಾರತವನ್ನು ಪ್ರವೇಶಿಸಿದ್ದರು. ತವಾಂಗ್ 1962ರ ಭಾರತ ಮತ್ತು ಚೀನಾ ಯುದ್ಧದ ಕೇಂದ್ರ ಬಿಂದುವಾಗಿತ್ತು. ಮುಖ್ಯವಾಗಿ ತವಾಂಗ್ ಭಾರತದ ಈಶಾನ್ಯ ಭಾಗಕ್ಕೆ ಪ್ರವೇಶ ಒದಗಿಸುವ ಪ್ರಮುಖ ದ್ವಾರ. ಟಿಬೆಟ್ ಹಾಗೂ ಬ್ರಹ್ಮಪುತ್ರ ಕಣಿವೆಯ ನಡುವಿನ ಕಾರಿಡಾರ್‌ನಲ್ಲಿ ಒಂದು ನಿರ್ಣಾಯಕ ಸ್ಥಳ. ವಿಶ್ವದಲ್ಲೇ ಎರಡನೇ ಅತಿದೊಡ್ಡ ಬೌದ್ಧ ವಿಹಾರ ಕೇಂದ್ರ ತವಾಂಗ್‌ನಲ್ಲಿ ಇರುವುದರಿಂದ ಅದು ಬೌದ್ಧ ಮತಾನುಯಾಯಿಗಳಿಗೆ ಪ್ರಮುಖ ಧಾರ್ಮಿಕ ಕೇಂದ್ರ. ಈ ಬೌದ್ಧ ವಿಹಾರವನ್ನು ಹದಿನೇಳನೆಯ ಶತಮಾನದಲ್ಲಿ ಐದನೆಯ ದಲೈಲಾಮ ಅವರ ಅಪೇಕ್ಷೆಯಂತೆ ನಿರ್ಮಿಸಲಾಗಿದೆ ಎಂಬುದು ಅದಕ್ಕಿರುವ ಚಾರಿತ್ರಿಕ ಮಹತ್ವ. ಇದೇ ವಿಷಯವನ್ನು ಬಳಸಿಕೊಳ್ಳುವ ಚೀನಾ, ಅರುಣಾಚಲ ಪ್ರದೇಶ ಟಿಬೆಟ್‌ನ ಭಾಗವಾಗಿತ್ತು ಎಂಬುದು ಈ ಸಂಗತಿಗಳಿಂದ ಸ್ಪಷ್ಟ, ಹಾಗಾಗಿ ಅರುಣಾಚಲ ಪ್ರದೇಶ ಚೀನಾಕ್ಕೆ ಸೇರಬೇಕು ಎಂದು ವಾದಿಸುತ್ತಾ ಬಂದಿದೆ.

ಭಾರತದ ಭದ್ರತೆ ಮತ್ತು ರಕ್ಷಣೆಯ ದೃಷ್ಟಿಯಿಂದ ನೋಡುವುದಾದರೆ, ಅರುಣಾಚಲ ಪ್ರದೇಶಕ್ಕೆ ಅದರದ್ದೇ ಆದ ಮಹತ್ವವಿದೆ. ಒಂದೊಮ್ಮೆ ಭಾರತ ಮತ್ತು ಚೀನಾ ನಡುವೆ ಯುದ್ಧ ಸಂಭವಿಸಿದರೆ ಚೀನಾದ ಮೇಲೆ ಕ್ಷಿಪಣಿಗಳನ್ನು ತೂರಿಬಿಡಲು, ಅಂತೆಯೇ ಪ್ರತಿರೋಧಕ್ಕೆ ವಾಯುರಕ್ಷಣಾ ವ್ಯವಸ್ಥೆಯನ್ನು ಅಳವಡಿಸಿ
ಕೊಳ್ಳಲು ಅರುಣಾಚಲ ಪ್ರದೇಶಕ್ಕಿಂತ ಸೂಕ್ತವಾದ ಸ್ಥಳ ಮತ್ತೊಂದಿಲ್ಲ. ಹಾಗಾಗಿಯೇ ಅರುಣಾಚಲ ಪ್ರದೇಶದ ವಿಷಯದಲ್ಲಿ ಭಾರತದ ನಿಲುವು ಅಚಲವಾಗಿದೆ. ಈ ಹಿಂದೆ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಸಭೆಯ ವೇಳೆ ತವಾಂಗ್ ವಿಷಯವನ್ನು ಚೀನಾ ಪ್ರಸ್ತಾಪಿಸಿತ್ತು. ಭಾರತದ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್‌, ತವಾಂಗ್ ವಿಷಯದಲ್ಲಿ ಯಾವುದೇ ಮಾತುಕತೆಗೆ ಅವಕಾಶವಿಲ್ಲ, ಒಂದೊಮ್ಮೆ ಚೀನಾವು ತವಾಂಗ್ ಕುರಿತು ಚರ್ಚಿಸುವ ಇಂಗಿತ ಹೊಂದಿದ್ದರೆ, ಈ ಸಭೆ ಅಪ್ರಸ್ತುತ ಎಂದು ಖಡಕ್ಕಾಗಿ ಪ್ರತಿಕ್ರಿಯಿಸಿದ್ದರು. ಆ ಪ್ರತಿಕ್ರಿಯೆ ತವಾಂಗ್ ಮತ್ತು ಇಡಿಯಾಗಿ ಅರುಣಾಚಲ ಪ್ರದೇಶದ ವಿಷಯದಲ್ಲಿ ಭಾರತ ಹೊಂದಿರುವ ನಿಲುವನ್ನು ಸ್ಪಷ್ಟವಾಗಿ ಅಭಿವ್ಯಕ್ತಿಸಿತ್ತು.

ಬಿಡಿ, ಚೀನಾದ ವಿಷಯದಲ್ಲಿ ನಾವು ಬಹಳ ಹಿಂದೆಯೇ ಪಾಠ ಕಲಿತಾಗಿದೆ. ಚೀನಾದ ಕುರಿತು ಭಾರತದ ಪ್ರಥಮ ಸರ್ಕಾರ ತಳೆದ ಅವಾಸ್ತವದ ನಿಲುವು 1962ರಲ್ಲಿ ನಾವು ಭಾರಿ ಬೆಲೆ ತೆರುವಂತೆ ಮಾಡಿತ್ತು. ಆದರೆ ನಂತರ ಬಂದ ಸರ್ಕಾರಗಳು ಎಚ್ಚರಿಕೆಯ ಹೆಜ್ಜೆ ಇಟ್ಟವು. ಅರುಣಾಚಲ ಪ್ರದೇಶಕ್ಕೆ ರಾಜ್ಯದ ಮಾನ್ಯತೆ ನೀಡಲಾಯಿತು. ಗಡಿ ಭಾಗಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಾಯಿತು. ಇತ್ತೀಚಿನ ವರ್ಷಗಳಲ್ಲಿ ಆ ಯೋಜನೆಗಳಿಗೆ ವೇಗ ಬಂತು. ವಿಮಾನ ನಿಲ್ದಾಣ, ವಾಯುನೆಲೆ ಮತ್ತು ಹೆಲಿಪ್ಯಾಡ್‌ಗಳ ನಿರ್ಮಾಣ ಆಯಿತು. ಬರೀ ಯುದ್ಧದ ಸಂದರ್ಭದಲ್ಲಿ ಬಳಕೆಗೆ ಮಾತ್ರವಲ್ಲದೆ, ಸಂಪರ್ಕ ದುರ್ಲಭವಾದ ಪ್ರದೇಶಗಳಲ್ಲಿ ಹಾಗೂ ಹಳ್ಳಿಗಾಡಿನ ಜನರಿಗೆ ಅನುಕೂಲ ಒದಗಿಸುವ ದೃಷ್ಟಿಯಿಂದ ಮೂಲಸೌಕರ್ಯ ಯೋಜನೆಗಳು ಆರಂಭವಾದವು. ಗಡಿ ಪ್ರದೇಶದ ನಾಗರಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ, ಅವರು ವಲಸೆ ಹೋಗುವುದನ್ನು ತಡೆಯುವ ದಿಸೆಯಲ್ಲಿ ಕಾರ್ಯಕ್ರಮ ರೂಪಿಸಲಾಯಿತು. ‘ವೈಬ್ರಂಟ್ ವಿಲೇಜಸ್’ ಅಂತಹದೇ ಒಂದು ಯೋಜನೆ.

ಅದೇನೇ ಇರಲಿ, ಈ ವರ್ಷ ಜಿ-20 ಒಕ್ಕೂಟದ ಅಧ್ಯಕ್ಷ ಸ್ಥಾನದಲ್ಲಿರುವ ಭಾರತ, ತನಗೆ ದೊರೆತ ಅವಕಾಶವನ್ನು ಬಹಳ ಚಾಣಾಕ್ಷತನದಿಂದ ಬಳಸಿಕೊಳ್ಳುತ್ತಿದೆ. ಈಗಾಗಲೇ ಜಿ-20 ರಾಷ್ಟ್ರಗಳ ಒಂದು ಸಭೆ ಅರುಣಾಚಲ ಪ್ರದೇಶದ ಇಟಾನಗರದಲ್ಲಿ ನಡೆದಿದೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಮತ್ತೊಂದು ಸಭೆ ಮೇ ತಿಂಗಳಿನಲ್ಲಿ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ನಡೆಯಲಿದೆ. ಚೀನಾ ಮತ್ತು ಪಾಕಿಸ್ತಾನ ತಮ್ಮ ಹಕ್ಕು ಸ್ಥಾಪಿಸಲು ಯತ್ನಿಸುವ ಈ ಜಾಗಗಳಲ್ಲಿ ಭಾರತವು ಅಂತರರಾಷ್ಟ್ರೀಯ ಒಕ್ಕೂಟದ ಸಭೆಯನ್ನು ಆಯೋಜಿಸುತ್ತದೆ ಎಂದರೆ ಆ ರಾಷ್ಟ್ರಗಳು ಕೈ ಹಿಸುಕಿಕೊಳ್ಳಲು ಇನ್ನಾವ ಕಾರಣ ಬೇಕು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT